Friday, 13th December 2024

ಮತಾಂತರ- ಪಕ್ಷಾಂತರ- ಗಂಡಾಂತರ !

ದಾಸ್‌ ಕ್ಯಾಪಿಟಲ್‌

ಟಿ.ದೇವಿದಾಸ್‌, ಬರಹಗಾರ, ಶಿಕ್ಷಕ

ಮತಾಂತರ ಎಂದಾಕ್ಷಣ ನೆನಪಿಗೆ ಬರುವುದು ಭಾರತದ ರತ್ನವೇ ಆಗಿ ಹೋದ ಡಾ. ಅಂಬೇಡ್ಕರ್. ಈ ಶತಮಾನದ ದೊಡ್ಡ
ವ್ಯಕ್ತಿತ್ವವೊಂದರ ಜೀವನ ಸಂಧ್ಯೆಯದ ಮಹತ್ ಪರಿವರ್ತನೆ. ಅವರು ಯಾಕೆ ಮತಾಂತರಗೊಂಡರು ಎಂಬುದನ್ನು ಚರ್ಚಿಸುವುದು ಇಲ್ಲಿ ಅಪ್ರಸ್ತುತ.

ಅವರ ಮತಾಂತರದ ಹಿಂದಿನ ಚಿಂತನೆಯ ನಿಲುವುಗಳನ್ನು ಅವರ ಜೀವನವನ್ನು ಅವಲೋಕನ ಮಾಡಿ ಅರ್ಥಮಾಡಿ ಕೊಂಡವರಿಗೆ ಅರ್ಥವಾಗುತ್ತದೆ. ಅಂದಿನ ದಿನಗಳಲ್ಲಿ ಇರುವ ಹಿಂದೂ ಧರ್ಮದಲ್ಲಿರುವ ಅನಿಷ್ಟಗಳನ್ನು ವಿರೋಧಿಸುವ ಬಂಡಾಯವನ್ನು ಅವರು ಹೂಡಿದ್ದು ಸರಿಯಾಗಿಯೇ ಇದೆ. ಜೀವನ ಸಂಧ್ಯೆಯಲ್ಲಿ ಅವರು ಬೌದ್ಧಮತಕ್ಕೆ ಮತಾಂತರಗೊಳ್ಳಲು ಕಾರಣ ಅವರೊಬ್ಬ ದಲಿತ ಎಂಬುದನ್ನಷ್ಟೇ ಹೇಳಲು ಸಾಧ್ಯವಿಲ್ಲ. ಅದೊಂದೇ ಕಾರಣವಾಗಿದ್ದರೆ ಬೌದ್ಧಮತಕ್ಕೆ ಪರಿವರ್ತನೆ ಯಾದ ಮೇಲೂ ಹಿಂದೂ ಧರ್ಮದ ಅನಿಷ್ಟಗಳ ವಿರುದ್ಧ ಬಂಡಾಯವನ್ನು ಮತ್ತೂ ಮುಂದುವರಿಸಬೇಕಿತ್ತು. ಆದರೆ ಹಾಗಾಗ ಲಿಲ್ಲ.

ಅವಲೋಕಿಸಿ: ಅವರ ಹೆಚ್ಚಿನ ಸಾಧನೆಗಳು ಮತಾಂತರದ ಪೂರ್ವದಲ್ಲಿ ಆಗಿರುವಂಥದ್ದು. ಆದ್ದರಿಂದ ಅವರ ಮತಾಂತರಕ್ಕೆ ಬೇರೆಯದಾದ ಕಾರಣಗಳೂ ಇರಲು ಸಾಧ್ಯವಿದೆ. ರಾಜಕೀಯವಾಗಿ ಎದುರಿಸಿದ ನೋವು, ಹತಾಶೆಗಳು, ಹೋರಾಟಗಳಿಂದ ಘಾಸಿಕೊಂಡ ಮನಸು, ಅಂತಾರಾಷ್ಟ್ರೀಯ ಆತಂಕಗಳು ತುಂಬಾ ಸೂಕ್ಷ್ಮ ಸಂವೇದನಾ ಶೀಲರಾದ ಅಂಬೇಡ್ಕರರಿಗೆ ಬುದ್ಧನ ವ್ಯಕ್ತಿತ್ವ, ತತ್ತ್ವಗಳು ಆಕರ್ಷಣೀಯವಾಗಿ ಆ ಮತಕ್ಕೆ ಪರಿವರ್ತನೆಯಾಗಲು ಮನಸು ಬಯಸಿರಬಹುದು. ಹಿಂದೂ ಧರ್ಮದಲ್ಲಿ ಕಾಣಸಿಗದ್ದು ಬೌದ್ಧಮತದಲ್ಲಿ ಕಂಡುಕೊಳ್ಳಲು ಮನಸು ಹಂಬಲಿಸಿರಬಹುದು.

ಆದರೆ ಒಂದಂತೂ ಸತ್ಯ: ಯಾವ ಮತ ಧರ್ಮಗಳಿಗೆ ಪರಿವರ್ತನೆಯಾದರೂ ಅದರೊಳಗಿನ ಜಾತಿ ಸಂಬಂಧಿತವಾಗಿ ಹುಟ್ಟಿ ಕೊಳ್ಳುವ ನೋವು ಕಾಡುವುದಿಲ್ಲ ಎಂದೇನಿಲ್ಲ. ಹಿಂದೂ ಧರ್ಮದಲ್ಲೂ ಬ್ರಾಹ್ಮಣನಿಗೂ ಅಂಥ ನೋವುಗಳು ಇಲ್ಲವೆಂದಲ್ಲ. ಕಾಲಗತಿಯಲ್ಲಿ ರೂಢಿಸಿಕೊಂಡ ಗುಣಧರ್ಮಗಳಿಂದ ಆಯಾ ಧರ್ಮದ ಮೂಲ ಆಶಯಗಳಿಗ ಆಘಾತವಾಗಿರುವುದು ಎಲ್ಲ ಧರ್ಮಗಳಲ್ಲೂ ಸಹಜವಾಗೇ ಇದೆ. ಬೌದ್ಧ ಧರ್ಮವೂ ಸೇರಿ ಯಾವ ಧರ್ಮವೂ ಇದಕ್ಕೆ ಹೊರತಾಗಿ ಇಲ್ಲ.

ಮನುಷ್ಯ ಸಹಜ ಪ್ರವೃತ್ತಿಗಳಿಗೆ ಜಾತಿ ಧರ್ಮಗಳ ಅಂಗಿ ತೊಡಿಸಿದ ಮಾತ್ರಕ್ಕೆ ಸಂಘರ್ಷಗಳು ಇಲ್ಲವಾಗಲು ಹೇಗೆ ಸಾಧ್ಯ? ಆದ್ದರಿಂದ ಅಂಬೇಡ್ಕರರ ನಿಲುವನ್ನು ಪ್ರಶ್ನಿಸುವುದು ವ್ಯಕ್ತಿಗತವಾಗಿ ಸಾಧುವಲ್ಲ. ಸಮಷ್ಟಿಯ ದೃಷ್ಟಿಯಲ್ಲಿ ಅಸಾಧುವೂ ಅಲ್ಲ. ಹಾಗಂತ ಅಂಬೇಡ್ಕರ್ ದಲಿತರಾಗಿದ್ದರೂ ಕೇವಲ ದಲಿತರ ಸೊತ್ತಲ್ಲ, ಅವರು ದೇಶದ ಸೊತ್ತು. ಆದ್ದರಿಂದ ಅವರು ಕೊನೆಯ ವರೆಗೂ ಹಿಂದೂವಾಗೇ ಇರಬಹುದಿತ್ತೇನೋ ಎಂದು ಅನೇಕ ಸಲ ಅನಿಸಿದ್ದಿದೆ.

ಬದಲಾವಣೆಯೆಂಬುದು ಅಂತರಂಗದ ಅಧ್ಯಾತ್ಮ ಕಾರಣಕ್ಕಾಗಿ ಮಾತ್ರವಾದರೆ ಅದು ಸರಿ. ಏಕೆಂದರೆ ಆಗ ಅದು ಒಳಗಿಂದ ಬಂದ ಬೆಳವಣಿಗೆ ಆಗಿರುತ್ತದೆ. ಯಾರನ್ನೂ ಯಾವುದೇ ಮತ, ಸಂಪ್ರದಾಯ, ನಂಬಿಕೆಗಳಿಗೆ ಕಟ್ಟಿಹಾಕಲು ಬರುವುದಿಲ್ಲ. ಆದರೆ ಒಬ್ಬನು ಬಾಹ್ಯ ಕಾರಣಗಳಿಗಾಗಿ ಪರಿವರ್ತನೆ ಹೊಂದಿದರೆ ಅವನಿಗೆ ಅಂತರಂಗದಲ್ಲಿ ಯಾವ ಧರ್ಮಶ್ರದ್ಧೆಯೂ ಇಲ್ಲವೆಂದೇ ಆಗುತ್ತದೆ. ಆಗ ಅವನು ಬಿಟ್ಟ, ಈಗ ಸೇರಿಕೊಂಡ ಎರಡೂ ಮತಗಳು ಪೊಳ್ಳು ಒಣಸೂತ್ರಗಳಾಗುತ್ತವೆ.

ಇಲ್ಲಿ ಅಂಬೇಡ್ಕರರು ಸೂಚಿಸಿದ್ದ ಪರಿವರ್ತನೆಯ ಉದ್ದೇಶ ಸಾಮಾಜಿಕ ಅಂತಸ್ತು ಮತ್ತು ಅದರಿಂದ ಆಗಬಹುದಾದ ಲೆಕ್ಕಾ ಚಾರಗಳ ಗುರಿಯುಳ್ಳದ್ದು. ಇದರಲ್ಲಿ ಯಾವ ಅಧ್ಯಾತ್ಮಿಕವೂ ಸಂಬಂಧಿಸುವುದಿಲ್ಲ. ಹಣಕ್ಕಾಗಿ ಅಥವಾ ವಿವಾಹಕ್ಕಾಗಿ
ಪರಿವರ್ತನೆ ಎಂದಂತೆ ಮಾತ್ರ…ಇದು ಅಂಬೇಡ್ಕರ್ ಮತಾಂತರದ ಬಗ್ಗೆ ಶ್ರೀ ಅರವಿಂದರು ಪ್ರತಿಕ್ರಿಯಿಸಿದ್ದು.

ದಲಿತರು ಸಾಮೂಹಿಕವಾಗಿ ಮತಾಂತರ ಗೊಳ್ಳಬೇಕೆಂದು ಅಂಬೇಡ್ಕರ್ ಕರೆಕೊಟ್ಟಾಗ ಗಾಂಧಿ ಹೇಳಿದ ಮಾತುಗಳಿವು: ಧರ್ಮ ವೆಂಬುದು ಮನೆಯಂತೆಯೋ, ಬಟ್ಟೆಯಂತೆಯೋ, ಇಷ್ಟ ಬಂದಂತೆ ಬದಲಾಯಿಸುವ ಪದಾರ್ಥವಲ್ಲ! ಅದು ಮನುಷ್ಯನಿಗೂ ದೇವರಿಗೂ ಇರುವ ವೈಯಕ್ತಿಕ ನಂಟಿನ ಸಂಬಂಧವುಳ್ಳದ್ದು. ಶರೀರ ಹೋದರೂ ಉಳಿಯುವುದು ಈ ಧರ್ಮ. ಮತಾಂತರ ಎಂಬುದು ವ್ಯಕ್ತಿ ಸ್ವಾತಂತ್ರ್ಯದಡಿಯಲ್ಲಿ ಸೌಮ್ಯವಾಗೇ ಕಾಣುತ್ತದೆ.

ಮತಾಂತರದಲ್ಲಿ ತಪ್ಪೇನು ಎಂದು ಶ್ರೀನಿವಾಸ ಪ್ರಸಾದರು ಒಮ್ಮೆ ಕೇಳಿದ್ದರು. ಮುಂದುವರೆದು ಹಿಂದೂಗಳನ್ನೇ ಬೈದಿದ್ದರು. ಇರಲಿ ಆ ವಿಚಾರ ಈಗ ಬೇಡ. ಅರವಿಂದರು ಹೇಳಿದಂತೆ ಅಂತರಂಗದ ಅಧ್ಯಾತ್ಮ ಕಾರಣದಿಂದ ಮತಾಂತರ ನಡೆಯುವುದು ಅಥವಾ ನಡೆದಿದ್ದು ತೀರಾ ಅಪರೂಪವೇ ಸರಿ. ಮತಾಂತರದ ಹಿಂದೆ ಕೆಲಸ ಮಾಡುವುದು ಮುಖ್ಯವಾಗಿ ಹಣವೇ!

ಹಿಂದೂಗಳಲ್ಲಿ ಮತಾಂತರದ ಶ್ರದ್ಧೆ ಇಲ್ಲವೇ ಇಲ್ಲ. ಅದು ಧರ್ಮಬಾಹಿರ, ಧರ್ಮವಿರುದ್ಧವೆಂದು ಬಗೆಯುತ್ತದೆ. ಆತ್ಮೋದ್ಧಾರಕ್ಕೆ ಅಲ್ಲದಿದ್ದರೆ ಮತಾಂತರಕ್ಕೆ ಯಾವ ಅರ್ಥವಿದೆ?

ಆಲೋಚಿಸಿ: ಮತಾಂತರವೆಂಬುದು ವ್ಯಕ್ತಿ ಸ್ವಾತಂತ್ರ್ಯ ಎನ್ನುವುದಾದರೆ ಬಲವಂತದ ಮತಾಂತರ ಅಪರಾಧ ಆಗುವುದಿಲ್ಲವೇ? ಆದರೂ ಮತಾಂತರ ಕೆಲವು ರಾಜ್ಯಗಳಲ್ಲಿ ಎಗ್ಗಿಲ್ಲದೆ ನಡೆಯುವುದೇಕೆ? ಕಾನೂನಿನ ಪ್ರಕಾರ ಅದನ್ನು ನಿರ್ಬಂಧಿಸಲು ಯಾಕೆ ಸಾಧ್ಯವಾಗುತ್ತಿಲ್ಲ.

ಏಸುವಿಗಾಗಿ ಮಂದಿರ ಕಟ್ಟುವ ಕ್ರೈಸ್ತರೇತರರ ಹುಮ್ಮಸ್ಸು ಮತಾಂತರದ ಮತ್ತೊಂದು ಮುಖವಲ್ಲವೇನು? ಇದು ಸಂವಿಧಾನ ವಿರೋಧಿ ನಡೆಯಲ್ಲವೆ? ಯೇಸುವನ್ನು ನಂಬಿದರೆ ಮಾತ್ರ ಮೋಕ್ಷ, ಅವನೇ ದೇವರ ಒಬ್ಬನೇ ಮಗ, ದೇವರೂ ಅವನೇ, ಮಗನೂ ಅವನೇ, ಪುತ್ರ, ಆತ್ಮ ಎನಿಸಿದ Church= Holy Ghost ಎಂಬುದೂ ಅವನೇ. ಕ್ಯಾಥೋಲಿಕರ ಈ ನಂಬುಗೆಯಲ್ಲಿ ಚರ್ಚಿಸುವುದೇ ನಿದೆ? ಪ್ರಶ್ನಿಸಬಾರದು. ಪ್ರಶ್ನಿಸಿದರೆ ಅದು ತಪ್ಪು. ಯೇಸುವು ಕೊನೆಯ ಪ್ರವಾದಿಯಲ್ಲ, ಮಹಮ್ಮದರೇ ಕೊನೆಯ ಪ್ರವಾದಿ.

ಅವರನ್ನು ಒಪ್ಪದವರು, ನಂಬದವರು, ಅನುಸರಿಸದವರು ಎಲ್ಲರೂ ಸಾಮೂಹಿಕವಾಗಿ ನರಕಕ್ಕೇ ಹೋಗುತ್ತಾರೆ. ಆದುದರಿಂದ ಕ್ರೈಸ್ತರು, ಯಹೂದ್ಯರು, ಹಿಂದೂಗಳು, ಇತರರು, ಮಹಮ್ಮದೀಯೇತರರು ಇಸ್ಲಾಂ ಧರ್ಮದೊಳಕ್ಕೇ ಬರಬೇಕು. ಅಹು ಒಬ್ಬನೇ ದೇವರು. ಖುರಾನ್ ಒಂದೇ ಜಗತ್ತಿನ ಏಕಮೇವ ಪವಿತ್ರ ಗ್ರಂಥ. ಒಪ್ಪದವರನ್ನು ಕೊಲ್ಲುವುದೇ ಧರ್ಮ- ಜಿಹಾದ್ ಎಂಬ ತತ್ವಾಚರಣೆ. ಇಲ್ಲಿಯೂ ಚರ್ಚಿಸುವುದೇನಿಲ್ಲ. ಪ್ರಶ್ನಿಸಿದರೆ ತಪ್ಪು.

ಜಾತ್ಯತೀತರ ಅಬ್ಬರ ಮುಗಿಲು ಮುಟ್ಟುತ್ತದೆ. ಆದರೆ ಸತ್ಯವೇನೆಂದರೆ, ಈ ಎರಡೂ ಮತಗಳ Dogma ಇದು. ಇದು ಘನೀಭೂತ ವಾಗಿ ನಿಂತುಬಿಟ್ಟಿದೆ. ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ- ನೋ ವೇ. ಇದಕ್ಕೆ ಅವಕಾಶವೇ ಇಲ್ಲ. ನಮ್ಮನ್ನು ಒಪ್ಪದವರು ಬಂಡಾಯ ಪ್ರವೃತ್ತಿಯವರು, ವಿಧ್ವಂಸಕ ಪ್ರವೃತ್ತಿಯವರು ಎಂಬುದನ್ನು ಈ ಮತಗಳೇ ನಿರ್ವಹಿಸುತ್ತವೆ ಈಗಲೂ. ಇದನ್ನೇ ಅಲ್ಲವೆ ಕಾಂಗ್ರೆಸ್ಸಿಗರು, ಕಮ್ಯುನಿಸ್ಟರು, ಕಾಮ್ರೇಡರು ಬೆಂಬಲಿಸುವುದು!

ಅಷ್ಟಕ್ಕೂ ಮತಾಂತರದಿಂದ ಆಗುವ ಪ್ರಯೋಜನವೇನು ಎಂಬುದೇ ಸರಿಹೊತ್ತಿನವರೆಗೂ ಸ್ಪಷ್ಟವಾಗಿ ಅರ್ಥವಾಗುವುದಿಲ್ಲ. ಇದೊಂದು ಮನೆಹಾಳುಕೋರರ ಬ್ಯುಸಿನೆಸ್. ಒಂದು ಮತದಿಂದ ಮತ್ತೊಂದು ಮತಕ್ಕೆ ಬದಲಾದ ತಕ್ಷಣ ವ್ಯಕ್ತಿಯ ವ್ಯಕ್ತಿತ್ವದಲ್ಲಿ ಮಹತ್ತರವಾದ ಬದಲಾವಣೆಗಳು ಸಂಭವಿಸಿ ಬಿಡುತ್ತದೆ ಎಂದು ನಂಬುವುದು ಸಾಧ್ಯವೇ ಇಲ್ಲ. ಯಾಕೆಂದರೆ ಬದಲಾಗ ಬೇಕಾದುದು ವ್ಯಕ್ತಿತ್ವಕ್ಕೂ ಮೂಲವಾದ ವ್ಯಕ್ತಿಯ ಸ್ವಭಾವ.ಗುಣಧರ್ಮ ಸ್ವಭಾವವೇ ಬದಲಾಗದೆ ಮತವನ್ನು ಬದಲಾಯಿಸಿ ದರೇನು ಬಂತು ಪ್ರಯೋಜನ? ಇರುವುದು ಒಂದೇ ದಾರಿ; ಅದು ಅಂತರಂಗದ ಪರಿವರ್ತನೆ. ಇದಾಗದೇ ಬಾಹ್ಯದ ಬದುಕಲ್ಲಿ ಮಾತ್ರ ಮತವನ್ನು ಬದಲಾಯಿಸಿದರೆ ಹಳೆಯ ಅಂಗಿ ತೆಗೆದು ಹೊಸ ಅಂಗಿ ಧರಿಸಿದಂತೆ.

ವ್ಯಕ್ತಿಗತವಾಗಿ ಅಂತರಂಗದಲ್ಲಿ ಯಾವ ಬದಲಾವಣೆಯೂ ಆಗದೆ ಕೇವಲ ಮತವನ್ನು ಬದಲಾಯಿಸಿಕೊಂಡು ಹೆಸರು, ಜಾತಿ ಇವುಗಳನ್ನೆಲ್ಲ ಬದಲಾಯಿಸಿಕೊಂಡರೆ ಸೇರಿದ ಮತದ ಸಂಖ್ಯೆ ಹೆಚ್ಚಿತೇ ವಿನಾ ಬೇರೇನೂ ಆಗುವುದಿಲ್ಲ. ಆಗ ಮತಕ್ಕೂ ಸಂಖ್ಯೆಗೂ ಮುಖ್ಯತೆ ಬರುತ್ತದೆಯೇ ಹೊರತು ಸೇರಿದ ಮತದಲ್ಲಿ ಯಾವ ಉದ್ದೇಶ ಮತ್ತು ಗುರಿಯನ್ನು ತಲುಪಲು ಹೇಗೆ
ಸಾಧ್ಯ? ಇದು ಮತ ಪರಿವರ್ತಿತರಿಗೆ ಅರ್ಥವಾಗದ ಕಗ್ಗಂಟು.

ಕೊನೆಯಲ್ಲಿ ಕೇವಲ ಮತಾಂತರವಾದುದಕ್ಕೆ ಆತ್ಮವಿಹೀನ ಸಮಾಧಾನವೋ ಸಾಂತ್ವನವನ್ನೋ ಕಂಡೆನೆಂದು ಹೇಳಿಕೊಳ್ಳಬೇಕೇ ಹೊರತು ಬೇರೇನೂ ಸಾಧನೆಯಾಗುವುದಿಲ್ಲ. ಈ ಸಮರ್ಥನೆ ಯಾವ ಪುರುಷಾರ್ಥವನ್ನು ತಂದುಕೊಡಲು ಸಾಧ್ಯ? ಸಂಖ್ಯೆ ಹೆಚ್ಚುವುದರ ಮೂಲಕ ಮೈನಾರಿಟಿಯನ್ನು ಮೆಜಾರಿಟಿ ಮಾಡುವ ಕಾರ್ಯಹುನ್ನಾರ ಸಾಫಲ್ಯಗೊಳ್ಳುತ್ತದೆಯಷ್ಟೆ!

ಕೇವಲ ಸಂಖ್ಯೆಯನ್ನು ಹೆಚ್ಚಿಸುವ ಹಿಂದಿರುವ ಸಂಚು ಸಾಮಾಜಿಕವಾದ ಶಾಂತಿಯನ್ನು ಕೆಡಿಸುವ ರಾಷ್ಟ್ರವನ್ನು ಪರೋಕ್ಷವಾಗಿ ಆಕ್ರಮಿಸುವ, ಮೂಲವಾಹಿನಿಯನ್ನು ಗುಲಾಮಗಿರಿಗೆ ಇಳಿಸುವ ಮಹಾನ್ ಅಪರಾಧ. ಈ ಸಂಖ್ಯೆಯನ್ನು ಹೆಚ್ಚಿಸುವ ಹಿಂದೆ ನಿಂತಿರುವುದು ಹೇಗಾದರೂ ಮಾಡಿ ಚುನಾವಣೆಯಲ್ಲಿ ಗೆದ್ದು ಅಧಿಕಾರ ಪ್ರಾಪ್ತಿಯ ಪರಮ ದುರಾಸೆಯೆಂಬ ಗುಮ್ಮ!

ಯಾಕೆಂದರೆ ಸಂಖ್ಯಾ ಪ್ರಧಾನ ಪ್ರಜಾಪ್ರಭುತ್ವದಲ್ಲಿ ಇದೆಲ್ಲ ಮಾಮೂಲಿ ವಿಚಾರ. ಅದರಲ್ಲೂ ವಿಶ್ವದ ದೊಡ್ಡ ಪ್ರಜಾಪ್ರಭುತ್ವದ
ದೇಶವಾದ ಭಾರತದಲ್ಲಿ ಮತಗಳ ಸಂಖ್ಯೆಯೂ ಹೆಚ್ಚು, ಮತಾಂತರದ ಪ್ರಕರಣಗಳೂ ಹೆಚ್ಚು. ಯಾಕೆಂದರೆ ಇಲ್ಲಿ ಮತಾಂತರಕ್ಕೆ ಅವಕಾಶವಿದೆ. ಯಾರು ಯಾವ ಮತವನ್ನೂ ಸೇರಬಹುದು. ತೊರೆಯುವ ಮತದ ಬಗ್ಗೆ ಓದಿರಬೇಕಿಲ್ಲ, ಸೇರುವ ಮತದ ಬಗ್ಗೆ ಸ್ಪಷ್ಟ ಜ್ಞಾನ ಇರಬೇಕೆಂದಿಲ್ಲ. ಅರವಿಂದರು ಹೇಳಿದ ಹಾಗೆ ಯಾವ ಪರಿವರ್ತನೆಯೂ ಅಧ್ಯಾತ್ಮದ ಹಂಬಲ, ನಿಜ ಆಂತರ್ಯದ ಹಂಬಲದೊಂದಿಗೆ ಆಗುವುದಿಲ್ಲವೋ ಅಂಥ ಮತಾಂತರವು ಜೀವನ ಸಂವಿಧಾನದ ವಿರುದ್ಧವಾಗಿ ಪರಿಗಣಿತವಾಗುತ್ತದೆ.

ಡಾ. ಕೆ.ಎಸ್.ನಾರಾಯಣಚಾರ್ಯರ ಈ ಮಾತುಗಳನ್ನು ಓದಿ: ನನ್ನನ್ನು ನಂಬದವರು ಒಣಗಿದ ಕಟ್ಟಿಗೆ ತುಂಡುಗಳಂತೆ. ಅವರನ್ನು ಹಿಡಿದು ಸುಟ್ಟುಬಿಡಿ ಎಂದು ಕ್ರೈಸ್ತ ಮಹಾಶಯನು ಬೋಧಿಸಿದ್ಧು ನ್ಯೂ ಟೆಸ್ಟಿಮೆಂಟಿನಲ್ಲಿ ಇದ್ದು, ಅದಲ್ಲದೇ ಕ್ರೈಸ್ತೇತರರನ್ನು ಸಾಮೂಹಿಕ ಇನ್ ಕ್ವೆಸಿಷನ್ ಹೆಸರಲ್ಲಿ ಸುಡಲು ಕ್ರೈಸ್ತಮತ ಮುಖಂಡರಿಗೆ ಪ್ರೇರಣೆ ಇತ್ತದ್ದು? ಅದರಿಂದಲ್ಲವೆ ಭಾರತದಲ್ಲೂ ಗೋವೆಯಲ್ಲಿ ಬರೀ ಎರಡು-ಮೂರು ನೂರು ವರ್ಷಗಳ ಹಿಂದೆ ಸಂತ ಕ್ಸೇವಿಯರನು ಸಾವಿರಾರು ಜನರನ್ನು
ಸುಟ್ಟದ್ದು? ಗೋವಾಸ್ ಇನ್ ಕ್ವೆಸಿಷನ್ ಎಂಬ ಪ್ರೊ. ಪ್ರಿಯೋಳ್ಕರರ ಪುಸ್ತಕ ಓದಿದ್ದೀರಾ? ನಿಮ್ಮ ಪರಿವರ್ತಕರು, ನಿಮ್ಮ ಭೂಮಿ ಯನ್ನು ಕಸಿದು, ಅ ಪ್ರಾರ್ಥನಾ ಮಂದಿರ, ಸ್ಮಶಾನಗಳನ್ನು ನಿರ್ಮಿಸಿ, ಸತ್ತವರೂ ಆಕ್ರಮಣಕಾರರಾಗಲು ಕಾರಣರಾಗಿದ್ದೇ ಅಲ್ಲವೇ ಓರಿಸ್ಸಾದಲ್ಲಿ, ಹಿಂದೆ ಮಧ್ಯಪ್ರದೇಶದ ಝುಬುವಾದಲ್ಲಿ, ಬೇರೆಡೆ ಹಿಂದೂ-ಕ್ರೈಸ್ತ ಗಲಭೆ ಕಾರಣಗಳಾದದ್ದು?

ಗಲಭೆಗೆ ಕಾರಣ ಯಾರು? ನಿಮ್ಮ ಬುದ್ಧಿಗೇಡಿತನವಲ್ಲವೆ? ಎಂದು ಅವರು ಅನಾಥ, ಕ್ರೈಸ್ತ ಪರಿವರ್ತಿತ ಬಂಧುಗಳನ್ನು ಕೇಳುತ್ತಾರೆ. ಮಹಮ್ಮದೀಯರ ತಂತ್ರವೂ ಇದೇ. ಮರಳಿ ಭಾರತದಲ್ಲಿ ಮೊಘಲ್ ಸಾಮ್ರಾಜ್ಯ ಸ್ಥಾಪನೆ! ಉಗ್ರಗಾಮಿಗಳ, ಮತಾಂಧರ, ಚಟುವಟಿಕೆಗಳು ಹೊರನಾಡಿನ, ಹಣದ, ಒತ್ತಾಯದ, ರಾಜತಾಂತ್ರಿಕ ಯತ್ನಗಳಿಂದಲೇ ನಡೆಯುತ್ತಿವೆ: ಒಬ್ಬ ಮತ ಮೊಂಡ, ಹಿಂದೆ ಅರವಿಂದರಿಗೆ ಪತ್ರ ಬರೆದು ಇದರಲ್ಲಿ ಏನು ತಪ್ಪು ಎಂದು ಕೇಳಿದ.

ಅದಕ್ಕೆ ಅರವಿಂದರ ಉತ್ತರ: ನೀನು ಬರಿ ಸತ್ಯವು ನಿನಗೆ ಬೇಕೆಂದು ಕೇಳುವೆ. ಆದರೂ ಸಂಕುಚಿತ, ಮೂಢ ಮತಾಂಧನಂತೆ ಮಾತನಾಡುವೆ! ಯಾವ ಮತದಲ್ಲಿ ಹುಟ್ಟಿದೆಯೋ ಅದಕ್ಕಿಂತ ಭಿನ್ನವಾದ ಬೇರಾವುದರಲ್ಲೂ ನೀನು ನಂಬಲು ತಿರಸ್ಕರಿಸುವೆ. ಎಲ್ಲ ಬಗೆಯ ಮತಾಂಧತೆಯೂ ಅಸತ್ಯವೇ. ಏಕೆಂದರೆ ದೇವರು ಮತ್ತು ಪರಮ ಸತ್ಯದ ಸ್ವರೂಪಕ್ಕೆ ಅದು ವಿರುದ್ಧ ಸತ್ಯವನ್ನು ಯಾವುದೇ ಒಂದು ಗ್ರಂಥದಲ್ಲಿ- ಬೈಬಲ, ಕುರಾನ್, ವೇದ – ಮುಚ್ಚಿಟ್ಟು ಬಂಧಿಸಲಾಗುವುದಿಲ್ಲ.

ಪರಾತ್ಪರ ಪುರುಷನು ನಿತ್ಯ, ವಿಶ್ವವ್ಯಾಪಿ ಮತ್ತು ಅನಂತ. ಆದುದರಿಂದ ಅವನು ಮುಸಲ್ಮಾನರ ಅಥವಾ ಸೆಮೆಟಿಕ್ ಮತಗಳ ಗುತ್ತಿಗೆಯ ಏಕಸ್ವಾಮ್ಯ ವಸ್ತುವಾಗಲಾರ. ಅವನೊಡನೆ ಸಂಬಂಧ ಹೊಂದಲು ಹಿಂದೂಗಳಿಗೆ ಮತ್ತು ಕನ್ ಫ್ಯೂಶಿಯಸ್ ಟಾವೋ ಮತಾನುಯಾಯಿಗಳಿಗೂ ಸಹ ಅಷ್ಟೇ ಅಧಿಕಾರವಿದೆ….ನಿನ್ನ ಸಂಕುಚಿತ ಬುದ್ಧಿಯ ಮಿತಿಗಳಲ್ಲಿ ನೀನು ದೇವರನ್ನು ಕೂಡಿ ಹಾಕಲಾರೆ; ಮತ್ತು ಆ ದಿವ್ಯ ಶಕ್ತಿಗೆ, ದಿವ್ಯ ಅರಿವಿಗೆ ಅದು ಎಲ್ಲಿ, ಯಾವಾಗ, ಯಾರ ಮೂಲಕ ಪ್ರಕಟವಾಗಬೇಕೆಂಬುದನ್ನು ಅಪ್ಪಣೆ ಮಾಡಲಾರೆ.

ನಿನ್ನ ಪ್ರಶ್ನೆಗೆ ನಾನು ಉತ್ತರಿಸಲೇಬೇಕೆಂದು, ಸತ್ಯವನ್ನು ಹೇಳಬೇಕೆಂದು ಬಯಸಿದ್ದೆಯಾದ್ದರಿಂದ ನಾನು ಬರೆದಿದ್ದೇನೆ! ಆದರೆ ನೀನು ಮುಸಲ್ಮಾನನಾಗಿಯೇ ಉಳಿಯಬೇಕೆಂದು ಇಚ್ಛಿಸಿದರೆ ಯಾರೂ ತಡೆಯಲಾರರು. ನಾನು ನಿನ್ನೆಡೆಗೆ ತಂದಿರುವ ಈ ಸತ್ಯವು ನಿನ್ನ ಬುದ್ಧಿಗೆ ಅರಿಯಲು ಅಥವಾ ತಾಳಿಕೊಳ್ಳಲು ಮೀರಿzದರೆ ನೀನು ನಿನ್ನ ಅರ್ಧಸತ್ಯದಲ್ಲಿಯೇ, ಅಜ್ಞಾನದಲ್ಲಿಯೇ ಉಳಿಯಲು ಸ್ವತಂತ್ರ. ಯಾರ ಪರಿವರ್ತನೆಗಾಗಿಯೂ ನಾನು ಇಲ್ಲಿ ಇಲ್ಲ.

ಮತಾಂತರಕ್ಕೆ ಮೂಲ ಪ್ರೇರಣೆಯಾಗಿ ಕಾಣುವುದು ಹಣ. ಮತಾನುಯಾಯಿಗಳ ಪ್ರಮಾಣವನ್ನು ಹೆಚ್ಚಿಸುವುದು. ಮುಖ್ಯವಾಗಿ,
ವೈಯಕ್ತಿಕವಾಗಿ ಹೆಚ್ಚು ಚೆನ್ನಾಗಿ ಗುರುತಿಸುಕೊಳ್ಳುವಿಕೆಯ ವಿಪರೀತದ ವಾಂಛೆ. ಇದು ವೈಯಕ್ತಿಕವಾದ ತೆವಲು. ಮತಾಂತರ ಗೊಂಡ ಕೂಡಲೇ ಯಾರ ಸ್ವಭಾವ, ಸಂಸ್ಕೃತಿ, ಆಚಾರ, ಜೀವನ ಪದ್ಧತಿ ಬದಲಾಗಿ ಪರಿವರ್ತನೆಯಾದ ಮತಕ್ಕೆ ಸಂಪೂರ್ಣವಾಗಿ ಬದಲಾಗಲು ಸಾಧ್ಯವೇ ಇಲ್ಲ. ಹುಟ್ಟು ಅಂಟಿಕೊಂಡು ಸಂಸ್ಕೃತಿ, ಪರಂಪರೆಯಿಂದ ಯಾರಿಗೂ ಅಷ್ಟು ಸುಲಭವಾಗಿ ಮನೋ ಧರ್ಮ, ಮನೋಭಾವಗಳಲ್ಲಿ ಪರಿವರ್ತನೆ ಸಾಧ್ಯವೇ ಇಲ್ಲ.

ಇದು ಹುಚ್ಚು ಭ್ರಮೆ. ಹಿಂದೂಗಳ, ಬೌದ್ಧರ ಅಹಿಂಸೆಯ ಲಾಭವನ್ನು ಗರಿಷ್ಠ ಪ್ರಮಾಣದಲ್ಲಿ ಪಡೆದು ಎಲ್ಲ ಹಿಂದೂ ನಾಯಕ ರನ್ನು ಮತ್ತು ಬೌದ್ಧರನ್ನು ಖಡ್ಗದಿಂದಲೇ ಮುಸಲ್ಮಾನರನ್ನಾಗಿ ಮತಾಂತರ ಗೊಳಿಸಲಾಯಿತು. ಸಣ್ಣ ಸಣ್ಣ ಗುಂಪುಗಳಲ್ಲಿದ್ದ ಹಿಂದೂ ಸಂಘಟನೆಗಳ ಕೊರತೆ ಸಂಪೂರ್ಣ ದೇಶವನ್ನು 750 ವರ್ಷಗಳ ಕಾಲ ಇಸ್ಲಾಂ ಆಳುವಂತಾಯಿತು. ಆಕ್ರಮಣಕಾರಿ ಗಳಾಗಿ ಬಂದ ಮುಸ್ಲಿಮರು ವಿಶೇಷ ಬುದ್ಧಿವಂತರಾಗಿರಲಿಲ್ಲ. ಆ ಸಮಯದ ಬ್ರಾಹ್ಮಣರ ಜ್ಞಾನ ಕೊರತೆ ಮತ್ತು ಕ್ಷತ್ರಿಯರ ಒಗ್ಗಟ್ಟಿನ ಕೊರತೆ ಸಹಜವಾಗಿಯೇ ಮುಸ್ಲಿಮರು ಮತಾಂತರವನ್ನು ಎಗ್ಗಿಲ್ಲದೆ ನಡೆಸಿದರು.

ಆಮೇಲೆ ವ್ಯಾಪಾರಿಗಳಾಗಿ ಬಂದ ಪೋರ್ಚುಗೀಸರು, ಡಚ್ಚರು, ಫ್ರೆಂಚರು ಮತ್ತು ಇಂಗ್ಲಿಷರೆಲ್ಲರೂ ಕ್ರೈಸ್ತರಾಗಿದ್ದರು. ಇವರೂ ಸಾಕಷ್ಟು ಕುಟಿಲ ನೀತಿಗಳಿಂದ ಬಲಾತ್ಕಾರದಿಂದ ಹಿಂದೂಗಳನ್ನು ಮುಸಲ್ಮಾನರನ್ನೂ ಕ್ರೈಸ್ತರನ್ನಾಗಿಸಿದರು. ಮತಾಂತರಿ ತರನ್ನು ಹೇಗೆ ನಡೆಸಿಕೊಳ್ಳಲಾಯಿತು ಎಂಬುದನ್ನು ಮತಾಂತರದ ಮರ್ಮವೇ ಹೇಳುತ್ತದೆ. ಮನುಷ್ಯರನ್ನು ಪಶುಗಳಂತೆ ಮಾರಾಟ ಮಾಡುವ ಪದ್ಧತಿ ಕ್ರೈಸ್ತರಲ್ಲಿ ಮುಸ್ಲಿಂರಲ್ಲಿ ಮಾತ್ರ ಇದೆ. ಹಿಂದೂ ಯಜ್ಞ ಯಾಗಾದಿಗಳಲ್ಲಿ ಬಲಿಯನ್ನು ಕೊಡುವ ಕ್ರೂರ ಮತ್ತು ಮೂರ್ಖ ಪದ್ಧತಿ ಹಿಂದೆ ಒಂದು ಕಾಲದಲ್ಲಿತ್ತು. ಈಗಲೂ ಅಲ್ಲಲ್ಲಿ ಇದ್ದಿರಬಹುದು.

ಆದರೆ ಅದು ಬೆರಳಣಿಕೆಯದ್ದು. ಆದರೆ ಹಿಂದೂ ಹೆಣ್ಣುಮಕ್ಕಳನ್ನು ಕ್ರೈಸ್ತ ಮಿಶನರಿಗಳು ಕರೆತಂದು ತಾವು ಸಾಕುವ ನಾಟಕವಾಡಿ ಅವರ ಹೆಸರು ಸಂಸ್ಕೃತಿಯನ್ನು ಬದಲಾಯಿಸಿ ಮನೆಗೆಲಸಕ್ಕೆಂದು ನೇಮಿಸಿಕೊಳ್ಳುವುದನ್ನು ನಾವು ನೋಡುತ್ತಿದ್ದೇವೆ. ಈ ರೀತಿಯ ದಂಧೆಯೂ ನಿಂತಿರುವುದು ಲಕ್ಷಗಟ್ಟಲೆ ಹಣದ ಮೇಲೆಯೇ ಹೊರತು ಮತಾಂತರಿತರ
ಉದ್ಧಾರವೋ, ಮಾನಸಿಕ ನೆಮ್ಮದಿಗೋ ಅಲ್ಲವೇ ಅಲ್ಲ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಮತಾಂತರಗೊಂಡ ಸೀಯರು ಮೋಸಕ್ಕೋ, ಬಲಾತ್ಕಾರಕ್ಕೋ ಒಳಗಾಗಿ ವೇಶ್ಯೆಯರಾಗುತ್ತಾರೆ. ಅನೈತಿಕವಾಗಿ ಮಕ್ಕಳನ್ನು
ಹೆರುತ್ತಾರೆ. ಇಂಥ ಮಕ್ಕಳು ಅನಾಥರಾಗಿ ಸಮಾಜಕ್ಕೆ ಕಂಟಕರಾಗುತ್ತಾರೆ. ಆಂಗ್ಲೋ ಇಂಡಿಯನ್ ಜನಾಂಗದ ನಿರ್ಮಾಣ ಹೀಗೆ ಆಗಿದ್ದಿರಬೇಕು. ಕೊನೆಯ ಮಾತು: ಮತವನ್ನು ಬದಲಾಯಿಸುವುದು ಮತಾಂತರ. ಪಕ್ಷವನ್ನು ಬದಲಾಯಿಸುವುದು ಪಕ್ಷಾಂತರ. ಗಂಡನನ್ನು ಬದಲಾಯಿಸುವುದು ಗಂಡಾಂತರ. ಗಂಡಾಂತರ ಅಂದರೆ ಕಷ್ಟ ಎಂಬ ಅರ್ಥವಿದೆ. ಆದ್ದರಿಂದ ಇವು ಮೂರೂ ಯಾವತ್ತೂ ಗಂಡಾಂತರವೇ!

ಮೇಲಾಗಿ, ಈ ಮೂರರಲ್ಲೂ ಆಂತರ್ಯದ ಯಾವ ಶ್ರದ್ಧೆಯನ್ನೂ ಕಾಣುವುದಕ್ಕೆ ಸಾಧ್ಯವೇ ಇಲ್ಲ. ಇದರಲ್ಲಿ ಎದ್ದು ಕಾಣುವುದು ಸೋಗಿನ ಆಡಂಬರದ ಬೂಟಾಟಿಕೆ. ವೈಚಾರಿಕವಾಗಿ ಕಾಠಿಣ್ಯವೇ ಇಲ್ಲದ ಹಿಂದೂ ಧರ್ಮಕ್ಕೆ ಮತಾಂತರಗೊಂಡರೆ ಬದುಕಿನ ಎಲ್ಲ ಸಂದರ್ಭಗಳಲ್ಲೂ ವ್ಯಕ್ತಿ ಮತ್ತು ಅಭಿವ್ಯಕ್ಟಿ ಸ್ವಾತಂತ್ರ್ಯವನ್ನು ಯಥೇಚ್ಛವಾಗಿ ಅನುಭವಿಸಲು ಸಾಧ್ಯವೆಂಬುದನ್ನು ಹಿಂದೂ ಜೀವನ ಪದ್ಧತಿಯನ್ನು ಅವಲೋಕಿಸಿದರೆ ಸತ್ಯವೆನಿಸುತ್ತದೆ.

ಸ್ವಧರ್ಮೇ ನಿಧನಂ ಶ್ರೇಯಃ- ಬಾಹ್ಯ ಬದುಕಿಗೆ ಅಳವಡಿಸಿಕೊಂಡ ಧರ್ಮದ ಸೋಗಿಕ್ಕಿಂತ ನಾವು ಅನುಸರಿಸಿಕೊಂಡು ಬಂದ
ಸ್ವಧರ್ಮ’ವನ್ನು ಪಾಲಿಸಿಕೊಂಡು ಬದುಕುವುದರ ನೆಮ್ಮದಿ ಸುಖವನ್ನು ಕಾಣುವುದು ಶ್ರೇಷ್ಠಧರ್ಮ.