ತಿಳಿರು ತೋರಣ
srivathsajoshi@yahoo.com
ಸುವರ್ಣಮಹೋತ್ಸವ ನಡೆಯುವ ಸಭಾಂಗಣದ ಆವರಣದಲ್ಲಿ ‘ಕಣ್ಣಿಗೆ ಹಬ್ಬ’ವೆನಿಸಲಿರುವ ಇನ್ನೂ ಕೆಲವು ಅಂಶಗಳಿವೆ. ಕನ್ನಡತಾಯಿ ಭುವನೇಶ್ವರಿ ಮತ್ತು ಕಾವೇರಿ ಮಾತೆಯ ಮೆರವಣಿಗೆಗೆಂದೇ ಒಂದು ರಥ ಸಿದ್ಧವಾಗಿದೆ. ಹಂಪಿಯ ಪ್ರಖ್ಯಾತ ಕಲ್ಲಿನ ರಥದ ಪಡಿಯಚ್ಚು, ಸುಮಾರು ೧೧ ಅಡಿ ಎತ್ತರ, ಮುಂದಿನ ಭಾಗದ ಆನೆಗಳೂ ಸೇರಿದಂತೆ ೧೫ ಅಡಿ ಉದ್ದದ ಬೃಹತ್ ಕಲಾಕೃತಿ.
ಅಮೆರಿಕ ಸಂಯುಕ್ತ ಸಂಸ್ಥಾನಗಳ ಉದ್ದಗಲಕ್ಕೂ ಹುಟ್ಟಿ ಬೆಳೆದಿರುವ ಕನ್ನಡ ಕೂಟಗಳ ಲೆಕ್ಕ ಹಾಕಿದರೆ ಹತ್ತಿರ ಹತ್ತಿರ ಐವತ್ತಾಗಬಹುದು. ಅವುಗಳಲ್ಲಿ ಹೆಚ್ಚು ಕ್ರಿಯಾಶೀಲ ಯಾವುವು ಎಂದು ಪಟ್ಟಿ ಮಾಡಹೊರಟರೆ ಚರ್ಚಾಸ್ಪದ ವಾದೀತು, ಕ್ರಿಯಾಶೀಲತೆಯ ಮಾನದಂಡ ಸಾಪೇಕ್ಷ ಆದ್ದರಿಂದ.
ಮೊತ್ತಮೊದಲು ಸ್ಥಾಪನೆ ಆದದ್ದು ಯಾವುದು ಎಂದು ಗುರುತಿಸಹೊರಟರೂ ಒಮ್ಮತದ ಅಭಿಪ್ರಾಯ ಮೂಡುವುದು ಕಷ್ಟವೇ. ಏಕೆಂದರೆ ಹೆಚ್ಚಿನವೆಲ್ಲ ಅನೌಪಚಾರಿಕವಾಗಿ ಗೆಳೆಯರ ಬಳಗದಂತೆ, ಅಥವಾ ವಿಳಾಸ ಕೈಪಿಡಿ ಗಳಂತೆ ಆರಂಭವಾದವು, ಕ್ರಮೇಣ ನೋಂದಾವಣೆಗೊಂಡು ಪ್ರವರ್ಧ ಮಾನಕ್ಕೆ ಬಂದಂಥವು. ಮತ್ತೆ ಕೆಲವು ನಾಮ್‌ಕೇವಾಸ್ತೇ ಅಸ್ತಿತ್ವದವೂ ಇರಬಹುದೆನ್ನಿ. ಆದರೆ ನನಗನಿಸುವ ಮಟ್ಟಿಗೆ, ಅಮೆರಿಕದ ರಾಜಧಾನಿ ಪ್ರದೇಶದಲ್ಲಿರುವ ನಮ್ಮ ‘ಕಾವೇರಿ’ ಕನ್ನಡ ಸಂಘವು ಅತ್ಯಂತ ಕ್ರಿಯಾಶೀಲವೂ ಹೌದು, ಅಮೆರಿಕದಲ್ಲಿ ಸ್ಥಾಪನೆಯಾದ ಮೊತ್ತಮೊದಲ ಕನ್ನಡ ಸಂಘ ಎಂಬ ಖ್ಯಾತಿಯದೂ ಹೌದು.
ಇದಕ್ಕೀಗ ಐವತ್ತು ಸಾರ್ಥಕ ಸಂವತ್ಸರಗಳನ್ನು ಪೂರೈಸಿದ ಪುಳಕ ಕ್ಷಣ. ಭಾರತದ ಸ್ವಾತಂತ್ರ್ಯ ಅಮೃತಮಹೋತ್ಸವ ಶುಭ
ಸಂದರ್ಭದಲ್ಲೇ ಇದು ಬಂದಿರುವುದು ಒಂಥರದಲ್ಲಿ ಹಾಲು-ಜೇನಿನ ಮಿಶ್ರಣ. ಇದೇ ಬರುವ ಶುಕ್ರವಾರ, ಶನಿವಾರಗಳಂದು (ಆಗಸ್ಟ್ ೨೬, ೨೭) ಎರಡು ದಿನ ‘ಕಾವೇರಿ’ ಸುವರ್ಣ ಮಹೋತ್ಸವದ ಆಚರಣೆ. ಅಭೂತಪೂರ್ವ ಅದ್ದೂರಿಯಿಂದ ನಡೆಸ ಬೇಕೆಂದು ಕಾವೇರಿಗರೆಲ್ಲರ ಅತ್ಯುತ್ಸಾಹ. ಅದರದ್ದೊಂದು ‘ಪರದೆಯೆತ್ತಿ ಇಣುಕು’ (ಕರ್ಟೇನ್ ರೈಸರ್) ಈ ವಾರದ ತೋರಣ.
ಐದಾರು ದಶಕಗಳಷ್ಟು ಹಿಂದಕ್ಕೆ ಸರಿದರೆ, ಆಗ ಅಮೆರಿಕಕ್ಕೆ ಬಂದು ನೆಲೆಸಿದ್ದ ಕನ್ನಡಿಗರ ಸಂಖ್ಯೆ ಬಿಡಿ, ಒಟ್ಟಾರೆಯಾಗಿ
ಭಾರತೀಯರ ಸಂಖ್ಯೆಯೂ ಕಿರಿದೇ. ಉನ್ನತ ಶಿಕ್ಷಣಕ್ಕಾಗಿ ಇಲ್ಲಿಯ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶಪಡೆದವರು, ಓದಿನ
ಬಳಿಕ ವೃತ್ತಿನಿರತರಾದವರು ಅಲ್ಲೊಬ್ಬ ಇಲ್ಲೊಬ್ಬರಂತೆ ಕಂಡುಬಂದರೆ ಹೆಚ್ಚು. ಅಂತಹ ಕಾಲಘಟ್ಟದಲ್ಲೇ ಕಾವೇರಿಯ
ಉಗಮವಾದದ್ದು. ‘೧೯೭೦-೭೧ರ ಆಸುಪಾಸು. ಬಾಲ್ಟಿಮೋರ್ ಬಂದರುಪಟ್ಟಣದಲ್ಲಿ ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯ ದಲ್ಲಿ ಪದವಿ ಪಡೆದ ಬೆಳವಾಡಿ ಶಂಕರ್ ಎಂಬ ಕನ್ನಡಿಗ, ಮೇರಿಲ್ಯಾಂಡ್ ಪ್ರಾಂತ್ಯದ ಆರೋಗ್ಯ ಇಲಾಖೆಯಲ್ಲಿ ಕೆಲಸ
ಮಾಡುತ್ತಿದ್ದರು.
ಮಿಷಿಗನ್ ಪ್ರಾಂತ್ಯದ ಆನ್‌ಆರ್ಬರ್ ಯುನಿವರ್ಸಿಟಿಯಲ್ಲಿದ್ದ ಕನ್ನಡಿಗರು ತಯಾರಿಸಿದ್ದ ದೂರವಾಣಿ ಸಂಖ್ಯೆಗಳ ಪಟ್ಟಿಯೊಂದು ಅವರ ಕೈಸೇರಿತು. ಅದರಲ್ಲಿ ಅವರ ಹೆಸರೂ ಇದ್ದಿತು. ಅಂದೇ ಅವರ ಮನಸ್ಸಿನಲ್ಲಿ ಕನ್ನಡ ಸಂಘವೊಂದನ್ನು ಪ್ರಾರಂಭಿಸುವ ಇಚ್ಛೆ ಉಂಟಾಯಿತು. ಪತ್ನಿ ಶಾರದಾರೊಂದಿಗೆ ಮತ್ತು ಹಾಪ್‌ಕಿನ್ಸ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಗೆಳೆಯ ಶ್ರೀಧರ್‌ರೊಂದಿಗೆ ಚರ್ಚಿಸಿ ಅವರ ಸಹಕಾರ ದೊರಕುವುದೆಂದು ಅರಿತು, ಈಶಾನ್ಯ ಅಮೆರಿಕದ ಕನ್ನಡಿಗರ ಕೂಟವೊಂದನ್ನು ಕಟ್ಟುವ ಉದ್ದೇಶದಿಂದ, ನ್ಯೂಯಾರ್ಕ್‌ನ ಕೆಲ ಕನ್ನಡಿಗರನ್ನೂ ಭೇಟಿಯಾದರು.
ಅವರ ಆರಂಭಿಕ ಪ್ರತಿಕ್ರಿಯೆ ನೀರಸವಾಗಿತ್ತು. ಹಾಗಾಗಿ ಬಾಲ್ಟಿಮೋರ್ ಸುತ್ತಮುತ್ತಲ ಕನ್ನಡಿಗರ ವಿಳಾಸ ಮತ್ತು ದೂರವಾಣಿ
ಸಂಖ್ಯೆಗಳನ್ನು ಕಲೆಹಾಕಿ, ೧೯೭೨ರ ಸಪ್ಟೆಂಬರ್‌ನಲ್ಲಿ ಕೆಲವು ಆಸಕ್ತ ಕನ್ನಡಿಗರು ಹಾಪ್‌ಕಿನ್ಸ್ ಹೋಂವುಡ್ ಕ್ಯಾಂಪಸ್ಸಿನ
ಗ್ರ್ಯಾಜುಯೇಟ್ ಕ್ಲಬ್‌ನಲ್ಲಿ ಸೇರಿದರು. ಕನ್ನಡ ಸಂಘಕ್ಕೆ ‘ಕಾವೇರಿ’ ಎಂಬ ಹೆಸರನ್ನು ಅಲ್ಲಿ ಸರ್ವಾನುಮತದಿಂದ ಅನುಮೋದಿಸ ಲಾಯಿತು. ಹೀಗೆ ಅಮೆರಿಕದಲ್ಲಿ ಕನ್ನಡ ಸಮುದಾಯ ಸಂಘಟಿಸಿದ ಮೊತ್ತಮೊದಲ ಕನ್ನಡ ಸಂಘವಾಗಿ ಕಾವೇರಿ ಜನ್ಮ ತಾಳಿತು. ಮಿಷಿಗನ್‌ನ ಆನ್‌ಆರ್ಬರ್ ಯುನಿವರ್ಸಿಟಿಯಲ್ಲಿದ್ದ ಕೆಲ ಕನ್ನಡಿಗರು ಅದಾಗಲೇ ‘ಪಂಪ’ ಹೆಸರಿನ ಕನ್ನಡ ಸಂಘವೊಂದನ್ನು ಆರಂಭಿಸಿದ್ದರಾದರೂ ಅದು ಯುನಿವರ್ಸಿಟಿ ಕ್ಯಾಂಪಸ್ಸಿಗಷ್ಟೇ ಸೀಮಿತವಾಗಿತ್ತು. ಆ ದೃಷ್ಟಿಯಿಂದ ಕಾವೇರಿಯೇ ಸಮುದಾಯವ್ಯಾಪಿ ಮೊತ್ತಮೊದಲ ಸಂಘ.
ಬಾಲ್ಟಿಮೋರ್ ಸುತ್ತಮುತ್ತಲ ಕನ್ನಡಿಗರನ್ನು ಸಂಘಟಿಸುವಲ್ಲಿ ಹೆಚ್ಚಿನ ಆಸಕ್ತಿ ತೋರಿದ್ದ, ಸ್ವತಃ ಬರಹಗಾರ್ತಿಯೂ ಆಗಿದ್ದ, ಕಾವೇರಿಯ ಹುಟ್ಟಿಗಾಗಿ ಶ್ರಮವಹಿಸಿ ದುಡಿದಿದ್ದ ಸಾವಿತ್ರಿದೇವಿ ನಾಯ್ಡು ಅವರನ್ನು ಅಧ್ಯಕ್ಷಸ್ಥಾನಕ್ಕೆ ಸೂಚಿಸುವ ಶಂಕರ್‌ರ ಯೋಜನೆ ಕೈಗೂಡಲಿಲ್ಲ. ಅನೌಪಚಾರಿಕವಾಗಿ ಪ್ರಾರಂಭಗೊಂಡಿದ್ದ ಸಂಸ್ಥೆಗೆ ಕಾರ್ಯಕಾರಿ ಸಮಿತಿಯನ್ನು ರಚಿಸುವುದೂ ಸಾಧ್ಯವಾಗಲಿಲ್ಲ. ಶಂಕರ್ ಮುಂತಾದವರು ಬಾಲ್ಟಿಮೋರ್ ನಗರವೇ ಅಲ್ಲದೇ ವಾಷಿಂಗ್ಟನ್ ನಗರದ ಸುತ್ತಮುತ್ತಲ ಕನ್ನಡಿಗರನ್ನೂ ಕಾವೇರಿಯಲ್ಲಿ ಆಸಕ್ತಿ ವಹಿಸುವಂತೆ ಪ್ರೋತ್ಸಾಹಿಸುವ ಯೋಚನೆಯಲ್ಲಿದ್ದಾಗಲೇ, ವಾಷಿಂಗ್ಟನ್ ಪ್ರದೇಶದ ಗುಂಪು ತಮ್ಮ ಪ್ರದೇಶದಲ್ಲಿ ಏರ್ಪಾಟಾಗಿದ್ದ ವನವಿಹಾರವೊಂದಕ್ಕೆ ಬಾಲ್ಟಿಮೋರ್ ಮಂದಿಯನ್ನೂ ಆಹ್ವಾನಿಸಿತು.
ಆ ವನವಿಹಾರದಲ್ಲಿ ಭಾಗವಹಿಸಿದ್ದ ದಂಪತಿಗಳು: ಭಾಗ್ಯಾ ಮತ್ತು ರಂಗಾಚಾರ್, ಭಾರತಿ ಮತ್ತು ಭೋಗಾರಾಂ ಸೆಟ್ಟಿ, ನಿರ್ಮಲಾ ಮತ್ತು ಮಾಗಲ್ ರಾವ್, ವಿಮಲಾ ಮತ್ತು ಚನ್ನಬಸಪ್ಪ, ಕಾಂತಾ ಮತ್ತು ಗಂಗಾಧರ ಕೋರಿ, ಉಮಾ ಮತ್ತು ರಾಜಶೇಖರ್, ರಾಜಲಕ್ಷ್ಮಿ ಮತ್ತು ಎಸ್. ಕೃಷ್ಣಮೂರ್ತಿ. ಅಲ್ಲಿ ಸೇರಿದ್ದವರೆಲ್ಲ ತುಂಬು ಉತ್ಸಾಹದಿಂದ ಕಾವೇರಿ ಸಂಘವನ್ನು ಕಟ್ಟಲು ಕೈಜೋಡಿಸುವುದಾಗಿ ಪರಸ್ಪರ ಆಶ್ವಾಸನೆಯಿತ್ತರು.
ಕಾವೇರಿಯ ಮೊದಲ ಸರ್ವಸದಸ್ಯ ಸಭೆ ಬಾಲ್ಟಿಮೋರ್‌ನ ಗ್ರೇಸ್-ಎಪಿಸ್ಕೋಪಲ್ ಚರ್ಚ್‌ನ ಸಭಾಂಗಣದಲ್ಲಿ ಏರ್ಪಾಟಾಯಿತು. ವಿಮಲಾ ಚನ್ನಬಸಪ್ಪ ಅಧ್ಯಕ್ಷೆಯಾಗಿಯೂ, ಪ್ರಫುಲ್ಲಚಂದ್ರ ಉಪಾಧ್ಯಕ್ಷರಾಗಿಯೂ, ಬೆಳವಾಡಿ ಶಂಕರ್ ಕಾರ್ಯದರ್ಶಿಯಾಗಿಯೂ ಚುನಾಯಿತರಾದರು. ಶಂಕರ್ ಮತ್ತು ಶ್ರೀಧರ್ ಕಾವೇರಿಯ ಸಂವಿಧಾನವನ್ನು ಬರೆಯುವ ಜವಾಬ್ದಾರಿ ಹೊತ್ತರು. ಶಂಕರ್‌ರ ಅಪಾರ್ಟ್‌ಮೆಂಟ್‌ನಲ್ಲೇ ಕನ್ನಡ ತರಗತಿಗಳು ಪ್ರಾರಂಭವಾದವು. ವೈ.ಎಸ್.ಇಂದಿರಾರನ್ನು ಕರ್ನಾಟಕದಲ್ಲಿ ಕಾವೇರಿಯ ಪ್ರತಿನಿಧಿಯಾಗುವಂತೆ ಕೋರಲಾಯಿತು.
ಅವರ ಪತಿ ಸುಬ್ರಹ್ಮಣ್ಯ ಎಂಬುವವರು ಕಾವೇರಿಯ ಮೊದಲ ಲಾಂಛನವನ್ನು ತಯಾರಿಸಿ ಕಳಿಸಿದರು. ಈ ದಂಪತಿಯ
ಸಹಾಯದಿಂದ ಕನ್ನಡ ಸಾಹಿತ್ಯ ಪರಿಷತ್ತು ಹಲವು ಕನ್ನಡ ಪುಸ್ತಕಗಳನ್ನು ಕಳುಹಿಸಿಕೊಡಲು ಒಪ್ಪಿತು. ಕರ್ನಾಟಕ ಸರ್ಕಾರ
ಒಂದು ಕನ್ನಡ ಬೆರಳಚ್ಚಿನ ಯಂತ್ರವನ್ನೂ ಕೊಟ್ಟಿತು. ಸಂವಿಧಾನಶಿಲ್ಪಿಗಳು ಇಲ್ಲಿಯ ಅಧಿಕಾರಿಗಳನ್ನು ಭೇಟಿ ಮಾಡಿ
ಕಾವೇರಿಯನ್ನು ಲಾಭೋದ್ದೇಶವಿಲ್ಲದ ಸಂಸ್ಥೆಯಾಗಿ ನೋಂದಾಯಿಸಿದರು.’- ಎಂಬ ಮಾಹಿತಿ ಸಿಗುತ್ತದೆ, ಸುವರ್ಣ
ಮಹೋತ್ಸವದ ಸಂದರ್ಭದಲ್ಲಿ ಹೊರಬರುತ್ತಿರುವ ಸ್ಮರಣಸಂಚಿಕೆಯಲ್ಲಿ ಡಾ. ಮೈ. ಶ್ರೀ. ನಟರಾಜ್ ಬರೆದಿರುವ ಲೇಖನ ವೊಂದರಲ್ಲಿ.
ಮೇಲೆ ಉಲ್ಲೇಖಿಸಿದ ಹೆಸರುಗಳಲ್ಲಿ ರಾಜಶೇಖರ್, ಕೃಷ್ಣಮೂರ್ತಿ, ಭಾರತಿ ಸೆಟ್ಟಿ ಮುಂತಾದವರೆಲ್ಲ ಈಗಲೂ ನಮ್ಮೊಂದಿಗಿದ್ದು ಕಾವೇರಿಗೆ ಅಕ್ಷರಶಃ ಆಧಾರಸ್ತಂಭಗಳೇ ಆಗಿ ಮುಂದುವರಿದಿರುವುದು ನಿಜಕ್ಕೂ ಭಾಗ್ಯವೇ. ಅದೇವೇಳೆಗೆ, ನವತರುಣರೂ ಒಂದೆರಡು ವರ್ಷಗಳ ಹಿಂದೆಯಷ್ಟೇ ಈ ಪ್ರದೇಶಕ್ಕೆ ಬಂದವರೂ ಕಾವೇರಿಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಳ್ಳುತ್ತಿರುವುದು, ಕೆಲವು ಉತ್ಸಾಹಿಗಳಂತೂ ಅಧ್ಯಕ್ಷಸ್ಥಾನದವರೆಗೂ ಮೇಲೇರುವುದು ಕಾವೇರಿಯ ಪ್ರಶಂಸಾರ್ಹ ವೈಶಿಷ್ಟ್ಯ. ಕಾವೇರಿಯಲ್ಲಿ ವರ್ಷಕ್ಕೊಬ್ಬರಂತೆ ಅಧ್ಯಕ್ಷರು ಮತ್ತವರ ಕಾರ್ಯಕಾರಿ ಸಮಿತಿ.
ಐವತ್ತು ವರ್ಷಗಳಲ್ಲಿ ಒಟ್ಟು ನಲ್ವತ್ತೆಂಟು ಅಧ್ಯಕ್ಷರು ಕಾವೇರಿಯ ಸಾರಥ್ಯ ವಹಿಸಿದ್ದಾರೆ. ಇಲ್ಲಿ ಯಾವೊಬ್ಬ ವ್ಯಕ್ತಿಗಾಗಲೀ ಅಥವಾ ಯಾವ ಒಂದು ಗುಂಪಿಗಾಗಲೀ ಸಂಘಕ್ಕಿಂತ ಹೆಚ್ಚಿನ ಪ್ರಾಧಾನ್ಯವಿಲ್ಲ. ಹೀಗಾಗಿ, ಸದಸ್ಯರು ಪ್ರತಿ ವರ್ಷವೂ ಹೊಸ ಪದಾಽಕಾರಿಗಳನ್ನು ಆಯ್ಕೆ ಮಾಡುತ್ತ ಬಂದಿದ್ದಾರೆ. ಪ್ರಜಾಪ್ರಭುತ್ವವನ್ನು, ‘ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಗಸು’ ತತ್ತ್ವವನ್ನು ಇಷ್ಟೊಂದು ಆದರ್ಶ ರೀತಿಯಲ್ಲಿ ಪಾಲಿಸಿರುವ ಸಂಘಸಂಸ್ಥೆ ಬಹುಶಃ ಬೇರೊಂದು ಇರಲಿಕ್ಕಿಲ್ಲ.
ಕಾವೇರಿಯ ಮಾಜಿ ಅಧ್ಯಕ್ಷರ ಪೈಕಿ ನಮ್ಮನ್ನಗಲಿರುವ ಕೆಲವರನ್ನು ಬಿಟ್ಟರೆ ಹೆಚ್ಚಿನವರೆಲ್ಲ ಈ ಸುವರ್ಣ ಮಹೋತ್ಸವ ಸಮಾರಂಭದ ತಯಾರಿಗಳಲ್ಲೂ ಬೇರೆಬೇರೆ ಸಮಿತಿಗಳಲ್ಲಿ ತೊಡಗಿಸಿಕೊಂಡು ಕೆಲಸ ಮಾಡುವುದನ್ನು ನೋಡಿದರೆ ಹೆಮ್ಮೆಯೆನಿಸುತ್ತದೆ. ಹಾಗೆ ನೋಡಿದರೆ, ಕಾವೇರಿಯನ್ನು ಅದರ ಶೈಶವಾವಸ್ಥೆಯಿಂದಲೂ ಪೋಷಿಸಿಕೊಂಡು ಬಂದಿರುವವರಿಗೆ ಈ ಸುವರ್ಣಮಹೋತ್ಸವದ ಬಗೆಗೆ ತುಸು ಹೆಚ್ಚೇ ಅಭಿಮಾನ.
ಹಾಗಿದ್ದರೂ ಇದು ಎಲ್ಲ ವಯೋಮಾನದವರನ್ನೂ ಕಾತುರರನ್ನಾಗಿಸಿರುವುದು ಹೌದು. ಇನ್ನೊಂದು ಮುಖ್ಯ ಕಾರಣವೂ ಇದೆ: ಕಳೆದೆರಡು ವರ್ಷಗಳಲ್ಲಿ ಕೋವಿಡ್ ಕರಿನೆರಳಿನಲ್ಲಿ ಮುದುಡಿಹೋದ ಮನಸ್ಸುಗಳಿಗೆ ಲವಲವಿಕೆ ಮರುಕಳಿಸುವುದಕ್ಕೆ ಇದೊಂದು ಸುಸಂದರ್ಭ. ಎರಡು ದಿನಗಳ ಉತ್ಸವದಲ್ಲಿ ಏನೇನಿರುತ್ತದೆ? ‘ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ…’ ಖ್ಯಾತಿಯ ಗಾಯಕ ಹೆಮ್ಮೆಯ ಕನ್ನಡಿಗ ವಿಜಯಪ್ರಕಾಶ್ ಬರುತ್ತಿದ್ದಾರೆ. ಶನಿವಾರ ರಾತ್ರಿ ಅವರ ರಸಮಂಜರಿ ಕಾರ್ಯಕ್ರಮ. ಹೊಸ ಪ್ರತಿಭೆ ನವೀನ್ ಸಜ್ಜು ಸಹ ಬರುತ್ತಿದ್ದಾರೆ.
‘ಸೋಜುಗದ ಸೂಜುಮಲ್ಲಿಗೆ…’ ಖ್ಯಾತಿಯ ಗಾಯಕಿ ಅನನ್ಯಾ ಭಟ್ ಆಗಲೇ ಬಂದಿಳಿದಿದ್ದಾರೆ, ಅವರ ಕಾರ್ಯಕ್ರಮ ಶುಕ್ರವಾರ ಸಂಜೆ. ಕಾವೇರಿಯಲ್ಲಿ ನಗುವಿನ ಪ್ರವಾಹ ಹರಿಸಲಿಕ್ಕೆ ಪ್ರೊ.ಕೃಷ್ಣೇಗೌಡರೂ ಬರುತ್ತಿದ್ದಾರೆ. ಆಹ್ವಾನಿತ ಕಲಾವಿದರು ಇಷ್ಟೇ. ಏಕೆಂದರೆ ಹೊಳೆಯುವ ಪ್ರತಿಭೆಗಳು ಕಾವೇರಿಯಲ್ಲೇ ವಿಪುಲವಾಗಿ ಇವೆ! ಸಾಫ್ಟ್‌ವೇರ್ ಟೆಕ್ಕಿಯಾಗಿದ್ದೂ ನಾಟಕ ನಿರ್ದೇಶನದಲ್ಲಿ ಅನನ್ಯ ಛಾಪು ಮೂಡಿಸಿರುವ, ‘ರಬ್ಡೀ’ ಮುಂತಾದ ನಾಟಕಗಳ ಪ್ರದರ್ಶನಗಳನ್ನು ದೇಶ-ವಿದೇಶಗಳಲ್ಲಿ ನಡೆಸಿರುವ ಹೆಮ್ಮೆಯ ಕಾವೇರಿಗ ನಿತೀಶ್ ಶ್ರೀಧರ್ ನಿರ್ದೇಶನದಲ್ಲಿ ‘ಮೈಸೂರು ಮಲ್ಲಿಗೆ’ ನಾಟಕ ಪ್ರದರ್ಶನವಿದೆ.
ಇಲ್ಲಿ ಬಹುಭಾಷಾ ರಂಗಭೂಮಿಯಲ್ಲಿ ಹೆಸರಾಗಿರುವ ಸುಮಾ ಮುರಳೀಧರ್ ನಿರ್ದೇಶನದಲ್ಲಿ ಕುವೆಂಪುರವರ ಪ್ರಖ್ಯಾತ ‘ಬೊಮ್ಮನಹಳ್ಳಿಯ ಕಿಂದರಿಜೋಗಿ’ ಮಕ್ಕಳ ನಾಟಕವಿದೆ. ‘ಜೀವನದಿ-ಭಾವನದಿ’ ಎಂಬೊಂದು ವಿಶೇಷ ನೃತ್ಯರೂಪಕ ಇದೆ. ಕರ್ನಾಟಕದ ಕನ್ನಡಿಗರಿಗೆ ‘ಜೀವನದಿ’ ಆಗಿರುವ ಕಾವೇರಿ, ವಾಷಿಂಗ್ಟನ್ ಡಿ.ಸಿ. ಪ್ರದೇಶದಲ್ಲಿ ನೆಲೆಸಿರುವ ಅಮೆರಿಕನ್ನಡಿಗರಿಗೆ ‘ಭಾವನದಿ’ ಆಗಿರುವ ಕಾವೇರಿ- ಎರಡನ್ನೂ ಭಾವನಾತ್ಮಕವಾಗಿ ಬೆಸೆದ ಅಮೋಘ ಪ್ರಸ್ತುತಿ. ನೃತ್ಯಗುರು ವಾಣಿ ರಮೇಶ್ ನಿರ್ದೇಶನ.
ಐವತ್ತು ವರ್ಷಗಳಲ್ಲಿ ಕಾವೇರಿ ಕನ್ನಡ ಸಂಘದ ಹೆಜ್ಜೆಗುರುತುಗಳ ಸಿಂಹಾವಲೋಕನದ ‘ಕಾವೇರಿ ನಡೆದು ಬಂದ ದಾರಿ’
ಎಂಬೊಂದು ರೂಪಕವೂ ಇದೆ, ಮಣಿ ಶ್ರೀನಿವಾಸ್ ನಿರ್ದೇಶನದಲ್ಲಿ. ಸಂಗೀತವಿದುಷಿ ಉಷಾ ಚಾರ್ ಮತ್ತು ತಂಡದವರಿಂದ ‘ಕನ್ನಡ ತಾಯಿಗೆ ಸಂಗೀತ ಗುಚ್ಛದ ನಮನ’ ಇದೆ. ಬಾಲಪ್ರತಿಭೆಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವೂ ಇದೆ. ಜಗಮಗಿಸುವ ‘ಫ್ಯಾಷನ್ ಶೋ’, ಸ್ಮಿತಾ ಗಿರೀಶ್ ಸಂಯೋಜನೆಯಲ್ಲಿ ‘ಸಮ್ಮಿಲನ’ ನೃತ್ಯಪ್ರಸ್ತುತಿ ಶನಿವಾರದ ಇತರ ಆಕರ್ಷಣೆಗಳು.
ಮರೆತೆ… ಕನ್ನಡ ಚಿತ್ರಗೀತೆಗಳ ರಸದೌತಣವೂ ಇದೆ. ೧೯೬೦ರಿಂದ ೯೦ರವರೆಗಿನ ಆಯ್ದ ಮಧುರ ಗೀತೆಗಳನ್ನು ಹಾಡಲಿರುವ ತಂಡವೊಂದು ತಮ್ಮ ಕಾರ್ಯಕ್ರಮಕ್ಕೆ ‘ಕಾವೇರಿ ತೀರದಲ್ಲಿ ಒಂದು ಹಾಡು…’ ಎಂದೇ ಹೆಸರಿಟ್ಟಿದೆ. ಅಂತೂ ಅವಿಸ್ಮರಣೀಯ ಕಾರ್ಯಕ್ರಮ ಕೊಡಬೇಕೆಂಬ ಉತ್ಸಾಹ ಎಲ್ಲರಿಗೂ. ಅದಷ್ಟು ಮನೋರಂಜನೆಯ ಮಾತಾಯ್ತು. ಊಟ-ತಿಂಡಿ? ಇದೆ, ಪುಷ್ಕಳವಾಗಿ! ಕರ್ನಾಟಕದ ಖಾದ್ಯವೈವಿಧ್ಯ ತಯಾರಾಗುತ್ತಿದೆ.
ಆನಂದ್ ಪೂಜಾರ್ ಹೆಸರನ್ನು ನೀವು ಕೇಳಿರುವ/ಓದಿರುವ ಸಾಧ್ಯತೆಗಳಿವೆ. ಪ್ರಧಾನಿ ಮೋದಿಯವರು ವಾಷಿಂಗ್ಟನ್‌ಗೆ ಬಂದಿದ್ದಾಗ ಅವರಿಗೆ ವಿಶೇಷವಾಗಿ ಸಸ್ಯಾಹಾರ ಭೋಜನ ವ್ಯವಸ್ಥೆ ಒದಗಿಸಿದ್ದ ಇಲ್ಲಿಯ ರೆಸ್ಟೊರೆಂಟ್ ಉದ್ಯಮಿ, ಕನ್ನಡಿಗ. ಸಮ್ಮೇಳನದ ಊಟ-ತಿಂಡಿ ಪೂರೈಕೆ ಅವರಿಂದ. ನಡುವೆ ಬದಲಾವಣೆ ಇರಬೇಕು ಎಂದು, ಶನಿವಾರ ಮಧ್ಯಾಹ್ನದೂಟ ಜೆಎಸ್‌ಎಸ್ ಸಂಸ್ಥೆಯ ಅಡುಗೆಮನೆಯಿಂದ, ಪಕ್ಕಾ ಉತ್ತರ ಕರ್ನಾಟಕ ಶೈಲಿ. ‘ಉತ್ತರ ಕರ್ನಾಟಕ ಅಂದ್ರ ಇಳಕಲ್ ಸೀರಿ ಗಾಂಽ ಟೊಪಿಗಿ; ಔತಣದ ಊಟಕ್ಕ ಕರದ್ರ ಅಂಟಿನ ಉಂಡಿ ಹೋಳಿಗಿ; ತಾಜಾ ಬೆಣ್ಣಿ ಕಟಕ್ ಸೆಜ್ಜಿ ರೊಟ್ಟಿ, ಎಣಗಾಯಿ ಬದ್ನಿಕಾಯಿ ಖಾರ ಕರಿಂಡಿ; ಅಗಸಿ ಶೇಂಗಾ ಗುರೆಳ್ಳು ಹಿಂಡಿ ಕೆಂಪು ಖಾರಕ ಜೋಡಿ; ಪಲ್ಲೆ ಪುಂಡಿ ಮೊಳಕೆ ಉಸುಳಿ
ಹಾಕಿತ್ತು ಮೋಡಿ; ಮೊಸರು ತುಂಬಿದ ಮಣ್ಣಿನ ಗಡಿಗಿ ಚಪ್ಪರಿಸಿತ್ತು ಬಿಟ್ಟೂಬಿಡದ ನಾಲಿಗಿ’ ಎಂದು ಪ್ರಚಾರ ಬೇರೆ ಮಾಡಿಟ್ಟಿದ್ದಾರೆ.
ಸುವರ್ಣಮಹೋತ್ಸವ ನಡೆಯುವ ಸಭಾಂಗಣದ ಆವರಣದಲ್ಲಿ ‘ಕಣ್ಣಿಗೆ ಹಬ್ಬ’ವೆನಿಸಲಿರುವ ಇನ್ನೂ ಕೆಲವು ಅಂಶಗಳಿವೆ. ಕನ್ನಡತಾಯಿ ಭುವನೇಶ್ವರಿ ಮತ್ತು ಕಾವೇರಿ ಮಾತೆಯ ಮೆರವಣಿಗೆಗೆಂದೇ ಒಂದು ರಥ ಸಿದ್ಧವಾಗಿದೆ. ಹಂಪಿಯ ಪ್ರಖ್ಯಾತ ಕಲ್ಲಿನ ರಥದ ಪಡಿಯಚ್ಚು, ಸುಮಾರು ೧೧ ಅಡಿ ಎತ್ತರ, ಮುಂದಿನ ಭಾಗದ ಆನೆಗಳೂ ಸೇರಿದಂತೆ ೧೫ ಅಡಿ ಉದ್ದದ ಬೃಹತ್ ಕಲಾಕೃತಿ. ಇಲ್ಲೇ ಅಮೆರಿಕದಲ್ಲಿ ಎಲ್ಲ ಸಾಮಗ್ರಿಗಳನ್ನೂ ಕೊಂಡುತಂದು ಕೆತ್ತನೆ ಮಾಡಿ ಕಟ್ಟಿರುವಂಥದ್ದು. ಬಿಡಿಸಿ-ಜೋಡಿಸುವ ಅನುಕೂಲವುಳ್ಳದ್ದು.
ಕಾವೇರಿಯ ‘ಆಸ್ಥಾನ ಶಿಲ್ಪಿ’ ಹರಿದಾಸ್ ಲಹರಿ ಅವರೊಂದಿಗೆ ೨೪ ಮಂದಿ ಸ್ವಯಂಸೇವಕರು ಕಳೆದ ಮೂರ್ನಾಲ್ಕು ತಿಂಗಳಿಂದ ಪ್ರತಿ ವಾರಾಂತ್ಯದಲ್ಲೂ ದುಡಿದುದರ ಫಲ. ಬೇರೆ ಆಲಂಕಾರಿಕ ವಸ್ತುಗಳನ್ನು, ವಸ್ತ್ರಗಳನ್ನು ವಿನ್ಯಾಸಗೊಳಿಸು ತ್ತಿದ್ದಾರೆ ಸವಿತಾ ರಾವ್ ತಂಡದವರು. ಇನ್ನೊಂದು ‘ಛತ್ರಿ ಟೀಮ್’ನವರು ಸಿದ್ಧಪಡಿಸಿದ ಬಣ್ಣಬಣ್ಣದ ಛತ್ರಿಗಳ ಮೆರವಣಿಗೆ. ಅಂದಹಾಗೆ ‘ಕಾವೇರಿ ಗೋಲ್ಡ್ ಕಪ್’ ಕ್ರಿಕೆಟ್ ಟೂರ್ನಮೆಂಟೂ ನಡೆದಿತ್ತು. ಭಾಗವಹಿಸಿದ್ದ ತಂಡಗಳ ಹೆಸರುಗಳನ್ನು ನೀವೊಮ್ಮೆ ಓದಲೇಬೇಕು: ಕೆಜಿಎಫ್ ಮಾನ್ಸ್ಟರ್ಸ್, ರಾಕಿ ರನ್, ಆರ್ ಸೀಬೀ, ಶೆಟ್ಟಿ ಮಹಾರಾಜಾಸ್, ದ್ರೋಣ, ಹೊಡಿಮಗ, ರಿಚ್ಮಂಡ್ ವಾರಿಯರ್ಸ್ ಹಾಗೂ ಅಣ್ತಮ್ಮಾಸ್!
ಸ್ಮರಣಸಂಚಿಕೆ ‘ಸುವರ್ಣ ಸಂಭ್ರಮ’ದ ಬಗ್ಗೆಯೂ ಹೇಳಬೇಕು. ಡಾ. ಮೈ. ಶ್ರೀ. ನಟರಾಜ ಮತ್ತು ಡಾ.ರವಿ ಹರಪ್ಪನಹಳ್ಳಿ ಸಂಪಾದಕತ್ವದಲ್ಲಿ ಉತ್ತಮವಾದೊಂದು ಸಂಚಿಕೆ ಸಿದ್ಧವಾಗಿದೆ. ಕರ್ನಾಟಕದ ಪ್ರತಿಭಾವಂತ ಕಲಾವಿದ ಬಾಗೂರು ಮಾರ್ಕಂಡೇಯ ರಚಿಸಿದ ಸುಂದರ ಮುಖಪುಟ. ಒಳಗಿನ ಹೂರಣವೂ ಸತ್ತ್ವಯುತ. ಕಾವೇರಿಯ ಮಾಜಿ ಅಧ್ಯಕ್ಷರುಗಳೆಲ್ಲ
ತಮ್ಮತಮ್ಮ ಸೇವಾವರ್ಷದ ಸಿಹಿನೆನಪುಗಳನ್ನು, ಅನುಭವ ಮತ್ತು ಕಲಿಕೆಗಳನ್ನು ಅಕ್ಷರಕ್ಕಿಳಿಸಿದ್ದಾರೆ.
ಇದೊಂದು ರೀತಿಯಲ್ಲಿ ಚಾರಿತ್ರಿಕ ದಾಖಲೆ. ಇನ್ನೊಂದು ವಿಭಾಗ ‘ದುಡಿದು ಮಡಿದವರು’- ಅಗಲಿರುವ ಕಾವೇರಿಗರಿಗೆ ಅಕ್ಷರರೂಪದ ಅಶ್ರುತರ್ಪಣ. ಬಹುಮಟ್ಟಿಗೆ ಆಯಾ ವ್ಯಕ್ತಿಗಳ ಕುಟುಂಬಸ್ಥರಿಂದಲೇ ಬರೆಸಿರುವುದು ಭಾವನಾತ್ಮಕವಾಗಿಸಿದೆ. ಕಾವೇರಿಯ ಪ್ರತಿಭೆಗಳನ್ನು ಪರಿಚಯಿಸುವ ಒಂದು ವಿಭಾಗವೂ ಇದೆ. ಆಗಲೇ ಹೇಳಿದಂತೆ ಕಾವೇರಿ ನಿಜವಾಗಿಯೂ ಪ್ರತಿಭೆಗಳ ಕಣಜ. ಡಿಸ್ಕಸ್ ತ್ರೋ ಕ್ರೀಡಾಳು, ೨೦೧೭ರಲ್ಲಿ ಪದ್ಮಶ್ರೀ ಪ್ರಶಸ್ತಿಪುರಸ್ಕೃತ ವಿಕಾಸ್ ಗೌಡ ನಮ್ಮ ಹೆಮ್ಮೆಯ ಕಾವೇರಿಗ.
ಸೌಂದರ್ಯಸ್ಪರ್ಧೆಗಳಲ್ಲಿ ಪ್ರಶಸ್ತಿಗಳನ್ನು ಬಾಚುವ ಅನಘಾ ಶ್ರೀನಿವಾಸ್ ಮತ್ತು ಇಶಿಕಾ ಗಿರೀಶ್, ಶಂಕರ್ ಮಹಾದೇವನ್
ರಂಥ ದಿಗ್ಗಜರೊಡನೆ ಹಾಡಿರುವ ಸಾನಿಕಾ ಮಹಾಶೆಟ್ಟಿ, ಪ್ರೌಢಶಾಲಾ ವಿದ್ಯಾರ್ಥಿನಿಯಾಗಿರುವಾಗಲೇ ಮೂರು ಇಂಗ್ಲಿಷ್
ಕಾದಂಬರಿಗಳನ್ನು ಬರೆದು ಪ್ರಕಟಿಸಿರುವ ನಿಽ ನಾಗಶಂಕರ್- ಇವರೆಲ್ಲ ಕಾವೇರಿ ಕುಟುಂಬದ ಕುಡಿಗಳು. ವರ್ಷಗಳ ಹಿಂದೆ
ಇಲ್ಲಿಗೆ ವಲಸೆ ಬರುವಾಗ ಬಟ್ಟೆಬರೆಯ ಎರಡು ಸೂಟ್‌ಕೇಸ್ ಗಳನ್ನಷ್ಟೇ ತಂದವರು ಇಲ್ಲಿ ಸಂಪೂರ್ಣ ಪರಿಶ್ರಮದಿಂದ ಈಗ
ಯಶಸ್ವಿ ಉದ್ಯಮಿಗಳಾಗಿರುವವರ ಪರಿಚಯಲೇಖನಗಳೂ ಇವೆ.
ಅಂತೆಯೇ ಕಾವೇರಿಯ ಯುವಸದಸ್ಯರ ಅನುಭವಕಥನಗಳೂ ಸಂಚಿಕೆಯ ಮೌಲ್ಯ ವಧಿಸಿವೆ. ಕಾವೇರಿಯ ಆರಂಭಿಕ ವರ್ಷಗಳಲ್ಲಿ ಉಮಾ ರಾಜಶೇಖರ್ ಮುಂತಾದವರ ಸುಂದರ ಕೈಬರಹದಲ್ಲಿ ಪ್ರಕಟಿಸಿದ್ದ ಬೆಳ್ಳಿಬುಗ್ಗೆ ಸುದ್ದಿಪತ್ರ, ದೀಪಾವಳಿ ಸಂಚಿಕೆಗಳ ಒಂದೆರಡು ನಮೂನೆಗಳನ್ನೂ ಈ ಸ್ಮರಣಸಂಚಿಕೆಯಲ್ಲಿ ತೋರಿಸಲಾಗಿದೆ. ಹಾಡುಹಸೆ ಆಟ-ಊಟ ಮೋಜು-ಮಸ್ತಿಗಳಿಗಷ್ಟೇ ಸೀಮಿತವಲ್ಲ. ಕಾವೇರಿಯು ಸಮಾಜಸೇವೆಯನ್ನೂ ಮಾಡುತ್ತದೆ.
ದತ್ತಿನಿಧಿ ಸಂಗ್ರಹದ ಮೂಲಕ ದೀನದಲಿತರಿಗೆ ಸಹಾಯ, ಪ್ರಕೃತಿವಿಕೋಪಗಳಾದಾಗ ಸಂತ್ರಸ್ತರಿಗೆ ಆರ್ಥಿಕ ನೆರವು,
ಕರ್ನಾಟಕದಲ್ಲಿ ಶಾಲಾಮಕ್ಕಳಿಗೆ ಪುಸ್ತಕ ವಿತರಣೆ ಮುಂತಾದ ಕೆಲಸಗಳನ್ನೂ ಸದ್ದಿಲ್ಲದೆ ಮಾಡುತ್ತಿದೆ. ಕೋವಿಡ್ ಆರಂಭಿಕ
ದಿನಗಳಲ್ಲಿ ಮಾಸ್ಕ್‌ಗಳ ತೀವ್ರ ಕೊರತೆ ಇದ್ದಾಗ ಇಲ್ಲಿನ ಆಸ್ಪತ್ರೆ ಸಿಬ್ಬಂದಿಗೆ, ರೋಗಿಗಳಿಗೆ ಒದಗಿಸಲು ಬಟ್ಟೆಯ ಸಾವಿರಾರು
ಮಾಸ್ಕ್‌ಗಳನ್ನು ತಯಾರಿಸಿಕೊಟ್ಟದ್ದು, ಲಾಕ್‌ಡೌನ್‌ನಿಂದ ಕಂಗೆಟ್ಟ ಕರ್ನಾಟಕದ ಕಲಾವಿದರಿಗೆ ಧನಸಹಾಯವಾಗುವಂತೆ ಆನ್ ಲೈನ್ ಮನೋರಂಜನಾ ಕಾರ್ಯಕ್ರಮಗಳ ಮೂಲಕ ದತ್ತಿ ಸಂಗ್ರಹಿಸಿದ್ದು ಅದೇ ರೀತಿಯ ಸೇವೆಗಳು.
ಇನ್ನೂ ಒಂದು ರಚನಾತ್ಮಕ ಕೆಲಸವೆಂದರೆ ಮಕ್ಕಳಿಗೆ ಕನ್ನಡ ಕಲಿಸುವ ‘ಕನ್ನಡ ಕಲಿಯೋಣ’ ವಾರಾಂತ್ಯ ಶಾಲೆಗಳು. ಇವುಗಳ ಪರಿಶ್ರಮ-ಪ್ರತಿಫಲಗಳನ್ನಂತೂ ನಾನು ಕಣ್ಣಾರೆ ಕಂಡಿದ್ದೇನೆ. ಹಾಗಾಗಿ ಕಾವೇರಿ ಸುವರ್ಣಮಹೋತ್ಸವದ ಧ್ಯೇಯವಾಕ್ಯ ‘ಸಂಚಯ-ಸಂಭ್ರಮ-ಸಂಕಲ್ಪ’ ಅರ್ಥಪೂರ್ಣವಾಗಿಯೇ ಇದೆ. ಬರೀ ಸಂಭ್ರಮವೊಂದೇ ಅಲ್ಲ, ಇದು ಕಾವೇರಿಯ ಇಲ್ಲಿಯವರೆಗಿನ ಸಂಸ್ಕೃತಿ ಸಂಚಯದ ಸಿಂಹಾವಲೋಕನದ ಕ್ಷಣ. ಇನ್ನುಮುಂದೆಯೂ ಕನ್ನಡ-ಕನ್ನಡಿಗ-ಕರ್ನಾಟಕ ಎಂಬ ಅಭಿಮಾನ ನಿರಂತರವಾಗಿ ಉಕ್ಕಿಹರಿಯಬೇಕೆಂಬ ಸಂಕಲ್ಪ ಕೈಗೊಳ್ಳುವ ಕ್ಷಣ.