Wednesday, 11th December 2024

ಬದಲಾವಣೆಗಳನ್ನು ಮೋದಿಯೇ ಜಾರಿಗೆ ತರಬೇಕು ಎಂದೇನೂ ಇಲ್ಲ !

ಇದೇ ಅಂತರಂಗ ಸುದ್ದಿ

ವಿಶ್ವೇಶ್ವರ ಭಟ್

vbhat@me.com

ಮೂರೂವರೆ ವರ್ಷದ ಮಗು ಲಿಲ್ಲಿ ರಾಬಿನ್ಸ, ಟೈಗರ್ ಬ್ರೆಡ್ ಹೆಸರಿನ ಬ್ರಾಂಡನ್ನು ಬದಲಿಸಿ ಜಿರಾಫೆ ಬ್ರೆಡ್ ಎಂದು ಇಡಬೇಕೆಂದಳು. ಬ್ರೆಡ್ಡಿನ ಬಾಹ್ಯ ಭಾಗ ಜಿರಾಫೆಯಂತೆ ಕಾಣಿಸುತ್ತದೆ, ಟೈಗರ್ ಥರಾ ಅಲ್ಲ ಎಂಬುದು ಅವಳ ವಾದ. 105 ವರ್ಷಗಳ ಇತಿಹಾಸವಿರುವ ಕಂಪನಿ ಕೊನೆಗೂ ತನ್ನ ಪುಟ್ಟ ಗ್ರಾಹಕಳೊಬ್ಬಳ ಬೇಡಿಕೆಗೆ ಮಣಿಯಲೇಬೇಕಾಯಿತು. ತನ್ನ ಬ್ರೆಡ್ ಬ್ರಾಂಡಿನ ಹೆಸರನ್ನು ಬದಲಿಸಿತು. ಯಾರು ಬೇಕಾದರೂ ಬದಲಾವಣೆಯ ಹರಿಕಾರರಾಗಬಹುದು.

ಈ ಜಗತ್ತು ಇರೋದೇ ಹೀಗೆ, ಬ್ರಹ್ಮ ಬಂದರೂ ಬದಲಾವಣೆ ತರುವುದು ಸಾಧ್ಯವೇ ಇಲ್ಲ ಎಂಬ ನಕಾರಾತ್ಮಕ ಧೋರಣೆಯನ್ನು ಅನೇಕರು ರೂಢಿಸಿಕೊಂಡಿರುತ್ತಾರೆ. ಬಹಳ ಮಂದಿಗೆ ತಾವೂ ಬದಲಾವಣೆಯ ಹರಿಕಾರರಾಗಬಹುದು, change agents ಆಗಬಹುದು ಎಂಬ ಸಾಮಾನ್ಯ ಸಂಗತಿ ಗೊತ್ತಿರುವುದಿಲ್ಲ. ಅದು ತಮಗೆ ಸಂಬಂಧ ಪಡದ ವಿಷಯ ಎಂದು ಭಾವಿಸಿರುತ್ತಾರೆ.

ಬದಲಾವಣೆಗಳನ್ನು ಮೋದಿಯೇ ಜಾರಿಗೆ ತರಬೇಕೆಂದಿಲ್ಲ. ಅದಕ್ಕೆ ಯಾರು ಬೇಕಾದರೂ ಕಾರಣವಾಗಬಹುದು. ನೀವು ಜೀವನದಲ್ಲಿ ಅನೇಕ ಬಾರಿ ರೈಲುಯಾನ ಮಾಡಿರುತ್ತೀರಿ. ಪ್ರಥಮದರ್ಜೆಯ ಕಂಪಾರ್ಟ್‌ಮೆಂಟಿನಲ್ಲಿ ಇಂಗ್ಲಿಷ್, ಹಿಂದಿ ಮತ್ತು ಸ್ಥಳೀಯ ಭಾಷೆಯ ಜತೆಗೆ ರೋಮನ್‌ನಲ್ಲಿ ’I’ ಎಂದು ಬರೆದಿರುತ್ತಾರೆ ಎಂಬುದನ್ನು ಎಷ್ಟು ಮಂದಿ ಗಮನಿಸಿದ್ದೀರೋ ಗೊತ್ತಿಲ್ಲ. ಆದರೆ ದ್ವಿತೀಯ ಶ್ರೇಣಿಯ ಕಂಪಾರ್ಟಮೆಂಟಿನಲ್ಲಿ ಹಾಗಿರುವುದಿಲ್ಲ. ಅಲ್ಲಿ ’II’ ಎಂದು ಬರೆಯಲಾಗಿರುತ್ತದೆ.

ಫಾಸ್ಟ್ ಕ್ಲಾಸಿನಲ್ಲಿ ರೋಮನ್ ಜತೆಗೆ ಇಂಗ್ಲಿಷ್, ಹಿಂದಿ ಮತ್ತು ಸ್ಥಳೀಯ ಭಾಷೆಯಲ್ಲಿ ಬರೆದಿರುತ್ತಾರೆ. ಇದು ಸಣ್ಣ ವಿಷಯವಾಗಿರಬಹುದು. ಆದರೆ ಇದು ಅನಕ್ಷರಸ್ಥರಲ್ಲಿ ಗೊಂದಲಕ್ಕೆ ಕಾರಣವಾಗಿತ್ತು. ಮುಂಬೈನ ಲೋಕಲ್ ಟ್ರೇನಿನ ಕಂಪಾರ್ಟಮೆಂಟಿನ ಮೇಲೆ ಹೀಗೆ ಬರೆದಿ ದ್ದನ್ನು ಹನ್ನೆರಡು ವರ್ಷದ ಹುಡುಗಿಯೊಬ್ಬಳು ಇತ್ತೀಚೆಗೆ ಗಮನಿಸಿ ದೇಶದ ಆರ್ಥಿಕ ರಾಜಧಾನಿಯ ಜೀವನಶೈಲಿಯಂದು ಬದಲಾವಣೆಗೆ ಕಾರಣಳಾದಳು.

ಎಂಟನೇ ತರಗತಿಯಲ್ಲಿ ಓದುತ್ತಿರುವ ಹುಮೈರಾ ಮೋರಿವಾಲಾ ತಾನು ಪ್ರಯಾಣಿಸುತ್ತಿದ್ದ ರೈಲು ಡಬ್ಬಿಯ ಮೇಲೆ ರೋಮನ್ ಅಂಕೆ ಯಲ್ಲಿ ’ಐಐ’ಎಂದು ಬರೆದಿರುವುದನ್ನು ಕಂಡು ತನ್ನ ತಂದೆಯ ಜತೆಗೆ ಚರ್ಚಿಸಿದಳು. ಆಕೆ ಹೇಳುವುದು ಸರಿಯಾಗಿತ್ತು. ಆಕೆಯ ತಂದೆಗೆ ರೈಲ್ವೆ ಸಲಹಾ ಸಮಿತಿಯ ಸದಸ್ಯರೊಬ್ಬರ ಪರಿಚಯವಿತ್ತು. ಹುಮೈರಾ ತಂದೆ ಆ ಸದಸ್ಯರ ಜತೆ ತಮ್ಮ ಮಗಳು ಗುರುತಿಸಿದ ಆ ಲೋಪದ ಬಗ್ಗೆ ಚರ್ಚಿಸಿದರು.

ಹುಮೈರಾ ಹೇಳುವ ಸಂಗತಿಗಳನ್ನು ಆಲಿಸಿದ ರೈಲ್ವೆ ಅಧಿಕಾರಿಗಳು ಅದನ್ನು ಬದಲಿಸುವ ನಿರ್ಧಾರಕ್ಕೆ ಬಂದರು. ಹುಮೈರಾ
ವಾದ ವೇನೆಂದರೆ ಪ್ರಥಮ ದರ್ಜೆಯ ಡಬ್ಬಿಯಲ್ಲಿ ತ್ರಿಭಾಷಾ ಸೂತ್ರವಿದೆ, ಆದರೆ ಎರಡನೇ ದರ್ಜೆಯ ಡಬ್ಬಿಯಲ್ಲಿ ಅದು ಇಲ್ಲ.  ಅಧಿಕಾರಿ ಗಳಿಗೆ ಆಕೆಯ ವಾದ ಸರಿ ಎನಿಸಿತು. ಎಲ್ಲ ಶ್ರೇಣಿಯ ರೈಲು ಬೋಗಿಗಳಲ್ಲಿ ಒಂದೇ ಬಗೆಯ ಭಾಷಾಸೂತ್ರವಿರುವುದು ಸೂಕ್ತವೆಂದು ಅವರು ತೀರ್ಮಾನಿಸಿದರು. ಈ ವಿಚಾರವನ್ನು ಅವರು ವಿಭಾಗೀಯ ವ್ಯವಸ್ಥಾಪಕರ ಗಮನಕ್ಕೂ ತಂದರಲ್ಲದೇ ಎರಡನೇ ದರ್ಜೆಯ ಬೋಗಿಯಲ್ಲೂ ತ್ರಿಭಾಷಾ ಸೂತ್ರ ಅನುಸರಿಸಿ ಸೂಚನಾ ಫಲಕಗಳನ್ನು ಬರೆಸುವ ಕೆಲಸ ಪ್ರಾರಂಭಿಸಿದರು.

ಮೊದಲಿಗೆ ಪಶ್ಚಿಮ ರೈಲ್ವೆಯಲ್ಲಿ ಇದು ಜಾರಿಗೆ ಬಂದಿತು. ನಂತರದಲ್ಲಿ ಮಧ್ಯ ರೈಲ್ವೆಯಲ್ಲೂ ಇದನ್ನು ಅನುಸರಿಸಲಾಯಿತು. ಎಂಟನೇ ತರಗತಿಯ ಹುಡುಗಿಯ ಮಾತಿಗೆ ಬೆಲೆ ಕೊಟ್ಟು ಅಂಥದ್ದೊಂದು ಬದಲಾವಣೆಯ ಪ್ರಸ್ತಾಪವನ್ನು ಬೋರ್ಡ್ ರೂಮ್ ತನಕ ಒಯ್ದು, ಬದಲಾವಣೆ ತಂದಿದ್ದು ಸಣ್ಣ ವಿಷಯವಲ್ಲ. ಭಾರತೀಯ ರೈಲ್ವೆಯಲ್ಲಿ ಇಂಥ ಬದಲಾವಣೆ ತರುವುದೂ ಬಹಳ ದೊಡ್ಡ ಸಂಗತಿಯೇ. ಆದರೆ ರೈಲ್ವೆ ಅಧಿಕಾರಿಗಳು ಹುಮೈರಾ ಮಾತಿಗೆ ಬೆಲೆ ಕೊಟ್ಟು ತಮ್ಮ ತಪ್ಪನ್ನು ತಿದ್ದಿಕೊಂಡು ಜನಸಾಮಾನ್ಯರ ಸಮಸ್ಯೆಯನ್ನು ಪರಿಹರಿಸಿ ದ್ದರು.

ಇಲ್ಲಿ ನಾನು ಇತ್ತೀಚೆಗೆ ‘ದೈನಿಕ್ ಭಾಸ್ಕರ್’ ಪತ್ರಿಕೆಯಲ್ಲಿ ಓದಿದ ಇನ್ನೊಂದು ವಿಷಯವನ್ನು ನಿಮಗೆ ಹೇಳಬೇಕು. ನೀವು ಟೈಗರ್ ಬ್ರೆಡ್ ಹೆಸರನ್ನು ಕೇಳಿರಬಹುದು. ಆ ಹೆಸರು ನಂತರ ಜಿರಾಫೆ ಬ್ರೆಡ್ ಎಂದು ಬದಲಾಯಿತು. ಅದಕ್ಕೆ ಮೂರೂವರೆ ವರ್ಷದ ಪುಟ್ಟ ಮಗು ಕಾರಣ ಅಂದ್ರೆ ಆಶ್ಚರ್ಯವಾಗಬಹುದು. ಮೂರೂವರೆ ವರ್ಷದ ಮಗು ಲಿಲ್ಲಿ ರಾಬಿನ್ಸ್, ಟೈಗರ್ ಬ್ರೆಡ್ ಹೆಸರಿನ ಬ್ರಾಂಡನ್ನು ಬದಲಿಸಿ ಜಿರಾಫೆ ಬ್ರೆಡ್ ಎಂದು ಬದಲಾಯಿಸುವಲ್ಲಿ ಯಶಸ್ವಿಯಾಗಿದ್ದಳು. ಬ್ರೆಡ್ಡಿನ ಬಾಹ್ಯ ಭಾಗ ಜಿರಾಫೆಯಂತೆ ಕಾಣಿಸುತ್ತದೆ, ಟೈಗರ್ ಥರಾ ಅಲ್ಲ
ಎಂಬುದು ಅವಳ ವಾದವಾಗಿತ್ತು.

ಅದೊಂದು ದಿನ ಲಿಲ್ಲಿ, ಫುಟ್‌ಪಾತ್ ಮೇಲೆ ನಡೆದುಕೊಂಡು ಹೋಗುತ್ತಿzಗ ಅಂಗಡಿಯಲ್ಲಿಟ್ಟಿದ್ದ ಬ್ರೆಡ್ ಕಡೆಗೆ ಆಕೆಯ ಗಮನ ತಿರುಗಿತು. ಅಂಗಡಿಯಾತನನ್ನು ಮಾತನಾಡಿಸಿ ಬ್ರೆಡ್ಡಿನ ಹೆಸರು ಬದಲಿಸುವಂತೆ ಅವಳು ಕೇಳಿಕೊಂಡಳು. 105 ವರ್ಷ ಇತಿಹಾಸವಿರುವ ಬ್ರೆಡ್ಡಿನ ಹೆಸರು ಬದಲಿಸುವುದು ಸಣ್ಣ ಮಾತಲ್ಲ. ಆ ಹುಡುಗಿ ಮನೆಗೆ ಹೋಗಿ ತನ್ನ ಪೋಷಕರ ಸಹಾಯದಿಂದ ಬ್ರೆಡ್ ತಯಾರಿಸುವ ಕಂಪನಿಗೆ ಪತ್ರವೊಂದನ್ನು ಬರೆಯುತ್ತಾಳೆ. ಬ್ರೆಡ್ ಕಂಪನಿಯ ಗ್ರಾಹಕ ಸೇವಾ ತಂಡದ ಸದಸ್ಯ ಕ್ರಿಸ್‌ಗೆ ಪತ್ರ ಬರೆದು ಆ ಬಗ್ಗೆ ಮಾಹಿತಿ ಕೇಳುತ್ತಾಳೆ.
ಅದು ಟೈಗರ್ ಬ್ರೆಡ್ ಎಂಬ ಹೆಸರಿನಿಂದ ಖ್ಯಾತವಾಗಿದೆ, ಏಕೆಂದರೆ ಮೊದಲಿಗೆ ತಯಾರಕರು ಅದನ್ನು ಸಿದ್ಧಪಡಿಸುವಾಗ ಅದರ ಮೇಲ್ಪದರ ಟೈಗರ್‌ನಂತೆ ತೋರುತ್ತಿತ್ತು. ಆದರೆ ಈ ಹುಡುಗಿಯ ಒತ್ತಾಯ ಒಂದೇ. ಆ ಹೆಸರು ಸರಿಯಿಲ್ಲ, ಅದನ್ನು ಬದಲಿಸಲೇಬೇಕು ಎಂಬುದು ಅವಳ ವಾದವಾಗಿತ್ತು.

ಲಿಲ್ಲಿ ಮತ್ತು ಕ್ರಿಸ್ ನಡುವೆ ನಡೆದ ಪತ್ರ ವ್ಯವಹಾರವನ್ನು ಲಿಲ್ಲಿಯ ತಾಯಿ ಫೇಸ್ ಬುಕ್‌ನಲ್ಲಿ ಪೋಸ್ಟ್ ಮಾಡಿದಳು. ಅದು ಸಾಕಷ್ಟು ವೈರಲ್ ಆಯಿತು. ಲಂಡನ್ನಿನ ಅನೇಕ ಮಂದಿ ಅದಕ್ಕೆ ಪ್ರತಿಕ್ರಿಯಿಸಿ ಹೆಸರು ಬದಲಿಸುವುದಕ್ಕೆ ಒತ್ತಾಯ ಹೇರಿದರು. ಕಂಪನಿ ಅದನ್ನು ಸ್ವೀಕರಿಸಿ ಮನ್ನಿಸಲೇಬೇಕಾದ ಪ್ರಸಂಗ ಎದುರಾಯಿತು. ಕ್ರಿಸ್ ಪತ್ರವೊಂದನ್ನು ಲಿಲ್ಲಿಗೆ ಬರೆದು, ಟೈಗರ್ ಬ್ರೆಡ್ಡಿನ ಹೆಸರನ್ನು ಜಿರಾಫೆ ಬ್ರೆಡ್ ಎಂದು ಬದಲಿಸುವುದು ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದ್ದೇವೆ ಎಂದು ತಿಳಿಸಿದ.

105 ವರ್ಷಗಳ ಇತಿಹಾಸವಿರುವ ಕಂಪನಿ ಕೊನೆಗೂ ತನ್ನ ಪುಟ್ಟ ಗ್ರಾಹಕಳೊಬ್ಬಳ ಬೇಡಿಕೆಗೆ ಮಣಿಯಲೇಬೇಕಾಯಿತು. ತನ್ನ ಬ್ರೆಡ್ ಬ್ರಾಂಡಿನ ಹೆಸರನ್ನು ಬದಲಿಸಿತು. ಯಾರು ಬೇಕಾದರೂ ಬದಲಾವಣೆಯ ಹರಿಕಾರರಾಗಬಹುದು.

ಪಾಪು ಹೇಳಿದ ಪ್ರಮಾದಗಳು
ಪಾಟೀಲ ಪುಟ್ಟಪ್ಪನವರು ಹೆಡ್‌ಲೈನ್‌ಗಳಲ್ಲಿ ಪದಗಳನ್ನು ಬೇಕಾಬಿಟ್ಟಿ ಕತ್ತರಿಸುವುದರಿಂದ ಆಗುವ ಆವಾಂತರಗಳ ಬಗ್ಗೆ ರಸವತ್ತಾಗಿ ಬಣ್ಣಿಸುತ್ತಿದ್ದರು. ವಿಜಯಲಕ್ಷ್ಮಿಬಾಯಿ ತೇರದಾಳ ಎಂಬುವವರು ನಿಧನರಾದಾಗ, ವಿಜಯಲಕ್ಷ್ಮಿ/ ಬಾಯಿ ತೆರದಾಳ/ ನಿಧನ ಎಂದು ಪ್ರಕಟವಾಗಿತ್ತು. ಉತ್ತರ ಕರ್ನಾಟಕದ ಭಾಗಗಳಲ್ಲಿ ‘ಬಾಯಿ ತೆರದಾಳ’ಅಂದರೆ ನಿಧನಳಾದಳು ಎಂದೇ ಅರ್ಥ. ಹೀಗಾಗಿ ಹೆಸರನ್ನು ಬೇಕಾಬಿಟ್ಟಿ ಕತ್ತರಿಸಿದ್ದರಿಂದ ಅರ್ಥವ್ಯತ್ಯಾಸವಾಗಿ ಎಡವಟ್ಟಾಗಿತ್ತು.

ಪಂಡಿತ ಜವಾಹರಲಾಲ್ ನೆಹರು ಅವರ ಸಹೋದರಿ ವಿಜಯಲಕ್ಷ್ಮಿ ಪಂಡಿತ್ ಅಮೆರಿಕದ ರಾಯಭಾರಿಯಾಗಿ ನೇಮಕವಾದರು. ಆರು ತಿಂಗಳಲ್ಲಿ ಅವರು ಅಮೆರಿಕವನ್ನು ಸುತ್ತಿ ಬಂದರು. ಅದನ್ನೇ ಕನ್ನಡದ ಪತ್ರಿಕೆಯೊಂದು ದೊಡ್ಡ ಸುದ್ದಿ ಮಾಡಿತು. ‘ಅಮೆರಿಕೆಯಲ್ಲಿ/ ವಿಜಯ ಲಕ್ಷ್ಮಿಯವರ/ ಸಂಚಾರ’ ಎಂಬ ಶೀರ್ಷಿಕೆ ‘ಅಮೆರಿಕೆಯಲ್ಲಿ/ ವಿಜಯಲಕ್ಷ್ಮಿಯ/ ವರ ಸಂಚಾರ’ ಎಂದು ಪ್ರಕಟವಾಗಿಬಿಟ್ಟಿತು. ‘ವಿಜಯಲಕ್ಷ್ಮಿ ಯವರ’ ಎಂಬ ಪದ ಮೊದಲ ಸಾಲಿನಲ್ಲಿ ಫಿಟ್ ಆಗದೇ ಇದ್ದುದು ಈ ಪ್ರಮಾದಕ್ಕೆ ಕಾರಣವಾಗಿತ್ತು.

ಇನ್ನೊಂದು ಪ್ರಸಂಗ. ಒಮ್ಮೆ ಕೇಂದ್ರದ ಕೃಷಿ ಮತ್ತು ಆಹಾರ ಸಚಿವ ಕನ್ಹಯ್ಯಾಲಾಲ್ ಮುನಸಿಯವರು ತಮ್ಮ ಪತ್ನಿಯೊಂದಿಗೆ ಸೂರತ್ ನಗರಕ್ಕೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಅವರು ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ಸುದ್ದಿ ಕನ್ನಡ ಪತ್ರಿಕೆಗಳಿಗೆ ಪಿಟಿಐ ಮತ್ತು ಯುಎನೈ ಸಂಸ್ಥೆಗಳ ಮೂಲಕ ಬಂದಿತು. ಅದನ್ನು ಕನ್ನಡಕ್ಕೆ ಅನುವಾದಿಸಿ ಸುದ್ದಿಯಾಗಿ ತೆಗೆದುಕೊಳ್ಳಲಾಯಿತು. ಕನ್ನಡದ ಒಂದು ಪ್ರಮುಖ ಪತ್ರಿಕೆಯಲ್ಲಿ ಈ ಸುದ್ದಿ, ‘ಮುನಸಿ ದಂಪತಿಗಳ ಸುರತ ಸಮಾರಂಭ’ ಎಂದು ಪ್ರಕಟವಾಗಿತ್ತು. ಸೂರತ್ ಪದ ಸುರತ ಆಗಿ ಮುಜಗರಕ್ಕೆ ಕಾರಣವಾಗಿತ್ತು.

ಮಹಾತ್ಮ ಗಾಂಧಿಯವರು ದಂಡಿ ಸತ್ಯಾಗ್ರಹಕ್ಕೆ ಸಿದ್ಧತೆ ಮಾಡುತ್ತಿದ್ದಾಗ ತಮ್ಮನ್ನು ಬಂಧಿಸಬಹುದು ಎಂಬ ಸಂದೇಹ ಅವರನ್ನು ಕಾಡಲಾರಂಭಿಸಿತು. ಒಂದು ವೇಳೆ ತಮ್ಮ ಬಂಧನವಾದರೆ ಜನ ಯಾವ ರೀತಿ ಪ್ರತಿಕ್ರಿಯಿಸಬೇಕು ಎಂಬುದನ್ನು ತಿಳಿಸುವುದಕ್ಕಾಗಿ ಅವರು ’ಬಾಂಬೆ ಕ್ರಾನಿಕಲಒಂ’ ಪತ್ರಿಕೆಗೆ ಒಂದು ಸಂದರ್ಶನ ನೀಡಿದರು. ಆಗ ಆ ಪತ್ರಿಕೆಯ ಸಂಪಾದಕರಾಗಿದ್ದ ಸೈಯದ್ ಅಬ್ದು ಬ್ರೆಲ್ವಿ ಅವರೇ ಖುzಗಿ ಗಾಂಧಿಯವರ ಸಂದರ್ಶನ ಮಾಡಿದರು.

ಆ ಸಂದರ್ಶನಕ್ಕೆ ಬ್ರೆಲ್ವಿಯವರೇ, Mahatma Gandhi’s message to the masses ಎಂಬ ಶೀರ್ಷಿಕೆ ನೀಡಿದರು. ಆ ದಿನಗಳಲ್ಲಿ ಅಚ್ಚುಮೊಳೆಯಲ್ಲಿ ಅಕ್ಷರಗಳನ್ನು ಜೋಡಿಸುತ್ತಿದ್ದರು. masses ಎಂಬ ಪದದಲ್ಲಿ ’m’ ಅಕ್ಷರ ಎಗರಿ ಹೋಗಿ, asses (ಕತ್ತೆ ಅಥವಾ ಅಂಡು) ಎಂದಾಗಿ ಬಿಟ್ಟಿತು. ಇದನ್ನು ಖುದ್ದು ಗಾಂಽಯವರೇ ನೋಡಿ ಖೇದ ವ್ಯಕ್ತಪಡಿಸಿದರು.

ಅಮ್ಮಾವ್ರ ಗಂಡನಾಗುವುದು 
ಜಗತ್ತಿನಲ್ಲಿ ಅತ್ಯಂತ ಆಕರ್ಷಕ, ಆದರೆ ಯಮಯಾತನೆಯ ಹುದ್ದೆ ಅಂದ್ರೆ ಇಂಗ್ಲೆಂಡಿನ ಎಲಿಜಬೆತ್ ರಾಣಿಯ ಗಂಡನಾಗುವುದಂತೆ. ಈ ಜವಾಬ್ದಾರಿಯನ್ನು ರಾಣಿಯ ಗಂಡ ಪ್ರಿನ್ಸ್ ಫಿಲಿಪ್ ಸುಮಾರು ಎಪ್ಪತ್ತು ವರ್ಷಗಳ ಕಾಲ ನಿಭಾಯಿಸಿದ ಅಂದ್ರೆ ಅವರ ಗುಣವನ್ನು ಮೆಚ್ಚಲೇ ಬೇಕು. ಪ್ರಿನ್ಸ್ ಫಿಲಿಪ್ ಜೀವನದುದ್ದಕ್ಕೂ ರಾಣಿಯ ಗಂಡನಂತೆ ವರ್ತಿಸಿದನೇ ಶಿವಾಯ, ಎಂದೂ ರಾಜ ಎಂದು ಅನಿಸಿಕೊಳ್ಳಲೇ ಇಲ್ಲ.

ಆ ಹುದ್ದೆಯೇ ಅಂಥದ್ದು. ಅಮ್ಮಾವ್ರ ಗಂಡನಾಗಿರಬೇಕು. ಅರಮನೆಯಲ್ಲಿರಲಿ, ಸರಕಾರದಲ್ಲಿರಲಿ ಅಥವಾ ಇನ್ನೆಲ್ಲಿಯೇ ಇರಲಿ ಪ್ರಥಮ ಪ್ರಾಶಸ್ತ್ಯ ರಾಣಿಗೇ. ರಾಜನಾದವನು ರಾಣಿ ಯನ್ನು ಹಿಂಬಾಲಿಸಬೇಕಷ್ಟೆ. ಇದಕ್ಕೆ ಅತ್ಯಂತ ವಿಶಾಲ ಹೃದಯ ಬೇಕು. ಅಮ್ಮಾವ್ರ ಗಂಡನಾಗುವುದು ಸಣ್ಣ ಕೆಲಸವಲ್ಲ. ಗಂಡನಾದರೂ ಪ್ರತಿ ನಿತ್ಯ ಹೆಂಡತಿಯ ನಂತರದ ಸ್ಥಾನಕ್ಕೆ ತೃಪ್ತನಾಗುವುದು ಸುಲಭದ ವಿಷಯ ವಲ್ಲ.

ವಿದೇಶಿ ಗಣ್ಯರು ಬರಲಿ, ರಾಯಲ್ ಸಮಾರಂಭವಿರಲಿ, ವಿದೇಶಿ ಗಣ್ಯರ ಜತೆಗೆ ಭೋಜನಕೂಟವಿರಲಿ, ಎಡೆಯೂ ರಾಣಿಗೆ ಅಗ್ರ ತಾಂಬೂಲ. ಕೆಲವು ಸಲ ಪ್ರಿನ್ಸ್ ಫಿಲಿಪ್ ಅವರ ಹೆಸರನ್ನು ಹೇಳಲು ಮರೆತುಬಿಡುತ್ತಿದ್ದರು ಅಥವಾ ಇನ್ಯಾರೋ ನೆನಪಿಸಿದ ಬಳಿಕ ಅವರ ಹೆಸರನ್ನು ಹೇಳುತ್ತಿದ್ದರು. ಇಂಥ ಅನೇಕ ಪ್ರಸಂಗಗಳಾಗಿವೆ. ಆದರೆ ಪ್ರಿನ್ಸ್ ಫಿಲಿಪ್ ಬೇಸರಿಸಿಕೊಳ್ಳುತ್ತಿರಲಿಲ್ಲ. ಒಂದು ಸಂದರ್ಭದಲ್ಲಿ ತಮ್ಮ ಹೆಸರನ್ನು ಯಾರೂ ಹೇಳದಿದ್ದಾಗ, ತಾವೇ ಎದ್ದು ನಿಂತು, ತಾನೂ ಉಪಸ್ಥಿತನಿದ್ದೇನೆ ಎಂದು ಕೈಯೆತ್ತಿ ಜ್ಞಾಪಿಸಿದ್ದರು. ಕಾರ್ಯಕ್ರಮ ಗಳಲ್ಲಿ ರಾಣಿ ಹೆಸರೇನು ಹತ್ತು ಸಲ ಹೇಳಿ, ತಮ್ಮ ಹೆಸರನ್ನು ಹೇಳಲು ಮರೆತಾಗ, ಶಿಷ್ಟಾಚಾರ ಉಲ್ಲಂಘನೆಯಾದಾಗ, ಅವರು ಅದನ್ನು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ‘ಇವೆ ನನಗೆ ರೂಢಿಯಾಗಿದೆ’ ಎಂದು ನಗುತ್ತಲೇ ಹೇಳಿ, ವಾತಾವರಣ ತಿಳಿಗೊಳಿಸುತ್ತಿದ್ದರು.

ರಾಣಿಯ ಗಂಡನಾಗಿ ಎಪ್ಪತ್ತು ವರ್ಷಗಳ ಕಾಲ ಅವರು ಇಂಥ ಅವೆಷ್ಟೋ ‘ಅಪಮಾನ’ಗಳನ್ನು ಅನುಭವಿಸಿದ್ದರೋ, ಅವರಿಗೊಂದೇ ಗೊತ್ತಿರಲು ಸಾಧ್ಯ. ಆದರೆ ಅವರೆಂದೂ ತಮ್ಮ ಅಸಮಾಧಾನವನ್ನು ಸಾರ್ವಜನಿಕವಾಗಿ ತೋರಿಸಿಕೊಳ್ಳಲಿಲ್ಲ. ಒಮ್ಮೆ ರಾಣಿ ನ್ಯೂಜಿ ಲ್ಯಾಂಡಿಗೆ ಹೋಗಿದ್ದಾಗ, ಅಂತಾರಾಷ್ಟ್ರೀಯ ಚಾರಿಟಿ ಸಂಸ್ಥೆಯೊಂದು ಏರ್ಪಡಿಸಿದ ಕಾರ್ಯಕ್ರಮದಲ್ಲಿ, ಪ್ರಿನ್ಸ್ ಫಿಲಿಪ್ ಅವರನ್ನು ವೇದಿಕೆಗೆ ಕರೆಯಲೇ ಇಲ್ಲ. ತಮ್ಮನ್ನು ಮೇಲೆ ಕರೆಯಬಹುದು ಎಂದು ಪ್ರಿನ್ಸ್ ನಿರೀಕ್ಷಿಸಿದ್ದರು. ಆದರೆ ಕೊನೆ ತನಕವೂ ಅವರಿಗೆ ಆಹ್ವಾನವೇ ಬರಲಿಲ್ಲ.

ವೇದಿಕೆ ಮೇಲೆ ದೇಶದ ಪ್ರಧಾನಿ ಸೇರಿದಂತೆ ಗಣ್ಯಮಾನ್ಯ ವ್ಯಕ್ತಿಗಳಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಅದೊಂದು ಲೋಪವೆಂಬುದು ಗೊತ್ತಾಯಿತು. ಕಾರ್ಯಕ್ರಮ ಸಂಘಟಕರು ಅದಕ್ಕೆ ಕ್ಷಮೆಯಾಚಿಸಿದರು. ಆ ಸಭೆಯ ಮೊದಲ ಸಾಲಿನಲ್ಲಿ ತಾವು ಕುಳಿತಲ್ಲಿಂದಲೇ ಎದ್ದು
ನಿಂತ ಪ್ರಿನ್ಸ್ ಫಿಲಿಪ್, ‘ನೀವು ವೇದಿಕೆಗೆ ನನ್ನನ್ನು ಕರೆಯಲಿಲ್ಲ. ನಾನು ಅದನ್ನು ಅವಮಾನ ಎಂದು ಭಾವಿಸಿರಲಿಲ್ಲ. ಆದರೆ ವೇದಿಕೆಗೆ ಕರೆಯದೇ ಇದ್ದುದು ಲೋಪವಾಯಿತೆಂದು ನನಗಾದ ಗಾಯದ ಮೇಲೆ ಉಪ್ಪು ಸವರಿ ನನಗೆ ಅಪಮಾನ ಮಾಡಿ ದಿರಿ’ ಎಂದು ಬಹಿರಂಗವಾಗಿ ನಗುನಗುತ್ತಲೇ ಹೇಳಿದರು.

ಒಮ್ಮೆ ರಾಣಿ, ಫಿಲಿಪ್ ಜತೆಗೆ ಆಸ್ಟ್ರೇಲಿಯಾಕ್ಕೆ ಹೋಗಿದ್ದಳು. ಅಲ್ಲಿನ ಪ್ರತಿಷ್ಠಿತ ವಿಶ್ವವಿದ್ಯಾಲಯವೊಂದು ರಾಣಿಗಾಗಿ ಔತಣ ಕೂಟ ವೊಂದನ್ನು ಏರ್ಪಡಿಸಿತ್ತು. ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರನ್ನು ರಾಣಿ ಮತ್ತು ಅವಳ ಪತಿಗೆ ಪರಿಚಯ ಮಾಡಿಕೊಡುತ್ತಿದ್ದರು. ಪ್ರಿನ್ಸ್ ಫಿಲಿಪ್‌ಗೆ ಒಬ್ಬನನ್ನು ಪರಿಚಯಿಸಿದಾಗ, ’ಹೀಸ್ ಹೈನೆಸ್, ನಾನು ಅಂಥ ದೊಡ್ಡ ವ್ಯಕ್ತಿಯೇನಲ್ಲ, ನಾನು ನನ್ನ ಪತ್ನಿಯ ಜತೆಗೆ ಬಂದಿದ್ದೇನೆ. ನನ್ನ ಪತ್ನಿ ದೊಡ್ಡ ಸಾಧನೆ ಮಾಡಿzಳೆ. ದಂಪತಿಗಳನ್ನು ಆಹ್ವಾನಿಸಿದ್ದರಿಂದ ಅವಳ ಜತೆಗೆ ನಾನೂ ಬಂದಿದ್ದೇನೆ’ ಎಂದು ಅತ್ಯಂತ ಮುಜುಗರದಿಂದ ಹೇಳಿದ.

ಆತನ ಭುಜದ ಮೇಲೆ ಕೈಹಾಕಿದ ಪ್ರಿನ್ಸ್ ಫಿಲಿಪ್, ’ಅಷ್ಟಕ್ಕೇ ಬೇಸರಿಸಿಕೊಳ್ಳಬೇಕಿಲ್ಲ. ನಾನು ಮತ್ತು ನೀವು ಒಂದೇ ದೋಣಿಯ
ಪಯಣಿಗರು. ನಿಮ್ಮ ಸ್ಥಿತಿ ಹೇಗಿದೆಯೋ, ನನ್ನದೂ ಹಾಗೇ ಇದೆ. ನಾನೂ ನನ್ನ ಪತ್ನಿಯ ಜತೆಗೆ ಬಂದಿದ್ದೇನೆ’ ಎಂದು ಹೇಳಿ ಸಂತೈಸಿದ್ದರು. ಪ್ರಿನ್ಸ್ ಫಿಲಿಪ್‌ಗೆ ಅದು ಹೊಸತೇನೂ ಆಗಿರಲಿಲ್ಲ. ಹಾಗೆಂದು ಅದಕ್ಕಾಗಿ ಅವರು ಬೇಸರಿಸಿಕೊಳ್ಳುತ್ತಿರಲಿಲ್ಲ. ಒಳಗಿನಿಂದ
ಅತೀವ ಹಿಂಸೆಯಾಗುತ್ತಿದ್ದರೂ ತೋರಗೊಡುತ್ತಿರಲಿಲ್ಲ. ತಾನು ಇರಬೇಕಾದುದೇ ಹಾಗೆ ಎಂಬುದು ಅವರಿಗೆ ಗೊತ್ತಿತ್ತು. ಅಮ್ಮಾವ್ರ ಗಂಡನಾಗಿರುವುದೇ ತಮ್ಮ ರೋಲು ಎಂಬುದನ್ನು ಅವರು ಸ್ವೀಕರಿಸಿದ್ದರು.

ಎಂಥ ಗಂಡನಿಗೂ ಹೆಂಡತಿ ಮುಂದೆ ಹಾಗಿರುವುದು ಕಷ್ಟವೇ. ಆದರೆ ಪ್ರಿನ್ಸ್ ಫಿಲಿಪ್ ಪಾಲಿಗೆ ಬಂದಿದ್ದು ಪಂಚಾಮೃತ ಎಂದು ಪರಿಗಣಿಸಿ ದ್ದರು. ಅವರ ಮನಸ್ಸಿನಲ್ಲಿ ಒಂದು ಕ್ಷಣ ಕೀಳರಿಮೆ ಬಾಽಸಿದ್ದರೆ ಅವರಿಗೆ ತಮ್ಮ ಪಾತ್ರವನ್ನು ನಿಭಾಯಿಸಲು ಸಾಧ್ಯ ವಾಗುತ್ತಿರಲಿಲ್ಲ. ಈ ದೃಷ್ಟಿಯಿಂದ ನೋಡಿದರೆ, ಪ್ರಿನ್ಸ್ ಫಿಲಿಪ್ ಅದೆಷ್ಟು ದೊಡ್ಡ ವ್ಯಕ್ತಿಯಾಗಿದ್ದರು ಎಂಬುದು ಗೊತ್ತಾಗುತ್ತದೆ.

ಬೆಡ್ ರೂಮ್ ವಾಸನೆ
ನಾನು ಎಲ್ಲಾ ಓದಿದ್ದು. ಮದುವೆಯಾದ ನಂತರ, ಬೆಡ್ ರೂಮಿನಲ್ಲಿ ವಾಸನೆ ಹೇಗಿರುತ್ತದೆ ? ಮೊದಲ ಮೂರು ವರ್ಷಗಳಲ್ಲಿ… ಅತ್ತರು (ಪರ್ಫ್ಯೂಮ್), ಹೂವು, ಚಾಕೊಲೇಟ, ಹಣ್ಣಿನ ವಾಸನೆಯಿರುತ್ತದೆ. ಐದು ವರ್ಷಗಳ ನಂತರ… ಬೇಬಿ ಪೌಡರ್, ಜಾನ್ಸನ್ ಕ್ರೀಮ್, ಲೋಷನ್, ಬೇಬಿ ಆಯಿಲ್ ವಾಸನೆಯಿರುತ್ತದೆ. ಮೂವತ್ತು ವರ್ಷಗಳ ನಂತರ… ಟೈಗರ್ ಬಾಮ್, ಅಮೃತಾಂಜನ, ವಿಕ್ಸ್ ವಾಸನೆ ಸೂಸುತ್ತಿರುತ್ತದೆ. ಐವತ್ತು ವರ್ಷಗಳ ನಂತರ… ಬರೀ ಅಗರಬತ್ತಿ ವಾಸನೆ !