Wednesday, 11th December 2024

ಜಾತಿ ಮತ್ತು ಧನಬಲದ ರಾಜಕೀಯದಲ್ಲಿ ಎಲ್ಲವೂ ವಿಕೃತವೇ ?

ದಾಸ್ ಕ್ಯಾಪಿಟಲ್‌

dascapital1205@gmail.com

ಸಿದ್ದರಾಮಯ್ಯರ ಸರಕಾರವಿದ್ದಾಗ ಒಂದಿಷ್ಟು ಕೊಲೆಗಳಾದವು, ಈ ಸರಕಾರದ ಅವಧಿಯಲ್ಲೂ ಆಗಿವೆ. Of course ಪ್ರತಿ ಕೊಲೆಗಾರರಿಗೆ ತಮ್ಮ ಹೊಲಸು ಕೃತ್ಯದ ಪರಿಣಾಮಗಳ ಬಗ್ಗೆ ಎಚ್ಚರವಿದ್ದೇ ಇಲ್ಲಿಯವರೆಗಿನ ಕೊಲೆಗಳು ನಡೆದಿವೆ ಎಂದು ಭಾವಿಸುವೆ. ಅಥವಾ ಏನು ಬೇಕಾದರೂ ಆಗಲಿ ಎಂಬ ಮೊಂಡುತನವೂ ಇಲ್ಲಿಯವರೆಗಿನ ಕೊಲೆಗಳ ಹಿಂದಿನ ದುಷ್ಪ್ರವೃತ್ತಿ ಯಾಗಿರಬಹುದು.

ಕೊಲ್ಲಲೇಬೇಕು ಎಂದುಕೊಂಡವರಿಗೆ ಯಾವ ಸರಕಾರವಿದ್ದರೇನು, ಬಿಟ್ಟರೇನು? ದ್ವೇಷಕ್ಕೆ ಕಾರಣ ಇರುವುದಿಲ್ಲ ಎಂದೇ ಒಪ್ಪಿದರೂ ಸೇಡಿಗೆ ಕಾರಣವೇ ಇರಬೇಕೆಂದಿಲ್ಲ ಎಂಬುದಕ್ಕೆ ಇಲ್ಲಿಯವರೆಗಿನ ಕೊಲೆಗಳು ಸಾಕ್ಷಿಯಾಗಿವೆ. ರಾಜಭೀತಿಯೂ ಇಲ್ಲ, ರಾಜನಿಲ್ಲದ ಭೀತಿಯೂ ಇಲ್ಲ. ಯಾವ ಭೀತಿ ಇಲ್ಲದವರಷ್ಟೇ ಇಂಥ ದುಷ್ಕೃತ್ಯಗಳಿಗೆ ಇಳಿಯುತ್ತಾರೆಯೇ ವಿನಾ ಸಭ್ಯರ ನಿತ್ಯ ಬದುಕಿನ ಆಲೋಚನೆಯ ಪ್ರತಿಫಲನ ಹೀಗಿರಲಾರದು.

ಮನೆಯ ಸಂಸ್ಕಾರ, ಸಂಸ್ಕೃತಿ, ಸಾಮಾಜಿಕ ಮತ್ತು ಶೈಕ್ಷಣಿಕ ಪ್ರಭಾವಗಳು ಇಂಥವರ ಮೇಲೆ ಬೀರುವ ಪ್ರಭಾವಗಳನ್ನು
ಮೀರಿಯೂ ಇಂಥವರಿಂದ ಇಂಥ ಅನಾಹುತಗಳು ವೈಚಾರಿಕ-ಮಾನಸಿಕ ದಾರಿದ್ರ್ಯಗಳಿಂದ ಘಟಿಸಿಬಿಡುತ್ತವೆ. ಯಾವ ಹೆತ್ತವರೂ ತಮ್ಮ ಮಗ ಅನ್ಯರನ್ನು ಕೊಲ್ಲಲಿ ಎಂದು ಬಯಸುವುದಿಲ್ಲ. ಆದರೂ ಕೊಲೆಗಳಾಗುತ್ತಲೇ ಇವೆ. ಏನಿದರರ್ಥ? ಮತ-ಧರ್ಮ-ಪಂಥಗಳ ಸಿದ್ಧಾಂತಗಳನ್ನೂ ಮೀರಿ ಬೆಳೆದು ನಿಂತದ್ದು ಅಧಿಕಾರ ರಾಜಕೀಯದ ಹೊಲಸು ಮೂಸೆಯಲ್ಲವೆ?!
ರಾಜಕೀಯ ಅಥವಾ ರಾಜಕೀಯೇತರ ಪಕ್ಷದ, ಸ್ಥಾನಮಾನದ ಅಥವಾ ಅಧಿಕಾರದ ಮೇಲಂತಸ್ತಿನಲ್ಲಿರುವವರು, ದುರಾಗ್ರಹ ವನ್ನಿಟ್ಟುಕೊಂಡ ಮನಸ್ಸುಗಳು ಒಗ್ಗೂಡಿ ಹುಟ್ಟಿಕೊಂಡ ಸಂಘಗಳಿಂದ ಉದ್ದೇಶಪೂರ್ವಕವಾಗಿ ಮಾಡುವ ಕೃತ್ಯಗಳು, ಹೇಳಿಕೆ ಗಳು ಕೆಳ ಅಂತಸ್ತಿನಲ್ಲಿರುವ, ಬುದ್ಧಿ ಬಲಿಯದ, ಜೀವಭಾವಗಳ ತಾದಾತ್ಮ್ಯವಿಲ್ಲದ ಬಿಸಿರಕ್ತದದವರ ಮನಸ್ಸನ್ನು ಇಂಥ ಹೀನಕಾರ್ಯಗಳಿಗೆ ಇಳಿಸುತ್ತದೆಂಬುದು ಬಹುತೇಕರ ಅಭಿಪ್ರಾಯ.

ನನ್ನನ್ನು ಅವರು ಕಾಪಾಡುತ್ತಾರೆ, ಇವರು ಬೆಂಬಲಿಸುತ್ತಾರೆ ಎಂದೇ ನಂಬಿದ ಇಂಥವರು ಸೇಡು ಸಾಧಿಸುತ್ತಾರೆ, ದ್ವೇಷ ಮಸೆ
ಯುತ್ತಾರೆ. ಇದು ಕೊನೆಗೆ ತೀರಾ ವೈಯಕ್ತಿಕ ಮಟ್ಟ ತಲುಪುತ್ತದೆ. ಆಗ ಹೊಂಚುಹಾಕಿ ಕೊಲೆಗೈಯುವ ಕುಯುಕ್ತಿಯನ್ನು ತೀರಾ ಪರ್ಸನಗಿ ತೆಗೆದುಕೊಳ್ಳುವ ಮಟ್ಟಿಗೆ ಬೆಳೆಯುತ್ತದೆ. ಇಂಥ ಧಾವಂತದ ನಿರ್ಧಾರದ ಮನಸ್ಸನ್ನು ತಡೆದು ನಿಲ್ಲಿಸಿ ಸರಿದಾರಿಗೆ ತರುವುದು ಸುಲಭವಲ್ಲ, ಸಾಧ್ಯವೂ ಅಲ್ಲ. ಹಾಗಂತ, ಇಂಥವರಲ್ಲಿ ಮತದ ಅಭಿಮಾನ ಇದೆಯೆಂದುಕೊಳ್ಳುವುದು ಮೂರ್ಖತನ!

ಇದು ಹುಚ್ಚು ಕುದುರೆಯ ವಯಸ್ಸಿನ ಪ್ರಭಾವ! ವಯೋಸಹಜ ದೇಹಬಲದ ಮದ, ಶ್ರೇಷ್ಠತೆಯ ವ್ಯಸನ, ಸಹವಾಸದೋಷ,
ದೊಡ್ಡಸ್ತಿಕೆಯ ಪ್ರಸಿದ್ಧಿಯ ಹಂಬಲ, ಹಣಮದ, ಜನಬೆಂಬಲದ ಮದ- ಇವೆಲ್ಲ ಇವುಗಳಿಗೆ ಮಾದಕತೆಯನ್ನು ತುಂಬುವ  ಇಂದಿನ ಮತೀಯ ರಾಜಕೀಯದ ಕೊಳಕು, ಜಾತಿ-ಮತಗಳ ದುರಭಿಮಾನದ ಕಿಚ್ಚು ಇಂಥ ಅನಾಹುತಗಳನ್ನು ಸೃಷ್ಟಿಸುತ್ತಲೇ ಇರುತ್ತವೆ.

ಇಂಥ ಅನಾಗರಿಕ ಅನಾಹುತಗಳು ಹಿಂದೆ ನಡೆದಿಲ್ಲ ಎಂದೇನಲ್ಲ. ಸಿದ್ದರಾಮಯ್ಯನವರ ಸರಕಾರವಿದ್ದಾಗ 30ಕ್ಕೂ ಹೆಚ್ಚು ಕೊಲೆಗಳಾಗಿವೆ ಎಂದಿದ್ದಾರೆ ಸಿಎಂ. ಅದಕ್ಕೂ ಹಿಂದೆಯೂ ನಡೆದಿದೆ. ಆದರೆ, ಈಗಿನಂತೆ ಆಗ ಮೀಡಿಯಾ, ಸೋಷಿಯಲ್ ಮೀಡಿಯಾ ಬೆಳೆದಿರಲಿಲ್ಲ. ಎಷ್ಟೋ ಕೊಲೆಗಳು ಸಹಜ ಸಾವೆಂಬಂತೆ ಪ್ರತಿಬಿಂಬಿಸಲ್ಪಟ್ಟಿವೆ. ಅಲ್ಲಿಗೆ ಕೇಸು, ಕೋರ್ಟು, ಕಾನೂನಿನ ಕಣ್ಣಿಗೆ ಬರದೇ ಮುಚ್ಚಿಹೋಗಿವೆ. ಜಾತಿ, ಮತ, ಸಿದ್ಧಾಂತ, ಸೇಡಿನ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರ ಸರಕಾರವಿದ್ದಾಗ ನಡೆದಷ್ಟು ಕೊಲೆಗಳು ಎಂದೂ ನಡೆದಿಲ್ಲವೇನೋ!

ಮುಸ್ಲಿಂ-ಹಿಂದೂ ಸಂಘಟನೆಗಳ ನಡುವಿನ ಎಲ್ಲ ಬಗೆಯ ವೈರುದ್ಧ್ಯಗಳು ಕೊಲೆಯಲ್ಲಿ ಕೊನೆಯಾಗಿ ಸೇಡು-ದ್ವೇಷವನ್ನು ವಿಸ್ತರಿಸುತ್ತಲೇ ಬಂದಿವೆ. ಈ ಮತೀಯ ದ್ವೇಷಕ್ಕೆ ಅಂದೇ ಇತಿಶ್ರೀ ಹಾಡಿದಿದ್ದರೆ ಹಿಜಾಬ್‌ನಂಥ ಪ್ರಕರಣಗಳು ನಡೆಯು ತ್ತಿರಲಿಲ್ಲ, ಕೋಮುಸಾಮರಸ್ಯದಲ್ಲಿ ಇಷ್ಟೊಂದು ಶೈಥಿಲ್ಯ ಉಂಟಾಗುತ್ತಿರಲಿಲ್ಲ. ಆದ್ದರಿಂದ ಈ ಹಿಂದೆಯೇ ಬೆಳೆದು ನಿಂತ, ಅಥವಾ ರಾಜಕೀಯ ದೊಂಬರಾಟದಲ್ಲಿ ನಡೆದುಹೋದ ಕೊಲೆಯಂಥ ಅಧ್ವಾನಗಳು ಮತ್ತೆ ಮತ್ತೆ ಘಟಿಸುತ್ತಲೇ
ಹೋಗುತ್ತದೆ. Of course ಇದಕ್ಕೆ ಕೊನೆಯೆಂಬುದು ಭ್ರಮೆಯೇ!

ಎಲ್ಲ ಮತೀಯ ವಿನ್ಯಾಸಗಳು, ಪರಿಕಲ್ಪನೆಗಳು ರಾಜಕೀಯವಾಗಿ ಸಾಮಾಜಿಕವಾಗಿ ಸಾಂಸ್ಕೃತಿಕವಾಗಿ ತೆರೆದುಕೊಳ್ಳುವ ಆಕೃತಿಯಲ್ಲಿ ಪರಿವರ್ತನೆಯಾಗಬೇಕಿದೆ. ಅದು ಸಾಧ್ಯವೇ? ಈಗ ಹೊತ್ತಾಗಿದೆ. ಹೊತ್ತಾಗಿಯೂ ಗೊತ್ತೂ ಆಗಿದೆ. ಅಂದರೆ, ಅಸ್ವಾಭಾವಿಕವಾಗಿ, ಅವೈಜ್ಞಾನಿಕವಾಗಿ ವಿಂಗಡಣೆಗೊಂಡು ಸಾಮಾಜಿಕ ಕ್ಷೋಭೆಗೆ ಮೂಲವಾದ ಅಲ್ಪ ಸಂಖ್ಯಾತರು, ಬಹುಸಂಖ್ಯಾತರು ಎಂಬ ವಿಭಜನೆಯನ್ನು ಮೊದಲಾಗಿ ಕಿತ್ತೊಗೆಯಬೇಕು.

ಆದಾಯವನ್ನಾಧರಿಸಿ ಬಡತನದ ಆಧಾರದಿಂದ ಆರ್ಥಿಕ ಅಸಮತೋಲನ ಎಂದು ಅಳೆಯುವ ಮಾನದಂಡವೇ ಸಮೂಲಾಗ್ರ ವಾಗಿ ಬದಲಾಗಬೇಕು. ಹಿಂದೆಂದೋ ಅಗತ್ಯವೂ ಅನಿವಾರ್ಯವೂ ಎನಿಸಿ ರಚನೆಯಾದ ವಿಽನಿಯಮಗಳನ್ನು ಸಂವಿಧಾನ ದಿಂದ ತೆಗೆದು ವರ್ತಮಾನಕ್ಕೆ ಒಗ್ಗುವಂತೆ ಮರುರಚಿಸಬೇಕಿದೆ. ಸಾರ್ವಜನಿಕ ಬದುಕಿನ ವ್ಯವಹಾರದಲ್ಲಿ ಜಾತಿ ಮತಗಳ ಅಸ್ಮಿತೆಯನ್ನು ಒರೆಸಬೇಕಿದೆ. ಆದರೆ ಅವೆಲ್ಲ ಸಾಧ್ಯವೇ ಎಂಬುದು ಪ್ರಶ್ನೆ! ಬಹುದೊಡ್ಡ ರಾಜಕೀಯ ಇಚ್ಛಾಶಕ್ತಿ ಇದಕ್ಕೆ ಬೇಕಲ್ಲವೇ? ಮುಖ್ಯಮಂತ್ರಿಗಳೇ, ನೀವು ಸ್ವಭಾವತಃ ಒಳ್ಳೆಯವರು ಎನ್ನುತ್ತದೆ ರಾಜಕೀಯದ ವಲಯ.

ಯಾರಿಗೂ ನಿಷ್ಠುರವಾಗಲಾರದ ಸ್ವಭಾವದ ನಿಮಗೆ ನಿಷ್ಪಾಪಿಯಾಗಿ ಯಾರೂ ರಾಜಕಾರಣ ಮಾಡಲಾರರು ಎಂಬುದರ ಅರಿವಿರಬಹುದು. ಆದರೆ, ನೀವು ಬಹುಬೇಗ ಮುಗ್ಧರಾಗಿಬಿಡುತ್ತೀರಿ. ಇಂಥ ಮನಸು ವಂಚನೆಗೋ, ದುರುಪಯೋಗಕ್ಕೋ ಒಳಗಾಗಿ ಬಿಡುತ್ತದೆ. ಈಗ ನಡೆದಿರುವ ಕೊಲೆಗಳಿಗೆ ನೀವು ಬಲಿಪಶುವಾದದ್ದು ನಿಮ್ಮೀ ಮುಗ್ಧ ಸ್ವಭಾವದ ರಾಜಕೀಯದ ನಡೆ
ಗಳಿಂದ!

ಗ್ರಹಿಸಿ ನೋಡಿ: ಸಿದ್ದರಾಮಯ್ಯನವರ ಸರ ಕಾರವಿದ್ದಾಗ ಆದ ಸಾವು, ಕೊಲೆಗಳಿಗೆ ಅವರು ತಕ್ಷಣದ ಪ್ರತಿಕ್ರಿಯಿಸಿದ ರೀತಿಗೂ ನಿಮ್ಮ ರೀತಿಗೂ ಅಂತರವಿದೆ. ಮಾಧ್ಯಮದೆದುರು ಪ್ರತಿಕ್ರಿಯಿಸುವಾಗ ಮಾತಿನ ಮೇಲೆ ಎಚ್ಚರವಿರಬೇಕು ಎಂಬುದನ್ನು ತಮ್ಮಂಥ ಅನುಭವಿಗೆ ಹೇಳಿಕೊಡಬೇಕಾಗಿಲ್ಲ. ಸಮಾಜವಾದದ ಹಿನ್ನೆಲೆಯಿಂದ ಬಿಜೆಪಿಗೆ ಬಂದ ನಿಮ್ಮಲ್ಲಿ ಆ ಸಿದ್ಧಾಂತದ ಆಕೃತಿಗಳು ಅಂತರ್ಗತವಾಗಿದ್ದು, ಈಗ ಸ್ವೀಕರಿಸಿದ ಬಿಜೆಪಿಯ ಸಿದ್ಧಾಂತವನ್ನು, ಮುಖ್ಯವಾಗಿ ರಾಷ್ಟ್ರೀಯ ಬದ್ಧತೆಯನ್ನು ತಾವು ಬಹಿರಂಗ ದಲ್ಲಿ ಮೆರೆಸಬೇಕಾಗಿರುವುದು ತಮಗೆ ಅನಿವಾರ್ಯವೂ ಅಗತ್ಯವೂ ಆಗಿದೆ.

ಕಷ್ಟವಲ್ಲವೇ? ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದು ರಾಜ್ಯ ಮತ್ತು ರಾಷ್ಟ್ರೀಯ ಬಿಜೆಪಿಯ ಬಹುದೊಡ್ಡ
ಪ್ರಮಾದವೆಂಬಂತೆ ಕಾಣುವುದಂತೂ ಸತ್ಯ! ಬಲವಾದ ನಾಯಕ ಶಕ್ತಿ ಹೋದಮೇಲೆ ಎಂತೆಂಥ ರಾಜಕೀಯ ಪಲ್ಲಟ ಗಳಾಗುತ್ತವೆಯಲ್ಲವೇ? ವೈಎಸ್‌ಆರ್ ಹೋದಮೇಲೆ, ಮೋದಿ ಗುಜರಾತಿನಿಂದ ಕೇಂದ್ರಕ್ಕೆ ಹೋದಮೇಲೆ ಆದ ರಾಜಕೀಯ ಸ್ಥಿತ್ಯಂತರಗಳನ್ನು ಗ್ರಹಿಸಿ! ಅಂಥ ಪ್ರಮಾದದ ನಂತರ ಯಡಿಯೂರಪ್ಪರ ಸ್ಥಾನದಲ್ಲಿ ತಾವು ಕೂತದ್ದು.

ಅಂದಿನಿಂದಲೇ ಇದು ಸಹಜವಾಗೇ ನಿಮ್ಮ ಸಮಾನ ಹಿರಿತನವುಳ್ಳ ನಾಯಕರಲ್ಲಿ ಅಸಹನೆ ಹುಟ್ಟಿಸಿತ್ತು ಎಂಬುದು ನಿಮಗರಿ ವಾಗದೇ? ಆಗಲೇ ನಿಮ್ಮ ರಾಜಕೀಯ ಮೂಲದ ಪ್ರಶ್ನೆಯೂ ಎದ್ದಿತ್ತು. ನಿಮ್ಮಂಥ ಸಮಾಜವಾದಿ ಬಿಜೆಪಿ ಸಿದ್ಧಾಂತವನ್ನು ಹೇಗೆ ಅಪ್ಪಿಕೊಂಡರೂ ಒಂದು ಸಡಿಲುವಿಕೆ ಆಂತರ್ಯದಲ್ಲಿ ಇದ್ದೇ ಇದೆಯೆಂಬ ಭಾವ ಬಿಜೆಪಿಯಲ್ಲಿ ಇಲ್ಲವೆನ್ನುತ್ತೀರಾ? ಯಾವುದನ್ನೂ ನಿರ್ವಹಣೆ ಮಾಡಲು ಅಥವಾ ನೀವಂದುಕೊಂಡಂತೆ ಸರಕಾರ ನಡೆಸಲು ತಮಗೆ ಯಡಿಯೂರಪ್ಪ ಹಾಗೂ ಆರೆಸ್ಸೆಸ್ ಬಣಗಳ ಪೂರ್ಣಬೆಂಬಲ ಇಲ್ಲವೆಂಬ ಮಾತೂ ಚಾಲ್ತಿಯಲ್ಲಿದೆ, ಮೀಡಿಯಾಗಳ ಚರ್ಚೆಯಲ್ಲಿದೆ. ಹೀಗಿರುವಾಗ ವರ್ಷ ಪೂರೈಸಿದ ಸಂಭ್ರಮಾಚರಣೆ ನಿಮಗೆ ಸಾಧ್ಯವಾಗದೇ ಹೋದದ್ದು ದುರದೃಷ್ಟವೇ! ಹಾಗಂತ ಸಿದ್ದರಾಮೋತ್ಸವಕ್ಕೆ ಈ ಸಾವಿನ ಸೂತಕ ತಟ್ಟಲಿಲ್ಲ. ಹಿಂದುತ್ವದ ಸಿದ್ಧಾಂತಿಗಳಾದ ನಿಮಗೆ, ನಿಮ್ಮ ಪಕ್ಷಕ್ಕೆ ಪ್ರವೀಣ ಸಾವಿನ ಸೂತಕ ಮಾತ್ರ ತಟ್ಟಿತು. ಬೇರೆ ಯಾವುದೂ ತಟ್ಟಲಿಲ್ಲ!

ಕಾಂಗ್ರೆಸ್ಸಿಗಿಲ್ಲದ ವೈಚಾರಿಕ ಸಿದ್ಧಾಂತದ ಸಮಸ್ಯೆ ಬಿಜೆಪಿಗೆ ಇರುವುದು ಇಲ್ಲಿಯೇ! ವೈಚಾರಿಕವಾಗಿ ಹಿಂದುತ್ವದ ಸಿದ್ಧಾಂತ ವನ್ನು ಇದು ಹಿಂದೂ ರಾಷ್ಟ್ರ ಎಂಬ ಆಧಾರದ ಮೇಲೆ ಸಾಧಿಸಲು ಬಿಜೆಪಿಗೆ ಮೊದಲು ಎದುರಾಗುವುದು ಸಂವಿಧಾನ! ಅಂಥಲ್ಲಿ ಬಲಾತ್ಕಾರದ ರಾಜಕೀಯ ನಡೆಯಲಾರದು ಎಂಬ ಎಚ್ಚರ ಬಿಜೆಪಿಗೆ ಅರಿವಾದಂತಿಲ್ಲ. ಹಾಗಂತ ಮೋದಿಗೆ ಇದರ ಅರಿವಿದೆ. 15 ನಿಮಿಷ ಪೊಲೀಸರು ಸುಮ್ಮನಿದ್ದರೆ ಹಿಂದೂಗಳನ್ನು ನಾಶ ಮಾಡುತ್ತೇವೆ ಎಂದ ಓವೈಸಿಯ ಮಾತು ಹೇಗೆ ತಲೆಹಿಡು ಕತನವೋ, ನಾವು ಸಂವಿಧಾನವನ್ನು ಬದಲಾಯಿಸೋಕೇ ಬಂದಿರುವುದು ಎಂಬ ಮಾತೂ ತಲೆಹಿಡುಕತನದ್ದೇ.

ಒಬ್ಬನೇ ಒಬ್ಬ ಹಿಂದೂ ಕಾರ್ಯಕರ್ತನನ್ನು ಮುಟ್ಟಿ ನೋಡಿ ಎಂಬ ಬಿಜೆಪಿ ರಾಜ್ಯಾಧ್ಯಕ್ಷರ ಮಾತೂ ವೈಚಾರಿಕತೆಯ ದೌರ್ಬಲ್ಯದಿಂದಲೇ ಹುಟ್ಟಿದ್ದು! ಇವೆಲ್ಲ ಸರಕಾರದ ಮೇಲೆ ಪರಿಣಾಮ ಬೀರದೆಂದು ಭಾವಿಸಲಾದೀತೆ? ಅತಿಯಲ್ಲಿ ಯಾರೂ
ಮಾತಾಡಿದರೂ ತಪ್ಪೇ. ಕೊನೆಗದು ಮುಳುವಾಗುವುದು ವ್ಯಕ್ತಿಗಲ್ಲ, ಪಕ್ಷಕ್ಕೆ! ಇದು ಪಕ್ಷ, ಜಾತಿ, ಮತಾತೀತವಾದ ಸತ್ಯ!
ಮನುಷ್ಯನ ಸ್ವಭಾವದಲ್ಲೊಂದು ತೊಡಕಿದೆ. ವೈಚಾರಿಕತೆಯ ಮಟ್ಟಿಗೆ ತನಗೆ ಸತ್ಯವೆಂದು ಗೋಚರವಾದುದನ್ನು ಅವನು ಬೇಗನೆ ಆಚರಣೆಗೆ ತರಲಾರ. ಮೊದಲೇ ನಿರೀಕ್ಷಿತ ಎಂಬ ಸೂಚನೆ ಇದ್ದಾಗಲೂ ಕುತ್ತಿಗೆಗೆ ಬರುವವರೆಗೆ ಯಾವ
ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾರ.

ವೇಗವಾಗಿ ಬೈಕನ್ನು ಓಡಿಸುವವನಿಗೆ ಆಕಸ್ಮಾತ್ತಾಗಿ ಎದುರಾಗುವ ಅಪಾಯ ತಪ್ಪಿಸುವ ಎಚ್ಚರವನ್ನು ಮೊದಲೇ ತೆಗೆದು ಕೊಳ್ಳುವ ಜಾಗ್ರತೆಯ ಅರಿವಿದ್ದರೆ ಸಂಭವನೀಯ ಅನಾಹುತವನ್ನು ತಪ್ಪಿಸಬಹುದು. ಅಂಥ ಅನಾಹುತದ ಮುನ್ಸೂಚನೆಗಳು ನಿಮಗೆ ತಿಳಿದಿರಲಿಲ್ಲ ಎಂದರೆ ನಂಬಲಾದೀತೇ? ತಲೆಬುಡವಿಲ್ಲದ ಹಿಜಾಬ್ ಗಲಾಟೆ, ಅದರಿಂದ ಹುಟ್ಟಿದ ಕೋಮುದ್ವೇಷ, ಜಾತ್ರೆಗಳಿಗೆ ಮುಸ್ಲಿಂ ಅಂಗಡಿಗಳಿಗೆ ನಿಷೇಧ, ಹಿಂದೂ ಅಂಗಡಿಗಳ ಹಿಂದೂಗಳು ಖರೀದಿಸಬೇಕು ಎಂಬ ಅಮೂರ್ತ ರೂಪದ ಫರ್ಮಾನು- ಇವೆಲ್ಲವೂ ಬೂದಿ ಮುಚ್ಚಿದ ಕೆಂಡದಂತೆ ಸುಡುತ್ತಲೇ ಇತ್ತು.

ಸ್ವಾತಂತ್ರ್ಯ ಪೂರ್ವದಿಂದಲೂ ಇದ್ದ ಹಿಂದೂ-ಮುಸ್ಲಿಂ ದ್ವೇಷವನ್ನು ಬೆಳೆಸಿಕೊಂಡೇ ಬಂದ ಪರಿಣಾಮ ಈಗ ಮುಸ್ಲಿಮರ
ಅತಿಹೆಚ್ಚು ದ್ವೇಷ ಮತ್ತು ಸೇಡನ್ನು ಬೆಳೆಸಿದೆಯೆಂಬುದು ಸತ್ಯ! ಏರುತ್ತಿರುವ ಮುಸ್ಲಿಂ ಜನಸಂಖ್ಯೆ, ನ್ಯಾಯ (?) ಬೇಡಿಕೆಯ ವಿಚಾರ ಮುಂದಿಟ್ಟುಕೊಂಡು ನಡೆಯುವ ಮುಸ್ಲಿಂ ಸಮಾವೇಶ, ಪ್ರತಿಭಟನೆ- ಇಂಥ ಕಾರ್ಯಗಳಿಂದ ತಮಗೆ ಎದುರಾಗ ಬಹುದಾದ ಸವಾಲುಗಳನ್ನು ಊಹಿಸಿ ಪೂರ್ವಯೋಜಿತ ಕ್ರಮಗಳನ್ನು ಸಿದ್ಧಮಾಡಿಕೊಳ್ಳುವಲ್ಲಿ ತಾವಾಗಲೀ ತಮ್ಮ ಸರಕಾರ ವಾಗಲೀ ಸಫಲವಾಗಲಿಲ್ಲ ಎಂಬ ಆಕ್ಷೇಪಗಳಿವೆ. ಅಂದು ಸಿದ್ದರಾಮಯ್ಯನವರನ್ನು ತರಾಟೆಗೆ ತೆಗೆದುಕೊಂಡ ಚಕ್ರವರ್ತಿ ಸೂಲಿಬೆಲೆಯವರೇ ನಿಮ್ಮ ಸರಕಾರವನ್ನೂ ತರಾಟೆಗೆ ತೆಗೆದುಕೊಂಡರು.

ಬಹುಮತಕ್ಕಾಗಿ ಕಾಂಗ್ರೆಸ್ಸಿನ ಎಮ್ಮೆಗಳನ್ನು ಕರೆತಂದು ಗೆಲ್ಲಿಸಿ ಬಿಜೆಪಿ ಸರಕಾರ ಮಾಡಿದ್ದೇ ತಪ್ಪು. ಪಕ್ಷಾಂತರವಾಗಲೀ,
ಮತಾಂತರವಾಗಲೀ ಸಹಜ ಪಲ್ಲಟಗಳಲ್ಲ. ಪಕ್ಷಾಂತರದಿಂದ ಸ್ವಭಾವವೂ ಬದಲಾಗಿ ಸೇರಿದ ಪಕ್ಷದ ಸಿದ್ಧಾಂತವನ್ನು
ಒಪ್ಪಿಬಿಡಲು ಸಾಧ್ಯವೆ? ಇದು ಅಧಿಕಾರದಾಸೆಯ ಬಾಹ್ಯ ಒಡಂಬಡಿಕೆಯೇ ವಿನಾ ಸಿದ್ಧಾಂತ ಮೆಚ್ಚಿ ಆದ ಒಡಂಬಡಿಕೆಯಲ್ಲ. ಇಂಥಲ್ಲಿ ಸುಭದ್ರ ಸರಕಾರ ಮರೀಚಿಕೆಯೇ!

ಸುತ್ತಲಿದ್ದ ವಂದಿಮಾಗಧರ ಮಾತು ಕೇಳಿ ಸಿದ್ದರಾಮಯ್ಯ ಹುಟ್ಟುಹಾಕಿದ ಎಸಿಬಿಯನ್ನು ಹೈಕೋರ್ಟು ರದ್ದು ಮಾಡಿ ಲೋಕಾಯುಕ್ತಕ್ಕೆ ಪವರನ್ನು ನೀಡಲು ಸೂಚಿಸಿದೆ. ಈಗ ಸಮಸ್ಯೆ ಎದುರಾದದ್ದು ತಮ್ಮ ಸರಕಾರಕ್ಕೆ! ತಾವೇ ಮುಂದೆ ನಿಂತು ಲೋಕಾಯುಕ್ತವನ್ನು ಬಲಪಡಿಸುತ್ತೀರಿ ಎಂಬ ನಂಬಿಕೆ ಜನರದ್ದು. ಮುಖ್ಯಮಂತ್ರಿಗಳೇ, ತಾವು ಒಳ್ಳೆಯವರು.

ತಮ್ಮ ಒಳ್ಳೆಯತನವನ್ನು ಬೇಕಾದಷ್ಟೇ ಬಳಸಿಕೊಂಡು ನಿಷ್ಠುರ ಆಡಳಿತ ನೀಡಿದರೆ ಬರುವ ಚುನಾವಣೆಯಲ್ಲಿ ಬಿಜೆಪಿ
ಅಧಿಕಾರ ಹಿಡಿದೀತು! ಇಲ್ಲವಾದಲ್ಲಿ, ‘ಪಾಲಿಟಿಕ್ಸ್ ಮೇಕ್ಸ್ ಸ್ಟ್ರೇಂಜ್ ಬೆಡ್ ಫೆಲೋಸ್’ ಎಂಬುದಂತೂ ಇದ್ದೇ ಇದೆ. ಹಿಂದೂ-ಮುಸ್ಲಿಮರ ನಡುವಿನ ಸಮಸ್ಯೆ ರಾಜಕೀಯ ಬಂಡವಾಳವಾಗುವುದು ದೇಶಕ್ಕೆ-ಸಂಸ್ಕೃತಿಗೆ ಕಂಟಕಕಾರಿ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ದೊಡ್ಡದಾಗಿ ಬೆಳೆದುನಿಂತ ಬಿಜೆಪಿಯ ಸ್ವರೂಪ ಬದಲಾಗಿ, ನಿಜಾರ್ಥದಲ್ಲಿ ಕನ್ಸರ್ವೇಟಿವ್ ನಿಲುವಿನ ಪಕ್ಷವಾಗಿ ಜನರ ಆಯ್ಕೆಗೆ ಒದಗಬೇಕು.

ಯಾರು ಪ್ರಭುವೆಂಬುದೇ ಅತಿಮುಖ್ಯವಾಗಿಬಿಡುವ ಸಮಾಜವೇ ಮೂಲತಃ ಶೀಲವಂತ ಸಮಾಜವಲ್ಲ. ಅಂಥಲ್ಲಿ ಅರಾಜ ಕತೆಯ ಭೀತಿ ಹುಟ್ಟಬಹುದು. ಜನರನ್ನು ಭಯದಲ್ಲಿಟ್ಟು ಆಳುವ ಸರಕಾರ ಅರಾಜಕತೆಯನ್ನು ಹುಟ್ಟಿಸಿಬಿಡುತ್ತದೆ. ಸರಕಾರದ ಭ್ರಷ್ಟತೆ ಅಂತರ್ಗತವಾದರೆ ಏನಾಗುತ್ತದೆಂಬುದನ್ನು 75 ವರ್ಷದಲ್ಲಿ ಕಂಡಾಗಿದೆ. 40% ಕಮಿಷನ್ನಿನ ಭ್ರಷ್ಟಾಚಾರದ ಆರೋಪ ಹುಟ್ಟಿದ್ದೂ ಕೂಡ ಸತ್ಯವಲ್ಲ ಎಂಬುದರ ಸಮರ್ಥನೆ ನಿಮಗೆ ಸಾಧ್ಯವಾಗಲಾರದು.

ಪ್ರಜಾತಂತ್ರದ ಪಕ್ವತೆಯನ್ನು ಅಥವಾ ಅಪಕ್ವತೆಯನ್ನು ಸರಕಾರ ದುರುಪಯೋಗ ಪಡಿಸಿಕೊಳ್ಳಬಾರದು. ಮೈತ್ರಿಯಿಂದ
ಸರಕಾರ ರಚಿಸಿ ಅಧಿಕಾರ ನಡೆಸುವುದಕ್ಕೆ ಜನತೆಯ ಅನುಮತಿಯಿರುವುದಿಲ್ಲ. ಅಂಥಲ್ಲಿ ಪ್ರಜಾತಂತ್ರ ಶಕ್ತಿಯನ್ನು
ಕಳೆದುಕೊಳ್ಳುತ್ತದೆ. ಆಗ ಇಂಥ ಆರೋಪ-ಅಧ್ವಾನಗಳನ್ನು ಜನ ಕ್ಷಮಿಸುವುದಿಲ್ಲ. ಪ್ರಜಾತಂತ್ರದ ಪತನದಿಂದ ಕೊಳೆತದ್ದರಲ್ಲಿ ಬೆಳೆಯುವ ಅಣಬೆಯಾಗಬಾರದು ಎಂಬ ಎಚ್ಚರ ಪ್ರತಿಯೊಬ್ಬನಲ್ಲೂ ಇರುತ್ತದೆ, ಇರಬೇಕು.

ಜಾತಿ-ಧನಬಲದ ರಾಜಕೀಯದಲ್ಲಿ ಎಲ್ಲವೂ ವಿಕೃತವೇ! ಕರ್ನಾಟಕದ ಈ ನಾಚಿಕೆಬಿಟ್ಟ ರಾಜಕೀಯದಿಂದ ಹೇಸಬೇಕು,
ಆದರೆ ಸುಮ್ಮನಿರಬಾರದು. ಈ ಹಿನ್ನೆಲೆಯಲ್ಲಿ ಬಿಜೆಪಿಯ ಕಾರ್ಯಕರ್ತರೇ ಸ್ಥಳೀಯ ಮಟ್ಟದ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದೇ ಹೊರತು ಪಕ್ಷಕ್ಕಲ್ಲ. ಒಂದು ಭಯ ಹುಟ್ಟಿಸುವ ಅಥವಾ ಅಪರೋಕ್ಷವಾಗಿ ಎಚ್ಚರಿಸಿ ತಮ್ಮ ಪಕ್ಷ ತಮ್ಮನ್ನು ಶೀಲ ವಂತವಾಗೇ ಯೋಚಿಸುವಂತೆ ಮಾಡುವ ಕೊನೆಯ ಪ್ರಯತ್ನವಾಗಿ ಈ ರಾಜೀನಾಮೆಗಳ ಹಿಂದಿನ ಮನಸಿದೆ. ರಾಜಭೀತಿ ಯೂ ಇಲ್ಲ, ರಾಜನಿಲ್ಲದ ಭೀತಿಯೂ ಇಲ್ಲ ಎಂದರೆ ಏನಾದೀತು?