ಪ್ರತಿಸ್ಪಂದನ
ಜಿ.ಪ್ರತಾಪ ಕೊಡಂಚ
ಶ್ರೀ ವಿಶ್ವ ವಿಜಯ ಸ್ವಾಮೀಜಿ ಅವರ ‘ಶ್ರೀಕೃಷ್ಣ ಪೂಜಾ ಪರ್ಯಾಯ: ವಿಪರ್ಯಾಸಗಳ ಸರಣಿ’ ಎಂಬ ಲೇಖನ (ವಿಶ್ವವಾಣಿ ಜ.೮) ಓದಿ ಖೇದವೆನಿಸಿತು. ಈ ಬಾರಿಯ ಪರ್ಯಾಯದಲ್ಲಿ ಶ್ರೀ ಕೃಷ್ಣ ಪೂಜಾ ದೀಕ್ಷಿತರಾಗುತ್ತಿರುವುದು ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಪುತ್ತಿಗೆ ಮಠದ ಹಿರಿಯ ಪೀಠಾಧಿಪ ತಿಗಳಾದ ಶ್ರೀ ಸುಗುಣೇಂದ್ರ ತೀರ್ಥರು. ಪುತ್ತಿಗೆ ಶ್ರೀಗಳ ಈ ಬಾರಿಯ ಪರ್ಯಾಯವನ್ನು ‘ವಿಶ್ವ ಪರ್ಯಾಯ’ ಎಂದಿರುವುದು ವಿಪರ್ಯಾಸ ಎಂದಿದ್ದಾರೆ ವಿಶ್ವ ವಿಜಯ ಸ್ವಾಮೀಜಿ ಯವರು.
ನನ್ನ ಅಲ್ಪ ಅರಿವಿನಲ್ಲಿ ಪುತ್ತಿಗೆ ಶ್ರೀಗಳ ಈ ಬಾರಿಯ ಪರ್ಯಾಯ, ವಿಶ್ವ ಗೀತಾ ಪರ್ಯಾಯ. ಈ ಪರಿಕಲ್ಪನೆಯ ಉದ್ದೇಶ- ವಿಶ್ವಾದ್ಯಂತ ಶ್ರೀ ಕೃಷ್ಣ ಉಪ
ದೇಶಾಮೃತವೆಂದೇ ಪರಿಗಣಿಸಲ್ಪಟ್ಟ ಭಗವದ್ಗೀತೆ ಮತ್ತು ಜ್ಞಾನದ ಪ್ರಸರಣ. ಜಗದಗಲವೂ ಯುದ್ಧ, ಅಶಾಂತಿಯ ದಳ್ಳುರಿ ಹೊಮ್ಮಿರುವ ಈ ಹೊತ್ತಿ ನಲ್ಲಿ, ಒಂದಿಡೀ ಜಗತ್ತಿಗೇ, ಮನುಕುಲಕ್ಕೇ ಬದುಕಿನ ದಾರಿ ತೋರಿಸಬಲ್ಲದು ಗೀತೆ. ಆದ್ದರಿಂದ, ಗೀತಾ ಪ್ರಸರಣಕ್ಕಿಂತ ಉದಾತ್ತ ಧ್ಯೇಯ ಇನ್ನೊಂದಿರ ಲಿಕ್ಕಿಲ್ಲ.
ಪುತ್ತಿಗೆ ಹಿರಿಯ ಶ್ರೀಪಾದರು ಸಾಗರೋಲ್ಲಂಘನ ಮಾಡಿ ದರೆಂಬುದು ಲೇಖನದಲ್ಲಿ ವ್ಯಕ್ತವಾಗಿರುವ ಇನ್ನೊಂದು ಅಪವಾದ. ಹಿರಿಯ ಶ್ರೀಗಳ ಲಿಖಿತ
ಅನುಮತಿಯ ಮೇರೆಗೆ ತಾವೂ ಸಾಗರೋಲ್ಲಂಘನ ಮಾಡಿರುವುದಾಗಿ ಹೇಳಿಕೊಂಡಿರುವ ವಿಶ್ವ ವಿಜಯರೇ ಸುಗುಣೇಂದ್ರ ತೀರ್ಥರು ವಿದೇಶದಲ್ಲಿಯೂ ಕೃಷ್ಣಾಮೃತ, ಮಧ್ವತತ್ವ ಪ್ರಚಾರ ಮಾಡಿದ್ದು ಸಮಂಜ ಸವಲ್ಲವೆನ್ನುವ ರೀತಿಯ ಭಾವನೆ ವ್ಯಕ್ತಪಡಿಸುತ್ತಿರುವುದು ದುರಂತವೇ ಸರಿ. ಉತ್ತರ ಅಮೆರಿಕ ದಾದ್ಯಂತ ಸುಮಾರು ೧೨ಕ್ಕೂ ಹೆಚ್ಚು ಕೃಷ್ಣ ಮಂದಿರಗಳನ್ನು ಸ್ಥಾಪಿಸಿ, ಬರೀ ಮಧ್ವಮತಾನುಯಾಯಿಗಳಿಗೆ ಮಾತ್ರವಲ್ಲ, ಈ ಪರಿಸರದ ಸಮಸ್ತ ಹಿಂದೂ ಸಮುದಾಯಕ್ಕೆ ಆಸರೆಯಾಗಿದ್ದು ಮಾತ್ರ ಪುತ್ತಿಗೆ ಹಿರಿಯ ಶ್ರೀಪಾದರು.
ಕ್ರೈಸ್ತ ರಾಷ್ಟ್ರವಾಗಿರುವ ಅಮೆರಿಕದ ಕೆಲವು ಕಡೆ ಮುಚ್ಚುತ್ತಿದ್ದ ಚರ್ಚುಗಳನ್ನು ಖರೀದಿಸಿ, ಅದನ್ನೇ ಶಾಸ್ತ್ರೋಕ್ತವಾಗಿ ಕೃಷ್ಣಮಂದಿರವಾಗಿ ಸಿದ್ದು ಅವರ
ಗಮನಾರ್ಹ ಸಾಧನೆ. ಮಧ್ವಾರಾಧಕರಿಗೂ, ಅನಿವಾಸಿ ಭಾರತೀಯ ಕುಟುಂಬಗಳಿಗೂ ಸುಗುಣೇಂದ್ರ ತೀರ್ಥರು ಒದಗಿಸಿಕೊಟ್ಟ ಧಾರ್ಮಿಕ, ಸಾಂಸ್ಕೃತಿಕ, ಶಾಸ್ತ್ರೀಯ ನೆಲೆಗಟ್ಟು ಇಲ್ಲಿಯೂ ಹಿಂದೂ ಪರಂಪರೆಯನ್ನು ಉಳಿಸಿ ಬೆಳೆಸಲು ಸಾಧ್ಯವಾಗಿಸಿದೆ. ಈ ನಿಟ್ಟಿನಲ್ಲಿ ‘ವಿಶ್ವ ಪರ್ಯಾಯ’ವೆಂಬ ಕಲ್ಪನೆ ಯನ್ನು ಸಾರ್ಥಕವಾಗಿ ಕಾರ್ಯಗತಗೊಳಿಸಲು ಶ್ರೀ ಸುಗುಣೇಂದ್ರ ತೀರ್ಥರಿಗಿಂತ ಅರ್ಹರು ಇನ್ನೊಬ್ಬರಿರಲಿಕ್ಕಿಲ್ಲ.
ವಿದೇಶ ಪ್ರಯಾಣದಲ್ಲೂ ತಮ್ಮ ಅನುಷ್ಠಾನಗಳಿಗೆ ಚ್ಯುತಿ ಬಾರದಂತೆ ನಡೆದುಕೊಂಡು, ಬದುಕು ಕಟ್ಟಿಕೊಳ್ಳಲು ತಾಯ್ನಾಡಿನಿಂದ ಬಹುದೂರ ಬಂದ ನಮ್ಮಂಥ ಸಹಸ್ರಾರು ಕುಟುಂಬಗಳಿಗೆ ಧಾರ್ಮಿಕ ನೆಲೆಗಟ್ಟು ಕಟ್ಟಿಕೊಟ್ಟಿದ್ದು ಶ್ರೀ ಸುಗುಣೇಂದ್ರ ತೀರ್ಥರು. ಅವರಿಲ್ಲದಿದ್ದಿದ್ದರೆ, ಇಲ್ಲೇ ಹುಟ್ಟಿ ಬೆಳೆದಿ ರುವ ಮುಂದಿನ ಪೀಳಿಗೆಗೆ ಉಡುಪಿಯ ಆಚಾರ- ವಿಚಾರ, ಕೃಷ್ಣ ತತ್ವ, ತುಳು ಭಾಷೆ, ಸಂಪ್ರದಾಯ, ಮಧ್ವ ಪರಂಪರೆ ಇತಿಹಾಸವಾಗುತ್ತಿತ್ತು ಎಂಬುದು ಕಟುಸತ್ಯ. ‘ಹಳೆಯದೆಲ್ಲವೂ ಒಳಿತೆನಲು ಹೊಲ್ಲ, ಹೊಳವು ಹೊಸತೆಂದು ಹೀಗಳೆಯಲೂ ಸಲ್ಲ, ಬಲ್ಲವರು ಒಪ್ಪುವರು ಆರಯ್ದು ಎಲ್ಲ, ಹೆಡ್ಡರಿಗೆ ಹೆರನುಡಿಯೆ ನನ್ನಿ, ಸವಿಬೆಲ್ಲ!’
ಎಂಬ ಕಾಳಿದಾಸನ ‘ಮಾಲವಿಕಾಗ್ನಿಮಿತ್ರ’ ನಾಟಕದ ಸೂತ್ರಧಾರನ ಮಾತಿನ ಕನ್ನಡ ಭಾವಾನುವಾದ ಇಲ್ಲಿ ಪ್ರಸ್ತುತವೆನಿಸುತ್ತದೆ. ಇಂದು ಸಮಾಜ, ಸಂಪ್ರದಾಯ ದೇಶದ ಸೀಮಿತ ಪರಿಧಿಯನ್ನು ದಾಟಿವೆ. ವಿಶ್ವ ಗ್ರಾಮದ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಒಂದು ಸಮಾಜದ, ಸಂಸ್ಕೃತಿಯ ಜನರು ವಿಶ್ವದಾದ್ಯಂತ ಬದುಕು ಕಟ್ಟಿಕೊಂಡಿದ್ದಾರೆ. ಅವರಿಗೂ ನಮ್ಮ ಸಂಪ್ರದಾಯದ ಆಸರೆ, ಮಾರ್ಗದರ್ಶನ ಸಿಕ್ಕಾಗಲೇ ನಮ್ಮ ಸಂಸ್ಕೃತಿ- ಪರಂಪರೆ ಉಳಿದು ಕೊಳ್ಳುವುದು ಎಂಬುದು ನಿಶ್ಚಿತ. ಆ ನಿಟ್ಟಿನಲ್ಲಿ ಉಡುಪಿ ಕೃಷ್ಣ, ಉಡುಪಿಯ ಸಂಸ್ಕೃತಿ – ಆಚರಣೆಗಳನ್ನು ಸಹಸ್ರಾರು ಅನಿವಾಸಿ ಗಳಿಗೆ ಉಣಬಡಿಸಿ ಸಲಹುತ್ತಿರುವ ಸುಗುಣೇಂದ್ರ ತೀರ್ಥರು ನಮ್ಮ ಪಾಲಿಗಂತೂ ವಿಶ್ವವಂದ್ಯರೆನಿಸುತ್ತಾರೆ.
ನಾನು ಮಾಧ್ವನಲ್ಲ, ಶಾಸ ಪಾರಂಗತ ನಲ್ಲ, ಸಂಸ್ಕೃತದ ಅರಿವೂ ನನಗಿಲ್ಲ. ಸಂಪ್ರದಾಯದ ಪರಿಣತನಲ್ಲವೇ ಅಲ್ಲ. ಕಾಲ ನಿಂತ ನೀರಲ್ಲ, ಹರಿವು ನಿರಂತರ! ಒಂದು ಕಾಲದಲ್ಲಿ ರೂಪುಗೊಂಡ ರೀತಿ-ರಿವಾಜುಗಳೇ ಸಾರ್ವಕಾಲಿಕ ಸತ್ಯ ವಾಗುವುದಿಲ್ಲ. ಅವು ನಿರುಪಯೋಗಿ ಕಟ್ಟಳೆಯಾಗಿ ಉಳಿದರೆ ಪ್ರಸ್ತುತತೆ ಕಳೆದುಕೊಂಡು ನಿರರ್ಥಕವಾಗುತ್ತವೆ. ಸಂಪ್ರದಾಯಗಳು ಕಾಲಕ್ಕೆ ಅನುಗುಣವಾಗಿ ಮಾರ್ಪಾಡು ಗೊಂಡು ಸಮಾಜಮುಖಿಯಾಗಬೇಕು. ಆಗಲೇ ಯಾವುದೇ ಒಂದು ಸಂಪ್ರದಾಯ, ಸಂಸ್ಕೃತಿಯ ಉಳಿವು ಸಾಧ್ಯ. ಅದನ್ನು ಸಾಧ್ಯವಾಗಿಸಿದ ಶ್ರೀ ಸುಗುಣೇಂದ್ರ ತೀರ್ಥರ ಈ ಬಾರಿಯ ‘ವಿಶ್ವ ಗೀತಾ ಪರ್ಯಾಯ’ ಸಂಪೂರ್ಣ ಕೃಷ್ಣಾನುಗ್ರಹ ಸಂಪನ್ನವಾಗಲಿ.
(ಲೇಖಕರು ಹವ್ಯಾಸಿ ಬರಹಗಾರರು)