Saturday, 14th December 2024

ಸರಕಾರಿ ಉತ್ತೇಜನ, ಸಾಲಾಧಾರಿತ ಬೆಳವಣಿಗೆ ಸಲ್ಲ

ವಿಶ್ಲೇಷಣೆ

ಶಿವಪ್ರಸಾದ್ ಎ.

aadarsha1283@gmail.com

ಕೋವಿಡ್ ನಿರ್ಬಂಧ ವಾಪಸು ಪಡೆದ ನಂತರ ಚೀನಾದ ಆರ್ಥಿಕತೆ ಚೇತರಿಸಿಕೊಳ್ಳ ಬಹುದು ಎಂಬ ವಿಶ್ವಾಸ ಸುಳ್ಳಾಗಿದೆ. ಅಮೆರಿಕದ ಷೇರು ಮಾರುಕಟ್ಟೆಯ ಕೇಂದ್ರವಾದ ವಾಲ್‌ಸ್ಟ್ರೀಟ್ ಅಂದಾಜಿನ ಪ್ರಕಾರ ಚೀನಾದಲ್ಲಿ ಶೇ.೫ ಜಿಡಿಪಿ ಬೆಳವಣಿಗೆ ಪ್ರಮಾಣ ದಾಖಲಾಗಿ, ಕಾರ್ಪೊರೇಟ್ ಆದಾಯದ ಹೆಚ್ಚಳ ಶೇ.೮ರಷ್ಟಾಗಬಹುದು ಎಂದು ಸೂಚಿಸಲಾಗಿತ್ತು.

ಆದರೆ ೨೦೨೩ರ ಮೊದಲ ತ್ರೈಮಾಸಿಕದಲ್ಲಿ ಕೇವಲ ಶೇ.೧.೫ರಷ್ಟು ಬೆಳವಣಿಗೆ ದಾಖಲಾಗಿದೆ. ವಾಸ್ತವವಾಗಿ, ದೇಶದ ೨೮ ವಲಯಗಳಲ್ಲಿ ೨೦ರಲ್ಲಿ ಸಾಂಸ್ಥಿಕ ಆದಾಯವು ಜಿಡಿಪಿಗಿಂತ ನಿಧಾನವಾಗಿ ಬೆಳೆಯುತ್ತಿದೆ ಮತ್ತು JTAM ಚೀನಾ ಸ್ಟಾಕ್
ಸೂಚ್ಯಂಕವು ಈ ವರ್ಷದ ಜನವರಿ ತಿಂಗಳಿನಲ್ಲಿ ತಲುಪಿದ್ದ ಗರಿಷ್ಠ ಮಟ್ಟಕ್ಕಿಂತ ಈಗ ಶೇ.೧೫ರಷ್ಟು ಇಳಿಕೆ ಕಂಡಿದೆ.

ಗ್ರಾಹಕರ ಬೇಡಿಕೆಯ ಬಲವಾದ ಸೂಚಕವೆಂದರೆ ಒಂದು ದೇಶದ ಪದಾರ್ಥಗಳ, ಇಂಧನದ ಮತ್ತು ಕಚ್ಚಾ ಸಾಮಗ್ರಿಯ ಆಮದು. ಆಮದುಗಳು ಹೆಚ್ಚಾಗುತ್ತಿದ್ದರೆ ಆ ದೇಶದಲ್ಲಿ ಗ್ರಾಹಕ ಬೇಡಿಕೆ ಹೆಚ್ಚಿದೆಯೆಂದೂ ಮತ್ತು ಅಲ್ಲಿನ ಆರ್ಥಿಕ ಪರಿಸ್ಥಿತಿ ಸದೃಢ ವಾಗಿದೆಯೆಂದೂ ಅರ್ಥೈಸಬಹುದು. ಏಪ್ರಿಲ್‌ನಲ್ಲಿ ಚೀನಾದ ಆಮದು ಶೇ.೮ಕ್ಕೆ ಕುಸಿಯಿತು ಮತ್ತು ಈ ಸಮಯದಲ್ಲಿ ಬ್ಯಾಂಕ್‌ ಗಳ ಸಾಲ ಬಿಡುಗಡೆಯ ವಹಿವಾಟು ಅಂದಾಜಿಸಿದ ಮಟ್ಟಕ್ಕಿಂತ ಅರ್ಧದಷ್ಟು ವೇಗದಲ್ಲಿ ಸಾಗಿತ್ತು. ಇದರ ಜತೆಗೆ, ಯುವ ಜನತೆಯ ನಿರುದ್ಯೋಗ ಪ್ರಮಾಣವು ಶೇ.೨೦ರಷ್ಟು ಏರಿಕೆ ಕಂಡಿತ್ತು.

೨೦೦೮ರಿಂದ ಚೀನಾದ ಆರ್ಥಿಕ ಮಾದರಿಯು ಸರಕಾರದ ಉತ್ತೇಜನ ಮತ್ತು ಹೆಚ್ಚುತ್ತಿರುವ ಸಾಲದ ಬಲದಿಂದ ಮುಂದೆ ಸಾಗಿದೆ, ವಿಶೇಷವಾಗಿ ರಿಯಲ್ ಎಸ್ಟೇಟ್ ಮಾರುಕಟ್ಟೆಗಳಲ್ಲಿ. ಆದರೆ ಚೀನಾದಲ್ಲಿ ಆಂತರಿಕ ಸಾಲ ಪ್ರಮಾಣ ಈಗಾಗಲೇ ದೇಶದ ಆದಾಯದ ಮೂರನೇ ಒಂದು ಭಾಗವನ್ನು ತಲುಪಿದೆ. ಚೀನಾದಲ್ಲಿ ಪ್ರಜೆಗಳ ಹೆಚ್ಚುವರಿ ಉಳಿತಾಯ ಮೊತ್ತವು ಆ ದೇಶದ ಜಿಡಿಪಿಯ ಶೇ.೩ರಷ್ಟು ಮಾತ್ರ ದಾಖಲಾಗಿದೆ. ಕುಗ್ಗುತ್ತಿರುವ ಜನಸಂಖ್ಯೆಯ ಕಾರಣದಿಂದಾಗಿ ಚೀನಾದ ಆರ್ಥಿಕ ಬೆಳವಣಿಗೆಯು ಅಲ್ಲಿನ ಸರಕಾರದ ನಿರ್ದೇಶಿತ ಗುರಿಯಾದ ಶೇ.೫ರ ಅರ್ಧದಷ್ಟು, ಎಂದರೆ ಶೇ.೨.೫ ಮಾತ್ರ ದಾಖಲಾಗಿದೆ.

ಬೆಳವಣಿಗೆಗೆ ಮುಖ್ಯ ಕಾರಣವಾಗುವ ಬದಲು ಅಲ್ಲಿನ ವಸತಿ ಮಾರುಕಟ್ಟೆಯು ಸಾಲದ ಬಿಕ್ಕಟ್ಟಿಗೆ ಸಿಲುಕಿದೆ. ಈ ಮಾರುಕಟ್ಟೆ
ಈಗ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ – ಬೆಲೆ ಏರಿಕೆ, ಮಿತಿಮೀರಿದ ಪೂರೈಕೆ, ಸಾಲಗಳ ಬಿಡುಗಡೆಯಲ್ಲಿ ಮಂದಗತಿ. ಈಸವಾಲುಗಳಿಂದ ಚೀನಾದ ಆರ್ಥಿಕ ಬೆಳವಣಿಗೆ ಮೇಲೆ ಗಮನಾರ್ಹ ಪರಿಣಾಮವಾಗಬಹುದು. ಮಿತಿಮೀರಿ ವಸತಿ ದರ ಏರಿಕೆ: ಚೀನಾ ಮಾರುಕಟ್ಟೆ ಎದುರಿಸುತ್ತಿರುವ ಸವಾಲುಗಳಲ್ಲಿ ಅತಿ ದೊಡ್ಡದು ವಸತಿ ಬೆಲೆ ಏರಿಕೆ. ೨೦೦೮ರಿಂದೀಚೆಗೆ ಚೀನಾದಲ್ಲಿ ಪ್ರತಿ ಮನೆಯ ಸರಾಸರಿ ಬೆಲೆಯು ಶೇ.೨೦೦ಕ್ಕಿಂತಲೂ ಹೆಚ್ಚಿದೆ. ಇದರಿಂದಾಗಿ ಅನೇಕ ನಾಗರಿಕರಿಗೆ ಸ್ವಂತ ಮನೆ ಖರೀದಿ ಗಗನ ಕುಸುಮವಾಗಿದೆ.

ಜಾಗತಿಕ ಆರ್ಥಿಕ ಬೆಳವಣಿಗೆಯು ಚೀನಾದ ಬೆಳವಣಿಗೆಯ ಮೇಲೆ ಬಹಳಷ್ಟು ಅವಲಂಬಿತವಾಗಿದೆಯಾದ್ದರಿಂದ ೨೦೨೩ರಲ್ಲಿ ಅದು ನಿರೀಕ್ಷೆಗಿಂತ ದುರ್ಬಲವಾಗಿರಲಿದೆ ಎಂಬುದು ಸ್ಪಷ್ಟವಾಗುತ್ತದೆ. ಚೀನಾದಲ್ಲಿ ವಸತಿ ಮಾರುಕಟ್ಟೆಯ ಬೆಲೆಏರಿಕೆಗೆ ಕಾರಣ ವಾಗಿರುವ ಹಲವು ಅಂಶಗಳಿವೆ. ಮನೆ ಮಾಲೀಕತ್ವವನ್ನು ಪ್ರೋತ್ಸಾಹಿಸುವ ಸರಕಾರದ ನೀತಿಯೇ ಮೊದಲನೆಯ ಅಂಶ.
ಸರಕಾರವು ಗ್ರಾಹಕರಿಗೆ ಗೃಹ ಖರೀದಿ ಸಾಲಗಳ ಪಾವತಿ ಸುಲಭವಾಗಿಸಿದೆ. ಹಾಗೆಯೇ ಮನೆ ಖರೀದಿದಾರರಿಗೆ ವಿಶೇಷ ಸಹಾಯ ಧನವನ್ನೂ ಒದಗಿಸುತ್ತದೆ. ಗೃಹ ಖರೀದಿಗೆ ಬೇಡಿಕೆ ಹೆಚ್ಚಲು ಇದು ಅತಿ ಮುಖ್ಯಕಾರಣವಾಗಿದೆ. ನಿರ್ಮಾಣಕ್ಕೆ ಸೂಕ್ತ ಭೂಮಿ ಯನ್ನು ಅಭಿವೃದ್ಧಿ ಮಾಡಿ, ಗೃಹ ನಿರ್ಮಾಣ ಸಂಸ್ಥೆಗಳಿಗೆ ಒದಗಿಸಬುದಾದಂಥ ಭೂಮಿ ಚೀನಾದ ನಗರಗಳಲ್ಲಿ ಸೀಮಿತ ಪ್ರಮಾಣದಲ್ಲಿದೆ. ಆದ್ದರಿಂದ ಮತ್ತಷ್ಟು ಬೆಲೆ ಏರಿಕೆಯಾಗುತ್ತಿದೆ.

ಚೀನಾ ವಿಶ್ವದಲ್ಲೇ ಎರಡನೆಯ ಅತಿ ದೊಡ್ಡ ಜನಸಂಖ್ಯೆಯನ್ನು ಹೊಂದಿದ್ದರೂ ಅಲ್ಲಿನ ಸರಕಾರವು ಅಭಿವೃದ್ಧಿಪಡಿಸ ಬಹುದಾದ ಭೂಮಿಯ ಪ್ರಮಾಣದ ಮೇಲೆ ಹಲವಾರು ನಿರ್ಬಂಧಗಳನ್ನು ಇರಿಸಿದೆ. ಹೀಗಾಗಿ ಹೊಸ ಮನೆಗಳ ಪೂರೈಕೆಯು ಸೀಮಿತವಾಗಿದೆ, ಈ ಕಾರಣದಿಂದ ಬೆಲೆಗಳು ವ್ಯಾಪಕವಾಗಿ ಏರುತ್ತಿವೆ.

ಅತಿಯಾದ ಪೂರೈಕೆ: ಹೆಚ್ಚುತ್ತಿರುವ ಬೆಲೆಗಳ ಜತೆಗೆ, ಚೀನಾದ ವಸತಿ ಮಾರುಕಟ್ಟೆಯು ಹಲವು ನಗರಗಳಲ್ಲಿ ಅತಿಯಾದ ಪೂರೈಕೆಯ ಸವಾಲುಗಳನ್ನೂ ಎದುರಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ, ಹೊಸ ಮನೆಗಳ ನಿರ್ಮಾಣದಲ್ಲಿ ವ್ಯಾಪಕ ಬೆಳವಣಿಗೆ ಕಂಡುಬಂದಿದೆ. ಆದರೆ, ಮನೆಗಳ ಬೇಡಿಕೆ ಪೂರೈಕೆಗೆ ತಕ್ಕಂತೆ ಇಲ್ಲದಿರುವುದರಿಂದ ಹಲವು ಮಾರುಕಟ್ಟೆಗಳಲ್ಲಿ ತೀವ್ರ ಬೆಲೆ ಇಳಿಕೆಯ ವಿಚಿತ್ರ ಪರಿಸ್ಥಿತಿ ನಿರ್ಮಾಣವಾಗಿದೆ.

ಇದು ಹಲವಾರು ಪ್ರೇತ ನಗರಗಳನ್ನು ಸೃಷ್ಟಿಸಿದೆ. ಆ ನಗರಗಳಲ್ಲಿ ಅಪಾರ ಸಂಖ್ಯೆಯಲ್ಲಿ ಖಾಲಿ ಬಿದ್ದಿರುವ ಮನೆಗಳಿವೆ. ಅಲ್ಲಿನ ಸರಕಾರ ಹೆಚ್ಚು ಮನೆಗಳನ್ನು ನಿರ್ಮಿಸಲು ಗೃಹ ನಿರ್ಮಾಣ ಸಂಸ್ಥೆಗಳನ್ನು ಉತ್ತೇಜಿಸಿದೆ. ಗೃಹ ನಿರ್ಮಾಣ ಸಂಸ್ಥೆಗಳಿಗೆ ಚೀನಾದ ಸರಕಾರ ಸಬ್ಸಿಡಿ ನೀಡಿ, ಸಾಲಗಳನ್ನು ಪಡೆಯಲು ಅನುಕೂಲ ಮಾಡಿಕೊಟ್ಟಿದೆ. ಇದರಿಂದ ಮನೆಗಳ ನಿರ್ಮಾಣ ಸಂಖ್ಯೆ ಅತಿ ಯಾಗಿ ಬೆಳೆದಿದೆ. ಮನೆ ಮಾಲೀಕತ್ವದ ಮೇಲಿನ ನಿರ್ಬಂಧಗಳನ್ನು ಸಡಿಲಗೊಳಿಸಿರುವುದರಿಂದ ಮನೆಗಳು ಹೆಚ್ಚಿನ ಪ್ರಮಾಣ ದಲ್ಲಿ ಖರೀದಿಗೆ ಲಭ್ಯವಿವೆ. ಹಿಂದೆ, ಚೀನಾದ ಶಾಶ್ವತ ನಿವಾಸಿಗಳು ಎಂದು ಪರಿಗಣಿಸಲ್ಪಟ್ಟವರಿಗೆ ಮಾತ್ರ ಮನೆಗಳ ಖರೀದಿಗೆ ಅವಕಾಶವಿತ್ತು. ಆದರೆ, ಈಗ ಹಾಗಿಲ್ಲ.

ಸಾಲ ಬಿಡುಗಡೆ ವಿಳಂಬ: ಚೀನಾದ ವಸತಿ ಮಾರುಕಟ್ಟೆ ಎದುರಿಸುತ್ತಿರುವ ಮತ್ತೊಂದು ಸವಾಲು ಎಂದರೆ ಸಾಲ ನೀಡಿಕೆಯ ಮಂದಗತಿ. ಇತ್ತೀಚಿನ ವರ್ಷಗಳಲ್ಲಿ, ಚೀನೀ ಬ್ಯಾಂಕ್‌ಗಳು ಗೃಹ ನಿರ್ಮಾಣ ಸಂಸ್ಥೆಗಳಿಗೆ ಮತ್ತು ಮನೆ ಖರೀದಿದಾರರಿಗೆ ಅತಿ ಹೆಚ್ಚು ಸಾಲಗಳನ್ನು ನೀಡಿವೆ. ಆದರೆ, ಈಗ ಈ ಸಾಲಗಳಿಗೆ ಸಂಬಂಧಿಸಿದ ಅಪಾಯಗಳ ಬಗ್ಗೆ ಸರಕಾರ ಕಳವಳ ವ್ಯಕ್ತಪಡಿಸಿದೆ. ಹೀಗಾಗಿ ಸರಕಾರವು ಸಾಲ ನೀಡಿಕೆಯ ಮಾನದಂಡಗಳನ್ನು ಬಿಗಿಗೊಳಿಸಲು ಪ್ರಾರಂಭಿಸಿದೆ, ಹೀಗಾಗಿ ಹೊಸ ಸಾಲಗಳನ್ನು ಪಡೆಯುವುದು ಕಷ್ಟಸಾಧ್ಯವಾಗಿದೆ.

ಸಾಲ ನೀಡಿಕೆಯ ನಿಧಾನಗತಿಯಿಂದ ಚೀನಾದ ವಸತಿ ಮಾರುಕಟ್ಟೆಯ ಮೇಲೆ ಗಮನಾರ್ಹ ಪರಿಣಾಮವಾಗುವ ಸಾಧ್ಯತೆಯಿದೆ. ಈಗ ಹೊಸ ಮನೆಗಳ ನಿರ್ಮಾಣ ಹಾಗೆಯೇ ಮನೆ ಖರೀದಿದಾರರಿಗೆ ಮನೆಗಳ ಖರೀದಿಗಳೆರಡೂ ಹೆಚ್ಚು ಕಷ್ಟಕರವಾಗಿವೆ. ಚೀನೀ ಆರ್ಥಿಕತೆಯ ಮೇಲೆ ಪರಿಣಾಮ ಚೀನಾದ ವಸತಿ ಮಾರುಕಟ್ಟೆ ಎದುರಿಸುತ್ತಿರುವ ಸವಾಲುಗಳು ಚೀನಾದ ಆರ್ಥಿಕತೆಯ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು. ವಸತಿ ಮಾರುಕಟ್ಟೆಯು ಚೀನಾದಲ್ಲಿ ಆರ್ಥಿಕ ಬೆಳವಣಿಗೆಯ ಪ್ರಮುಖ ಪ್ರೇರಕಾಂಶ ವಾಗಿದೆ. ಚೀನಾದ ಜಿಡಿಪಿಯ ಸುಮಾರು ಶೇ.೧೫ರಷ್ಟು ಪ್ರಮಾಣವನ್ನು ಅಲ್ಲಿನ ವಸತಿ ಮಾರುಕಟ್ಟೆ ಹೊ೦ದಿದೆ. ವಸತಿ ಮಾರುಕಟ್ಟೆಯ ನಿಧಾನಗತಿಯ ಬೆಳವಣಿಗೆ ಆರ್ಥಿಕ ಬೆಳವಣಿಗೆಯ ನಿಧಾನಕ್ಕೆ ಕಾರಣವಾಗಬಹುದು.

ಚೀನಾದಲ್ಲಿ ಉದ್ಯೋಗದ ಪ್ರಮುಖ ಮೂಲವಾಗಿ ಈ ವಸತಿ ಮಾರುಕಟ್ಟೆ ಹೊರಹೊಮ್ಮಿದೆ. ಅಲ್ಲಿನ ರಿಯಲ್ ಎಸ್ಟೇಟ್ ಉದ್ಯಮವು ಸುಮಾರು ೨ಕೋಟಿಗಿಂತ ಅಧಿಕ ಜನರಿಗೆ ಉದ್ಯೋಗ ಒದಗಿಸಿದೆ. ವಸತಿ ಮಾರುಕಟ್ಟೆಯಲ್ಲಿನ ನಿಧಾನಗತಿ
ಯಿಂದಾಗಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹಲವು ಲಕ್ಷಗಳ ಪ್ರಮಾಣದಲ್ಲಿ ಉದ್ಯೋಗ ನಷ್ಟವಾಗಬಹುದು. ಚೀನಾದ ಗೃಹ ಮಾರುಕಟ್ಟೆ ಎದುರಿಸುತ್ತಿರುವ ಸವಾಲುಗಳು ಸರಕಾರಕ್ಕೆ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಈಸವಾಲುಗಳನ್ನು ಎದುರಿಸಲು ಸರಕಾರವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ, ಆದರೆ ವಸತಿ ಮಾರುಕಟ್ಟೆಯಲ್ಲಿ ನಿಧಾನಗತಿಯನ್ನು ಹಿಮ್ಮೆಟ್ಟಿಸು ವೆಡೆಗೆ ಈ ಕ್ರಮಗಳು ಸಾಕಾಗುತ್ತಿಲ್ಲವೆಂಬುದು ಸ್ಪಷ್ಟವಾಗಿದೆ.

ಸರಕಾರದ ಪ್ರತಿಕ್ರಿಯೆ: ವಸತಿ ಮಾರುಕಟ್ಟೆ ಎದುರಿಸುತ್ತಿರುವ ಸವಾಲುಗಳನ್ನು ಅರಿತು ಚೀನಾ ಸರಕಾರವು ಅವುಗಳ ಪರಿಹಾರಕ್ಕಾಗಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ೨೦೧೭ರಲ್ಲಿ, ವಸತಿ ಮಾರುಕಟ್ಟೆಯ ನಿಯಂತ್ರಣಕ್ಕಾಗಿ ಚೀನಾ ಹಲವಾರು ಕ್ರಮಗಳನ್ನು ಪರಿಚಯಿಸಿತ್ತು. ಮನೆ ಖರೀದಿದಾರರು ಸಾಲಪಡೆಯುವ ಸಮಯದಲ್ಲಿ ನೀಡಬೇಕಾದ ಕನಿಷ್ಠ ಡೌನ್ ಪೇಮೆಂಟ್‌ನ ಹೆಚ್ಚಳ ಮತ್ತು ಸಾಲಗಳ ನೀಡಿಕೆಗಾಗಿ ಬ್ಯಾಂಕುಗಳು ಹೊಂದಿರಬೇಕಾದ ಬಂಡವಾಳದ ಹೆಚ್ಚಳ, ಈ ಎರಡು ನೂತನ ಕ್ರಮ ಗಳಾಗಿದ್ದವು. ಅಭಿವೃದ್ಧಿಗಾಗಿ ಲಭ್ಯವಿರುವ ಭೂಮಿಯ ಪೂರೈಕೆಯನ್ನು ಹೆಚ್ಚಿಸಲೂ ಸರಕಾರ ಕ್ರಮ ಕೈಗೊಂಡಿತ್ತು. ೨೦೧೮ ರಲ್ಲಿ, ಹೆಚ್ಚುವರಿ ೧೦೦ ಮಿಲಿಯನ್ ಚದರ ಮೀಟರ್ ಭೂಮಿಯನ್ನು ಅಭಿವೃದ್ಧಿಗಾಗಿ ಬಿಡುಗಡೆ ಮಾಡುವುದಾಗಿ ಸರಕಾರ ಘೋಷಿಸಿತ್ತು. ವಸತಿ ಮಾರುಕಟ್ಟೆಯ ಮುಂದಿರುವ ಸವಾಲುಗಳನ್ನು ಎದುರಿಸಲು ಸರಕಾರದ ಪ್ರಯತ್ನಗಳು ಸ್ವಲ್ಪಮಟ್ಟಿಗೆ ಯಶಸ್ವಿಯಾಗಿವೆ. ಹೀಗಿದ್ದರೂ, ವಸತಿ ಮಾರುಕಟ್ಟೆಯ ನಿಧಾನಗತಿಯ ಬೆಳವಣಿಗೆಯನ್ನು ತಡೆಗಟ್ಟಲು ಈ ಕ್ರಮಗಳು ಸಾಕಾಗು ತ್ತವೆಯೇ ಎಂಬುದೇ ಯಕ್ಷಪ್ರಶ್ನೆ.