Saturday, 14th December 2024

ಇಟಲಿಯ ನಿರ್ಗಮನಕ್ಕೆ ಕಾರಣ

ವಿಚಾರ ವೇದಿಕೆ

ಶಶಿಕುಮಾರ್‌ ಕೆ.

ಚೀನಾಕ್ಕೆ ಜಾಗತಿಕ ಮಟ್ಟದಲ್ಲಿ ಮತ್ತೊಂದು ಹಿನ್ನಡೆಯಾಗಿದೆ. ಅಧ್ಯಕ್ಷ ಷಿ ಜಿನ್‌ಪಿಂಗ್‌ರ ‘ಒನ್ ಬೆಲ್ಟ್, ಒನ್ ರೋಡ್’ (ಒಬಿಒಆರ್) ಎಂಬ ಮಹತ್ವಾ ಕಾಂಕ್ಷಿ ಯೋಜನೆಯಿಂದ ಇಟಲಿ ಹೊರಬಿದ್ದಿದೆ. ಇದರಿಂದಾಗಿ, ಭಾರತದ ಸುತ್ತ ಆರ್ಥಿಕ ಪಥ ನಿರ್ಮಿಸಿ ಹಿಡಿತ ಸಾಧಿಸುವ ಚೀನಾದ ಹುನ್ನಾರಕ್ಕೆ ಭಾರಿ ಹೊಡೆತ ಬಿದ್ದಂತಾಗಿದೆ. ಯುರೋಪ್ ಮತ್ತು ಏಷ್ಯಾ ಖಂಡಗಳನ್ನು ಸಂಪರ್ಕಿಸುವ ಪುರಾತನ ವ್ಯಾಪಾರ ಮಾರ್ಗಗಳನ್ನು ಪುನರುಜ್ಜೀವನಗೊಳಿಸುವ ಜಾಗತಿಕ ಮೂಲಸೌಕರ್ಯ ಯೋಜನೆ ಇದಾಗಿದ್ದು, ಇಟಲಿಯು ಚೀನಾದ ಜತೆಗೆ ಈ ಒಪ್ಪಂದಕ್ಕೆ ಕೈಜೋಡಿಸಿದ್ದ
ಏಕೈಕ ಜಿ-೭ ರಾಷ್ಟ್ರವಾಗಿತ್ತು.

ಹೂಡಿಕೆಗಳನ್ನು ಆಕರ್ಷಿಸಲು ಮತ್ತು ಚೀನಾ ಮಾರುಕಟ್ಟೆಗೆ ರಫ್ತು ಪ್ರವೇಶವನ್ನು ವಿಸ್ತರಿಸಲು ಈ ‘ಒಬಿಒಆರ್’ ಉಪಕ್ರಮಕ್ಕೆ ಪಾಲುದಾರನಾಗಲು ೪ ವರ್ಷಗಳ ಹಿಂದೆ ಇಟಲಿ ಸಹಿಹಾಕಿತ್ತು. ಆದರೆ ಅಲ್ಲಿಂದೀಚೆಗೆ ಚೀನಾಕ್ಕೆ ಇಟಲಿಯಿಂದ ಆಗುತ್ತಿರುವ ರಫ್ತು ಮೌಲ್ಯವು ೧೪.೫ ಶತಕೋಟಿ ಯುರೋ ಗಳಿಂದ ೧೮.೫ ಶತಕೋಟಿ ಯುರೋಗಳಿಗೆ ಏರಿಕೆಯಾದರೆ, ಚೀನಾದಿಂದ ಇಟಲಿಗೆ ಆಗುತ್ತಿರುವ ರಫ್ತು ಮೌಲ್ಯವು ೩೩.೫ ಶತಕೋಟಿ ಯುರೋಗಳಿಗೆ ಏರಿಕೆಯಾಗಿತ್ತು. ಇದರಿಂದಾಗಿ ಚೀನಾದೊಂದಿಗೆ ಇಟಲಿ ‘ವ್ಯಾಪಾರದ ಕೊರತೆ’ ಎದುರಿಸುವ ಸ್ಥಿತಿ ನಿರ್ಮಾಣವಾಗಿತ್ತು.

ಹೀಗಾಗಿ ಸದರಿ ಉಪಕ್ರಮದಿಂದ ಇಟಲಿ ನಿರ್ಗಮಿಸಿದೆ. ಈ ಹಿಂದೆ, ನವೆಂಬರ್ ಮೊದಲ ವಾರದಲ್ಲಿ ಫಿಲಿಪೈನ್ಸ್ ಈ ಯೋಜನೆಯಿಂದ ಹೊರಬಿದ್ದಿತ್ತು. ಆರ್ಥಿಕ ಮತ್ತು ರಾಜಕೀಯ ಕಾರಣಗಳಿಂದಾಗಿ ಫಿಲಿಪೈನ್ ನಲ್ಲಿನ ಚೀನಾದ ಎಲ್ಲಾ ನಿರ್ಣಾಯಕ ಹೂಡಿಕೆಗಳ ಮೇಲೆ ಈಗ ಅನುಮಾನ ವ್ಯಕ್ತವಾಗಿದ್ದು, ಇದು ಫಿಲಿಪೈನ್ಸ್-ಚೀನಾ ಸಂಬಂಧವು ಕುಸಿಯಲು ಕಾರಣವಾಗಿದೆ.

ರೈಲುಮಾರ್ಗ, ರಸ್ತೆಮಾರ್ಗ, ತೈಲ ಮತ್ತು ಅನಿಲ ಸಾಗಣೆಯ ಕೊಳವೆಮಾರ್ಗ ಹಾಗೂ ಇತರ ಮೂಲಸೌಕರ್ಯ ಯೋಜನೆಗಳ ಜಾಲವನ್ನು ಒಳಗೊಂಡಿರುವ ‘ಒಬಿಒಆರ್’ ಯೋಜನೆಯು ಚೀನಾದ ಪ್ರಧಾನ ಭೂಭಾಗದಿಂದ ಶುರುವಾಗಿ ಮಧ್ಯ ಏಷ್ಯಾ ಮತ್ತು ರಷ್ಯಾಕ್ಕೂ ವ್ಯಾಪಿಸುತ್ತದೆ. ಇದರ ಒಂದು ಕವಲು ಕಜಕಿಸ್ತಾನ್ ಮೂಲಕ, ಮತ್ತೊಂದು ಕವಲು ಮಂಗೋಲಿಯಾ ಮೂಲಕ ಹಾದು ಹೋಗುತ್ತವೆಯಾದರೂ ಎರಡೂ ಅಂತಿಮವಾಗಿ ಟ್ರಾನ್ಸ್-ಸೈಬೀರಿಯನ್ ರೈಲುಮಾರ್ಗದೊಂದಿಗೆ ಸಂಪರ್ಕ ಹೊಂದಿ ಮಾಸ್ಕೋ ಕಡೆಗೆ ಸಾಗುತ್ತವೆ. ಸಮುದ್ರಮಾರ್ಗವು ಚೀನಾದ ಪೂರ್ವಕರಾವಳಿ ಪ್ರದೇಶದಿಂದ ಶುರುವಾಗಿ ಆಗ್ನೇಯ ಏಷ್ಯಾ, ದಕ್ಷಿಣ ಏಷ್ಯಾ, ಕೊಲ್ಲಿ ಪ್ರದೇಶ, ಪೂರ್ವ ಆಫ್ರಿಕಾ ಮತ್ತು ಮೆಡಿಟರೇನಿಯನ್ ಪ್ರದೇಶಗಳ ಮೂಲಕ ಹಾದುಹೋಗುವ ಬಂದರುಗಳು ಮತ್ತು ಕರಾವಳಿ ಮೂಲಸೌಕರ್ಯಗಳ ಒಂದು ಜಾಲವಾಗಿದೆ. ಈ ಜಾಲವು ಪೈರೇಯಸ್ (ಗ್ರೀಸ್), ವೆನಿಸ್ (ಇಟಲಿ), ರಾಟರ್‌ಡ್ಯಾಮ್ (ನೆದರ್‌ಲ್ಯಾಂಡ್) ಮೂಲಕ ಹಾದು ಮೊಂಬಾಸಾದಲ್ಲಿ (ಕೀನ್ಯಾ) ಕೊನೆಗೊಳ್ಳುತ್ತದೆ.

ಒಬಿಒಆರ್ ಉಪಕ್ರಮದ ಭಾಗವಾದ ‘ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್’ (ಸಿಪಿಇಸಿ) ಯೋಜನೆಯಿಂದ ತನ್ನ ಆರ್ಥಿಕ ಸ್ಥಿತಿ ಏರುಗತಿ ಕಾಯ್ದುಕೊಳ್ಳುತ್ತದೆ ಎಂದು ಪಾಕಿಸ್ತಾನ ನಂಬಿಕೊಂಡಿದೆ. ಆದರೆ ಇದರಿಂದ ನಿಜಕ್ಕೂ ಲಾಭವಾಗುವುದು ಚೀನಾಕ್ಕೆ. ಪಾಕಿಸ್ತಾನದ ನೆಲವನ್ನು ಕಬಳಿಸುವುದರ ಜತೆಗೆ ತನ್ನ ಕರೆನ್ಸಿ ಯುವಾನ್‌ನ ಮೌಲ್ಯವಽಸಿಕೊಳ್ಳುವ ಕುತಂತ್ರಗಾರಿಕೆ ಚೀನಾದ್ದು. ಭಾರತ, ಅ-ನಿಸ್ತಾನ, ಇರಾನ್‌ನೊಂದಿಗೆ ಪಾಕಿಸ್ತಾನವು ಗಡಿ ತಕರಾರು ಹೊಂದಿರುವುದು ಗೊತ್ತಿದ್ದರೂ, ಪಾಕ್ ಆಕ್ರಮಿತ ಕಾಶ್ಮೀರದ ‘ಗಿಲ್ಗಿಟ್-ಬಾಲ್ಟಿಸ್ತಾನ್’ ವಿವಾದಿತ ಭೂಭಾಗದ ಮೂಲಕ ಹಾದುಹೋಗುವ ಈ ಯೋಜನೆಯಲ್ಲಿ ಹೂಡಿಕೆ ಮಾಡುವಂತೆ ಪಾಕಿಸ್ತಾನವನ್ನು ಪುಸಲಾಯಿಸುವಲ್ಲಿ ಚೀನಾ ಯಶಸ್ವಿಯಾಗಿದೆ. ರಕ್ಷಣಾ ವಿಷಯದಲ್ಲಿ ಪಾಕ್ ತನ್ನನ್ನು ಅವಲಂಬಿಸಿದೆ ಎಂದರಿತಿರುವ ಚೀನಾ, ಈ ಯೋಜನೆಯ ಮೂಲಕ ಈ ವಲಯದಲ್ಲಿ ತನ್ನ ಆರ್ಥಿಕ ಅಧಿಪತ್ಯ ಸ್ಥಾಪಿಸಲು ಮುನ್ನುಗ್ಗುತ್ತಿದೆ.

ಇದರಿಂದಾಗಿ ತನ್ನ ಸಾರ್ವಭೌಮತ್ವಕ್ಕೆ ಮತ್ತು ಪ್ರಾದೇಶಿಕ ವಲಯದ ಸಮಗ್ರತೆಗೆ ಧಕ್ಕೆಯಾಗುತ್ತದೆ ಎಂದು ಭಾರತ ಈ ಯೋಜನೆಯನ್ನು ವಿರೋಧಿಸಿದೆ.
ಒಬಿಒಆರ್ ಯೋಜನೆಯಿಂದ ದಕ್ಷಿಣ ಮತ್ತು ಮಧ್ಯ ಏಷ್ಯಾ ರಾಷ್ಟ್ರಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ ಎಂದು ಎಚ್ಚರಿಸಿರುವ
‘ಏಷ್ಯಾ ಮತ್ತು ಪೆಸಿಫಿಕ್ ಅಧ್ಯಯನ ಸಂಬಂಧಿತ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಆಯೋಗ’ (ಯುಎನ್‌ಎಸ್‌ಸಿಎಪಿ), ಈ ಯೋಜನೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮೂಲಸೌಕರ್ಯಗಳಿಗೆ ೪ ಟ್ರಿಲಿಯನ್ ಡಾಲರ್ (ಸುಮಾರು ೨೬ ಲಕ್ಷ ಕೋಟಿ ರು.) ವೆಚ್ಚವಾಗಲಿದೆ ಎಂದು ಅಂದಾಜಿಸಿದೆ.

ಈ ಪೈಕಿ ಏಷ್ಯಾ ವಲಯಕ್ಕೆಂದು ೧೧ ಲಕ್ಷ ಕೋಟಿ ರು. ವೆಚ್ಚವಾಗುವ ನಿರೀಕ್ಷೆಯಿದ್ದು, ಈ ಯೋಜನೆಯ ವ್ಯಾಪ್ತಿಯ ದೇಶಗಳ ಒಟ್ಟಾರೆ ಆರ್ಥಿಕ ಸ್ಥಿತಿ ಗಮನಿಸಿದರೆ, ಈ ಯೋಜನೆಯ ಹೂಡಿಕೆಯು ಅತ್ಯಂತ ಅಪಾಯಕಾರಿಯಾಗುವ ಲಕ್ಷಣ ಕಾಣುತ್ತಿದೆ ಎಂದಿದೆ ಈ ಆಯೋಗ. ಇದರ ವರದಿಯ ಪ್ರಕಾರ, ಪಾಕಿಸ್ತಾನ, ಕಜಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾಗಳೊಂದಿಗೆ ಚೀನಾ ಮಾಡಿಕೊಂಡಿರುವ ಒಪ್ಪಂದವು, ಈ ರಾಷ್ಟ್ರಗಳ ಜಿಡಿಪಿಗೆ ಸರಿಸುಮಾರು ಅರ್ಧದಷ್ಟು ಮತ್ತು ಅದಕ್ಕಿಂತಲೂ ಹೆಚ್ಚು!

ಏಷ್ಯಾ-ಪೆಸಿಫಿಕ್ ವಲಯದಲ್ಲಿ ಇಂಥದೊಂದು ಕಾರಿಡಾರ್ ನಿರ್ಮಿಸುವುದಾಗಿ ಅಮೆರಿಕ ೨೦೧೧ರಲ್ಲೇ ಘೋಷಿಸಿತ್ತು. ಅದರ ಮೊದಲ ಹಂತವಾಗಿ ‘ತುರ್ಕ್‌ಮೆನಿಸ್ತಾನ-ಅ-ನಿಸ್ತಾನ-ಪಾಕಿಸ್ತಾನ-ಭಾರತ’ (ಟಿಎಪಿಎ) ಮಾರ್ಗದಲ್ಲಿ ನೈಸರ್ಗಿಕ ಅನಿಲ ಪೂರೈಕೆ ಜಾಲದ ಸ್ಥಾಪನೆಗೆ ಚಾಲನೆ ನೀಡಲಾಗಿತ್ತು. ಇದಕ್ಕೆ ಹೊರತಾಗಿ ತಾನೇ ಮುಂದುವರಿದ ಚೀನಾ, ಹೊಸ ‘ಸಿಲ್ಕ್ ರೂಟ್ ಪ್ರಾಜೆಕ್ಟ್’ ರೂಪಿಸಿ ಅಮೆರಿಕವನ್ನು ಪಾಲುದಾರನಾಗಿ ಮಾಡಿಕೊಳ್ಳಲು ಬಯಸಿತ್ತು. ಆದರೆ ಅಮೆರಿಕ ಈ ಆಹ್ವಾನವನ್ನು ತಿರಸ್ಕರಿಸಿತ್ತು. ಒಂದೊಮ್ಮೆ ಈ ಪಾಲುದಾರಿಕೆ ಹೊಂದಿದ್ದರೆ ಡಾಲರ್ ಮೌಲ್ಯ ಕುಸಿಯುವ ಭೀತಿ ಅಮೆರಿಕಕ್ಕಿತ್ತು. ಚೀನಾದೊಂದಿಗೆ ಬಿಕ್ಕಟ್ಟು ಹೊಂದಿರುವ ಜಪಾನ್ ಕೂಡ ಇದರಲ್ಲಿ ಪಾಲ್ಗೊಳ್ಳಲಿಲ್ಲ.

ಚೀನಾದ ಜತೆಗೆ ಭಾರತಕ್ಕಿರುವುದು ಅತ್ತ ಮಿತ್ರತ್ವವೂ ಅಲ್ಲದ ಇತ್ತ ಶತ್ರುತ್ವವೂ ಅಲ್ಲದ ಒಂದು ರೀತಿಯ ವ್ಯಾವಹಾರಿಕ ಸಂಬಂಧ. ಇತಿಹಾಸ ಗಮನಿಸಿದರೆ, ಭಾರತದ ವಿರುದ್ಧ ಚೀನಾ ಕತ್ತಿ ಮಸೆದಿದ್ದೇ ಹೆಚ್ಚು. ಹೀಗಾಗಿ ಚೀನಾದ ಪ್ರತಿ ನಡೆಯನ್ನೂ ಭಾರತ ಶಂಕೆಯಿಂದಲೇ ನೋಡಬೇಕಾಗಿ
ಬಂದಿದೆ ಹಾಗೂ ಚೀನಾದ ಈಗಿನ ಯೋಜನೆಯನ್ನೂ ಭಾರತ ಕೂಲಂಕಷವಾಗಿ ಅವಲೋಕಿಸುತ್ತಿದೆ. ಏಕೆಂದರೆ, ಈ ಯೋಜನೆಯಲ್ಲಿ ವಾಣಿಜ್ಯೋದ್ದೇಶದ ಸಂಪರ್ಕ ಜಾಲವನ್ನು ಚೀನಾ ಹೇಗೆ ಬಳಸಿಕೊಳ್ಳಲಿದೆ ಎಂಬುದರ ಸ್ಪಷ್ಟ ಚಿತ್ರಣವಿಲ್ಲ. ನೆರೆಯ ಬಾಂಗ್ಲಾದೇಶ, ಮ್ಯಾನ್ಮಾರ್,
ಶ್ರೀಲಂಕಾ ಮತ್ತು ಪಾಕಿಸ್ತಾನಗಳಲ್ಲಿ ಈಗಾಗಲೇ ಸೇನಾನೆಲೆ ಸ್ಥಾಪಿಸಿರುವ ಚೀನಾ, ಈಗ ಪ್ರಸ್ತಾಪಿಸಿರುವ ಯೋಜನೆಯೂ ಇಂಥದೇ ‘ವ್ಯೂಹಾತ್ಮಕ
ಸುತ್ತುಗಟ್ಟುವಿಕೆ’ಯೇ ಆಗಿದೆ. ಇನ್ನು ‘ಹಿಮಾಲಯನ್ ಇಕನಾಮಿಕ್ ಜೋನ್’ ಕೂಡ ಆಯಕಟ್ಟಿನ ಪ್ರದೇಶದಲ್ಲಿ ಪ್ರಾಬಲ್ಯ ಸಾಧಿಸುವ ಚೀನಾದ
ಹುನ್ನಾರವೇ ಆಗಿದೆ.

ಪ್ರಧಾನಿ ಮೋದಿಯವರ ಒತ್ತಾಸೆಯ ‘ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್’ ರಚನೆಗೆ ಇತ್ತೀಚಿನ ಜಿ-೨೦ ಶೃಂಗಸಭೆಯಲ್ಲಿ ಭಾಗಿಯಾದ ವಿಶ್ವನಾಯಕರು ಸಮ್ಮತಿಸಿದರು. ಭಾರತ, ಯುಎಇ, ಸೌದಿ ಅರೇಬಿಯಾ, ಐರೋಪ್ಯ ಒಕ್ಕೂಟ, ಫ್ರಾನ್ಸ್, ಇಟಲಿ, ಜರ್ಮನಿ, ಅಮೆರಿಕಗಳನ್ನು ಒಳಗೊಂಡಿರುವ ಈ ಕಾರಿಡಾರ್ ರಚನೆಯಿಂದ ಈ ವಲಯದಲ್ಲಿ ವಾಣಿಜ್ಯ ವ್ಯವಹಾರ ಮತ್ತು ಸಂಪರ್ಕ ಹೆಚ್ಚಲಿದೆ. ಮೂಲಸೌಕರ್ಯಗಳನ್ನು ವರ್ಧಿಸುವ ಚಾರಿತ್ರಿಕ ಉಪಕ್ರಮವಾಗಿರುವ ಈ ಕಾರಿಡಾರ್, ಇಡೀ ವಿಶ್ವದ ಸುಸ್ಥಿರ ಅಭಿವೃದ್ಧಿಯ ಪಥಕ್ಕೆ ಉತ್ತಮ ಉದಾಹರಣೆಯಾಗಲಿದೆ (ಹಿಂದೂ ಮಹಾಸಾಗರದಡಿಯಲ್ಲಿನ ರೇಲ್ವೇ ಸಂಪರ್ಕಕ್ಕೆ ಹೂಡಿಕೆ ಮಾಡುವುದಾಗಿ ಅಮೆರಿಕ ಘೋಷಿಸಿದೆ).

ಉದ್ಯೋಗ ಸೃಷ್ಟಿ, ಆಹಾರ ಭದ್ರತೆಯನ್ನು ಹೆಚ್ಚಿಸಲಿರುವ ಈ ಉಪಕ್ರಮದಿಂದಾಗಿ ಭಾರತ, ಮಧ್ಯಪ್ರಾಚ್ಯ ಮತ್ತು ಯುರೋಪ್ ದೇಶಗಳ ನಡುವಿನ ಪ್ರಯಾಣದ ಅವಽ ಶೇ.೪೦ರಷ್ಟು ಇಳಿಕೆಯಾಗಲಿದೆ. ಉದ್ದೇಶಿತ ಕಾರಿಡಾರ್ ಮೂಲಕ ಈ ೩ ಮಹತ್ವದ ವಲಯಗಳ ಮಧ್ಯೆ ಡೇಟಾ ವ್ಯವಸ್ಥೆ, ರೈಲುಜಾಲ, ಬಂದರು, ವಿದ್ಯುತ್ ಗ್ರಿಡ್‌ಗಳ ಸಂಪರ್ಕ ಏರ್ಪಡಲಿದೆ. ವಾಣಿಜ್ಯೋದ್ದೇಶದಿಂದ ಈ ಕಾರಿಡಾರ್ ಅನ್ನು ರೂಪಿಸಲಾಗುತ್ತಿದ್ದರೂ, ರಾಜಕೀಯ ಪರಿವರ್ತನೆ ಗಳಿಗೆ ಹಾದಿಮಾಡಿಕೊಡುವ ಸಾಧ್ಯತೆಗಳನ್ನೂ ಇದು ಹೊಂದಿದೆ. ಚೀನಾದ ‘ಒಬಿಒಆರ್’ ಯೋಜನೆಯು ಮೇಲ್ನೋಟಕ್ಕೆ ಜಗತ್ತಿನ ದೇಶಗಳನ್ನು ಬೆಸೆಯುವಂಥ ಯೋಜನೆ ಎಂದು ಕಾಣುತ್ತದೆ; ಆದರೆ ಈ ಯೋಜನೆಯ ಮೂಲಕ ಜಗತ್ತಿನ ವಿವಿಧ ದೇಶಗಳನ್ನು ದಿವಾಳಿಯೆಬ್ಬಿಸಿ  ಅವನ್ನು ತನ್ನ ಅಧೀನ ರಾಷ್ಟ್ರಗಳನ್ನಾಗಿ ಮಾಡಿಕೊಳ್ಳುವ ಹುನ್ನಾರ ಚೀನಾದ್ದು.

ಹೀಗಾಗಿಯೇ ಒಂದೊಂದೇ ರಾಷ್ಟ್ರ ಈ ಯೋಜನೆಯಿಂದ ನಿರ್ಗಮಿಸುತ್ತಿದೆ; ಮುಂಬರುವ ದಿನಗಳಲ್ಲಿ ಮತ್ತಷ್ಟು ರಾಜ್ಯಗಳು ಈ ಯೋಜನೆಯಿಂದ
ಹೊರಗಡಿಯಿಟ್ಟರೂ ಅಚ್ಚರಿಯಿಲ್ಲ.

(ಲೇಖಕರು ಹವ್ಯಾಸಿ ಬರಹಗಾರರು)