Saturday, 23rd November 2024

ಬದಲಾವಣೆಗೆ ಕರುಬಿ ಕೂರಲೂ ಸಮಯವಿಲ್ಲ !!

ಶಿಶಿರ ಕಾಲ

shishirh@gmail.com

ಚಾಟ್ ಜಿಪಿಟಿ ಬಗ್ಗೆ ವಿವರಿಸುವ ೨ ವಾರದ ಹಿಂದಿನ ಲೇಖನದಲ್ಲಿ, ಇಷ್ಟೆಲ್ಲ ಬದಲಾವಣೆ ಕಂಡ ನೀವು ನಾವೆಲ್ಲ ಅದೆಷ್ಟು ಭಾಗ್ಯವಂತರು ಎಂಬುದನ್ನು ಚುಟುಕಾಗಿ ಹೇಳಿದ್ದೆ. ಇಂದು ಬದುಕಿರುವ, ೩೦-೩೫ ವಯಸ್ಸು ದಾಟಿರುವ ಎಲ್ಲರೂ ಭಾಗ್ಯವಂತರೇ.

ಏಕೆಂದರೆ, ಹಿಂದಿನವರೆಂದೂ ಕಾಣದ ಬದಲಾವಣೆಗೆ ಒಂದೇ ಜೀವಮಾನದಲ್ಲಿ ಸಾಕ್ಷಿಯಾದವರಿವರು. ಅದೊಂದು ಕಾಲವಿತ್ತು, ಯಾವುದೇ ಹಬ್ಬ ಬಂತೆಂದರೆ ಪೋಸ್ಟ್ ಡಬ್ಬಿಗಳು ಗ್ರೀಟಿಂಗ್ಸ್ ಕಾರ್ಡುಗಳಿಂದ ತುಂಬಿ ಹೋಗುತ್ತಿದ್ದವು. ಸಂಕ್ರಾಂತಿ ಬಂದರೆ ಎಳ್ಳುಕಾಳು, ಯುಗಾದಿ ಬಂದರೆ ಎಳ್ಳುಬೆಲ್ಲ ವನ್ನು ಗ್ರೀಟಿಂಗ್ಸ್ ಜತೆ ಇಟ್ಟು ಕಳಿಸುತ್ತಿದ್ದೆವು. ಹಿಂದೆಲ್ಲ ಟೆಲಿಗ್ರಾಂ ಬಂತೆಂದರೆ ಹತ್ತಿರದವರಾರೋ ‘ಟಿಕೆಟ್ ತೆಗೆದುಕೊಂಡರು’ ಎಂದೇ ಅರ್ಥ. ಓದಿ ನೋಡುವುದಕ್ಕಿಂತ ಮೊದಲು ‘ಟೆಲಿಗ್ರಾಂ’ ಎಂಬ ಶಬ್ದವೇ ಆತಂಕ ಹುಟ್ಟುಹಾಕಿ ಅಂಥದ್ದೊಂದು ಕೆಟ್ಟಸುದ್ದಿ ಕೇಳಲು ಮನಸ್ಸನ್ನು  ಸಜ್ಜುಗೊಳಿಸಿ ಬಿಡುತ್ತಿತ್ತು.

ಸುದ್ದಿ ತಿಳಿಯಬೇಕೆಂದರೆ ನಿಗದಿತ ಸಮಯದಲ್ಲೇ ರೇಡಿಯೋ, ಟಿವಿ ಹಚ್ಚಬೇಕಿತ್ತು; ತಪ್ಪಿದರೆ ಅಂದಿನ ಮುಖ್ಯ ಸುದ್ದಿಗಳು ತಪ್ಪಿಹೋಗುತ್ತಿದ್ದವು, ಏನಾಯಿತೆಂದು ಬೇರೆಯವರನ್ನು ಕೇಳಿಕೊಳ್ಳಬೇಕಿತ್ತು. ಲ್ಯಾಂಡ್‌ಲೈನ್ ಫೋನುಗಳು ನಿಧಾನಕ್ಕೆ ಬಂದಾಗ ಅವೆಲ್ಲ ಬದಲಾದವು. ನಂತರ ಮೊಬೈಲ್ ಫೋನುಗಳು ಬಂದು ನಾವು ಶುಭಾಶಯ ತಿಳಿಸುವುದು ಎಸ್‌ಎಂಎಸ್‌ಗೆ ಬದಲಾಯಿತು. ಈಗ ಎಸ್‌ಎಂಎಸ್ ಬಳಸುವುದು ಒಟಿಪಿಗೆ ಮಾತ್ರ. ಸುದ್ದಿ ಒಂದು ನಿರಂತರ ಹರಿವು. ಸುದ್ದಿಯನ್ನು ತಿಳಿಯಬಾರದೆಂದರೆ ಅದುವೇ ಕಷ್ಟವೆನ್ನುವ ಸ್ಥಿತಿ. ಸ್ನೇಹಿತನೋ ಸಂಬಂಧಿಯೋ ವಿದೇಶಕ್ಕೆ ಅಥವಾ ದೂರದೂರಿಗೆ ಹೋಗಿಬಿಟ್ಟರೆ ಅವನ ಬಗ್ಗೆ ಮತ್ತೆ ಕೇಳುವುದು ಆ ವ್ಯಕ್ತಿಯೇ ಊರಿಗೆ ಬಂದಾಗ ಎನ್ನುವಂತಿತ್ತು.

ಈಗ ಹಾಗಿಲ್ಲ, ಸೋಷಿಯಲ್ ಮೀಡಿಯಾದಲ್ಲಿ ಜಗತ್ತು ಚಿಕ್ಕದು. ಕೆಲವೇ ವರ್ಷದ ಹಿಂದೆ ಕಂಪ್ಯೂಟರ್ ಎಂದರೆ ೬-೭ ಬಾಕ್ಸಿನಲ್ಲಿ ತುಂಬಿಸಿ ಸಾಗಿಸ ಬೇಕಿತ್ತು. ಆದರಿಂದು ಹಾಗಿಲ್ಲ. ಅಂದಿನ ಕಂಪ್ಯೂಟರ್‌ನ ನೂರುಪಟ್ಟು ಶಕ್ತಿಯುತ ನಮ್ಮ ಮೊಬೈಲ್. ಬಹುಶಃ ಇಂದಿನ ತಂತ್ರಜ್ಞಾನ ಇರಲಿಲ್ಲವಾದಲ್ಲಿ ದೂರದೇಶದಲ್ಲಿ ಕೂತು ಲೇಖನ ಬರೆಯಲಿಕ್ಕೂ ಆಗುತ್ತಿರಲಿಲ್ಲ, ಓದಿ ನಿಮಗೆ ಪ್ರತಿಕ್ರಿಯಿಸಲೂ ಸಾಧ್ಯವಾಗುತ್ತಿರಲಿಲ್ಲ. ಇದು ಬಹಳ ವರ್ಷದ ಹಿಂದಿನ ಕಥೆಯೇನಲ್ಲ. ಸಂಬಂಧಿಯೊಬ್ಬರು ಹುಬ್ಬಳ್ಳಿಯ ಬಸ್ ಸ್ಟ್ಯಾಂಡ್ ಮೂಲಕ ಹಾದುಹೋಗುವವರಿದ್ದರು.

ನಾನು ಈ ಬಸ್ಸಿಗೆ ಇಂಥ ಸಮಯದಲ್ಲಿ ಹುಬ್ಬಳ್ಳಿಗೆ ಬರುವವನಿದ್ದೇನೆ ಎಂದು ಅವರು ಸುಮಾರು ೧ ತಿಂಗಳ ಹಿಂದೆಯೇ ತಿಳಿಸಿದ್ದರು. ಆ ಪತ್ರ ಬಂದು
ಮುಟ್ಟಿದ್ದು, ಆ ದಿನಕ್ಕೆ ಎರಡು ದಿನವಿರುವಾಗ. ನಾನು ಅವರನ್ನು ಅಂದು ಭೆಟ್ಟಿಯಾಗುತ್ತೇನೆ ಎಂದು ವಾಪಸ್ ತಿಳಿಸಲೂ ಸಾಧ್ಯವಿರಲಿಲ್ಲ. ನಾನಲ್ಲಿಗೆ ಬರುತ್ತೇನೋ ಇಲ್ಲವೋ ಎಂಬುದು ಅವರಿಗೆ ತಿಳಿದಿಲ್ಲ. ನಾನು ಹೋಗದಿದ್ದಲ್ಲಿ ಅವರು ಕಾಯುತ್ತಿದ್ದರೇ? ಗೊತ್ತಿಲ್ಲ. ಆ ಬಸ್ ಇಂಥ ಸಮಯದಲ್ಲಿ
ಬರಬಹುದೆನ್ನುವ ಅಂದಾಜಿನಲ್ಲಿ ಪ್ರಯಾಣಿಕರು ಇಳಿಯುವ ಸ್ಥಳದಲ್ಲಿ ಕಾಯಲು ಹೋಗಿ ನಿಂತೆ. ಅಂದುಕೊಂಡ ಸಮಯಕ್ಕೆ ಬಸ್ ಬರಲಿಲ್ಲ. ಆ ಬಸ್ ಎಲ್ಲಿದೆ ಎಂಬ ಅಂದಾಜೂ ಇಲ್ಲ.

ಕಾದು ಕಾದು ೩ ತಾಸಿನ ನಂತರ ಆ ಬಸ್ ಬಂತು. ಅವರು ಸಿಕ್ಕಿದರು. ಅಂದು ಅದೃಷ್ಟವೆಂದೇ ಅನ್ನಿಸಿದ್ದು. ಒಂದೈದು ನಿಮಿಷದ ಭೆಟ್ಟಿಗೆ ಕನಿಷ್ಠ ೪-೫ ತಾಸನ್ನು ವ್ಯಯಿಸಬೇಕಾಯಿತು. ‘ಅವರು ಆ ಬಸ್ಸಿಗೆ ಬರುವರೆಂದು ಹೇಳಿದ್ದು ತಿಂಗಳ ಹಿಂದಿನ ಮಾತು. ಈಗ ಕೊನೆಯ ಕ್ಷಣದಲ್ಲಿ ಅದು ಬದಲಾಗಿರ ಬಹುದು, ಬಸ್ ತಪ್ಪಿಸಿಕೊಂಡಿರಬಹುದು’ ಎಂಬಿತ್ಯಾದಿ ಸಾವಿರದೆಂಟು ಅನಿಶ್ಚಿತತೆ. ಹಿಂದಿನ ತಿಂಗಳು ಅದೇ ಹುಬ್ಬಳ್ಳಿ ಬಸ್ ನಿಲ್ದಾಣದಲ್ಲಿ ನಾನು ಒಬ್ಬರನ್ನು ಭೆಟ್ಟಿಯಾಗುವುದಿತ್ತು.

ಅವರಿಗೆ ತಿಳಿಸಿದ್ದು ಒಂದು ವಾಟ್ಸಾಪ್ ಮೆಸೇಜ್ ಮೂಲಕ, ಅದು ಕೂಡ ಅದೇ ದಿನ ಬೆಳಗ್ಗೆ. ಹೊರಟ ಕೂಡಲೇ ‘ಇಂಥ ಬಸ್ಸು, ಇಂಥ ಸಮಯ’ ಎಂದು ಮತ್ತೊಂದು ವಾಟ್ಸಾಪ್. ‘ನಾನು ಹೇಳಿದಂತೂ ಮನೆಯಿಂದ ಹೊರಡಬೇಡ, ಕಲಘಟಗಿ ಬಂದ ಕೂಡಲೇ ಹೇಳುತ್ತೇನೆ, ಆಗ ಹೊರಟರೆ ಸಾಕು’ ಎಂದೆ.
ನನ್ನ ಬಸ್ ಹುಬ್ಬಳ್ಳಿ ತಲುಪುವ ಸಮಯಕ್ಕೆ ಸರಿಯಾಗಿ ಒಂದು ನಿಮಿಷ ಮೊದಲು ಸ್ನೇಹಿತ ಬಸ್ ಸ್ಟ್ಯಾಂಡ್ ತಲುಪಿದ್ದ. ಬದಲಾವಣೆ ಎಂದರೆ ಇದೇ ಅಲ್ಲವೇನು? ನಾವು ಜನರನ್ನು ಸಂಧಿಸುವ ರೀತಿಯೇ ಬದಲಾದದ್ದು ನಮ್ಮೆಲ್ಲರ ಅನುಭವ. ಅಲ್ಲಿಯೋ ನಡೆಯುವ ಊರ ಬಂಡಿ ಹಬ್ಬವನ್ನು ಸ್ನೇಹಿತನೊಬ್ಬ ಸೋಷಿಯಲ್ ಮೀಡಿಯಾದಲ್ಲಿ ಲೈವ್ ಮಾಡಿ ಹಾಕುತ್ತಾನೆ.

ಪರವೂರಿನಲ್ಲಿ ಇದ್ದವರಿಗೆ, ಹೆಚ್ಚು ಕಡಿಮೆ ಊರಲ್ಲಿಯೇ ಇದ್ದಷ್ಟು ಅಪ್ಡೇಟ್ ಸಿಗುತ್ತದೆ. ಹಿಂದಿನ ವರ್ಷ ನಮ್ಮೂರಿನಲ್ಲಿ ಸೇತುವೆಯೊಂದು ಮಳೆಯ ನದಿಯ ಹರಿವಿನಿಂದ ಕೊಚ್ಚಿಹೋಗಿತ್ತು. ಅದಾಗಿ ಕೆಲವು ನಿಮಿಷವಷ್ಟೇ ಆಗಿತ್ತು. ಅದನ್ನು, ಅಲ್ಲಿನ ನೀರಿನ ರಭಸವನ್ನು ಸ್ನೇಹಿತನೊಬ್ಬ ಲೈವ್ ಬಿತ್ತರಿಸಿದ್ದ. ನಂತರ ಮನೆಯವರಿಗೆ ಫೋನ್ ಮಾಡುವಾಗ ಅದನ್ನು ಪ್ರಸ್ತಾಪಿಸಿ, ಹೀಗಾಯಿತಂತೆ ಹೌದಾ? ಎಂದೆ. ಹಾಗೊಂದು ಘಟನೆ ನಡೆದದ್ದು ಅಲ್ಲಿಯೇ ಊರಿನಲ್ಲಿದ್ದ ಮನೆಯವರಿಗೆ ತಿಳಿದಿರಲಿಲ್ಲ. ಸುಮಾರು ೧೩,೦೦೦ ಕಿ.ಮೀ. ದೂರದ, ಭೂಮಿಯ ಇನ್ನೊಂದು ಮಗ್ಗುಲಲ್ಲಿದ್ದ ನಾನು ಅದೆಲ್ಲವನ್ನೂ ಲೈವ್ ನೋಡಿದ್ದೆ.

ಇದು ಬದಲಾವಣೆ. ಅಂದಿನ ಟೆಲಿಗ್ರಾಂ, ಲ್ಯಾಂಡ್‌ಲೈನ್ ಫೋನ್ ಗಳು ಈಗ ಸಂಗ್ರಹಯೋಗ್ಯವಾಗಿಹೋಗಿವೆ. ಅದೆಷ್ಟೋ ಕಾಲ, ವಿಶ್ವಯುದ್ಧದ ಸಮಯದಿಂದ ತೀರಾ ಇತ್ತೀಚಿನವರೆಗೆ ಬಳಸಿದ ಟೆಲಿಗ್ರಾಂ ವ್ಯವಸ್ಥೆ ಸ್ಥಗಿತಗೊಂಡು ಭಾರತದಲ್ಲಿಯೇ ೧೦ ವರ್ಷವಾಯ್ತು. ಇಂದು ಸೆಂಟಿಮೆಂಟ್ ಕಾರಣದಿಂದ ಕೆಲವು ದೇಶಗಳು ಟೆಲಿಗ್ರಾಂ ಅನ್ನು ಉಳಿಸಿಕೊಂಡದ್ದು ಬಿಟ್ಟರೆ ಬಾಕಿಯೆಲ್ಲೆಡೆ ಅದು ನಿಂತು ದಶಕವೇ ದಾಟಿದೆ. ಇವ್ಯಾವುದೂ ನನ್ನ ರೋದನವಲ್ಲ, ನಾವೆಷ್ಟು ಬದಲಾಗಿದ್ದೇವೆ ಎಂಬುದರ ದ್ಯೋತಕವಾಗಿರುವ ಸವಿನೆನಪುಗಳು. ಈ ಎಲ್ಲ ಬದಲಾವಣೆಗಳು ಅವಶ್ಯವಿತ್ತು, ಅಂತೆಯೇ ನಡೆದಿವೆ. ಇಂದು ಮೊಬೈಲ್ ಅದೆಷ್ಟೋ ಬದಲಾವಣೆ ತಂದಿದೆ.

ಈ ಸಲ ಭಾರತಕ್ಕೆ ಬಂದಾಗ ಯುಪಿಐ, ಸ್ಕ್ಯಾನ್ ಮಾಡಿ ವ್ಯವಹಾರ ಮಾಡುವ ವ್ಯವಸ್ಥೆ ನೋಡಿ ನಾನಂತೂ ದಂಗಾಗಿ ಹೋಗಿದ್ದೇನೆ. ದೇಶಕ್ಕೆ ಬಂದ ಮೊದಲ ವಾರ ನನ್ನ ಬಳಿ ಫೋನ್ ಪೇ, ಪೇಟಿಎಂ ಮೊದಲಾದ ಯಾವುದೇ ವ್ಯವಸ್ಥೆ ಇರಲಿಲ್ಲ. ಬೆಂಗಳೂರಿನಲ್ಲಿ ಓಡಾಡುವಾಗ, ಅಂಗಡಿಗಳಿಗೆ ತಿರುಗುವಾಗ ನಗದು ಹಿಡಿದುಕೊಂಡು ವ್ಯವಹಾರ. ನಗದು ಕೊಟ್ಟರೆ ಅಂಗಡಿಯಾತ ನಾನೊಬ್ಬ ಆದಿಮಾನವನೇನೋ ಎಂಬಂತೆ ನೋಡುತ್ತಿದ್ದ. ‘ಚೇಂಜ್ ಇ ಸರ್, ಫೋನ್ ಪೇ ಮಾಡಿಬಿಡಿ’ ಎನ್ನುತ್ತಿದ್ದ. ನಾನು ಅದ್ಯಾವುದೂ ಇಲ್ಲವೆಂದರೆ ತೀರಾ ಶಿಲಾಯುಗದಿಂದ ಬಂದವನಂತೆ ಅವನೆದುರು ನಿಲ್ಲಬೇಕಿತ್ತು. ಮೊದಲ ವಾರ ಮುಗಿಯುವುದರೊಳಗೆ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಮಾಡಿಕೊಂಡಿಲ್ಲವೆಂದರೆ ಬದುಕಲು ಸಾಧ್ಯವೇ ಇಲ್ಲವೆನ್ನು ವಂತಾಯಿತು.

ಪ್ರಾಮಾಣಿಕವಾಗಿ ಹೇಳುತ್ತೇನೆ, ಭಾರತದದ ಈ ಬದಲಾವಣೆ ಅಮೆರಿಕದಲ್ಲಿದ್ದ ನನಗೆ ಅರಗಿಸಿಕೊಳ್ಳಲು ಕಷ್ಟವಾಗಿತ್ತು; ಏಕೆಂದರೆ ಅಂಥ ವ್ಯವಸ್ಥೆ ಅಮೆರಿಕದಲ್ಲಿ ಇನ್ನೂವರೆಗೆ ಬಂದಿಲ್ಲ. ಬಹುಶಃ ವೀಸಾ ಮತ್ತು ಮಾಸ್ಟರ್ ಕಾರ್ಡ್‌ನಂಥವರ ವಶೀಲಿತನದಿಂದಾಗಿ ಇದೆಲ್ಲ ಸಾಧ್ಯವಾದರೂ ಇಲ್ಲಿ ಅದು ಜಾರಿಯಾಗುವುದು ಕಷ್ಟವಿದೆ. ನಮ್ಮಲ್ಲಿನ ಸರಕಾರ ಅದೆಲ್ಲವನ್ನೂ ಮೀರಿ ಕೆಲಸ ಮಾಡಿದೆ. ಮೊದಲೆರಡು ವಾರ ಇದೆಲ್ಲ ಬದಲಾದ ವ್ಯವಸ್ಥೆಯನ್ನು
ಬೆರಗಿನಿಂದಲೇ ನೋಡಿದ್ದು. ಭಾರತದದ ಈ ಬದಲಾವಣೆ, ಅದನ್ನು ಗೂಡಂಗಡಿ, ತಳ್ಳುಗಾಡಿಯವರೆಗಿನವರು ಅಳವಡಿಸಿಕೊಂಡಿದ್ದು ಸಾಮಾನ್ಯ ಸಂಗತಿಯಲ್ಲ. ತಂತ್ರಜ್ಞಾನವನ್ನು ಮೊದಲು ಅಳವಡಿಸಿಕೊಳ್ಳುವುದು ಅಮೆರಿಕನ್ನರು ಎನ್ನುವ ಮಾತನ್ನು ಸುಳ್ಳಾಗಿಸಿದ ಸಂಗತಿಯಿದು.

ಹಿಂದೆಲ್ಲ, ‘ಮೊದಲು ಅಮೆರಿಕಕ್ಕೆ ಬರುತ್ತದೆ, ನಂತರದಲ್ಲಿ ಉಳಿದ ಬೆಳೆದ ದೇಶಗಳಿಗೆ, ತದನಂತರ ಭಾರತಕ್ಕೆ’ ಎಂಬುದು ವಾಡಿಕೆಯ ಮಾತಾಗಿತ್ತು. ಈಗ ಭಾರತಕ್ಕೆ ಅಥವಾ ಆಯಾ ದೇಶಕ್ಕೆ ತಕ್ಕಂತೆ ತಂತ್ರeನ ಅಳವಡಿಸಿ ಬೆಳೆಸುವ ಸಾಧ್ಯತೆ. ಎಲ್ಲಿಯ ಟೆಲಿಗ್ರಾಂ, ಎಲ್ಲಿಯ ಪೇಟಿಎಂ? ಇದೆಲ್ಲ ನಮ್ಮ
ಮುಂದೆ, ಏಕಜೀವಮಾನದಲ್ಲಿ ನಡೆದುಹೋದ ಬದಲಾವಣೆ. ಇಮೇಲ್, ಫೇಸ್ ಬುಕ್, ಟ್ವಿಟರ್, ಇನ್ಸ್ಟಾ ಗ್ರಾಂ, ಉಬರ್, ಓಲಾ, ಡೋಂಜೋ, ಗೂಗಲ, ಯುಟ್ಯೂಬ್, ಫ್ಲಿಪ್ ಕಾರ್ಟ್, ಅಮೆಜಾನ್ ಹೀಗೆ ಕೆಲವೇ ಕೆಲವು ಹೆಸರಿಸಿದ್ದು ನಮ್ಮ ಜೀವನದಲ್ಲಿ ತಂದ ಹೊಸತನ್ನು ಒಮ್ಮೆ ಹಿಂದಕ್ಕೆ ತಿರುಗಿ ಹೀಗಿತ್ತು
ಎಂದು ಆಲೋಚಿಸಬೇಕಿದೆ. ಆಗ ಈ ಎಲ್ಲ ಬದಲಾವಣೆ ಅದ್ಯಾವ ಮಟ್ಟದ್ದು ಎನ್ನುವ ಅಂದಾಜು ಹತ್ತುತ್ತದೆ. ಇದಕ್ಕೆಲ್ಲ ಕಾರಣ, ತಂತ್ರಜ್ಞಾನ, ಕಂಪ್ಯೂಟರ್‌ಗಳು.

ಕಂಪ್ಯೂಟರ್ ಎಂದರೆ ಅದು ಡಬ್ಬಿಯಂಥ ಆಕೃತಿ, ಲ್ಯಾಪ್ ಟಾಪ್ ಎಂದಷ್ಟೇ ಸೀಮಿತಗೊಳಿಸಿಕೊಳ್ಳಬೇಕಾಗಿಲ್ಲ. ಕೈಯಲ್ಲಿರುವ ಮೊಬೈಲ್ ಕೂಡ ಕಂಪ್ಯೂಟರೇ. ರಕ್ತ ಪರೀಕ್ಷಿಸುವ, ಎಂಆರ್‌ಐ, ತೂಕ ನೋಡುವ, ಮೆಟ್ರೋ ರೈಲಿನಲ್ಲಿ ಬಾಗಿಲು ತೆರೆಯುವವರೆಗೆ ಎಲ್ಲವೂ ಕಂಪ್ಯೂಟರೇ.  ಇಂದು ವಿಮಾನವನ್ನು ಮೇಲಕ್ಕೆ ಹಾರಿಸುವುದು, ಇಳಿಸುವುದನ್ನೂ ಪೈಲಟ್ ಮಾಡುವುದಿಲ್ಲ, ಅದನ್ನೂ ನಿರ್ವಹಿಸುವುದು ಕಂಪ್ಯೂಟರ್. ಟೆಸ್ಲಾ ಮೊದಲಾದ ಕಾರು ತನ್ನಷ್ಟಕ್ಕೆ ತಾನೇ ಡ್ರೈವ್ ಮಾಡಿಕೊಂಡು ಹೋಗಬಲ್ಲದು, ನಾವು ಕೂತಿದ್ದರಾಯಿತು.

ಅದನ್ನು ಕೂಡ ಸಾಧ್ಯವಾಗಿಸಿದ್ದು ಅದರೊಳಗಿನ ಕಂಪ್ಯೂಟರ್. ಇಂದಿನ ಬಹುತೇಕ ಉಳಿದ ಕಾರುಗಳು ಕೂಡ ತನ್ನಂದು ಚಿಕ್ಕ ಕಂಪ್ಯೂಟರ್ ಅನ್ನು
ಅಡಗಿಸಿಟ್ಟುಕೊಂಡಿರುತ್ತವೆ. ಯಾವಯಾವುದರಲ್ಲಿ ಚಿಪ್ ಇದೆಯೋ, ಅವೆಲ್ಲವೂ ಕಂಪ್ಯೂಟರ್ ಎಂದೇ ಪರಿಗಣಿಸಬೇಕು. ೨,೦೦೦ದ ನೋಟನ್ನೊಂದನ್ನು ಬಿಟ್ಟು ಕಂಪ್ಯೂಟರ್ ಚಿಪ್‌ಗಳು ಇಂದು ಅವ್ಯಕ್ತವಾಗಿ ಬಹುತೇಕ ಎಡೆ ಇವೆ. ಅವು ಮೂಲೆಮೂಲೆಯಲ್ಲಿ ನಮಗರಿವಿಲ್ಲದಂತೆ ನಮಗೋಸ್ಕರ ಕೆಲಸ ಮಾಡುತ್ತಿರುತ್ತವೆ. ಎಲ್ಲೂ ದೇವರಿದ್ದಾನೋ ಇಲ್ಲವೋ, ಇಂದು ಎಡೆಯೂ ಕಂಪ್ಯೂಟರ್ ಅಂತೂ ಇದೆ.

ಅಂದಿನ ಪ್ರಹ್ಲಾದ ‘ಎಡೆಯೂ ವಿಷ್ಣುವಿದ್ದಾನೆ’ ಎಂದರೆ, ಇಂದಿನ ಪ್ರಹ್ಲಾದರು ‘ಎಡೆಯೂ ಕಂಪ್ಯೂಟರ್ ಇದೆ’ ಎನ್ನುತ್ತಾರೆ. ಅಲ್ಲಿಂದ ಇಲ್ಲಿಗೆ, ಕಳೆದ ೩ ದಶಕದಲ್ಲಿ ಸಾಗಿಬಂದು ನಿಂತಿದ್ದೇವೆ. ಒಂದು ಮಜವನ್ನು ಗಮನಿಸಿ, ಒಬ್ಬ ಜನಸಾಮಾನ್ಯನಿಗೆ ಇದೆಲ್ಲ ಸಾಧ್ಯತೆಯ ಅಂದಾಜೂ ಇಲ್ಲದ್ದರಿಂದ ಇದೆಲ್ಲ ಎಂದೂ ಅವಶ್ಯಕವೆನಿಸಲಿಲ್ಲ. ಆದರೆ ಅದೆಲ್ಲ ಲಭ್ಯವಾಗುತ್ತ ಹೋದಂತೆ ಅನಿವಾರ್ಯವಾಗುತ್ತ ಹೋಯಿತು. ಅಂದು ಲ್ಯಾಂಡ್‌ಲೈನ್ ಫೋನುಗಳು ಮನೆಗೆ ಬರಲು ತಿಂಗಳುಗಳು, ವರ್ಷಗಳೇ ಕಾದದ್ದಿದೆ. ಕೊನೆಗೊಂದು ದಿನ ಫೋನ್ ಬಂದಾಗ ಬಹುತೇಕ ಸಮಸ್ಯೆಗಳು ಪರಿಹಾರವಾದಂತೆ ಅನ್ನಿಸಿ ನಿಟ್ಟುಸಿರುಬಿಟ್ಟದ್ದು ನಿಜ.

ಆದರೆ ಇಂದು ಮೊಬೈಲ್ ಅನಿವಾರ್ಯ. ಅದೇ ಮೊಬೈಲ್‌ನಲ್ಲಿ ಎಸ್ ಎಂಎಸ್ ತಂದ ಬದಲಾವಣೆ ಅರಗಿಸಿಕೊಳ್ಳುವ ಮುಂಚೆಯೇ, ಅದರಲ್ಲಿ ಇಂಟರ್ನೆಟ್ ಅನಿವಾರ್ಯವೆನಿಸಿದೆ. ಸ್ಮಾರ್ಟ್ ಫೋನ್‌ನಲ್ಲಿ ಇಂಟರ್ನೆಟ್ ಇಲ್ಲವೆಂದರೆ ಅದೊಂದು ವೈಕಲ್ಯ. ಒಂದೊಮ್ಮೆ ಇಂಟರ್ನೆಟ್ ಒಂದರ್ಧ ಗಂಟೆ ನಿಂತಿದೆಯೆಂದರೆ ದೇಹದಲ್ಲಿ ರಕ್ತಸಂಚಾರ ಸರಿಯಾಗದ ರೀತಿ ಒದ್ದಾಡುತ್ತೇವೆ. ಹೊಸ ಸೌಲಭ್ಯಗಳೇ ಹಾಗೆ. ಇನ್ನೇನೂ ಹೊಸತು ಬೇಕಾಗಿಲ್ಲ ವೆನ್ನುವಾಗಲೇ ಅದು ಅನಿವಾರ್ಯವಾಗಿಬಿಡುವುದು.

ಇಂದು ಯಾವುದೇ ಆವಿಷ್ಕಾರ ಅವಶ್ಯಕತೆಗೆ ಸೀಮಿತ ವಾಗಿಲ್ಲ. ಇಂಥ ಆವಿಷ್ಕಾರ ಮಾಡಿದರೆ ಜನರು ಅದನ್ನು ಹೀಗೆ ಬಳಸಬಹುದು, ಹೀಗೆ ಬದಲಾಗಬಹುದು ಎನ್ನುವ ಕಾಲಘಟ್ಟವಿದು. ಕಂಪ್ಯೂಟರ್ ಸರ್ವವ್ಯಾಪಿಯಾದದ್ದು ಈಗ ಹೊಸತಲ್ಲ, ಹಳೆಯ ವಿಚಾರ. ಕಾರು ವಿಮಾನಗಳನ್ನು
ಕಂಪ್ಯೂಟರ್‌ಗಳೇ ನಿಭಾಯಿಸುತ್ತವೆ ಎನ್ನುವುದು ಸಾಮಾನ್ಯ ವಿಚಾರ. ಸೂಪರ್ ಕಂಪ್ಯೂಟರ್‌ಗಳು ಕೂಡ ಹಳತು. ಸೂಪರ್ ಕಂಪ್ಯೂಟರ್ ಎಂದರೆ ಒಂದು ಮದುವೆ ಹಾಲ್‌ನಷ್ಟು ಗಾತ್ರದ್ದು, ಅದು ಸಾಮಾನ್ಯ ಬಳಕೆಗೆ ಬೇಕಾಗುವಂಥದ್ದಲ್ಲ.

ಮನುಷ್ಯ ಸಹಜ ಬಳಕೆಗೆ ಲ್ಯಾಪ್‌ಟಾಪ್, ಮೊಬೈಲ್ ಸಾಕು. ಅದನ್ನೂ ಮೀರಿ ಇಂಡಸ್ಟ್ರಿಯಲ್ ಬಳಕೆಗೆ, ಇಡೀ ವಿಮಾನಯಾನ ವ್ಯವಸ್ಥೆಗೆ, ಸರಬರಾಜು, ವೈದ್ಯಕೀಯ ಕಾರಣಗಳಿಗೆ ಈ ಭಾರಿ ಗಾತ್ರದ ಸೂಪರ್ ಕಂಪ್ಯೂಟರುಗಳು ಬಳಕೆಯಾಗುತ್ತವೆ. ಅವು ಅಪ್ರತ್ಯಕ್ಷವಾಗಿ ನಮ್ಮೆಲ್ಲರ ಬದುಕನ್ನು ನಿಭಾಯಿಸುತ್ತಿರುತ್ತವೆ. ಈಗ ಅದು ಕೂಡ ಅನಿವಾರ್ಯ. ಇತ್ತೀಚೆಗೆ ಮುನ್ನೆಲೆಗೆ ಬಂದ ಚಾಟ್ ಜಿಪಿಟಿ ಕೂಡ ಅಭಿವೃದ್ಧಿಯಾಗುವುದಕ್ಕಿಂತ ಮೊದಲೇ ಹಳತೆನ್ನಿಸಲು ಶುರುವಾಗಿದೆ. ಹಾಗಾದರೆ ಮುಂದೇನು ಎಂಬ ಪ್ರಶ್ನೆ. ಮುಂದಿನದು ಕ್ವಾಂಟಮ್ ಕಂಪ್ಯೂಟರ್. ಒಂದು ಯಃಕಶ್ಚಿತ್ ಲ್ಯಾಪ್‌ಟಾಪ್ ಎಷ್ಟೆಲ್ಲ ಕೆಲಸಮಾಡಬಲ್ಲದು ಎಂಬುದು ನಿಮಗೆ ಗೊತ್ತು.

ಅದರ ಲಕ್ಷದಷ್ಟು ತಾಕತ್ತು ಹಾಲ್ ತುಂಬಿಸುವಷ್ಟು ಗಾತ್ರದ ಈ ಸೂಪರ್ ಕಂಪ್ಯೂಟರ್‌ನದು. ಈ ಹೊಸ ಆವಿಷ್ಕಾರದ ಕ್ವಾಂಟಮ್ ಕಂಪ್ಯೂಟರ್ ಅಂಥ ಸೂಪರ್ ಕಂಪ್ಯೂಟರಿನ ಸುಮಾರು ೧೦-೨೦ ಲಕ್ಷ ಪಟ್ಟು ಶಕ್ತಿಯುತ. ಇದರ ಗಾತ್ರ ಸದ್ಯ ನಮ್ಮ ಮನೆಯಲ್ಲಿರುವ ಗ್ಯಾಸ್ ಸಿಲಿಂಡರ್ ನಷ್ಟು. ಇದು ಸಾಮಾನ್ಯ ಕಂಪ್ಯೂಟರಿನಂತೆ ರೆಸಿಸ್ಟರ್‌ಗಳನ್ನು ಬಳಸಿಕೊಂಡು ಒಂದು ಮತ್ತು ಸೊನ್ನೆಯಲ್ಲಿ ವ್ಯವಹರಿಸುವುದಲ್ಲ. ಬದಲಿಗೆ ಇಲೆಕ್ಟ್ರಾನ್, ಪ್ರೋಟಾನ್
ಗಳನ್ನು ಬಳಸಿ ಅತ್ಯಂತ ವೇಗದಲ್ಲಿ ಲೆಕ್ಕಾಚಾರ ಮಾಡಬಲ್ಲದು. ಅದಕ್ಕೇ ಆ ಹೆಸರು. ಸದ್ಯ ಕ್ವಾಂಟಮ್ ಕಂಪ್ಯೂಟರ್‌ಗೆ ಕೆಲಸ ಮಾಡಲು ಲ್ಯಾಬ್ ಮಾದರಿಯ ವ್ಯವಸ್ಥೆ ಬೇಕು, ಉಷ್ಣತೆ -೨೫೮’ ಸೆ. ನಷ್ಟಿರಬೇಕು ಇತ್ಯಾದಿ.

ಹಾಗಾಗಿ ಕ್ವಾಂಟಮ್ ಕಂಪ್ಯೂಟರ್ ದಿನಬಳಕೆಯ ಸಾಮಾನ್ಯ ಕಂಪ್ಯೂಟರನ್ನು ಅಷ್ಟು ಸುಲಭದಲ್ಲಿ ಬದಲಿಸುವುದಿಲ್ಲ. ಇದೇನಿದ್ದರೂ ಕೋಟಿ ಕೋಟಿ
ಬಜೆಟ್ಟಿನ ಕೆಲಸ. ಕ್ವಾಂಟಮ್ ಕಂಪ್ಯೂಟರನ್ನು ಸದ್ಯ ಬಹುತೇಕ ಸರಕಾರಗಳು, ಮಿಲಿಟರಿ ವ್ಯವಸ್ಥೆಗಳು ಅಭಿವೃದ್ಧಿಪಡಿಸುತ್ತಿವೆ. ಮೊದಲು ನಾವು ತಯಾರಿಸಿ ಬಳಸಬೇಕು ಎಂಬ ಪೈಪೋಟಿ ದೇಶಗಳ ನಡುವೆ ನಿರ್ಮಾಣವಾಗಿದೆ. ಕಾರಣಗಳು ಹಲವು, ಏಕೆಂದರೆ ಸಾಧ್ಯತೆಗಳು ಹಲವು. ಇಂದು ಎಡೆ ಪಾಸ್‌ವರ್ಡ್ ಸಾಮ್ರಾಜ್ಯ. ಎಲ್ಲ ದೇಶದ ನ್ಯೂಕ್ಲಿಯರ್ ಮೊದಲಾದ ತೀರಾ ಭದ್ರ ವ್ಯವಸ್ಥೆಗಳು ಕೆಲವು ಪಾಸ್‌ವರ್ಡ್‌ಗಳಿಂದ ಭದ್ರವಾಗಿವೆ.

ಒಂದು ಪಾಸ್‌ವರ್ಡ್ ಅನ್ನು ಬಿಡಿಸಿ ತಿಳಿಯುವ, ಹ್ಯಾಕ್ ಮಾಡುವ ಪ್ರೋಗ್ರಾಮ್‌ಗಳು ಬಹುತೇಕ ದೇಶಗಳ ಸೂಪರ್ ಕಂಪ್ಯೂಟರ್‌ನಿಂದ ಸಾಧ್ಯ. ಆದರೆ ಇಂದಿನ ಸೂಪರ್ ಕಂಪ್ಯೂಟರ್‌ಗೆ ೧೦ ಅಕ್ಷರಗಳ ಪಾಸ್‌ವರ್ಡ್ ಹ್ಯಾಕ್ ಮಾಡಲು ಸುಮಾರು ೩೨ ವರ್ಷ ಬೇಕು. ಅದು ೧೫ ಅಕ್ಷರಗಳಿದ್ದರೆ ೩೦ ಲಕ್ಷ
ವರ್ಷ ಬೇಕು, ಇನ್ನು ೨೦ ಅಕ್ಷರಗಳಿದ್ದರೆ ಈ ಜಗತ್ತು ಹುಟ್ಟಿದಷ್ಟು ಸಮಯ ಬೇಕು. ಅಷ್ಟು ಸಮಯ ನಿರಂತರ ಲೆಕ್ಕ ಹಾಕಿ, ಪ್ರಯತ್ನಿಸಬೇಕು. ಅಷ್ಟು ನಿಧಾನ ಇಂದಿನ ಸೂಪರ್ ಕಂಪ್ಯೂಟರ್‌ಗಳು. ಅದೇ ಕೋಟಿ ಪಟ್ಟು ವೇಗದ ಕ್ವಾಂಟಮ್ ಕಂಪ್ಯೂಟರ್‌ಗೆ ಇನ್ನೊಂದು ದೇಶದ ವ್ಯವಸ್ಥೆಯನ್ನು ಹ್ಯಾಕ್
ಮಾಡಲು ಕೆಲವೇ ಕ್ಷಣ ಸಾಕು. ಇನ್ನು ನಿಮ್ಮ ಡಿಎನ್‌ಎ ವಿವರ ಸೂಪರ್ ಕಂಪ್ಯೂಟರಿಗೆ ನೀಡಿದರೆ, ನಿಮಗೆ ಬರಬಹುದಾದ ರೋಗವನ್ನು ಕರಾರುವಕ್ಕಾಗಿ ಗ್ರಹಿಸಲು ಸುಮಾರು ೧೨ ವರ್ಷ ಬೇಕು. ಅಷ್ಟು ಸಮಯದ ನಿರಂತರ ಲೆಕ್ಕಾಚಾರವಾಗಬೇಕು.

ಆದರೆ ಕ್ವಾಂಟಮ್ ಕಂಪ್ಯೂಟರಿಗೆ ವಿವರ ನೀಡಿದರೆ, ಅದರ ವೇಗದಿಂದಾಗಿ ಕೆಲವೇ ಕ್ಷಣಗಳಲ್ಲಿ ಇಂಥ ಡಿಎನ್‌ಎ, ಇಂಥ ವ್ಯಕ್ತಿಗೆ ಏನಾಗಬಹುದೆಂದು ಅದು ಏಕ್‌ದಂ ಪಕ್ಕಾ ಕ್ಷಣಮಾತ್ರದಲ್ಲಿ ಹೇಳಬಲ್ಲದು. ಇನ್ನು ಚಾಟ್ ಜಿಪಿಟಿ ಬಗ್ಗೆ ಹಿಂದೆ ವಿವರಿಸಿದ್ದೇನೆ. ಅದರ ಜತೆ ವೇಗ ಇಷ್ಟು ಸಿಕ್ಕಿಬಿಟ್ಟರೆ ಏನೆ ಸಾಧ್ಯತೆಯಿದೆ ಎಂದು ನೀವೇ ಊಹಿಸಿಕೊಳ್ಳಿ. ಅಣುವಿನ ಹಂತದಲ್ಲಿ ಒಂದು ವಸ್ತು ಹೇಗೆ ಕೆಲಸಮಾಡುತ್ತದೆ, ಎಷ್ಟು ಬಾಳಿಕೆ ಬರುತ್ತದೆ ಎಂಬಿತ್ಯಾದಿ
ಗ್ರಹಿಸಲು ಇಂದಿನ ಸೂಪರ್ ಕಂಪ್ಯೂಟರಿಗೆ ದಶಕ ಬೇಕು. ಅಲ್ಲಿಯವರೆಗೆ ಇನ್ನೇನೋ ಅವಿಷ್ಕಾರವಾಗಿರುತ್ತದೆ. ಹಾಗಾಗಿ ಅದೆಷ್ಟೋ ‘ಮನುಷ್ಯ ಸಹಜ’ ವ್ಯವಹಾರಕ್ಕೆ ಇಂದಿನ ಸೂಪರ್ ಕಂಪ್ಯೂಟರ್‌ನ ವೇಗವೇ ತೊಡಕಾಗಿದೆ. ಅದನ್ನು ನಿಭಾಯಿ ಸಬಲ್ಲ, ನಾವು ಇಂದು ಅಂದಾಜನ್ನೇ ಮಾಡಿಕೊಳ್ಳಲು ಅಸಾಧ್ಯ ವಾದ ಸಾಧ್ಯತೆಗಳಿಗೆ ಕ್ವಾಂಟಮ್ ಕಂಪ್ಯೂಟರ್ ಮುಂದಿನ ದಿನಗಳಲ್ಲಿ ತೆರೆದುಕೊಳ್ಳಲಿದೆ.

ನಿಮಗೆ ನಮ್ಮ ಸುತ್ತಲಿನ ಬದಲಾವಣೆಯ ಅಂದಾಜಿರಲಿ ಎಂದೇ ಹಳೆಯದನ್ನು ನೆನಪಿಸಿ ಇದೆಲ್ಲವನ್ನು ಹೇಳಿದ್ದು. ಇದೆಲ್ಲ ತಿಳಿದಿಲ್ಲದಿದ್ದರೆ ಇನ್ನೊಂದು ದಶಕದಲ್ಲಿ ನಾವು ಔಟ್‌ಡೇಟೆಡ್ ಆಗಿಬಿಡುತ್ತೇವೆ. ಬದಲಾವಣೆ ಇಲ್ಲಿಗೇ ಮುಗಿದಿಲ್ಲ, ಇದು ಯಾವತ್ತೂ ಇನ್ನೊಂದರ ಆರಂಭ. ಇದಕ್ಕೆ  ಸುಧಾರಿಸಿ ಕೊಳ್ಳಲು, ಒಂದು ಇನ್ನೊಂದನ್ನು ನೋಡಿ ಕರುಬಿ ಕೂರಲು ಸಮಯವಿಲ್ಲ !!