Friday, 13th December 2024

ಎರವಲು ಸುದ್ದಿಗಳಿಂದ ಭಾರತವನ್ನು ಹೆದರಿಸಲು ಸಾಧ್ಯವಿಲ್ಲ

ಸಂಗತ

ಡಾ.ವಿಜಯ್ ದರಡಾ

ಪಾಕಿಸ್ತಾನದಲ್ಲಿ ಹತ್ಯೆಯಾದ ೨೦ ಉಗ್ರರನ್ನು ಭಾರತವೇ ಕೊಲ್ಲಿಸಿದ್ದು ಎಂಬ ಬ್ರಿಟಿಷ್ ಪತ್ರಿಕೆಯ ವರದಿಗೆ ಆಧಾರ ಏನಿದೆ? ಭಾರತದಲ್ಲಿ ಲೋಕಸಭೆ ಚುನಾವಣೆ ನಡೆಯುತ್ತಿರುವ ಈ ಹೊತ್ತಿನಲ್ಲಿ ಇಂಥ ವರದಿ ಪ್ರಕಟಿಸುವುದರ ಉದ್ದೇಶವಾದರೂ ಏನು? ನೂರಾರು ವರ್ಷ ನಮ್ಮನ್ನು ಶೋಷಿಸಿದವರಿಂದ ನಾವೀಗ ಉಪದೇಶ ಕೇಳಬೇಕಾ?

ಬ್ರಿಟನ್ನಿನ ‘ದಿ ಗಾರ್ಡಿಯನ್’ ದಿನಪತ್ರಿಕೆ ಇತ್ತೀಚೆಗೆ ಭಾರತದ ಬಗ್ಗೆ ಒಂದು ವರದಿ ಪ್ರಕಟಿಸಿದೆ. ಪಾಕಿಸ್ತಾನದಲ್ಲಿ ೨೦೨೦ರಿಂದ ಈಚೆಗೆ ನಡೆದ ೨೦ ‘ಉದ್ದೇಶಿತ ಹತ್ಯೆ’ (ಟಾರ್ಗೆಟೆಡ್ ಕಿಲ್ಲಿಂಗ್)ಗಳನ್ನು ಭಾರತವೇ ನಡೆಸಿದೆ ಎಂದು ಅದರಲ್ಲಿ ಬರೆಯಲಾಗಿದೆ.
ಆದರೆ ವರದಿಯಲ್ಲಿ ಈ ಹೇಳಿಕೆಗೆ ಸಂಬಂಧಿಸಿದಂತೆ ಯಾವುದೇ ಆಧಾರಗಳನ್ನು ನೀಡಿಲ್ಲ. ಹೀಗಾಗಿ ಈ ವರದಿಯನ್ನು ನಿಜವೆಂದು ನಂಬಬೇಕೆಂದು ನನಗೇನೂ ಅನ್ನಿಸುವುದಿಲ್ಲ.

ಪಾಕಿಸ್ತಾನದ ಒಬ್ಬ ಅಧಿಕಾರಿಯ ಹೇಳಿಕೆಯೊಂದನ್ನೇ ಆಧರಿಸಿ ಈ ವರದಿ ಪ್ರಕಟಿಸಲಾಗಿದೆ. ಇದು ಬೇಜವಾಬ್ದಾರಿಯ ಪತ್ರಿಕೋ ದ್ಯಮ. ಗಾರ್ಡಿಯನ್‌ನಂಥ ಸುದೀರ್ಘ ಇತಿಹಾಸವಿರುವ ಪ್ರತಿಷ್ಠಿತ ಪತ್ರಿಕೆ ಹೀಗೆ ಮಾಡಲು ಸಾಧ್ಯವೇ? ಅದಕ್ಕಿಂತ ಹೆಚ್ಚಾಗಿ, ಭಾರತದಲ್ಲಿ ಲೋಕಸಭೆ ಚುನಾವಣೆ ನಡೆಯುತ್ತಿರುವ ಈ ಹೊತ್ತಿನಲ್ಲೇ ಇಂಥ ವರದಿ ಪ್ರಕಟಿಸುವುದರ ಹಿಂದಿನ ಉದ್ದೇಶವೇನು ಎಂಬುದನ್ನೂ ನಾವು ಗಮನಿಸಬೇಕಿದೆ.

ಗಾರ್ಡಿಯನ್ ಪತ್ರಿಕೆಯಲ್ಲಿ ಪ್ರಕಟವಾದ ಲೇಖನದಲ್ಲಿರುವ ಸಂಗತಿಗಳನ್ನು ಮೊದಲಿಗೆ ಕೂಲಂಕಷವಾಗಿ ಪರಿಶೀಲಿಸೋಣ. ಆ ವರದಿಯ ಪ್ರಕಾರ, ೨೦೧೯ರಲ್ಲಿ ಭಾರತದ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತೀಯ ಗುಪ್ತಚರ ಸಂಸ್ಥೆಯಾದ ‘ರೀಸರ್ಚ್ ಆಂಡ್ ಅನಾಲಿಸಿಸ್ ವಿಂಗ್’ (ರಾ)ನ ಅಧಿಕಾರಿಗಳು ಭಯೋತ್ಪಾದಕರಿಂದ ನಮ್ಮ ದೇಶಕ್ಕೆ ಇರುವ ಅಪಾಯಗಳನ್ನು ಒಂದೊಂದಾಗಿ ನಿವಾರಿಸಬೇಕು ಎಂದು ಪಣತೊಟ್ಟರು.

ವಿದೇಶಗಳಲ್ಲಿ ಇಂಥ ಸಂಚೇನಾದರೂ ನಡೆಯುತ್ತಿದ್ದರೆ ಅದನ್ನೆಲ್ಲ ಆಮೂಲಾಗ್ರವಾಗಿ ಹತ್ತಿಕ್ಕಬೇಕು ಎಂದು ನಿರ್ಧರಿಸಿದರು.
ಅದಕ್ಕಾಗಿ ವಿಸ್ತೃತವಾದ ಯೋಜನೆಯನ್ನೇ ಸಿದ್ಧಪಡಿಸಿದರು. ವರದಿಯ ಪ್ರಕಾರ, ಇಂಥದ್ದೊಂದು ಮಿಷನ್‌ನ ಪರಿಣಾಮವೇ ಪಾಕಿಸ್ತಾನದಲ್ಲಿ ಈವರೆಗೆ ೨೦ ಮಂದಿಯ ಹತ್ಯೆಯಾಗಿದೆ. ಅದರ ಜತೆಗೆ, ಪ್ರಧಾನಿ ನರೇಂದ್ರ ಮೋದಿಯವರ ಕಚೇರಿ ‘ರಾ’ ಮೇಲೆ ನೇರವಾದ ಹಿಡಿತ ಹೊಂದಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಗಾರ್ಡಿಯನ್ ಪತ್ರಿಕೆ ಏನನ್ನು ಹೇಳಲು ಹೊರಟಿದೆ ಎಂಬುದನ್ನು ನೀವು ಇದರಿಂದಲೇ ತಿಳಿದುಕೊಳ್ಳಬಹುದು. ಮುಖ್ಯವಾಗಿ
ಗಮನಿಸಬೇಕಾದ ಸಂಗತಿ ಏನೆಂದರೆ, ಮೊದಲೇ ಹೇಳಿದಂತೆ, ಗಾರ್ಡಿಯನ್ ಪತ್ರಿಕೆ ಪಾಕಿಸ್ತಾನದ ಅಧಿಕಾರಿಗಳಿಂದ ಪಡೆದ ದಾಖಲೆಗಳನ್ನಿಟ್ಟುಕೊಂಡು ಈ ವರದಿ ಪ್ರಕಟಿಸಿದೆ. ಅಂದರೆ ಇದು ಪಾಕಿಸ್ತಾನದ ಅಧಿಕಾರಿಗಳು ಸಿದ್ಧಪಡಿಸಿದ ವರದಿ. ಅದನ್ನು ಎಷ್ಟರಮಟ್ಟಿಗೆ ನಂಬಬೇಕು ಎಂಬುದನ್ನು ನೀವೇ ನಿರ್ಧರಿಸಬಹುದು. ಅವರು ಭಾರತದ ಘನತೆಗೆ ಮಸಿ ಬಳಿಯಲೆಂದೇ ಇಂಥ ಬೇಕಾದಷ್ಟು ವರದಿಗಳನ್ನು ತಯಾರಿಸಿರುತ್ತಾರೆ.

ಉದಾಹರಣೆಗೆ, ಭಾರತವು ಯುಎಇನಿಂದ ಕಾರ್ಯಾಚರಣೆ ನಡೆಸಿ ಪಾಕಿಸ್ತಾನದಲ್ಲಿ ಉದ್ದೇಶಿತ ಹತ್ಯೆಗಳನ್ನು ನಡೆಸಿದೆ ಎಂದು ಗಾರ್ಡಿಯನ್ ವರದಿಯಲ್ಲಿ ಹೇಳಲಾಗಿದೆ. ಇದಕ್ಕಾಗಿ ಭಾರತವು ಯುಎಇನಲ್ಲಿ ಸುಸಜ್ಜಿತ ಸ್ಲೀಪರ್ ಸೆಲ್‌ಗಳನ್ನು ನಿಯೋಜಿಸಿ ತ್ತಂತೆ. ಎರಡು ವರ್ಷಗಳ ಕಾಲ ಆ ಸ್ಲೀಪರ್ ಸೆಲ್‌ಗಳಿಗೆ ಭಾರತ ಸಾಕಷ್ಟು ಹಣ ಹಾಗೂ ಇನ್ನಿತರ ನೆರವುಗಳನ್ನು ನೀಡಿದೆಯಂತೆ. ಸರಿ, ಇದನ್ನು ನಿಜವೆಂದೇ ಒಂದು ಕ್ಷಣ ನಂಬೋಣ. ಹಾಗಿದ್ದರೆ, ಈ ಎರಡು ವರ್ಷಗಳ ಕಾಲ ಪಾಕಿಸ್ತಾನ ಏನು ಮಾಡುತ್ತಾ
ಕುಳಿತಿತ್ತು? ಅದಕ್ಕಿಂತ ಹೆಚ್ಚಾಗಿ, ಭಾರತ ತನ್ನ ದೇಶದಲ್ಲಿ ಇಂಥದ್ದೊಂದು ಸ್ಲೀಪರ್ ಸೆಲ್ ಸ್ಥಾಪಿಸಿದೆ ಎಂಬುದು ಯುಎಇಗೆ ಹೇಗೆ ಗೊತ್ತಾಗಲಿಲ್ಲ? ಹೀಗಾಗಿ ಈ ವರದಿ ಸಂಪೂರ್ಣ ಕಟ್ಟುಕತೆ ಎಂಬಂತೆ ಕಾಣಿಸುತ್ತಿದೆ.

ವರದಿಯಲ್ಲಿ ಗುರುಪತ್ವಂತ್ ಸಿಂಗ್ ಪನ್ನು ಎಂಬ ಖಲಿಸ್ತಾನಿ ಬೆಂಬಲಿಗ ಹೋರಾಟಗಾರ ಸತ್ತು ಹೋಗಿದ್ದಾನೆ ಎಂದು ಹೇಳಲಾ ಗಿದೆ. ಅವನು ಇನ್ನೂ ಬದುಕಿದ್ದಾನೆ. ಅವನು ಕೆನಡಾ, ಅಮೆರಿಕದಲ್ಲಿ ರಾಜಾರೋಷವಾಗಿ ಓಡಾಡಿಕೊಂಡಿದ್ದಾನೆ. ಇದನ್ನು ಓದುಗರು ಗಮನಕ್ಕೆ ತಂದಾಗ ಗಾರ್ಡಿಯನ್ ಪತ್ರಿಕೆ ತನ್ನ ತಪ್ಪನ್ನು ಒಪ್ಪಿಕೊಂಡಿತು. ಆದರೆ, ಸತ್ತವರ ಪಟ್ಟಿಯಲ್ಲಿ ಬದುಕಿರು ವವನ ಹೆಸರು ಸೇರಿದ್ದು ಹೇಗೆ ಎಂಬುದನ್ನು ಸ್ಪಷ್ಟಪಡಿಸುವ ಗೋಜಿಗೆ ಮಾತ್ರ ಹೋಗಲಿಲ್ಲ!

ಹಿಂದೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರೂಡೋ ಕೂಡ ಭಾರತದ ಮೇಲೆ ಇಂಥದೇ ‘ಉದ್ದೇಶಿತ ಹತ್ಯೆ’ಯ ಆರೋಪ ಮಾಡಿದ್ದರು. ನಂತರ ಸರಿಯಾಗಿ ಮುಖಭಂಗ ಅನುಭವಿಸಿದ್ದರು. ಕೆನಡಾದಲ್ಲಿ ವಿರೋಽಗಳ ಗುಂಪೊಂದು ಖಾಸಗಿ ಸೇಡಿನಿಂದ ಖಲಿಸ್ತಾನಿ ಉಗ್ರ ಹರದೀಪ್ ಸಿಂಗ್ ನಿಜ್ಜರ್‌ನನ್ನು ಕೊಂದಾಗ ಭಾರತವೇ ಈ ಹತ್ಯೆ ಮಾಡಿಸಿದೆ ಎಂದು ಟ್ರೂಡೋ ಹೇಳಿದ್ದರು. ಆದರೆ ಅದಕ್ಕೆ ಯಾವುದೇ ದಾಖಲೆ ನೀಡಲು ಕೆನಡಾ ಸರಕಾರಕ್ಕೆ ಸಾಧ್ಯವಾಗಲಿಲ್ಲ. ಅಮೆರಿಕ ಕೂಡ ಕೆನಡಾದ ಪರ ನಿಂತು ಭಾರತವನ್ನು ಮೂಲೆಗೆ ತಳ್ಳಲು ಪ್ರಯತ್ನಿಸಿತು. ಅದು ಫಲ ನೀಡಲಿಲ್ಲ.

ನಂತರ ಖಲಿಸ್ತಾನಿ ಹೋರಾಟಗಾರ ಅವತಾರ್ ಸಿಂಗ್ ಖಂಡಾ ಬ್ರಿಟನ್‌ನಲ್ಲಿ ಸತ್ತಿದ್ದು ಹಾಗೂ ಪಾಕಿಸ್ತಾನದಲ್ಲಿ ಭಯೋತ್ಪಾದಕ ಪರಮ್ ಜೀತ್ ಸಿಂಗ್ ಪಂಜ್ವಾರ್ ಗುಂಡೇಟಿನಿಂದ ಸಾವನ್ನಪ್ಪಿದ್ದಕ್ಕೂ ಭಾರತವೇ ಕಾರಣ ಎಂದು ಹೇಳಲಾಯಿತು. ಇದಕ್ಕೆಲ್ಲ
ಯಾರ ಬಳಿಯೂ ಯಾವುದೇ ರೀತಿಯ ಆಧಾರಗಳಿಲ್ಲ. ಭಾರತ ನಿರಂತರವಾಗಿ ಇಂಥ ಹೇಳಿಕೆಗಳನ್ನು ಅಲ್ಲಗಳೆಯುತ್ತಾ ಬಂದಿದೆ. ನಾನಂತೂ ನಮ್ಮ ವಿದೇಶಾಂಗ ಸಚಿವ  ಎಸ್.ಜೈಶಂಕರ್ ನೀಡಿದ ಹೇಳಿಕೆಗಳನ್ನು ಸಂಪೂರ್ಣ ಬೆಂಬಲಿಸುತ್ತೇನೆ. ವಿದೇಶಿ ನೆಲದಲ್ಲಿ ಯಾವುದೇ ರೀತಿಯ ಉದ್ದೇಶಿತ ಹತ್ಯೆಗಳನ್ನು ನಡೆಸುವುದು ಭಾರತದ ವಿದೇಶಾಂಗ ನೀತಿಗೆ ವಿರುದ್ಧವಾದುದು ಎಂದು ಜೈಶಂಕರ್ ಹೇಳಿದ್ದಾರೆ.

ಹಾಗಿದ್ದರೆ ಈ ಹತ್ಯೆಗಳನ್ನು ಯಾರು ಮಾಡಿಸುತ್ತಿದ್ದಾರೆ? ಇಷ್ಟಕ್ಕೂ ಪಾಕಿಸ್ತಾನದಲ್ಲಿ ಅಪರಿಚಿತರ ದಾಳಿಯಲ್ಲಿ ಜೀವ ಕಳೆದು ಕೊಂಡವರು ಪಾಕಿಸ್ತಾನದ ರಾಜಕಾರಣಿಗಳೂ ಅಲ್ಲ ಅಥವಾ ಮುಗ್ಧ ನಾಗರಿಕರೂ ಅಲ್ಲ. ಸತ್ತವರೆಲ್ಲರೂ ಉಗ್ರರು. ಅವರ ನಡುವೆಯೇ ಮಾದಕ ದ್ರವ್ಯ ಮತ್ತು ಶಸ್ತ್ರಾಸ್ತ್ರಗಳ ಕಳ್ಳಸಾಗಣೆಗೆ ತುಂಬಾ ಪೈಪೋಟಿಯಿದೆ. ಭಯೋತ್ಪಾದನೆಯ ಜತೆಗೆ ಡ್ರಗ್ಸ್ ಮತ್ತು ಶಸಾಸ ವ್ಯಾಪಾರಕ್ಕೆ ಹತ್ತಿರದ ನಂಟಿದೆ. ಮೇಲಾಗಿ, ಭಯೋತ್ಪಾದನೆಗೆ ಯಾವುದೇ ಸಿದ್ಧಾಂತವಿಲ್ಲ.

ಭಯೋತ್ಪಾದಕರು ಹಾಗೂ ದೇಶದ್ರೋಹಿಗಳ ನಡುವಿನ ಹತ್ಯೆಗಳು ಆಂತರಿಕ ವೈರದಿಂದ ನಡೆಯುತ್ತವೆ. ಹಾಗಿದ್ದರೆ ಭಾರತ ವನ್ನೇಕೆ ಇದರಲ್ಲಿ ಎಳೆದು ತರಲಾಗುತ್ತಿದೆ? ಕೆನಡಾದ ವಿಷಯದಲ್ಲಿ ಹೇಳುವುದಾದರೆ, ಆ ದೇಶದ ರಾಜಕಾರಣಿಗಳು ಹಾಗೂ ಸರಕಾರಗಳು ಚುನಾವಣೆಯ ಲಾಭಕ್ಕಾಗಿ ಖಲಿಸ್ತಾನಿ ಉಗ್ರರನ್ನು ಸಾಕಷ್ಟು ವರ್ಷಗಳಿಂದ ಬೆಂಬಲಿಸುತ್ತಾ ಬಂದಿವೆ. ಅದರ ನಡುವೆ, ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಹಾಗೂ ಜೋ ಬೈಡನ್ ನಡುವೆ ರಾಜಕೀಯ ಸಂಘರ್ಷ ನಡೆಯುತ್ತಿದೆ. ಇತ್ತ ಭಾರತದಲ್ಲಿ ಲೋಕಸಭೆ ಚುನಾವಣೆ ನಡೆಯುತ್ತಿದೆ.

ಇಂಥ ಸಂಕೀರ್ಣ ಪರಿಸ್ಥಿತಿಯಲ್ಲಿ, ಗಾರ್ಡಿಯನ್‌ನ ವರದಿಯು ಭಾರತದ ಇಮೇಜಿಗೆ ಮಸಿ ಬಳಿಯುವುದಕ್ಕೆಂದೇ ಪ್ರಕಟವಾಗಿದೆ ಎಂದು ನಿಸ್ಸಂಶಯವಾಗಿ ಹೇಳಬಹುದು. ಹಿಂದೊಂದು ಕಾಲದಲ್ಲಿ ಬ್ರಿಟನ್ನಿನ ಪತ್ರಿಕೋದ್ಯಮಕ್ಕೆ ಜಗತ್ತಿನಾದ್ಯಂತ ಒಳ್ಳೆಯ ಹೆಸರಿತ್ತು. ಆದರೆ ಅದು ಈಗ ಭಾರತದ ಬಗ್ಗೆ ಅಪಪ್ರಚಾರ ನಡೆಸುವ ಕುತ್ಸಿತ ಪತ್ರಿಕೋದ್ಯಮವಾಗಿ ಮಾರ್ಪಟ್ಟಿದೆ. ಜಗತ್ತಿನ ಅನೇಕ ದೇಶಗಳಿಗೆ ಭಾರತದ ಶರವೇಗದ ಅಭಿವೃದ್ಧಿಯನ್ನು ನೋಡಿ ಹೊಟ್ಟೆ ಉರಿಯುತ್ತಿದೆ. ಜಾಗತಿಕ ವೇದಿಕೆಯಲ್ಲಿ ಭಾರತದ
ಶಕ್ತಿ ದಿನೇದಿನೆ ಹೆಚ್ಚುತ್ತಿದೆ. ಆದ್ದರಿಂದ, ಭಾರತದ ವಿರುದ್ಧ ಏಕೆ ಇಂಥ ಆಧಾರರಹಿತ ಆರೋಪಗಳನ್ನು ಮಾಡಲಾಗುತ್ತಿದೆ ಎಂಬುದು ನಮಗೆಲ್ಲರಿಗೂ ಸುಲಭವಾಗಿ ತಿಳಿಯುತ್ತದೆ.

ಭಾರತದ ಘನತೆಗೆ ಮಸಿ ಬಳಿಯಲು ಯತ್ನಿಸುತ್ತಿರುವ ಹಾಗೂ ಭಾರತದ ಮೇಲೆ ವಾಗ್ದಾಳಿ ನಡೆಸುತ್ತಿರುವ ಎಲ್ಲರಿಗೂ ನಾನು ಹೇಳುವುದು ಇಷ್ಟೆ: ಭಾರತದ ಪ್ರಜಾಪ್ರಭುತ್ವ ನೀವು ಅಂದುಕೊಂಡಂತೆ ಅಸ್ಥಿರವಾದುದಲ್ಲ. ಇದು ಬಹಳ ಗಟ್ಟಿಯಾದ ತಳಹದಿ ಹೊಂದಿದೆ. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನಗಳಿಂದಾಗಿ ಭಾರತದ ಪ್ರಜಾಪ್ರಭುತ್ವಕ್ಕೆ ತುಂಬಾ ಬಲಿಷ್ಠವಾದ ಅಡಿಪಾಯ ಬಿದ್ದಿದೆ. ಇಲ್ಲಿ ಪ್ರಜಾಪ್ರಭುತ್ವದ ಬೇರುಗಳು ಬಹಳ ಆಳಕ್ಕೆ ಇಳಿದುಹೋಗಿವೆ. ಭಾರತದಲ್ಲಿರುವ ಪ್ರತಿಯೊಬ್ಬ ಪ್ರಜೆಯೂ ದೇಶಭಕ್ತ. ಇಲ್ಲಿನ ರಾಜಕೀಯ ಪಕ್ಷಗಳಿಗೆ ಬೇರೆ ಬೇರೆ ಸಿದ್ಧಾಂತಗಳು ಇರಬಹುದು ಅಥವಾ ಇವು ಚುನಾವಣೆಗಳಲ್ಲಿ ಸಾಕಷ್ಟು ಸಂಘರ್ಷವನ್ನೂ ನಡೆಸಬಹುದು. ಆದರೆ ನಮ್ಮ ದೇಶದ ರಾಜಕಾರಣಿಗಳು ಈ ದೇಶದ ವಿರುದ್ಧವಾಗಿ ಯಾವುದೇ ರೀತಿಯ ಸಂಚು ರೂಪಿಸುವುದಿಲ್ಲ ಅಥವಾ ಕ್ಷುಲ್ಲಕ ಲಾಭಕ್ಕಾಗಿ ಭ್ರಷ್ಟ ಕೆಲಸಗಳನ್ನು ಮಾಡುವುದಿಲ್ಲ.

ಭಾರತದ ಎಲ್ಲಾ ರಾಜಕಾರಣಿಗಳಿಗೂ ಭಾರತವೇ ಮೊದಲು. ಭಾರತವನ್ನು ನೂರಾರು ವರ್ಷಗಳ ಕಾಲ ಲೂಟಿ ಹೊಡೆದವರು ಈಗ ಉಪದೇಶ ಮಾಡುವುದನ್ನು ನೋಡಿದರೆ ಅದಕ್ಕೆ ಅನುಕಂಪ ವ್ಯಕ್ತಪಡಿಸಬಹುದೇ ಹೊರತು ಇನ್ನೇನೂ ಮಾಡಲು ಸಾಧ್ಯ ವಿಲ್ಲ. ನಮ್ಮ ದೇಶದ ಪ್ರಜಾಪ್ರಭುತ್ವದ ತಳ ಪಾಯವನ್ನು ಕೊನೆಯ ಪಕ್ಷ ಮುಟ್ಟುವುದಕ್ಕೂ ಅವರಿಂದ ಸಾಧ್ಯವಿಲ್ಲ.
ಭಾರತೀಯರು ಶಾಂತಿಪ್ರಿಯರು. ನಾವೆಲ್ಲರೂ ಭಗವಾನ್ ಮಹಾವೀರ, ಭಗವಾನ್ ಬುದ್ಧ ಹಾಗೂ ಮಹಾತ್ಮ ಗಾಂಧೀಜಿಯವರ ಅನುಯಾಯಿಗಳು. ಇಡೀ ಜಗತ್ತು ನಮ್ಮ ಕುಟುಂಬ, ಎಲ್ಲರೂ ಚೆನ್ನಾಗಿರಬೇಕು, ಎಲ್ಲೆಡೆ ಶಾಂತಿ ನೆಲೆಸಬೇಕು ಎಂದೇ ನಾವು ಬಯಸುತ್ತೇವೆ.

ನಾವು ಅಹಿಂಸಾ ತತ್ವವನ್ನು ನಂಬಿದ್ದೇವೆ. ಆದರೆ ಆ ನಂಬಿಕೆಯೇ ನಮ್ಮ ದೌರ್ಬಲ್ಯವೆಂದು ಯಾರೂ ಭಾವಿಸಬಾರದು. ಆಧುನಿಕ ಜಗತ್ತಿನಲ್ಲಿ ಯಾವುದೇ ಒಂದು ಸಾರ್ವಭೌಮ ದೇಶಕ್ಕೆ ಇನ್ನೊಂದು ಸಾರ್ವಭೌಮ ದೇಶದ ಆಂತರಿಕ ವಿಚಾರಗಳಲ್ಲಿ
ಮೂಗು ತೂರಿಸುವ ಅಧಿಕಾರವಿಲ್ಲ. ಯಾವುದೇ ದೇಶದ ಮೇಲೆ ದಾಳಿ ನಡೆಸುವ ಹಕ್ಕೂ ಇನ್ನಾವುದೇ ದೇಶಕ್ಕೆ ಇಲ್ಲ. ಯಾರಾ ದರೂ ಹಾಗೆ ಮಾಡಿದರೆ ಅದೇ ರೀತಿ ಪ್ರತ್ಯುತ್ತರ ನೀಡುವ ಎಲ್ಲಾ ಸಾಮರ್ಥ್ಯ ಭಾರತಕ್ಕಿದೆ. ಭಾರತದ ಘನತೆಗೆ ಯಾವುದೇ ದೇಶ ಮಸಿ ಬಳಿಯಲು ಯತ್ನಿಸಿದರೆ ಅಂಥ ಪ್ರಯತ್ನ ಮಾಡುವವರ ಹುಟ್ಟಡಗಿಸುವುದಕ್ಕೂ ನಾವು ಹಿಂದೆಮುಂದೆ ನೋಡುವು ದಿಲ್ಲ ಎಂಬುದನ್ನು ಜಗತ್ತು ಅರ್ಥ ಮಾಡಿಕೊಳ್ಳಬೇಕಿದೆ.

ಭಾರತ ಯಾವತ್ತೂ ಯಾರ ಮೇಲೂ ತಾನಾಗಿಯೇ ದಾಳಿ ನಡೆಸಿಲ್ಲ. ಇದು ಇತಿಹಾಸದಲ್ಲೇ ದಾಖಲಾಗಿದೆ. ಆದರೆ ಯಾರಾದರೂ ಈ ನೆಲದ ಮೇಲೆ ದಾಳಿ ನಡೆಸಿದರೆ ಅವರನ್ನು ಸುಮ್ಮನೆ ಬಿಟ್ಟಿಲ್ಲ. ಇದೂ ಇತಿಹಾಸದಲ್ಲಿ ದಾಖಲಾಗಿದೆ. ಭಾರತವನ್ನು ಕೆಣಕಿದವರೆಲ್ಲ ಸರಿಯಾದ ಪಾಠ ಕಲಿತಿದ್ದಾರೆ. ಅಷ್ಟಾಗಿಯೂ ಮತ್ತೆ ನಮ್ಮನ್ನು ಕೆಣಕಲು ಯಾರಾದರೂ ಬರುತ್ತಾರೆ ಅಂತಾದರೆ ಅದು ಅವರ ಹಣೆಬರಹ! ಅವರನ್ನು ಯಾರು ತಾನೇ ಕಾಪಾಡಲು ಸಾಧ್ಯ!

(ಲೇಖಕರು ಹಿರಿಯ ಪತ್ರಕರ್ತರು)