ಶಿಶಿರ ಕಾಲ
shishirh@gmail.com
ChatGPT. ಇದು ಮನುಷ್ಯನಂತೆ ವಿಚಾರ ಮಾಡಬಲ್ಲ, ಇತ್ತೀಚೆಗೆ ಅಭಿವೃದ್ಧಿಪಡಿಸಿದ ಅನನ್ಯ ಕಂಪ್ಯೂಟರ್ ಪ್ರೋಗ್ರಾಮ್. ಶೀಘ್ರದಲ್ಲಿಯೇ ನಮೆಲ್ಲರ ಬದುಕನ್ನು ನಿರ್ದೇಶಿಸುವ ತಂತ್ರಜ್ಞಾನವಾಗಿ ಬೆಳೆಯುವ ಸಾಧ್ಯತೆಯಿರುವ ಒಂದು ಆವಿಷ್ಕಾರ.
ಹಾಗೆ ಏನು ಎತ್ತ ಎಂದು ತಿಳಿದುಕೊಂಡಿರುವುದು ಅವಶ್ಯ. ಈ ಪ್ರೋಗ್ರಾಮ್ ಸಾಮಾನ್ಯ ಜನರ ಬಳಕೆಗೆ ಲಭ್ಯವಾಗಿ ಕೇವಲ ಆರು ತಿಂಗಳಾಯಿತು. ನೀವು ಈ ಹೆಸರನ್ನು ಕೇಳಿರುತ್ತೀರಿ ಅಥವಾ ಬಂದ ಹೊಸತರಲ್ಲಿ ಕುತೂಹಲಕ್ಕೆ ಬಳಸಿರುತ್ತೀರಿ. ನೀವು ಅಷ್ಟೆಲ್ಲಾ ಹೊಸ ತಂತ್ರಜ್ಞಾನಕ್ಕೆ ತಲೆಕೆಡಿಸಿಕೊಳ್ಳುವರಾದಲ್ಲಿ ಈ ವಿವರ ಉಪಯುಕ್ತ. ಇಂಟರ್‌ನೆಟ್ ಒಂದು ಇದ್ದರೆ ಯಾರು ಬೇಕಾದರೂ ಬಳಸಿ ಇದರ ರುಚಿ ನೋಡಬಹುದು.
ಚಾಟ್ ಜಿಪಿಟಿಯ ಬಗ್ಗೆ ಉದ್ದುದ್ದದ ಲೇಖನ ಈಗಾಗಲೇ ಸಾಕಷ್ಟು ಬಂದಿವೆ. ನೀವು ತಾಂತ್ರಿಕ ಹಿನ್ನೆಲೆಯವರಲ್ಲದಿದ್ದರೆ ಆ ಲೇಖನಗಳು ಅಷ್ಟರ ಮಟ್ಟಿಗೆ ಅರ್ಥವಾಗಿರಲಿಕ್ಕಿಲ್ಲ. ಈ ವಿಷಯದ ಮೇಲೆ ಕನ್ನಡದಲ್ಲಿ ಬಂದ ಲೇಖನಗಳು ಒಂದಿಷ್ಟು ಗೊಂದಲಗಳನ್ನು ಹುಟ್ಟು ಹಾಕಿವೆ ಕೂಡ. ಏನೋ ಒಂದು ಹೊಸ ತಂತ್ರಜ್ಞಾನ ಬಂದಿದೆಯಂತೆ, ಇದು ಜಗತ್ತನ್ನೇ ಬದಲಾಯಿಸಿ ಬಿಡುತ್ತದಂತೆ, ಅದೆಷ್ಟೋ ಲಕ್ಷ ಮಂದಿ ಇದರಿಂದ ಕೆಲಸ ಕಳೆದುಕೊಂಡು ಬಿಡುತ್ತಾರಂತೆ ಎನ್ನುವ ಸುದ್ದಿಯಂತೂ ನಿಮ್ಮ ಕಿವಿ ಮೇಲೆ ಬಿದ್ದಿರುತ್ತದೆ. ಚಾಟ್ ಜಿಪಿಟಿ ಬಂದಾಗ ಒಂದಿಷ್ಟು ಮಂದಿಯಂತೂ ಆತಂಕದಿಂದ ಏನಿದು, ಏನ್ ವಿಷಯ ಎಂದು ಕೇಳಿದ್ದಿದೆ.
ChatGPT ಒಂದು ವೆಬ್ಸೈಟ್. ಮೊದಲ ಬಾರಿ ಬಳಸುವವರು https://chat.openai.com ಎಂದು ಮೊಬೈಲ್ ಬ್ರೌಸರ್‌ನಲ್ಲಿ ಟೈಪಿಸಿ, ಪೇಜ್ ಮೂಡಿದ ನಂತರ ‘SignUp’ ಅನ್ನು ಒತ್ತಬೇಕು. ನಂತರ ‘Continue With Google’ ಎಂಬ ಬಟನ್ ಅನ್ನು ಪರದೆ ಯ ಮೇಲೆ ಒತ್ತ ಬೇಕು. ಅದಾದ ನಂತರ ನಿಮ್ಮ ಇಮೇಲ್ ಐಡಿ ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ. ಅದನ್ನು ಒತ್ತಿದಾಗ ನಿಮ್ಮ ಪಾಸ್ವರ್ಡ್ ಕೇಳುತ್ತದೆ. ಆಗ ನಿಮ್ಮ Gmail ನ ಪಾಸ್ವರ್ಡ್ ಕೊಟ್ಟರೆ ಚಾಟ್ ಜಿಪಿಟಿ ಬಳಕೆಗೆ ಸಿದ್ಧ. ‘Send A Message’ ಎಂದಿರು ವಲ್ಲಿ ನಿಮ್ಮ ಪ್ರಶ್ನೆ ಹಾಕಿದರೆ ಚಾಟ್ ಜಿಪಿಟಿ ಉತ್ತರಿಸುತ್ತದೆ.
ನೀವು ಮನುಷ್ಯ ಸಹಜ ಪ್ರಶ್ನೆ, ಏನನ್ನು ಬೇಕಾದರೂ ಕೇಳಬಹುದು. ಇಂಗ್ಲಿಷಿನಲ್ಲಿ ಟೈಪಿಸಿ ಕೇಳಿದರೆ ಉತ್ತಮ. ಸಾಮಾನ್ಯವಾಗಿ ಗೂಗಲ್‌ನಲ್ಲಿ ಏನಾದರು ಹುಡುಕಿದರೆ ಅದು ಒಂದಿಷ್ಟು ವೆಬ್‌ಸೈಟ್‌ಗಳನ್ನು ಪರದೆಯ ಮೇಲೆ ಮೂಡಿಸುತ್ತದೆ. ಅಲ್ಲಿಂದ ಮುಂದೆ ಏನೇನೋ ಸಿಕ್ಕು ನಿಮಗೆ ಬೇಕಾದ ಉತ್ತರ ಸಿಗದಿರಬಹುದು. ಆದರೆ ಚಾಟ್ ಜಿಪಿಟಿ ಹಾಗಲ್ಲ. ಕೇಳಿದ ಪ್ರಶ್ನೆಗೆ ನೇರವಾಗಿ ಉತ್ತರಿಸುತ್ತದೆ, ಒಬ್ಬ ಉತ್ತಮ ಪತಿಯಂತೆ! ಇಲ್ಲೊಂದು ಗಮನಿಸಬೇಕು- ಹೀಗೆ ಮೂಡುವ ಉತ್ತರಗಳು ಯಾವುವೂ ಅದ್ಯಾರೋ ಸಿದ್ಧಪಡಿಸಿ, ಟೈಪಿಸಿ ಇಟ್ಟ ಉತ್ತರಗಳಲ್ಲ. ಈ ಉತ್ತರ ಆಗಿಂದಾಗ್ಯೆ ತಯಾರಾಗಿ ನಿಮ್ಮ ಪರದೆಯ ಮೇಲೆ ಮೂಡುತ್ತದೆ.
ಅಲ್ಲೆಲ್ಲೋ ಇರುವ ಸರ್ವರ್ ಕಂಪ್ಯೂಟರ್ ತನ್ನಲ್ಲಿರುವ ಭಾರೀ ಗಾತ್ರದ ವಿಷಯಗಳನ್ನು ಬಳಸಿಕೊಂಡು ಉತ್ತರ ಸಿದ್ಧ ಮಾಡಿ ನಿಮಗೆ ರವಾನಿಸುತ್ತದೆ. ನೀವಿನ್ನೂ ಇದನ್ನು ಬಳಸದಿದ್ದಲ್ಲಿ ಖಂಡಿತವಾಗಿ ಪ್ರಯತ್ನಿಸಲೇಬೇಕು. ಏಕೆಂದರೆ ಇದು ಉಳಿದ ಕಂಪ್ಯೂಟರ್ ತಂತ್ರಜ್ಞಾನದಂತಲ್ಲ. ಹೊಸತು, ಅಂತೆಯೇ ಮಜವಾಗಿದೆ.
ಚಿಕ್ಕದಾಗಿ ಇದೆಲ್ಲ ಹೇಗೆ ಕೆಲಸ ಮಾಡುತ್ತದೆ ಎಂದು ವಿವರಿಸಿಯೇ ಮುಂದಕ್ಕೆ ಹೋಗೋಣ. ಸಾಮಾನ್ಯವಾಗಿ ಕಂಪ್ಯೂಟರ್ ಎಂದರೆ ಏನು ಬೇಕಾದರೂ ಸಾಧ್ಯವೆನ್ನುವ ಒಂದು ಅನಿಸಿಕೆ ಕಂಪ್ಯೂಟರ್ ಬಳಸದ ವರ್ಗಕ್ಕಿದೆ. ನಿಜ ಹೇಳಬೇಕೆಂದರೆ ಕಂಪ್ಯೂ ಟರಿಗೆ ಸ್ವಂತ ತಲೆಯಿಲ್ಲ. ಕಂಪ್ಯೂಟರ್ ಅಥವಾ ಮೊಬೈಲ್ ಅದರಷ್ಟಕ್ಕೇ ಅದು ಸೃಜನಶೀಲವಲ್ಲ. ಅದೊಂದು ಸಲಕರಣೆ ಅಷ್ಟೆ. ಕಂಪ್ಯೂಟರ್‌ನಲ್ಲಿ ಗೂಗಲ್ ಮಾಡಿದಾಗ ಇಂಟರ್‌ನೆಟ್‌ನಲ್ಲಿ ಲಭ್ಯವಿರುವ ಒಂದಿಷ್ಟು ವಿಷಯಗಳನ್ನು ತಂದು ನಮ್ಮ ಮುಂದೆ ಇಡುವ ಕೆಲಸ ಮಾಡುತ್ತದೆ. ಕಂಪ್ಯೂಟರ್ ಒಂದು ಯಂತ್ರ, ಮಾಹಿತಿ ಇಂಟರ್‌ನೆಟ್‌ನಿಂದ.
ಇದರಲ್ಲಿ ಮೂಡುವ ಎಲ್ಲ ವಿಷಯಗಳನ್ನು ಯಾರೋ ಒಬ್ಬರು ಅಲ್ಲೆಲ್ಲಿಯೋ ಟೈಪಿಸಿ ಇಟ್ಟವೇ ಆಗಿರುತ್ತದೆ. ಮೂಡುವ ಚಿತ್ರಗಳು, ವಿಡಿಯೋಗಳು ಕೂಡ ಅಷ್ಟೆ. ಅವೆಲ್ಲ ಎಲ್ಲೋ ಒಂದಿಷ್ಟು ಸರ್ವರ್ ಗಳಲ್ಲಿ ಶೇಖರಿಸಿಟ್ಟ ವಿಷಯಗಳು. ಆದರೆ ಚಾಟ್ ಜಿಪಿಟಿ ಎಂಬ ಪ್ರೋಗ್ರಾಮ್ ಇದಕ್ಕಿಂತ ವಿಭಿನ್ನ. ಹಿನ್ನೆಲೆಯಲ್ಲಿ ಇದೊಂದು ಬೃಹತ್ ಕಂಪ್ಯೂಟರ್ ಪ್ರೋಗ್ರಾಮ್. ಅಂತರ್ಜಾಲ ದಲ್ಲಿ ಲಭ್ಯವಿರುವ ೧೭೫ ಬಿಲಿಯನ್‌ನಷ್ಟು ಬೃಹತ್ ಮಾಹಿತಿಯನ್ನು ಈ ಪ್ರೋಗ್ರಾಮಿಗೆ ನೀಡಿ ತರಬೇತಿ ನೀಡಲಾಗಿದೆ. ಈ ತರಬೇತಿಯನ್ನು ಆಧಾರವಾಗಿಟ್ಟುಕೊಂಡು ಕೇಳಿದ ಪ್ರಶ್ನೆಯನ್ನು ಈ ಪ್ರೋಗ್ರಾಮ್ ಅರ್ಥೈಸಿಕೊಳ್ಳುತ್ತದೆ.
ಅಂತಹ ಪ್ರಶ್ನೆಗೆಳಿಗೆ ತನ್ನಲ್ಲಿರುವ ಮಾಹಿತಿಯನ್ನು ಬಳಸಿಕೊಂಡು ಮನುಷ್ಯ ಸಹಜ ಉತ್ತರ ಹೇಗಿರಬಹುದೆಂದು ಅಂದಾಜಿಸಿ, ಗ್ರಹಿಸಿ ಆ ಮೂಲಕ ಒಂದಾದ ನಂತರ ಒಂದು ಶಬ್ದವನ್ನು ಪೋಣಿಸಿ ಉತ್ತರಿಸುತ್ತದೆ. ಒಟ್ಟಾರೆ ಈ ಪ್ರೋಗ್ರಾಮ್ ಅದ್ಯಾವ ರೀತಿ
ನಿರ್ಮಿಸಲಾಗಿದೆಯೆಂದರೆ ಇದು ಮನುಷ್ಯ ಹೇಗೆ ಮಾತನಾಡುತ್ತಾನೆ ಎನ್ನುವುದನ್ನು ತನ್ನಲ್ಲಿರುವ ಸುಮಾರು ಲಕ್ಷ ಕೋಟಿ ಉದಾಹರಣೆಗಳನ್ನು ಬಳಸಿಕೊಂಡು ಗ್ರಹಿಸುತ್ತದೆ. ಮನುಷ್ಯ ಹೇಗೆ ಉತ್ತರಿಸಿಯಾನೋ ಅದೇ ತೆರನಾಗಿ ಉತ್ತರವನ್ನು ಹೆಣೆಯು ತ್ತದೆ.
ಈ ಶಬ್ದ, ಉತ್ತರ ಪೋಣಿಸುವ ವಿಧಾನ ದಿನ ಕಳೆದಂತೆ ಸುಧಾರಿಸುವಂತೆ ನೋಡಿಕೊಳ್ಳಲಾಗುತ್ತಿದೆ. ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಸುಮಾರು ಒಂದು ಕೋಟಿಯಷ್ಟು ವಿಧವಾದ ಉದಾಹರಣೆಯನ್ನು ಮೆದುಳಿನಲ್ಲಿ ಗ್ರಹಿಸಿ ಉತ್ತರಿಸುತ್ತಾನೆ ಎಂಬುದು ಅಂದಾಜು. ಆದರೆ ಚಾಟ್ ಜಿಪಿಟಿ ಲಕ್ಷ ಕೋಟಿ ರೀತಿಯಲ್ಲಿ ಪ್ರಶ್ನೆಯನ್ನು ಗ್ರಹಿಸಿ ಅದರಲ್ಲಿ ಅತ್ಯುತ್ತಮವಾದುದನ್ನು ಉತ್ತರಿಸಬಲ್ಲದು. ಇದೆಲ್ಲವನ್ನು ಯಥಾವತ್ತು ಹೇಗೆ ಕೆಲಸ ಮಾಡುತ್ತದೆ ಎಂದು ವಿವರಿಸಿದರೆ ವಿಷಯ ಜೀರ್ಣಿಸಿಕೊಳ್ಳಲಾಗುವುದಿಲ್ಲ. ಹಾಗಾಗಿ
ಇದೊಂದು ಕಂಪ್ಯೂಟರ್ ಪ್ರೋಗ್ರಾಮ್, ಬೃಹತ್ ವಿಷಯವನ್ನು ತನ್ನಲ್ಲಿರಿಸಿಕೊಂಡು ಹೆಚ್ಚು ಕಡಿಮೆ ಮನುಷ್ಯನ ಮೆದುಳು ಪ್ರಶ್ನೆಯನ್ನು ಗ್ರಹಿಸಿ ಉತ್ತರಿಸುವಂತೆ ಉತ್ತರಿಸುವ ಮಜೆದಾರ್ ತಂತ್ರಜ್ಞಾನ ಎಂದು ತಿಳಿದುಕೊಂಡರೆ ಸಾಕು.
ಮನುಷ್ಯನಿಗೆ ನಿನ್ನ ಹೆಸರು ಏನು? ಎಂದು ಕೇಳಿದರೆ ಆತನ ಮೆದುಳು ಕೇಳುತ್ತಿರುವುದು ನನ್ನ ಹೆಸರು, ಅದು ಜನರು ನನ್ನನ್ನು ಕರೆಯುವ ಒಂದು ಶಬ್ದ, ಅದು ಈ ಶಬ್ದ ಎಂದು ಹೇಗೆ ಗ್ರಹಿಸಿ ಉತ್ತರ ಸಿದ್ಧವಾಗುತ್ತದೆಯೋ ಅಂತಹ ಕೆಲಸವನ್ನು ಈ ಪ್ರೋಗ್ರಾಮ್ ಮಾಡುತ್ತದೆ. ಆ ಕಾರಣಕ್ಕೇ ಇದನ್ನು ಕೃತಕ ಬುದ್ಧಿಮತ್ತೆ w|iebo Artificial Intelligence ಎಂದು ಕರೆಯುವುದು. ಹಾಗಾಗಿಯೇ ಇದು ಈ ಹಿಂದಿನ ಕಂಪ್ಯೂಟರ್ ಪ್ರೋಗ್ರಾಮಿಗಿಂತ ವಿಭಿನ್ನ, ಅಭೂತ.
ಈ ಪ್ರೋಗ್ರಾಮಿನ ಈ ವಿಶಿಷ್ಟ ಸಾಧ್ಯತೆಗಳು ಅಸಾಮಾನ್ಯ. ಆ ಕಾರಣಕ್ಕೇ ಇದು ಅತಿ ಮಾನುಷ, ಇದು ಜಗತ್ತನ್ನೇ ಬದಲಿಸಿ ಬಿಡುತ್ತದೆ ಎಂದು ಎಲ್ಲರೂ ಬೊಬ್ಬೆ ಹೊಡೆದುಕೊಳ್ಳುತ್ತಿರುವುದು. ಬಂದ ಹೊಸತರಲ್ಲಿ ಇದಕ್ಕೆ ಅಂಕುಶವಿರಲಿಲ್ಲ. ನೀವು ಕೇಳಿದ್ದಕ್ಕೆಲ್ಲ ಸರಿಯಾಗಿಯೇ ಉತ್ತರಿಸುತ್ತಿತ್ತು. ಬಾಂಬ್ ತಯಾರಿಸುವುದು ಹೇಗೆ ಎಂದರೆ ಅದಕ್ಕೂ ಇದು ಉತ್ತರಿಸುತ್ತಿತ್ತು. ಸಾಮಾನ್ಯವಾಗಿ ಮನುಷ್ಯ ಪ್ರಶ್ನಿಸಿದಾಗ ಉತ್ತರ ಗೊತ್ತಿದ್ದರೂ ಉತ್ತರಿಸುವ ಅವಶ್ಯಕತೆಯ ವಿವೇಚನೆಯನ್ನು ಹೊಂದಿರುತ್ತಾನೆ. ಆದರೆ ಇದು ಹೇಳಿ ಕೇಳಿ ಕಂಪ್ಯೂಟರ್ ಪ್ರೋಗ್ರಾಮ್, ವಿವೇಚನೆಯಿಲ್ಲದೆ ಸರಿಯಾಗಿಯೇ ಉತ್ತರಿಸಿ ಬಿಡುತ್ತಿತ್ತು. ಆ ಕಾರಣಕ್ಕೆ ಒಂದಿಷ್ಟು ಗೌಜು ಗಲಾಟೆಗಳಾದವು.
ಅದಾದ ನಂತರ ಈ ಪ್ರೋಗ್ರಾಮ್ ಅನ್ನು ಇನ್ನಷ್ಟು ಸುಧಾರಿಸುವ, ಅಸಂಬದ್ಧ, ಅಯೋಗ್ಯ ಪ್ರಶ್ನೆಗಳಿಗೆ ಉತ್ತರಿಸದಂತೆ ಸರಿ
ಪಡಿಸಲಾಯಿತು. ಈಗ ಅಂತಹ ಉತ್ತರಿಸಬಾರದ ಪ್ರಶ್ನೆಗಳಿಗೆ ತಾನು ಉತ್ತರಿಸುವುದಿಲ್ಲ ಎಂದು ಈ ಪ್ರೋಗ್ರಾಮ್ ಹೇಳುವಷ್ಟು ಸುಧಾರಿಸಿದೆ. ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂದು ಕೇಳಿದರೆ ಇದು ಉತ್ತರಿಸುವುದಿಲ್ಲ. ಈ ರೀತಿ ಹೆಚ್ಚು ಕಡಿಮೆ ಮನುಷ್ಯರಂತೆ ವ್ಯವಹರಿಸುವ ಪ್ರೋಗ್ರಾಮಿನ ಸಾಧಕ ಬಾಧಕಗಳ ಚರ್ಚೆ ಕಳೆದ ಆರು ತಿಂಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿದೆ.
ಸ್ಫೋಟಕ ವಸ್ತುಗಳ ತಯಾರಿಕೆ, ಹಾನಿ ಮಾಡಬಹುದಾದ ಅಥವಾ ತೀರಾ ಗೌಪ್ಯವಾದ ಮಾಹಿತಿಯನ್ನು ಉತ್ತರಿಸದಂತೆ ನೋಡಿ ಕೊಂಡ ನಂತರ ಈ ಜಗತ್ತು ಮುಳುಗಿಬಿಡುತ್ತದೆ ಎಂಬಿತ್ಯಾದಿ ಕೂಗು ಸ್ವಲ್ಪ ಕಡಿಮೆಯಾಗಿದೆ. ಈ ಪ್ರೋಗ್ರಾಮಿಗೆ ಕಥೆ, ಕವನ, ಪ್ರಬಂಧ ಇವೆಲ್ಲ ಬರೆಯಲು ಬರುತ್ತದೆ. ಹಾಗಾಗಿ ಈ ಪ್ರೋಗ್ರಾಮ್ ಬರಹಗಾರರ, ಸಾಹಿತಿಗಳ, ಸೃಜನಶೀಲತೆಯ ಕೆಲಸವನ್ನು ಕಸಿದುಕೊಂಡುಬಿಡುತ್ತದೆ ಎಂಬ ಕೂಗಿದೆ. ಮಕ್ಕಳು ತಮ್ಮ ಹೋಮ್ ವರ್ಕ್‌ಗೆ ಇದನ್ನು ಬಳಸಿಕೊಳ್ಳಲು ಶುರುಮಾಡಿದರೆ ಅವರ ಬುದ್ಧಿ ಬೆಳೆಯುವುದಿಲ್ಲ ಎಂಬ ತಕರಾರಿದೆ. ಇದು ಮನುಷ್ಯ ತಲೆ ಬಳಸಿ ಮಾಡುವ ಎಲ್ಲ ಉದ್ಯೋಗಗಳಿಗೆ ಕತ್ತರಿಯಾಗಲಿದೆ
ಎಂಬುದೇ ದೊಡ್ಡ ಕೂಗು.
ಇದಕ್ಕೆ ಕಂಪ್ಯೂಟರ್ ಪ್ರೋಗ್ರಾಮ್ ಬರೆಯುವುದಕ್ಕೂ ಗೊತ್ತು, ಹಾಗಾಗಿ ಸಾಫ್ಟ್ ವೇರ್ ಎಂಜಿನಿಯರುಗಳ ಕೆಲಸಕ್ಕೆ ಕೂಡ ಇದರಿಂದ ಕುತ್ತು ಸಾಧ್ಯ. ರೋಗಕ್ಕೆ ಔಷಧಿ ಯಾವುದು ಎಂದು ಕೂಡ ಇದಕ್ಕೆ ಗೊತ್ತು. ಹಾಗಾಗಿ ವೈದ್ಯರು ಕ್ರಮೇಣ ಬೇಕಾಗುವು ದಿಲ್ಲ- ಹೀಗೆ ಸಾವಿರದೆಂಟು ಪುಕಾರುಗಳಿವೆ. ಈ ಎಲ್ಲ ಪುಕಾರುಗಳನ್ನು ಯಥಾವತ್ತು ಹೌದೆನ್ನುವಂತಿಲ್ಲ.ನಿಮಗೆ ಓದಿ ಗೊತ್ತಿರ ಬಹುದು. ಈಗೊಂದು ಶತಮಾನದ ಹಿಂದೆ ಕೈಗಾರಿಕಾ ಕ್ರಾಂತಿಯಾಯಿತಲ್ಲ. ಆಗ ಪುನರಾವರ್ತನೆಯ ಎಲ್ಲ ಕೆಲಸ ಗಳನ್ನೂ ಇನ್ನು ಮುಂದೆ ಯಂತ್ರಗಳೇ ಮಾಡುತ್ತವೆ, ಆ ಕಾರಣಕ್ಕೆ ಇನ್ಮೇಲೆ ಮನುಷ್ಯನಿಗೆ ಉದ್ಯೋಗವೇ ಇರುವುದಿಲ್ಲ ಎಂದು ಗಲಾಟೆ ಗಳಾಗಿದ್ದವು.
ಚಪ್ಪಲಿ ಹೊಲಿಯುವ ಯಂತ್ರ ಬಂದ ನಂತರ ಚಪ್ಪಲಿ ಹೊಲಿಯುವ ಉದ್ಯೋಗವಿರುವುದಿಲ್ಲ, ಬಡಗಿ, ಚರ್ಮಗಾರ, ಬೀಜ
ಸುಲಿಯುವ, ಸಸಿ ನೆಡುವ ಹೀಗೆ ಸಾವಿರದೆಂಟು ಉದ್ಯೋಗಗಳು ನಾಳೆ ಬೆಳಗ್ಗೆಯೇ ನಿರ್ನಾಮವಾಗಿಬಿಡುತ್ತವೆ ಎಂಬ ಕೂಗು ಅದು. ಅಂದು ಅಂದುಕೊಂಡಂತೆಯೇ ಆಯಿತು ಎನ್ನುವುದು ನಿಜ. ಆ ಎಲ್ಲ ಉದ್ಯೋಗಗಳು ಇಂದು ನಶಿಸಿವೆ. ಆದರೆ ಈ ಎಲ್ಲ ಬದಲಾವಣೆ ಆದದ್ದು ನಿಧಾನವಾಗಿ. ಆ ಸಮಯ ಎಷ್ಟಿತ್ತೆಂದರೆ ಅಂತಹ ಉದ್ಯೋಗ ಮಾಡುತ್ತಿರುವವರೆಲ್ಲ ಈ ಬದಲಾವಣೆಗೆ ಒಗ್ಗಿಕೊಂಡು ತಮ್ಮ ಕೆಲಸವನ್ನು ಬದಲಿಸಿಕೊಂಡರು. ಅದಾದ ಮೇಲೆ ಕಾಲ್ಕ್ಯುಲೇಟರ್, ಕಂಪ್ಯೂಟರ್‌ಗಳು ಬಂದವಲ್ಲ.
ಆಗ ಕೂಡ ಇಂಥದ್ದೇ ಕೂಗು ಎದ್ದಿತ್ತು. ಇನ್ಮೇಲೆ ಅಕೌಂಟೆಂಟ್ ಮೊದಲಾದ ಉದ್ಯೋಗ ನಿರ್ನಾಮವಾಗುತ್ತದೆ ಎಂದು. ಕ್ಯಾಲ್ಕ್ಯು ಲೇಟರ್‌ನಿಂದ ಮಕ್ಕಳು ಲೆಕ್ಕ ಮಾಡುವುದು ನಿಲ್ಲಿಸಿಬಿಡುತ್ತಾರೆ, ಜನರಿಗೆಲ್ಲಾ ಲೆಕ್ಕ ಬರದಂತೆ ಆಗಿಬಿಡುತ್ತದೆ ಎಂದು. ಆದರೆ ಆ ರೀತಿ ಹಠಾತ್ ಬದಲಾವಣೆ ಆಗಲೇ ಇಲ್ಲ. ಇಂದಿಗೂ ಅಕೌಂಟೆಂಟ್ ಇದ್ದಾರೆ, ನಾವೆಲ್ಲಾ ಲೆಕ್ಕಾಚಾರ ಮಾಡುತ್ತೇವೆ.
ಕಂಪ್ಯೂಟರ್ ಅನ್ನು ಬಳಸಿ ನಾವು ಇದೆಲ್ಲವನ್ನು ಮಾಡುವ ವಿಧಾನ ಬದಲಾಗಿದೆ. ಹಾಗಂತ ಜಗತ್ತಿನಲ್ಲಿ ಅದ್ಯಾವುದೇ
ರೀತಿಯ ದಿಢೀರ್ ಬದಲಾವಣೆ ಬಂದು ಜಗತ್ತು ತಲೆಕೆಳಗಾಗಿಲ್ಲ.
ಅದಕ್ಕೆ ಇತಿಹಾಸವೇ ಸಾಕ್ಷಿ. ಆದರೆ ಚಾಟ್ ಜಿಪಿಟಿ ತರಬಲ್ಲ ಬದಲಾವಣೆಯಿದೆಯಲ್ಲ, ಅದು ಸಣ್ಣದಲ್ಲ. ಅಲ್ಲದೇ ಸಾಧ್ಯತೆ ಇಲ್ಲಿ ಬಹಳಷ್ಟು. ಈ ಪ್ರೋಗ್ರಾಮ್ ಡಾಕ್ಟರ್ ಕೆಲಸ ಮಾಡಬಹುದು, ರೋಗಿಯ ಗುಣ ಲಕ್ಷಣಗಳನ್ನು ತಿಳಿದು ಔಷಧಿ ಏನೆಂದು ಹೇಳಬಹುದು, ಬಹುತೇಕ ಮನುಷ್ಯ ವಿಚಾರ ಮಾಡುವ ಎಲ್ಲ ಕೆಲಸವನ್ನು ಇದು ಮಾಡಬಹುದು. ಆದರೆ ಬಳಸಲಿಕ್ಕೆ ಸರಿಯಾಗಿ
ಬೇಕಾಗುವ ಜ್ಞಾನ ಇಲ್ಲಿ ಬೇಕೇ ಬೇಕು. ಈ ಜ್ಞಾನದ ಕೊರತೆಯಿದ್ದು ಬಳಕೆಗೆ ನಿಂತರೆ ಆಗಬಹುದಾದ ಸಾಕಷ್ಟು ಅಪಾಯಗಳಿವೆ.
ಹಾಗಂತ ಇದೆಲ್ಲ ನಾಳೆ ಬೆಳಗ್ಗೆ ಜಗತ್ತನ್ನು ಬದಲಿಸಿಬಿಡುತ್ತದೆಯೇ? ಖಂಡಿತ ಇಲ್ಲ. ಇಂದು ಇಷ್ಟು ಕಡಿಮೆ ಅವಧಿಯಲ್ಲೇ ತಾಂತ್ರಿಕ ಜಗತ್ತಿನಲ್ಲಿ ಎಗ್ಗಿಲ್ಲದೆ ಚಾಟ್ ಜಿಪಿಟಿ ಬಳಕೆಯಾಗುತ್ತಿದೆ. ಇದರ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಆದರೆ ಇದು ತರುವ ಬದಲಾವಣೆಯ ವೇಗ ಹಿಂದೆ ಬಂದ ತಂತ್ರಜ್ಞಾನಕ್ಕಿಂತ ಜಾಸ್ತಿ. ಏಕೆಂದರೆ ಇದು ಮನುಷ್ಯರಂತೆ ಯೋಚಿಸಲು ಸಾಧ್ಯ ವಿರುವ ಒಂದು ವ್ಯವಸ್ಥೆ.
ಹಾಗಂತ ಯಾವುದೇ ಆತಂಕದ ಅವಶ್ಯಕತೆಯಿಲ್ಲ. ಒಂದನ್ನು ನಾವಿಲ್ಲಿ ಗ್ರಹಿಸಬೇಕು. ಕಳೆದ ನಲವತ್ತು ವರ್ಷದಲ್ಲಿ ಎಷ್ಟೆಲ್ಲ ಹೊಸ ತಂತ್ರಜ್ಞಾನಗಳು ಆವಿಷ್ಕಾರವಾಗಿ ಮುನ್ನೆಲೆಗೆ ಬಂದಿವೆ. ಇವು ಬಂದಾಗಲೆಲ್ಲ ಇಂತಹ ಆತಂಕಗಳೂ ಹುಟ್ಟಿಕೊಂಡದ್ದಿದೆ. ಆದರೆ ಆ ಆತಂಕಗಳು ಸಾಧುವೇ ಆದರೂ ಅವೆಲ್ಲ ನಾವು ಕಟ್ಟಿಕೊಂಡ ವ್ಯವತೆಯನ್ನು ತಕ್ಷಣ ಬದಲಿಸಿಲ್ಲ. ಬದಲಿಗೆ ನಿಧಾನಕ್ಕೆ ನಾವು ಅದಕ್ಕೆಲ್ಲ ಒಗ್ಗಿಕೊಂಡಿದ್ದೇವೆ. ಲ್ಯಾಂಡ್‌ಲೈನ್ ಫೋನ್ ನಾವು ವ್ಯವಹರಿಸುವ ರೀತಿ ಬದಲಿಸಿತೇ ವಿನಃ ನಮ್ಮ ಜೀವನ ಸತ್ವವನ್ನಲ್ಲ.
ನಂತರದಲ್ಲಿ ಬಂದ ಮೊಬೈಲ್ ಮತ್ತು ಇಂದು ನಮ್ಮ ಮುಂದಿರುವ ಮೊಬೈಲ್ ಸಾಧ್ಯತೆಗಳು ನಮ್ಮ ಬದುಕಿನ ರೀತಿಯನ್ನು ಬದಲಿಸಿವೆ. ಬದುಕನ್ನು ಇನ್ನಷ್ಟು ಚಂದವಾಗಿಸಿವೆ. ಎಲ್ಲ ಹೊಸತೂ ಮೊದಲು ಸದ್ದು ಮಾಡುವುದು ಅವುಗಳ ಒಳ್ಳೆಯ ಸಾಧ್ಯತೆ ಗಳ ಬಗೆಗಲ್ಲ. ಬದಲಿಗೆ ಅದರ ದುರ್ಬಳಕೆಯ ಸಾಧ್ಯತೆಯ ಬಗ್ಗೆ. ನಾವು ಮನುಷ್ಯರೇ ಹಾಗೆ. ನಾವು ಪ್ರತಿಕ್ರಿಯಿಸುವುದೇ ಆ ರೀತಿ. ವಾಹನ, ಉಗಿಬಂಡಿ, ಬೃಹತ್ ಕೈಗಾರಿಕೆ, ಕಂಪ್ಯೂಟರ್, ಮೊಬೈಲ್ ಇವೆಲ್ಲ ಬಂದ ಹೊಸತರಲ್ಲಿ ಜಗತ್ತು ಪೂರ್ಣ ಬದಲಾಗಿ ಬಿಡುತ್ತದೆ ಎಂಬ ಕೂಗು ಇದ್ದೇ ಇತ್ತು. ಜಗತ್ತೂ ಬದಲಾಯಿತು.
ಎಲ್ಲವುದೂ ಒಳ್ಳೆಯದೇ ಆಯಿತು. ಕಾರು ಬಂದ ನಂತರ ಟಾಂಗಾ ಓಡಿಸುವವನ ಕೆಲಸ ಹೋಗಿಬಿಡುತ್ತದೆ ಎಂದು ಸುಮ್ಮ ನಿದ್ದಿದ್ದರೆ ನಾವು ಇಂದು ಈ ರೀತಿ ಓಡಾಡಲು ಸಾಧ್ಯವಾಗುತ್ತಿರಲಿಲ್ಲ. ಅಂತೆಯೇ ಚಾಟ್ ಜಿಪಿಟಿ. ಮನುಷ್ಯನಂತೆ, ಆದರೆ ಅದಕ್ಕಿಂತ ಲಕ್ಷ ಪಟ್ಟು ಹೆಚ್ಚು ವೇಗ, ಕೋಟಿ ಪಟ್ಟು ಕರಾರುವಾಕ್ಕಾಗಿ ವಿಚಾರ ಮಾಡುವ ವ್ಯವಸ್ಥೆಯ ಬಗ್ಗೆ ಸದ್ಯ ಎಲ್ಲಿಲ್ಲದ ಆತಂಕ ಸಾಧುವಾದದ್ದೇ. ಇದು ಮನುಷ್ಯನ ಆವಿಷ್ಕಾರಗಳಲ್ಲೇ ಮಹತ್ತರವಾದದ್ದು. ಹಲವು ಬದಲಾವಣೆಗಳಿಗೆ ಇದು ಮುನ್ನುಡಿಯಾಗುವುದು ನಿಶ್ಚಿತ. ಅನಂತ ಸಾಧ್ಯತೆಗಳಿರುವುದರಿಂತ ಆತಂಕವೂ ಕೂಡ ಸಹಜ.
ಸಾಮಾನ್ಯವಾಗಿ ಇಂತಹ ಅನನ್ಯ ಆವಿಷ್ಕಾರಗಳ ನೇರ ಪರಿಣಾಮವಾಗುವುದು ಮಧ್ಯಮವರ್ಗದವರ ಜೀವನದ ಮೇಲೆ. ಕಳೆದ ೪೦ ವರ್ಷದಿಂದ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಬಡತನ ರೇಖೆಯಿಂದ ಹೊರಬಂದು ಮಧ್ಯಮ, ಮೇಲ್ಮಧ್ಯಮ ವರ್ಗಕ್ಕೆ ತಲುಪಿದ್ದರೆ ಅದಕ್ಕೆಲ್ಲ ನೇರ ಕಾರಣ ಈ ಕೆಲಸ ಕಳೆದುಕೊಂಡುಬಿಡುತ್ತೇವೆ ಎಂಬ ಆತಂಕವನ್ನು ಮೊದಲು ಸೃಷ್ಟಿಸಿದ್ದು ಆವಿಷ್ಕಾರಗಳೇ. ಈಗ ಆವಿಷ್ಕಾರವಾಗಿರುವ ಚಾಟ್ ಜಿಪಿಟಿ ಖಂಡಿತವಾಗಿ ಇನ್ನು ವರ್ಷೋಪ್ಪತ್ತಿನಲ್ಲಿ ಬಹಳಷ್ಟು ಬದಲಾವಣೆ ಯನ್ನು ತರುವುದಿದೆ.
ಇದು ಎಂಜಿನಿಯರಿಂಗ್, ವೈದ್ಯಕೀಯ, ಮಾಧ್ಯಮ ಲೋಕ ಹೀಗೆ ಎಲ್ಲದರಲ್ಲಿಯೂ ಎಲ್ಲಿಲ್ಲದ ಹೊಸತನ್ನು ತರುವುದು ಶತಸಿದ್ಧ.
ಅದಕ್ಕೆ ಬೇಕಾದ ಬದಲಾವಣೆಗಳು ಈಗ ಭರದಿಂದ ಸಾಗಿವೆ. ನಮಗೆ ಈ ರೀತಿಯ ಬದಲಾವಣೆಯನ್ನು ತರಬಲ್ಲ ಆವಿಷ್ಕಾರಗಳು ಹೊಸತಲ್ಲ. ಅದೆಲ್ಲವನ್ನು ನಾವು ಸರಿಯಾಗಿಯೇ ನಿಭಾಯಿಸಿದ್ದೇವೆ. ಕಂಪ್ಯೂಟರ್ ಪ್ರೋಗ್ರಾಮ್ ಒಂದು ಮನುಷ್ಯನಂತೆ ವಿಚಾರಮಾಡಿ ವ್ಯವಹರಿಸಬಲ್ಲದು ಎಂದಾದಲ್ಲಿ ಅದು ನಮ್ಮನ್ನು ಮೀರಿ ಬೆಳೆದು ನಾವೇ ನಗಣ್ಯವಾಗಿ ಬಿಡುತ್ತೇವೆ ಎಂದು ಬಿಂಬಿಸುವವರು ಬಿಂಬಿಸಲಿ.
ಅದು ಅವರವರಿಗೆ ದಕ್ಕಿದಷ್ಟು, ಅರ್ಥವಾದಷ್ಟು. ಒಂದಂತೂ ನಿಜ, ಆವಿಷ್ಕರಿಸಿದವರಿಗೆ ಅದನ್ನು ಹದ್ದುಬಸ್ತಿನಲ್ಲಿ ಇಡುವುದು
ಗೊತ್ತು. ದುರ್ಬಳಕೆ ಎಲ್ಲದರಲ್ಲೂ ಸಾಧ್ಯ. ಹಾಗಂತ ಸದ್ಬಳಕೆಯ ಸಾಧ್ಯತೆಯನ್ನು ಮೀರಿ ಇವಕ್ಕೆಲ್ಲ ತಲೆಕೆಡಿಸಿಕೊಳ್ಳಬೇಕಿಲ್ಲ.
ಚಾಟ್ ಜಿಪಿಟಿ ಮನುಷ್ಯನ ಆವಿಷ್ಕಾರಗಳಲ್ಲಿಯೇ ಅತ್ಯಂತ ಮಹತ್ವದ್ದಂತೂ ನಿಜ. ಇದು ನಮ್ಮ ಜೀವಿತಾವಧಿಯಲ್ಲಿ ಸಾಧ್ಯ ವಾಗಿರುವುದು ಖುಷಿಯಾದ ವಿಚಾರ.
ಸದ್ಯ ಬದುಕಿರುವ ನಾವು ಲ್ಯಾಂಡ್ ಲೈನ್, ಮೊಬೈಲ್, ಇಂಟರ್‌ನೆಟ್ ಮೊದಲಾದ ಬದಲಾವಣೆಯನ್ನು ಕಣ್ಣಾರೆ ಕಂಡಿದ್ದೇವೆ.
ನಮಗೆ ಮೊದಲಿನ ಜಗತ್ತೂ ಗೊತ್ತು, ಈಗಿನ ಬದಲಾದ ಜಗತ್ತೂ ಗೊತ್ತು. ಬದಲಾವಣೆ ಒಳ್ಳೆಯದನ್ನೇ ಮಾಡಿದೆ. ನಾವು ಈಗ ಮಾಡಬೇಕಾಗಿರುವುದು ಇಷ್ಟೆ, ಮನುಷ್ಯನಂತೆ ಕೃತಕವಾಗಿ ವಿಚಾರ ಮಾಡುವ ತಂತ್ರಜ್ಞಾನ ನಮ್ಮ ಬದುಕಿನಲ್ಲಿ ತರಬಹುದಾದ ಬದಲಾವಣೆಗೆ ಸಾಕ್ಷಿಯಾಗುವುದು. ಅಂದಹಾಗೆ ಚಾಟ್ ಜಿಪಿಟಿ ನೀವು ಹಿಂದೆ ಬಳಸದಿದ್ದಲ್ಲಿ ಖಂಡಿತವಾಗಿ ಒಮ್ಮೆ ಪ್ರಯತ್ನಿಸಿ. ಒಂದಿಷ್ಟು ಮನಸ್ಸಿಗೆ ತೋಚಿದ ಪ್ರಶ್ನೆಗಳನ್ನು ಕೇಳಿ. ಆ ಪ್ರೋಗ್ರಾಮಿನ ಸಾಧ್ಯತೆಯನ್ನು ಅದರಲ್ಲಿಯೇ ಕೇಳಿ. ಚಂದಕ್ಕೆ ಉತ್ತರಿಸು ತ್ತದೆ.