Saturday, 14th December 2024

ದೇಶ ಬದಲಾಗಬೇಕಾದರೆ ನಾನು ಬದಲಾಗಬೇಕು

ಪ್ರಚಲಿತ

ಪ್ರವೀಣ ವಿವೇಕ

anmanjunath@gmail.com

ಸ್ವಕಾರ್ಯಕ್ಕಿಂತ ಸಮುದಾಯದ ಕಾರ್ಯವೇ ಮುಖ್ಯ. ದೇಶ ಬದಲಾಗಬೇಕು, ದೇಶ ಪ್ರಗತಿಯತ್ತ ಸಾಗಬೇಕು ನಿಜ. ದೇಶ ಬದಲಾಗಬೇಕಾದರೆ ನಾನು ಬದಲಾಗಬೇಕು ಅಲ್ಲವೇ? ನಾನು ಎನ್ನುವುದು ಬದಲಾಗದಿದ್ದರೆ ದೇಶ ಬದಲಾವಣೆಯ ಕನಸು ಕಾಣುವುದಾದರೂ ಹೇಗೆ ಹೇಳಿ?

ರಾಜನೊಬ್ಬ ತನ್ನ ಆಸ್ಥಾನದ ಜನರು ಸುಖ ಸಮೃದ್ಧಿಯಿಂದ ಬದುಕಬೇಕು ಎಂಬ ಉದ್ದೇಶದಿಂದ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಅದಕ್ಕೆ ಬೇಕಾದ ಎಲ್ಲ ಆರ್ಥಿಕ ಸಂಪನ್ಮೂಲಗಳನ್ನು ನೀಡಿದ್ದ.

ರಾಜ ಜನರ ಏಳ್ಗೆಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದರೂ ರಾಜ್ಯದ ಜನರ ಜೀವನದಲ್ಲಿ ಮಾತ್ರ ಯಾವುದೇ ಸುಧಾರಣೆಗಳು ಕಾಣದೇ, ನಿತ್ಯವೂ ಸಾರ್ವಜನಿಕರು ಆಸ್ಥಾನದ ಮುಂದೆ ಬಂದು ತಮ್ಮ ಸಮಸ್ಯೆಗಳನ್ನು ರಾಜನ ಹತ್ತಿರ ಹೇಳಿಕೊಳ್ಳುತ್ತಿದ್ದರು. ಇದರಿಂದ ಕುಪಿತನಾದ ರಾಜ ತನ್ನ ಮಂತ್ರಿಯನ್ನು ಕರೆದು ರಾಜ್ಯದ ಕಲ್ಯಾಣಕ್ಕಾಗಿ ಅಪಾರ ಪ್ರಮಾಣದಲ್ಲಿ ಖರ್ಚು ವೆಚ್ಚ ಮಾಡಿ ಯೋಜನೆಗಳನ್ನು ಜಾರಿಗೆ ತರುತ್ತಿದ್ದರೂ, ಜನರು ನಿತ್ಯವೂ ತಮ್ಮ ಸಮಸ್ಯೆಗಳನ್ನು ನನ್ನ ಹತ್ತಿರ ತಗೆದುಕೊಂಡು ಬರುತ್ತಿದ್ದಾರೆ ಇದಕ್ಕೆ ಕಾರಣವೇನು ಎಂಬುವುದನ್ನು ಹುಡುಕು ಎಂದು ಸೂಚಿಸಿದ.

ಮಂತ್ರಿ ಮರು ಮಾತನಾಡದೇ ಕೊಣೆಗೆ ತೆರಳಿ ಮಂಜುಗಡ್ಡೆಯನ್ನು ತಂದು ರಾಜನ ಮುಂದಿಟ್ಟು, ಈ ಮಂಜು ಗಡ್ಡೆಯನ್ನು ಆಸ್ಥಾನದ ಹೊರಗಿರುವ ಅನೇಕ ಸೌಲಭ್ಯಗಳಿಂದ ವಂಚಿತನಾಗಿರುವ ನಾಗರೀಕನಿಗೆ ರಾಜರಾ ಗಿರುವ ನೀವು ನಿಮ್ಮ ಕೈಯಿಂದಲೇ ತಲುಪಿಸಿ ಎಂದು ವಿನಂತಿಸಿದ. ರಾಜ ತನ್ನ ಸಹಾಯಕನನ್ನು ಕರೆದು ಮಂಜುಗಡ್ಡೆ ಕೊಟ್ಟು ಲೆಕ್ಕಿಗನಿಗೆ ನೀಡಲು ಸೂಚಿಸಿದ. ಲೆಕ್ಕಿಗ ತನ್ನ ಕೈ ಕೆಳಗಿರುವ ಅಧಿಕಾರಿ ಕೈಗೆ ಮಂಜುಗಡ್ಡೆ ಯಿಟ್ಟು ಶಾನುಭೋಗರಿಗೆ ಕೊಡಲು ಹೇಳಿದ.

ಶಾನುಭೋಗರು ತಮ್ಮ ಸಹಾಯಕನನ್ನು ಕರೆದು ಕಟ್ಟಕಡೆಯ ವ್ಯಕ್ತಿಗೆ ಮಂಜುಗಡ್ಡೆ ತಲುಪಿಸಲು ಹೇಳಿದರು. ಸಹಾಯಕ ಅದನ್ನು ತಗೆದುಕೊಂಡು ಹೋಗಿ, ಫಲಾನುಭವಿಯ ಮನೆಗೆ ತೆರಳುವಷ್ಟರಲ್ಲೇ ಮಂಜುಗಡ್ಡೆ ಕರಗಿ ನೀರಾಗಿ ಸೋರಿ ಹೋಗಿತ್ತು. ಇದನ್ನು ಗಮನಿಸಿದ ಮಂತ್ರಿ ರಾಜನಿಗೆ ಹೀಗೆ ಹೇಳಿದ, ‘ಮಹಾರಾಜರೇ ರಾಜ್ಯದ ಪ್ರಗತಿಗಾಗಿ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿ ಹಣ ಬಿಡುಗಡೆ ಮಾಡುತ್ತಿದ್ದೀರಿ, ಆದರೆ ಆ ಯೋಜನೆಯ ಆಶಯಗಳು ಜನರಿಗೆ ತಲುಪುವಷ್ಟರಲ್ಲಿಯೇ ಮಂಜುಗಡ್ಡೆ ರೀತಿಯಲ್ಲಿ ಅನೇಕ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕೈಯಲ್ಲಿ ಕರಗಿ ಹೋಗುತ್ತಿದೆ. ಇದರಿಂದ ಎಲ್ಲ ಯೋಜನೆಗಳು ಜನರಿಗೆ ತಲುಪದೇ ಜನರು ಸಾಮಾಜಿಕವಾಗಿ, ಆರ್ಥಿಕವಾಗಿ ಇನ್ನೂ ಸಮಸ್ಯೆಗಳನ್ನು ಅನುಭವಿಸುತ್ತಲೇ ಇದ್ದಾರೆ’ ಎಂದು ನುಡಿದ.

ಬಹುಶಃ ಭಾರತದಲ್ಲಿ ಆಗುತ್ತಿರುವುದೂ ಹೀಗೆಯೇ! ಸರಕಾರದ ಯೋಜನೆಗಳು ದೇಶದ ಜನರಿಗೆ ಸಮರ್ಪಕವಾಗಿ ದೊರೆತು ಸಮಸ್ಯೆಗಳು ಬಗೆಹರಿದು ದೇಶ ಪ್ರಗತಿಯತ್ತ ಸಾಗಬೇಕು ಎಂದು ಪ್ರತಿಯೊಬ್ಬರು ಕನಸು ಕಾಣುತ್ತಾರೆ. ಸರಕಾರದ ಯೋಜನೆಗಳು ೧೩೫ ಕೋಟಿ ಜನಸಂಖ್ಯೆಯಿರುವ ನಮ್ಮ ದೇಶದಲ್ಲಿ ಕಟ್ಟಕಡೆಯ ವ್ಯಕ್ತಿಗೆ ತಲುಪುತ್ತಿವೆಯೇ ಎಂಬುವುದನ್ನು ಇಣುಕಿ ನೋಡಿದಾಗ ಉತ್ತರ ನಿರಾಸೆಯಿಂದ ಕೂಡಿರುತ್ತದೆ. ಎಲ್ಲಾ ರಾಜಕೀಯ ಪಕ್ಷಗಳ ಕೇಂದ್ರ ಹಾಗೂ ರಾಜ್ಯ ಸರಕಾರಗಳು ತಮ್ಮ ಸಿದ್ದಾಂತಕ್ಕೆ ಅನುಗುಣವಾಗಿ, ಜನರ ಅಗತ್ಯತೆಗೆ ಅನುಗುಣವಾಗಿ, ಪ್ರಾದೇಶಿಕವಾಗಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು
ಘೋಷಿಸುತ್ತವೆ. ಆದರೆ ಎಲ್ಲ ಯೋಜನೆಗಳು ತಲುಪಬೇಕಾದ ಜನರಿಗೆ ತಲುಪುತ್ತಿಲ್ಲದಿರುವುದೇ ವಿಷಾದದ ಸಂಗತಿ.

ನಾನು ಧಾರವಾಡದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಾಗ ಅಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಓದುತ್ತಿರುವ ಅನೇಕರನ್ನು ಕೇಳಿದಾಗ ಅನೇಕರು ಒಂದು ನೌಕರಿ ಪಡೆದು ಕೊಳ್ಳಬೇಕು. ಆ ನೌಕರಿಯಿಂದ ಯಾವುದೇ ಮಾರ್ಗದ ಮೂಲಕವಾದರೂ ಆದಾಯ ಸರಾಗವಾಗಿ ಹರಿದು ಬರಬೇಕು ಎನ್ನುವ ಮಾತುಗಳನ್ನೇ ಹೇಳುತ್ತಿದ್ದರು. ಇನ್ನೂ ಹಳ್ಳಿಯಲ್ಲಿ ಸರಕಾರಿ ನೌಕರಿ ಮಾಡುತ್ತಿರುವವನಿಗೆ ಸಂಬಂಳಕ್ಕಿಂತ ಗಿಂಬಳವೇ ಎಷ್ಟು ಎಂದು ಕೇಳುವ ಪರಿಸ್ಥಿತಿಯಲ್ಲಿ ನಾವು ಬದುಕುತ್ತಿದ್ದೇವೆ. ನೌಕರಿಗೆ ಸೇರುವ ಬಹುತೇಕರಿಗೆ ನಾನು ಸೇವೆಯಲ್ಲಿದ್ದೇನೆ ಎಂಬ ಮನೋಭಾವವೂ ಮರೆತು ಹೋಗಿದೆ ಎಂದು ಕಾಣುತ್ತಿದೆ.

ಎಲ್ಲಡೆಯಲ್ಲೂ ದರ್ಪ, ಅಧಿಕಾರದ ಅಮಲು, ಕೆಲಸ ಯಶಸ್ವಿಯಾಗಲು ಕಾಂಚಾಂಣ. ದೆಹಲಿಯಲ್ಲಿ ಅಥವಾ ಬೆಂಗಳೂರಿನಲ್ಲಿ ಘೋಷಣೆಯಾಗುವ ಯೋಜನೆಗಳು ದೂರದ ಹಳ್ಳಿಗೆ ತಲುಪಿ ಸರಿಯಾಗಿ ಅನುಷ್ಠಾನ ಆಗಬೇಕಾದರೆ, ಮೂರು ವರ್ಗದ ಜನರ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಯೋಜನೆ ಘೋಷಿಸುವ ರಾಜಕೀಯ ನೇತಾರ, ಘೋಷಣೆಯಾದ ಕಾರ್ಯಕ್ರಮವನ್ನು ಜನರಿಗೆ ತಲುಪಿಸುವ ಅಧಿಕಾರಿ ವರ್ಗ ಹಾಗೂ ಸರಕಾರದ ಯೋಜನೆಗಳನ್ನು ಸದ್ಭಳಕೆ
ಮಾಡಿಕೊಳ್ಳ ಬೇಕಾದ ಸಾರ್ವಜನಿಕರು. ಈ ಮೂರು ವರ್ಗದ ಜನರು ತಮ್ಮ ಕಾರ್ಯವನ್ನು ಸರಿಯಾಗಿ ನಿರ್ವಹಿಸುತ್ತಿದ್ದಾರೆಯೇ? ೨೦೧೯ ರಲ್ಲಿ ಉತ್ತರ ಕರ್ನಾಟಕದಲ್ಲಿ ಮಹಾ ಪ್ರವಾಹ ಬಂದಾಗ ಸರಕಾರ ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿಸಲು ಮೂರು ವಿಭಾಗಗಳಲ್ಲಿ ಪರಿಹಾರ ನೀಡಲು ಮುಂದಾಯಿತು. ಶೇ.೭೫ಕ್ಕಿಂತ ಹೆಚ್ಚು ಮನೆ ಹಾನಿಯಾದರಿಗೆ ೫ಲಕ್ಷ ಪರಿಹಾರ, ಶೇ.೨೫ರಿಂದ ಶೇ.೭೫ರೊಳಗೆ ಹಾನಿಯಾದರೆ ೩ಲಕ್ಷ ಹಾಗೂ ಶೇ. ೧೫ರಿಂದ ಶೇ.೨೫ ರಷ್ಟು ಹಾನಿಗೆ ೫೦,೦೦೦ ಪರಿಹಾರ ಘೋಷಿಸಿತು.

ಪರಿಣಾಮ ಪ್ರವಾಹ ಪೀಡಿತ ಪ್ರದೇಶ ಬಿಡಿ, ನದಿಗಳಿಂದ ನೂರಾರು ಕಿ.ಮೀ ದೂರವಿರುವ ಮಳೆಯಿಂದ ಯಾವುದೇ ತೊಂದರೆ ಅನುಭವಿಸದ ಸಾವಿರಾರು
ಜನರು ಮಧ್ಯರಾತ್ರಿಯಲ್ಲಿ ಮನೆಯ ಒಂದು ಚಿಕ್ಕ ಗೋಡೆಯನ್ನು ಕೆಡವಿ ಸ್ಥಳೀ  ಸೋಕಾಲ್ಡ್ ರಾಜಕೀಯ ಮುಖಂಡರು ಹಾಗೂ ಅಧಿಕಾರಿಗಳ ಕೃಪಕಟಾಕ್ಷದಿಂದ ಮನೆ ಮಂಜೂರು ಮಾಡಿಸಿಕೊಂಡರು. ಪ್ರವಾಹದಿಂದ ನಿಜವಾದ ಸಮಸ್ಯೆ ಅನುಭವಿಸಿದರೂ ರಾಜಕೀಯವಾಗಿ ಪ್ರಭಾವಿತರಲ್ಲದ ಹಾಗೂ ಅಽಕಾರಿಗಳ ಕೈಬೆಚ್ಚಗೆ ಮಾಡದವರು ಸರಕಾರದ ಯೋಜನೆಯಿಂದ ವಂಚಿತರಾದರು.

ಕರೋನಾ ಸಮಯದಲ್ಲಿ ಬಡವರಿಗೆ, ನಿರ್ಗತಿಕರಿಗೆ ಆಹಾರದ ತೊಂದರೆ ಉದ್ಭವಿಸಬಾರದು ಎಂಬ ಸದುದ್ದೇಶದಿಂದ ಕೇಂದ್ರ ಸರಕಾರ ೨೦೨೦ರ  ಮಾರ್ಚ್‌ ನಿಂದ ಪ್ರತಿಯೊಬ್ಬ ವ್ಯಕ್ತಿಗೆ ೫ಕೆ.ಜಿ ಅಕ್ಕಿ ಹಾಗೂ ೧ಕೆ.ಜಿ ಬೆಳೆಯನ್ನು ೧.೩೦.೦೦೦ ಕೋಟಿ ವೆಚ್ಚದಲ್ಲಿ ೮೦ ಕೋಟಿ ಬಡವರಿಗೆ ನವೆಂಬರ್ ತಿಂಗಳವರೆಗೆ ಉಚಿತವಾಗಿ ನೀಡಿ, ಸರಕಾರ ಜನರ ನೆರವಿಗೆನೋ ನಿಂತಿತು. ಆದರೆ ಈ ರೀತಿ ಉಚಿತವಾಗಿ ನೀಡಿದ ರೇಷನ್ ಸರಿಯಾಗಿ ಸದ್ಭಳಿಕೆ ಆಯಿತಾ ಎನ್ನುವುದು ಯಕ್ಷ ಪ್ರಶ್ನೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಪ್ರಕಾರ ಬಿಪಿಎಲ್ ಕಾರ್ಡು ಪಡೆಯಲು ಬೇಕಾದ ಯಾವುದೇ ಅರ್ಹತೆಗಳನ್ನು ಹೊಂದಿರದವರಿಗೂ ಕರ್ನಾಟಕ ರಾಜ್ಯವೊಂದರಲ್ಲೆ ೭.೫ ಲಕ್ಷಕ್ಕಿಂತ ಹೆಚ್ಚು ಕಾರ್ಡುಗಳನ್ನು ವಿತರಿಸಲಾಗಿದ್ದು, ಇದರಿಂದ ಸರಕಾರಕ್ಕೆ ವಾರ್ಷಿಕವಾಗಿ ಸುಮಾರು ೬೦೦ ಕೋಟಿಯಷ್ಟು ಆರ್ಥಿಕ ಹೊರೆ ಬೀಳುತ್ತಿದೆ. ಹಾಗಾದರೆ ಇಲ್ಲಿ ಯಾರದ್ದು ತಪ್ಪು ಯಾರದ್ದು ಸರಿ? ಬಡವರಿಗೆ ಸಹಾಯವಾಗಲಿ ಎಂದು ಉಚಿತ ರೇಷನ್ ನೀಡುತ್ತಿರುವ ಸರಕಾರದ ಕ್ರಮ ತಪ್ಪಾ? ಯಾವುದೇ ಮಾರ್ಗದ ಮೂಲಕವಾದರೂ ಸರಕಾರದ ಯೋಜನೆ ಪಡೆದುಕೊಳ್ಳುತ್ತಿರುವ ಸಾರ್ವಜನಿಕರದ್ದು ತಪ್ಪಾ? ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು ಎಂದು ಬೊಬ್ಬೆ ಹೊಡೆಯುವ ಅನೇಕರು ತಮ್ಮ ಕೆಲಸ ಮಾಡಿಸಿಕೊಳ್ಳಲು ಭ್ರಷ್ಟಾಚಾರಕ್ಕೆ ಇಳಿಯುತ್ತಾರೆ.

ದೇಶ ಸ್ವಚ್ಛವಾಗಿರಬೇಕೆಂದು ಹೇಳುವ ವಿದ್ಯಾವಂತರು ಈ ರಸ್ತೆ ನನಗೆ ಸಂಬಂಧವಿಲ್ಲ ಎನ್ನುವ ರೀತಿಯಲ್ಲಿ ರಸ್ತೆಗೆ ಕಸ ಸುರಿಯುತ್ತಾರೆ. ಕೊರೋನಾ ತಡೆಯಲು ಸರಕಾರ ಸೋತಿದೆ ಎಂದು ಹೇಳಿದ ಅನೇಕ ಬುದ್ದಿವಂತರು ಕೊರೋನಾ ಪರೀಕ್ಷೆಯಲ್ಲಿ ವರದಿ ಪಾಸಿಟಿವ್ ಆಗಿ ಬಂದಿದ್ದರೂ, ಅದನ್ನು ನೆಗಟೀವ್ ಆಗಿ
ಬದಲಾಯಿಸಿಕೊಂಡರು. ಹೀಗೆ ಹೇಳುತ್ತಾ ಹೋದರೆ ಪಟ್ಟಯೇ ಆಗಿ ಬಿಡುತ್ತದೆ. ಸರಕಾರ ಚಾಪೆಯ ಕೆಳಗೆ ನುಗ್ಗಿ ಕಾರ್ಯನಿರ್ವಹಿಸಿದರೆ ಕೆಲ ಅಧಿಕಾರಿಗಳು
ಹಾಗೂ ಸಾರ್ವಜನಿಕರು ಸ್ವಹಿತಕ್ಕಾಗಿ ರಂಗೋಲಿ ಕೆಳಗೆ ನುಗ್ಗುತ್ತಿದ್ದಾರೆ.

ಸೋ ಕಾಲ್ಡ್ ವಿದ್ಯಾವಂತರೇ ವಾಸಿಸುವ ರಾಜಧಾನಿ ಬೆಂಗಳೂರಿನ ಕೆಲ ರಸ್ತೆಗಳನ್ನು ಒಮ್ಮೆ ಇಣುಕಿ ನೋಡಿದರೆ, ಕೇವಲ ಕಸದ ಗುಂಪುಗಳೇ ಕಾಣಿಸುತ್ತವೆ.
ಬೆಳಿಗ್ಗೆ ವಾಕಿಂಗ್ ಎಂಬ ನೆಪದಿಂದ ಹೊರ ಬರುವುದು, ಕಂಡ ಕಂಡಲ್ಲಿ ಕಸ ಎಸೆಯುವುದು. ಇದು ನಾಗರಿಕರು ವರ್ತಿಸುವ ರೀತಿನಾ? ಖಂಡಿತ ಅಲ್ಲ. ಯಾರಿಗಾದರೂ ನೀವು ಹೇಗೆ ಕಸ ಎಸೆಯಬಾರದು ಎಂದು ಹೇಳಿ ಅವರು ಇಲ್ಲ ನನ್ನಿಂದ ಒಬ್ಬನಿಂದ ಏನು ದೇಶ ಬದಲಾವಣೆ ಆಗುವುದಿಲ್ಲ ಬಿಡಿ ಎಂದು
ಜಾರಿಕೊಳ್ಳುತ್ತಾರೆ. ಹಾಗಾದರೆ ದೇಶ ಬದಲಾಗುವುದು ಯಾವಾಗ? ದೇಶ ಬದಲಾವಣೆ ಆಗುವುದು ಯಾವುದೇ ಭ್ರಷ್ಟಾಚಾರದ ಆರೋಪವನ್ನು ಎದುರಿಸದೇ ಶುದ್ದ ಆಡಳಿತ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಂದ ಮಾತ್ರ ಸಾಧ್ಯವಿಲ್ಲ.

ನಿಜ ಒಪ್ಪಿಕೊಳ್ಳಬೇಕಾದ ಸಂಗತಿಯೇ, ಅಂದಿನ ಪ್ರಧಾನಿ ರಾಜೀವ್ ಗಾಂಧಿ ಕಾಲದಲ್ಲಿ ಒಂದು ರು ಸರಕಾರ ಬಿಡುಗಡೆ ಮಾಡಿದರೆ, ಅದರಲ್ಲಿ ೧೦ ಪೈಸೆ ಮಾತ್ರ
ಜನರಿಗೆ ತಲುಪುತಿತ್ತು. ಆದರೆ ಕೇಂದ್ರ ಸರಕಾರದ ಕೆಲ ಕ್ರಮಗಳಿಂದ ಫಲಾನುಭವಿಗೆ ಸಿಗಬೇಕಾದ ಸೌಲಭ್ಯ ಸಿಗುತ್ತಿದೆ. ಈ ಬದಲಾವಣೆ ಎಲ್ಲ ಕ್ಷೇತ್ರಗಳಲ್ಲೂ
ಆಗಬೇಕು. ಜನರ ಆರೋಗ್ಯಕ್ಕಾಗಿ ಸರ್ಕಾರ ಆಸ್ಪತ್ರೆ ನಿರ್ಮಿಸಬಹುದು, ಭ್ರಷ್ಟಾಚಾರ, ಅತ್ಯಾಚಾರ, ಅನಾಚಾರಗಳನ್ನು ತಡೆಯಲು ಸರಕಾರ ಕಠಿಣ ಕಾನೂನು ಜಾರಿಗೆ ತರಬಹುದು. ಆದರೆ ಮನುಷ್ಯನ ಮನಸ್ಸು ಬದಲಾಯಿಸದ ಹೊರತು ದೇಶದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್ಲ ಎಂಬ ವಿವೇಕಾನಂದರ ಮಾತಿನಂತೆ ಮನುಷ್ಯನ ಮನಸ್ಸು ಬದಲಾಗಿ ಸ್ವಕಾರ್ಯಕ್ಕಿಂತ ಸಮುದಾಯದ ಕಾರ್ಯವೇ ಮುಖ್ಯ ಎಂಬ ಭಾವ ಪ್ರತಿಯೊಬ್ಬರಲ್ಲಿ ಮೊಳಕೆಯೊಡೆದಾಗ ಮಾತ್ರ.

ನಿನ್ನೆಯ ದೇಶಕ್ಕೆ ದೇಶವೇ ಸಂಭ್ರಮದಿಂದ ಗಣರಾಜ್ಯೋತ್ಸವ ದಿನಾಚಾರಣೆಯನ್ನು ಆಚರಣೆ ಮಾಡಿದೆ. ಈ ಸಂದರ್ಭದಲ್ಲಿ ನಾವೆಲ್ಲರೂ ಒಂದು ಸಂಕಲ್ಪ ಮಾಡಬೇಕಿದೆ ನನಗಿಂತ ದೇಶ ದೊಡ್ಡದು, ಸಮಾಜ ದೊಡ್ಡದು ಎನ್ನುವ ಭಾವವನ್ನು ಮೂಡಿಸಿಕೊಳ್ಳಬೇಕಿದೆ. ದೇಶ ನನಗೆ ಏನು ನೀಡಿದೆ ಎನ್ನುವುದಕ್ಕಿಂತ ನಾನು ಸಮಾಜ ಹಾಗೂ ದೇಶಕ್ಕೆ ಏನು ಮಾಡಿದೆ ಎನ್ನುವುದು ಬಹುಮುಖ್ಯವಾಗುತ್ತದೆ. ನನ್ನೊಬ್ಬನ ಪ್ರಯತ್ನದಿಂಸ ಯಾವುದೇ ಬದಲಾವಣೆ ಆಗುವುದಿಲ್ಲ ಎನ್ನುವ ಮನೋಭಾವವನ್ನು ತೊಡೆದು ಹಾಕಿ ನನ್ನಿಂದಲೇ ಬದಲಾವಣೆಯಾಗಲಿ ಎನ್ನುವ ಸಂಕಲ್ಪಕ್ಕೆ ಬದ್ದವಾಗಬೇಕಿದೆ. ಆ ನಿಟ್ಟಿನಲ್ಲಿ ಪ್ರಯತ್ನಗಳಾಗಲಿ.