ಪ್ರಾಣೇಶ್ ಪ್ರಪಂಚ
ಗಂಗಾವತಿ ಪ್ರಾಣೇಶ್
ಶ್ರೀಕೃಷ್ಣದೇವರಾಯ, ಹಕ್ಕಬುಕ್ಕ, ಪುರಂದರದಾಸರು, ವ್ಯಾಸರಾಜರು, ಮುತ್ತು ರತ್ನದ ರಾಶಿಗಳನ್ನು ಈ ಗೋಪುರ ನೋಡಿದೆಯಲ್ಲ, ಈ ಗೋಪುರಕ್ಕೆ ಮಾತು ಬರುತ್ತಿದ್ದರೆ, ಅದೆಷ್ಟು ಸಂಭ್ರಮಗಳನ್ನು ವರ್ಣಿಸುತ್ತಿದ್ದವೋ?
ನಮ್ಮ ಊರು ಗಂಗಾವತಿ ಸುತ್ತಮುತ್ತಲೆಲ್ಲಾ ತುಂಬಾ ಪ್ರಾಚೀನವಾದ ಇತಿಹಾಸಗಳುಳ್ಳ ಅನೇಕ ಪ್ರೇಕ್ಷಣೀಯ ಸ್ಥಳಗಳಿವೆ. ಕೇವಲ ಹತ್ತು ಕಿ.ಮೀ ದೂರದಲ್ಲಿ ವಿಶ್ವಪ್ರಸಿದ್ಧ ಹಂಪೆ ಇದೆ. ಕೇವಲ ಆರು, ಏಳು ಕಿ.ಮೀ ಅಂತರದಲ್ಲಿ ಮಾಧ್ವಯತಿಗಳ ನವ ವೃಂದಾವನವಿದೆ.
ಕೃಷ್ಣದೇವರಾಯನಂಥ ರಾಜನಿಗೆ ಗುರುಗಳಾಗಿದ್ದ ವ್ಯಾಸರಾಜರು, ಮಧ್ವಾಚಾರ್ಯರ ಪ್ರಥಮ ಶಿಷ್ಯ ಪದ್ಮ ನಾಭ ತೀರ್ಥರು, ಶ್ರೀ ರಾಘವೇಂದ್ರ ಸ್ವಾಮಿಗಳ ಗುರುಗಳಾದ ಶ್ರೀ ಸುಧೀಂದ್ರ ತೀರ್ಥರ ವೃಂದಾವನಗಳು ಕೇವಲ ಅರ್ಧ ಗಂಟೆಯ ದಾರಿಯಷ್ಟೆ. ಬಾಲ್ಯದಿಂದಲೂ ಇಲ್ಲಿನ ಪಂಪಾಸರೋವರ, ಆನೆಗುಂದಿಯ ಚಿಂತಾಮಣಿ, ಹನುಮ ಹುಟ್ಟಿದ ಅಂಜನಾದ್ರಿ ಪರ್ವತ, ವಾಲಿ ಸುಗ್ರೀವರ ಕಿಸ್ಕಿಂಧಾ ಪ್ರದೇಶಗಳು ನಮ್ಮ ಪ್ರಮುಖ ಪಿಕ್ನಿಕ್ ಸ್ಪಾಟ್ಗಳು. ನಡೆಯಲು ಕಾಲು ಬಂದಾಗಿನಿಂದಲೂ ಇಲ್ಲಿಗೆಲ್ಲ ಕಾಲ್ನಡಿಗೆಯಿಂದ ನಡಿದು ಇಂದು ನನ್ನದೇ ದುಡಿಮೆಯ ಸ್ವಂತ ಕಾರಿನಲ್ಲಿ ಅದೆಷ್ಟು ಸಲವೋ ನಾನು ಹೋದದ್ದು ಲೆಕ್ಕಲ್ಲ.
ಪ್ರತಿಸಲ ಈ ಸ್ಥಳಗಳೆಲ್ಲ ನನಗೆ ಹೊಸದೇ, ಹೊಸ ಸ್ಥಳಕ್ಕೆ ಬಂದಿದ್ದೇನೋ ಎನ್ನುವಷ್ಟು ಮೈ ಪುಳಕ, ಬಾಲ್ಯದ, ಯೌವ್ವನದ, ನಿರುದ್ಯೋಗದ ನೆನಪುಗಳು. ನಮ್ಮ ಮನೆಗೆ ಬರುವ ಬಂಧುಗಳಿಗೆ, ಗೆಳೆಯರಿಗೆ ಇವನ್ನೆಲ್ಲ ತೋರಿಸಲು ಕರೆದೋಯ್ದದ್ದೇ.. ಕರೆದೋಯ್ದದ್ದು. ಹಂಪೆ, ಆನೆಗುಂದಿ ಎಂಬ ಹೆಸರಿಗೇ ಏನೋ ರೋಮಾಂಚನ, ಸೆಳೆತ. ಬೆಂಗಳೂರಿಗೆ ಬಸ್ಸಿನಲ್ಲಿ ಹೋಗುತ್ತಿದ್ದ ದಿನಗಳಲ್ಲಿ ಗಂಗಾವತಿಯನ್ನು ರಾತ್ರಿ ಹತ್ತು ಗಂಟೆಗೆ ಬಿಡುತ್ತಿದ್ದ ಹವಾನಿಯಂತ್ರಿತ ಬಸ್ಸಿಗೆ ನಾನು ಹೋಗುತ್ತಿದ್ದೆ. ಕಾರಣವೆಂದರೆ, ಅದು ವಾಯಾ ಹಂಪೆ ಮೂಲಕ ಹೋಗುತ್ತಿತ್ತು. ಹಂಪೆಗೆ ಬಂದಿದ್ದ ದೇಶಿ ಪ್ರವಾಸಿಗರನ್ನು ಬೆಂಗಳೂರಿಗೆ ಕರೆದೊಯ್ಯುವ ಬಸ್ ಇದೊಂದೆ. ಉಳಿದೆಲ್ಲ ಬಸ್ಸುಗಳು ವಾಯಾ ಕಂಪ್ಲಿ, ಕಮಲಾ ಪುರ ಹೋಗುತ್ತಿದ್ದರೆ, ಬಸ್ ಮಾತ್ರ ವಾಯಾ ಹಂಪೆ ಹೋಗುತ್ತಿತ್ತು.
ನನಗಿದ್ದ ಈ ಹಂಪೆಯ ಗೋಪುರ, ದಾರಿಯುದ್ದಕ್ಕೂ ಬರುವ ಆನೆಗುಂದಿ, ಹಂಪೆಯ ಸ್ಮಾರಕಗಳ ಹುಚ್ಚು, ಹಂಪೆಯ ವಿರುಪಾಕ್ಷನ ಗುಡಿಯ ಮುಂದೆ ನಿಲ್ಲುತ್ತಿದ್ದ ಈ
ಬಸ್ಸಿಗೆ ಅಲ್ಲೇ ಕಾಯುತ್ತಿದ್ದ ದೇಶಿಯರು ತಮ್ಮ ಬೆನ್ನಿಗೇರಿಸಿದ್ದ ಲಗೇಜ್ಗಳ ಜೊತೆಗೆ ಬಸ್ಸು ಏರಿ, ಟಸ್.. ಪುಸ್ ಎಂದು ಇಂಗ್ಲೀಷ್ನಲ್ಲಿ ಮಾತನಾಡುತ್ತಾ ತಮ್ಮ ಸೀಟುಗಳನ್ನು ಬತ್ ಗಳನ್ನು ಹುಡುಕಿ ಹತ್ತಿ ಕೂರುವಷ್ಟು ಹೊತ್ತು ನಾನು ಕಿಟಕಿ ತೆರೆದು ಹಂಪೆಯ ಗೋಪುರವನ್ನು ರಾತ್ರಿಯ ಆ ಲೈಟಿನ ಬೆಳಕಿನಲ್ಲಿ ಕಣ್ಣು ತುಂಬಿಕೊಳ್ಳುತ್ತಿದ್ದೆ. ಆ ಗೋಪುರದ ಅಣು ಅಣುವನ್ನು ನೋಡುತ್ತಾ, ಈ ಗೋಪುರದ ಈ ಕಲ್ಲುಗಳಿಗೆ ಅದೆಷ್ಟು ದೀರ್ಘ ಆಯುಸ್ಸಿದೆಯಲ್ಲಾ, ಶ್ರೀಕೃಷ್ಣದೇವರಾಯ,
ಹಕ್ಕಬುಕ್ಕ, ಪುರಂದರದಾಸರು, ವ್ಯಾಸರಾಜರು, ಮುತ್ತು ರತ್ನದ ರಾಶಿಗಳು ಇವನ್ನೆಲ್ಲ ಈ ಗೋಪುರ ನೋಡಿದೆಯಲ್ಲ, ಈ ಗೋಪುರಕ್ಕೆ ಮಾತು ಬರುತ್ತಿದ್ದರೆ, ಅದೆಷ್ಟು ಸಂಭ್ರಮಗಳನ್ನು ವರ್ಣಿಸುತ್ತಿದ್ದವೋ ಎಂದು ಅದರ ಅದೃಷ್ಟಕ್ಕೆ ಮರುಗುತ್ತಿರುತ್ತೇನೆ.
ಬಸ್ ಹಾರ್ನ್ ಮಾಡಿ, ರಿವರ್ಸ್ ತೆಗೆದುಕೊಂಡು ಹಂಪೆಯನ್ನು ಬಿಡುತ್ತಾ ಹೊಸಪೇಟೆ ಕಡೆ ಧಾವಿಸುತ್ತಿದ್ದರೆ, ನಾನು ತಿರುತಿರುಗಿ ಗೋಪುರವನ್ನೆ ಅದು ಮರೆ ಯಾಗಿ, ಕೊನೆಕೊನೆಯಾಗಿ ಗೋಪುರಕ್ಕೆ ಹಾಕಿದ್ದ ಲೈಟಿನ ಬೆಳಕಿನ ಛಾಯೆಯನ್ನೇ ನೋಡುತ್ತಾ ನೋಡುತ್ತಾ, ಅದು ಮರೆಯಾದ ಕೂಡಲೆ ನನಗೆ ತಿಳಿಯದಂತೆ ನಿಟ್ಟುಸಿರೊಂದನ್ನು ಬಿಟ್ಟು ನನ್ನ ಬಸ್ಸಿನ ಸ್ಲೀಪರ್ ಬರ್ತ್ನಲ್ಲಿ ಒರಗುತ್ತಾ ಮತ್ತೆಂದು ಹಂಪೆಗೆ ಬರುತ್ತೇನೋ, ಬೆಂಗಳೂರಿಗೆ ಹೋಗಲೇಬೇಕಾದ ಈ ಅನಿವಾ ರ್ಯತೆ ಎಂದು ತಪ್ಪುವದೋ ಎನಿಸುತ್ತಿರುವುದು ಇಂದಿಗೂ ಸತ್ಯ.
ಹಂಪೆ, ಆನೆಗುಂದಿ, ಚಿಂತಾಮಣಿಗಳ ಈ ಸೆಳೆತ, ಈ ಮೋಹ ಯಾಕಿರಬಹುದೆಂದು ತುಂಬಾ ಯೋಚಿಸುತ್ತಿದ್ದೆ. ಒಮ್ಮೆ ಅಹೋರಾತ್ರ ಕಾವ್ಯನಾಮದ ನಟೇಶ ಪೋಲಂಪಲ್ಲಿಯವರಲ್ಲಿ ಈ ನನ್ನ ಬೇಗುದಿ ತೋಡಿಕೊಂಡಾಗ ಅವರು ಹೇಳಿದ್ದು ಕೇಳಿ ಸಖೇದಾಶ್ಚರ್ಯಗೊಂಡೆ. ಅವರು ಹೇಳಿದ್ದೇನೆಂದರೆ, ನೀವು ಕಳೆದ ಜನ್ಮದಲ್ಲಿ ಹಂಪೆಯಲ್ಲಿಯೇ ಹುಟ್ಟಿದ್ದೀರಿ. ಆಗಲೂ ನಿಮ್ಮದು ಕೃಷ್ಣದೇವರಾಯನ ಜಯನಗರದ ಆಸ್ಥಾನ ಕವಿಗಳಲ್ಲಿ ದೂಷಕ ಕವಿಯಾಗಿದ್ದೀರಿ, ಹೀಗಾಗಿ ನೀವು ಜೋಶಿ, ಮಹಾಮನಿ ಕೂಡಾ ಇಲ್ಲಿಯವರೇ, ಹೀಗಾಗಿ ನೀವು ಮತ್ತೆ ಸೇರಿದ್ದೀರಿ. ನಿಮಗೆ ಅಂದಿಗೂ ಈ ಹಂಪೆಯ ನೆಲದ ಮೇಲೆ ತುಂಬಾ ಮೋಹವಿತ್ತು. ಹೀಗಾಗಿ ಹಂಪೆಗೆ ಕೇವಲ ಹತ್ತು ಕಿ.ಮೀ. ದೂರದ ಗಂಗಾವತಿಯಲ್ಲಿ ಜನಿಸಿದ್ದಿರಿ ಮತ್ತು ಹಂಪೆಗೆ ಬಂದಾಗೊಮ್ಮೆ ನಿಮಗೆ ಗತಜನ್ಮದ ಅಲೆಗಳು ಕಂಪನಗೊಳ್ಳುತ್ತವೆ. ನಿಮ್ಮ ಈ ದೂಷಕ ವೃತ್ತಿ ಕೂಡಾ ಪೂರ್ವಜನ್ಮದ ಫಲ ಕೂಡಾ. ರಾಜ ಮರ್ಯಾದೆ, ಜನಪ್ರೀಯತೆ ಕೂಡಾ ಆ ಜನ್ಮದ್ದೇ ಎಂದು ತಿಳಿಸಿದಾಗ ನನಗೆ ಆಶ್ಚರ್ಯವಾಗದೇ ಇರಲಿಲ್ಲ.
ಇಷ್ಟೆಲ್ಲ ನೆನಪಾಗಲು ಕಾರಣ, ನನ್ನ ಕಿರಿಯ ಮಿತ್ರರಾದ ಗಂಗಾವತಿಯ ದಂತವೈದ್ಯ ಡಾ|| ಶಿವಕುಮಾರ ಮಾಲಿ ಪಾಟೀಲ್ರ ಪರಿಚಯವಾದಾಗಿನಿಂದ ಅವರಂತೆ ನಾನೂ ವೀಕೆಂಡ್ಗಳಲ್ಲಿ ಗಂಗಾವತಿಯಲ್ಲಿನ ಸುತ್ತಮುತ್ತಲಿನ ಸ್ಮಾರಕಗಳು,ಬೆಟ್ಟಗುಡ್ಡಗಳು, ಚಿತ್ರ ಎಲೆಬಿಡುವ ಗಿಡಗಳು, ಹೆಸರಿಲ್ಲದ ಎಲೆ, ಬಿಸಿಲು ಬೀಳದ ಭಾಗಳನ್ನು ನೋಡುತ್ತಾ ಅವರೊಂದಿಗೆ ಸುತ್ತುತ್ತಿದ್ದೇನೆ. ಶಿವಕುಮಾರ ದಂತವೈದ್ಯರು, ಅವರ ದಂತ ಚಿಕಿತ್ಸಾ ಆಸ್ಪತ್ರೆಯಲ್ಲಿ ದಂತ ರೋಗಿಗಳು ಇವರಿಗಾಗಿ ಬಾಯಿ ತೆರೆದುಕೊಂಡು ಕೂತಿರುತ್ತಾರೆ. ಇವರು ತಮ್ಮ ಮಾಂತ್ರಿಕ ಕೈಚಳಕದಿಂದ ಅವರ ಚಿಕಿತ್ಸೆಯನ್ನು ಕ್ಷಣಾರ್ಧದಲ್ಲಿ ಮುಗಿಸಿ ಅವರ ಬಾಯಿ ಮುಚ್ಚಿಸಿ, ಚಿಮ್ಮಟಿಗೆ, ಇಕ್ಕಳಗಳನ್ನು ನರ್ಸ್ಗಳ ಕೈಗೆ ಕೊಟ್ಟು ಗೂಟಕ್ಕೆ ಹಾಕಿದ್ದ ಕಾರ್ ಕೀಲಿ ಡಿದು, ತಾವು ಸರಸರನೇ ತಮ್ಮ ಆಸ್ಪತ್ರೆ ಮೆಟ್ಟಿಲಿಳಿದು ಕಾರ್ ಬಾಗಿಲು ತೆರೆದು ’ಕೂತ್ಕೊಳ್ಳಿ ಸಾರ್’ ಎಂದು ನನ್ನನ್ನು ಕೂರಿಸಿಕೊಂಡು ಹೊರಟೇ ಬಿಡುತ್ತಾರೆ.
ಎಲ್ಲಿಗೆ? ಎಂದು ನಾನು ಕೇಳಿದರೆ, ಬನ್ನಿ ತೋರಿಸುತ್ತೇನೆ ಎನ್ನುತ್ತಾರಾಗಲಿ, ಎಲ್ಲಿಗೆ ಎಂದು ಹೇಳುವುದಿಲ್ಲ. ಇವರ ಬಳಿಗೆ ಬರುವ ಪೇಷೆಂಟ್ನಂತೆ ನಾನೂ
ಕೂಡಾ ಬಾಯಿ ತೆರೆದುಕೊಂಡೇ ಪಕ್ಕದಲ್ಲಿ ಕೂರುತ್ತೇನೆ. ಅರ್ಧ, ಮುಕ್ಕಾಲು ಗಂಟೆಯ ಪ್ರಯಾಣಿಸಿ ಕಾರು ಯಾವುದೋ ಗುಡ್ಡದ ತುದಿ, ಇಲ್ಲವೇ ಸುರಂಗದ ಹೊರಗೆ ನಿಲ್ಲಿಸಿ, ಶತಮಾನಗಳ ಹಿಂದಿನ ಆ ಅಲಕ್ಷಿತ ಆಶ್ಚರ್ಯಗಳನ್ನು ನನಗೆ ಅಲ್ಲಿ ತೋರಿಸುತ್ತಾರೆ.
ಡಾ|| ಶಿವಕುಮಾರ ಗಂಗಾವತಿಯವರಲ್ಲ, ನನ್ನ ಬಾಲ್ಯದ ಊರಾದ ಪಕ್ಕದ ಯಲಬುರ್ಗಿಯವರು. ಇಲ್ಲಿಗೆ ದಂತ ವೈದ್ಯರಾಗಿ ಬಂದು, ಗಂಗಾವತಿಯ ಸುತ್ತಮುತ್ತಲಿನ ಪ್ರೇಕ್ಷಣೀಯ, ಐತಿಹಾಸಿಕ, ಪುರಾತನ, ಸ್ಮಾರಕ ಮಂದಿರ ಇತ್ಯಾದಿಗಳನ್ನು ತಮ್ಮ ಬಿಡುನ ವೇಳೆಯಲ್ಲಿ ನೋಡುತ್ತಾ, ಸಂಶೋಧಿಸುವ ಮಾಹಿತಿ ಸಂಗ್ರಹಿಸುವ ಹವ್ಯಾಸ ಬೆಳೆಸಿಕೊಂಡವರು. ಓದಿ ದಂತವೈದ್ಯರಾದರೂ, ಆಸಕ್ತಿ, ಉತ್ಸಾಹಗಳು ಪ್ರಾಚೀನ ಶಿಲಾ ಸ್ಮಾರಕಗಳ ಮೇಲೆ. ಹಾಗೆಂದು ತಮ್ಮ ವೃತ್ತಿಯನ್ನು ಅಲಕ್ಷಿಸಿಲ್ಲ. ಕಿಕ್ಕಿರಿದು ತುಂಬಿರುವ ಇವರ ಆಸ್ಪತ್ರೆ ರೋಗಿಗಳನ್ನು ನೋಡಿದರೆ ಓ ಮೈ ಗಾಡ್ ಎನಿಸುತ್ತದೆ. ಆದರೆ ನುರಿತ ಇವರು ಹಾಗೂ ಇವರ ಪತ್ನಿ ಡಾ|| ಶಶಿಕಲಾ ಇಬ್ಬರೂ ಚಕಚಕನೇ ರೋಗಿಗಳನ್ನು ನೋಡುವ, ಚಿಕಿತ್ಸೆ ಕೊಡುವ ವಿಧಾನ ಆಶ್ಚರ್ಯಗೊಳಿಸುತ್ತದೆ.
ಡಾಕ್ಟರ್ಸ್ ರೆಸ್ಟ್ ಟೈಮ್ ಎಂಬುದೇ ಇವರಿಗಿಲ್ಲ. ಟೈಮ್ಪಾಸ್ ಆಗುವುದಿಲ್ಲ ಎಂದು ಗೊಣಗುವ ವ್ಯಕ್ತಿಗಳೊಮ್ಮೆ ನಮ್ಮ ಡಾ|| ಶಿವಕುಮಾರ ಅವರೊನ್ನೊಮ್ಮೆ
ನೋಡಬೇಕು. ಹಾಗೆಯೇ ಸಮಯದ ಸದ್ವಿನಿಯೋಗ ಹೇಗೆ ಮಾಡಿಕೊಳ್ಳಬೇಕೆಂಬುದಕ್ಕೂ ಶಿವಕುಮಾರ ಯುವಕರಿಗೆ ಆದರ್ಶವಾಗಿದ್ದಾರೆ. ಡಾಕ್ಟರ್ ಮನೆಗೆ ಹೋಗ್ಯಾರೇನು? ಡಾಕ್ಟರ್ ಮಲಗಿದ್ದಾರೇನು? ಎಂಬ ಪೇಷೆಂಟ್ಗಳ ಮಾಮೂಲು ಪ್ರಶ್ನೆಗೆ ಉತ್ತರಿಸುವವರು ಅವರ ಆಸ್ಪತ್ರೆ ನರ್ಸುಗಳಲ್ಲ, ಇನ್ನೊಬ್ಬ
ಪೇಷೆಂಟ್ ಪ್ರಶ್ನೆ ಕೇಳಿದ ಪೇಷೆಂಟ್ಗೆ ಉತ್ತರಿಸುವುದೇನೆಂದರೆ, ಅವರು ಮನೆಗೆ ಹೋಗಂಗಿಲ್ಲ, ಮಲಗೋದಂತೂ ದೂರ ಉಳಿತು, ಟೈಮ್ ಸರಿಗೆ ಬರ್ತಾರ ಕುಂದರ್ರಿ ಎಂದು ಹೇಳುತ್ತಾರೆ.
ನಿಜ, ರೆಸ್ಟ್ ವೇಳೆಯನ್ನು ಗುಹೆ, ಗುಡ್ಡ, ನದಿ, ಕಾಡು, ಸ್ಮಾರಕಗಳ ಹುಡುಕಾಟದಲ್ಲಿ ಕಳೆಯುವ ಡಾ|| ಶಿವಕುಮಾರರ ಜೊತೆಗೆ ಸಮಾನ ಆಸಕ್ತರ ದಂಡೇ ಇದೆ.
ಪ್ರೋ-ಸರ್ ದೇವೆಂದ್ರಪ್ಪ ಜಾಜಿ, ಹಾಡುಗಾರ ರಮೇಶ ಗಬ್ಬೂರು, ಪ್ರಲ್ಹಾದ, ಕೃಷ್ಣಸಿಂಗ್, ರಾಮನಾಥ, ಆನಂದ ಕೆಲೋಜಿ, ಚಿದಾನಂದ ಕೀರ್ತಿ, ಮೈಲಾರಪ್ಪ ಬೂದಿಹಾಳ, ಮಂಜುನಾಥ ಗುಡ್ಲಾನೂರು ಇತ್ಯಾದಿ ಇತ್ಯಾದಿ. ವೀಕೆಂಡ್ ಗಳು, ಎರಡು ದಿನಗಳ ಹಬ್ಬ, ಹುಣ್ಣಿಮೆಗಳ ರಜೆ ದಿನಗಳಂದು ಈ ತಂಡ ಮನೆಹಿಡಿದು ಕುಳಿತುಕೊಳ್ಳುವುದಿಲ್ಲ. ಮೈಯಲ್ಲಿ ಶಕ್ತಿ, ವಯಸ್ಸು ಎರಡೂ ಇದ್ದಾಗ ಇಂಥಹ ಚಾರಣ ಕಾರ್ಯಕ್ರಮ ಹಮ್ಮಿಕೊಳ್ಳುವ ಈ ಎಲ್ಲಾ ಯುವಸ್ನೇಹಿತರ ಜೊತೆ ನಾನೂ ಬಾಲ್ಯದಲ್ಲಿ ತಿರುಗಾಡಿದ ಈ ಸ್ಥಳಗಳಿಗೆಲ್ಲ ಈಗ ಮತ್ತೆ ಹೋಗುತ್ತಿದ್ದೇನೆ. ಆ ಸ್ಥಳಗಳೂ ಈಗ ಮಾರ್ಪಾಟಾಗಿರುವಂತೆ, ನನ್ನಲ್ಲೂ, ನನ್ನ ವಯಸ್ಸು, ಆರೋಗ್ಯದಲ್ಲೂ ಮಾರ್ಪಾಟು ಕಾಣುತ್ತಿದೆ. ದೇಹ ದಣಿಯುತ್ತಿದೆ ನಿಜ, ಆದರೆ ಮನಸ್ಸು ಕುಣಿಯುತ್ತಿದೆ. ಮೈ ಮನಸ್ಸುಗಳ ಆಹ್ಲಾದವೇ ಆರೋಗ್ಯದ ಸೂತ್ರವಲ್ಲವೇ?