Friday, 20th September 2024

ಕಾವೇರಿ: ಸರಕಾರಗಳ ನೀರಾವರಿ ಸಮಸ್ಯೆ

ವರ್ತಮಾನ

maapala@gmail.com

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ನಡೆಯುವ ಕಾನೂನು ಹೋರಾಟದಲ್ಲಿ ರಾಜ್ಯಕ್ಕೆ ಹಿನ್ನಡೆಯಾಗುವುದು ಹೇಗೆ ಸರ್ವೇ ಸಾಮಾನ್ಯವೋ, ಪ್ರತಿಪಕ್ಷ ಗಳು, ಹೋರಾಟಗಾರರು, ರೈತರು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವುದೂ ಅಷ್ಟೇ ಸಾಮಾನ್ಯ. ಆದರೆ, ಇದಕ್ಕೆ ಇದುವರೆಗೆ ಆಡಳಿತ ನಡೆಸಿದ ಎಲ್ಲರೂ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ.

ಮತ್ತೆ ಕಾವೇರಿ ನದಿ ನೀರು ಹಂಚಿಕೆ ವಿವಾದ ತಾರಕ್ಕೇರಿದೆ. ರಾಜ್ಯದಲ್ಲಿ ತೀವ್ರ ಮಳೆ ಕೊರತೆ ಮಧ್ಯೆಯೂ ತಮಿಳುನಾಡಿಗೆ ಪ್ರತಿನಿತ್ಯ ೫ ಕ್ಯುಸೆಕ್ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮಾಡಿದ್ದ ಎರಡನೇ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದ ಬಳಿಕ ಕಾವೇರಿ ಕೊಳ್ಳದಲ್ಲಿ ಸರಕಾರದ ವಿರುದ್ಧ ರೈತರು ಆಕ್ರೋಶಗೊಂಡಿದ್ದಾರೆ. ಕನ್ನಡಪರ ಸಂಘಟನೆಗಳು ಸೇರಿದಂತೆ ಹೋರಾಟಗಾರರು ಬೀದಿಗಿಳಿ ದಿದ್ದಾರೆ. ಪ್ರಾಧಿಕಾರ ಮಾಡಿದ ಆದೇಶ ಮತ್ತು ಅದನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್‌ನ ಕ್ರಮ ಎರಡು ರಾಜ್ಯದ ಪಾಲಿಗೆ ಆಘಾತಕಾರಿ ವಿಚಾರಗಳೇ ಆಗಿವೆ.

ರಾಜ್ಯ ತೀವ್ರ ನೀರಿನ ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ಈ ರೀತಿಯ ಆದೇಶ ಬಂದು, ಕರ್ನಾಟಕ ತಮಿಳುನಾಡಿಗೆ ನೀರು ಬಿಟ್ಟಾಗ ಇದರ ವಿರುದ್ಧ ಬೀದಿಗಿಳಿದಿರುವ ರಾಜಕೀಯ ಪಕ್ಷಗಳು, ಹೋರಾಟಗಾರರು ಪ್ರಸ್ತುತ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರದ ವಿರುದ್ಧ ಹೋರಾಟಕ್ಕಿಳಿಯುವುದು ಸಹಜವೇ ಆಗಿದೆ. ಆದರೆ, ರಾಜ್ಯದ ಜನರನ್ನು ಸಂಕಷ್ಟಕ್ಕೀಡು ಮಾಡಿ ತಮಿಳುನಾಡಿಗೆ ನೀರು ಬಿಡಬೇಕು ಎಂಬ ಉದ್ದೇಶ ಸರಕಾರಕ್ಕಿಲ್ಲ ಮತ್ತು ಜನರಿಂದ ಆಯ್ಕೆಯಾದ ಯಾವುದೇ ಸರಕಾರ ಆ ರೀತಿ ಮಾಡುವುದೂ ಇಲ್ಲ. ಪ್ರಾಧಿಕಾರ ಮತ್ತು ಸುಪ್ರೀಂ ಕೋರ್ಟ್ ಆದೇಶದ ಬಳಿಕ ನೀರು ಬಿಡದೇ ಇದ್ದರೆ ಮುಂದೇನು ಅನಾಹುತಗಳು ಸಂಭವಿಸುತ್ತವೆ ಎಂಬುದು ಎರಡು ಬಾರಿ ಸಾಬೀತಾಗಿದೆ.

೧೯೯೧ರಲ್ಲಿ ಎಸ್.ಬಂಗಾರಪ್ಪ ಅವರು ಮುಖ್ಯ ಮಂತ್ರಿಯಾಗಿದ್ದಾಗ ಕಾವೇರಿ ನ್ಯಾಯಾಧೀಕರಣ ಮಧ್ಯಂತರ ಆದೇಶ ನೀಡಿ, ತಮಿಳುನಾಡಿಗೆ ೨೦೫
ಟಿಎಂಸಿ ನೀರು ಬಿಡುವಂತೆ ಸೂಚಿಸಿತ್ತು. ಆದರೆ, ಈ ಆದೇಶದ ವಿರುದ್ಧ ಸುಗ್ರೀವಾe ಹೊರಡಿಸಿದ್ದ ಎಸ್.ಬಂಗಾರಪ್ಪ, ಕಾವೇರಿ ಕೊಳ್ಳದ ಅಣೆಕಟ್ಟುಗಳಲ್ಲಿನ
ನೀರನ್ನು ರಕ್ಷಿಸಿ, ನಮ್ಮ ರಾಜ್ಯದ ರೈತರಿಗೇ ಉಳಿಸಿ ಕೊಳ್ಳುವಂತೆ ಅಣೆಕಟ್ಟುಗಳ ಉಸ್ತುವಾರಿ ಅಧಿಕಾರಿಗಳಿಗೆ ಆದೇಶಿಸಿದ್ದರು. ಇದರ ವಿರುದ್ಧ ತಮಿಳು
ನಾಡು ಸರಕಾರ ಸುಪ್ರೀಂ ಕೋರ್ಟ್‌ಗೆ ಹೋದರೂ ಬಂಗಾರಪ್ಪ ಜಗ್ಗಲಿಲ್ಲ. ನಂತರ ಕೇಂದ್ರ ಸರಕಾರ ಕಾವೇರಿ ನ್ಯಾಯಾಧೀಕರಣದ ಮಧ್ಯಂತರ ಆದೇಶ
ವನ್ನು ಗೆಜೆಟ್‌ನಲ್ಲಿ ಪ್ರಕಟಿಸಿತು. ಇದನ್ನು ಧಿಕ್ಕರಿಸಿ ಡಿ.೧೩ರಂದು ಕರೆನೀಡಿದ್ದ ಬಂದ್‌ಗೆ ಬಂಗಾರಪ್ಪನವರ ಸರಕಾರವೇ ಬಾಹ್ಯ ಬೆಂಬಲ ನೀಡಿತ್ತು. ಹಿಂಸಾಚಾರ
ನಡೆದು ೧೬ ಮಂದಿ ಮೃತಪಟ್ಟಿದ್ದರು. ಕೊನೆಗೂ ಸರಕಾರ ಕೇಂದ್ರದ ಗೆಜೆಟ್ ಒಪ್ಪಿ ನೀರು ಬಿಡುಗಡೆ ಮಾಡಬೇಕಾಯಿತು.

ಇನ್ನು ೨೦೦೨ರಲ್ಲಿ ಎಸ್. ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ತಮಿಳು ನಾಡಿಗೆ ೧.೨೫ ಟಿಎಂಸಿ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಇದರ ವಿರುದ್ಧ ಪ್ರತಿಭಟನೆ ಗಳು ತೀವ್ರಗೊಂಡು ಗುರುಸ್ವಾಮಿ ಎಂಬಾತ ಕಬಿನಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ. ರೈತರ ಪ್ರತಿಭಟನೆಗೆ ಮಣಿದ ಸರಕಾರ ತಮಿಳುನಾಡಿಗೆ ನೀರು ಬಿಡದಿರುವ ನಿರ್ಧಾರ ಕೈಗೊಂಡಿತ್ತು. ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಮಂಡ್ಯದ ವರೆಗೆ ಪಾದಯಾತ್ರೆ ಕೈಗೊಂಡರು. ಈ ಮಧ್ಯೆ
ತಮಿಳುನಾಡು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ಪರಿಗಣಿಸಿದ ಸುಪ್ರೀಂ ಕೋರ್ಟ್, ಮುಖ್ಯ ಕಾರ್ಯದರ್ಶಿಯನ್ನು ಜೈಲಿಗೆ ಕಳುಹಿಸುವುದಾಗಿ
ಎಚ್ಚರಿಸಿತು. ಕೊನೆಗೆ ಸರಕಾರ ಸುಪ್ರೀಂ ಕೋರ್ಟ್ ಮುಂದೆ ಕ್ಷಮೆ ಯಾಚಿಸಿ ನೀರು ಬಿಡುಗಡೆ ಮಾಡಿತು.

ನಂತರ ೨೦೧೨ರಲ್ಲೂ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ತಮಿಳುನಾಡು ಸರಕಾರ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿ ನೀರು ಬಿಡುಗಡೆಮಾಡಿಸಿಕೊಳ್ಳುವಲ್ಲಿ ಯಶಸ್ವಿ ಯಾಗಿತ್ತು. ಹೀಗಿರುವಾಗ ರಾಜ್ಯ ಸರಕಾರ ಏನೇ ಸಂಘರ್ಷಕ್ಕೆ ಎಡೆಮಾಡಿಕೊಟ್ಟರೂ ಪ್ರಾಧಿಕಾರ ಮತ್ತು ಸುಪ್ರೀಂ
ಕೋರ್ಟ್ ಆದೇಶದಂತೆ ನೀರು ಬಿಡಲೇ ಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ಪ್ರಸ್ತುತ ತಮಿಳುನಾಡಿಗೆ ನೀರು ಬಿಡುವುದು ಕೂಡ ಅನಿವಾರ್ಯವಾಗಿದೆ.
ಆದರೆ, ಇಂತಹ ಪರಿಸ್ಥಿತಿ ತಂದುಕೊಳ್ಳಲು ನಾವೇ ಮುಖ್ಯ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ.

ಏಕೆಂದರೆ, ಮೊದಲಿನಿಂದಲೂ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಪಕ್ಷಗಳು ಸಮಸ್ಯೆ ಬುಡಕ್ಕೆ ಬಂದು ಜನರು ಬೀದಿಗಿಳಿದು ಹೋರಾಟಕ್ಕೆ ನಿಂತಾಗ ಕಾವೇರಿ
ವಿಚಾರದಲ್ಲಿ ಕ್ರಮ ಕೈಗೊಳ್ಳುತ್ತಿದ್ದವೇ ಹೊರತು ರಾಜ್ಯದ ಹಿತ ರಕ್ಷಿಸಲು ಎಲ್ಲಾ ಮೂಲಗಳಿಂದಲೂ ಪ್ರಯತ್ನ ಮಾಡಲೇ ಇಲ್ಲ. ಮೊದಲೇ ಅಂತಾರಾಜ್ಯ ಜಲ ವಿವಾದಗಳಲ್ಲಿ ನದಿ ಮೇಲ್ಭಾಗದ ರಾಜ್ಯಗಳಿಗೆ ಅನ್ಯಾಯವಾಗುವುದು ಸಹಜ. ಇದು ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಆದರೆ, ಇದು ಗೊತ್ತಿದ್ದೂ ಹಿಂದೆ ಆಡಳಿತ ನಡೆಸಿದವರು ಸಮಸ್ಯೆಯ ಮೂಲಕ್ಕೆ ಕೈಹಾಕಿ ಅದನ್ನು ಪರಿಹರಿಸುವ ಗೋಜಿಗೆ ಹೋಗಲಿಲ್ಲ. ಇದರ ಪರಿಣಾಮ ಈಗ ಸರಕಾರ ಅಡಕತ್ತರಿಯಲ್ಲಿ ಸಿಗುವಂತಾಗಿದೆ.

ವಿವಾದಕ್ಕೆ ಸಂಬಂಽಸಿದಂತೆ ರಚನೆಯಾಗಿದ್ದ ಕಾವೇರಿ ನ್ಯಾಯಾಽಕರಣ ನೀಡಿದ ಐ ತೀರ್ಪಿನಲ್ಲಿ ತಮಿಳುನಾಡಿಗೆ ೪೧೯ ಟಿಎಂಸಿ, ಕರ್ನಾಟಕಕ್ಕೆ ೨೭೦
ಟಿಎಂಸಿ, ಕೇರಳಕ್ಕೆ ೩೦ ಟಿಎಂಸಿ ಮತ್ತು ಪಾಂಡಿಚೇರಿಗೆ ೭ ಟಿಎಂಸಿ ನೀರು ಹಂಚಿಕೆ ಮಾಡಿತ್ತು. ಅಲ್ಲದೆ, ಕರ್ನಾಟಕ ಪ್ರತಿ ವರ್ಷ ತಮಿಳುನಾಡಿಗೆ ೧೯೧.೯೫
ಟಿಎಂಸಿ ನೀರು ಬಿಡಬೇಕು ಎಂದು ಆದೇಶಿಸಿತ್ತು. ಬಳಿಕ ಈ ಕುರಿತು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಕರ್ನಾಟಕ ತಮಿಳುನಾಡಿಗೆ ಬಿಡಬೇಕಾಗಿದ್ದ ನೀರಿನ ಪ್ರಮಾಣವನ್ನು ೧೪.೭೫ ಟಿಎಂಸಿ ಕಡಿಮೆ ಮಾಡಿ, ವಾರ್ಷಿಕ ೧೭೭.೨ ಟಿಎಂಸಿ ನೀರು ಬಿಡುಗಡೆ ಮಾಡಬೇಕು ಎಂದು ಆದೇಶಿಸಿತ್ತು. ಇದಕ್ಕಾಗಿ ಕಾವೇರಿ ನೀರು ನಿಯಂತ್ರಣ ಸಮಿತಿ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಗಳನ್ನು ರಚಿಸಿ ನೀರಿನ ಹಂಚಿಕೆ ಬಗ್ಗೆ ನಿರ್ಧರಿಸಲು ಹೇಳಿತ್ತು.

ನ್ಯಾಯಾಧೀಕರಣ ಮತ್ತು ಸುಪ್ರೀಂ ಕೋರ್ಟ್ ತೀರ್ಪು ನೀಡುವ ಸಂದರ್ಭದಲ್ಲಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಕಾವೇರಿ ಕೊಳ್ಳದಲ್ಲಿ ಇಂತಿಷ್ಟೇ ಪ್ರದೇಶದಲ್ಲಿ ಈ ನೀರು ಆಶ್ರಯಿಸಿ ಕೃಷಿ ಚಟುವಟಿಕೆ ನಡೆಸಬೇಕು ಎಂದು ಆದೇಶಿಸಿತ್ತು. ಅದನ್ನು ಕರ್ನಾಟಕ ಪಾಲಿಸಿ ಕೊಂಡು ಬಂದಿದೆಯಾದರೂ ತಮಿಳುನಾಡು ಉಲ್ಲಂಘಿಸುತ್ತಲೇ ಬಂದಿದೆ. ಈ ಬಗ್ಗೆ ವಿವಾದ ಜಟಿಲಗೊಂಡಾಗಲಷ್ಟೇ ಪ್ರಶ್ನಿಸುವ ಕರ್ನಾಟಕ ಉಳಿದಂತೆ ಚಕಾರವೆತ್ತುತ್ತಿಲ್ಲ. ಆದರೆ, ತಮಿಳುನಾಡು ಮಾತ್ರ ಪ್ರತಿ ಹಂತದಲ್ಲೂ ಕರ್ನಾಟಕಕ್ಕೆ ಅಡ್ಡಿಪಡಿಸುತ್ತಾ ಕಾನೂನು ಸಮರ ನಡೆಸುತ್ತಿದೆ.

ಉದಾಹರಣೆಗೆ ತಮಿಳುನಾಡಿನಲ್ಲಿ ಪ್ರತಿ ವರ್ಷ ೧.೮೦ ಲಕ್ಷ ಎಕರೆ ಪ್ರದೇಶದಲ್ಲಿ ಕುರುವೈ ಬೆಳೆ ಬೆಳೆಸಬೇಕು. ಇದಕ್ಕೆ ೩೨ ಟಿಎಂಸಿ ನೀರು ಮಾತ್ರ ಬಳಸ
ಬೇಕು ಎಂಬ ನಿರ್ಬಂಧವಿದೆ. ಆದರೆ, ತಮಿಳು ನಾಡು ದುಪ್ಪಟ್ಟು ಪ್ರದೇಶದಲ್ಲಿ ಕುರುವೈ ಬೆಳೆಬೆಳೆದಿದ್ದು, ಈ ವರ್ಷ ೬೨ ಟಿಎಂಸಿಗೂ ಹೆಚ್ಚು ನೀರು ಬಳಕೆ ಮಾಡಿದೆ. ಮತ್ತೆ ಬೆಳೆಗೆ ಹೆಚ್ಚುವರಿ ನೀರನ್ನು ಕರ್ನಾಟಕದಿಂದ ಕೇಳುತ್ತಿದೆ. ನದಿ ನೀರು ಹಂಚಿಕೆ ವಿವಾದದಲ್ಲಿ ಕಾವೇರಿ ನ್ಯಾಯಾಧೀಕರಣ ನೀಡಿದ ಆದೇಶದ ಬಳಿಕ ತಮಿಳುನಾಡು ಕುರುವೈ ಬೆಳೆ ಪ್ರದೇಶವನ್ನು ಹೆಚ್ಚಿಸಿಕೊಳ್ಳುತ್ತಾ ಬಂದಿದ್ದರೂ ಕರ್ನಾಟಕ ಕೊನೇ ಕ್ಷಣದಲ್ಲಿ ಇದನ್ನು ಪ್ರಸ್ತಾಪಿಸುತಿತ್ತೇ ಹೊರತು ಅದಕ್ಕೆ ಮೊದಲು ಬೆಳೆ ಪ್ರದೇಶವನ್ನು ವಿಸ್ತರಿಸಿದಾಗ ಆಕ್ಷೇಪಿಸಲಿಲ್ಲ ಮತ್ತು ಅದರ ವಿರುದ್ಧ ಕಾನೂನು ಹೋರಾಟವನ್ನೂ ಹಮ್ಮಿಕೊಳ್ಳಲಿಲ್ಲ.

ಆದರೆ, ತಮಿಳುನಾಡು ಮಾತ್ರ ಈ ವಿಚಾರದಲ್ಲಿ ಬುದ್ಧಿವಂತಿಕೆಯ ಹೆಜ್ಜೆಯನ್ನೇ ಇಟ್ಟುಕೊಂಡು ಬಂದಿದೆ. ಈ ಬೆಳೆಗೆ ನೀರು ಹರಿಸಿ ಜಲಾಶಯ ಖಾಲಿ ಮಾಡಿಕೊಂಡು ಕರ್ನಾಟಕದಿಂದ ನೀರು ಕೇಳುತ್ತಿದೆ. ಅದಕ್ಕಾಗಿ ಕಾನೂನು ಹೋರಾಟ ನಡೆಸಿ ಗೆಲ್ಲುತ್ತಿದೆ. ಅಷ್ಟೇ ಅಲ್ಲ, ಕರ್ನಾಟಕ ಏನೇ ಮಾಡಿದರೂ ಅದಕ್ಕೆ
ಕೊಕ್ಕೆ ಹಾಕುತ್ತಿದೆ. ಇದಕ್ಕೆ ಇನ್ನೂ ಒಂದು ಕಾರಣ ಸಂಕಷ್ಟ ಸೂತ್ರ ಇಲ್ಲದೇ ಇರುವುದು. ಸಂಕಷ್ಟ ಸೂತ್ರ ರಚಿಸುವಾಗ ಎರಡೂ ರಾಜ್ಯಗಳ ಭೌಗೋಳಿಕ ಸ್ಥಿತಿಗತಿ, ಮಳೆ ಬರುವ ಅವಽ, ಮಳೆ ಪ್ರಮಾಣದ ಆಧಾರದ ಮೇಲೆ ನೀರು ಹಂಚಿಕೆ ಸೂತ್ರ ರೂಪಿಸಬೇಕು.

ಸಾಮಾನ್ಯವಾಗಿ ಕರ್ನಾಟಕದಲ್ಲಿ ಸೆಪ್ಟೆಂಬರ್‌ಗೆ ಮಳೆಗಾಲ ಮುಗಿದರೆ ತಮಿಳುನಾಡಿನಲ್ಲಿ ಸೆಪ್ಟೆಂಬರ್ ಬಳಿಕ ಮಳೆ ಆರಂಭವಾಗುತ್ತದೆ. ಹೀಗಾಗಿ ಕರ್ನಾಟಕ
ಸೆಪ್ಟೆಂಬರ್‌ವರೆಗಿನ ಮಳೆಯನ್ನು ಆಧರಿಸಿ ತಮಿಳು ನಾಡಿಗೆ ನೀರು ಬಿಡಬೇಕಾಗುತ್ತದೆ. ಸಾಮಾನ್ಯ ವರ್ಷ ಗಳಲ್ಲಿ ನ್ಯಾಯಾಧೀಕರಣ ಮತ್ತು ಸುಪ್ರೀಂ ಕೋರ್ಟ್
ಹೇಳಿದ್ದಕ್ಕಿಂತ ಹೆಚ್ಚು ನೀರು ಹಂಚಿಕೆ ಮಾಡಲಾಗುತ್ತದೆಯಾದರೂ ಮಳೆ ಕೊರತೆಯಾದಾಗ ಸಂಕಷ್ಟದ ಸಮಯದಲ್ಲಿ ಯಾವ ರೀತಿ ನಿರ್ಧಾರ ಕೈಗೊಳ್ಳಬೇಕು
ಎಂಬುದಕ್ಕೆ ಯಾವುದೇ ಸೂತ್ರವನ್ನು ಇದುವರೆಗೆ ಹಂಚಿಕೆ ಮಾಡಿಲ್ಲ. ಹೀಗಾಗಿ ತಮಿಳುನಾಡು ನೀರು ಕೇಳುವಾಗ ಕರ್ನಾಟಕದ ಜಲಾಶಯಗಳಲ್ಲಿರುವ
ನೀರು, ಜಲಾಶಯಗಳ ಒಳಹರಿವು ಮತ್ತು ತಮಿಳು ನಾಡಿನ ಜಲಾಶಯಗಳಲ್ಲಿನ ನೀರಿನ ಸಂಗ್ರಹ ಆಧರಿಸಿ ನೀರು ಹಂಚಿಕೆ ಮಾಡುವ ವಿಧಾನ ಅನುಸರಿ
ಸಲಾಗುತ್ತದೆ. ಅದರ ಪ್ರಕಾರವೇ ಕಾವೇರಿ ನೀರು ನಿರ್ವಹಣಾ ಪ್ರಾಽಕಾರ ತಮಿಳುನಾಡಿಗೆ ಪ್ರತಿನಿತ್ಯ ೫ ಸಾವಿರ ಕ್ಯುಸೆಕ್ ನೀರು ಹರಿಸುವಂತೆ ಆದೇಶಿಸಿದ್ದು,
ಅದನ್ನೇ ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.

ಒಂದೊಮ್ಮೆ ಸಂಕಷ್ಟ ಸೂತ್ರವೇನಾದರೂ ಜಾರಿ ಯಾಗಿದ್ದರೆ, ಸೆಪ್ಟೆಂಬರ್ ಬಳಿಕ ತಮಿಳುನಾಡಿನಲ್ಲಿ ಬರಬಹುದಾದ ಮಳೆಯನ್ನು ಆಧಾರವಾಗಿಟ್ಟುಕೊಂಡು ಮಳೆ ಕೊರತೆ ವರ್ಷಗಳಲ್ಲಿ ನೀರು ಹಂಚಿಕೆಗೆ ಅವಕಾಶವಿರುತ್ತದೆ. ಆದರೆ, ಸಮಸ್ಯೆ ಬಂದಾಗ ಹೊರತುಪಡಿಸಿ ಉಳಿದ ಸಂದರ್ಭದಲ್ಲಿ ಸಂಕಷ್ಟ ಸೂತ್ರ ರಚಿಸು ವಂತೆ ಇದುವರೆಗೆ ಆಡಳಿತ ನಡೆಸಿದ ವರಾರೂ ಪ್ರಾಧಿಕಾರದ ಮೇಲೆ ಒತ್ತಡ ಹೇರಲಿಲ್ಲ. ಸುಪ್ರೀಂ ಕೋರ್ಟ್ ಮೆಟ್ಟಿಲೂ ಹತ್ತಲಿಲ್ಲ. ಮತ್ತೊಂದೆಡೆ, ಸಂಕಷ್ಟ ಪರಿಸ್ಥಿತಿ ಎದುರಾದಾಗ ಅನುಕೂಲವಾಗಲೆಂದೇ ಕರ್ನಾಟಕ ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳಲು ಮುಂದಾಗಿದೆ. ಆದರೆ, ಅದಕ್ಕೂ ತಮಿಳುನಾಡು ಅವಕಾಶ ನೀಡುತ್ತಿಲ್ಲ. ಕರ್ನಾಟಕದಲ್ಲಿ ನೀರಿನ ಪರಿಸ್ಥಿತಿಯ ಅರಿವಿದ್ದರೂ ತಮಿಳುನಾಡು ಮಾನವೀಯತೆ ಮರೆತು ಕಾನೂನು ಹೋರಾಟದ ಮೂಲಕ ತನಗೆ ಬೇಕಾದ ನೀರು ಪಡೆದುಕೊಳ್ಳುತ್ತಿದೆ.

ಮುಂದೆ ತಮಿಳುನಾಡಿನಲ್ಲಿ ಹೆಚ್ಚು ಮಳೆಯಾದರೆ ನೀರು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗದೆ ಅದನ್ನು ಸಮುದ್ರಕ್ಕೆ ಬಿಡಬೇಕಾದ ಪರಿಸ್ಥಿತಿ ಬರುತ್ತದೆ. ಆದರೂ ಕರ್ನಾಟಕದಿಂದ ತನ್ನ ಪಾಲನ್ನು ಕಿತ್ತುಕೊಳ್ಳಲೇ ಬೇಕು ಎಂದು ದಾಯಾದಿಯಂತೆ ವರ್ತಿಸುತ್ತಿರುವ ತಮಿಳುನಾಡು ಬಗ್ಗೆ ಕರ್ನಾಟಕ ಯಾವತ್ತೂ ಮೃದು ಧೋರಣೆಯನ್ನೇ ಅನುಸರಿಸುತ್ತಾ ಸಮಸ್ಯೆ ಬಂದಾಗಲಷ್ಟೇ ಎಚ್ಚೆತ್ತು ಕೊಳ್ಳುತ್ತಾ ಕಾನೂನು ಹೋರಾಟಕ್ಕಿಳಿದು ಸೋಲು ತ್ತಲೇ ಇದೆ. ಇದರ ಪರಿಣಾಮ, ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಹಣದ ಕೊರತೆಯಾದಾಗ ತಮ್ಮ ತಾಯಿ ನೀಡಿದ ಸಲಹೆಯಂತೆ ಪತ್ನಿಯ ಆಭರಣ, ಖಾಸಗಿ
ಭಂಡಾರದ ಆಭರಣಗಳನ್ನು ಮಾರಾಟ ಮಾಡಿ ಕಟ್ಟಿದ ಕನ್ನಂಬಾಡಿ ಅಣೆಕಟ್ಟೆ (ಕೃಷ್ಣರಾಜಸಾಗರ ಜಲಾಶಯ) ಸಂಕಷ್ಟದ ವರ್ಷದಲ್ಲಿ ಕರ್ನಾಟಕದ ಜನರಿಗಿಂತ ತಮಿಳುನಾಡಿಗೆ ನೀರು ಬಿಡಲೆಂದೇ ಇದ್ದಂತಾಗಿದೆ.

ಲಾಸ್ಟ್ ಸಿಪ್: ಹಂಚಿಕೊಂಡು ತಿನ್ನುವುದಕ್ಕಿಂತ ಕಿತ್ತುಕೊಂಡು ತಿನ್ನುವುದರಲ್ಲೇ ಖುಷಿ ಕಾಣುವವರು ವಿಘ್ನ ಸಂತೋಷಿಗಳಿಗಿಂತಲೂ ಅಪಾಯಕಾರಿ.