Friday, 20th September 2024

ಮೋಸ ವಂಚನೆಗಳು ಹೊಸತಲ್ಲ, ಅವುಗಳ ಕಥೆಗಳು ಮಾತ್ರ

ಶಿಶಿರ ಕಾಲ

shishirh@gmail.com

ಮೋಸ ಹೋದವರೆಲ್ಲ ದಡ್ಡರು ಎಂದು ಭಾವಿಸುವುದು ಸಲ್ಲ. ಎಲ್ಲಾ ಮೋಸಗಳು ನಡೆಯುವುದು ಕೆಲವೊಂದು ಮನುಷ್ಯಸಹಜ ಗುಣಗಳ, ದೌರ್ಬಲ್ಯಗಳ ದುರ್ಬಳಕೆಯಿಂದ. ಹೆಚ್ಚಿನವುಗಳಿಗೆ ಕಾರಣ ನಂಬಿಕೆ. ನಂಬಿಕೆ ಕೂಡ ಮನುಷ್ಯನ ಸಹಜಗುಣ ಮತ್ತು ಅವಶ್ಯಕತೆ. ಮನುಷ್ಯನಲ್ಲಿ ಉಳಿದ ಪ್ರಾಣಿಗಳಂತೆ ಹಿಂಡಿನ ಬುದ್ಧಿ ಇನ್ನೂ ಜಾಗೃತವಾಗಿದೆ. ಸುತ್ತಲಿನವರು ನಂಬಿದರೆ ಸಾಕು, ನಾವೂ ನಂಬಿಬಿಡುತ್ತೇವೆ.

ಅಮೆರಿಕದಲ್ಲಿ ಕನ್ನಡಿಗರ ಸಂಖ್ಯೆ ಉಳಿದ ತೆಲುಗು, ತಮಿಳು, ಗುಜರಾತಿ, ಹಿಂದಿ ಭಾಷಿಕರಿಗೆ ಹೋಲಿಸಿದರೆ ಕಡಿಮೆ. ಇಲ್ಲಿನ ಬಹುತೇಕ ದೊಡ್ಡ ಊರುಗಳಲ್ಲಿ ಕನ್ನಡ ಸಂಘ-ಕೂಟಗಳಿವೆ. ಸ್ಯಾನ್ ಫ್ರಾನ್ಸಿಸ್ಕೋ, ಶಿಕಾಗೊ, ನ್ಯೂಯಾರ್ಕ್ ಇಲ್ಲೆಲ್ಲಾ ಕನ್ನಡ ಸಂಘದಲ್ಲಿ ಆರೇಳು ನೂರು ಸದಸ್ಯ ರಿದ್ದರೆ ಚಿಕ್ಕ ಪುಟ್ಟ ಊರುಗಳಲ್ಲಿ ಹತ್ತಿಪ್ಪತ್ತು ಕನ್ನಡಿಗರೇ ಸಂಘ ಕಟ್ಟಿಕೊಂಡು ಕನ್ನಡವನ್ನು ಅಲ್ಲಿ ಜೀವಂತವಾಗಿಟ್ಟುಕೊಂಡಿದ್ದಾರೆ. ಎಲ್ಲರೂ ವರ್ಷಕ್ಕೆ ನಾಲ್ಕೈದು ಬಾರಿ ಸೇರುವುದು, ಹಬ್ಬಗಳ ಆಚರಣೆ ಇತ್ಯಾದಿ.

ಸಭಾಂಗಣದಲ್ಲಿ ಸೇರುವುದು, ಚಿಕ್ಕದೊಂದು ಪೂಜೆ, ಸ್ಥಳೀಯ ಕನ್ನಡಿಗರ ಸಾಂಸ್ಕೃತಿಕ ಕಾರ್ಯಕ್ರಮ, ಊಟ, ಒಂದೆರಡು ತಾಸು ಆಹ್ವಾನಿತ ಕಲಾವಿದರ ಕಾರ್ಯಕ್ರಮ ಇತ್ಯಾದಿ. ಇಡೀ ಕಾರ್ಯಕ್ರಮ ಸುಮಾರು ಆರೇಳು ತಾಸು. ಇದು ಅನಿವಾಸಿ ಕನ್ನಡಿಗರಿಗೆ ಮನರಂಜನೆಯ ಜತೆ ಪ್ರತಿಭೆಗೊಂದು ವೇದಿಕೆ. ಹೊರ ದೇಶದಲ್ಲಿ ಸಾಮಾಜಿಕವಾಗಿ ಬಹಳ ಮುಖ್ಯವಾಗುವ ವ್ಯವಸ್ಥೆ ಇದು. ವಿದೇಶಿ ನೆಲದಲ್ಲೊಂದು ನೆಲೆಯ ಭಾವ
ಹುಟ್ಟಿಸುವ ಸಂಘಗಳು ಇವು. ವರ್ಷದಲ್ಲಿ ಕೆಲವು ಕಾರ್ಯಕ್ರಮಗಳಿಗೆ ಕರ್ನಾಟಕದಿಂದ ಸ್ಟಾರ್ ಕಲಾವಿದರನ್ನು ಕರೆಸಲಾಗುತ್ತದೆ. ಒಂದೇ ಕಾರ್ಯ
ಕ್ರಮಕ್ಕೆ ಭಾರತದಿಂದ ಅವರನ್ನು ಕರೆಸುವುದು ಒಂದೇ ಸಂಘಕ್ಕೆ ಆರ್ಥಿಕವಾಗಿ ಸವಾಲಿನ ವಿಷಯ. ಹಾಗಾಗಿ ಕೆಲವೊಮ್ಮೆ ೨-೩ ಊರಿನ ಕನ್ನಡ ಸಂಘಗಳು ಸೇರಿ ಕರೆಸಿ, ಖರ್ಚನ್ನು ಪಾಲು ಮಾಡಿಕೊಳ್ಳುವುದೂ ಉಂಟು. ದೊಡ್ಡ ಸಂಘಗಳು ಹೆಚ್ಚಿನ ಖರ್ಚನ್ನು ವಹಿಸಿಕೊಂಡರೆ, ಚಿಕ್ಕ ಊರಿನ ಸಂಘಗಳು ಕಡಿಮೆ ಖರ್ಚಿನಿಂದ ಹೇಗೋ ನಿಭಾಯಿಸಿಕೊಂಡು ಹೋಗುತ್ತವೆ.

ಒಬ್ಬರೇ ಕಲಾವಿದರಾದಲ್ಲಿ ಒಂದೇ ಟಿಕೆಟ್ ಮಾಡಿಸಿ ಕರೆಸಿ ಬಿಡಬಹುದು, ಅಷ್ಟೊಂದು ಹೊರೆಯಾಗುವುದಿಲ್ಲ. ಆದರೆ ತಂಡವೊಂದನ್ನು ಕರೆಸಬೇಕೆಂದರೆ ಅಷ್ಟೊಂದು ಮಂದಿಗೆ ಟಿಕೆಟ್, ಉಳಿಯಲಿಕ್ಕೆ ವ್ಯವಸ್ಥೆ, ಅವರ ಸಂಭಾವನೆ ಇತ್ಯಾದಿ ಹೊಂದಿಸುವುದು ಕಷ್ಟವಾಗುತ್ತದೆ. ಈ ಎಲ್ಲ ಖರ್ಚನ್ನು ಸದಸ್ಯತ್ವದ ಹಣದಿಂದಲೇ ನಿಭಾಯಿಸಬೇಕು. ಕಲಾವಿದರನ್ನು ಕರೆಸುವುದಷ್ಟೇ ಅಲ್ಲ, ಕಾರ್ಯಕ್ರಮಕ್ಕೆ ಸಭಾಂಗಣ ಕಾಯ್ದಿರಿಸಬೇಕು. ಅದರ ಬಾಡಿಗೆ, ಸುಮಾರು ಐದಾರುನೂರು ಮಂದಿಗೆ ಊಟ, ಕಲಾವಿದರ ಸಂಭಾವನೆ ಇವೆಲ್ಲ ಸೇರಿ ಒಂದು ಕಾರ್ಯಕ್ರಮಕ್ಕೆ ಏನಿಲ್ಲವೆಂದರೂ ೧೫ರಿಂದ ೨೫ ಲಕ್ಷ ರುಪಾಯಿ ಬೇಕಾಗುತ್ತದೆ.

ಚಿಕ್ಕಪುಟ್ಟ ಪ್ರಾಯೋಜಕತ್ವ ಬಿಟ್ಟರೆ ಇಲ್ಲಿನ ಕನ್ನಡ ಸಂಘಗಳಿಗೆ ಬೇರೊಂದು ಆರ್ಥಿಕ ಸೆಲೆ ಇಲ್ಲ. ಒಟ್ಟಾರೆ ಇದನ್ನೆಲ್ಲಾ ಸಂಭಾಳಿಸಿಕೊಂಡು ಹೋಗುವುದು ಸುಲಭವಲ್ಲ. ಮುಂದಾಳಾಗಿ ಕೆಲಸಮಾಡಿದವರಿಗಷ್ಟೇ ಗೊತ್ತು ಅದೆಲ್ಲದರ ಕಷ್ಟ. ಅದೊಂದು ಹರಸಾಹಸ. ಹತ್ತಿಪ್ಪತ್ತು ಡಾಲರ್
ಗೆ ಪ್ರಶ್ನಿಸುವವರು, ಅದೇನೋ ಒಂದು ಸರಿಯಾಗಿಲ್ಲವೆನ್ನುವವರು ಇತ್ಯಾದಿ ಇಲ್ಲಿಯೂ ಇದ್ದಾರೆ. ಈ ಸ್ಟಾರ್ ಕಲಾವಿದರನ್ನು ಕರೆಸುವುದೆಂದರೆ ಅದು ಸುಲಭದ ಕೆಲಸವಲ್ಲ, ದೊಡ್ಡ ತಲೆನೋವು. ಚಲನಚಿತ್ರದ ಹಿನ್ನೆಲೆ ಯವರಾದರಂತೂ ಮುಗಿದೇಹೋಯಿತು. ಅವರಿಗೆ ಯಾರಿಗೂ ಇರದ ಸ್ಟಾರ್‌ಡಮ್. ಅವರದ್ದು ಡಿಮ್ಯಾಂಡಪ್ಪೋ ಡಿಮ್ಯಾಂಡು. ಕೆಲವರಿಗೆ ವಿಮಾನದಲ್ಲಿ ಬಿಸಿನೆಸ್ ಕ್ಲಾಸ್‌ನಲ್ಲಿಯೇ ಪ್ರಯಾಣವಾಗಬೇಕು, ಫೈವ್ ಸ್ಟಾರ್ ಹೋಟೆಲ್ಲಿನಲ್ಲಿ ಎಂಟಡಿಯ ಹಾಸಿಗೆಯೇ ಆಗಬೇಕು, ಇಂಥದ್ದೇ ಊಟವಾಗಬೇಕು, ತಿಂಡಿಗೆ ಇದುವೇ ಬೇಕು, ರಾತ್ರಿ ತುಟ್ಟಿ ‘ರಸಾಯನ’ದ
ವ್ಯವಸ್ಥೆಯಾಗಬೇಕು ಇತ್ಯಾದಿ. ಕೆಲವು ಸ್ಟಾರ್‌ಗಳನ್ನು ಹತ್ತಿರದಿಂದ ಕಂಡಾಗ ಅವರ ಬಾಹ್ಯ, ಸಾಮಾಜಿಕ ವ್ಯಕ್ತಿತ್ವಕ್ಕೆ ವ್ಯತಿರಿಕ್ತ ವಾದ ನಡವಳಿಕೆ ಹೇಸಿಗೆ ಹುಟ್ಟಿಸಿಬಿಡುತ್ತದೆ.

ಈಗಿತ್ತಲಾಗೆ ಇಲ್ಲೊಂದು ಊರಿನಲ್ಲಿ ಕರ್ನಾಟಕದ ಸ್ಟಾರ್ ಸಂಗೀತ ನಿರ್ದೇಶಕರೊಬ್ಬರನ್ನು ಕರೆಸಲಾಗಿತ್ತು. ಅವರದು ನಾಲ್ಕೈದು ಜನರ ತಂಡ. ಬಹುನಿರೀಕ್ಷೆಯ ಆ ಕಾರ್ಯಕ್ರಮ ಶುರುವಾಯಿತು. ಸಂಗೀತ ನಿರ್ದೇಶಕರು ಸ್ಟೇಜಿನ ತುಂಬೆಲ್ಲ -ಗ್-ಹೊಗೆ ಇತ್ಯಾದಿ ಬಿಟ್ಟುಕೊಂಡು ಸಭೆಯನ್ನು ಪ್ರವೇಶಿಸಿದ್ದೂ ಆಯಿತು. ಇಡೀ ಕಾರ್ಯಕ್ರಮ ಅದ್ದೂರಿಯಾಗಿಯೇ ನಡೆಯಿತು. ಹಾಡು, ಸಂಗೀತ, ವಾದ್ಯಮೇಳ, ಡ್ಯಾನ್ಸು ಇವೆಲ್ಲ ನಡೆಯಿತು. ಸೇರಿದವರೆಲ್ಲ ಕುಣಿದು ಕುಪ್ಪಳಿಸಿದ್ದೂ ಆಯಿತು.

ಆದರೆ ಅಲ್ಲಿ ಅಸಲಿಗೆ ನಡೆದದ್ದೇ ಬೇರೆ. ಆಗಿದ್ದೇನೆಂದರೆ, ಆ ಸಂಗೀತ ನಿರ್ದೇಶಕರ ತಂಡ ಇಡೀ ಕಾರ್ಯಕ್ರಮದಲ್ಲಿ ಹಾಡಲೇ ಇಲ್ಲ, ಯಾವುದೇ ವಾದ್ಯವನ್ನು ನುಡಿಸಲೂ ಇಲ್ಲ. ಲ್ಯಾಪ್‌ಟಾಪ್‌ನಲ್ಲಿ ಹಾಡನ್ನು ಹಾಕಿ ಅದಕ್ಕೆ ತಕ್ಕಂತೆ ಬಾಯಿ ತೆರೆಯುವುದು, ತಲೆ ಕುಣಿಸುವುದು, ನಟಿಸುವುದು. ಎಲ್ಲಿಯ ವರೆಗೆ ಎಂದರೆ ಡ್ರಮ್ ಮೊದಲಾದ ವಾದ್ಯದವರು ಕೂಡ ಸುಮ್ಮನೆ ಕೋಲನ್ನು ಮೇಲೆ ಕೆಳಕ್ಕೆ ಮಾಡುತ್ತಿದ್ದರು. ನೆರೆದ ಸುಮಾರು ೬೦೦ ಮಂದಿಯಲ್ಲಿ ಇದೆಲ್ಲ ಗೊತ್ತಾದದ್ದು ಮಾತ್ರ ಕೆಲವೇ ಜನರಿಗೆ- ವೇದಿಕೆಯ ತೀರಾ ಹತ್ತಿರ, ಪರದೆಯ ಅಂಚಿನಲ್ಲಿ ನಿಂತವರಿಗೆ ಮತ್ತು ಫೋಟೋಗ್ರಾಫರ್‌ ಗಳಿಗೆ. ಉಳಿದಂತೆ ಇಡೀ ಜನಸಮೂಹಕ್ಕೆ ಇದ್ಯಾವುದೂ ತಿಳಿಯಲೇ ಇಲ್ಲ.

ಅವರು ಆ ದಿನ ನಿಜವಾಗಿ ಹಾಡಿದ್ದು ಕೇವಲ ೨-೩ ಹಾಡು ಮಾತ್ರ. ಉಳಿದದ್ದೆಲ್ಲ ಲಿಪ್ ಸಿಂಕ್- ಅಂದರೆ ತುಟಿ, ಹಾವಭಾವವನ್ನು ಹೊಂದಿಸಿ ನಡೆಸಿದ ಮಹಾಮೋಸ. ಅಯ್ಯೋ, ೬೦೦ ಮಂದಿ ಎನ್ನುತ್ತೀರಿ, ಯಾರಿಗೂ ಗೊತ್ತಾಗಲೇ ಇಲ್ಲವೇ? ಎಂದು ನೀವು ಕೇಳಬಹುದು. ಹೌದು, ಇದ್ಯಾವುದೂ ಬಹುತೇಕರಿಗೆ ಗೊತ್ತಾಗಲೇ ಇಲ್ಲ. ಅದನ್ನೆಲ್ಲ ಹತ್ತಿರ ದಿಂದ ಕಂಡವರಿಗೆ, ಗೊತ್ತಾದವರಿಗೆ ಇವರು ಸಂಗೀತ ನಿರ್ದೇಶಕರು, ಹಾಡುಗಾರರು ಎನ್ನುವುದಕ್ಕಿಂತ ಒಳ್ಳೆಯ ನಟ ಎಂದೆನಿಸಿದ್ದು ಸುಳ್ಳಲ್ಲ. ಹಾಗಂತ ಈ ಸಂಗೀತ ನಿರ್ದೇಶಕರೇನು ಲಾಟ್-ಪೂಟ್ ಚಿಲ್ಲರೆ ವ್ಯಕ್ತಿಯಲ್ಲ. ನೂರಾರು ಹಿಟ್ ಹಾಡನ್ನು ಕೊಟ್ಟವರು. ಆದರೆ ಇಲ್ಲಿ ಮಾತ್ರ ಹಾಡುವ ಬದಲು ಹಾಡಿದಂತೆ ನಟಿಸುವುದೇ ಸುಲಭವೆಂದೇಕೆ ಅವರಿಗೆ ಅನ್ನಿಸಿತೋ ಗೊತ್ತಿಲ್ಲ. ಆಮೇಲೆ ನೋಡಿದರೆ ಈ ಪುಣ್ಯಾತ್ಮ ಹೋದಲ್ಲೆಲ್ಲ ಇದನ್ನೇ ಮಾಡಿದ್ದು.

ಅಲ್ಲೆಲ್ಲ ಕೂಡ ಇದೆಲ್ಲ ಗೊತ್ತಾಗಿದ್ದು ಕೆಲವೇ ಕೆಲವರಿಗೆ. ಹಾಗೆ ಗೊತ್ತಾದವರು ಇವರ ಸ್ಟಾರ್ ಇಮೇಜ್‌ನಿಂದಾಗಿ ಸುಮ್ಮನಿದ್ದಿರಬೇಕು. ಇವರು ಕರ್ನಾಟಕದ ಕಾರ್ಯಕ್ರಮಗಳಲ್ಲಿಯೂ ಇದನ್ನೇ ಮಾಡುತ್ತಾರೋ, ಗೊತ್ತಿಲ್ಲ. ಹಾಗಂತ ಇದೇನು ಒಂದೇ ವ್ಯಕ್ತಿ, ತಂಡ ಮಾಡಿದ್ದಲ್ಲ. ಈ ರೀತಿಯ ಘಟನೆ ೨-೩ ವರ್ಷಕ್ಕೊಮ್ಮೆ ಅಮೆರಿಕದ ಅಲ್ಲಲ್ಲಿ ಸಂಭವಿಸುತ್ತಲೇ ಇರುತ್ತದೆ. ತೀರಾ ಒಳಮನೆಯವರಿಗಷ್ಟೇ ಗೊತ್ತಾಗಿರುತ್ತದೆ. ಈ ರೀತಿ ಸಾವಿರ ಕಣ್ಣುಗಳೆದುರಿನ ಮೋಸ, ಸ್ಕ್ಯಾಮ್ ಇತಿಹಾಸದಲ್ಲಿ ಹೊಸತೇನಲ್ಲ. ಇದೇನು ಚಿಕ್ಕ ಪುಟ್ಟ ಕಾರ್ಯ ಕ್ರಮಕ್ಕಷ್ಟೇ ಸೀಮಿತವಾದದ್ದೂ ಅಲ್ಲ. ಈಗ ೨ ವರ್ಷದ ಹಿಂದೆ ‘ಗಾರ್ಡಿಯನ್’ ಪತ್ರಿಕೆಯಲ್ಲಿ ಹೀಗೊಂದು ಲೇಖನ ಬಂದಿತ್ತು: ’’Milli Violini’: I was a fake violinist in a world-class miming orchestra. ಜೆಸ್ಸಿಕಾ ಒಬ್ಬ ಬರಹಗಾರ್ತಿ ಮತ್ತು ಸಾಮಾನ್ಯ ಹವ್ಯಾಸಿ ವಯೊಲಿನ್ ವಾದಕಿ. ಆಕೆ ನ್ಯೂಯಾರ್ಕ್‌ನಲ್ಲಿ ಕಲಿಯುತ್ತಿದ್ದಾಗ ಹೊಟ್ಟೆ ಪಾಡಿಗೆ ಚಿಕ್ಕಪುಟ್ಟ ಕಾರ್ಯಕ್ರಮದಲ್ಲಿ ವಯೊಲಿನ್ ನುಡಿಸಿಕೊಂಡಿದ್ದಳು. ಅವಳನ್ನು ಅಮೆರಿಕದಲ್ಲಿನ ವಿಶ್ವಮಟ್ಟದ ಆರ್ಕೆಸ್ಟ್ರಾ ತಂಡವೊಂದು ತನ್ನ ಕಾರ್ಯಕ್ರಮಗಳಿಗೆ ಆಹ್ವಾನಿಸಿತು.

ಅವಳಿಗೆ ಆಶ್ಚರ್ಯ. ಹಣದ ಅವಶ್ಯಕತೆಯಿತ್ತು, ಸೇರಿಕೊಂಡಳು. ಇವಳಂತೆ ಆ ವೇದಿಕೆಯಲ್ಲಿ ಬಹಳಷ್ಟು ಮಂದಿ ವಯೊಲಿನ್ ವಾದಕರಿದ್ದರು. ಅದು ವಯೊಲಿನ್ ಆರ್ಕೆಸ್ಟ್ರಾ. ಅವಳಿಗೆ ಮೊದಲ ಕಾರ್ಯಕ್ರಮಕ್ಕೆ ಹೋದಾಗಲೇ ಗೊತ್ತಾಗಿದ್ದು, ಆಕೆಯ ಮತ್ತು ಉಳಿದ ವಯೊಲಿನ್ ವಾದಕರ ಮೈಕ್ ಅನ್ನು ಮ್ಯೂಟ್ ಮಾಡಲಾಗಿದೆ ಎಂಬುದು. ಬದಲಿಗೆ ನೆರೆದಿದ್ದ ಮಂದಿಗೆ ಕೇಳಿಸಿದ್ದು ಸಿ.ಡಿ. ಮೂಲಕ ಹಾಕಿದ ಧ್ವನಿಮುದ್ರಿತ ಸಂಗೀತ. ಇದು ಅಲ್ಲಿದ್ದ ಸಾವಿರಾರು ಮಂದಿಗೆ ಗೊತ್ತಾಗಲೇ ಇಲ್ಲ. ಇದು ಒಂದೇ ಕಾರ್ಯಕ್ರಮವಲ್ಲ, ಐದಾರು ವರ್ಷ ಸುಮಾರು ಐದಾರು ನೂರು ಮಂದಿ ಕಿಕ್ಕಿರಿದು
ತುಂಬಿದ್ದ ಕಾರ್ಯಕ್ರಮಗಳಲ್ಲೆಲ್ಲ ಇದೇ ನಡೆದದ್ದು. ಜಾಗತಿಕ ಖ್ಯಾತಿಯ ಆ ಆರ್ಕೆಸ್ಟ್ರಾ ತಂಡದ ಈ ವಿಷಯ ಹೊರಗೆ ಬರಲಿಕ್ಕೆ ಸುಮಾರು ೧೦ ವರ್ಷ ಬೇಕಾಯಿತು!

ಇದೆಲ್ಲ ಯಾವುದೇ ನೆಲದಲ್ಲಿ ಕಾನೂನುಬಾಹಿರವಲ್ಲ, ಶಿಕ್ಷಾರ್ಹವಲ್ಲ. ಬಹುತೇಕ ಆರ್ಕೆಸ್ಟ್ರಾಗಳಲ್ಲಿ ಕೆಲವೊಂದು ಸಂಗೀತದ ಭಾಗಗಳನ್ನು ಸಿ.ಡಿ. ಮೂಲಕ ನುಡಿಸುವುದು ಇದೆ. ಆದರೆ ಸಂಪೂರ್ಣ ಅದನ್ನೇ ಮಾಡುವುದು ಕಾನೂನು ಪ್ರಕಾರ ವಲ್ಲದಿದ್ದರೂ ಅಸಲಿಗೆ ಮಹಾಮೋಸ. ಇದಕ್ಕೆ ಮೋಸ ಎನ್ನುವುದಕ್ಕಿಂತ ಸ್ಕ್ಯಾಮ್ ಎಂಬುದು ಸರಿಯಾದ ಶಬ್ದ. ಯಾವುದೇ ಸ್ಕ್ಯಾಮ್ ಮಾಡುವವರನ್ನು Scam Artist ಎಂದು ಕರೆಯುವುದು ರೂಢಿ. ಇವರು ನಿಜ ಅರ್ಥದಲ್ಲಿ ಸ್ಕ್ಯಾಮ್ ಕಲಾವಿದರು. ಈಗ ಪ್ರಶ್ನೆಯಿರುವುದು, ಇಷ್ಟೊಂದು ಜನರ ಎದುರು ಈ ರೀತಿ ಮೋಸ ಮಾಡಿದಾಗ ಬಹುತೇಕರಿಗೆ ಗೊತ್ತಾಗದಿದ್ದುದು ಹೇಗೆ ಅಂತ.

ಒಂದು ವ್ಯವಸ್ಥಿತ ಹಿನ್ನೆಲೆಯಲ್ಲಿ, ಇಷ್ಟೊಂದು ಜನರಿರುವಾಗ ಮೋಸಮಾಡಲಿಕ್ಕೆ ಸಾಧ್ಯವೇ ಇಲ್ಲವೆಂಬ ಸಾಮೂಹಿಕ ಕುರುಡುತನ ಅದು. ಕಣ್ಣೆದುರಿಗೆ
ಕಂಡರೂ ಕಾಣಿಸದೇ ಹೋಗುವ ಕುರುಡುಸ್ಥಿತಿ. ಮೋಸ ಹೋದವರೆಲ್ಲ ದಡ್ಡರು ಎಂದು ಪರಿಭಾವಿಸುವುದು ಸರಿಯಲ್ಲ. ಎಲ್ಲಾ ಮೋಸಗಳು ನಡೆಯುವುದು ಕೆಲವೊಂದು ಮನುಷ್ಯಸಹಜ ಗುಣಗಳ, ದೌರ್ಬಲ್ಯಗಳ ದುರ್ಬಳಕೆಯಿಂದ. ಹೆಚ್ಚಿನವುಗಳಿಗೆ ಕಾರಣ ನಂಬಿಕೆ. ನಂಬಿಕೆ ಕೂಡ
ಮನುಷ್ಯನ ಸಹಜಗುಣ ಮತ್ತು ಅವಶ್ಯಕತೆ. ಮನುಷ್ಯನಲ್ಲಿ ಉಳಿದ ಪ್ರಾಣಿಗಳಂತೆ ಹಿಂಡಿನ ಬುದ್ಧಿ (Herd Mentality) ಇನ್ನೂ ಜಾಗೃತವಾಗಿದೆ. ಸುತ್ತಲಿನವರು ನಂಬಿದರೆ ಸಾಕು, ನಾವೂ ನಂಬಿಬಿಡುತ್ತೇವೆ. ಅದೆಷ್ಟೇ ಅನುಮಾನವಿದ್ದರೂ ನಾಲ್ಕು ಮಂದಿ ಒಪ್ಪಿಬಿಟ್ಟರೆ ಅದು ಮೋಸವಲ್ಲ; ನಿಜ, ಸರಿ ಎಂದೆನಿಸಿಬಿಡುತ್ತದೆ.

ಮನುಷ್ಯನಿಗೆ ನಂಬಿಕೆ ಎನ್ನುವುದು ಎಷ್ಟು ಮಹತ್ವದ ವಿಷಯ ಎಂಬುದು ನಿಮಗೆ ಗೊತ್ತು. ನಾವು ನಮ್ಮ ಸುತ್ತಲಿನವರನ್ನು ನಂಬಲೇಬೇಕು. ನಂಬಿಕೆಯಿಲ್ಲದ ಬದುಕು ಸುಲಭವಲ್ಲ. ನಂಬುವುದೇ ಸುಲಭ. ಎಲ್ಲರೂ ನಂಬುವಾಗ ತಾನೂ ನಂಬಬೇಕು, ಇಲ್ಲದಿದ್ದಲ್ಲಿ ಸಾಮಾಜಿಕವಾಗಿ ಸಲ್ಲುವುದಿ
ಲ್ಲವೆನ್ನುವ ಮಾನಸಿಕ ಅಭದ್ರತೆ ಎಲ್ಲರಲ್ಲಿದೆ. ಹಾಗಾಗಿ ಮೋಸದ ಅರಿವಾದರೂ ಸಮರ್ಥಿಸುವವರ ನಡುವೆ ಸುಮ್ಮನಿರುವವರೇ ಜಾಸ್ತಿ. ಹಿಂಡಿನ ಬುದ್ಧಿ ಮತ್ತು ನಂಬಿಕೆ, ಇವೆರಡೂ ನಮ್ಮ basic instinct ನ ಮುಂದುವರಿದ ಭಾಗ. ಅದನ್ನು ಮೀರುವುದು ಸುಲಭಕ್ಕೆ ಸಾಧ್ಯವಿಲ್ಲ.

ಹಾಗಾಗಿಯೇ ಅದೆಷ್ಟೋ ಬುದ್ಧಿವಂತರು ಕೂಡ ಒಂದಿಲ್ಲೊಂದು ಸ್ಕ್ಯಾಮ್‌ನ ಹಳ್ಳಕ್ಕೆ ಬೀಳುವುದು. ಈಗೀಗ ಸೋಷಿಯಲ್ ಮೀಡಿಯಾದಲ್ಲಿ ಯಾರದ್ದೋ ಫೋಟೋ ಹಾಕಿ ದುಡ್ಡು ಕೀಳುವುದು ಸಾಮಾನ್ಯ. ಎಂತೆಂಥ ಶಾಣ್ಯಾ ಮಂದಿಯೂ ಈ ಖೆಡ್ಡಾಕ್ಕೆ ಬೀಳುವ ಉದಾಹರಣೆಗಳಿವೆ. ಇದಕ್ಕೂ ನಮ್ಮೊಳಗಿನ ಸಹಜಗುಣ, ಮತ್ತು ಅದು ನಂಬಿಕೆಯಾಗಿ ಬದಲಾಗುವುದು ಕಾರಣ. ಸುಂದರ ಹೆಣ್ಣಿನ ಫೋಟೋ ಹಾಕಿ, ಒಂದಿಷ್ಟು ಸಮಯ ಆನ್‌ ಲೈನ್‌ನಲ್ಲಿಯೇ ಮಾತುಕತೆ ನಡೆಸಿ, ಆಮೇಲೆ ಹಣ ಕೀಳುವ ಸ್ಕ್ಯಾಮ್ ಬಗ್ಗೆ ಕೇಳಿರುತ್ತೀರಿ. ಸೋಷಿಯಲ್ ಮೀಡಿಯಾ ಇತ್ತೀಚಿನದು, ಹೊಸತು. ಅದರಲ್ಲಿ ನೀವು ಯಾರನ್ನಾದರೂ ಹಿಂಬಾಲಿಸುತ್ತಿದ್ದೀರಿ, ಅಥವಾ ಆನ್‌ಲೈನ್‌ನಲ್ಲಿಯೇ ಚಾಟ್ ಮೂಲಕ ಸಂಧಿಸಿದ್ದೀರಿ ಎಂದಿಟ್ಟುಕೊಳ್ಳಿ.

ಒಂದಿಷ್ಟು ಸಮಯದ ನಂತರ ಆ ಅಜ್ಞಾತ ವ್ಯಕ್ತಿಯನ್ನು ತೀರಾ ಆಪ್ತರಂತೆ ತಪ್ಪಾಗಿ ಪರಿಭಾವಿಸಲಿಕ್ಕೆ ಶುರುಮಾಡಿಬಿಡುತ್ತೇವೆ. ಸ್ಕ್ಯಾಮ್ ಮಾಡುವವರು ಈ ಸಹಜ ಗುಣವನ್ನೇ ಬಳಸಿಕೊಳ್ಳುವುದು. ಯಾರೋ ಹತ್ತಿರದವರು ಅಥವಾ ಪರಿಚಯವಾಗಿ ಒಂದಿಷ್ಟು ಮಾತನಾಡಿದ ನಂತರ ಸ್ನೇಹಿತರಾದವರಂತೆ ಅವರು ಎಂದು ತಪ್ಪಾಗಿ ಚಿತ್ರಿಸಿ ಕೊಳ್ಳುತ್ತೇವೆ. ಅವಾಸ್ತವಿಕ ಆನ್‌ಲೈನ್ ಸಂಬಂಧಗಳನ್ನು ಗ್ರಹಿಸುವುದರಲ್ಲಿ ಎಡವಟ್ಟಾದರೆ, ಮುಗ್ಧವೆನಿಸುವ ಅನವಶ್ಯಕ ನಂಬಿಕೆಗಳು ಕೊನೆಗೆ ಮೋಸವೊಂದರಲ್ಲಿ ಅಂತ್ಯವಾಗುತ್ತವೆ.

ಪಿರಮಿಡ್ ಸ್ಕೀಮ್, ವಿನಿವಿಂಕ್, ಹಣ ದುಪ್ಪಟ್ಟಾಗಿಸುವಿಕೆ ಹೀಗೆ ನೂರೆಂಟು ಮೋಸದ ಯೋಜನೆಗಳನ್ನು ನಾವೆಲ್ಲಾ ಕೇಳುತ್ತಲೇ ಇರುತ್ತೇವೆ. ಮೋಸದ ಸ್ಕೀಮ್‌ಗಳನ್ನು ponzi scheme ಎಂದು ಇಂಗ್ಲಿಷ್‌ನಲ್ಲಿ ಕರೆಯುವುದನ್ನು ಕೇಳಿರುತ್ತೀರಿ. ಅಸಲಿಗೆ Ponzi ಒಬ್ಬ ವ್ಯಕ್ತಿಯ ಹೆಸರು-
ಚಾರ್ಲ್ಸ್ -ನ್ಜಿ. ಆತ ಆಧುನಿಕ ಸ್ಕ್ಯಾಮ್‌ಗಳ ಪಿತಾಮಹ. ೧೯೨೦ರಲ್ಲಿ ಹಣ ದುಪ್ಪಟ್ಟು ಮಾಡುವ ಮೋಸದ ಸ್ಕೀಮ್ ಅನ್ನು ಮೊದಲ ಬಾರಿ ದೊಡ್ಡಪ್ರಮಾಣದಲ್ಲಿ ನಡೆಸಿದವ. ಆತ ಮೊದಲು ಈ ಮೋಸಕ್ಕೆ ಬಳಸಿಕೊಂಡದ್ದು ಆಪ್ತ ಸ್ನೇಹ- ಸಂಬಂಧಗಳನ್ನು. ಒಂದಿಷ್ಟೂ ಅರ್ಥವಾಗದ ಸ್ಕೀಮ್
ವಿವರಿಸಿ ಹಣ ಎತ್ತುವುದು, ಮೊದಮೊದಲು ಹಣ ಹೂಡಿದ ಸ್ನೇಹಿತರಿಗೆ, ಹೊಸತಾಗಿ ಮೋಸಕ್ಕೊಳಗಾದವರ ಹಣವನ್ನು ಕೊಟ್ಟು ಸಮಾಜದಲ್ಲಿ ನಂಬಿಕೆ ಹುಟ್ಟಿಸುವುದು.

ಹೀಗೇ ಮುಂದುವರಿಸಿಕೊಂಡು ಹೋಗಿ ಒಂದು ದಿನ ಕೈ ಎತ್ತಿ ನಾಪತ್ತೆಯಾಗುವುದು. ಆತ ಈ ಸ್ಕೀಮ್‌ನ ಮೂಲಕ ಆ ಕಾಲದಲ್ಲಿಯೇ ಅದೆಷ್ಟೋ ಮಿಲಿಯನ್ ಡಾಲರ್ ಹಣ ಮಾಡಿದ್ದ. ಇದೆಲ್ಲ ದೊಡ್ಡ ಸುದ್ದಿಯಾಯಿತು, ಈ ರೀತಿಯ ಮೋಸಕ್ಕೆ ಆತನದೇ ಹೆಸರು ಕೊಟ್ಟದ್ದೂ ಆಯಿತು. ಆದರೆ ಇದೇ ರೀತಿಯ ಸಾವಿರದೆಂಟು ಮೋಸಗಳು ಅಮೆರಿಕದಲ್ಲಿ, ಜಗತ್ತಿನಾದ್ಯಂತ ಅಂದಿನಿಂದ ಇಂದಿನವರೆಗೂ ನಡೆದುಕೊಂಡು ಬಂದಿವೆ. ಶತಮಾನದ ನಂತರ ಕರ್ನಾಟಕದಲ್ಲಿ ವಿನಿವಿಂಕ್ ಶಾಸ್ತ್ರಿ ಬಳಸಿದ್ದು ಇದೇ ಮೋಸದ ಮಾದರಿ ಯನ್ನು. ಎಲ್ಲ ಕಡೆ ಕಥೆ ಮಾತ್ರ ಬೇರೆ ಬೇರೆ. ಇಂಥವು ಮೋಸ ಎಂಬುದು ಎಲ್ಲರಿಗೂ ಗೊತ್ತು, ಆದರೂ ಇಂಥದ್ದೊಂದು ಸ್ಕೀಮ್ ಹೊಸ ಅವತಾರದಲ್ಲಿ ನಾಳೆಯೇ ಬಂತೆಂದುಕೊಳ್ಳಿ, ಅದಕ್ಕೆ ಬಲಿಯಾಗು ವವರು ಇದ್ದೇ ಇದ್ದಾರೆ.

ಏಕೆಂದರೆ ಇಲ್ಲಿ ಅದೆಲ್ಲ ತರ್ಕಗಳನ್ನು ಮೀರಿ ಮನುಷ್ಯನ ಆಪ್ತ ಸಂಬಂಧ, ಸ್ನೇಹ ಕೆಲಸಮಾಡುತ್ತವೆ. ಸ್ನೇಹಿತ ಹೇಳಿದ ನೆಂದರೆ ಅದು ಸರಿಯೇ ಇರುತ್ತದೆ ಎಂಬ ಗಟ್ಟಿನಂಬಿಕೆ. ‘ಮೋಸ ಹೋಗುವವರು ಇರುವಲ್ಲಿಯವರೆಗೆ ಮೋಸ ಮಾಡುವವರು ಇದ್ದೇ ಇರುತ್ತಾರೆ’ ಎಂಬೊಂದು ಮಾತಿದೆ.
ಆದರೆ ಇದನ್ನು ಸರಿಯಾಗಿಸಿ ಹೇಳಬೇಕೆಂದರೆ: ಮೋಸ ಹೋಗುವವರು, ಮೋಸ ಮಾಡುವವರು ಯಾವತ್ತೂ ಇದ್ದಾರೆ, ಮುಂದೆಯೂ ಇರುತ್ತಾರೆ. ಅದು ಸಮಾಜದ ಒಂದು ರೂಪ. ಮೋಸಕ್ಕೆ ಕಾರಣ ಯಾರು, ಯಾರ ದಡ್ಡತನ ಎಂದೆಲ್ಲ ಸಮಾಧಾನಕ್ಕೆ ವಿವರಿಸಿಕೊಳ್ಳಬಹುದು.

ಎಲ್ಲಾ ಸ್ಕ್ಯಾಮ್ ಮಾಡುವವರು ಅವಲಂಬಿಸುವುದು ನಮ್ಮೆಲ್ಲರೊಳಗಿರುವ ಕೆಲ ಸಹಜ ಗುಣಗಳನ್ನು, ದೌರ್ಬಲ್ಯವನ್ನು ಎನ್ನುವುದನ್ನು ಗ್ರಹಿಸಬೇಕು.
ಅಕ್ಟೋಬರ್ ಸೈಬರ್ ಸೆಕ್ಯೂರಿಟಿ ತಿಂಗಳು. ಹಾಗಾಗಿ ಜಾಗೃತಿ ಮೂಡಿಸುವ ಅದೆಷ್ಟೋ ವಿಚಾರಗಳು ಮಾಧ್ಯಮ ಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ನೂರೆಂಟು ಮೋಸದ ಪ್ರಕಾರ ಗಳನ್ನು ವಿವರಿಸಿ, ‘ಹೀಗಾದರೆ ಹಾಗೆ’ ಎಂದು ಲೇಖನಗಳು ಬರುತ್ತಿವೆ. ಅವೆಲ್ಲವನ್ನೂ ಓದಿಕೊಳ್ಳಬೇಕು ನಿಜ. ಆದರೆ ಈ ಮೋಸಗಳು ಹೊಸ ಹೊಸ ರೂಪದಲ್ಲಿ, ಅವತಾರದಲ್ಲಿ ಬರುವುದರಿಂದ ಅದಷ್ಟೇ ವಿಚಾರ ಸಾಕಾಗುವುದಿಲ್ಲ.

ಹಾಗಾದರೆ ಪರಿಹಾರವೇನು? ಸಾಮಾನ್ಯ ಜ್ಞಾನ. ಸುತ್ತಲಿನ ಆಗುಹೋಗುಗಳ ತಿಳಿವಳಿಕೆ. ಹಣ ಸಂಪಾದಿಸಲು ಯಾವುದೇ ಸುಲಭದ ಮಾರ್ಗವಿಲ್ಲ, ಪುಕ್ಸಟ್ಟೆ ಹಣವನ್ನು ಯಾರೂ ಕೊಡುವುದಿಲ್ಲ ಎಂಬಿತ್ಯಾದಿ ಸಹಜಪ್ರಜ್ಞೆ, ತಾರ್ಕಿಕ ಚಿಂತನೆ. ಎಲ್ಲಕ್ಕಿಂತ ಮಿಗಿಲಾಗಿ, ಮಿತಿಯೊಳಗಿರುವ ಆಸೆ…