Friday, 13th December 2024

ಜಾತಿಗಣತಿಯಿಂದ ಅಸಮಾನತೆಯ ನಿರ್ಮೂಲನೆ ಸಾಧ್ಯವೇ ?

ಗಂಟಾಘೋಷ 

ಗುರುರಾಜ್ ಗಂಟಿಹೊಳೆ

ಜಾತಿ ಸಮೀಕ್ಷೆಯಿಂದ ಹಿಂದುಳಿದ ವರ್ಗಗಳಿಗೆ ನಿಜವಾಗಿಯೂ ಆರ್ಥಿಕ ಮತ್ತು ಸಾಮಾಜಿಕ ನ್ಯಾಯ ಸಿಗುತ್ತಾ? ಈ ಸಮೀಕ್ಷೆಯ ಶಿಫಾರಸನು ಜಾರಿಗೆ ತರೋದ್ರಿಂದ ಸಮಾಜದೊಳಗೆ ಗೊಂದಲ, ವಿವಾದಗಳಾಗಿ ವಿಭಜನೆಗೆ ಕಾರಣವಾಗುತ್ತದೆ ಎಂದಿದ್ದಾರೆ ತಜ್ಞರು. ಜಾತಿಗಣತಿ ರಾಜಕೀಯ ಪ್ರೇರಿತವೇ? ಅಭಿವೃದ್ಧಿ ಹೊಂದುತ್ತಿರುವ ದೇಶದ ಪ್ರಜೆಗಳಾಗಿ ನಾವು ಈ ಜಾತಿಗಣತಿಯನ್ನು ಯಾವ ರೀತಿ ಅರಿತುಕೊಳ್ಳಬೇಕು?

ಇಂದು ರಾಷ್ಟ್ರ ರಾಜಕೀಯದಲ್ಲಿ ಜಾತಿಗಣತಿ ವಿಚಾರ ಭಾರಿ ಚರ್ಚೆಯಲ್ಲಿದೆ. ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಕಾಂತರಾಜು ಆಯೋಗದ ವರದಿಯನ್ನು ಜಾರಿಗೆ ತರಲು ಪಟ್ಟು ಹಿಡಿದಿವೆ. ಇದರ ಬೆನ್ನಲ್ಲೇ ಕರ್ನಾಟಕ ಕಾಂಗ್ರೆಸ್‌ನಲ್ಲಿ ಪರ- ವಿರೋಧಗಳು, ಭಿನ್ನಾಭಿಪ್ರಾಯಗಳು ಆಂತರಿಕವಾಗಿ ವ್ಯಕ್ತವಾಗಿವೆ.

ಸಿಎಂ ಸಿದ್ದರಾಮಯ್ಯ ಜಾತಿಗಣತಿಗೆ ಒಲವು ತೋರಿದರೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದ್ದನ್ನು ಕಾಣಬಹುದಾಗಿದೆ. ನಿರ್ಮಲಾ ನಂದನಾಥ ಸ್ವಾಮೀಜಿಯವರು ಕೂಡ ‘ಜಾತಿಗಣತಿ ವರದಿ ಒಂದು ದೋಷಪೂರಿತ ಮತ್ತು ಅವೈಜ್ಞಾನಿಕ ಕ್ರಮ’ ಎಂದಿದ್ದು ಮರುಸಮೀಕ್ಷೆ ಮಾಡುವಂತೆ ಒತ್ತಾಯಿಸಿದ್ದಾರೆ. ಜಾತಿಗಣತಿ ವರದಿಯನ್ನು ೨೦೧೫ರಲ್ಲಿ ತಯಾರಿಸಲಾಗಿದ್ದು ಈಗಾಗಲೇ ಎಂಟು ವರ್ಷಗಳೇ ಕಳೆದಿವೆ. ಸಮಾಜದಲ್ಲಿ ಬದಲಾವಣೆ ಯಾಗಿದೆ. ಈ ಜನಗಣತಿ ಹತ್ತು ವರ್ಷಗಳಿಗೊಮ್ಮೆ ನಡೆಯಬೇಕೆಂಬ ನಿಯಮ ಇದ್ದರೂ, ಈಗ ಆ ವರದಿ ಅಪ್ರಸ್ತುತ
ಮತ್ತು ಅವೈಜ್ಞಾನಿಕ ಎಂದು ಶ್ರೀ ಆದಿಚುಂಚನಗಿರಿ ಮಠಾಧೀಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ತುಮಕೂರಿನ ಸಟಿಕಪುರಿ ಮಹಾಸಂಸ್ಥಾನದ ಶ್ರೀ ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಠದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿಯವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಬಿಹಾರದಲ್ಲಿ ಜಾತಿಗಣತಿ ವರದಿಯನ್ನು ಬಿಡುಗಡೆ ಮಾಡಲಾಯಿತು. ಈ ವರದಿ ಪ್ರಕಾರ, ಬಿಹಾರ ರಾಜ್ಯದಲ್ಲಿ ಒಬಿಸಿ ಸಮುದಾಯದವರೇ ಬಹುಸಂಖ್ಯಾತರು. ಕರ್ನಾಟಕದಲ್ಲೂ ಜಾತಿಗಣತಿ ನಡೆದಿತ್ತು. ಆದರೆ, ಈ ವರದಿ ಇನ್ನೂ ಮಂಡನೆ ಆಗಿಲ್ಲ. ಹಾಗಾದರೆ ಈ ಜಾತಿಗಣತಿಯನ್ನುಏಕೆ ಮಾಡಬೇಕು? ಇದರ ಮಹತ್ವ ಏನು? ಈ ಲೆಕ್ಕಾಚಾರವನ್ನು ಯಾಕೆ ಹಾಕಲಾಗುತ್ತೆ? ಇದು ರಾಜಕೀಯದ ದಿಶೆಯನ್ನ ಬುಡಮೇಲು ಮಾಡುತ್ತದೆಯೇ? ಜಾತಿಗಣತಿ ಮಾಡೋದ್ರಿಂದ ಏನೆಲ್ಲಾ ಲಾಭ ಇವೆ? ಈ ರೀತಿ ಲೆಕ್ಕಾಚಾರ ಹಾಕೋದ್ರಿಂದ ಏನಾದ್ರೂ ನಷ್ಟವಾಗುತ್ತಾ? ಈ ವಿಚಾರವಾಗಿ ಬಿಜೆಪಿ ನಿಲುವೇನು? ಜಾತಿಗಣತಿ ಮತ್ತು ಜಾತಿ ಸಮೀಕ್ಷೆ ಬೇರೆ ಬೇರೆಯಾ? ಈ ಎಲ್ಲಾ ಅಂಶಗಳನ್ನು ತಿಳಿಯಬೇಕಾದ್ದು ಮುಖ್ಯ.

ನಮ್ಮದು ವಿವಿಧತೆಯಲ್ಲಿ ಏಕತೆಗೆ ಹೆಸರು ಪಡೆದ ದೇಶ. ನಮ್ಮಲ್ಲಿ ಸುಮಾರು ೩,೦೦೦ಕ್ಕೂ ಹೆಚ್ಚು ಜಾತಿಗಳು, ೨೫,೦೦೦ ಉಪಜಾತಿಗಳು, ೭೮೦ ಭಾಷೆಗಳು, ೭೫೦ ಜನಾಂಗೀಯ ಗುಂಪುಗಳು, ೩೦ ದೇಶೀಯ ಬುಡಕಟ್ಟುಗಳು ಮತ್ತು ೧೬ ವಿಶಿಷ್ಟ ಸಂಸ್ಕೃತಿಗಳು ಇವೆಯಂತೆ. ಎನ್‌ಇಎಸ್ ಪ್ರಕಾರ
ಒಬಿಸಿಗಳಲ್ಲಿ ಪಕ್ಷದ ಮತ ಹಂಚಿಕೆಯು ೨೦೦೯ ಮತ್ತು ೨೦೧೯ರ ನಡುವೆ ದ್ವಿಗುಣಗೊಂಡಿದೆ. ೨೦೦೯ರ ಸಾರ್ವಜನಿಕ ಚುನಾವಣೆಯಲ್ಲಿ ಸರಿಸುಮಾರು ಶೇ.೨೦ರಷ್ಟು ಒಬಿಸಿ ಮತಗಳಿದ್ದರೆ, ೨೦೧೯ರ ಚುನಾವಣೆಯಲ್ಲಿ ಇದು ಶೇ.೪೪ಕ್ಕೆ ಏರಿತು. ಪ್ರಧಾನಿ ಮೋದಿಯವರು ವಿಜಯದಶಮಿಯಂದು ರಾವಣನ ದಹನ ಕಾರ್ಯಕ್ರಮದಲ್ಲಿ, ‘ರಾವಣನ ಸಂಹಾರವಾದಂತೆ ದೇಶದಲ್ಲಿ ಜಾತಿವಾದ ಮತ್ತು ಕ್ಷೇತ್ರವಾದವನ್ನು ದಹನ ಮಾಡಬೇಕು’ ಎಂಬ ಕರೆಗೆ ಬಹಳ ಒತ್ತುಕೊಟ್ಟು ಕಾಂಗ್ರೆಸ್‌ನ ಜಾತಿಗಣತಿಯ ಬಗ್ಗೆ ತಿರುಗೇಟು ನೀಡಿದ್ದರು.

ಇದು ದೇಶವಿಭಜನೆಗೆ  ಕಾರಣವಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದರು. ೨೦೧೫ರಲ್ಲಿ ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಆಯೋಗ ಜಾತಿಗಣತಿ ನಡೆಸಿತ್ತು, ೨೦೧೬ಕ್ಕೆ ಅದು ಪೂರ್ಣಗೊಂಡಿತ್ತು. ಆದರೆ ಅದನ್ನು ಸರಕಾರದೆದುರು ಮಂಡಿಸಿಲ್ಲ. ಪ್ರತಿ ಹತ್ತು ವರ್ಷಗಳಿಗೊಮ್ಮೆ  ನಡೆಯ ಬೇಕಾಗಿದ್ದ ಈ ಸಮೀಕ್ಷೆ ಕೋವಿಡ್ ಕಾರಣಗಳಿಂದ ಮುಂದೂಡಲ್ಪಟ್ಟಿತು. ೨೦೧೧ರಲ್ಲಿ ನಡೆದ ಸಮೀಕ್ಷೆಯನ್ನು ಸಾಮಾಜಿಕ ಆರ್ಥಿಕ ಜಾತಿ ಗಣತಿ (ಎಸ್‌ಇಸಿಸಿ) ಎಂದೇ ಕರೆಯಲಾಗಿತ್ತು. ಹಾಗಾಗಿ ಇದು ಅಲ್ಪಪ್ರಮಾಣದಲ್ಲಿ ಕೂಡ ಜಾತಿಸಮೀಕ್ಷೆ ಎಂದು ಪರಿಗಣಿಸಲ್ಪಟ್ಟಿಲ್ಲ. ಪ್ರಸ್ತುತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ ಅವರು ನವೆಂಬರ್ ೨೪ರೊಳಗೆ ಸರಕಾರಕ್ಕೆ ವರದಿ ಸಲ್ಲಿಸುವ ಬಗ್ಗೆ ತಿಳಿಸಿದ್ದಾರೆ.

ಈ ಜಾತಿ ಸಮೀಕ್ಷೆಯಿಂದ ಹಿಂದುಳಿದ ವರ್ಗಗಳಿಗೆ ನಿಜವಾಗಿಯೂ ಆರ್ಥಿಕ ಮತ್ತು ಸಾಮಾಜಿಕ ನ್ಯಾಯ ಸಿಗುತ್ತಾ? ಇಂದು ಈ ಸಮೀಕ್ಷೆ ಜಾರಿಗೆ ತರೋದ್ರಿಂದ ಸಮಾಜದೊಳಗೆ ಗೊಂದಲ, ವಿವಾದಗಳಾಗಿ ವಿಭಜನೆಗೆ ಕಾರಣವಾಗುತ್ತದೆ ಎಂದು ವಿಮರ್ಶಕರೇ ಅಭಿಪ್ರಾಯ ಪಟ್ಟಿದ್ದಾರೆ. ಜಾತಿಗಣತಿ ರಾಜಕೀಯ ಪ್ರೇರಿತವೇ? ಕಾಂಗ್ರೆಸ್ ಪಕ್ಷ ಇದನ್ನೇ ಚುನಾವಣಾ ಪ್ರಣಾಳಿಕೆಯಂತೆ ಘೋಷಣೆ ಮಾಡುತ್ತಿರುವುದೇಕೆ? ಅಭಿವೃದ್ಧಿ ಹೊಂದುತ್ತಿರುವ ದೇಶದ
ಪ್ರಜೆಗಳಾಗಿ ನಾವು ಈ ಜಾತಿಗಣತಿಯನ್ನ ಯಾವ ರೀತಿ ಅರಿತುಕೊಳ್ಳಬೇಕು? ಇವನ್ನೆಲ್ಲ ಪ್ರಜ್ಞಾವಂತರು ಯೋಚಿಸಬೇಕು.

ಜಾತಿಗಣತಿ ಮತ್ತು ಮೀಸಲಾತಿಗಳು ಬಡವರ್ಗ, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಒಳ್ಳೆಯದು ಎಂದು ಮೇಲ್ನೋಟಕ್ಕೆ ಭಾವಿಸಿದರೂ, ಅದು ಮೀಸಲಾತಿ ಹೆಸರಲ್ಲಿ ಮತದಾರರನ್ನು ಸೆಳೆಯಲು ಮತ್ತು ರಾಜ್ಯಭಾರ ಮಾಡಲು ಬಳಸಿಕೊಳ್ಳುತ್ತಿರುವ ಒಂದು ಅಸ ಎಂಬುದನ್ನು ಗಮನಿಸಬೇಕು.
ಈ ರೋಹಿಣಿ ಆಯೋಗ ಏನು ಹೇಳುತ್ತದೆ? ದೆಹಲಿ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿಗಳಾಗಿರುವ ರೋಹಿಣಿ ನೇತೃತ್ವದ ನಾಲ್ಕು ಸದಸ್ಯರ ಆಯೋಗ ವನ್ನು ಅಕ್ಟೋಬರ್ ೨೦೧೭ರಲ್ಲಿ ನೇಮಿಸಲಾಯಿತು. ಸುಮಾರು ಆರು ವರ್ಷಗಳ ನಂತರ ರೋಹಿಣಿ ಆಯೋಗವು ಅಂತಿಮವಾಗಿ ಇದೇ
ವರ್ಷ ಜುಲೈ ೩೧ರಂದು ಭಾರತದ ರಾಷ್ಟ್ರಪತಿಗಳಿಗೆ ಒಬಿಸಿಗಳ ಉಪ ವರ್ಗೀಕರಣಗಳ ವರದಿಯನ್ನು ಸಲ್ಲಿಸಿದೆ. ಆದರೆ ಅದರಲ್ಲಿ ಅಡಕವಾಗಿರುವ ಅಂಶಗಳನ್ನು ಬಹಿರಂಗ ಪಡಿಸಿಲ್ಲ.

ಆದರೆ ಮಾಧ್ಯಮ ವರದಿಗಳು ಸೋರಿಕೆಯಾದ ಮಾಹಿತಿ ಯನ್ನು ಉಲ್ಲೇಖಿಸಿ, ಸಮಿತಿಯು ಕೆಲವು ಆಶ್ಚರ್ಯಕರ ವಿವರಗಳಲ್ಲಿ ಎಡವಿದೆ ಎಂದು ಹೇಳಿವೆ. ಕೇಂದ್ರ ಪಟ್ಟಿಯಲ್ಲಿರುವ ೨,೬೩೩ ಒಬಿಸಿಗಳಲ್ಲಿ ಶೇಕಡ ೧ಕ್ಕಿಂತ ಕಡಿಮೆ ಜನರು ಶೇಕಡ ೫೦ರಷ್ಟು ಮೀಸಲಾತಿ ಪ್ರಯೋಜನಗಳನ್ನು ಮೂಲೆಗುಂಪು ಮಾಡಿದ್ದಾರೆ. ೨೦೧೪ ಮತ್ತು ೨೦೧೮ರ ನಡುವೆ ಕೇಂದ್ರ ಶಿಕ್ಷಣಸಂಸ್ಥೆಗಳು ಮತ್ತು ಉದ್ಯೋಗಗಳಿಗೆ ಪ್ರವೇಶ; ಒಟ್ಟು ಒಬಿಸಿ ಕೋಟಾ ಶೇ.೨೭ರಲ್ಲಿ ಕೇವಲ ೧೦ ಜಾತಿ ಗುಂಪುಗಳು ನಾಲ್ಕನೇ ಒಂದು ಭಾಗದಷ್ಟು ಫಲಾನುಭವಿಗಳನ್ನು ಹೊಂದಿವೆ ಮತ್ತು ಸುಮಾರು ೧,೦೦೦ ಜಾತಿಗಳು ಶೂನ್ಯ ಪ್ರಾತಿನಿಧ್ಯವನ್ನು
ಹೊಂದಿವೆ.

ಕರ್ನಾಟಕದಲ್ಲಿ ಜಾತಿಗಣತಿಗೆ ಬಹಿರಂಗವಾಗಿ ವಿರೋಧ ವ್ಯಕ್ತವಾಗುತ್ತಿದೆ, ಇದರ ನಡುವೆಯೂ ರಾಜ್ಯ ಸರಕಾರ ತಾನು ವಿಧಾನಸಭೆಯ ಚುನಾವಣಾ ಸಂದರ್ಭದಲ್ಲಿ ಘೋಷಿಸಿಕೊಂಡಂತೆ ಜನಗಣತಿಯ ವರದಿಯನ್ನು ಬಿಡುಗಡೆ ಮಾಡುವ ತವಕದಲ್ಲಿದೆ. ಚಿಂತಕ ಜಾನ್ ರಾಲ್ಸ್ ಒಂದು ಕಡೆ ಸಾಮಾಜಿಕ
ನ್ಯಾಯದ ಬಗ್ಗೆ ಮಾತನಾಡುತ್ತಾ ‘ಎಲ್ಲಾ ಪ್ರಜೆಗಳಿಗೆ ನ್ಯಾಯಸಮ್ಮತವಾದ, ಅದರಲ್ಲೂ ಶಿಕ್ಷಣ, ಸರಕಾರಿ ಉದ್ಯೋಗ, ಆರೋಗ್ಯದಂಥ ಕ್ಷೇತ್ರಗಳಲ್ಲಿ ಅವಕಾಶಗಳನ್ನು ಕಲ್ಪಿಸುವುದೇ ನ್ಯಾಯ’ ಎಂದು ಹೇಳುತ್ತಾರೆ. ಅರ್ಥಶಾಸಜ್ಞ ಅಮರ್ತ್ಯ ಸೇನ್ ಅವರ ಪ್ರಕಾರ, ಸಾಮಾಜಿಕ ನ್ಯಾಯವು ಸಮುದಾಯಗಳ ಪರಿಕಲ್ಪನೆಯಲ್ಲಿ ಹುದುಗಿದೆ. ಇವುಗಳನ್ನು ಗಮನದಲ್ಲಿ ಇಟ್ಟುಕೊಂಡು ಹಿಂದುಳಿದ ವರ್ಗಗಳನ್ನು ವಿಶ್ಲೇಷಿಸಿದರೆ, ಈ ವರ್ಗಗಳು ಸದಾ ವಂಚಿತ ಸಮುದಾಯಗಳೆಂದು ನಿರ್ಧರಿಸಬಹುದು.

ವಾಸ್ತವವಾಗಿ ವಿವಿಧ ಆಯೋಗಗಳು ಕಾಲಕಾಲಕ್ಕೆ, ಆಯಾ ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತಾ ಹೋದವು. ಇದಕ್ಕೆ ಕರ್ನಾಟಕವೂ ಅಪವಾದವಾಗಿಲ್ಲ. ೧೯೧೯ರ ಲೆಸ್ಲಿ ಮಿಲ್ಲರ್ ಸಮಿತಿಯ ಶಿಫಾರಸಿನಿಂದ ಕಾಂತರಾಜ ಆಯೋಗದ ತನಕ, ಕಾಕಾ ಕಾಲೇಕರ್ ಅವರಿಂದ ಮಂಡಲ್ ಆಯೋಗದ ತನಕದ
ವರದಿಗಳನ್ನು ಅವಲೋಕಿಸಿದಾಗ, ಈ ಮಾನದಂಡಗಳು ಬದಲಾಗುತ್ತಾ ಹೋಗಿರುವುದು ಸ್ಪಷ್ಟವಾಗುತ್ತದೆ. ಜಾತಿಗಣತಿ ಮುಖ್ಯವಾಗಿ ಬೇಕಾಗಿರುವುದು ಪ್ರಾದೇಶಿಕ ಪಕ್ಷಗಳಿಗೆ, ತಮ್ಮ ರಾಜಕೀಯದ ಅನುಕೂಲಕ್ಕಾಗಿ ಎಂಬುದು ಒಂದು ವಾದವಾದರೆ, ಜನಸಂಖ್ಯೆಯ ನಿಖರ ಮಾಹಿತಿ ಸಿಕ್ಕಿದರೆ ಮೀಸಲಾತಿಯ ಲೆಕ್ಕಾಚಾರದಲ್ಲಿ ಬಹಳ ವ್ಯತ್ಯಾಸ ಆಗಬಹುದು ಎನ್ನುವ ಇನ್ನೊಂದು ಅಭಿಪ್ರಾಯವೂ ಇದೆ.

ಬಸವಣ್ಣನವರು ಕಾಯಕ ಜೀವನಕ್ಕೆ ಮಹತ್ವ ಕೊಟ್ಟವರು. ಅವರು, ‘ಜಾತಿ ವ್ಯವಸ್ಥೆ ಸಮಾಜದಲ್ಲಿದ್ದರೆ ಸಹಬಾಳ್ವೆ, ಸಮಾನತೆ, ಸಾಮಾಜಿಕ ನ್ಯಾಯದ ಮೌಲ್ಯಗಳು ನಮ್ಮಿಂದ ದೂರವಾಗುತ್ತವೆ’ ಎಂದಿದ್ದಾರೆ. ‘ಇವನಾರವ ಇವನಾರವ ಇವನಾರವ ಎಂದೆನಿಸದಿರಯ್ಯ, ಇವ ನಮ್ಮವ ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ’ ಎಂದು ಬಸವಣ್ಣನವರು ಹೇಳುತ್ತಾರೆ. ಆದರೆ ಇಲ್ಲಿ ಮತ್ತೆ ಸಮಾಜದಲ್ಲಿನ ವರ್ಗ ವೈರುಧ್ಯಗಳನ್ನು ಗುರುತಿಸಿ ಬೆಂಬಲಿಸುವ ಯತ್ನ ನಡೆಯುತ್ತಿದೆ.

ನಮ್ಮ ಸರಕಾರದಲ್ಲಿ ದೇಶದ ಸಂಪನ್ಮೂಲಗಳನ್ನು ಪಡೆಯುವ ಹಕ್ಕು ಬಡವರಿಗಿದೆ. ನಮ್ಮ ಸರಕಾರ ಹಿಂದುಳಿದ ವರ್ಗಗಳ ಜನರ ಆರ್ಥಿಕ
ಶ್ರೇಯಸ್ಸಿಗೆ ದುಡಿಯುತ್ತಿದೆ ಎಂದು ಮೋದಿಯವರು ಹೇಳಿದ್ದಾರೆ. ೨೦೧೪ರಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಒಬಿಸಿಯ ಒಲವು ಈಗ ಬಿಜೆಪಿಯತ್ತ ಹಲವು ಪಟ್ಟು ಹೆಚ್ಚಾಗಿದೆ ಎಂದು ಅಧ್ಯಯನ ತಿಳಿಸುತ್ತದೆ. ಜಾತಿಗಣತಿ ಸಮಾಜದಲ್ಲಿ ಎಷ್ಟರ ಮಟ್ಟಿಗೆ ಸಮಾನತೆಯನ್ನು ತರಬಲ್ಲ
ಸಾಮಾರ್ಥ್ಯ ಹೊಂದಿದೆ ಎಂಬುದು ಚರ್ಚಾಸ್ಪದವಾಗಿದೆ.

ಈಗಾಗಲೇ ರಾಜ್ಯ ಸಾಕಷ್ಟು ಆರ್ಥಿಕ ಕುಸಿತ ಕಂಡಿದ್ದು, ಸಮಸ್ಯೆಗಳ ಸರಮಾಲೆಯೇ ಇದೆ. ಬರಗಾಲದಿಂದ ರೈತರು ತತ್ತರಿಸುತ್ತಿದ್ದು ಸೂಕ್ತ ಪರಿಹಾರ ನೀಡದೆ, ಈ ಜಾತಿಗಣತಿ ವರದಿಯ ಹಿಂದೆ ಕಾಂಗ್ರೆಸ್ ಸರಕಾರ ದುಂಬಾಲು ಬಿದ್ದಿರುವುದು ವಿಪರ್ಯಾಸ. ಅದು ಕೇವಲ ರಾಜಕೀಯ ಬೂಟಾಟಿಕೆಗೆ, ಕೆಲವು ಜಾತಿಗಳನ್ನು ಓಲೈಸಲು ಈ ಜಾತಿ ಸಮೀಕ್ಷೆಯನ್ನು ಅಸವಾಗಿ ಬಳಸಿಕೊಳ್ಳುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.