Saturday, 14th December 2024

ದೇವನೊಬ್ಬ ಮಂದಿರ ಹಲವು

ತುಂಟರಗಾಳಿ

ಸಿನಿಗನ್ನಡ

‘ಜೈಲರ್’ ಚಿತ್ರದ ಪಾತ್ರಕ್ಕೆ ಬಂದ ಅಭೂತಪೂರ್ವ ಪ್ರತಿಕ್ರಿಯೆಯ ನಂತರ, ತಮಿಳಿನ ಸ್ಟಾರ್ ನಟ ಧನುಷ್ ಅಭಿನಯದ ‘ಕ್ಯಾಪ್ಟನ್ ಮಿಲ್ಲರ್’ ಚಿತ್ರದಲ್ಲಿ ನಮ್ಮ ಕನ್ನಡದ ಸ್ಟಾರ್ ನಟ ಶಿವರಾಜ್ ಕುಮಾರ್ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ.

ಸಿನಿಮಾದ ಆರಂಭದಲ್ಲಿ ಟೈಟಲ್ ಕಾರ್ಡ್‌ನಲ್ಲಿ ಶಿವರಾಜ್ ಕುಮಾರ್ ಅವರ ಹೆಸರಿನ ಹಿಂದೆ ‘ಕರುನಾಡ ಚಕ್ರವರ್ತಿ’ ಬದಲು, ‘ಚಕ್ರವರ್ತಿ ಕರುನಾಡ’ ಅಂತ ತೋರಿಸಿದಾಗಲೇ ಶಿವರಾಜ್ ಕುಮಾರ್ ಅವರನ್ನ ಈ ಸಿನಿಮಾದಲ್ಲಿ ಹೇಗೆ ಬಳಸಿಕೊಂಡಿರಬಹುದು ಅನ್ನೋ ಹಿಂಟ್ ಸಿಗುತ್ತದೆ. ಸ್ಟಾರ್ ನಟನೊಬ್ಬ ಗೆಸ್ಟ್ ಅಪಿಯರೆನ್ಸ್ ಪಾತ್ರ ಮಾಡಿದಾಗ ಆರಂಭದಲ್ಲಿ ಅವರನ್ನ ಒಂದೆ ರಡು ದೃಶ್ಯಗಳಲ್ಲಿ ತೋರಿಸಿ, ಕ್ಲೈಮ್ಯಾಕ್ಸ್‌ನಲ್ಲಿ ನಾಯಕ ಕಷ್ಟದಲ್ಲಿದ್ದಾಗ ಬಂದು ಸಹಾಯ ಮಾಡೋ ಹಳೇ ಕಾಲದ ಐಡಿಯಾನ ಇಲ್ಲೂ ಬಳಸಿಕೊಂಡಿದ್ದಾರೆ.

ಕ್ಯಾಪ್ಟನ್ ಮಿಲ್ಲರ್ ಚಿತ್ರದ ಕ್ಯಾಪ್ಟನ್ ಧನುಷ್. ಹಾಗಂತ ಶಿವರಾಜ್ ಕುಮಾರ್ ಅವರಿಗೆ ತೀರಾ ‘ವೈಸ್ ಕ್ಯಾಪ್ಟನ್’ ಅನ್ನುವಷ್ಟು ಪ್ರಮುಖ ಪಾತ್ರ ಅಲ್ಲ. ತೀರಾ ೧೨ನೇ ಆಟಗಾರ ಕೂಡಾ ಅಲ್ಲ, ಕೊನೆಯಲ್ಲಿ ನಾಯಕನಿಗೆ ಇಂಜುರಿ ಆಗಿ, ರಿಟೈರ್ಡ್ ಹರ್ಟ್ ಆಗುವ ಹಂತದಲ್ಲಿ, ಬದಲಿ ಆಟಗಾರನ ಥರ  ಬರ್ತಾರೆ ಶಿವರಾಜ್ ಕುಮಾರ್. ಹಾಗಾಗಿ ಅವರದ್ದು ಒಂಥರಾ ಪಿಂಚ್ ಹಿಟ್ಟರ್ ರೋಲ್ ಅನ್ನಬಹುದು. ಶಿವ ರಾಜ್ ಕುಮಾರ್ ಅವರ ಜೈಲರ್ ಸಿನಿಮಾ ನೆನಪಿಸಿ ಕೊಂಡು ಕ್ಯಾಪ್ಟನ್ ಮಿಲ್ಲರ್ ನೋಡಿದರೆ ನಿರಾಸೆ ಖಂಡಿತ. ಈ ಸಿನಿಮಾ ನೋಡಿದ ಮೇಲೆ ಇನ್ನು ಮುಂದೆ ಯಾರಾದ್ರೂ ಪರಭಾಷೆ ನಿರ್ದೇಶಕರು ಬಂದು ಕಾಲ್‌ಶೀಟ್ ಕೇಳಿದರೆ, ‘ನಂದೊಂದೆರಡು ಹಳೇ ಸಿನಿಮಾಗಳನ್ನ ನೋಡ್ಕೊಂಡ್ ಬಾರಮ್ಮ’ ಅಂತ ಶಿವಣ್ಣ ತಮ್ಮ ಶೈಲಿಯಲ್ಲಿ ಹೇಳೋದು ಒಳ್ಳೇದು ಅನ್ನಿಸುತ್ತೆ.

ಒಟ್ಟಾರೆ ಹೇಳೋದಾದ್ರೆ, ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿ ಕ್ವಾಲಿಟಿ ಕಂಟೆಂಟ್ ಇದೆ. ಧನುಷ್, ಶಿವರಾಜ್ ಕುಮಾರ್ ಅಂಥ ಘಟಾನುಘಟಿ ನಟರು ಕೊಡೋ ಗ್ಲೂಕೋಸ್‌ನ ಎನರ್ಜಿ ಇದೆ. ಆದ್ರೆ, ಕ್ವಾಲಿಟಿ, ಕಂಟೆಂಟ್ ಎರಡೂ ಇದ್ರೂ ಪ್ರೇಕ್ಷಕರಿಗೆ ಸಿಗೋದು ಮಾತ್ರ ಬರೀ ಬಿಸ್ಕೆಟ್ !

ಲೂಸ್ ಟಾಕ್ – ಸಿದ್ದರಾಮಯ್ಯ
ಮುಖ್ಯಮಂತ್ರಿಗಳೇ, ಬಿಜೆಪಿಯವರು ಮನೆಮನೆಗೆ ಅಕ್ಷತೆ ಕಾಳು ಕಳಿಸ್ತಾ ಇದ್ದಾರಲ್ಲ. ಇದರ ಬಗ್ಗೆ ನಿಮ್ಮ ಅಭಿಪ್ರಾಯ?

– ನೋಡ್ರೀ, ಬಡವರ ಬಗ್ಗೆ ಕಾಳಜಿ ಇರೋರು ಮನೆಮನೆಗೆ ಅಕ್ಕಿ ಕಳಿಸ್ತಾರೆ. ದೇವರ ಹೆಸರಲ್ಲಿ ರಾಜಕೀಯ ಮಾಡೋರು ಅಕ್ಷತೆ ಕಳಿಸ್ತಾರೆ. ಅಷ್ಟೇ.

ಓ, ಅದ್ ಸರಿಬಿಡಿ ಸರ್, ಆದ್ರೆ ಈ ದೇವಸ್ಥಾನಗಳನ್ನ ಕಟ್ಟೋದ್ರ ಬಗ್ಗೆ ನಿಮ್ಮ ಅನಿಸಿಕೆ?

– ದೇವನೊಬ್ಬ ನಾಮ ಹಲವು ಅಂತಾರೆ. ಆದರೆ ಈಗ ದೇವನೊಬ್ಬ ಮಂದಿರ ಹಲವು ಅನ್ನೋ ಥರ ಆಗಿದೆ..

ಹೌದು. ಈಗ್ಲೇ ಊರು ಊರಲ್ಲೂ ರಾಮಮಂದಿರಗಳು ಇವೆ. ಇನ್ನೊಂದು ರಾಮಮಂದಿರ ಅಗತ್ಯ ಇತ್ತಾ?
– ಅದನ್ನ ಬಿಜೆಪಿಯವರಿಗೆ ಕೇಳಿ. ಆಸ್ಪತ್ರೆಗಳಲ್ಲಿ ಜನ ಚಿಕಿತ್ಸೆಗೆ ದುಡಿಲ್ಲದೆ ಪ್ರಾಣ ಬಿಡ್ತಾ ಇದ್ದಾರೆ. ಇವ್ರು ಮಂದಿರದಲ್ಲಿ ದೇವರ ಪ್ರಾಣ ಪ್ರತಿಷ್ಠಾಪನೆ ಮಾಡ್ತಾರಂತೆ.

ಎಂಥ ಮಾತು.. ಸರಿ, ರಾಮಮಂದಿರ ಉದ್ಘಾಟನೆ ನೋಡೋಕೆ ಹೋಗಲ್ಲ ಅಂದ್ರಂತೆ?
– ಹೌದು ಕಣ್ರೀ.. ಮೊದಲನೇ ದಿನ ಫುಲ್ ರಷ್ ಇರುತ್ತೆ. ಫಸ್ಟ್ ಡೇ ಫಸ್ಟ್ ಶೋ ಯಾವನ್ ನೋಡ್ತಾನೆ. ನೀವು ನೋಡಿ, ಯೂಟ್ಯೂಬಲ್ಲಿ ರಿವ್ಯೂ ಮಾಡಿ ಹೇಳಿ. ಚೆನ್ನಾಗಿದೆ ಅಂದ್ರೆ ಆಮೇಲೆ ಹೋಗ್ತೀನಿ.

ಏನ್ ಸರ್, ದೇವಸ್ಥಾನದ ವಿಷಯನಾ ಫಿಲ್ಮೀ ಸ್ಟೈಲಲ್ಲಿ ಹೇಳ್ತಿದ್ದೀರಾ?
– ನಾನೇನ್ ಮಾಡ್ಲಿ, ಅಲ್ಲಿ ನೋಡಿದ್ರೆ, ಮಂದಿರ ಇನ್ನೂ ಪೂರ್ತಿ ನಿರ್ಮಾಣನೇ ಆಗಿಲ್ವಂತೆ. ಈ ಬಿಜೆಪಿಯವರು ಇನ್ನೂ ಷೂಟಿಂಗೇ ಮುಗಿದಿಲ್ಲ, ಆದ್ರೂ
ಸಿನಿಮಾ ರಿಲೀಸ್ ಮಾಡ್ತಾ ಇದ್ದಾ ರಲ್ಲ, ಅದಕ್ಕೆ ಅವರ ಸ್ಟೈಲಲ್ಲಿ ಹೇಳಿದೆ.

(ಕಾಲ್ಪನಿಕ ಸಂದರ್ಶನ)

ನೆಟ್ ಪಿಕ್ಸ್

ಊರಲ್ಲಿ ಎಲೆಕ್ಷನ್ ಭರಾಟೆ ಜೋರಾಗಿಯೇ ನಡೆಯುತ್ತಿತ್ತು. ಎಲ್ಲ ಕಡೆ ಪ್ರಚಾರದ ಹವಾ. ಖೇಮು ಕೂಡ ಎಲೆಕ್ಷನ್‌ನಲ್ಲಿ ಬ್ಯುಸಿಯಾಗಿದ್ದ. ಒಂದು ದಿನ ಬೆಳಗ್ಗೆ ಹೀಗೆ ತಮ್ಮ ಪಕ್ಷದ ಕಾರ್ಯಕರ್ತ ರೊಡನೆ ಊರಲ್ಲಿ ತಿರುಗಾಡುತ್ತಿದ್ದಾಗ ಅಲ್ಲಿಗೆ ಸೋಮು ಬಂದ. ಅದಾಗಲೇ ಪುಲ್ ಟೈಟಾಗಿದ್ದ ಪಾರ್ಟಿ, ಖೇಮು ಹತ್ರ ಬಂದು ‘ಸರ್, ನೀವು ನಮ್ ಪಾರ್ಟಿಗೇ ವೋಟ್ ಹಾಕ್ಷೇಕು, ನಾನು ನಿಮ್ ತಮ್ಮ ಇದ್ದಂಗೆ ಅಂದ್ಕಳಿ’ ಅಂದ.

ಅದನ್ನು ಕೇಳಿದ ಖೇಮುಗೆ ಕೆಂಡಾಮಂಡಲ ಸಿಟ್ಟು ಬಂತು. ಒಂದೇ ಸಮನೆ ಸೋಮುವನ್ನು ಹಿಡಿದು ಹಿಗ್ಗಾಮುಗ್ಗ ಬಾರಿಸತೊಡಗಿದ. ಸರಿ ಸೋಮು ಅಲ್ಲಿಂದ ಎಸ್ಕೇಪ್. ನಂತರ ಮಧ್ಯಾಹ್ನದ ಹೊತ್ತಿಗೆ ಸೋಮು ಮತ್ತೆ ಖೇಮು ಮುಂದೆ ಹಾಜರಾದ. ಈಗಲೂ ಪುಲ್ ಟೈಟು. ಈಗಲೂ ಅದೇ ಡೈಲಾಗು. ‘ಸರ್, ನೀವು ನಮ್ ಪಾರ್ಟಿಗೇ ವೋಟ್ ಹಾಕ್ಟೇಕು, ನಾನು ನಿಮ್ ತಮ್ಮ ಇದ್ದಂಗೆ ಅಂದ್ಕಳಿ’. ಮತ್ತೆ ಖೇಮು ಕಡೆಯಿಂದ ಅವನಿಗೆ ಧರ್ಮದೇಟುಗಳು ಬಿದ್ದವು. ಮತ್ತೆ ಸೋಮು ಎಸ್ಕೇಪ್. ಸಂಜೆ ಇನ್ನೇನು ಕತ್ತಲಾಗಿ ಸ್ವಲ್ಪ ಹೊತ್ತು ಕಳೆದು ಪ್ರಚಾರ ಮುಗಿಯುವ ಹಂತಕ್ಕೆ ಬಂದಿತ್ತು.

ಖೇಮು ಬಳಿಗೆ ಮತ್ತೆ ಬಂದ ಸೋಮು ಅದಾಗಲೇ ಸಾಕಷ್ಟು ಬಾರಿ ‘ರಿಪೀಟ್’ ಆರ್ಡರ್ ಮಾಡಿ ಇನ್ನಷ್ಟು ಟೈಟ್ ಆಗಿ, ಸೇಮ್ ಡೈಲಾಗ್ ‘ರಿಪೀಟ್’ ಮಾಡಿದ. ‘ಸರ್. ನೀವು ನಮ್ ಪಾರ್ಟಿಗೇ ವೋಟ್ ಹಾಕ್ಟೇಕು. ನಾನು ನಿಮ್ ತಮ್ಮ ಇದ್ದಂಗೆ ಅಂದ್ಕಳಿ’. ಖೇಮುಗೆ ಮತ್ತೆ ಸಿಕ್ಕಾಪಟ್ಟೆ ಸಿಟ್ಟು ಬಂತು. ಇನ್ನೇನು ಹೊಡೆಯಲು ಕೈ ಎತ್ತಬೇಕು ಅಷ್ಟರಲ್ಲಿ ಖೇಮು ಪಕ್ಕದವಲ್ಲಿದ್ದವರು ಕೇಳಿದರು, ‘ಅಲ್ರೀ ಖೇಮು, ಪಾಪ ಅವನಿಗೆ ಯಾಕ್ರೀ ಹೊಡೀತೀರ? ಏನೋ ವೋಟ್ ಕೇಳ್ತಾವ್ನೆ. ಹಾಕಂಗಿದ್ರೆ ಹಾಕಿ, ಇಲ್ಲಾಂದ್ರೆ ಬಿಟ್ಟಾಕಿ. ಪಾಪ ಅದಕ್ಯಾಕೆ ಅವನಿಗೆ ಧರ್ಮದೇಟು ಹಾಕ್ತಿರಿ. ಪಾಪ ನಾನು ನಿಮ್ ತಮ್ಮ ಇದ್ದಂಗೆ ಅಂತ ತಿಳ್ಳಳಿ ಅಂತ ಬೇರೆ ಅಂತಿದಾನೆ. ಅದಕ್ಕಾದರೂ ಕರುಣೆ ಬೇಡ್ವಾ?’. ಅದಕ್ಕೆ ಖೇಮು ಹೇಳಿದ ‘ಹೊಡೀತಾ ಇರೋದೇ ಅದಕ್ಕೇನೇ, ವೋಟ್
ಕೇಳಿದ್ದಕ್ಕೆ ಬೇಜಾರಿಲ್ಲ, ಅದ್ ಬಿಟ್ಟು ತಮ್ಮ ಇದ್ದಂಗೆ ಅಂತಾನೇ. ತಮ್ಮ ಇದ್ದಂಗೆ ಏನ್ ಬಂತು ರೀ, ಈ ಬಡ್ಡಿಮಗ ನನ್ ಸ್ವಂತ ತಮ್ಮನೇ’.

ಲೈನ್ ಮ್ಯಾನ್

ಸಂಕ್ರಾಂತಿಗೆ ಕನ್ನಡ ಸಿನಿಮಾಗಳನ್ನ ನಮ್ಮೋರು ಬಿಡುಗಡೆ ಮಾಡ್ತಾ ಇಲ್ಲ. ಇದನ್ನೇ ಉಪಯೋಗಿಸಿ ಕೊಂಡು ಬೇರೆ ಭಾಷೆಯವರು ಮಜಾ ಮಾಡ್ತಾ ಇದ್ದಾರೆ.
– ಏನ್ ಮಾಡಕ್ಕಾಗಲ್ಲ, ನಿಮ್ ಸೈಟ್‌ನ ಜಾಸ್ತಿ ದಿನ ಖಾಲಿ ಬಿಟ್ರೆ ಬೇರೆ ಯಾವನೋ ಬಂದು, ಅಲ್ಲಿ ಮನೆ ಕಟ್ಟಿಸ್ತಾನೆ ಅಷ್ಟೇ.

ಜನ ನಿಮ್ಮ ಬಗ್ಗೆ ‘ಲಕ್ಷ್ಯ’ ಕೊಡ್ತಿಲ್ವಾ?
– ಮಾಲ್ಡೀವ್ಸ್ ಬೇಡ, ‘ಲಕ್ಷ’ದ್ವೀಪ ಬೇಕು ಅಂತ ಪೋಸ್ಟ್ ಹಾಕಿ ಸಾಕು.

ದುಬಾರಿ ಪೆನ್ ತಗೊಳ್ಳೋದರ ಉಪಯೋಗ 
– ಅನ್ನಿಸಿದ್ದನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದು.

ಸುಪ್ರೀಂ ಕೋರ್ಟ್ ಜಡ್ಜ್ ಗಳೇ ರೆಬೆಲ್ ಆದ್ರೆ..,
– oಟ..ಟಡಿ..ಠಿeಛಿ ಚಿZ ಜಿo ಜ್ಞಿ ಡಿeಟoಛಿ ೞ್ಚಟ್ಠ್ಟಠಿೞ..?

ಸೌಂಡ್ ಪಾರ್ಟಿ ಸ್ವಗತ
– ಸೈರನ್ ಹಾಕಿಲ್ಲ ಅಂದ್ರೆ ಆಂಬುಲೆನ್ಸ್‌ಗೇ ಬೆಲೆ ಸಿಗಲ್ಲ.. – ಹಂಗೇನೆ… ಸೌಂಡ್ ಮಾಡದೇ ಇದ್ರೆ ಮನುಷ್ಯರಿಗೆ ಬೆಲೆ ಸಿಗಲ್ಲ..

ಗಾಂಧಿನಗರದ ಕೆಲವು ಹೀರೋಗಳ ವ್ಯಥೆ
– ನಾನೇ ಇಲ್ಲಿ ನಂಬರು ಒನ್ ಅಂತ ಹೇಳ್ತಾ ಇದ್ರೂ ನಂಬೋರು ಮಾತ್ರ ಯಾರೂ ಇಲ್ಲ.

ಇದೀಗ ತಾನೆ ಹೊಳೆದ ಸುದ್ದಿ:
– ಬಂಗಾರದ ವಿಷಯದಲ್ಲಷ್ಟೇ ಅಲ್ಲ, ಐಡಿಯಾಗಳ ವಿಷಯದಲ್ಲೂ ಅಷ್ಟೇ….‘ಹೊಳೆಯುವುದೆಲ್ಲಾ’ ಬಂಗಾರ ಅಲ್ಲ.

ಒಂದು ಅಮಿತಾಬ್ ಬಚ್ಚನ್ ಮತ್ತು ಇನ್ನೊಂದು ಲೋಕಲ್ ಬಚ್ಚನ್ ಸುದೀಪ್ ಚಿತ್ರವನ್ನು ಮಲಯಾಳಿ ಗಳು- ಒಂದೇ ರೀತಿ ಉಚ್ಚರಿಸು ತ್ತಾರೆ. ಯಾವುದದು?

– ಕೂಲಿ – ಗೂಳಿ

ಯಾವುದೋ ಹಗರಣದಲ್ಲಿ ಇವರದ್ದೇನೂ ತಪ್ಪಿಲ್ಲ ಅಂತಾ ಮಂತ್ರಿಯೊಬ್ಬರ ಬಗ್ಗೆ ಕೋರ್ಟ್ ತೀರ್ಪು ಬಂದರೆ ಆಗ .

– ‘ಮಂತ್ರಿ’ಮುಗ್ಧ.

ಹುಲಿಗಳನ್ನು ಟೈನ್ ಮಾಡುವ ಜಾಗಕ್ಕೆ ಏನಂತಾರೆ?

– ‘ಹುಲಿ’ಗೆ ತರಬೇತಿ ಕೇಂದ್ರ.