Monday, 9th September 2024

ಜಗತ್ತು ಬದಲಾಗುವುದು ಅನಿವಾರ್ಯವಾದಾಗ ಮಾತ್ರ !

ವಿಚಾರ ವೇದಿಕೆ

ಗಣೇಶ್ ಭಟ್, ವಾರಣಾಸಿ

ಸಾಮಾಜಿಕ ಬದಲಾವಣೆಯನ್ನು ಕೂಡಾ ಜನರು ಅನಿವಾರ್ಯವಾದಾಗ ಮಾತ್ರ ಒಪ್ಪಿಕೊಳುತ್ತಾರೆ. ಸ್ವಚ್ಛತೆಯನ್ನು ಅನಿವಾರ್ಯವಾಗಿಸಿದರೆ ಮಾತ್ರ ಜನರು ತಮ್ಮ ಊರು, ರಸ್ತೆಗಳನ್ನು ಸ್ವಚ್ಛವಾಗಿ ಇಟ್ಟುಕೊಂಡಾರು. ಅನಿವಾರ್ಯವಾದಾಗ ಮಾತ್ರ ಜಗತ್ತು ಬದಲಾಗಿದೆ, ಅನಿವಾರ್ಯವಾಗದೆ ಯಾರೂ ಬದಲಾಗರು. ಜಗತ್ತಿನ ಎಲ್ಲಾ ಪ್ರಮುಖ ವೈಜ್ಞಾನಿಕ ಆವಿಷ್ಕಾರಗಳು ರೂಪುಗೊಂಡದ್ದು ಅತಿ ಅನಿವಾರ್ಯ ಎನ್ನುವ ಪರಿಸ್ಥಿತಿ ಬಂದಾಗ.

ವಸ್ತುವೊಂದನ್ನು ಮುಂದಕ್ಕೆ ಚಲಿಸುವಂತೆ ಮಾಡಲು ದೂಡಿದಾಗ ಆರಂಭಿಕ ಹಂತದಲ್ಲಿ ಆ ವಸ್ತುವು ಮುಂದಕ್ಕೆ ಸಾಗುವುದಕ್ಕೆ ಪ್ರತಿರೋಧವನ್ನು ತೋರಿಸುತ್ತದೆ; ಅದೇ ರೀತಿ, ಚಲನೆಯಲ್ಲಿರುವ ವಸ್ತುವನ್ನು ನಿಲ್ಲಿಸುವಂತೆ ಅಥವಾ ಗತಿಯನ್ನು ಬದಲಿಸಲು ಬಾಹ್ಯ ಶಕ್ತಿಯ ಪ್ರಯೋಗವನ್ನು ಮಾಡಿದಾಗ ಚಲನೆಯಲ್ಲಿರುವ ವಸ್ತುವು ಅದಕ್ಕೂ ಪ್ರತಿರೋಧವನ್ನು ತೋರಿಸುತ್ತದೆ. ವಾಹನವನ್ನು ಹಠಾತ್ ಚಾಲನೆ ಮಾಡಿದಾಗ ವಾಹನದೊಳಗಿನ ವ್ಯಕ್ತಿಗಳು ಹೇಗೆ ಹಿಂದಕ್ಕೆ ಜರುಗುತ್ತಾರೋ ಆದೇ ರೀತಿ ವೇಗವಾಗಿ ಚಲಿಸುತ್ತಿರುವ ವಾಹನಕ್ಕೆ ಬ್ರೇಕ್ ಹಾಕಿದಾಗ ಒಳಗಿರುವ ವ್ಯಕ್ತಿಗಳು ಮುಂದಕ್ಕೆ ಸರಿಯುತ್ತಾರೆ.

ವಸ್ತುಗಳ ಈ ಸ್ವಭಾವವನ್ನು ಭೌತ ಶಾಸ್ತ್ರದಲ್ಲಿ ಇನರ್ಷಿಯಾ (ಜಡತ್ವ ) ಎಂದು ಕರೆಯಲಾಗುತ್ತದೆ. ಬದಲಾವಣೆಗೆ ಒಡ್ಡಿಕೊಳ್ಳುವಲ್ಲಿ ಜನರು ಕೂಡಾ ಒಂದು ರೀತಿಯ ಪ್ರತಿರೋಧ ತೋರುವ ಜಡತ್ವ ಸ್ವಭಾವವನ್ನು ತೋರಿಸುತ್ತಾರೆ. ‘ಬದಲಾವಣೆ ಜಗತ್ತಿನ ನಿಯಮ’ ಎಂಬ ನಾಣ್ಣುಡಿ ಪ್ರಚಲಿತದಲ್ಲಿದೆ.  ನಿಂತ ನೀರಿನಂತೆ ಒಂದೆಡೆ ನಿಶ್ಚಲವಾಗಿ ನಿಂತರೆ ಪಾಚಿಕಟ್ಟಿಕೊಂಡ ಕೆರೆಯಂತಾಗುವುದು ಎನ್ನುವುದು ನಂಬಿಕೆ. ಆವಶ್ಯಕತೆ ಎನ್ನುವುದು ಎಲ್ಲಾ ಆವಿಷ್ಕಾರಗಳ ತಾಯಿ ಎಂದು ಗ್ರೀಕಿನ ತತ್ವಜ್ಞಾನಿ ಪ್ಲೇಟೋ ಸಾವಿರಾರು ವರ್ಷಗಳ ಹಿಂದೆಯೇ ಹೇಳಿದ್ದಾನೆ. ಜಗತ್ತಿನ ಎಲ್ಲಾ ಪ್ರಮುಖ ವೈಜ್ಞಾನಿಕ
ಆವಿಷ್ಕಾರಗಳು ರೂಪುಗೊಂಡದ್ದು ಅತಿ ಅನಿವಾರ್ಯ ಎನ್ನುವ ಪರಿಸ್ಥಿತಿ ಬಂದಾಗ. ಅದೇ ರೀತಿ ಒಂದು ಸ್ಥಿತಿಗೆ ಹೊಂದಿಕೊಂಡ ಜನರಿಗೆ ಹೊಸ ಬದಲಾವಣೆಗೆ ಹೊಂದಿಕೊಳ್ಳುವುದು ಒಂದಿಷ್ಟು ಕಷ್ಟವಾಗುತ್ತದೆ.

ಎಸ್.ಎಲ್.ಭೈರಪ್ಪನವರು ಆತ್ಮಕಥೆ ‘ಭಿತ್ತಿ’ಯಲ್ಲಿ ತಾವು ಜಪಾನಿಗೆ ಭೇಟಿಕೊಟ್ಟಿದ್ದಾಗ ನಡೆದ ಘಟನೆಯೊಂದನ್ನು ವಿವರಿಸಿದ್ದಾರೆ. ಭೈರಪ್ಪನವರು ಟೋಕಿಯೋದ ಉನೋ ಹೆಸರಿನ ಪಾರ್ಕಿಗೆ ಭೇಟಿಕೊಟ್ಟಿದ್ದ ಸಂದರ್ಭದಲ್ಲಿ, ಕೀಲಿ ತಿರುಗಿಸಿ ಬಿಟ್ಟರೆ ಆಕಾಶದಲ್ಲಿ ಹಾರಾಡುವ ಆಟಿಕೆಯ ಪಾರಿವಾಳ ವನ್ನು ಖರೀದಿಸುವ ಮನಸ್ಸು ಮಾಡುತ್ತಾರೆ. ಇಂಗ್ಲಿಷ್ ಭಾಷೆ ಮಾತನಾಡಲು ತಿಳಿಯದ ಮಾರಾಟಗಾರನು ಆಟಿಕೆಯ ಪಾರಿವಾಳವನ್ನು ಭೈರಪ್ಪನವರ ಕೈಯಲ್ಲಿಟ್ಟು ನೀವೇ ಹಾರಿಸಿ ನೋಡಿ ಎಂಬಂತೆ ಸನ್ನೆ ಮಾಡುತ್ತಾನೆ. ಆಟಿಕೆಯ ಕೀಲಿಯನ್ನು ಇಪ್ಪತ್ತೈದು ಸುತ್ತು ತಿರುಗಿಸಬೇಕಿತ್ತು. ಆದರೆ ಈ ವಿಷಯ ಗೊತ್ತಿಲ್ಲದ ಭೈರಪ್ಪನವರು ಕೀಲಿಯನ್ನು ಏಳೆಂಟು ಸುತ್ತು ಮಾತ್ರ ತಿರುಗಿಸಿ ಆಕಾಶಕ್ಕೆ ಎಸೆದರು. ಆದರೆ ಚಲನಾ ಶಕ್ತಿ ಸಾಲದ ಆಟಿಕೆಯ ಪಾರಿವಾಳವು
ಸಮಾನಾಂತರವಾಗಿ ಸಾಗಿ, ಪಾರ್ಕಿನಲ್ಲಿ ಅಪ್ಪ-ಅಮ್ಮನ ಕೈ ಹಿಡಿದು ನಡೆಯುತ್ತಿದ್ದ ಎರಡು ವರ್ಷದ ಮಗುವೊಂದರ ಮುಖಕ್ಕೆ ಬಡಿದು ಮಗುವು ನೋವಿನಿಂದ ಕಿರುಚಿತು.

ತಾಯಿ ತಕ್ಷಣ ಮಗುವನ್ನು ಎತ್ತಿಕೊಂಡಳು. ಮಗುವಿನ ಕಣ್ಣಿಗೆ ಏನಾದರೂ ಆಗಿರಬೇಕೆಂದು ಭೈರಪ್ಪನವರು ದುಃಖಿತರಾದರು ಹಾಗೂ ಗಾಬರಿ ಗೊಂಡರು. ಮಗುವಿನ ಅಪ್ಪ ತನಗೆ ಹೊಡೆಯ ಬಹುದೆಂದು ಭೈರಪ್ಪನವರು ಭಾವಿಸಿದರು. ಆದರೆ ಹತ್ತಿರ ಬಂದ ಮಗುವಿನ ಅಪ್ಪ ಭೈರಪ್ಪನವರ ಭುಜ ಮುಟ್ಟಿ ಇಂಗ್ಲಿಷ್ ನಲ್ಲಿ ‘ಡೋಂಟ್ ವರಿ, ಮಗುವಿಗೆ ಏನೂ ಆಗಿಲ್ಲ, ಪಾರಿವಾಳ ಹಣೆಗೆ ತಾಕಿತು ಅಷ್ಟೇ. ಪೂರ್ತಿ ಕೀಲಿ ತಿರುಗಿಸಬೇಕೆಂದು ನಿಮಗೆ ಗೊತ್ತಿಲ್ಲ, ಆಟಿಕೆಯ ವ್ಯಾಪಾರಿಗೆ ಇದನ್ನು ಹೇಳಲು ಭಾಷೆ ಗೊತ್ತಿಲ್ಲ’ ಎಂದು ಹೇಳಿ ಭೈರಪ್ಪನವರನ್ನು ತಾನೇ ಸಮಾಧಾನಪಡಿಸಿದ.

ಆ ತರುಣ ದಂಪತಿಯ ಸಮಾಧಾನ ಹಾಗೂ ತಾಳ್ಮೆಯ ಪ್ರವೃತ್ತಿ ಭೈರಪ್ಪನವರನ್ನು ಚಕಿತಗೊಳಿಸುತ್ತದೆ. ಮರುದಿನ ಭೈರಪ್ಪನವರು ತಾವು ಭಾಗವಹಿಸಿದ ವಿಚಾರಸಂಕಿರಣದ ಕಾರ್ಯದರ್ಶಿಯ ಬಳಿ ಮುನ್ನಾ ದಿನದ ಘಟನೆಯ ಬಗ್ಗೆ ಹೇಳಿ, ಆ ದಂಪತಿಯ ತಾಳ್ಮೆಯ ವಿಚಾರವನ್ನು ತಿಳಿಸಿದಾಗ ಆತ, ‘ಅವರು ಮಹಾಯುದ್ಧದ ನಂತರ ಹುಟ್ಟಿ ಹೊಸ ವಿದ್ಯಾಭ್ಯಾಸ ಪಡೆದವರು. ಅಣುಬಾಂಬು ಬಿದ್ದು ಯುದ್ಧ ಮುಗಿದ ಮೇಲೆ ನಮ್ಮ ದೇಶ ಆತ್ಮಾವಲೋಕನದಲ್ಲಿ ಮುಳುಗಿತು. ನಾವು ಯುದ್ಧಕ್ಕೆ ಯಾಕೆ ಹೋದೆವು? ನಮ್ಮೊಳಗೆ ಇರುವ ಹಿಂಸಾ ಪ್ರವೃತ್ತಿಯು ಸಾಮೂಹಿಕ ರೂಪ ತಾಳಿ ಯುದ್ಧಕ್ಕೆ ಪ್ರೇರೇಪಿಸಿತು.

ಆದ್ದರಿಂದ ವ್ಯಕ್ತಿಮಟ್ಟದಲ್ಲಿ ಹಿಂಸೆಯನ್ನು ತೆಗೆದು ಹಾಕಬೇಕೆಂದು ಆಲೋಚನೆ ಬೆಳೆಯಿತು. ಶಾಲೆಯಲ್ಲಿ ಯಾವುದಾದರೂ ಮಗು ಹಿಂಸಾ ಪ್ರವೃತ್ತಿಯನ್ನು ತೋರಿದರೆ ಅದಕ್ಕೆ ನಾವು ವಿಶೇಷ ಗಮನವನ್ನು ಕೊಡುತ್ತೇವೆ’ ಎಂದು ಹೇಳಿದ. ತಮ್ಮ ಹಿರಿಯರ ಯುದ್ಧ ಪಿಪಾಸುತನದಿಂದಾಗಿ ತಮ್ಮ ದೇಶದ ಮೇಲೆ ಬಾಂಬು ದಾಳಿಯಾಯಿತು ಎಂಬುದನ್ನು ಅರ್ಥಮಾಡಿ ಕೊಂಡ ಜಪಾನಿಯರು ಹೊಸ ತಲೆಮಾರನ್ನು ಹಿಂಸಾಮುಕ್ತರ ನ್ನಾಗಿಸುವ ದೃಢ ನಿರ್ಧಾರವನ್ನು ತೆಗೆದುಕೊಂಡು ಇಡೀ ಶಿಕ್ಷಣ ಪದ್ಧತಿಯನ್ನೇ ಬದಲಿಸಿ ಮುಂದಿನ ತಲೆಮಾರಿನ ಜನರನ್ನು ಶಾಂತಿಪ್ರಿಯರನ್ನಾಗಿ ಮಾಡಿದರು. ಜಪಾನಿಗೆ ಇಂಥ ಬದಲಾವಣೆಗೆ ಒಳಗಾಗುವುದು ಅನಿವಾರ್ಯವಾಗಿತ್ತು. ಬದಲಾಗಲೇ ಬೇಕೆಂಬ ಹಠವಿದ್ದರೆ ಬದಲಾಗುವುದು ಸಾಧ್ಯ ಎಂಬುದನ್ನು ಜಪಾನ್ ಜಗತ್ತಿಗೆ ತೋರಿಸಿಕೊಟ್ಟಿತು.

ಕೆಲವು ದಶಕಗಳ ಹಿಂದೆ ಬ್ಯಾಂಕಿಂಗ್ ವಲಯದಲ್ಲಿ ಕಂಪ್ಯೂಟರ್‌ಗಳ ಬಳಕೆ ಆರಂಭವಾದಾಗ, ಬಹುತೇಕ ಕಾರ್ಮಿಕ ಸಂಘಟನೆಗಳು ಇದನ್ನು ವಿರೋಧಿಸಿದ್ದವು. ಈ ಹೋರಾಟದಲ್ಲಿ ಕಮ್ಯುನಿಸ್ಟ್ ಪಾರ್ಟಿಯಂತೂ ಮುಂಚೂಣಿಯಲ್ಲಿತ್ತು. ಕಂಪ್ಯೂಟರ್ ಬಳಕೆಯು ಜನರ ಉದ್ಯೋಗಗಳನ್ನು ಕಡಿತಗೊಳಿಸುತ್ತದೆ ಎನ್ನುವುದು ಅವರ ವಾದವಾಗಿತ್ತು. ಆದರೆ ನಂತರದ ದಿವಸಗಳಲ್ಲಿ, ಬದಲಾದ ಕಾಲಘಟ್ಟದಲ್ಲಿ ಕಂಪ್ಯೂಟರ್ ಬಳಕೆ ಎನ್ನುವುದು ಅನಿವಾರ್ಯವಾಗಿಬಿಟ್ಟಿತು. ಕಂಪ್ಯೂಟರ್ ಬಳಕೆಯನ್ನು ಕಮ್ಯುನಿಸ್ಟ್ ಪಕ್ಷವು ವಿರೋಧಿಸುತ್ತಿದ್ದಂತೆಯೇ, ೨೦೦೪ ರಲ್ಲಿ ಕಮ್ಯುನಿಸ್ಟ್ ಪಕ್ಷದವರಾದ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದ ಬುದ್ಧದೇವ್ ಭಟ್ಟಾಚಾರ್ಯರು ಕಂಪ್ಯೂಟರ್ ಬಳಕೆಗೆ ಪಕ್ಷವು ವಿರೋಧ ವ್ಯಕ್ತಪಡಿಸುವುದನ್ನು ಮೂರ್ಖತನದ ನಡೆ ಎಂದು ಕರೆದಿದ್ದರು!

ಕಂಪ್ಯೂಟರ್ ಮತ್ತು ಐಟಿಯನ್ನು ಯಾವ ಪಕ್ಷವು ವಿರೋಧಿಸಿತ್ತೋ ಅದೇ ಕಮ್ಯುನಿಸ್ಟ್ ಪಕ್ಷವು ಇದೀಗ ಆನ್‌ಲೈನ್‌ನಲ್ಲಿ ‘ಪಾರ್ಟಿ ಫಂಡ್’ ಚಂದಾ ಎತ್ತುತ್ತಿದೆ, ಪಕ್ಷವು ಡಿಜಿಟಲ್ ಟೀಮ್ ಅನ್ನೂ ರೂಪಿಸಿದೆ! ಕಂಪ್ಯೂಟರ್ ಮತ್ತು ಐಟಿಯನ್ನು ಸದಾ ವಿರೋಧಿಸಿದ್ದ ಕಮ್ಯುನಿಸ್ಟ್ ಪಾರ್ಟಿಯು ಕೂಡಾ ಬದಲಾದ ಅನಿವಾರ್ಯ ಸಂದರ್ಭದಲ್ಲಿ ಕಂಪ್ಯೂಟರ್‌ಗಳನ್ನು ಒಪ್ಪಿಕೊಳ್ಳಬೇಕಾಯಿತು. ೨೦೧೯ರಲ್ಲಿ ಕೇಂದ್ರ ಸರಕಾರವು ಮೋಟಾರ್ ವೆಹಿಕಲ್ ಆಕ್ಟ್ ಅನ್ನು ನವೀಕರಿಸಿ ಕಾನೂನುಗಳನ್ನು ಬಿಗಿ ಮಾಡಿ, ಚಾಲನಾ ನಿಯಮಗಳನ್ನು ಮೀರಿದವರಿಗೆ ದಂಡದ ಮೊತ್ತವನ್ನು ಹೆಚ್ಚಿಸಿದಾಗ ಕಮ್ಯುನಿಸ್ಟ್ ಪಕ್ಷವು ಇದನ್ನು ವಿರೋಧಿಸಿತ್ತು.

ಇದೀಗ ಕಮ್ಯುನಿಸ್ಟ್ ಪಕ್ಷದ ಆಡಳಿತವಿರುವ ಕೇರಳ ರಾಜ್ಯವು ರಾಜ್ಯದಾದ್ಯಂತ ೭೦೦ಕ್ಕೂ ಹೆಚ್ಚು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಯಾಮರಾಗಳನ್ನು ಅಳವಡಿಸಿ ಚಾಲನಾ ನಿಯಮಗಳನ್ನು ಉಲ್ಲಂಸುವರನ್ನು ಪತ್ತೆಹಚ್ಚಿ ದೊಡ್ಡ ಮೊತ್ತದ ದಂಡವನ್ನು ವಸೂಲಿ ಮಾಡುತ್ತಿದೆ! ಕೆಲವು ವರ್ಷಗಳ ಹಿಂದೆ ಬಹುತೇಕ ಸರಕಾರಿ ಯೋಜನೆ ಗಳು, ಧನಸಹಾಯಗಳು, ಸಬ್ಸಿಡಿಗಳು ನಕಲಿ ಫಲಾನುಭವಿಗಳ ಹಾಗೂ ಭ್ರಷ್ಟ ಅಧಿಕಾರಿಗಳ ಪಾಲಾಗುತ್ತಿದ್ದವು.

೨೦೧೪ರಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರಕಾರವು, ಸರಕಾರಿ ಹಣವು ಭ್ರಷ್ಟರ ಪಾಲಾಗುವುದನ್ನು ತಡೆದು ಅರ್ಹ ಫಲಾನುಭವಿಗಳಿಗೆ ಸಿಗುವಂತೆ ಮಾಡಲು ಫಲಾನುಭವಿಗಳ ಬ್ಯಾಂಕ್ ಖಾತೆ, ಆಧಾರ್ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆಗಳನ್ನು ಬೆಸೆಯುವ ಜೆಎಎಂ (ಜಾಮ್) ವ್ಯವಸ್ಥೆ ಯನ್ನು ಕಾರ್ಯರೂಪಕ್ಕೆ ತಂದಿತು. ಸರಕಾರಿ ಯೋಜನೆಗಳನ್ನು ಆಧಾರ್ ಸಂಖ್ಯೆಯ ಜತೆಗೆ ಬೆಸೆಯವುದರ ವಿರುದ್ಧ ಭಾರಿ ವಿರೋಧಗಳು ವ್ಯಕ್ತವಾದವು. ವಿರೋಧ ಪಕ್ಷವಾದ ಕಾಂಗ್ರೆಸ್ ನವರು ಹಾಗೂ ಅದರ ನಾಯಕ ರಾಹುಲ್ ಗಾಂಧಿ, ‘ಜಾಮ್’ ವ್ಯವಸ್ಥೆಯಿಂದಾಗಿ ದೇಶದ ಪ್ರಜೆಗಳ ವೈಯಕ್ತಿಕ ಮಾಹಿತಿ ಬಿಕರಿಯಾಗುತ್ತಿದೆ ಎಂದು ಬೊಬ್ಬಿಟ್ಟರು. ಈ ವಿಚಾರವಾಗಿ ಸುಪ್ರೀಂ ಕೋರ್ಟಿನಲ್ಲೂ ವಾದ-ವಿವಾದಗಳು ನಡೆದು ಕೊನೆಗೆ ಸರಕಾರಿ ಯೋಜನೆಗಳ ಜತೆಗೆ ಫಲಾನುಭವಿಗಳ ಆಧಾರ್ ಸಂಖ್ಯೆ ಜೋಡಣೆ ಕಾನೂನುಬದ್ಧವಾಗಿದೆ ಎಂಬುದು ಸಾಬೀತಾಯಿತು.

ದೇಶದ ಜನರಿಗೆ ಬ್ಯಾಂಕ್ ಖಾತೆಯ ಅರಿವು ಹಾಗೂ ವಿದ್ಯಾಭ್ಯಾಸ ಇಲ್ಲದಿರುವಾಗ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ ಫರ್ ಹೇಗೆ ಆಗಬಹುದು? ಎಂದು ಡಿಜಿಟಲ್ ಪಾವತಿ ವ್ಯವಸ್ಥೆಯ ಬಗ್ಗೆ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಸಂಸತ್ತಿನಲ್ಲಿ ಕಟಕಿಯಾಡಿದ್ದರು. ಇದೀಗ ಸರಕಾರದ ಮುನ್ನೂರಕ್ಕೂ ಹೆಚ್ಚು ಯೋಜನೆ ಗಳ ಧನಸಹಾಯವು ಫಲಾನುಭವಿಗಳ ಖಾತೆಗೆ ನೇರವಾಗಿ ತಲುಪುತ್ತಿದೆ. ೨೦೨೩-೨೪ರಲ್ಲೇ ಸುಮಾರು ೪.೫ ಲಕ್ಷ ಕೊಟಿ ರುಪಾಯಿಗಳಷ್ಟು ಸರಕಾರಿ ಧನ ಸಹಾಯವು ನೇರವಾಗಿ -ಲಾನುಭವಿಗಳ ಖಾತೆಗೆ ‘ಜಾಮ್’ ವ್ಯವಸ್ಥೆಯ ಮೂಲಕ ತಲುಪಿದೆ. ಚಿದಂಬರಂ ಹೇಳಿಕೆಗೆ ವ್ಯತಿರಿಕ್ತವಾಗಿ ಬೀದಿಬದಿಯ ವ್ಯಾಪಾರಿಗಳು ಕೂಡಾ ಯುಪಿಐ ಕ್ಯೂಆರ್ ಕೋಡ್‌ಗಳನ್ನಿಟ್ಟುಕೊಂಡು ಡಿಜಿಟಲ್ ಪಾವತಿ ಮಾಡಿಸಿಕೊಳ್ಳುತ್ತಿದ್ದಾರೆ.

೨೦೨೩-೨೪ರ ಸಾಲಿನಲ್ಲಿ ಇದುವರೆಗೆ ೧೨,೦೦೦ ಕೋಟಿಗಿಂತಲೂ ಹೆಚ್ಚು ಬಾರಿ ಡಿಜಿಟಲ್ ವಹಿವಾಟುಗಳ ಮೂಲಕ ಹಣ ಸಂದಾಯವಾಗಿದೆ. ೨೦೨೩ರ ಡಿಸೆಂಬರ್ ತಿಂಗಳಲ್ಲಿ ೧೭.೪ ಲಕ್ಷ ಕೋಟಿ ರುಪಾಯಿಗಳಷ್ಟು ಹಣವು ಡಿಜಿಟಲ್ ಮಾಧ್ಯಮದ ಮೂಲಕ ಪಾವತಿಸಲ್ಪಟ್ಟಿದೆ. ಪ್ರತಿರೋಧದ ನಡುವೆಯೂ ಇಂದು ಭಾರತದಲ್ಲಿ ಡಿಜಿಟಲ್ ವಹಿವಾಟು ಜಗತ್ತಿಗೇ ಮಾದರಿಯಾಗಿ ಬೆಳೆದು ನಿಂತಿದೆ. ವಾಹನಗಳಿಗೆ ಫಾಸ್ಟ್ ಟ್ಯಾಗ್ ಅನ್ನು ಅಳವಡಿಸಬೇಕು ಎಂದು ಸರಕಾರವು ಕಾನೂನು ತಂದಾಗ ವಾಹನಗಳ ಮಾಲೀಕರು ಸರಕಾರದ ನಡೆಯನ್ನು ವಿರೋಽಸಿದ್ದರು.

ಟೋಲ್ ಗೇಟ್‌ಗಳಲ್ಲಿ ಫಾಸ್ಟ್ ಟ್ಯಾಗ್ ಅಳವಡಿಸದೇ  ರುವವಾಹನಗಳಿಂದ ಹೆಚ್ಚಿನ ಮೊತ್ತದ ಟೋಲ್ ಚಾರ್ಜ್ ಅನ್ನು ವಸೂಲಿ ಮಾಡಲು ಆರಂಭ ವಾದಾಗ ಗತ್ಯಂತರವಿಲ್ಲದೆ ಎಲ್ಲಾ ವಾಹನಗಳ ಮಾಲೀಕರು ತಮ್ಮ ವಾಹನಗಳಿಗೆ ಫಾಸ್ಟ್ ಟ್ಯಾಗ್ ಅನ್ನು ಅಳವಡಿಸಿದರು. ಇದೀಗ ದೇಶದ ೩೩.೧೪ ಕೋಟಿ ವಾಹನಗಳಿಗೆ -ಫಾಸ್ಟ್ ಟ್ಯಾಗ್ ಅನ್ನು ಅಳವಡಿಸಲಾಗಿದ್ದು ದೇಶದಲ್ಲಿ ಫಾಸ್ಟ್ ಟ್ಯಾಗ್ ಅಳವಡಿಸಿದ ವಾಹನಗಳ ಪ್ರಮಾಣ ಶೇ.೯೬ರಷ್ಟನ್ನು ಮೀರಿದೆ. ದ್ವಿಚಕ್ರ ವಾಹನಗಳ ಸವಾರರಿಗೆ ಹಾಗೂ ಹಿಂಬದಿಯ ಸವಾರರಿಗೆ ಹೆಲ್ಮೆಟ್ ಧಾರಣೆಯನ್ನು ಕಡ್ಡಾಯ ಮಾಡಿದಾಗ, ನಾಲ್ಕು ಚಕ್ರದ ವಾಹನಗಳ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ಧರಿಸುವುದನ್ನು ಕಡ್ಡಾಯ ಮಾಡಿದಾಗಲೂ ಜನರು ಅಪಸ್ವರ ಎತ್ತುವುದನ್ನು ನಾವು ಕಾಣುತ್ತಿದ್ದೇವೆ.

ಆದರೆ ಈ ಬದಲಾವಣೆಗಳು ವಾಹನಗಳ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಇರುವುದಾಗಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ.
ಸಾಮಾಜಿಕ ಬದಲಾವಣೆಯನ್ನು ಕೂಡಾ ಜನರು ಅನಿವಾರ್ಯವಾದಾಗ ಮಾತ್ರ ಒಪ್ಪಿಕೊಳುತ್ತಾರೆ. ಮೊದಲು ಬ್ರಾಹ್ಮಣ ಸಮುದಾಯದಲ್ಲಿ ಅಂತರ್ಜಾತೀಯ ವಿವಾಹವನ್ನು ಸಾಮಾಜಿಕ ಅಪರಾಧವಾಗಿ ಪರಿಗಣಿಸಲಾಗುತ್ತಿತ್ತು. ಆದರೆ ಕಳೆದ ೨೦ ವರ್ಷಗಳಲ್ಲಿ ಬ್ರಾಹ್ಮಣರಲ್ಲಿ ವಧುಗಳ ಕೊರತೆ
ಉಂಟಾದಾಗ ಅಂತರ್ಜಾತೀಯ ವಿವಾಹದ ಬಗೆಗಿನ ವಿರೋಧವೂ ಕಡಿಮೆಯಾಗುತ್ತಾ ಬಂತು. ಬ್ರಾಹ್ಮಣ ಸಮುದಾಯದ ಕೃಷಿ, ವೈದಿಕ ಹಾಗೂ ಅಡುಗೆ ವೃತ್ತಿಯ ಯುವಕರಿಗೆ ಸ್ವಸಮುದಾಯದ ವಧುಗಳು ಸಿಗದೇ ಹೋದಾಗ ಅವರು ಸಸ್ಯಾಹಾರಿಗಳಾದ ಇತರ ಸಮುದಾಯಗಳ ಯುವತಿ ಯರನ್ನು ವಿವಾಹವಾಗಲು ಆರಂಭಿಸಿದರು.

ವಧುಗಳ ಕೊರತೆ ಇನ್ನೂ ತೀವ್ರವಾದಾಗ, ಮೊದಲು ಮಾಂಸಾಹಾರಿಗಳಾಗಿದ್ದರೂ ವಿವಾಹ ನಂತರ ಸಸ್ಯಾಹಾರಿಗಳಾಗಿ ಬದಲಾಗಲು ಒಪ್ಪಿದ ಯುವತಿಯರನ್ನು ವಿವಾಹವಾಗಲುತೊಡಗಿದರು. ಹೀಗೆ ಬ್ರಾಹ್ಮಣ ಸಮುದಾಯದವರು ಅಂತರ್ಜಾತೀಯ ವಿವಾಹಕ್ಕೆ ತಮ್ಮನ್ನು ತಾವು ತೆರೆದುಕೊಂಡರು. ಇಂದು ಬ್ರಾಹ್ಮಣ ಸಮುದಾಯದಲ್ಲಾಗುತ್ತಿರುವಷ್ಟು ಅಂತರ್ಜಾತೀಯ ವಿವಾಹ ಗಳು ಹಿಂದೂ ಧರ್ಮದ ಇತರ ಯಾವುದೇ  ಮುದಾಯಗಳಲ್ಲಿಯೂ ಆಗುತ್ತಿಲ್ಲ. ಬ್ರಾಹ್ಮಣರಲ್ಲಾದ ಈ ಸಕಾರಾತ್ಮಕ ಬದಲಾವಣೆಗೆ ವಧುಗಳ ಕೊರತೆ ಎನ್ನುವ ಅನಿವಾರ್ಯವೇ ಕಾರಣ ಎಂಬುದನ್ನು ಗಮನಿಸಬಹುದು.

ಸ್ವಚ್ಛ ಭಾರತ್ ಅಭಿಯಾನವು ಆರಂಭವಾಗಿ ಹತ್ತು ವರ್ಷ ಗಳು ಆಗುತ್ತಾ ಬಂದರೂ ಜನರು ರಸ್ತೆ ಬದಿಯಲ್ಲಿ ಕಸವನ್ನು ಚೆಲ್ಲುವುದು, ಪ್ಲಾಸ್ಟಿಕ್ ಹಾಗೂ ಬಾಟಲಿಗಳನ್ನು ಬೇಕಾಬಿಟ್ಟಿ ಎಸೆಯುವುದು, ಸಿಕ್ಕಸಿಕ್ಕಲ್ಲಿ ಉಗುಳುವುದು ಹಾಗೂ ಪ್ರವಾಸಿ ತಾಣಗಳನ್ನು ಮಲಿನಗೊಳಿಸುವಂಥ ಕೆಟ್ಟ ಚಾಳಿಯಿಂದ ಇನ್ನೂ ಹೊರಬಂದಿಲ್ಲ. ಇಂಥ ಕುಕೃತ್ಯಗಳನ್ನು ಎಸಗುವವರ ಮೇಲೆ ಸರಕಾರವು ಯಾವುದೇ ಕಠಿಣ ಕಾನೂನು ಕ್ರಮಗಳನ್ನು  ಕೈಗೊಳ್ಳದೇ ಇರುವುದರಿಂದಾಗಿ ಭಾರತೀಯರಲ್ಲಿ ಇಂದಿಗೂ ಇಂಥ ಕೊಳಕು ಪ್ರವೃತ್ತಿ ಮುಂದುವರಿದಿದೆ. ಪ್ರತಿ ವರ್ಷ ಶಾಲಾ ಪಠ್ಯಪುಸ್ತಕಗಳ ಮೂಲಕ ಸ್ವಚ್ಛತಾ ಜಾಗೃತಿಯನ್ನು ಮೂಡಿಸಿ ಸ್ವಚ್ಛತೆಯ ಮಹತ್ವವು ಮಕ್ಕಳ ಮನಸ್ಸಿನಲ್ಲಿ ಅಚ್ಚಳಿಯದಂತೆ ಮಾಡಬೇಕಿರುವುದು ಎಷ್ಟು ಮುಖ್ಯವೋ, ನಗರ ಪಾಲಿಕೆ, ಪಂಚಾಯತ್‌ಗಳಂಥ ಸ್ಥಳೀಯ ಆಡಳಿತ ಸಂಸ್ಥೆಗಳು, ಕಸವನ್ನು ಚೆಲ್ಲುವವರ ಮೇಲೆ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳುವುದೂ ಅಷ್ಟೇ ಮಹತ್ವದ್ದಾಗಿದೆ.

ಸ್ವಚ್ಛತೆಯನ್ನು ಅನಿವಾರ್ಯವಾಗಿಸಿದರೆ ಮಾತ್ರ ಜನರು ತಮ್ಮ ಊರು, ಓಣಿ ಹಾಗೂ ರಸ್ತೆಗಳನ್ನು ಸ್ವಚ್ಛವಾಗಿ ಇಟ್ಟು ಕೊಂಡಾರು. ಅನಿವಾರ್ಯವಾದಾಗ ಮಾತ್ರ ಜಗತ್ತು ಬದಲಾ ಗಿದೆ, ಅನಿವಾರ್ಯವಾಗದೆ ಯಾರೂ ಬದಲಾಗರು.

(ಲೇಖಕರು ಹವ್ಯಾಸಿ ಬರಹಗಾರರು)

Leave a Reply

Your email address will not be published. Required fields are marked *