Wednesday, 11th December 2024

ಆಹಾರದಲ್ಲಿ ಕಾರ್ಬೋಹೈಡ್ರೇಟ್ ಅವ್ಯವಸ್ಥೆಗಳು

ಸ್ವಾಸ್ಥ್ಯ ಸಂಪದ

Yoganna55@gmail.com

ಕಾರ್ಬೋಹೈಡ್ರೇಟ್ ಆಹಾರ ಪದಾರ್ಥಗಳು ದೇಹಕ್ಕೆ ಶಕ್ತಿಯನ್ನು ಒದಗಿಸುವ ಪ್ರಮುಖ ಆಹಾರ ಪದಾರ್ಥಗಳಾದು ದರಿಂದ ಇವುಗಳಿಗೆ ಸಂಬಂಧಿಸಿದ ಅವ್ಯವಸ್ಥೆ ಗಳು ದೇಹದ ಬೆಳವಣಿಗೆ ಮತ್ತು ಪೋಷಣೆಯ ಮೇಲೆ ಗಂಭೀರ ಸ್ವರೂಪದ ಪರಿಣಾಮವನ್ನು ಬೀರುತ್ತವೆ.

ಸೇವಿಸುವ ಆಹಾರದಲ್ಲಿ ಶೇ.50ಕ್ಕಿಂತ ಹೆಚ್ಚು ಸಾಮಾನ್ಯವಾಗಿ ಕಾರ್ಬೋಹೈಡ್ರೇಟ್‌ಗಳೇ ಆಗಿದ್ದು, ಆಹಾರದ ಬಹುಪಾಲು ಇವುಗಳಿಂದಲೇ ಕೂಡಿರುತ್ತವೆ. ಆಯಾಯ ವ್ಯಕ್ತಿಗಳಿಗೆ ಅವಶ್ಯಕವಿರುವ ಕ್ಯಾ ಲೊರಿ ಪ್ರಮಾಣದಲ್ಲಿ ಶೇ.೫೦ರಷ್ಟು ಪ್ರಮಾಣದಷ್ಟು  ಶಕ್ತಿ ಕಾರ್ಬೋ ಹೈಡ್ರೇಟ್ ಆಹಾರ ಪದಾರ್ಥಗಳಿಂದ ಲಭಿಸುವಂತೆ ಆಹಾರ ನಿಯಮವನ್ನು ರೂಪಿಸಿ ಕೊಳ್ಳಬೇಕು.

ಅಧಿಕ ಪ್ರಮಾಣದ ಕಾರ್ಬೋಹೈಡ್ರೇಟ್‌ಗಳ ಸೇವನೆ ಹಾನಿಕಾರಕ. ಕಾರ್ಬೋಹೈಡ್ರೇಟ್‌ ಗಳನ್ನು ಅವಶ್ಯಕತೆಗಿಂತ ಹೆಚ್ಚು ಸೇವಿಸಿ ದಲ್ಲಿ ದೇಹದೊಳಗೆ ಅವು ಜಿಡ್ಡಾಗಿ ಪರಿವರ್ತನೆ ಹೊಂದಿ ಶೇಖರಣೆಯಾಗಿ ದೇಹದ ತೂಕ ಹೆಚ್ಚಾಗುತ್ತದೆ. ಕಾರ್ಬೋ ಹೈಡ್ರೇಟ್‌ ಗಳನ್ನುಳ್ಳ ಆಹಾರ ಪದಾರ್ಥಗಳಾದ ಅಕ್ಕಿ, ರಾಗಿ, ಗೋಧಿ, ಜೋಳ, ಸಕ್ಕರೆ, ಆಲೂಗಡ್ಡೆ, ಗೆಣಸು, ಮೂಲಂಗಿ, ಅತಿ ಸಿಹಿಯಾದ ಹಣ್ಣು (ಮಾವು, ಬಾಳೆಹಣ್ಣು, ದ್ರಾಕ್ಷಿ, ಸಪೋಟ ಇತ್ಯಾದಿ.)ಗಳಲ್ಲಿ ಕಾರ್ಬೋಹೈಡ್ರೇಟ್‌ಗಳಲ್ಲದೆ ಇನ್ನಿತರ ಪೌಷ್ಟಿಕಾಂಶಗಳಾದ ಪ್ರೋಟಿನ್, ಲವಣಗಳು ಮತ್ತು ವಿಟಮಿನ್‌ಗಳೂ ಸಹ ಇರುತ್ತವೆ.

ಇವುಗಳಿಂದ ಆಹಾರವನ್ನು ತಯಾರು ಮಾಡುವಾಗ ಈ ಅಂಶಗಳು ನಾಶವಾಗದಂತೆ ಆಹಾರ ಪದಾರ್ಥಗಳನ್ನು ಪರಿಷ್ಕರಿಸ ಬೇಕು. ಉದಾ ಅಕ್ಕಿಯ ಹೊರಕವಚದಲ್ಲಿ ಬಿ ವಿಟಮಿನ್‌ಗಳು ಮತ್ತು ನಾರಿನ ಅಂಶಗಳು ಅಧಿಕವಾಗಿದ್ದು, ಅಕ್ಕಿಗೆ ಪಾಲಿಷ್ ಕೊಡಿಸುವುದರಿಂದ ಇವು ಹೊಟ್ಟಿನಲ್ಲಿಯೇ ಸತ್ವಗಳು ಉಳಿದು, ಅಕ್ಕಿಯ ಪೌಷ್ಟಿಕ ಸಾಮರ್ಥ್ಯ ಕುಗ್ಗುತ್ತದೆ. ಅಕ್ಕಿಯನ್ನು ಮುದ್ದೆ ಮತ್ತು ರೊಟ್ಟಿ ರೂಪದಲ್ಲಿ ಸೇವಿಸುವುದರಿಂದ ರಕ್ತ ಗ್ಲುಕೋಸ್ ಏರಿಕೆ ವೇಗವನ್ನು ನಿಯಂತ್ರಿಸಬಹುದು.

ಬೇಯಿಸಿ, ಗಂಜಿರೂಪದಲ್ಲಿ ಸೇವಿಸಿದಲ್ಲಿ ರಕ್ತಗ್ಲುಕೋಸ್ ಏರಿಕೆ ವೇಗವಾಗಿ ಆಗುತ್ತದೆ. ರಾಗಿಯನ್ನು ಮುದ್ದೆ, ರೊಟ್ಟಿ ರೂಪದಲ್ಲಿ ಸೇವಿಸುವುದರಿಂದ ರಕ್ತ ಗ್ಲುಕೋಸ್ ಏರಿಕೆ ವೇಗ ತಗ್ಗುತ್ತದೆ. ಹಾಗೆಯೇ ಗಂಜಿರೂಪದಲ್ಲಿ ಸೇವಿಸಿದರೆ ರಕ್ತ ಗ್ಲುಕೋಸ್ ಏರಿಕೆ
ವೇಗ ಏರುತ್ತದೆ. ಸಕ್ಕರೆಯನ್ನು ನೇರವಾಗಿ ಸೇವಿಸುವುದರಿಂದ ರಕ್ತ ಗ್ಲುಕೋಸ್ ಏರಿಕೆ ವೇಗವಾಗಿ ಆಗುತ್ತದೆ. ಬಹುಪಾಲು ಹಣ್ಣು ಗಳಲ್ಲಿ ಫುಕ್ಟೋಸ್, ಕಾರ್ಬೋಹೈಡ್ರೇಟ್ ಇದ್ದು, ರಕ್ತ ಗ್ಲುಕೋಸ್ ಏರಿಕೆ ಮಂದಗತಿಯಲ್ಲಾಗುತ್ತದೆ. ಮಧುಮೇಹ ಇರುವವರು ರಕ್ತ ಗ್ಲುಕೋಸ್‌ಅನ್ನು ವೇಗವಾಗಿ ಹೆಚ್ಚಿಸುವ ಕಾರ್ಬೋಹೈಡ್ರೇಟ್ ಆಹಾರ ಪದಾರ್ಥಗಳನ್ನು ಸೇವಿಸಬಾರದು ಅಥವಾ ಮಿತಿಯಾಗಿ ಸೇವಿಸಬೇಕು.

ಕಾರ್ಬ್‌ನಿಂದ ಕಾಯಿಲೆ
ಆಹಾರದಲ್ಲಿ ಶಕ್ತಿದಾಯಕ ಆಹಾರ ಪದಾರ್ಥಗಳು ಸಮಂಜಸವಾಗಿ ಲಭ್ಯವಿಲ್ಲದಿದ್ದಲ್ಲಿ, ಲಭ್ಯವಿದ್ದರೂ ಸರಿಯಾಗಿ ಜೀರ್ಣ ವಾಗದಿದ್ದಲ್ಲಿ ಅಥವಾ ಜೀರ್ಣವಾಗಿ ರಕ್ತಗತವಾದರೂ ಕಾರ್ಬೋಹೈಡ್ರೇಟ್ ಗಳ ಅಂತಿಮ ರಕ್ತಗತವಾದ ಅಂಶಗಳಾದ ಗ್ಲುಕೋಸ್, ಫುಕ್ಟೋಸ್ ಅಥವಾ ಗ್ಯಾಲಕ್ಟೋಸ್‌ಗಳ ಚಯಾಪಚಯ ಕ್ರಿಯೆ ಸರಿಯಾಗಿ ಜರುಗದಿದ್ದಲ್ಲಿ ದೇಹಕ್ಕೆ ಶಕ್ತಿ ಲಭಿಸದೆ ಅವ್ಯವಸ್ಥೆ ಗಳುಂಟಾಗುತ್ತವೆ.

ಕೆಲವು ಅವ್ಯವಸ್ಥೆಗಳು ದೇಹದ ಬೆಳವಣಿಗೆಗೆ ತೊಡಕಾದರೆ ಮತ್ತೆ ಕೆಲವು ಅವ್ಯವಸ್ಥೆಗಳು ಮಾರಣಾಂತಿಕವಾಗಬಲ್ಲವು. ಕಾರ್ಬೋ ಹೈಡ್ರೇಟ್‌ಗೆ ಸಂಬಂಧಿಸಿದ ಕಾಯಿಲೆಗಳನ್ನು ಕಾರ್ಬೋಹೈಡ್ರೇಟ್ ಗಳ ಕೊರತೆ ಅಥವಾ ಅಧಿಕವಾಗಿ ಸೇವಿಸುವುದರಿಂದುಂಟಾದ ಕಾಯಿಲೆಗಳು, ಚಯಾಪಚಯದ ಕಾಯಿಲೆಗಳು ಮತ್ತು ಕಾರ್ಬೋಹೈಡ್ರೇಟ್‌ನ ಸಂಗ್ರಹ ಕಾಯಿಲೆಗಳು ಎಂದು ವರ್ಗೀಕರಿಸ ಲಾಗಿದೆ.

ಕಾರ್ಬೋ ಕೊರತೆ
ಆಹಾರದಲ್ಲಿ ಕಾರ್ಬೋಹೈಡ್ರೇಟ್‌ಗಳ ಪ್ರಮಾಣ ಕಡಿಮೆಯಾದಾಗ ದೇಹಕ್ಕೆ ಶಕ್ತಿ ಕಡಿಮೆಯಾಗಿ ದೇಹ ಸವಕಲಾಗುತ್ತದೆ. ಅಂತಹ ಸಂದರ್ಭಗಳಲ್ಲಿ ದೇಹದಲ್ಲಿ ಶೇಖರಣೆಯಾಗಿರುವ ಜಿಡ್ಡುಗಳಿಂದ ಶಕ್ತಿ ಉತ್ಪತ್ತಿಯಾಗಿ ದೇಹದಲ್ಲಿ ಜಿಡ್ಡಿನ ಪ್ರಮಾಣ ಕಡಿಮೆ
ಯಾಗಿ ದೇಹ ಸವಕಲಾಗುತ್ತದೆ. ನಿಶಕ್ತಿ, ಸುಸ್ತು ಸಂಕಟ, ದೈಹಿಕ ಶ್ರಮವನ್ನು ಕೈಗೊಳ್ಳಲಾಗದಿರುವಿಕೆ ಇತ್ಯಾದಿ ತೊಂದರೆ ಗಳುಂಟಾಗುತ್ತವೆ.

ಕೀಟೋನ್ ವಿಷಮತೆ(ಕೀಟೋಸಿಸ್) 

ದೇಹಕ್ಕೆ ದೀರ್ಘಕಾಲೀಕವಾಗಿ ಅಂದರೆ ೨೪-೪೮ ಗಂಟೆಗಳಿಗಿಂತ ಹೆಚ್ಚು ಅವಧಿಗೆ ಗಣನೀಯ ಪ್ರಮಾಣದಲ್ಲಿ ಕಾರ್ಬೋ ಹೈಡ್ರೇಟ್(ಉಪವಾಸ ಇತ್ಯಾದಿ) ಕೊರತೆಯುಂಟಾದರೆ ಜಿಡ್ಡುಗಳಿಂದ ಶಕ್ತಿ ಉತ್ಪತ್ತಿಯಾಗುತ್ತದೆ. ಈ ಕ್ರಿಯೆಯಿಂದ ದೇಹದಲ್ಲಿ
ಕೀಟೋನ್ ವಿಷಮ ವಸ್ತುಗಳು ಉಂಟಾಗಿ ಮೆದುಳು ಮತ್ತಿತರ ಅಂಗಾಂಗಗಳ ಮೇಲೆ ಮಾರಣಾಂತಿಕವಾಗಬಲ್ಲ ಪರಿಣಾಮ ಗಳುಂಟಾಗುತ್ತವೆ.

ಈ ಸ್ಥಿತಿಯನ್ನು ‘ಕೀಟೋನ್ ವಿಷಮತೆ’(ಕೀಟೋಸಿಸ್) ಎನ್ನಲಾಗುತ್ತದೆ. ಉಸಿರಾಟದ ಏರಿಕೆ, ನಿರ್ಜಲತೆ, ವಿಶಿಷ್ಟ ಉಸಿರಿನ ವಾಸನೆ, ಅಂತಿಮ ಹಂತದಲ್ಲಿ ಪ್ರಜ್ಞಾಹೀನತೆ ಮತ್ತು ಸಾವು ಇದರ ಪ್ರಮುಖ ರೋಗ ಲಕ್ಷಣಗಳು. ರಕ್ತದ ಪಿಹೆಚ್ ಆಮ್ಲದ ಕಡೆಗೆ ಬದಲಾವಣೆಯಾಗಿ ದೇಹದ ಜೀವ ರಾಸಾಯನಿಕ ಕ್ರಿಯೆಗಳ ಮೇಲೆ ಮಾರಣಾಂತಿಕ ಪರಿಣಾಮಗಳುಂಟಾಗುತ್ತವೆ. ಮೂತ್ರದಲ್ಲಿ ಕೀಟೋನ್ ರಾಸಾಯನಿಕ ವಸ್ತುಗಳನ್ನು ಪತ್ತೆಮಾಡುವುದರಿಂದ ಈ ಸ್ಥಿತಿಯನ್ನು ನಿಖರಪಡಿಸಿಕೊಳ್ಳಲಾಗುತ್ತದೆ. ತಕ್ಷಣ
ಗ್ಲುಕೋಸ್ ಕೊರತೆಯನ್ನು ನೀಗಿಸಿದಲ್ಲಿ ಕಾಯಿಲೆ ಸಹಜ ಸ್ಥಿತಿಗೆ ಮರಳುತ್ತದೆ. ಸಕ್ಕರೆಕಾಯಿಲೆಯಲ್ಲುಂಟಾಗುವ ಗ್ಲುಕೋಸ್ ಕೊರತೆಯಲ್ಲೂ ಕೀಟೋನ್ ವಿಷಮತೆ ಉಂಟಾಗಬಹುದು. ಇನ್ಸ್ಯುಲಿನ್ ನೀಡುವಿಕೆಯಿಂದ ಗ್ಲುಕೋಸ್ ಜೀವಕೋಶಗಳಿಗೆ
ಲಭ್ಯವಂತಾಗಿಸುವುದರಿಂದ ಕೀಟೋನ್ ವಿಷಮತೆಯನ್ನು ನಿವಾರಿಸಬಹುದು.

ಹೆಚ್ಚಳದಿಂದುಂಟಾಗುವ ಕಾಯಿಲೆಗಳು
ಕಾರ್ಬೋಹೈಡ್ರೇಟ್‌ಗಳನ್ನು ಅವಶ್ಯಕತೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದಲ್ಲಿ ದೇಹದಲ್ಲಿ ಹೆಚ್ಚಾದ ಪ್ರಮಾಣ ಜಿಡ್ಡಾಗಿ ಪರಿವರ್ತನೆಯಾಗಿ ದೇಹದ ವಿವಿಧ ಭಾಗಗಳಲ್ಲಿ ಶೇಖರಣೆಯಾಗಿ ಸ್ಥೂಲಕಾಯ ಉಂಟಾಗುತ್ತದೆ. ಸ್ಥೂಲಕಾಯದಿಂದ ಹಲವಾರು ಸಮಸ್ಯೆಗಳುಂಟಾಗುತ್ತವೆ. ರಕ್ತದ ಕೊಲೆಸ್ಟ್ರಾಲ್ ಕೂಡ ಏರಿಕೆಯಾಗುತ್ತದೆ. ಏರುರಕ್ತ ದೊತ್ತಡ, ಹೃದಯಾಘಾತ, ಕ್ಯಾನ್ಸರ್ ಇತ್ಯಾದಿ ಕಾಯಿಲೆಗಳಿಗೆ ನಾಂದಿಯಾಗುತ್ತದೆ.

ಜೀರ್ಣಿಕೆಗೆ ಸಂಬಂಧಿಸಿದ ಕಾಯಿಲೆಗಳು
ಜೀರ್ಣಾಂಗ ವ್ಯವಸ್ಥೆಯಲ್ಲಿ ಕೆಲವು ಕಾರ್ಬೋಹೈಡ್ರೇಟ್‌ಗಳನ್ನು ಜೀರ್ಣಿಸುವ ಕಿಣ್ವಗಳ ಕೊರತೆಯಿಂದಾಗಿ  ಕಾರ್ಬೋ ಹೈಡ್ರೇಟ್‌ ಗಳ ಅಸಹನೆ ಉಂಟಾಗಬಹುದು. ಇವರುಗಳಲ್ಲಿ ಆಹಾರ ಸೇವಿಸಿದ ನಂತರ ಉಂಟಾಗುವ ಭೇದಿ, ಹೊಟ್ಟೆ ಉಬ್ಬರ, ಊಸು, ಎದೆ ಉರಿ, ಹೊಟ್ಟೆನೋವು ತೊಂದರೆಗಳುಂಟಾಗುತ್ತವೆ. ಮಕ್ಕಳಲ್ಲಿ ಕಾಣಿಸಿಕೊಳ್ಳುವ ಹಾಲಿನ ಅಸಹನತೆ, ಗೋಧಿಯಲ್ಲಿರುವ ಗ್ಲುಟೇನ್‌ಗೆ ಉಂಟಾಗುವ ಅಸಹನೆ ಪ್ರಮುಖವಾದವು. ಇಂತಹ ಮಕ್ಕಳಲ್ಲಿ ಎದೆ ಹಾಲನ್ನು ಸೇವಿಸಿದ ನಂತರ ಹೊಟ್ಟೆ ಉಬ್ಬರ ಮತ್ತು ಭೇದಿ ಕಾಣಿಸಿಕೊಳ್ಳಬಹುದು.

ಜನ್ಮದತ್ತವಾದ ಹಾಲಿನ ಲ್ಯಾಕ್ಟೋಸ್ ಕಾರ್ಬೋಹೈಡ್ರೇಟನ್ನು ವಿಭಜಿಸುವ ಕಿಣ್ವ ಲ್ಯಾಕ್ಟೇಸ್ ಕಿಣ್ವದ ಕೊರತೆಯಿಂದ
ಇದುಂಟಾಗುತ್ತದೆ. ಇಂತಹ ಮಕ್ಕಳಿಗೆ ಲ್ಯಾಕ್ಟೇಸ್ ಕಿಣ್ವವನ್ನು ಕೃತಕವಾಗಿ ತೊಟ್ಟಾಗಿ ನೀಡಲಾಗುತ್ತದೆ. ಹಾಲನ್ನು ಕೆಲವೊಮ್ಮೆ ಮಕ್ಕಳಲ್ಲಿ ನಿಲ್ಲಿಸಲೇ ಬೇಕಾದ ಪ್ರಮೇಯ ಉಂಟಾದರೂ ಆಗಬಹುದು. ಕೆಲವು ಆಹಾರ ಪದಾರ್ಥಗಳು ಕೆಲವರಿಗೆ ಅಲರ್ಜಿಯ
ನ್ನುಂಟು ಮಾಡಬಹುದು.

ಕಾರ್ಬೋಹೈಡ್ರೇಟ್ ಗಳನ್ನು ಜೀರ್ಣಿಸುವ ಕಿಣ್ವಗಳ ಕೊರತೆ, ಹೀರಿಕೆ ವ್ಯವಸ್ಥೆಯಲ್ಲಾಗುವ ಕರುಳಿನ ಮ್ಯೂಕೋಸ್‌ಆದ ನ್ಯೂನತೆ ಗಳಲ್ಲಿ ಕಾರ್ಬೋಹೈಡ್ರೇಟ್‌ಗಳ ಸಮಸ್ಯೆಗಳುಂಟಾಗುತ್ತವೆ. ರೋಗಪತ್ತೆ ಪರೀಕ್ಷೆಗಳಿಂದ ನಿರ್ದಿಷ್ಟ ಕಾರಣಗಳನ್ನು ದೃಢೀಕರಿಸಿ ಕೊಳ್ಳಲಾಗುತ್ತದೆ. ಕೊರತೆಯಾದ ಕಿಣ್ವಗಳನ್ನು ಹೊರಗಿನಿಂದ ನೀಡುವುದರಿಂದ ಕೊರತೆಯನ್ನು ಸರಿದೂಗಿಸಲಾಗುತ್ತದೆ. ಅಸಹನೀಯವಾದ ಕಾರ್ಬೋಹೈಡ್ರೇಟ್ ಗಳನ್ನು ಆಹಾರದಿಂದ ಕೈಬಿಡಬೇಕಾಗುತ್ತದೆ.

ಅವ್ಯವಸ್ಥೆಗಳು
ಕಾರ್ಬೋಹೈಡ್ರೇಟ್ ಚಯಾಪಚಯ ಕ್ರಿಯೆಗೆ (ಮೆಟಬಾಲಿಸಂ) ಸಂಬಂಧಿಸಿದ ಅವ್ಯವಸ್ಥೆಗಳು ಗ್ಲುಕೋಸ್, ಫ್ರಕ್ಟೋಸ್ ಅಥವಾ ಗ್ಯಾಲಕ್ಟೋಸ್‌ಗಳಿಗೆ ಸಂಬಂಧಿಸಿದವುಗಳಾಗಬಹುದು.

ಗ್ಲುಕೋಸ್ ಮಧುಮೇಹ
ರಕ್ತದಲ್ಲಿ ಗ್ಲುಕೋಸ್ ಪ್ರಮಾಣ ಸದಾಕಾಲ ಸಹಜ ಗಡಿಯಲ್ಲಿರಬೇಕು. (೧೨೦-೧೫೦ ಮಿ. ಗ್ರಾಂ/ ಡಿ.ಎಲ್.) ಈ ಕಾಯಿಲೆಗಳಲ್ಲಿ ಗ್ಲುಕೋಸ್ ಚಯಾಪಚಯ ಕ್ರಿಯೆಗೆ ಸಂಬಂಽಸಿದ ಮಧುಮೇಹ ಅವ್ಯವಸ್ಥೆ ಪ್ರಮುಖವಾದುದು. ಇದರಲ್ಲಿ ಗ್ಲುಕೋಸ್ ಅನ್ನು ರಕ್ತದಿಂದ ಜೀವಕೋಶದೊಳಕ್ಕೆ ರವಾನಿಸುವ ಇನ್ಸ್ಯುಲಿನ್ ಕೊರತೆ ಅಥವಾ ಅದರ ಸಾಮರ್ಥ್ಯ ಕುಗ್ಗುವುದರಿಂದುಂಟಾಗ ಬಹುದು.

ಇದರಿಂದ ರಕ್ತ ಗ್ಲುಕೋಸ್ ಏರಿಕೆ ಉಂಟಾಗುತ್ತದೆ. ರಕ್ತ ಗ್ಲುಕೋಸ್ ಏರಿಕೆಯಿಂದ ರಕ್ತನಾಳಗಳು ಜಖಂಗೊಂಡು ಕಣ್ಣು, ಮೆದುಳು, ಹೊರರಕ್ತನಾಳಗಳು, ಮೂತ್ರಜನಕಾಂಗಗಳು ಕಾಯಿಲೆಗೀಡಾಗುತ್ತವೆ. ರಕ್ತದ ಕೊಲೆಸ್ಟ್ರಾಲ್ ಏರಿಕೆಯಾಗಿ ಹೃದಯದ ಶುದ್ಧ ರಕ್ತನಾಳಗಳಲ್ಲಿ ಜಿಡ್ಡು ಶೇಖರಣೆಯಾಗಿ ಅಡಚಣೆಯುಂಟಾಗಿ ಹೃದಯಾಘಾತ ಉಂಟಾಗುತ್ತದೆ. ಮೆದುಳಿನ ಶುದ್ಧರಕ್ತನಾಳಗಳು ಕಾಯಿಲೆಗೀಡಾಗಿ ಸ್ಟ್ರೋಕ್ ಸಂಭವಿಸಿ ವಿವಿಧ ಬಗೆಯ ಲಕ್ವಗಳುಂಟಾಗುತ್ತವೆ.

ಜೀವಕೋಶಗಳಿಗೆ ಗ್ಲುಕೋಸ್ ಲಭಿಸದೆ ದೇಹದ ಎಲ್ಲ ಜೀವಕೋಶಗಳು ಶಕ್ತಿಹೀನವಾಗುತ್ತವೆ. ನಿಶಕ್ತಿ, ತೂಕನಷ್ಟ, ಅತಿಯಾದ ಬಾಯಾರಿಕೆ, ಅತಿಯಾದ ಮೂತ್ರವಿಸರ್ಜನೆ, ಕೈ ಕಾಲು ಉರಿ ಇತ್ಯಾದಿ ಮಧುಮೇಹದ ತೊಂದರೆಗಳುಂಟಾಗುತ್ತವೆ. ಇನ್ಸ್ಯುಲಿನ್ ಕೊರತೆಯನ್ನು ಸರಿದೂಗಿಸುವುದರಿಂದ ಈ ಅವ್ಯವಸ್ಥೆಯನ್ನು ನಿಯಂತ್ರಿಸಬಹುದು. ಈ ಸಮಸ್ಯೆ ಇರುವವರು ಕಾರ್ಬೋ ಹೈಡ್ರೇಡ್ ಉಳ್ಳ ಆಹಾರ ಪದಾರ್ಥವನ್ನು ಮಿತಿಯಾಗಿ ಸೇವಿಸಬೇಕು.

ಫ್ರಕ್ಟೋಸ್ ಅವ್ಯವಸ್ಥೆ
ಹಣ್ಣುಗಳಲ್ಲಿ ಫ್ರಕ್ಟೋಸ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ಅತಿ ಸಿಹಿಯಾದ ವಸ್ತು. ಇದನ್ನು ಹೆಚ್ಚಾಗಿ ಸೇವಿಸುವುದರಿಂದ ಇನ್ಸ್ಯುಲಿನ್‌ನ ಕಾರ್ಯಸಾಮರ್ಥ್ಯ ಕುಗ್ಗಿಕೆ, ಸ್ಥೂಲಕಾಯ, ರಕ್ತ ಜಿಡ್ಡೇರಿಕೆ ಮತ್ತು ಈಲಿಯ ಅವ್ಯವಸ್ಥೆಗಳುಂಟಾಗುತ್ತವೆ. ಇದು ಹೆಚ್ಚು ಸಿಹಿ ಇರುವುದರಿಂದ ಕೃತಕ ಆಹಾರ ಪದಾರ್ಥಗಳು ಮತ್ತು ಪಾನೀಯಗಳ ತಯಾರಿಕೆಯಲ್ಲಿ ಹೆಚ್ಚಾಗಿ ಇದನ್ನು ಉಪಯೋಗಿಸಲಾಗುತ್ತದೆ. ಫ್ರಕ್ಟೋಸ್ ದೇಹದಲ್ಲಿ ಶಕ್ತಿಗಾಗಿ ಗ್ಲುಕೋಸ್ ಆಗಿ ಪರಿವರ್ತನೆ ಆಗಲು ಕಿಣ್ವವೊಂದು ಅವಶ್ಯಕವಿದ್ದು, ಜನ್ಮದತ್ತವಾಗಿ ಉಂಟಾಗುವ ಈ ಕಿಣ್ವದ ಕೊರತೆಯಿಂದ ರಕ್ತದಲ್ಲಿ ಫ್ರಕ್ಟೋಸ್ ಗ್ಲುಕೋಸ್ ಆಗಿ ಪರಿವರ್ತನೆಯಾಗದೆ. ರಕ್ತದಲ್ಲಿ
ಇದರ ಪ್ರಮಾಣ ಏರಿಕೆಯಾಗಿ ಅನಾಹುತಗಳುಂಟಾಗುತ್ತವೆ. ಇಂತಹವರು ಹಣ್ಣುಗಳನ್ನು ಮತ್ತು ಕೃತಕ ಸಿಹಿ ಪದಾರ್ಥಗಳು ಹಾಗೂ ಪಾನೀಯಗಳನ್ನು ಸೇವಿಸಬಾರದು.

ಗ್ಯಾಲಕ್ಟೋಸ್ ಅವ್ಯವಸ್ಥೆ
ಹಾಲಿನಲ್ಲಿರುವ ಏಕ ಸ್ಯಾಕರೈಡ್ ಇದು. ರಕ್ತದಲ್ಲಿ ಇದು ಕಿಣ್ವವೊಂದರಿಂದ ಗ್ಲಕೋಸ್ ಆಗಿ ಪರಿವರ್ತನೆ ಹೊಂದಿ ಉಪಯೋಗಿಸ ಲ್ಪಡುತ್ತದೆ. ಜನ್ಮದತ್ತವಾಗಿ ಈ ಕಿಣ್ವದ ಕೊರತೆ ಇದ್ದವರಲ್ಲಿ ರಕ್ತದಲ್ಲಿ ಇದರ ಪ್ರಮಾಣ ಏರಿಕೆಯಾಗುತ್ತದೆ. ಜನ್ಮದತ್ತವಾಗಿ ಬರಬಹುದಾದ ಈ ನ್ಯೂನತೆ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.ಜೀತೊಂದರೆ ಇರುವ ಮಕ್ಕಳಲ್ಲಿ ಫಿಟ್ಸ್, ಕೆರಳುವಿಕೆ, ಮಂಕಾಗುವಿಕೆ, ಹಾಲು ಕುಡಿಯದಿರುವಿಕೆ, ಜಾಂಡೀಸ್ ಮತ್ತು ವಾಂತಿ ತೊಂದರೆಗಳುಂಟಾಗುತ್ತವೆ. ಹಾಲು, ಅಣಬೆ, ಒಣ ದ್ರಾಕ್ಷಿ, ಪರಂಗಿ, ಟೊಮ್ಯಾಟೊ, ಕಲ್ಲಂಗಡಿಗಳಲ್ಲಿ ಗ್ಯಾಲಕ್ಟೋಸ್ ತುಸು ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಗ್ಯಾಲಕ್ಟೋಸ್ ಇರುವ ಆಹಾರ ಪದಾರ್ಥಗಳನ್ನು ವರ್ಜಿಸಬೇಕು.

ಕಾರ್ಬೋ ಶೇಖರಣೆ (ಗ್ಲೈಕೋಜೆನ್ ಸ್ಟೋರೇಜ್ ಡಿಸಾರ್ಡರ‍್ಸ್)
ರಕ್ತದಲ್ಲಿ ಅಧಿಕವಾದ ಗ್ಲುಕೋಸ್ ಈಲಿ ಮತ್ತು ಸ್ನಾಯುಗಳಲ್ಲಿ ಗ್ಲೈಕೋಜನ್ ಆಗಿ ಪರಿವರ್ತನೆ ಹೊಂದಿ ಶೇಖರಣೆಯಾಗುತ್ತದೆ. ಈ ಕಾಯಿಲೆಗಳಲ್ಲಿ ಗ್ಲೈಕೋಜನ್ ದೇಹದ ವಿವಿಧ ಭಾಗಗಳಲ್ಲಿ (ಹೃದಯ, ಮೂತ್ರಜನಕಾಂಗ, ಸ್ನಾಯುಗಳು, ಈಲಿ) ಹೆಚ್ಚಿನ ಪ್ರಮಾಣದಲ್ಲಿ ಶೇಖರಣೆಯಾಗಿ ಸಂಬಂಧಿಸಿದ ಅಂಗಾಂಗಗಳನ್ನೂ ಸಹ ಕಾಯಿಲೆಗೀಡು ಮಾಡುತ್ತದೆ. ಈ ಕಾಯಿಲೆಗಳಲ್ಲಿ ಗ್ಲೈಕೋಜನ್‌ನ ರಾಸಾಯನಿಕ ರಚನೆ ಸಹಜ ಗ್ಲೈಕೋಜನ್ ಗಿಂತ ವಿಭಿನ್ನವಾಗಿದ್ದು, ಅದು ಗ್ಲುಕೋಸ್ ಆಗಿ ಪರಿವರ್ತನೆ ಹೊಂದುವಲ್ಲಿಯೂ ಕೂಡ ಅವ್ಯವಸ್ಥೆ ಇರುತ್ತದೆ. ಇದರಲ್ಲಿ ಹಲವಾರು ವಿಧಗಳಿವೆ.

ಈ ಕಾಯಿಲೆಗಳು ವಂಶವಾಹಿ ನ್ಯೂನತೆಯಿಂದ ಬರುತ್ತವೆ. ಬೆಳವಣಿಗೆ ನ್ಯೂನತೆ, ಧರ್ಮ ಬಹುಬೇಗ ತರಚುವಿಕೆ, ರಕ್ತ ಗ್ಲುಕೋಸ್ ಕಡಿಮೆಯಾಗುವಿಕೆ, ಹೊಟ್ಟೆ ಉಬ್ಬರ, ಈಲಿ ಹಿಗ್ಗಿಕೆ, ಸ್ನಾಯುಗಳ ನಿಶಕ್ತಿ ಮತ್ತು ವ್ಯಾಯಾಮ ಮಾಡಿದಾಗ ನೋವು, ಸೆಳೆತ ಗಳು ಬರುವಿಕೆ ಈ ಕಾಯಿಲೆಯ ಪ್ರಮುಖ ತೊಂದರೆಗಳು. ಈ ಕಾಯಿಲೆಗಳು ಮಗುವಿನಲ್ಲಿಯೇ ಕಾಣಿಸಿಕೊಳ್ಳಬಹುದು ಅಥವಾ ಅನಂತರ ಕಾಣಿಸಿಕೊಳ್ಳಬಹುದು. ಪ್ರತಿನಿತ್ಯ ಬೇಯಿಸದ ಅಕ್ಕಿ, ಜೋಳಗಳನ್ನು ಸೇವಿಸುವುದರಿಂದ ರಕ್ತಗ್ಲುಕೋಸನ್ನು ಸಹಜ ಗಡಿಯಲ್ಲಿಟ್ಟುಕೊಳ್ಳಬಹುದು.

ಕಾರ್ಬೋಹೈಡ್ರೇಟ್ ಆಹಾರ ಪದಾರ್ಥಗಳು ದೇಹಕ್ಕೆ ಶಕ್ತಿಯನ್ನು ಒದಗಿಸುವ ಪ್ರಮುಖ ಆಹಾರ ಪದಾರ್ಥಗಳಾದುದರಿಂದ ಇವುಗಳಿಗೆ ಸಂಬಂಧಿಸಿದ ಅವ್ಯವಸ್ಥೆಗಳು ದೇಹದ ಬೆಳವಣಿಗೆ ಮತ್ತು ಪೋಷಣೆಯ ಮೇಲೆ ಗಂಭೀರ ಸ್ವರೂಪದ ಪರಿಣಾಮವನ್ನು ಬೀರುತ್ತವೆ. ಆದುದರಿಂದ ಈ ಅವ್ಯವಸ್ಥೆಗಳನ್ನು ಬಹುಬೇಗ ಗುರುತಿಸಿ ಆಹಾರ ನಿಯಮಗಳಲ್ಲಿ ಸೂಕ್ತ ಬದಲಾವಣೆ ಮತ್ತು ಅವಶ್ಯಕ ಬಿದ್ದಲ್ಲಿ ಔಷಧ ಚಿಕಿತ್ಸೆಗಳಿಂದ ಹಾನಿಕಾರಕ ಪರಿಣಾಮಗಳಿಂದ ಪಾರಾಗಬಹುದು.

(ಮುಂದುವರೆಯುವುದು)

 
Read E-Paper click here