Saturday, 14th December 2024

ಭಕ್ತಿ ಪಂಥದ ಮಹಾ ಚೈತನ್ಯ ಶ್ರೀಚೈತನ್ಯ ಮಹಾಪ್ರಭು

ತನ್ನಿಮಿತ್ತ

ಡಾ.ಜ್ಯೋತಿ ಶಂಕರ್‌

ಜ್ಞಾನದ ಭಾಗದಲ್ಲಿ ಶ್ರೇಷ್ಠ ಜ್ಞಾನಿ, ಭಕ್ತಿಯ ವಿಷಯದಲ್ಲಿ ಭಕ್ತಶಿರೋಮಣಿ, ಭಗವತ್ ಸಮರ್ಪಿತ ಕರ್ಮಕ್ಕೆ ನೀಡಿದ ಆದ್ಯತೆ, ಅವಿನಾಭಾವ ಸಂಬಂಧಗಳನ್ನು ತೋರಿಸಿ, ಜೀವಿತಾವಧಿಯಲ್ಲಿ ಸ್ವಲ್ಪವೂ ವಿರಮಿಸದೇ, ನಾಡ ಉದ್ದ ಗಲಕ್ಕೂ ಸಂಚರಿಸಿ, ಭಕ್ತಿಯ ಮಾರ್ಗ ತೋರಿಸಿ, ಕೃಷ್ಣಪ್ರeಯನ್ನು ಜಗಕ್ಕೆ ಸಾರಿದ ಶ್ರೀಚೈತನ್ಯ ಮಹಾಪ್ರಭುಗಳ ಜನ್ಮ ದಿನ ನಾಳೆ.

ಬೋಲ್ ಬೋಲ್ ಬಲೇನ ಪ್ರಭು ಶ್ರೀ- ಬಾಹು ತುಲಿಯಾ|
ಹರಿ ಧ್ವನಿ ಕರೇ ಲೋಕ ಆನಂದೇ ಭಾಸಿಯಾ||
ಹೌದು, ಹರಿ ನಾಮ ಜಪಿಸಿ, ಹರಿ ನಾಮ ಜಪಿಸಿ ಎಂದು ತಮ್ಮ ಶ್ರೀ-ಬಾಹುಗಳನ್ನು ಮೇಲೆತ್ತಿ, ಹರಿ ನಾಮವನ್ನು ಜಪಿಸಿ, ಸರ್ವ ರಿಗೂ ಹರಿಯನ್ನು ಸ್ಮರಿಸುವ, ಭಕ್ತಿಯಲ್ಲಿ ಲೀನವಾಗುವ ಹಕ್ಕಿದೆ ಎಂದು ಜಗಕ್ಕೆ ತೋರಿಸಿ, ಭಕ್ತಿ ಪಂಥಕ್ಕೆ ಹೊಸ ಚೈತನ್ಯವನ್ನು ತುಂಬಿದವರು ಶ್ರೀಚೈತನ್ಯ ಮಹಾಪ್ರಭುಗಳು. ಈ ಪ್ರಪಂಚದ ಜನಸಾಮಾನ್ಯರೆಲ್ಲರಿಗೂ ಸ್ಫೂರ್ತಿಯ ಚಿಲುಮೆ ಯಾಗಿರುವವರು.

ಚೈತನ್ಯ ಮಹಾಪ್ರಭುಗಳು, ಕೋಲ್ಕತಾ ಸಮೀಪದ ಮಾಯಾಪುರದಲ್ಲಿ, ಫಾಲ್ಗುಣ ಪೂರ್ಣಿಮೆಯ ದಿನ ಅಂದರೆ 1486 ಫೆಬ್ರವರಿ 18 ರಂದು ಜನಿಸಿದವರು. ತಂದೆ ಜಗನ್ನಾಥ ಮಿಶ್ರಾ, ತಾಯಿ ಶಚೀದೇವಿ. ತಮ್ಮ ಯೌವನದ 24ರ ಹರೆಯದಲ್ಲಿಯೇ ಸಂನ್ಯಾಸ
ಸ್ವೀಕರಿಸಿದರು. ಜಗನ್ನಾಥ ಪುರಿಯಿಂದ ಮೊದಲ್ಗೊಂಡು ಭಾರತದಾದ್ಯಂತ ಸಂಚರಿಸಿ ದವರು.

ಕಂಗೆಟ್ಟವರನ್ನು ಕರುಣೆಯಿಂದ ಕಂಡವರು; ಕಷ್ಟಕ್ಕೆ ಸ್ಪಂದಿಸಿದವರು; ಸುಜ್ಞಾನವನ್ನು ನೀಡಿದವರು; ಅರಿವನ್ನು ಬೆಳಗಿಸಿ ದವರು. ಜ್ಞಾನದ ಭಾಗದಲ್ಲಿ ಶ್ರೇಷ್ಠ ಜ್ಞಾನಿ, ಭಕ್ತಿಯ ವಿಷಯದಲ್ಲಿ ಭಕ್ತಶಿರೋಮಣಿ, ಭಗವತ್ ಸಮರ್ಪಿತ ಕರ್ಮಕ್ಕೆ ನೀಡಿದ ಆದ್ಯತೆ, ಅವಿನಾ ಭಾವ ಸಂಬಂಧಗಳನ್ನು ತೋರಿಸಿ, ಜೀವಿತಾವಧಿಯಲ್ಲಿ ಸ್ವಲ್ಪವೂ ವಿರಮಿಸದೇ, ನಾಡ ಉದ್ದಗಲಕ್ಕೂ ಸಂಚರಿಸಿ, ಭಕ್ತಿಯ ಮಾರ್ಗ ತೋರಿಸಿ, ಕೃಷ್ಣಪ್ರಜ್ಞೆಯನ್ನು ಜಗಕ್ಕೆ ಸಾರಿದವರು. ಕೃತಕ ಮಾರ್ಗದ ಜೀವನ ಎಂದೂ ಆನಂದವನ್ನು ತರುವುದಿಲ್ಲ, ಅದಕ್ಕಾಗಿಯೇ ಸಹಜ-ಸರಳ-ಸತ್ಯದ ಮಾರ್ಗವನ್ನು ಹಿಡಿಯಿರಿ ಎಂದು ಸಾರಿದರು.

ಮರ್ಕಟ-ವೈರಾಗ್ಯ ನಾ ಕರ ಲೋಕ ದೇಖಾ ಇ|
ಯಥಾ-ಯೋಗ್ಯ ವಿಷಯ ಭುಂಜ ಅನಾಸಕ್ತ ಹಇ||

ಮರ್ಕಟ ವೈರಾಗ್ಯವೆಂದರೆ ಕೃತಕವಾದದ್ದು, ಅದು ಸಲ್ಲದ್ದು, ಏನಿದೆಯೋ ಅದನ್ನು ಅನುಭವಿಸಿ, ಯಾವುದಕ್ಕೂ ಅಂಟದಂತೆ ಜೀವಿಸುವುದೇ ಋಜುಮಾರ್ಗವೆಂದು ತಿಳಿಸಿದವರು ಶ್ರೀಚೈತನ್ಯ ಮಹಾಪ್ರಭುಗಳು. ವ್ಯಕ್ತಿಯ ಶ್ರೇಯಸ್ಸಿಗೆ ಹಾಗೂ ಜಗತ್ತಿನ ಕಲ್ಯಾಣಕ್ಕಾಗಿ ಧರ್ಮಮಾರ್ಗದಲ್ಲಿ ಶ್ರದ್ಧಾವಂತರಾಗಿ ಬದುಕುವ ಅನಿವಾರ್ಯವನ್ನು ತಿಳಿಸಿದರಲ್ಲದೇ ಮಾರ್ಗವನ್ನು ತೋರಿಸಿ ದ್ದಾರೆ.

ಎಲ್ಲ ಮತಗಳ ಸಾರವನ್ನು ತೋರಿಸಿ, ಸಮನ್ವಯ ಸಾಧಿಸಿ, ಬೇಡದ ವಿಕೃತಿಗಳನ್ನು ದೂರಮಾಡಿ, ಶುದ್ಧಗೊಳಿಸಿ ಧರ್ಮವಿರೋಧಿ ಗಳ ಮನಃ ಪರಿವರ್ತನೆಯನ್ನು ತಮ್ಮ ಬುದ್ಧಿಯ ಪ್ರಖರತೆಯಿಂದ, ವಾಗ್ವೈಖರಿಯಿಂದ ವಿಶೇಷವಾದ ವಾದಶೈಲಿಯಿಂದ ತಲೆದೂಗುವಂತೆ ಮಾಡಿದವರು ಶ್ರೀಚೈತನ್ಯ ಮಹಾಪ್ರಭುಗಳು.

ಅವರು ದೇಶ ಪರ್ಯಟನೆ ಮಾಡುವ ಸಮಯದಲ್ಲಿ, ಅವರ ಸಂಪರ್ಕಕ್ಕೆ ಬಂದ ಎಲ್ಲರಿಗೂ, ಪ್ರಭುಗಳ ಬೋಧನೆಯನ್ನು ಒಮ್ಮೆಗೇ ಅರ್ಥ ಮಾಡಿಕೊಳ್ಳುವ ಶಕ್ತಿ ಇರಲಿಲ್ಲ. ಪ್ರಭುಗಳು ಕರುಣಾಮಯರಾದ್ದರಿಂದ ಅವರನ್ನೂ ಉದ್ಧರಿಸಿ ತಮ್ಮ ದಾರಿಗೆ ಕರೆತರುತ್ತಿದ್ದರು. ಸಾರ್ವಭೌಮ-ಭಟ್ಟಾಚಾರ್ಯರೆನ್ನುವರು ಪ್ರಭುಗಳನ್ನು ತಮ್ಮ ಮನೆಗೆ ಭೋಜನಕ್ಕೆಂದು ಆಹ್ವಾನಿಸಿದ್ದರು, ಅವರ ಅಳಿಯ ಅಮೋಘನಿಗೆ ಇದು ಸಹಿಸಲಾಗದೆ, ಅನೇಕ ರೀತಿಯಲ್ಲಿ ಪ್ರಭುಗಳನ್ನು ನಿಂದಿಸುತ್ತಾನೆ.

ಗುರು ನಿಂದನೆಯ ಫಲವಾಗಿ ಆತ ಕಾಲರಾದಿಂದ ಸಾಯುವ ಸ್ಥಿತಿಗೆಬಂದಾಗ ಪ್ರಭುಗಳು ಓಡೋಡಿ ಬಂದು ಮಾತ್ಸರ್ಯ ಚಣ್ಡಾಲ ಕೇನೇ ಇಹಾ ವಸಾಇಲೇ| ಪರಮ ಪವಿತ್ರ ಸ್ಥಾನ ಅಪವಿತ್ರ ಕೈಲೇ|| ಪವಿತ್ರವಾದ ನಿನ್ನೊಳಗೆ ಚಂಡಾಲನಾದ ಹೊಟ್ಟೆಕಿಚ್ಚನ್ನು ಏಕೆ ಇರಿಸಿಕೊಂಡಿದ್ದೀಯ? ತೆಗೆದುಹಾಕು ಎಂದು ಎಚ್ಚರಿಸಿ, ಉಪಚರಿಸಿ ಆತನಿಗೆ ಸನ್ಮಾರ್ಗವನ್ನು ತೋರುತ್ತಾರೆ. ಪ್ರಭುಗಳ ವಿಶೇಷ ಗುಣವೆಂದರೆ ಅವರಿಗೆ ಯಾರನ್ನೂ ದ್ವೇಷಿಸುವುದು ತಿಳಿದೇ ಇರಲಿಲ್ಲ.

ಕೃಷ್ಣ ಭಕ್ತಿಯ ಪ್ರೀತಿ ಮಾತ್ರ ಜಗತ್ತಿನ ಎಲ್ಲ ಚರಾಚರಗಳಲ್ಲೂ ಅವರಿಗೆ ಕಾಣುತ್ತಿತ್ತು. ಒಮ್ಮೆ ಅವರು ಪರ್ಯಟನೆ ಕೈಗೊಂಡಾಗ ಒರಿಸ್ಸಾ ಸೀಮಾರೇಖೆಯ ಬಳಿ ನದಿಯನ್ನು ದಾಟಿ ಮುಸ್ಲಿಂ ರಾಜ್ಯವನ್ನು ಪ್ರವೇಶಿಸಬೇಕಿತ್ತು. ಅಲ್ಲಿಯ ಮುಸ್ಲಿಂ ರಾಜನ ಭಯದ ಕಾರಣ ಯಾರೂ ಒರಿಸ್ಸಾದಿಂದ ಆ ರಾಜ್ಯಕ್ಕೆ ಹೋಗುತ್ತಲೇ ಇರಲಿಲ್ಲ. ಪ್ರಭುಗಳು ನದಿಯನ್ನು ದಾಟಿದಾಗ ಮುಸ್ಲಿಂ ರಾಜನು
ಕಾಣಬಂದನು- ‘ವಿಶ್ವಾಸ’ ಆಸಿಯಾ ಪ್ರಭುರ ಚರಣ ವನ್ಹಿಲ|

‘ಕೃಷ್ಣ’ ’ಕೃಷ್ಣ’ ಕಹಿ’ ಪ್ರೇಮೇ ವಿಹ್ವಲ ಹ-ಇಲ||

ಆತನಿಗೆ ಪ್ರಭುವಿನ ಸಮ್ಮುಖದಲ್ಲಿ ಅನುಭವಕ್ಕೆ ಬಂದದ್ದು ಪ್ರೀತಿ ಮಾತ್ರ. ಸಂವಾದ ನಡೆಸಿದ ನಂತರ, ಅವನ ಬಾಯಲ್ಲಿಯೂ ಹೊರಬಂದದ್ದು ’ಕೃಷ’ ಎನ್ನುವ ಮಹಾಮಂತ್ರ, ಆತ ಪ್ರೇಮ ಪರವಶನಾಗಿದ್ದ. ಪ್ರಭುಗಳು ಎಂದೂ ಯಾರ ಮೇಲೂ, ಏನನ್ನೂ ಹೇರಿದವರಲ್ಲ, ಒಮ್ಮೆ ಅವರ ಸಂಪರ್ಕಕ್ಕೆ ಬರುವ ಇಲ್ಲವೇ ಅವರ ಸಂದೇಶಗಳನ್ನು ತಿಳಿಯುವ ಅವಕಾಶವಾದರೆ, ಕೃಷ್ಣ ಪ್ರಜ್ಞೆಯ ತತ್ವ ತಂತಾನೆ ಅರಿವಿಗೆ ನಿಲುಕುತ್ತದೆ. ಕಠಿಣತರವಾದ ನಿಯಮಗಳನ್ನು ಮೀರಿ, ಪ್ರೇಮದಿಂದ ಮೂಡುವ ಸ್ವಯಂ ವಿಶ್ವಾಸವೆನ್ನುವುದು, ಮನಸೆಳೆದುಬಿಡುತ್ತದೆ.

ಜತೆಗೆ ಪ್ರಭುಗಳು ತಮಗಾಗಿ ಏನನ್ನೂ ಬಯಸಿದವರಲ್ಲ, ಅವರು ಆಶಿಸಿದ್ದು ಒಂದೇ ಒಂದು – ಅದು ‘ಮನುಕುಲದ ಹಿತ’. ಈಚಿನ ದಿನಗಳಲ್ಲಿ ಇಡೀ ಪ್ರಪಂಚವೇ ಎದುರಿಸಿದ ಸಂಕಷ್ಟಗಳನ್ನು ಕಂಡಾಗ, ನಮ್ಮೆಲ್ಲರ ಗಮನಕ್ಕೂ ಬಂದಿರುವುದು, ಪ್ರೇಮರಾಹಿತ್ಯದ ಮನಃಸ್ಥಿತಿ ವಿನಾಶಕ್ಕೆ ಕರೆದೊಯ್ಯುತ್ತದೆನ್ನುವ ಸತ್ಯ. ಪ್ರಭುಗಳು ಆಶಿಸಿದ್ದು ಮಾನವ ಸಮಾಜದಲ್ಲಿ ಪರಸ್ಪರ ಪ್ರೇಮವಿರಲಿ ಎನ್ನುವ ಸಾಮರಸ್ಯವನ್ನು. ಅಂತಹ ಸಾಮರಸ್ಯ ಉಂಟಾಗಬೇಕಾದರೆ ಎಲ್ಲರಲ್ಲೂ ಸಮಾನವಾದ ಆಲೋಚನೆ ಇರಬೇಕು,
ಆ ಸಮಾನ ಚಿಂತನೆಯೇ ಕೃಷ್ಣ ಎನ್ನುವ ಪ್ರe. ಸುಸಂಸ್ಕಾರದ ಕೃಷ್ಣಪ್ರಜ್ಞೆ ವಿಶ್ವದೆಲ್ಲೆಡೆ ವ್ಯಾಪಿಸಿ ಶಾಂತಿ ಹರಡಲಿ ಎನ್ನುವ ಸದಾಶಯ ಚೈತನ್ಯಪ್ರಭುಗಳದ್ದಾಗಿತ್ತು.

ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗ ದವರು, ಸರ್ವರನ್ನೂ ಸಮಾನವಾಗಿ ಕಂಡು, ನಿಷ್ಪಕ್ಷಪಾತ ತೋರಿದವರುವರು ಶ್ರೀಚೈತನ್ಯ ಮಹಾಪ್ರಭುಗಳು. ಆತ್ಮಜ್ಞಾನ ಹೊಂದಿದ ವ್ಯಕ್ತಿ, ಯಾವುದೇ ಜಾತಿ-ಮತಕ್ಕೆ ಸೇರಿದ್ದರೂ, ಆತನು ಜಗತ್ತಿನ ‘ಗುರು’ ಎಂಬುದನ್ನು ತಿಳಿಸಿದ ವಿಶಾಲ ಮನೋಭಾವದವರು, ಉದಾರ ಹೃದಯಿಗಳವರು. ತಮಿಳುನಾಡಿನ ಶ್ರೀರಂಗ ಕ್ಷೇತ್ರದಲ್ಲಿ ಒಬ್ಬ ಬ್ರಾಹ್ಮಣ ಗುಡಿಗೆ ಬಂದು ನಿತ್ಯವೂ ಭಗವದ್ಗೀತೆಯ ಪಠಣವನ್ನು ಮಾಡುತ್ತಿದ್ದ, ಆದರೆ ಅವನು ಶುದ್ಧವಾಗಿ ಶಬ್ದಗಳನ್ನು ಉಚ್ಚರಿಸದಿದ್ದರಿಂದ ಜನರೆಲ್ಲ ಅವನನ್ನು ಅಪಹಾಸ್ಯ ಮಾಡುತ್ತಿದ್ದರು.

ಅದೇನೇ ಆದರೂ ಆತ ಗೀತೆಯನ್ನು ಪಠಿಸುವಾಗ ಆನಂದದಿಂದಿರುತ್ತಿದ್ದ. ಇದನ್ನು ಕಂಡು ಪ್ರಭುಗಳು ಭಗವದ್ಗೀತೆಯ ಯಾವ
ಭಾಗ ನಿಮಗೆ ಸಂತೋಷವನ್ನುಂಟುಮಾಡುತ್ತದೆ? ಎಂದು ಪ್ರಶ್ನಿಸಿದರು.

ಏಇಲಾಗಿ ಯಾವತ್ ಪಡೋಜ್, ತಾವತ್ ಪಾ
ತಾರ ದರಶನ|
ಗೀತಾ – ಪಾಠ ನಾ ಛಾಡೇ ಮೋರಮನ||

ಪ್ರಭುಗಳು ಅಲ್ಲಿದ್ದವರಿಗೆಲ್ಲ ತಿಳಿಹೇಳಬಯಸಿದ್ದು ಈ ಸತ್ಯವನ್ನೇ. ಯಾರೇ ಆಗಲಿ, ತಿಳಿದವನೋ ಅಜ್ಞಾನಿಯೋ, ಭಗವಂತ ನನ್ನು ಯಾರು ಕಾಣಬಲ್ಲರೋ ಅವರು ಮಾತ್ರವೇ ನಿಜವಾದ ಜ್ಞಾನಿಗಳು, ಎನ್ನುವುದನ್ನು ಅಲ್ಲಿದ್ದವರಿಗೆಲ್ಲ ತಿಳಿಸಿ, ನಾಮ ಸ್ಮರಣೆಯ ಮಹತ್ವವನ್ನು ಸಾರಿದರು. ಜಗತ್ತಿನ ಜ್ಞಾನಿಗಳು, ವಿಜ್ಞಾನಿಗಳು, ಪ್ರಜ್ಞಾನಿಗಳು ಇಂದಿಗೂ ಸಹ ಅವರ ವಿಚಾರವನ್ನು ಅಂಗೀಕರಿಸಿ, ಅರ್ಥೈಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಶ್ರೀಚೈತನ್ಯ ಮಹಾಪ್ರಭುಗಳು ಯಾರಿಗೂ ಸಾಟಿಯಿಲ್ಲದ ಅದ್ಭುತವಾದ ಜ್ಞಾನಮಟ್ಟದ ಆಚಾರ್ಯರು ಮತ್ತು ಯುಗ ಪುರುಷರು. ಪವಾಡಗಳಿಗೆ ಆಸಕ್ತಿತೋರದವರು, ಭಕ್ತಿ ಮಾರ್ಗದಲ್ಲಿ ನಿರತರಾದವರು, ಪದಗಳಿಗೆ ಸಿಗದವರು, ಸಾಧನೆಗಳ ಪಟ್ಟಿಗೆ ಒದಗ ದವರು, ಭಗವಜ್ಜೀವನ ನಡೆಸಿ ದವರು ಮತ್ತು ಅನುಪಮ ಆದರ್ಶದ ಪಂಕ್ತಿ ಹಾಕಿದವರು.

ಇಸ್ಕಾನ್, ಶ್ರೀಚೈತನ್ಯ ಮಹಾಪ್ರಭುಗಳ ಭವ್ಯ ಪರಂಪರೆಯ ಹೆಮ್ಮೆಯ ಅಧ್ಯಾತ್ಮಿಕ ಸಂಘಟನೆ. ಶ್ರೀಚೈತನ್ಯ ಮಹಾಪ್ರಭುಗಳ ಬಗೆಗೆ ಅಪಾರ ಗೌರವವನ್ನು ಹೊಂದಿರುವ ಮತ್ತು ಆಚಾರ್ಯರ ಉಪದೇಶಗಳಿಂದ ಪ್ರಭಾವಿತರಾಗಿರುವ ಹಲವರು ಮಹಾಶಯದಿಂದ ಇಲ್ಲಿ ಸಮನ್ವಯಗೊಂಡಿದ್ದಾರೆ. ಅಂದು ಇಡೀ ವಿಶ್ವವನ್ನು ಸುವಿಚಾರಗಳಿಂದ – ಅಧ್ಯಾತ್ಮದಿಂದ, ತತ್ತ್ವದರ್ಶನಗಳಿಂದ ಒಗ್ಗೂಡಿಸಿದ ಚೈತನ್ಯ ಮಹಾಪ್ರಭುಗಳ ಪರಮ ಪವಿತ್ರ ವಾಣಿಯೇ ಈ ಸಂಸ್ಥೆಯ ಮೂಲಬೀಜ.

ಇಸ್ಕಾನ್ ಸಂಸ್ಥೆ, ಶ್ರೀ ಚೈತನ್ಯ ಮಹಾಪ್ರಭುಗಳು ಹಾಕಿಕೊಟ್ಟಂತಹ ಮೇರುಸದೃಶ ಮಹಾನ್ ಪಥದಲ್ಲಿ ಪಥಿಕರಾಗುವ
ಆಶಯದಿಂದ ಸ್ಥಾಪಿತವಾಗಿದೆ. ಶ್ರೀ ಚೈತನ್ಯ ಮಹಾ ಪ್ರಭುಗಳಿಂದ ರಚಿತವಾದ ಮಹಾಮಾರ್ಗದಲ್ಲಿ, ಅವರೇ ಹೇಳಿದಂತೆ ಸಚ್ಚಿಂತಕರೆಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ, ಭಾವೈಕ್ಯದ ಪಯಣಿಗರನ್ನಾಗಿಸುವದು ಸಂಸ್ಥೆಯ ಗುರಿ. ಶ್ರೀ ಚೈತನ್ಯ ಮಹಾಪ್ರಭುಗಳಿಂದ ಪ್ರಸಾದಿತವಾದ ಸಿದ್ಧಾಂತವನ್ನು, ವಿಪ್ಲವಗಳಿರುವ ಈ ಸಂದರ್ಭದಲ್ಲಿ ಅರ್ಥೈಸಿಕೊಳ್ಳಲು ನಾನಾ ಪ್ರಕಾರಗಳಲ್ಲಿ ಕಾರ್ಯೋನ್ಮುಖರಾಗುವ ಅಗತ್ಯವಿದೆ.

ಶ್ರೀ ಚೈತನ್ಯ ಮಹಾಪ್ರಭುಗಳು ಘಟಿಸುವ ಪ್ರತಿಯೊಂದನ್ನೂ ಪರಿಶೀಲಿಸಿ, ಪರಿಶುದ್ಧಗೊಳಿಸಿ ಒಪ್ಪುತ್ತಿದ್ದವರು, ಅವರ ಕರುಣೆ, ಶೋಕವನ್ನು ತೊಡೆದು, ಆನಂದದ ಕಡೆಗೆ ಭಕ್ತರನ್ನು ಕರೆದೊಯ್ಯುತ್ತಿತ್ತು. ವೈಮನಸ್ಯ – ಭಿನ್ನಾಭಿಪ್ರಾಯಗಳನ್ನು ಜಯಿಸಿ ಲೋಕೋತ್ತರವಾದ ಆನಂದವನ್ನು ಶ್ರೀಚೈತನ್ಯ ಮಹಾಪ್ರಭುಗಳ ಈ ಕೃಷ್ಣಪ್ರಜ್ಞೆ ನೀಡುತ್ತಲೇ ಬಂದಿದೆ. ಶುಭದಾಯಕರಾದ
ಶ್ರೀ ಚೈತನ್ಯ ಮಹಾಪ್ರಭುಗಳನ್ನು, ಅವರ ಕೃಷ್ಣಪ್ರಜ್ಞೆಯ ಮಹೋನ್ನತ ತತ್ವವನ್ನು ಅವರ ಜಯಂತಿಯ ಈ ಸುಸಂದರ್ಭದಲ್ಲಿ ನೆನೆಯುವುದೇ ಒಂದು ಸದಾವಕಾಶ.

ಆ ಮಂಗಳಮಯ ನೆನಕೆಗಳು ಎಲ್ಲರದೂ ಆಗಲಿ.