Friday, 13th December 2024

ಚನ್ನಭೈರಾದೇವಿಯ ಬಹಿರಂಗ ಪತ್ರ

ಅಭಿವ್ಯಕ್ತಿ

ಪ್ರಿಯದರ್ಶಿನಿ, ಹಲಸಿನಹಳ್ಳಿ

ಕರುನಾಡಿನ ಮಹಾಜನತೆಗೆ ಚನ್ನಭೈರಾದೇವಿಯ ನಮಸ್ಕಾರಗಳು. ಎಲ್ಲೋ ಕೇಳಿದಂತಿದೆ ಈ ಹೆಸರನ್ನು ಅಂದಿರಾ? ಅದೂ, ಈ ಎರಡು ತಿಂಗಳಿನಿಂದಾಚೆಗೆ ಅಲ್ಲವಾ? ನಾನು ಐದುನೂರು ವರ್ಷಗಳಷ್ಟು ಹಿಂದಿನವಳು ಮಾರಾಯ್ರೇ. ಬಹುಷಃ ನಿಮ್ಮ ಮುತ್ತಜ್ಜನ ಮುತ್ತಜ್ಜನ ಮುತ್ತಜ್ಜಂದಿರು ನನ್ನ ಪ್ರಜೆಗಳಾಗಿದ್ದರು.

ಇದೇ ಏಪ್ರಿಲ್‌ನಲ್ಲಿ ಕಾದಂಬರಿಕಾರ ಗಜಾನನ ಶರ್ಮಾರ ಕಾದಂಬರಿ ಬಂದ ಮೇಲೆಯೇ ಅಲ್ವಾ, ನಿಮ್ಮಲ್ಲಿ ಕೆಲವರಾದರೂ ನನ್ನ ಬಗ್ಗೆ ಅರಿತುಕೊಂಡದ್ದು? ಇರಲಿ ಬಿಡಿ. ಇಷ್ಟೊಂದು ಶತಮಾನಗಳ ನಂತರ ಈಗೇನು ಈ ರಾಣಿಗೆ ನಮ್ಮಲ್ಲಿ ಹೇಳಿಕೊಳ್ಳುವುದಿದೆ ಎನ್ನುವಿರಾ? ಇದೋ ಕೆಲವು ಸಂದೇಹಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ. ಮೊದಲನೆಯದಾಗಿ, ನನ್ನ ಕುರಿತು ಸಂಶೋಧಿಸಿ
ನಾನೊಬ್ಬಳಿದ್ದೆ ಎಂದು ಕನ್ನಡಿಗರಿಗೆ ಪ್ರಚುರಪಡಿಸಲು ಶರ್ಮಾರವರು ಬರೆಯಬೇಕಾಯ್ತೇ? ಅವರೊಬ್ಬ ನಿವೃತ್ತ ಎಂಜಿನಿಯರ್ ಆಗಿ ನನ್ನ ಕುರಿತು ಅಧ್ಯಯನ ನಡೆಸುವವರೆಗೂ, ನಾಡಿನ ತುಂಬೆಲ್ಲ ಇರುವ ಯಾವೊಬ್ಬ ಇತಿಹಾಸದ ತಜ್ಞರಿಗೂ, ಸಂಶೋಧಕ ರಿಗೂ ನನ್ನ ದೀರ್ಘ ಚರಿತ್ರೆ ಹೊರಬರಬೇಕೆಂದು ಅನ್ನಿಸಲೇ ಇಲ್ಲವೇ? ಅಥವಾ ಇವಳದ್ದು ಬೆಳಕಿಗೆ ಬರಬಾರದ ಚರಿತ್ರೆಯೆಂದ ನ್ನಿಸಿತೆ? ಯಾಕೆ ಕೇಳಿದೆನೆಂದರೆ ನಾನು ಆಳ್ವಿಕೆ ನಡೆಸಿದ್ದು ಅನಾಮತ್ತು ಐವತ್ನಾಲ್ಕು ವರ್ಷಗಳ ಕಾಲ.

ಅದೂ ಕೂಡ ಪೋರ್ಚುಗೀಸರು ಭಾರತಕ್ಕೆ ಆಗಮಿಸಿ, ನನ್ನ ಪಕ್ಕದ ರಾಜ್ಯವಾದ ಗೋವಾದಲ್ಲಿ ಭದ್ರವಾಗಿ ಕುಳಿತು, ನಮ್ಮ
ಸೀಮೆಯನ್ನು ಕಬಳಿಸಲು ಹವಣಿಸುತ್ತಿರುವುದರೊಂದಿಗೆ ನಮ್ಮಂತೆ ವಿಜಯನಗರದ ಪ್ರಬಲ ಸಾಮಂತರಾದ ಕೆಳದಿಯ ಅರಸರೂ ನನ್ನ ರಾಜ್ಯದ ಮೇಲೆ ಕಣ್ಣಿಟ್ಟಿರುವ ಸಂದರ್ಭದಲ್ಲಿ, ಜತೆಗೆ ವಿಜಯನಗರ ಸಾಮ್ರಾಜ್ಯ ಪತನಗೊಂಡು ವಿಜಾಪುರ ಸುಲ್ತಾನರು ಉಚ್ಛ್ರಾಯಕ್ಕೆ ಬರುತ್ತಿದ್ದಂಥ ಸಂಕೀರ್ಣ ಕಾಲಘಟ್ಟದಲ್ಲಿ ಪೂರ್ತಿ ಅರ್ಧಶತಮಾನಕ್ಕೂ ಮಿಕ್ಕಿ ಆಡಳಿತ ನಡೆಸುವು ದೆಂದರೆ ತಮಾಷೆಯಲ್ಲ.

ಅವರೆಲ್ಲರೊಂದಿಗೂ ಸಮತೋಲನ ಕಾಯ್ದುಕೊಂಡು, ಅವರೊಂದಿಗೆ ವ್ಯಾಪಾರ ಮಾಡಿ ನನ್ನ ನಾಡನ್ನು ಸಂಪದ್ಭರಿತವ ಗೊಳಿಸಿ, ಅನಾವಶ್ಯಕವಾಗಿ ಯಾರೊಂದಿಗೂ ಯುದ್ಧ ಮಾಡದೇ, ನನ್ನ ರಾಜ್ಯದ ಮೇಲೆ ದಂಡೆತ್ತಿ ಬಂದ ಎಲ್ಲರನ್ನೂ ಸೋಲಿಸಿದ ನನ್ನ ಚರಿತ್ರೆ ನಿಮಗ್ಯಾರಿಗೂ ಆಸಕ್ತಿದಾಯಕವೆನ್ನಿಸಲೇ ಇಲ್ಲವೇ? ಅದು ಬಿಡಿ, ನಾನಾಳಿದ ಭಾಗದಲ್ಲಿಯೇ ಇಂದು ಕನಿಷ್ಠ ವೆಂದರೂ ಇತಿಹಾಸವನ್ನು ಬೋಧಿಸುವ ಇಪ್ಪತ್ತೈದು ಪದವಿ ಕಾಲೇಜುಗಳಿವೆ. ಅಲ್ಲಿನ ವಿದ್ಯಾರ್ಥಿಗಳಿರಲಿ, ಹೆಚ್ಚಿನ ಅಧ್ಯಾಪಕ ರಿಗೇ ನನ್ನ ಪರಿಚಯವಿಲ್ಲ!

ಅಷ್ಟಕ್ಕೂ ನನ್ನ ಚರಿತ್ರೆಯನ್ನು ಮಸುಕಾಗಿಸಲು ನೀವು ಕೊಡುವ ಕಾರಣ – ನಾನು ಕಳಂಕಿತೆಯೆಂಬುದು. ಈ ಕಳಂಕ ಹುಟ್ಟು ಹಾಕಿದ್ದು ನನ್ನ ಸೋದರಮಾವ ಕೃಷ್ಣದೇವರಸ, ಕಾರಣ ನಾನು ಆತನ ವಿವಾಹ ಪ್ರಸ್ತಾಪವನ್ನು ತಳ್ಳಿಹಾಕಿದೆನೆಂದು. ಆನಂತರ, ನನ್ನನ್ನು ಸೆರೆಹಿಡಿದ ಕೆಳದಿಯ ವೆಂಕಟಪ್ಪ ನಾಯಕ, ಕಾರಣ ಹುಗಿಸಿಟ್ಟ ಚಿನ್ನದ ಮೂಲಗಳನ್ನು ನಾನು ಹೇಳಿಲ್ಲವೆಂದು.
ನನ್ನ ನಿಧನದ ಹತ್ತಾರು ವರ್ಷಗಳ ನಂತರ ಇಟಲಿಯ ಪಿಯೆಟ್ರೊ ಡೆಲ್ಲಾ ವೆಲ್ಲೆಯೆಂಬ ಯಾತ್ರಿಕ ಕೆಳದಿಗೆ ಬಂದಾಗ ಆತನಿಗೆ ಈ ಕಥೆಯನ್ನು ಹೇಳಲಾಗಿದೆ.

ಆತ ಬರೆದದ್ದನ್ನು ನೀವು ಯಥಾವತ್ತಾಗಿ ನಂಬಿದ್ದೀರಿ, ನನ್ನ ಚಾರಿತ್ರ್ಯಕ್ಕೆ ಕಪ್ಪು ಶರಾವನ್ನು ಬರೆದಿದ್ದೀರಿ. ಬಿಡಿ, ಅನಾದಿ ಯಿಂದಲೂ ಹೆಣ್ಣೊಬ್ಬಳನ್ನು ಹಣಿಯಬೇಕೆಂದರೆ ಆಕೆಯ ಚಾರಿತ್ರ್ಯವಧೆ ಮಾಡಿದರಾಯ್ತಲ್ಲವೇ? ಇಲ್ಲಿ, ನೈತಿಕ – ಅನೈತಿಕ ವೆಂಬುದು ಮದುವೆಯಾದ ಹೆಣ್ಣು- ಗಂಡುಗಳಿಗೆ ಅನ್ವಯಿಸುವ ಪದಗಳಲ್ಲವೇ? ಸಾವಿನವರೆಗೂ ಪ್ರೀತಿಯಿಂದ ಜತೆಗಿರು ವೆನೆಂದು ಕೈಹಿಡಿದವಳ/ ವನ ಬಿಟ್ಟು ಪರರ ಸಂಗ ಮಾಡಿದರೆ ಅದು ಕಳಂಕವಾಗುತ್ತದೆಯಲ್ಲವೇ? ನಾನು ಮದುವೆಯೇ
ಆಗಿಲ್ಲವೆಂದರೆ ಅದು ಹೇಗೆ ಕಳಂಕಿತಳಾದೆ? ಅದುಬಿಟ್ಟು ಎರಡು ಮೂರು ಮದುವೆಯಾದ, ಕಂಡ ಕಂಡ ಸುಂದರ ಸ್ತ್ರೀಯರನ್ನು ತಮ್ಮ ಅಂತಃಪುರಕ್ಕೆ ಸೇರಿಸಿಕೊಂಡ ರಾಜ- ಮಹಾರಾಜರೆಲ್ಲ ಅಕಳಂಕರೇ ನಿಮ್ಮ ದೃಷ್ಟಿಯಲ್ಲಿ? ಇನ್ನು, ಈಗಿನ ರಾಜಕಾರಣಿಗಳಿಂದ ಮಠಾಧಿಪತಿಗಳವರೆಗೂ ಆಪಾದನೆ ಹೊತ್ತಿರುವವರೇ ಆಗಿರುವಾಗ, ಅಂಥವರದ್ದೇ ರಾಜ್ಯಭಾರ- ಆರಾಧನೆ ನಡೆದಿರುವಾಗ ನನ್ನನ್ನು ಕಳಂಕಿತೆಯೆಂದು ಬದಿಗೆ ಸರಿಸಲು ನಿಮಗೆ ಆತ್ಮಸಾಕ್ಷಿಯೆಂಬುದು ಅಡ್ಡಬರುವುದಿಲ್ಲವೇ? ಐದುನೂರು ವರ್ಷಗಳಿಂದ ನಾನು ಅನುಭವಿಸಿರುವ ಆ ಸಂಕಟವನ್ನು, ಸಮಾಜದಲ್ಲಿ ಗಂಡು-ಹೆಣ್ಣಿನ ಶೀಲದ ಅಳತೆಗೋಲಿನ ಅಸಮತೋಲ
ನವನ್ನು ಶರ್ಮಾರು ಸಮರ್ಥವಾಗಿ ಕಟ್ಟಿಕೊಟ್ಟಿದ್ದಕ್ಕೆ ನಾನವರಿಗೆ ಆಭಾರಿ.

ನನ್ನ ಪ್ರಕಾರ, ನನ್ನ ಚರಿತ್ರೆಯು ಮೂಲೆಗುಂಪಾಗಲು ನಾನು ಕಾಡಿನ ಮೂಲೆಯಿಂದ ಬಂದವಳು, ಸದಾ ನಿರ್ಲಕ್ಷಿತ ಭಾಗವಾದ ಉತ್ತರ ಕನ್ನಡ ಜಿಲ್ಲೆಯವಳು ಎಂದೂ ಆಗಿರಬಹುದು. ಆ ಕಾಲದಲ್ಲಿ ರಾಣಿಯಾದ ನಾನೇ ಕುದುರೆ ಹತ್ತಿ ಯುದ್ಧಮಾಡುತ್ತಿದ್ದ, ಒಬ್ಬಳೇ ಕಾಡುಮೇಡು ಅಲೆಯುತ್ತಿದ್ದ, ಹೆಣ್ಣುಮಕ್ಕಳಿಗೂ ಯುದ್ಧಕೌಶಲಗಳನ್ನು ಕಲಿಸಿ ಸೀಸೇನಾ ವಿಭಾಗವನ್ನು ಹೊಂದಿದ್ದ, ನನ್ನ ಚಾಕಚಕ್ಯತೆಯನ್ನು ಅದಾವ ರೀತಿಯಲ್ಲಿ ಹಿಂದುಳಿದ ದೃಷ್ಟಿಕೋನವೆಂದು ಪರಿಗಣಿಸಿದಿರಿ? ಇದುವರೆಗಿನದೊಂದೇ ಅಲ್ಲ, ಒಮ್ಮೊಮ್ಮೆ ಇಂದಿನ ಪೀಳಿಗೆಯನ್ನೂ ನೋಡಿದಾಗ ಕೂಡ ನಾನೇ ತುಸು ಹೆಚ್ಚು ಸ್ವತಂತ್ರಳೂ, ಪ್ರಗತಿಪರಳೊ ಇದ್ದೆನೇನೋ ಅನಿಸುತ್ತದೆ.

ಇನ್ನುಳಿದಂತೆ, ನನ್ನ ಚರಿತ್ರೆಯು ನಮ್ಮ ಪಠ್ಯಪುಸ್ತಕದ ಭಾಗವಾಗುವುದು ಒತ್ತಟ್ಟಿಗಿರಲಿ, ನಾನಾಳಿದ ಯಾವ ಊರಿನ ಯಾವ ರಸ್ತೆಗೂ, ಕಡೇಪಕ್ಷ ಪುಟ್ಟದೊಂದು ವೃತ್ತಕ್ಕೂ ನನ್ನ ಹೆಸರಿಲ್ಲ! ವಿದೇಶಗಳಲ್ಲೇನಾದರೂ ನಾನು ಜನಿಸಿದ್ದರೆ ನನ್ನ ಹೆಸರನ್ನು ವಿಶ್ವವಿದ್ಯಾಲಯಕ್ಕೊ, ಸಾರ್ವಜನಿಕ ಸಮುಚ್ಛಯಗಳಿಗೋ ಇಟ್ಟಿರುತ್ತಿದ್ದರು.

ನಾನು ಕಟ್ಟಿಸಿದ – ಉಳಿಸಿ ಬೆಳೆಸಿದ ಬಂದರುಗಳಿಗೋ ಇಟ್ಟಿರುತ್ತಿದ್ದರು. ಆದರಿಲ್ಲಿ, ಕಾಡಿನ ಬೆಳೆಗಳಾದ ಕಾಳುಮೆಣಸು ದಾಲ್ಚಿನ್ನಿ, ಲವಂಗಗಳನ್ನು ತೋಟದಲ್ಲಿ ಬೆಳೆಸುವಂತೆ ಮಾಡಿ, ಶ್ರೀಮಂತಿಕೆ ತಂದುಕೊಟ್ಟ, ಇವತ್ತಿಗೂ ಸಮೃದ್ಧಿಯಿರುವಂತೆ ಮಾಡಿದ ನನ್ನ ಬಗ್ಗೆ ಯಾವೊಬ್ಬ ರೈತರಿಗೂ ತಿಳಿದಿಲ್ಲ!

ತನ್ನ ಹೆಸರಿಲ್ಲ, ಚರಿತ್ರೆಯಿಲ್ಲ ಎಂದು ಬಡಬಡಿಸುತ್ತಿದ್ದಾಳಲ್ಲ, ಇವಳಿಗೇನು ಪ್ರಸಿದ್ಧಿಯ ಭೂತ ಹೊಕ್ಕಿದೆಯೇ ಎಂದು ಸಂಶಯಿಸದಿರಿ. ಖಂಡಿತವಾಗಿಯೂ ಇದೀಗ ನನ್ನ ಹೆಸರು ಪ್ರಕಾಶಗೊಂಡು ನನಗೇನೂ ಆಗಬೇಕಾದ್ದಿಲ್ಲ. ನಾನು ಆಳುತ್ತಿರು ವಾಗಲೇ ಅವ್ವರಸಿಯೆಂದು ನನ್ನ ರಾಜ್ಯದ ಗೊಂಡರು, ಬೆಸ್ತರು, ಮುಕ್ರಿಗಳು ಮುಂತಾದ ತುಳಿತಕ್ಕೊಳಗಾದ ಜನಗಳಿಂದ ಪೂಜಿಸಿಕೊಂಡಾಗಿದೆ.

ಪೋರ್ಚುಗೀಸರ ಕಾಟ ತಡೆಯಲಾರದೇ ಆಶ್ರಯ ಕೇಳಿ ಬಂದ ಸಾರಸ್ವತರೇ ಮೊದಲಾದ ಮೇಲ್ವರ್ಗದವರಿಂದ ಸಣ್ಣಮ್ಮನೆಂದು ಅಕ್ಕರೆಯಿಂದ ಆರಾಧಿಸಿಕೊಂಡಾಗಿದೆ. ನನ್ನ ವಿರುದ್ಧವೇ ಷಡ್ಯಂತ್ರ ರಚಿಸಿ, ಪದೇ ಪದೆ ವಿಫಲರಾಗಿ, ನನ್ನೊಂದಿಗೇ ವ್ಯವಹಾರ ನಡೆಸಿ ನನ್ನ ಚಾತುರ್ಯಕ್ಕೆ ಮರುಳಾದ ಪೋರ್ಚುಗೀಸರಿಂದ ರೈನಾ ದಿ ಪೆಮೆಂಟಾ (ಕರಿಮೆಣಸಿನ ರಾಣಿ) ಎಂದು ಬಿರುದು
ಪಡೆದಾಗಿದೆ. ಐದು ಶತಮಾನಗಳ ಹಿಂದೆಯೇ ಕುಗ್ರಾಮದ ಹೆಣ್ಣೊಬ್ಬಳಿಗೆ ಇಷ್ಟೆಲ್ಲ ಸಾಧ್ಯವಿರುವಾಗ ಇಂದಿನ ಹುಡುಗಿಯರಿಗೆ ಯಾಕೆ ಎಲ್ಲ ಸಾಧ್ಯತೆಗಳನ್ನು ಕಸಿದುಕೊಳ್ಳುತ್ತಿರುವಿರೆಂಬುದನ್ನು ನನಗಿಂದು ಕೇಳಬೇಕಿದೆ.

ಸ್ಫೂರ್ತಿಗಾಗಿ ಹೊರಗೆಲ್ಲೋ ಹುಡುಕುವ ಬದಲು ನಮ್ಮಲ್ಲಿಯೇ ಇದೆಯೆಂದರೆ ಅದು ನೀಡುವ ಧೈರ್ಯ – ವಿಶ್ವಾಸಗಳೇ ಮೇಲಿನ ಹಂತದವು. ಇಂಗ್ಲೆಂಡಿನ ರಾಣಿ ಮೊದಲ ಎಲಿಜಬೆತ್ ಐವತ್ತೆರಡು ವರ್ಷ ಆಳಿದ್ದರೆಂದೂ, ನಾನು ಆಕೆಗಿಂತಲೂ ಹೆಚ್ಚು ವರ್ಷ
ಸಂಪದ್ಭರಿತವಾಗಿ, ಸದೃಢವಾಗಿ, ಸುರಕ್ಷಿತವಾಗಿ ಆಳ್ವಿಕೆ ನಡೆಸಿದ್ದರಿಂದ ನನ್ನನ್ನು ಆಕೆಗೆ ಹೋಲಿಸಿದ ವಿದೇಶಿ ಇತಿಹಾಸಜ್ಞ ರಿದ್ದಾರೆ. ಆದರೆ ಅವರ ತವರು ನೆಲ ಮಾತ್ರವಲ್ಲ, ಇಲ್ಲಿಯೂ ಕೂಡ ರಾಣಿ ಎಲಿಜಬೆತ್‌ರ ಹೆಸರು ಪ್ರಚಲಿತದಲ್ಲಿರು ವಷ್ಟು ನನ್ನ ಹೆಸರಿಲ್ಲ!

ತನ್ನ ಪ್ರಜೆಗಳನ್ನು ಮಕ್ಕಳಂತೆ ನೋಡಿಕೊಂಡವಳೆಂದು ಅವರ್ಸಾ ಹಾಗೂ ಗೇರುಸೊಪ್ಪೆಯಲ್ಲಿ ನನ್ನ ದೇವಸ್ಥಾನ ಕಟ್ಟಿ ಪೂಜಿಸುವಾಗ, ನನ್ನ ಉತ್ಕ ಷ್ಟ ಆಡಳಿತದ ಬಗ್ಗೆ ಬೇರೆ ಉದಾಹರಣೆ ಕೊಡಬೇಕಿಲ್ಲ ಅಲ್ಲವೇ? ಈಗ ಐದೈದು ವರ್ಷಗಳಿಗೆ ಆಳ್ವಿಕೆ ನಡೆಸುವ ಜನಪ್ರತಿನಿಧಿಗಳಿಗೆ ಉಗಿಸಿಕೊಳ್ಳುವುದು ಗೊತ್ತಿದೆಯೇ ಹೊರತು ಆರಾಧಿಸಿಕೊಳ್ಳುವುದಲ್ಲ, ಅದೇನೆಂಬುದರ
ಕಲ್ಪನೆಯೂ ಹೆಚ್ಚಿನವರಿಗಿರದಿರಬಹುದು ಪಾಪ!

ಹಾಗಿದ್ದಾಗ, ಶುದ್ಧ – ಸುವ್ಯವಸ್ಥಿತ ಆಡಳಿತವೆಂಬುದು ಹೀಗಿರಬಹುದೆಂಬುದಕ್ಕೆ ನನ್ನದನ್ನು ನಿದರ್ಶನವೆಂದು ಬಳಸಿಕೊಳ್ಳ ಬಹುದಲ್ಲ. ಅದೂಕೂಡ ಹೆಣ್ಣೊಬ್ಬಳಿಂದ, ಆ ಕಾಲದಲ್ಲಿ ಎಂದಾದಾಗ ಈಗಿನ ಹೆಣ್ಣುಮಕ್ಕಳನ್ನು ತೊಟ್ಟಿಲು ತೂಗಲು ಸೀಮಿತಗೊಳಿಸಬಾರದಲ್ಲ. ಹೆಣ್ಣೊಬ್ಬಳು ಸಾಧಿಸಲು ಗಂಡಿನ ಸಾಗಂತ್ಯ ಬೇಕೇ ಬೇಕು, ಮದುವೆ – ಮಕ್ಕಳೇ ಹೆಣ್ಣನ್ನು ಪರಿ ಪೂರ್ಣಗೊಳಿಸುವುದೆಂಬುದನ್ನು ನಾನು ಸುಳ್ಳುಮಾಡಿರುವಾಗ, ಸಾಧಕ ಹೆಣ್ಣುಮಕ್ಕಳನ್ನು ಈಗಿನ ದಿನಮಾನದಲ್ಲಿಯೂ ಈ
ಕಟ್ಟುಪಾಡುಗಳ ಮುಖಾಂತರ ಬಂಧಿಸಬಾರದಲ್ಲ.

ಮೇಲೇರುತ್ತಿರುವಳೆಂದೋ, ತಾನು ಹೇಳಿದಂತೆಯೇ ನಡೆದುಕೊಳ್ಳಲಿಲ್ಲವೆಂದೋ ಚಾರಿತ್ರ್ಯಹರಣಮಾಡುವ ಮೂಲಕ ಇಂದಿನ ಸಮಾಜವು ನನ್ನನ್ನು ಅಲಕ್ಷಿಸಿದಂತೆ ಹೆಣ್ಣನ್ನು ಜೀವಂತ ಹತ್ಯೆಮಾಡಬಾರದಲ್ಲ. ಈ ಎಲ್ಲವಕ್ಕೂ ನನ್ನ ಚರಿತ್ರೆಯೊಂದು ಪಾಠವಾಗಬೇಕಿದೆ, ತಡೆಯುವ ಸಾಧನವಾಗಬೇಕಿದೆ ನನಗೆ. ಒಟ್ಟಿನಲ್ಲಿ ನನ್ನ ಹೆಸರೆಂಬ ಊರುಗೋಲಿನಿಂದ ನನಗಿಂತಲೂ ಧೀರೋದ್ಧಾತೆಯರು ಈ ಮಣ್ಣಿನಲ್ಲಿ ಉದ್ಭವಿಸಬೇಕಿರುವುದೇ ಈ ಚನ್ನಭೈರಾದೇವಿಗಿಂದು ಆಶಯವಾಗಿದೆ.

ಇಂತಿ ನಿಮ್ಮ ಗತಕಾಲದ ರಾಣಿ ಚನ್ನಭೈರಾದೇವಿ.