ಹಂಪಿ ಏಕ್ಸ್’ಪ್ರೆಸ್
ದೇವಿ ಮಹೇಶ್ವರ ಹಂಪಿನಾಯ್ಡು
ಬೇಡರ ಕಣ್ಣಪ್ಪನಾಗಿ ಮತ್ತು ವಾಲ್ಮೀಕಿ ಚಿತ್ರದಲ್ಲಿ ಬೇಡನಾಗಿ, ಭಕ್ತಚೇತ ಚಿತ್ರದಲ್ಲಿ ಚಮ್ಮಾರ ದಲಿತನಾಗಿ, ಭಕ್ತ ಕನಕದಾಸ, ಕವಿರತ್ನ ಕಾಳಿದಾಸ, ಬಂಗಾರದ ಪಂಜರ ಚಿತ್ರಗಳಲ್ಲಿ ಕುರುಬನಾಗಿ, ಭಕ್ತ ಕುಂಬಾರ, ಸರ್ವಜ್ಞ ಮೂರ್ತಿ ಚಿತ್ರಗಳಲ್ಲಿ ಕುಂಬಾರ
ನಾಗಿ, ಮಣ್ಣಿನಮಗ, ಬಂಗಾರದ ಮನುಷ್ಯ, ಒಡಹುಟ್ಟಿದವರು ಚಿತ್ರಗಳಲ್ಲಿ ಒಕ್ಕಲಿಗನಾಗಿ, ಕಿತ್ತೂರು ಚೆನ್ನಮ್ಮ ಚಿತ್ರದಲ್ಲಿ ವೀರಶೈವನಾಗಿ, ನವಕೋಟಿ ನಾರಾಯಣ ಚಿತ್ರದಲ್ಲಿ ವೈಷ್ಣವನಾಗಿ, ಮಂತ್ರಾಲಯ ಮಹಾತ್ಮೆ ಚಿತ್ರದಲ್ಲಿ ಮಾಧ್ವನಾಗಿ, ಕೈವಾರ ಮಹಾತ್ಮೆ ಚಿತ್ರದಲ್ಲಿ ಬಲಜಿಗನಾಗಿ, ಸನಾದಿ ಅಪ್ಪಣ್ಣ ಚಿತ್ರದಲ್ಲಿ ಸವಿತಾ ಸಮಾಜದವರಾಗಿ, ಸಂತ ತುಕಾರಾಮ ಚಿತ್ರದಲ್ಲಿ ಮರಾಠ ಭಕ್ತನಾಗಿ, ಕಾಮನಬಿಲ್ಲು ಚಿತ್ರದಲ್ಲಿ ಬ್ರಾಹ್ಮಣನಾಗಿ, ಹುಲಿ ಹಾಲಿನ ಮೇವು ಚಿತ್ರದಲ್ಲಿ ವೀರ ಕೊಡವರಾಗಿ, ಒಂದು ಮುತ್ತಿನ ಕಥೆಯಲ್ಲಿ ಬೆಸ್ತನಾಗಿ ಪಾತ್ರ. ಮಹಾತ್ಮ ಕಬೀರ ಚಿತ್ರದಲ್ಲಿ ಮುಸ್ಲಿಂ ಸಂತನಾಗಿ ಹೀಗೆ ಹುಡುಕುತ್ತಾ ಹೋದರೆ ವರನಟ ರಾಜ್ ಅವರೊಬ್ಬ ಅಪ್ಪಟ ಜಾತ್ಯಾತೀತ ಕಲಾವಿದರಾಗಿ ಕಂಗೊಳಿಸುತ್ತಾರೆ.
ಅಸಲಿಗೆ ಅವರ ಕಾಲದಲ್ಲಿ ಯಾವ ಮಹಾಪುರುಷ ಯಾವ ಜಾತಿಯೆಂಬುದನ್ನೇ ಜನ ಪರಿಗಣಸುತ್ತಿರಲಿಲ್ಲ. ಏಕೆಂದರೆ ಅಂದು ಜಾತಿ ಎಂಬುದು ಮದುವೆ ಸಂಬಂಧಗಳಿಗೆ ಸೀಮಿತವಾಗಿತ್ತೇ ಹೊರತು ಸಾಮಾಜಿಕವಾಗಿ ಮಹತ್ವ ಪಡೆದುಕೊಂಡಿರಲಿಲ್ಲ. ಹೀಗಾಗಿಯೇ ಅಂದು ನಟರುಗಳು ಎಲ್ಲೆಡೆಯೂ ಸಲ್ಲುತ್ತಿದ್ದರು. ಹಾಗೆಯೇ ರಾಜಕಾರಣಿಗಳ ಜಾತಿ ಕುಲಗೋತ್ರ ಯಾವುದನ್ನೂ ನೋಡದೇ ಅವರ ಉತ್ತಮ ಕೆಲಸಗಳು ನಡವಳಿಕೆಯನ್ನು ಮೆಚ್ಚಿ ಚುನಾಯಿಸುತ್ತಿದ್ದರು.
ಜಾತಿಯೆಂಬುದು ಆಗೆಲ್ಲಾ ಅಪ್ರಸ್ತುತವಾಗಿತ್ತು. ವಿದ್ಯಾರ್ಥಿಯೊಬ್ಬ ಕಾಲೇಜು ಮೆಟ್ಟಿಲು ಹತ್ತಿದರೂ ತನ್ನದೇ ಜಾತಿಯನ್ನು ತಿಳಿದುಕೊಂಡಿರುತ್ತಿರಲಿಲ್ಲ. ತನ್ನ ಪೋಷಕರು ದಾಖಲಾತಿಗಾಗಿ ಜಾತಿ ಪ್ರಮಾಣಪತ್ರವನ್ನು ಮಾಡಿಸಿದಾಗಲೇ ತನ್ನ ಜಾತಿ ಇದು ಎಂದು ಅರಿವಿಗೆ ಬರುತ್ತಿತ್ತು. ಆದರೆ ಇಂದು ಕಾಲ ಬದಲಾಗಿ ಹೋಗಿದೆ. ಈಗ ಜಾತಿಯೇ ಮೊದಲ ಆದ್ಯತೆ ಮತ್ತು ಅರ್ಹತೆ. ಹೀಗಾಗಿ ಅಂದು ಬ್ರಾಹ್ಮಣರಾದ ಲೋಕದ ಡೊಂಕನ್ನು ತಿದ್ದಿದ ವಿಶ್ವಮಾನವ ಬಸವಣ್ಣನವರು ಇಂದು ಲಿಂಗಾಯತ ಅಥವಾ
ವೀರಶೈವರಲ್ಲದೆ ಅನ್ಯ ಜಾತಿಯವರು ತೀರಾ ವೈಯಕ್ತಿಕವಾಗಿ ಅವರನ್ನು ಎಲ್ಲ ಜಾತಿಯವರೂ ಆರಾಧಿಸುತ್ತಾರೆ?. ಕೆಲ
ಅವಿವೇಕಿಗಳು ಅವರನ್ನು ಎಡಪಂಥೀಯರನ್ನಾಗಿ ಮಾಡಿ ಮತಾಂಧ ಟಿಪ್ಪು ಸುಲ್ತಾನನ ಪಕ್ಕದಲ್ಲಿ ಅವರ ಫೋಟೋ ಇರಿಸಿ ಅಸಂಬದ್ಧ ಸಂದೇಶ ಸಾರುತ್ತಾರೆ.
ಕನಕದಾಸರು ಮತ್ತು ಸಂಗೊಳ್ಳಿ ರಾಯಣ್ಣನನ್ನು ಕುರುಬರಲ್ಲದೆ ಇನ್ನಾರು ಪ್ರಾಮಾಣಿಕವಾಗಿ ಪ್ರೀತಿಸುತ್ತಾರೆ. ಮಹರ್ಷಿ ವಾಲ್ಮೀಕಿ ಇಂದು ಬೇಡ ಜನಾಂಗದ ಹೊರತುಪಡಿಸಿ ಇನ್ನಾರಿಗೂ ಬೇಡ. ಕಠೋರ ತ್ರಿಪದಿಕ ಸರ್ವಜ್ಞಮೂರ್ತಿ ಕುಂಬಾರರಾಗಿರದೆ ಒಕ್ಕಲಿಗರೋ ಬರೋ ಆಗಿದ್ದರೆ ಇಂದು ಅವರ ಹೆಸರು ಸರಕಾರಿ ಸಂಸ್ಥೆಗಳಿಗೆ ನಾಮಕರಣವಾಗಿರುತ್ತಿತ್ತು. ರಾಷ್ಟ್ರಕವಿ ಕುವೆಂಪು,
ಕೆಂಪೇಗೌಡ ಇವರಿಗೆ ಒಕ್ಕಲಿಗ ಜಾತಿಯ ಬೇಲಿಯನ್ನು ಹಾಕಲಾಗಿದೆ. ಜೇಡರ ದಾಸಿಮಯ್ಯ ಕಥೆ ನೇಯ್ಗೆಯವರ ವಿಷಯ. ನಮಗೇಕೆ?, ವಿಶ್ವಕರ್ಮರೆಂದರೆ ಇಂದು ಕೆ.ಪಿ ನಂಜುಂಡಿಗೆ ಸಂಬಂಧಿಸಿದ್ದು.
ಇನ್ನು ಸಂಸ್ಕೃತವನ್ನು ರಾಷ್ಟ್ರಭಾಷೆಯಾಗಿಸುವ ಸಂಕಲ್ಪ ಹೊಂದಿದ್ದ ಸಂವಿಧಾನ ಶಿಲ್ಪಿ ಡಾ.ಭೀಮರಾವ್ ರಾಮ್ಜೀ ಅಂಬೇಡ್ಕರ್ ಅವರು ದಲಿತರಿಗಲ್ಲದೆ ಇನ್ನಾರಿಗೆ ದೇವರಾಗಿದ್ದಾರೆ? ಇನ್ನು ಬ್ರಾಹ್ಮಣರಲ್ಲಿ ಶಂಕರಾಚಾರ್ಯರು ಮಧ್ವಚಾರ್ಯರು
ರಾಮಾನುಜಾಚಾರ್ಯರ ಮಧ್ಯೆಯೇ ದೊಡ್ಡ ಮಡಿವಂತಿಕೆ ಬೆಳೆದು ನಿಂತಿದೆ. ಇನ್ನು ಮೈಸೂರಿನ ಪ್ರತೀ ರೈತನ ಮನೆಯ
ದೇವರಾಗಿದ್ದ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ಬ್ರಾಹ್ಮಣರಾಗಿದ್ದರು ಎಂಬುದನ್ನು ಈಗ ಅರಿತು ಅವರನ್ನು ಇತಿಹಾಸದಲ್ಲಿ ಕೇವಲ ಒಬ್ಬ ನೌಕರ ಎಂಬಂತೆ ಬಿಂಬಿಸುವ ಪ್ರಯತ್ನ ತಿಳಿಗೇಡಿಗಳಿಂದಾಗುತ್ತಿದೆ. ಇನ್ನು ಕಬೀರದಾಸ ಸಂತಶಿಶುನಾಳ ಷರೀ- ಶಿರಡಿಸಾಯಿಬಾಬಾ ಭಾರತರತ್ನ ಅಬ್ದುಲ್ಕಲಾಂ ಇವರುಗಳು ಧರ್ಮಾತೀತರಾಗಿದ್ದ ಕಾರಣಕ್ಕೆ ಮುಸಲ್ಮಾನರೇ ಮೂಸುವು ದಿಲ್ಲ.
ಇದಕ್ಕಿಂತಲೂ ಭಯಾನಕ ವಿಷಯವೆಂದರೆ ಮನುಷತ್ವದ ವಿರೋಽ ಭಯೋತ್ಪಾದಕರೆಲ್ಲಾ ಒಂದೇ ಧರ್ಮದವರಾಗಿದ್ದರೂ ಈ ದೇಶದ ಗುಲಾಮಗಿರಿಯ ರಾಜಕಾರಣಿಗಳು ಅವರನ್ನು ಖಂಡಿಸುವುದೇ ಇಲ್ಲ. ಕನಿಷ್ಠ ತಿಳಿವಳಿಕೆ ಹೇಳುವುದಕ್ಕೂ ಹೇಡಿತನ. ಮತ್ತೊಂದು ದುರಂತವೆಂದರೆ ದೇಶವನ್ನು ಗುಲಾಮಗಿರಿಯಿಂದ ಮುಕ್ತಿಗೊಳಿಸಿದ ನೇತಾಜಿ, ತಿಲಕ್, ಭಗತ್ಸಿಂಗ್, ಸಾವರ್ಕರ್, ಪಟೇಲರು ಶಾಸ್ತ್ರೀಜಿಯವರಂಥ ಅನೇಕರು, ಮಾರ್ವಾಡಿಗಳು, ಹಿಂದಿ ಭಾಷಿಕರು ಎಂದು ತೀರ್ಮಾನಿಸಿ ರಾಷ್ಟ್ರೀಯತೆಯನ್ನೇ ಧಿಕ್ಕರಿಸುವ ದೇಶಕಂಟಕಗಳು ಅಡ್ಡಕಸುಬಿಗಳು ಹೆಚ್ಚುತ್ತಿರುವುದು ದೊಡ್ಡ ಅಪಾಯಕಾರಿ.
ಇನ್ನು ಮತ್ತೇ ಹೇಳಬೇಕೆಂದರೆ ಇಂದು ಅಕ್ರಮ ಹಣಸಂಪಾದನೆ ಮಾಡಿ ಜೈಲುಪಾಲಾಗಿ ಬಂದವರನ್ನು ಕೇವಲ ಸ್ವಜಾತಿಯ ಕಾರಣಕ್ಕೆ ಧರ್ಮ ಪಾಲಕರೇ ಶಾಲು ಹೊದಿಸಿ ಸನ್ಮಾನಿಸುವ ಮಟ್ಟಕ್ಕೆ ಇಳಿದಿದೆ. ಹಿಂದೂಧರ್ಮವನ್ನೇ ಹೊಡೆದು ಹಿಂದೂ ಪದಕ್ಕೆ ಅನರ್ಥ ಬೆರೆಸಿದ ಹಿಂದುತ್ವವನ್ನೇ ವಿರೋಧಿಸುವವರನ್ನು ಕೇವಲ ಜಾತಿಪ್ರೀತಿಗಾಗಿ ಅವರ ಪರ ವಹಿಸುವುದು ಸಮಾಜದ
ವ್ಯಂಗಚಿತ್ರಣವಾಗಿದೆ. ಇದಕ್ಕೆಲ್ಲಾ ಕಾರಣ ಕಳೆದ ಇಪ್ಪತ್ತು ವರ್ಷಗಳಿಂದಾದ ಸ್ವಾರ್ಥ ರಾಜಕೀಯದ ದುಷ್ಪರಿಣಾಮಗಳು. ದೇಶದ ಸ್ವಾತಂತ್ರ್ಯೋತ್ತರದ ಸಂವಿಧಾನದಲ್ಲಿ ಮೀಸಲಾತಿ ಎಂಬುದು ದೇಶದ ಏಕತೆಗೆ ಸಮಾನತೆಗೆ ಸಾಮರಸ್ಯಕ್ಕೆ ಅವಶ್ಯಕತೆ ಇತ್ತು.
ಅದನ್ನು ನ್ಯಾಯವಾಗಿ ಬಳಸಿದ್ದರಿಂದಲೇ ದೇವರಾಜು ಅರಸರಂಥ ನಾಯಕರು ಸಮಾಜದ ಪ್ರೀತಿಪಾತ್ರರಾದರು. ಆದರೆ ಇಂದಿನ ರಾಜಕಾರಣಿಗಳಿಗೆ ಈ ಜಾತಿಯೆಂಬುದು ದೊಡ್ಡ ಅಸವಾಗಿಹೋಗಿದೆ. ಈಗ ಜಾತಿ ಜನಗಣತಿ ವಿಚಾರವು ಕಾವು ಪಡೆದುಕೊಳ್ಳು ತ್ತಿದೆ. ಜಾತಿಗಣತಿಯೆಂಬುದು ಪ್ರಸ್ತುತ ರಾಜಕಾರಣಿಗಳಿಗೆ ಒಂದು ದೊಡ್ಡ ಅವಕಾಶ.
ಒಂದೊಂದು ಜಾತಿಯೂ ಈಗ ಪುಡಾರಿ ಗಳಿಗೆ ಅಕ್ಷಯಪಾತ್ರೆ ಇದ್ದಂತೆ. ಯಾವ ಜಾತಿಯವರು ಎಷ್ಟಿದ್ದಾರೆ, ಯಾವ್ಯಾವ ಕ್ಷೇತ್ರಗಳಲ್ಲಿದ್ದಾರೆ, ಆಯಾ ಜಾತಿಗಳ ಒಳಪಂಗಡಗಳೆಷ್ಟು, ಅಲ್ಲಿನ ಜಾತಿನಾಯಕರು ಯಾರು, ಅವರನ್ನು ಹೇಗೆಲ್ಲಾ ಬಳಸಿಕೊಳ್ಳ ಬಹುದು, ಜಾತಿ ಆಧಾರಿತ ಕ್ಷೇತ್ರಗಳನ್ನು ಯಾವ್ಯಾವ ರೀತಿಯಲ್ಲಿ ಉಪಯೋಗಿಸಿಕೊಳ್ಳಬಹುದು, ಅದಕ್ಕೆ ತಕ್ಕಂತೆ ಅಲ್ಲೆಲ್ಲಾ ತಮ್ಮ ವಂಶದ ಕುಡಿಗಳನ್ನು ಪ್ರತಿಷ್ಠಾಪಿಸಿ ವಂಶರಾಜಕಾರಣವನ್ನು ಬೆಳೆಸಬಹುದು, ಆಯಾ ಜಾತಿ ಕ್ಷೇತ್ರಗಳಲ್ಲಿನ ಮಠಗಳು ಮಠಾಧಿಪತಿಗಳು ಸಮಾಜಸೇವಕರು ಪ್ರಭಾವಿಗಳು ಇವರುಗಳನ್ನು ಹೇಗೆ ಅನುಕೂಲವಾಗಿಸಿಕೊಳ್ಳಬಹುದು, ಯಾವ ಬಹುಜಾತಿ ಕ್ಷೇತ್ರದಲ್ಲಿ ನಿಂತರೆ ಯಾವ ಯೋಗ್ಯತೆಯೂ ಇಲ್ಲದೇ ಗೆದ್ದುಬರಬಹುದು, ಯಾವ ಕ್ಷೇತ್ರದಲ್ಲಿ ಯಾವ ಜಾತಿ ಹೆಚ್ಚಿದ್ದಾರೋ ಆಯಾ ಕ್ಷೇತ್ರಗಳಲ್ಲಿ ಯಾವ ‘ಸ್ಟಾರ್ ಪ್ರಚಾರಕರನ್ನು’ ಐಟಂ ಸಾಂಗ್ ನಂತೆ ಕುಣಿಸಬಹುದು, ಯಾವ ಜಾತಿ ಹೆಚ್ಚಿದ್ದಾರೋ ಆಯಾ ಕ್ಷೇತ್ರಗಳಿಗೆ ಹೋಗಿ ಯಾವ ವಿಷಯದ ಮೇಲೆ ಭಾಷಣಮಾಡಿ ಕಣ್ಣೀರಾಕಬಹುದು, ಹೀಗೆ ಜಾತಿಗಣತಿ ಎಂಬುದು ಈಗ ಸ್ವಾರ್ಥ ರಾಜಕೀಯದ ಬೆಳವಣಿಗೆಗಳಿಗೆ ಪೂರಕವಾಗಿ ಅದನ್ನು ಹೊಂದಿಸಿಕೊಳ್ಳಬಹುದಾದ ದೊಡ್ಡ ಅವಕಾಶದಂತಿದೆ.
ಜಾತಿಗಣತಿಯ ಮೂಲಕ ಜಾತಿಗಳನ್ನು ಕೇಂದ್ರಿಕರಣಗೊಳಿಸಿ ಅವುಗಳಿಗೆ ಕಟ್ಟೆ ಕಟ್ಟಿ ಕ್ರೋಢೀಕರಿಸಿ ಪದವಿ ಅಧಿಕಾರ
ಪಡೆಯುವ ಸುಲಭ ಮಾರ್ಗವಿದೆ. ಹೀಗಾಗಿ ನಮ್ಮ ದೇಶ ಜಾತ್ಯಾತೀತ ಎನಿಸಿಕೊಂಡರೂ ಕೆಲ ಅನಿಷ್ಟ ರಾಜಕಾರಣಿಗಳಿಗೆ ಜಾತಿ ಗಣತಿ ಬೇಕೇಬೇಕು. ಇನ್ನು ಸಂವಿಧಾನಾತ್ಮಕವಾಗಿ ಜಾತಿಗಣತಿ ಬೇಕಿರುವುದು ಬಡವರ, ಹಿಂದುಳಿದವರ ಅಭ್ಯುದಯಕ್ಕೆ ಮಾರ್ಗಸೂಚಿ ಯಾಗಿ ಕೆಲ ಬದಲಾವಣೆಗಳನ್ನು ತಂದು ಅದಕ್ಕೆ ಅವಶ್ಯಕತೆಯಾಗಿ ಮೀಸಲಾತಿ ರಿಯಾಯಿತಿ ವಿದ್ಯಾರ್ಥಿವೇತನ
ಅನುದಾನ ಇನ್ನಿತರ ಸೌಲಭ್ಯಗಳನ್ನು ನೀಡಿ ಸಮಾಜದಲ್ಲಿ ಸಮಾನತೆ ತರುವ ಸಿದ್ಧಾಂತವನ್ನು ಅನುಷ್ಠಾನಗೊಳಿಸುವುದು.
ಇದು ಸಾಮಾಜಿಕ ಸಮತೋಲನಕ್ಕೆ ಆರೋಗ್ಯಕರ ಉದ್ದೇಶ.
ಇಂದಿನ ರಾಜಕಾರಣದಲ್ಲಿ ಅಂಥ ಯಾವ ಮಹಾಪುರುಷನೂ ಹಾಗೆ ಕಾಣುತ್ತಿಲ್ಲ. ಆದರೆ ಇಂದಿನ ರಾಜಕೀಯದ ಓಟದಲ್ಲಿ
ಜಾತಿಗಣತಿಯ ಎರಡನೇ ಉದ್ದೇಶವಿರಬಹುದು. ನೋಡಿ, ಈಗ ಜಾತಿಗಣತಿಯ ವರದಿ ಜಾರಿಯಾದರೆ ಯಾವಯಾವ ಕ್ಷೇತ್ರ ಗಳಲ್ಲಿ ಯಾವ ಜಾತಿ ಪ್ರಬಲವಾಗಿದೆ ಎಂದು ತಿಳಿದುಬಿಡುತ್ತದೆ. ಆಗ ಚುನಾವಣೆಗಳಲ್ಲಿ ‘ಜಾತಿಸೂತ್ರ’ ಹೆಣೆಯುವುದಕ್ಕೆ ಅನುಕೂಲ ವಾಗುತ್ತದೆ. ಇಲ್ಲಿ ತಾನು ತನ್ನವರು ತಮ್ಮ ವಂಶಸ್ಥರು ನಿಂತರೆ ಸುರಕ್ಷಿತ ಮತ್ತು ನಿರಂತರವಾಗಿ ಗೆದ್ದುಬರುವುದು ಸುಲಭ ಎಂಬ ಸ್ಪಷ್ಟತೆ ಸಿಕ್ಕಬಿಡುತ್ತದೆ. ಅಲ್ಲಿ ಇನ್ನಿತರ ಜಾತಿಗಳನ್ನು ಓಲೈಸುವುದು ಅನಿವಾರ್ಯವಲ್ಲ.
ಇದರ ಪರಿಣಾಮವಾಗಿ ಅಲ್ಲಿನ ಪ್ರಭಾವಿ ವ್ಯಕ್ತಿಗಳು, ಮಠಗಳು ಜಾಗೃತಗೊಳ್ಳುತ್ತವೆ. ಓ ಈತ ನಮ್ಮವನು ಎಂಬ ಮಮಕಾರ ಸ್ವಜಾತಿ ಮೋಹ ಉಕ್ಕಿ ಹರಿಯುತ್ತದೆ. ಮಠಾಧಿಪತಿಗಳು ಚುರುಕುಗೊಂಡು ಜಾತಿಗಳಿಗೆ ಶಾಲುಹೊದಿಸಿ ತಮ್ಮ ಅಂಕುಶದಲ್ಲಿರಿಸಿ ಕೊಂಡು ಆರ್ಥಿಕವಾಗಿ ಪ್ರಬಲಗೊಂಡು ‘ಬೆಳೆಯುತ್ತವೆ’. ಆಗ ಅದಕ್ಕೆ ಇನ್ನಿತರ ಜಾತಿ ಮಠಗಳೂ ಪ್ರಚೋದಿತಗೊಂಡು ಪ್ರತಿ ಸ್ಪರ್ಧಿಗಳಾಗಿ ಆಯಾ ಜಾತಿಗಳ ಸಮಾಜವನ್ನು ಬಡಿದೆಬ್ಬಿಸಿ ಜಾತಿಗಳಿಗೆ ಪಾತಿಗಳು ನಿರ್ಮಾಣಗೊಂಡು ಜಾತಿವಾದಿತನ ಬಲಿಷ್ಠ ವಾಗುತ್ತದೆ. ಮೇಲೆ ಹೇಳಲಾದ ಇತಿಹಾಸ ಪುರುಷರಿಗೆ ಇನ್ನಷ್ಟು ಎತ್ತರದ ಕಾಂಪೌಂಡ್ಗಳು ನಿರ್ಮಾಣವಾಗುತ್ತದೆ.
ಇದು ಮುಂದೆ ವಿದ್ಯಾರ್ಥಿಗಳ ಶಿಕ್ಷಣದ ಮೇಲೂ ದುಷ್ಪರಿಣಾಮ ಬೀರಿ ವಿದ್ಯಾರ್ಥಿ ಜೀವನದಲ್ಲೇ ಜಾತಿವಾದ ಮೊಳಕೆ ಯೊಡೆಯುತ್ತದೆ. ಜಾತಿಜಾತಿಗಳ ಮಧ್ಯೆ ಪೈಪೋಟಿ, ಕೆಟ್ಟಸ್ಪರ್ಧೆ, ಅನೈತಿಕತೆಯ ಒಪ್ಪಂದಗಳು, ರಾಜಿಗಳು, ಸಿದ್ಧಾಂತಗಳು ಸ್ವಾರ್ಥಗಳು ಬೆಳೆಯುತ್ತವೆ. ಸ್ವಜಾತಿ ಸ್ವಾಭಿಮಾನವು ದುರಭಿಮಾನವಾಗಿ ಪರಿವರ್ತಿತವಾಗಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಗೆಡವುದರಲ್ಲಿ ಸಂಶಯವೇ ಇಲ್ಲ. ಪ್ರತಿಭೆ ಯೋಗ್ಯತೆ ಅರ್ಹತೆಗಳಿದ್ದರೂ ಜಾತಿಯೇ ಮಾರಕವಾಗುತ್ತದೆ.
ಇವರುಗಳ ಮಧ್ಯೆಯೇ ಜಾತಿಲೇಪಿತ ನಾಲಾಯಕ್ಕು ನಕಲಿ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು, ಸಂಘಟನೆಗಳು, ಕೆಲಸಕ್ಕೆ ಬಾರದ ಸಾಹಿತಿಗಳು, ಬುದ್ಧಿಜೀವಿಗಳು, ವಿಚಾರವ್ಯಾದಿಗಳು, ಕೋಮುಸೌಹಾರ್ದ ಕಂಪನಿಗಳು ತಮ್ಮ ಡ್ರಾಮಗಳನ್ನು ಶುರುವಿಟ್ಟುಕೊಳ್ಳುತ್ತಾರೆ. ಸಣ್ಣ ವಿಷಯಗಳನ್ನು ಸೂಕ್ಷ್ಮವಾಗಿಸಿ ಅನಗತ್ಯ ಪ್ರತಿಭಟನೆಗಳು ಖಂಡನೆಗಳ ಹೊಟ್ಟೆಪಾಡಿನ ಸಂಘಟನೆಗಳು ತಲೆಯೆತ್ತುತ್ತವೆ. ಗಲ್ಲಿಗಲ್ಲಿಗೆ ರಸ್ತೆರಸ್ತೆಗಳಿಗೆ ಜಾತಿನಾಯಕರು ಹುಟ್ಟಿಕೊಳ್ಳುತ್ತಾರೆ.
ಜಾತಿಗೊಂದು ಉಪಜಾತಿಗೊಂದು ಒಳಜಾತಿಗಳಿಗೊಂದು ಮಠ ಅದಕ್ಕೊಬ್ಬರು ದಿಢೀರ್ ಸ್ವಾಮೀಜಿಗಳು ಸಿದ್ಧರಾಗುತ್ತಾರೆ. ಇದೆಲ್ಲದರ ಒಟ್ಟು ಪರಿಣಾಮವಾಗಿ ಧರ್ಮ ದಾರಿತಪ್ಪುತ್ತದೆ. ಏನಾದರು ಹಾಳಾಗಿ ಹೋಗಲಿ ಒಟ್ಟಿನಲ್ಲಿ ನಮ್ಮ ಜಾತಿಯೇ ನಮಗೆ
ಮೇಲು ಎಂಬ ಭಾವನೆ ನೆಲೆಗೊಳ್ಳುತ್ತದೆ. ಆದರೆ ಇವೆಲ್ಲವೂ ರಾಜಕಾರಣದ ಪೂರಕವಾಗಿ ಸಾಗುತ್ತದೆ. ಇಂಥ ಆಗುಹೋಗುಗಳನ್ನೇ ತಮ್ಮ ಚದುರಂಗದಾಟದಲ್ಲಿ ಬಳಸಿಕೊಂಡು ರಾಜಕೀಯ ನಾಯಕರು ಪಕ್ಷಗಳು ಅಸ್ತಿತ್ವವನ್ನು ಪದವಿ ಪಟ್ಟಗಳನ್ನು ಭದ್ರಪಡಿಸಿ ಕೊಳ್ಳುತ್ತವೆ.
ಆದರೆ ತಿಳಿದುಕೊಳ್ಳಬೇಕಾದ ಸತ್ಯವೇನೆಂದರೆ ಯಾವ ಜಾತಿಯ ಶ್ರೀಸಾಮಾನ್ಯನೂ ತನ್ನ ದೈನಂದಿನ ದುಡಿಮೆ ಬವಣೆ ಹೊಟ್ಟೆ ಪಾಡು ತಪ್ಪಿಸಿಕೊಂಡು ಮನೆಯಲ್ಲಿ ಕೂತು ಉಣ್ಣುವುದು ಸಾಧ್ಯವಿಲ್ಲ. ಜಾತಿಗಳಲ್ಲಿ ಬಡತನವಿರಬಹುದು. ಆದರೆ ಅವರನ್ನು ಬಳಸಿಕೊಳ್ಳುವ ಜಾತಿನಾಯಕರುಗಳಾರೂ ಬಡವರಲ್ಲ. ಐಷರಾಮಿ ಬಂಗಲೆ ಕಾರು ದೇಹದ ತುಂಬ ಬಂಗಾರದ ಒಡವೆಗಳು ಅನೈತಿಕ ಸುಖಗಳಿಗೇನೂ ಕಡಿಮೆಯಿಲ್ಲ.
ಇವುಗಳನ್ನೆಲ್ಲಾ ತಿಪ್ಪೆಗೆಸೆದು ನೋಡಿದರೆ ನಮ್ಮ ದೇಶಕ್ಕೆ ಬೇಕಿರುವುದು ನಿಜಕ್ಕೂ ಜಾತಿಗಣತಿಯಲ್ಲ. ಗಣತಿಯಾಗಬೇಕಿರುವುದು ನಿರುದ್ಯೋಗಿಗಳ, ಶಿಕ್ಷಣವಂಚಿತರ, ಜಾತಿಭೇದ ರಹಿತ ಬಡವರ, ನಿರ್ಗತಿಕರ, ಅವಕಾಶವಂಚಿತರ, ಶ್ರಮಜೀವಿಗಳ, ಪ್ರತಿಭಾ ವಂತರ, ಅಸಹಾಯಕರ, ಸಾಮಾಜಿಕ ಸಮರ್ಥರ ಗಣತಿಯಾಗಿ ಅದರಿಂದ ಅವರ ಕುಟುಂಬಕ್ಕೆ ಮತ್ತು ಸಮಾಜಕ್ಕೆ ದೇಶಕ್ಕೆ
ಪೂರಕ ವಾಗಿ ಪ್ರಯೋಜನ ಮತ್ತು ಉತ್ತೇಜನಗಳಾಗಬೇಕಿದೆ.
ಇಂದು ಯಾವ ಜಾತಿಯಲ್ಲಿ ಬಡವರಿಲ್ಲ ಹೇಳಿ?. ಚಮ್ಮಾರರಿಂದ ಹಿಡಿದು ಬರಿಯ ದಕ್ಷಿಣೆಯಿಂದ ಸಂಸಾರ ನಿರ್ವಹಿಸುವ ಬ್ರಾಹ್ಮಣರವರೆಗೂ ಎಲ್ಲಾ ಜಾತಿಗಳಲ್ಲೂ ಕಡುಬಡವರು ಅಶಕ್ತರು ಅಸಹಾಯಕರು ಅಸಂಘಟಿತರಿದ್ದಾರೆ. ದಲಿತವರ್ಗದಲ್ಲಿ ಐಷಾರಾಮಿ ನಾಯಕರು ಐಎಎಸ್ ಮಟ್ಟದ ಅಽಕಾರಿಗಳಿರುವಂತೆ ಪೌರಕಾಯಕ ಮಾಡುವ ಕಡುಬಡವರೂ ಇದ್ದಾರೆ.
ಹಾಗೆಯೇ ಉನ್ನತ ಶಿಕ್ಷಣ ಅದ್ಭೂತ ತಂತ್ರಗಾರಿಕೆ, ಅಪ್ರತಿಮ ನೈಪುಣ್ಯತೆ, ಪ್ರತಿಭಾವಂತ ಸಮರ್ಥರು ಎಲ್ಲಾ ಜಾತಿಗಳಲ್ಲೂ
ಬೆಳೆದಿದ್ದಾರೆ. ಜತೆಗೆ ನೀಚರು, ಕಪಟಿಗಳು, ಸ್ವಾರ್ಥಿಗಳು, ಮೈಗಳ್ಳರು, ಸೋಂಬೇರಿಗಳು ಎಲ್ಲಾ ಜಾತಿಗಳಲ್ಲೂ ಇದ್ದಾರೆ. ಕೇವಲ ಜಾತಿ ಆಧರಿಸಿ ಆಡಳಿತ ನಡೆಸುವ ಕಾಲ ಇದಲ್ಲ. ಎಲ್ಲಕ್ಕೂ ಜಾತಿಯನ್ನೇ ಮಾನದಂಡವಾಗಿಸುವುದು ಸಮಾಜದ ಏಳಿಗೆಗೆ ಮಾರಕ. ಪ್ರತಿಯೊಬ್ಬರಿಗೂ ಜಾತ್ಯಾತೀತವಾಗಿ ಅವಕಾಶಗಳು ಸ್ಥಾನಮಾನಗಳು ಲಭಿಸಬೇಕಿರುವುದು ನ್ಯಾಯಯುತ ಮತ್ತು ಸಮಾನತೆಯ ದ್ಯೋತಕ.
ಪ್ರಜೆಗಳು ಮತದಾನ ಮಾಡುವ ಮತಗಟ್ಟೆಯಲ್ಲಿ ದಲಿತರ ಸಾಲು ಹಿಂದುಳಿದವರ ಸಾಲು ಅಲ್ಪಸಂಖ್ಯಾತರ ಸಾಲು ಒಕ್ಕಲಿಗರ ಬೂತು ಕುರುಬರ ಬೂತು ಬ್ರಾಹ್ಮಣರ ಬೂತು ಎಂದೇನಾದರು ಇದೆಯೇ?. ಹಾಗಿದ್ದಮೇಲೆ ಶಾಸಕಾಂಗಕ್ಕೇಕೆ ಜಾತಿಗಳ ದಾಹ?. ಆಯಾಕಟ್ಟಿನಲ್ಲಿ ಸ್ವಜಾತಿಯವರನ್ನೇ ಸ್ಥಾಪಿಸಿಕೊಳ್ಳುವ ಮೋಹ?. ಶಾಲೆಯಲ್ಲಿ ವಿದ್ಯಾರ್ಥಿಗಳ ಉತ್ತೀರ್ಣಕ್ಕೆ ಅಂಕಗಳೇ ಹೊರತು ಜಾತಿಯಲ್ಲ. ಸೇವಾ ನಿಯಮಗಳ ಪ್ರಕಾರ ಅರ್ಹತೆ ಇಲ್ಲದಿದ್ದರೆ ಸರಕಾರದಲ್ಲಿ ಗುಮಸ್ತನಾಗಲೂ ಸಾಧ್ಯವಿಲ್ಲ. ಐವತ್ತು ಮಂದಿಯನ್ನು ಸುರಕ್ಷಿತವಾಗಿ ಸಾಗಿಸುವ ಬಸ್ ಚಾಲಕನ ಜಾತಿ ಯಾವುದು ಬೇಕಿಲ್ಲ. ಪ್ರಜ್ಞೆತಪ್ಪಿದಾಗ ಬಂದು ಚಿಕಿತ್ಸೆ ನೀಡಿ ಹೊರಡುವ ವೈದ್ಯರುಗಳ ಜಾತಿ ತಿಳಿದುಕೊಳ್ಳುವ ದರ್ದು ಬೇಕಿಲ್ಲ.
ಸಾವಿರಾರು ಮಂದಿಯನ್ನು ಕೊಂಡೊಯ್ಯುವ ರೈಲಿನ ಚಾಲಕನ ಮುಖವನ್ನೂ ನೋಡಿರುವುದಿಲ್ಲ. ಮಧ್ಯರಾತ್ರಿಯಲ್ಲಿ ವಿದ್ಯುತ್ ಕೈಕೊಟ್ಟರೆ ಕೂಡಲೇ ದುರಸ್ತಿಗೊಳಿಸುವ ನೌಕರ ಯಾರೆಂದೇ ಗೊತ್ತಿರುವುದಿಲ್ಲ. ಪ್ರತಿನಿತ್ಯ ಎದುರಾಗುವ ಪೇಪರ್ ಹಾಲಿನ ಹುಡುಗರು ಆಟೋ ಟ್ಯಾಕ್ಸಿ ತರಕಾರಿ ಅಂಗಡಿ ಹೋಟೆಲ್, ಪಾನಿಪುರಿ ಗಾಡಿಯವರ ಜಾತಿಯನ್ನು ಯೋಚಿಸುವುದಿಲ್ಲ. ಅಷ್ಟೇ ಏಕೆ ದೇಶದ ಇಂದಿನ ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿಗಳ ಜಾತಿ ಯಾವುದೆಂದು ಶೇ.೯೯ರಷ್ಟು ಮಂದಿಗೆ ತಿಳಿದಿಲ್ಲ.
ಆದರೆ ವಿಧಾನಸೌಧದಲ್ಲಿ ರಾರಾಜಿಸಲು ಮಾತ್ರ ಜಾತಿಗಣತಿ ಎಂಬ ಊರುಗೋಲು ಏಕೆ ಬೇಕು?. ಏಕೆಂದರೆ ಈಗಿನ ಬಹುತೇಕ
ನಾಯಕರಿಗೆ ಹೋರಾಟ, ಪ್ರಾಮಾಣಿಕತೆ, ಹೆಮ್ಮೆಯ ನೈತಿಕತೆ, ಸಾಧನೆ, ಸಂಸ್ಕಾರಗಳಿಂದ ಮತಪಡೆಯುವ ಯೋಗ್ಯತೆಗಳಿಲ್ಲ. ಈಗೇನಿದ್ದರೂ ಜಾತಿ ಧರ್ಮಗಳನ್ನು ಸದಾ ತದ್ವಿರುದ್ಧವಾಗಿಟ್ಟು ಅವುಗಳು ಎಂದಿಗೂ ಒಂದಾಗದೆ ಸಹಬಾಳ್ವೆ ಕಾಣದಂತೆ ಮಾಡಿ ವೋಟ್ಬ್ಯಾಂಕ್ನ ಖಾತೆಯನ್ನು ಸುಭದ್ರವಾಗಿಸಿಕೊಂಡು ಚುನಾವಣೆ ಎದುರಿಸಿ ಗೆದ್ದುಬರಬೇಕು. ಅದಕ್ಕಾಗಿ ಜಾತಿ ಜನಗಣತಿ ನಡೆಯುತ್ತಿರಬೇಕು. ಇದೇ ನಮ್ಮ ಜಾತ್ಯಾತೀತ ದೇಶದ ದುರಂತ.