ಒಡಲಾಳ
ಸಿಂಚನ ಎಂ.ಕೆ
turuvekereprasad@gmail.com
ಈ ವರ್ಷವಂತೂ ಮಳೆಯ ಪ್ರಮಾಣ ಬಹಳ ಕಡಿಮೆಯಾಗಿರುವುದರಿಂದ ಕೃಷಿ ಕ್ಷೇತ್ರಕ್ಕೆ ನೀರು ಬಿಡಲಾಗದೆ, ಕುಡಿಯುವ ನೀರಿನ ಉಪಯೋಗಕ್ಕಷ್ಟೆ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ. ಇಂಥ ಚಿಂತಾಜನಕ ಸ್ಥಿತಿಯಲ್ಲಿರುವಾಗಲೂ ತಮಿಳುನಾಡು ಸರಕಾರವು ಅವರ ರೈತರ ಹೆಚ್ಚುವರಿ ಬೆಳೆಗೆ ನೀರು ಕೇಳುತ್ತಿರುವುದು ಕನ್ನಡಿಗರ ಕಣ್ಣಲ್ಲಿ ನೀರು ತರಿಸುತ್ತಿದೆ.
ಯಾವಾಗ ಈ ಬಾರಿ ಕಳೆದ ನಾಲ್ಕೈದು ದಶಕಗಳಲ್ಲೇ ಅತ್ಯಂತ ಕಡಿಮೆ ಮಳೆಯಾಗಿ ಬರಗಾಲ ಎದುರಾಗುವ ಮುನ್ಸೂಚನೆ ದೊರೆಯಿತೋ, ನಮ್ಮ ರಾಜ್ಯದ ರೈತರು ಹಠಾತ್ ಚಿಂತೆಗೊಳಗಾದರು. ಈ ಸಂದರ್ಭದಲ್ಲಿ ರೈತರ ಚಿತ್ತ ಸಾಗುವುದು ಕನ್ನಂಬಾಡಿ ಅಣೆಕಟ್ಟೆಯತ್ತ. ಪ್ರತಿದಿನ ವಾಟ್ಸಾಪ್ ಸ್ಟೇಟಸ್ ಅನ್ನು ನೋಡುವಂತೆ ಅವರು ಕೆಆರ್‌ಎಸ್ ಜಲಾಶಯದ ಸ್ಟೇಟಸ್ ಅನ್ನು ಮರೆಯದೆ ನೋಡುತ್ತಾರೆ. ಈ ವರ್ಷ ಈಗಿನ ಮೈಸೂರು ಮಹಾರಾಜ ಯದುವೀರ್ ಕೃಷ್ಣರಾಜ ಒಡೆಯರ್ ಅವರ ಬಳಿ ಮಂಡ್ಯದ ರೈತರೊಬ್ಬರು ‘ಇನ್ನು ಮುಂದೆ ಕೆಆರ್‌ಎಸ್‌ಗೆ ನೀವೇ ಬಾಗಿನ ಅರ್ಪಿಸಬೇಕು, ಯಾರೋ ರಾಜಕಾರಣಿ ಅರ್ಪಿಸಿದರೆ ಅದಕ್ಕೆ ಅರ್ಥವಿಲ್ಲ.
ಅಂದಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತವರ ಪರಿವಾರದ ಮಹಾನ್ ತ್ಯಾಗದ ಫಲದಿಂದ ಕೆಆರ್‌ಎಸ್ ನಿರ್ಮಾಣವಾಯಿತು’ ಎಂದು ವಿವರಿಸಿದರು. ಅಂದು ಕೆಆರ್‌ಎಸ್ ನಿರ್ಮಿಸಲು ಮೈಸೂರು ರಾಜ್ಯದ ೩ ವರ್ಷಗಳ ಬಜೆಟ್‌ನಷ್ಟು ಹಣದ ಅವಶ್ಯಕತೆಯಿತ್ತಾದರೂ, ರಾಜ ಮನೆತನದ ರಾಣಿಯರು ೪ ಮೂಟೆಗಳಷ್ಟು ಆಭರಣಗಳನ್ನು ಈ ಜಲಕಲ್ಯಾಣ ಯಜ್ಞಕ್ಕೆ ಅರ್ಪಿಸಿದ್ದರಿಂದ ಬರಗಾಲ ಪೀಡಿತವಾಗಿದ್ದ ಮಂಡ್ಯ ಮೈಸೂರಿನ ಭಾಗದ ರೈತರು ಸಮೃದ್ಧ ಬೆಳೆಗಳನ್ನು ಬೆಳೆಯುತ್ತಾ ಸಕ್ಕರೆ ನಾಡನ್ನು ನಿರ್ಮಿಸಿದ್ದಾರೆ.
ಹತ್ತು ಸಾವಿರ ಶ್ರಮಿಕರು ಬರೋಬ್ಬರಿ ೨೧ ವರ್ಷಗಳ ಕಾಲ ಬೆವರು ಸುರಿಸಿ ಈ ಜಲಾಶಯವನ್ನು ನಿರ್ಮಿಸಿದ್ದ ರಿಂದ ಕಾವೇರಿಯ ನೀರನ್ನು ಕೃಷಿ ಭೂಮಿಗೆ ಹರಿಸಲು ಸಾಧ್ಯವಾಗಿದೆ. ಬ್ರಿಟಿಷರಿಗೆ ತಮ್ಮ ಪ್ರೆಸಿಡೆನ್ಸಿ ಸ್ಟೇಟ್ (ನೇರ ಆಳ್ವಿಕೆಗೆ ಒಳಪಟ್ಟಿದ್ದ ಪ್ರಾಂತ್ಯ) ಮದ್ರಾಸಿನ ಮೇಲೆ ಹೆಚ್ಚು ಒಲವು ಇದ್ದುದರಿಂದ ಸಹಜವಾಗಿಯೇ ಮೈಸೂರು ಪ್ರಾಂತ್ಯದ ಬಗೆಗೆ ಮಲತಾಯಿ ಧೋರಣೆ ತೋರಿದರು. ಅದರ ಫಲವಾಗಿ ಆರಂಭವಾದ ಸಂಘರ್ಷಕ್ಕೆ ಇಂದಿಗೂ ಇತಿಶ್ರೀ ಹಾಡಲಾಗಿಲ್ಲ. ಇತ್ತ ಕರ್ನಾಟಕದ ವಾದ ಏನೆಂದರೆ- ‘ಬ್ರಿಟಿಷರ ಅಂದಿನ ಪಕ್ಷಪಾತದ ನಿರ್ಧಾರದ ಮುಂದುವರಿದ ಭಾಗದಂತಿರುವ ಇಂದಿನ ನೀರು ಹಂಚಿಕೆ ಸೂತ್ರದಲ್ಲಿ ಸ್ಪಷ್ಟತೆ, ಪಾರದರ್ಶಕತೆ ಹಾಗೂ ಪ್ರಾಮಾಣಿಕತೆಗಳಿಲ್ಲ.
ಆದ್ದರಿಂದ ಇದನ್ನು ಮರುಪರಿಶೀಲಿಸಿ ನಿರ್ಣಯಿಸಬೇಕು. ಮಳೆಯ ಅಭಾವ ಉಂಟಾದಾಗಲೇ ಈ ಸಮಸ್ಯೆ ಉದ್ಭವವಾಗುವುದರಿಂದ, ಆ ಕ್ಲಿಷ್ಟಕರ ಸನ್ನಿವೇಶದಲ್ಲಿ ಹೇಗೆ ನೀರು ಹಂಚಿಕೆಯಾಗಬೇಕು ಎಂಬುದಕ್ಕೆ ನಿರ್ದಿಷ್ಟ ಸಂಕಷ್ಟ ಸೂತ್ರ ಬೇಕು’ ಎಂಬುದು. ಅತ್ತ ತಮಿಳುನಾಡಿನ ವಾದವೇನೆಂದರೆ- ‘ನಮಗೆ ದೊರೆಯುತ್ತಿದ್ದ ನೀರಿನ ಪ್ರಮಾಣ ಕ್ಕನುಗುಣವಾಗಿ ನೀರಾವರಿ ಭೂಮಿಯು ವಿಸ್ತಾರವಾಗಿರುವುದರಿಂದ, ನೀರು ಕಡಿಮೆಯಾದರೆ ಈಗ ಮತ್ತೆ ಅವುಗಳನ್ನು ಪರಿವರ್ತಿಸಲಾಗುವುದಿಲ್ಲ. ನಮಗೆ ಸಿಗಬೇಕಾದ ನೀರಿನ ಪಾಲು ಬೇಕೇ ಬೇಕು ಎಂಬುದು’.
ಇತ್ತೀಚೆಗೆ ತೆರೆಕಂಡ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಹಾಡಿನಲ್ಲಿ ನಾಯಕನು ಮನ ಮೆಚ್ಚಿದ ಹುಡುಗಿಯು ತನ್ನನ್ನು ಸೇರಲು ಬರುವಳೆಂಬ ಭರವಸೆಯನ್ನು ನದಿಯ ಕಾರ್ಯಕ್ಷೇತ್ರಕ್ಕೆ ಹೋಲಿಸಿ ಹಾಡುವ ’ನದಿಯೇ ಓ ನದಿಯೇ ನಿನಗಾಗಿ ನಾ ಕಾಯುವೆ….ಸಪ್ತಸಾಗರದಾಚೆಯೆಲ್ಲೋ ನಿನ್ನ ಸೇರುವ ಆಸೆಯಲ್ಲೇ ನಾ’ ಎಂಬ ಸಾಲುಗಳು ಒಂದು ನದಿಯು ಪ್ರಕೃತಿಯ ನಿಯಮದಂತೆ ಎಷ್ಟೆಲ್ಲಾ ಅಡೆತಡೆಗಳನ್ನು ಮೀರಿ ತನ್ನ ಗುರಿಯನ್ನು ತಲುಪಬೇಕಾಗುತ್ತದೆ ಎಂಬುದನ್ನು ಅರ್ಥೈಸುತ್ತದೆ. ಹಾಗೆಯೇ ಕಾವೇರಿ ನದಿಯ ಇಂದಿನ ಪರಿಸ್ಥಿತಿ ನೋಡಿದರೆ ಇದು ಮತ್ತಷ್ಟು ಚೆನ್ನಾಗಿ ಅರ್ಥ ವಾಗುತ್ತದೆ.
ಸಾವನ್ನಪ್ಪುವ ಕೊನೆ ಗಳಿಗೆಯಲ್ಲಿ ಕೂಡ ಬೇಕಾಗುವ ನೀರು ನಮ್ಮ ಮೂಲಭೂತ ಅವಶ್ಯಕತೆಗಳಲ್ಲಿ ಪ್ರಮುಖವಾದುದು. ಈ ವರ್ಷವಂತೂ ಮಳೆಯ ಪ್ರಮಾಣ ಬಹಳ ಕಡಿಮೆಯಾಗಿರುವುದರಿಂದ ಕೃಷಿ ಕ್ಷೇತ್ರಕ್ಕೆ ನೀರು ಬಿಡಲಾಗದೆ, ಕುಡಿಯುವ ನೀರಿನ ಉಪಯೋಗಕ್ಕಷ್ಟೆ ವ್ಯವಸ್ಥೆ ಮಾಡಿಕೊಳ್ಳ ಬೇಕಾಗುತ್ತದೆ ಎಂಬ ಚಿಂತಾಜನಕ ಸ್ಥಿತಿಯಲ್ಲಿರು ವಾಗಲೂ ತಮಿಳುನಾಡು ಸರಕಾರವು ಅವರ ರೈತರ ಹೆಚ್ಚುವರಿ ಬೆಳೆಗೆ ನೀರು ಕೇಳುತ್ತಿರುವುದು ಕನ್ನಡಿಗರ ಕಣ್ಣಲ್ಲಿ ನೀರು ತರಿಸುತ್ತಿದೆ. ಇದನ್ನು ತಮಿಳುನಾಡು ಸರಕಾರ ಸಮೇತ ಅಲ್ಲಿನ ಜನರೆಲ್ಲಾ ಅರ್ಥೈಸಿಕೊಳ್ಳಬೇಕಿದೆ. ನಮ್ಮ ರಾಜ್ಯ ಸರಕಾರವು ರೈತರಿಗೆ ಈ ಬಾರಿ ಭತ್ತ ಹಾಕಬೇಡಿ, ಕಾಳುಗಳನ್ನು ಬೆಳೆದುಕೊಳ್ಳಿ ಎಂದು ಸಲಹೆ ನೀಡಿರುವಾಗ ತಮಿಳುನಾಡು ಸರಕಾರ ಮಾತ್ರ ಅದಾಗಲೆ ಒಂದು ಬೆಳೆಗೆ
ಭವಿಷ್ಯದ ವಿಚಾರ ಮಾಡದೆ ಸಂಗ್ರಹದ ನೀರನ್ನು ಹಾಯಿಸಿ ಹೆಚ್ಚುವರಿ ಬೆಳೆಗೆ ನೀರು ಕೇಳುತ್ತಿರುವುದು ಎಂಥಾ ವಿಪರ್ಯಾಸ.
ಆದ್ದರಿಂದ ಎಲ್ಲ ಆಳುಗರಲ್ಲಿ ನಮ್ಮದು ಒಂದೇ ಪ್ರಾರ್ಥನೆ- ನಮ್ಮ ಜೀವಜಲ ಕಾವೇರಿಗಾಗಿ ಹೋರಾಡುತ್ತಿರುವ ರೈತರಿಗೆ ಪೆಟ್ಟು ಕೊಡಬೇಡಿ. ನಮ್ಮ ಬೆನ್ನೆಲುಬಾದ ರೈತನ ಬೆನ್ನಿಗೆ ನೀವು ಹೊಡೆದರೆ ಅವನು ಬಾಗುತ್ತಾನೆ, ಅವನ ಸ್ವಾಭಿಮಾನಕ್ಕೆ ಪೆಟ್ಟು ಬೀಳುತ್ತದೆ, ನಮ್ಮೆಲ್ಲರ ಪೋಷಣೆ ಮಾಡುತ್ತಾ ತಾಯಿಯ ಸ್ಥಾನದಲ್ಲಿರುವ ಭೂಮಿ ತಾಯ ಮಗನಾದ ಅವನ ಆತ್ಮಗೌರವಕ್ಕೆ ಧಕ್ಕೆಯಾಗುತ್ತದೆ. ಇದರ ಬಗೆಗೆ ಇನ್ನೂ ವಿಷಾದದಿಂದ ಹೇಳಬೇಕಾದ
ಸಂಗತಿಯೇನೆಂದರೆ, ನಮ್ಮ ನ್ಯಾಯಾಲಯ ವ್ಯವಸ್ಥೆಯಲ್ಲಿ ಒಂದು ವೇಳೆ ಈ ಕಷ್ಟವನ್ನೆಲ್ಲಾ ಕಣ್ಣಾರೆ ಕಂಡು ಬೆಳೆದ ರೈತನ ಮಗ ನ್ಯಾಯಾಧೀಶ ನಾದರೂ, ಅವನು ಕಾವೇರಿ ನಿರ್ವಹಣಾ ಪ್ರಾಧಿಕಾರಗಳ ಸೂತ್ರಕ್ಕನುಗುಣವಾಗಿ ತೀರ್ಪನ್ನು ಕೊಡಬೇಕಾಗುತ್ತದೆ. ರೈತ ಕುಟುಂಬದಲ್ಲಿ ಜನಿಸಿರುವ
ನಮಗೆ ಎಕ್ಸ್‌ಪರ್ಟ್‌ಗಳಂತೆ ಹೆಚ್ಚು ತಾಂತ್ರಿಕ ಜ್ಞಾನವಿಲ್ಲದಿರಬಹುದು, ಕಾನೂನು-ಕಟ್ಟಳೆಗಳು ಅರ್ಥವಾಗದಿರಬಹುದು, ಸರಕಾರದ ಜವಾಬ್ದಾರಿ ತಿಳಿಯದಿರಬಹುದು.
ಆದರೆ ನಮಗೆ ಮಾನವನನ್ನು ಮಾನವನನ್ನಾಗಿಯೇ ಕಾಣುವ ಒಳ್ಳೆಯ ಮನಸ್ಸಿದೆ, ನಿಷ್ಕಲ್ಮಶ ಹೃದಯವಿದೆ, ಸರಿತಪ್ಪುಗಳನ್ನು ನೇರವಾಗಿ ಹೇಳುವ, ಅದಕ್ಕಾಗಿ ಹೋರಾಡುವ ಸಾಮರ್ಥ್ಯವಿದೆ. ನಗರದ ಮಂದಿಯಂತೆ ದೊಡ್ಡ ಕಚೇರಿಗಳಲ್ಲಿ ಕೆಲಸ ಮಾಡುತ್ತಿಲ್ಲವೆಂದ ಮಾತ್ರಕ್ಕೆ ನಾವೇನೂ
ದಡ್ಡರಲ್ಲ. ನಮ್ಮ ಶ್ರೇಷ್ಠ ಆಸ್ತಿಯಾದ ಜಮೀನಿನಲ್ಲಿ ಸ್ವತಂತ್ರ ವಾಗಿ ಉಳುಮೆ ಮಾಡಿ, ಸ್ವಾಭಿಮಾನದಿಂದ ಬದುಕು ತ್ತಿದ್ದೇವೆ. ಆದ್ದರಿಂದ ಪ್ರತಿಸಲದ ಹಾಗೆ ಈ ಬಾರಿಯೂ ಕಾವೇರಿ ನೀರಿನ ವಿಚಾರದಲ್ಲಿ ನಮಗೆ ಅನ್ಯಾಯವಾಗುತ್ತಿದೆ ಎಂದು ನಾವೇ ಮೊದಲು ಬೀದಿಗಿಳಿದು ಹೋರಾಟ ಆರಂಭಿಸಿ ರಾಜಧಾನಿಯನ್ನು ಎಚ್ಚರಿಸಿದ್ದು.
ಮಂಡ್ಯ ಭಾಗದಲ್ಲಿ ಕಳೆದ ೨-೩ ತಿಂಗಳಿಂದ ಬಹುತೇಕ ಪ್ರತಿದಿನ ವಿಭಿನ್ನವಾಗಿ ಹೋರಾಡುವ ಮೂಲಕ ಸರಕಾರಗಳ ವಿರುದ್ಧ ಆಕ್ರೋಶವನ್ನು ಹೊರಹಾಕುತ್ತಿದ್ದೇವೆ. ಇಂಥದೇ ಸಂಕಷ್ಟದ ವೇಳೆ ಹೋರಾಡಿದ್ದ ಬಂಗಾರಪ್ಪ-ದೇವೇಗೌಡರಂಥ ಜನ ನಾಯಕರ ಆದಿಯಾಗಿ ಎಲ್ಲಾ ಕನ್ನಡ ಹೋರಾಟಗಾರರಿಂದ, ಹೋರಾಟಕ್ಕೆ ಶಕ್ತಿ ತುಂಬುವ ಸ್ಯಾಂಡಲ್ ವುಡ್ ಕಲಾವಿದ ರಿಂದ ಸ್ಪೂರ್ತಿ ಪಡೆದು ಹೋರಾಡುತ್ತಿದ್ದೇವೆ. ಆದರೆ ನಮ್ಮ
ಇತ್ತೀಚಿನ ಜನನಾಯಕರು ಭರಪೂರ ಜನಬೆಂಬಲವಿದ್ದಾಗ್ಯೂ ಗಟ್ಟಿಯಾಗಿ ಮುಂದೆ ನಿಂತು ಹೋರಾಡದೆ, ಕಾವೇರಿ ನಿರ್ವಹಣಾ ಪ್ರಾಽಕಾರ ನಿರ್ಣಯವನ್ನು ಸಹಜ ವಾಗಿ ಸ್ವಾಗತಿಸುತ್ತಾ ತಮಿಳುನಾಡಿಗೆ ನೀರು ಹರಿಸುತ್ತಿರುವುದು ನಮಗೆ ಆಘಾತ ತಂದಿದೆ.
ಯುದ್ಧ, ಪರಾಕ್ರಮಗಳ ಕಡೆ ತಿರುಗಿನೋಡಲು ಕೂಡ ಸಮಯ ಮಾಡಿಕೊಳ್ಳದೆ ಜೀವನದುದ್ದಕ್ಕೂ ಜನಾನುರಾಗಿ ಕಾರ್ಯಗಳನ್ನು ಮಾಡಿದ
ಮೈಸೂರು ಮಹಾರಾಜರು ಅದರಲ್ಲೂ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಅವರ ಕಾರ್ಯಗಳಲ್ಲಿ ತಾಂತ್ರಿಕ ಶಕ್ತಿ ತುಂಬಿದ ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರನ್ನು ಇಂದಿಗೂ ನಮ್ಮ ಹೃದಯಗಳಲ್ಲಿ ಪೂಜಿಸುತ್ತಿದ್ದೇವೆ. ಕಾವೇರಿ ನೀರು ಜೀವನದ ಮೂಲಭೂತ ಅವಶ್ಯಕತೆಯೆಂದು ಹೋರಾಡಬೇಕಾದ ವಿಚಾರವು ಭಾವನಾತ್ಮಕ ರೂಪ ತಳೆದು ಕರ್ನಾಟಕ-ತಮಿಳುನಾಡು ನಡುವಿನ ವೈಷಮ್ಯದ ವಿಚಾರವಾಗಿ ಎಂದೋ ಪರಿವರ್ತನೆ ಯಾಯಿತು ಎಂಬುದೆಷ್ಟು ಸತ್ಯವೋ, ಕೆಲವರ ಸ್ವಹಿತಾಸಕ್ತಿಗಾಗಿ ಈ ಸಮಸ್ಯೆಯನ್ನು ಹಾಗೆಯೇ ಜೀವಂತವಾಗಿರಿಸಿ ರಾಜ್ಯಗಳ ಹಿತಾಸಕ್ತಿಯನ್ನು ಬಲಿಗೊಡಲಾಗುತ್ತಿದೆ ಎಂಬುದೂ ಅಷ್ಟೇ ಸತ್ಯ.
ಇಂದು ದೇಶ-ದೇಶಗಳ ನಡುವೆ ಹರಿಯುವ ನದಿನೀರಿನ ಹಂಚಿಕೆಯೇ ಬಗೆಹರಿದಿರುವಾಗ ರಾಜ್ಯ- ರಾಜ್ಯಗಳ ನಡುವೆ ಹರಿಯುವ ಕಾವೇರಿ ನೀರಿನ ಹಂಚಿಕೆ ಏಕಿಷ್ಟು ವಿವಾದಗ್ರಸ್ತವಾಗಿದೆ ಎಂಬುದು ಅರ್ಥವಾಗುತ್ತಿಲ್ಲ. ಈ ಸಮಸ್ಯೆಯನ್ನು ತಾತ್ಕಾಲಿಕವಾಗಿ ಉಪಶಮನ ಮಾಡಲಾಗುತ್ತಿದೆಯೇ ಹೊರತು, ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತ್ವರಿತ ಕೆಲಸಗಳಾಗುತ್ತಿಲ್ಲ. ಏಕೆಂದರೆ ಕಾವೇರಿ ನೀರಿನ ವಿಷಯ ರಾಜಕೀಯದೊಂದಿಗೆ
ತಳುಕು ಹಾಕಿಕೊಂಡಿದೆ.
ರಾಜಕೀಯ ಇಚ್ಛಾಶಕ್ತಿಯ ಕೊರತೆ, ರಾಜಕೀಯದ ಹೊರತಾಗಿ ನಡೆಯದ ವಿಶ್ಲೇಷಣೆ, ಸ್ಪಷ್ಟತೆ-ಪಾರದರ್ಶಕತೆಗಳ ಕೊರತೆ, ಸಾಮಾನ್ಯರ ದನಿಗೆ ಸಿಗದ ಆದ್ಯತೆ, ರಾಜ್ಯ ರಾಜ್ಯಗಳ ನಡುವೆ ಹೆಚ್ಚುತ್ತಲೇ ಇರುವ ಅನಿಶ್ಚಿತತೆ ಮುಂತಾದ ಕಾರಣಗಳಿಂದ ನಾವು ಪರಿಹಾರ ಕಂಡುಕೊಳ್ಳಲಾಗುತ್ತಿಲ್ಲ. ಕಾವೇರಿಯ ರೋಷಾಗ್ನಿ ದಹಿಸುವಾಗ ಮಾತ್ರ ಹೋರಾಡುವುದು, ಮಳೆ ಬಂದು ಆರೋಷಾಗ್ನಿ ನಂದಿಹೋದ ಮೇಲೆ ಸುಮ್ಮನಿದ್ದು ಬಿಡುವುದು ಮಾಡುತ್ತಾ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದನ್ನು ಮುಂದೂಡುತ್ತಿದ್ದೇವೆ. ಶುದ್ಧಜಲ ವಿರಳವಾಗಿರುವ ಇಸ್ರೇಲ್‌ನಂಥ ದೇಶವು ಸಮುದ್ರದ ನೀರನ್ನೇ ನಿರ್ಲವಣೀಕರಣ
ಗೊಳಿಸಿ, ಶುದ್ಧೀಕರಿಸಿ ಕೃಷಿ ಚಟುವಟಿಕೆಗಳಿಗೆ ಉಪಯೋಗಿಸುತ್ತಿದೆ.
ಅಂಥದ್ದರಲ್ಲಿ ಇಂಥ ಫಲವತ್ತಾದ ನಾಡಿನಲ್ಲಿರುವ ನಾವು ಕೃಷಿಯ ವಿಷಯದಲ್ಲಿ ಇಷ್ಟೊಂದು ಪರಿತಪಿಸುತ್ತಿರುವುದು ದುಃಖಕರ. ನಾವೂ ತಂತ್ರಜ್ಞಾನದ ಮೂಲಕ ನೀರು ಹಂಚಿಕೆ ಪ್ರಮಾಣ ನಿಗದಿಪಡಿಸುವುದು, ಕೃಷಿ ಯೋಗ್ಯ ನೀರಿನ ಪ್ರಮಾಣ ಹೆಚ್ಚಿಸುವುದು ಮಾಡಿ ಈ ಸಮಸ್ಯೆಗೆ ಪರಿಹಾರ ಪಡೆಯಬೇಕಿದೆ. ‘ಊರಿನ ಹೆಸರಲ್ಲೇ ಕರುಣೆ ಇರೋ ಕರುಣೆಯ ಕರುನಾಡು ಎಲ್ಲೂ ಇಲ್ಲ’ ಅನ್ನೋ ಹಾಡಿನ ಹಾಗೆ ಕನ್ನಡಿಗರು ಎಂದೆಂದಿಗೂ ಪ್ರೀತಿಗೆ ಹೆಚ್ಚು ಮಹತ್ವ ನೀಡುವವರು. ‘ಕಾವೇರಿ ಮಾತೆಗೆ ತಾನು ಯಾವ ರಾಜ್ಯಕ್ಕೆ ಸೇರಿರುವೆ ಎಂದು ತಿಳಿದಿಲ್ಲ. ಆಕೆ ಹರಿಯುವ ಸ್ಥಳದಲ್ಲೆಲ್ಲಾ ಸಮೃದ್ಧಿಯನ್ನು
ಹೊತ್ತು ತರುತ್ತಾಳೆ. ಅವಳನ್ನು ಕಾಪಾಡಬೇಕಾದ ಉತ್ತರ ದಾಯಿತ್ವವನ್ನು ನಾವು ವಹಿಸಿಕೊಳ್ಳಬೇಕು’ ಎಂದು ಸದ್ಗುರುಜಿ ಮತ್ತಿತರ ಪ್ರಮುಖರು ಸಾಮಾಜಿಕ ಜಾಲತಾಣ ಗಳಲ್ಲಿ ವ್ಯಾಖ್ಯಾನಿಸಿರುವಂತೆಯೇ ನಮ್ಮ ಆಲೋಚನೆ ಸಹ ಇದೆ.
ಮಾನವರೆಂದ ಮೇಲೆ ಎಲ್ಲರೂ ಪ್ರಕೃತಿಗೆ ಸಮಾನರು. ಆದರೆ ಪ್ರಾಕೃತಿಕ ಜಲಸಂಪತ್ತು ಹುಟ್ಟಿರುವ ಸ್ಥಳದವರಿಗೆ ಅದರ ಮೊದಲ ಹಕ್ಕು ಎಂದು ಜ್ಞಾನಿಗಳು ಹೇಳುವಂತೆ ಅಥವಾ ಅಂತಾರಾಷ್ಟ್ರೀಯ ನದಿನೀರು ಹಂಚಿಕೆ ಕಾನೂನು ಹೇಳುವಂತೆ ಕಾವೇರಿ ನೀರಿನ ಮೊದಲ ಹಕ್ಕನ್ನು ಕನ್ನಡಿಗರು
ಹೊಂದಿದ್ದಾರೆ. ಆದರೆ ಮುಂಗಾರು ಮಳೆಯಿಲ್ಲದೆ ಬರಗಾಲ ವಿರುವಾಗಲೂ, ನಮ್ಮ ಕುಡಿಯುವ ನೀರಿನ ಉಪಯೋಗಕ್ಕೆಂದು ಸಂಗ್ರಹಿಸಿಟ್ಟಿರುವ ನೀರನ್ನು ಪಕ್ಕದ ರಾಜ್ಯಕ್ಕೆ ಹರಿಸಿ ಎಂದರೆ ಹೇಗೆ? ಎಂಬುದಷ್ಟೆ ಕನ್ನಡಿಗರ ಈಗಿನ ಪ್ರಶ್ನೆ.