Wednesday, 11th December 2024

Chirag Paswan Column: ಆಹಾರ ಸುರಕ್ಷತೆ, ಭದ್ರತೆಗೆ ತಂತ್ರಜ್ಞಾನದ ಒತ್ತಾಸೆ

ಅನ್ನಸೂಕ್ತ

ಚಿರಾಗ್‌ ಪಾಸ್ವಾನ್

ಆಹಾರದ ಪ್ರಾಮುಖ್ಯವು ಮೂಲಭೂತ ಪೋಷಣೆಯ ವ್ಯಾಪ್ತಿಯನ್ನು ಮೀರಿ ವಿಸ್ತರಿಸಿದೆ. ಇದು ನಮ್ಮ ಹಬ್ಬಗಳು, ಸಾಮಾಜಿಕ ಕೂಟಗಳು ಮತ್ತು ಆಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ನಮ್ಮ ಸಾಂಸ್ಕೃತಿಕ ಗುರುತನ್ನು ಮತ್ತು ಸಾಮಾಜಿಕ ಚಲನಶೀಲತೆ ಯನ್ನು ಪ್ರತಿಬಿಂಬಿಸುತ್ತದೆ.

ಆರ್ಥಿಕವಾಗಿ, ಆಹಾರ ಉದ್ಯಮವು ಬೆಳವಣಿಗೆ ಯನ್ನು ಹೆಚ್ಚಿಸುತ್ತದೆ, ಉದ್ಯೋಗಗಳನ್ನು ಸೃಷ್ಟಿಸುತ್ತದೆ, ಗ್ರಾಮೀಣ ವಲಯ ಹಾಗೂ ಕೃಷಿ ಅಭಿವೃದ್ಧಿಯನ್ನು ಪೋಷಿಸುತ್ತದೆ. ಇದು ದೇಶೀಯ ಬಳಕೆ ಮತ್ತು ರಫ್ತು ಇವೆರಡರ ಮೂಲಕ ರಾಷ್ಟ್ರೀಯ ಆರ್ಥಿಕತೆಗೆ ಗಮನಾರ್ಹ ವಾದ ಕೊಡುಗೆ ನೀಡುತ್ತದೆ. ಭಾರತವು ತನ್ನ ಸ್ವಾತಂತ್ರ್ಯದ 78ನೇ ವರ್ಷದಲ್ಲಿ ‘ವಿಕಸಿತ ಭಾರತ್’ ಚಿಂತನೆಯೊಂದಿಗೆ ನಿರ್ದಿಷ್ಟ ಗುರಿಯತ್ತ ಸಾಗುತ್ತಿರುವಾಗ, ಆಹಾರ ಸುರಕ್ಷತೆ ಮತ್ತು ಭದ್ರತೆ ಯನ್ನು ಆಧುನೀಕರಿಸಿ ಮುನ್ನಡೆಸುವುದು ನಿರ್ಣಾಯಕವಾಗಿದೆ.

ಇದನ್ನೂ ಓದಿ: ಆರೋಗ್ಯಕ್ಕೆ ತರವೇ ತರತರ ತರಕಾರಿ ?

ಗ್ರಾಹಕರನ್ನು ತಲುಪುವ ಆಹಾರವು ಮಾಲಿನ್ಯಕಾರಕಗಳಿಂದ ಮುಕ್ತವಾಗಿದೆ, ಸುರಕ್ಷಿತವಾಗಿದೆ ಎಂದು ಖಚಿತಪಡಿಸಿ ಕೊಳ್ಳುವುದು, ಎಲ್ಲರಿಗೂ ಸಾಕಷ್ಟು ಪೌಷ್ಟಿಕ ಆಹಾರ ಲಭ್ಯವಿದೆ ಎಂಬುದನ್ನು ಖಾತ್ರಿಪಡಿಸಲು ಆಹಾರ ನಷ್ಟ ಮತ್ತು ತ್ಯಾಜ್ಯವನ್ನು ಕಡಿಮೆ ಮಾಡುವುದು ಇದರಲ್ಲಿ ಸೇರಿದೆ. ಆಹಾರ ನಷ್ಟ ಮತ್ತು ತ್ಯಾಜ್ಯವನ್ನು, ವಿಶೇಷವಾಗಿ ಹಣ್ಣುಗಳು ಮತ್ತು ತರಕಾರಿಗಳಂಥ ಬೇಗನೆ ಹಾಳಾಗುವ ವಸ್ತುಗಳ ನಷ್ಟವನ್ನು ತಡೆಯುವ ನಿಟ್ಟಿನಲ್ಲಿ ಪರಿಹಾರ ಗಳನ್ನು ಹುಡುಕುವುದು ಆಹಾರ ಭದ್ರತೆ ಮತ್ತು ಸುಸ್ಥಿರತೆಯನ್ನು ಹೆಚ್ಚಿಸಲು ನಿರ್ಣಾಯಕವಾಗಿದೆ. ಇದು ನಮ್ಮ ರೈತರಿಗೆ ಲಾಭದಾಯಕ ಬೆಲೆಗಳನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.

ಇದಲ್ಲದೆ, ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ವ್ಯಾಪಾರವು ಬೆಳೆದಂತೆ, ಪರಿಣಾಮಕಾರಿ ಆಹಾರ ಸುರಕ್ಷತಾ ನಿರ್ವಹಣೆ ಹೆಚ್ಚು ಮುಖ್ಯವಾಗುತ್ತದೆ. ಅನೇಕ ಅಭಿವೃದ್ಧಿ ಹೊಂದಿದ ಆರ್ಥಿಕತೆಗಳು ಆಮದು ಮಾಡ ಲಾಗುವ ಆಹಾರದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅತ್ಯಂತ ಕಠಿಣ ಆಹಾರ ಸುರಕ್ಷತಾ ನಿಯಮಗಳು ಮತ್ತು ಪದ್ಧತಿಗಳನ್ನು ಅಳವಡಿಸಿಕೊಂಡಿವೆ. ಆಹಾರ ಸುರಕ್ಷತೆಗೆ ಸಂಬಂಧಿಸಿದ ಘಟನೆಗಳು ಸಾರ್ವಜನಿಕ ಆರೋಗ್ಯ ಅಪಾಯಗಳು, ಗ್ರಾಹಕರ ವಿಶ್ವಾಸ ಕಡಿಮೆಯಾಗುವುದು, ಆಹಾರ ಪೂರೈಕೆ ಹಾಗೂ ಬೆಲೆ ಸ್ಥಿರತೆಯಲ್ಲಿ ಅಸ್ತವ್ಯಸ್ತ ಸ್ಥಿತಿ ಸೇರಿದಂತೆ ಗಂಭೀರ ಆರ್ಥಿಕ ಪರಿಣಾಮಗಳನ್ನು ಉಂಟುಮಾಡಬಹುದು.

ಆದ್ದರಿಂದ, ಆಹಾರ ಸುರಕ್ಷತೆಯನ್ನು ಕಾಪಾಡುವುದು ಸಾರ್ವಜನಿಕ ಆರೋಗ್ಯವನ್ನು ರಕ್ಷಿಸಲು ಮಾತ್ರವಲ್ಲದೆ ಆರ್ಥಿಕ ಅಭಿವೃದ್ಧಿಯನ್ನು ಬೆಂಬಲಿಸಲು, ಅಂತಾರಾಷ್ಟ್ರೀಯ ವ್ಯಾಪಾರವನ್ನು ಉತ್ತೇಜಿಸಲು ಮತ್ತು ಮಾರುಕಟ್ಟೆ ಲಭ್ಯತೆ/ಪ್ರವೇಶವನ್ನು ಉಳಿಸಿಕೊಳ್ಳಲು ಅತ್ಯಗತ್ಯ. ಆಹಾರ ಸುರಕ್ಷತೆ ಮತ್ತು ಭದ್ರತೆಯ ಸಮಸ್ಯೆಗಳನ್ನು ನಿವಾರಿ ಸುವ ಮತ್ತು ಅದರ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಪೂರೈಸುವ ಭಾರತದ ಬದ್ಧತೆಗೆ ಅನುಗುಣವಾಗಿ, 2024- 25ರ ಕೇಂದ್ರ ಬಜೆಟ್ ಎಂಎಸ್‌ಎಂಇ ವಲಯದಲ್ಲಿ ೫೦ ಬಹು-ಉತ್ಪನ್ನ ಆಹಾರ ವಿಕಿರಣ ಘಟಕಗಳನ್ನು ಸ್ಥಾಪಿಸಲು ಹಣಕಾಸನ್ನು ಒದಗಿಸಿದೆ.

ಇದನ್ನೂ ಓದಿ: ಆರೋಗ್ಯಕ್ಕಾಗಿ ನೀರು- ಹೇಗೆ, ಎಷ್ಟು, ಯಾವಾಗ ?

ಆಹಾರ ವಿಕಿರಣ ತಂತ್ರಜ್ಞಾನವು ಕೃಷಿ ಆಹಾರ ಉತ್ಪನ್ನಗಳ ಶೆಲ್ಫ್ ಲೈಫ್ (ಆಹಾರವು ಬಳಕೆಗೆ‌ ಸೂಕ್ತವಾಗಿ ಉಳಿಯು ವ ಅವಧಿ ಮತ್ತು ಸುರಕ್ಷತೆಯನ್ನು ವಿಸ್ತರಿಸುವುದರಿಂದ ಇದು ಆಹಾರ ಸುರಕ್ಷತೆ ಮತ್ತು ಭದ್ರತೆಯೆಡೆಗಿನ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ; ಉತ್ಪಾದನೆ ಮತ್ತು ಪೂರೈಕೆ ಸರಪಳಿಯಲ್ಲಿ ಆಹಾರ ನಷ್ಟವನ್ನು ಕಡಿಮೆ ಮಾಡುವಾಗ ಅವು ಗ್ರಾಹಕರನ್ನು ಸೂಕ್ತ ಸ್ಥಿತಿಯಲ್ಲಿ ತಲುಪುವುದನ್ನು ಖಚಿತಪಡಿಸುತ್ತದೆ. ಆಹಾರವನ್ನು ವಿಕಿರಣ ಕ್ಕೆ ಒಡ್ಡುವುದೆಂದರೆ, ಬಹಳ ಎಚ್ಚರಿಕೆಯಿಂದ ನಿಯಂತ್ರಿತ ಪರಿಸರದಲ್ಲಿ ಪ್ಯಾಕ್ ಮಾಡಿದ ಆಹಾರ ವನ್ನು ಅಥವಾ ಬೃಹತ್ ಪ್ರಮಾಣದಲ್ಲಿ ಆಹಾರವನ್ನು ಅಯೋನೈಜಿಂಗ್ ವಿಕಿರಣಕ್ಕೆ ಒಡ್ಡುವುದನ್ನು ಅದು ಒಳಗೊಂಡಿ ರುತ್ತದೆ. ಈ ವಿಧಾನವು ಹಾನಿಕಾರಕ ಸೂಕ್ಷ್ಮಜೀವಿಗಳನ್ನು ನಿವಾರಿಸುವ ಮೂಲಕ ಆಹಾರದಿಂದ ಬರುವ ಕಾಯಿಲೆ ಗಳ ಅಪಾಯವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ. ಇದು ಕೊಳೆಯುವ ಪ್ರಕ್ರಿಯೆಯನ್ನು ನಿಧಾನ ಗೊಳಿಸುವ ಮೂಲಕ ಮತ್ತು ಹಾಳಾಗಲು ಕಾರಣವಾಗುವ ಜೀವಿಗಳನ್ನು ನಾಶಪಡಿ ಸುವ ಮೂಲಕ ಆಹಾರ ಹಾಳಾಗುವುದನ್ನು ತಡೆಯುತ್ತದೆ.

ಅದೇ ಸಮಯದಲ್ಲಿ ಅಕಾಲಿಕ ಅಥವಾ ಅವಧಿಪೂರ್ವ ಮಾಗುವಿಕೆ, ಮೊಳಕೆಯೊಡೆಯುವಿಕೆಯನ್ನು ವಿಳಂಬ ಗೊಳಿಸುವ ಮೂಲಕ ಆಹಾರ ನಷ್ಟವನ್ನು ಕಡಿಮೆ ಮಾಡುತ್ತದೆ. ಇದು ಆಹಾರ ಉತ್ಪನ್ನಗಳ ಶೆಲ ಜೀವಿತಾವಧಿ
ಯನ್ನು ವಿಸ್ತರಿಸುವಲ್ಲಿ ರಾಸಾಯನಿಕ ಸಂರಕ್ಷಕಗಳ ಅಗತ್ಯವನ್ನು ಕಡಿಮೆ ಮಾಡಿ ಆ ಮೂಲಕ ಹೆಚ್ಚು ಸುಸ್ಥಿರ
ಆಹಾರ ಪೂರೈಕೆ ಸರಪಳಿಗೆ ಕೊಡುಗೆ ನೀಡುತ್ತದೆ. ವಿಕಿರಣ ಸಂಸ್ಕರಣೆಯಲ್ಲಿ ಸಾಮಾನ್ಯವಾಗಿ ಅಪೇಕ್ಷಿತ ಪರಿಣಾಮಗಳನ್ನು ಸಾಧಿಸಲು ಕೇವಲ ಒಂದು ಬಾರಿ ವಿಕಿರಣಕ್ಕೆ ಒಡ್ಡುವಿಕೆಯ ಚಿಕಿತ್ಸೆ ಅಗತ್ಯವಿರುತ್ತದೆ. ಇದು ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ, ಆಹಾರ ಸುರಕ್ಷತಾ ಪದ್ಧತಿಗಳನ್ನು ಸರಳಗೊಳಿಸುತ್ತದೆ ಮತ್ತು ಆಹಾರ ಪೂರೈಕೆ ಸರಪಳಿಯಲ್ಲಿ ವೆಚ್ಚ ಉಳಿತಾಯಕ್ಕೆ ಕೊಡುಗೆ ನೀಡುತ್ತದೆ.

ಆಹಾರ ಸಂರಕ್ಷಣೆಗಾಗಿ ವಿಕಿರಣವನ್ನು ಬಳಸುವ ಪರಿಕಲ್ಪನೆಯು ಹೊಸದೇನಲ್ಲ. ಹಣ್ಣುಗಳು, ತರಕಾರಿಗಳು,
ಸೊಪ್ಪುಗಳು, ಮಾಂಸ, ಮೀನು ಇತ್ಯಾದಿಗಳನ್ನು ಬಿಸಿಲಿನಲ್ಲಿ ಒಣಗಿಸುವಂಥ ಸಾಂಪ್ರದಾಯಿಕ ವಿಧಾನಗಳನ್ನು
ಶತಮಾನಗಳಿಂದ ಆಹಾರ ಸಂರಕ್ಷಣೆಗಾಗಿ ಬಳಸಲಾಗುತ್ತಿದೆ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆಯ (ಎಫ್ ಎಒ) ಜಂಟಿ ಆಹಾರ ಗುಣಮಟ್ಟ ಕಾರ್ಯಕ್ರಮದ‌ ಭಾಗವಾದ ಕೋಡೆಕ್ಸ್ ಅಲಿಮೆಂಟರಿಯಸ್ ಆಯೋಗ
ಜಾಗತಿಕ ಮಾನದಂಡಗಳನ್ನು ನಿಗದಿ ಮಾಡಿದ ನಂತರ ಆಹಾರ‌ ವಿಕಿರಣ ತಂತ್ರಜ್ಞಾನದಲ್ಲಿ ಆಧುನಿಕ ಆಸಕ್ತಿ ಹೆಚ್ಚಾಗಿದೆ.

ಆಹಾರ ವಿಕಿರಣವು ಅಡುಗೆಯಂತೆಯೇ ಎಲ್ಲಾ ಅಂಶಗಳಲ್ಲಿ ಆಹಾರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸುರಕ್ಷಿತ ಮತ್ತು ಪರಿಣಾಮಕಾರಿ ವಿಧಾನವಾಗಿದೆ. ಇದು ವ್ಯಾಪಕವಾಗಿ ಅಳವಡಿಸಿಕೊಳ್ಳಲ್ಪಟ್ಟಿದ್ದು, ವಿಶೇಷವಾಗಿ ಅಮೆರಿಕ, ಐರೋಪ್ಯ ಒಕ್ಕೂಟ, ಜಪಾನ್, ಆಸ್ಟ್ರೇಲಿಯಾ ಮತ್ತು ಕೆನಡಾದಂಥ ಸುಧಾರಿತ ಆಹಾರ ಸುರಕ್ಷತಾ ಮಾನದಂಡಗಳನ್ನು ಹೊಂದಿರುವ ದೇಶಗಳಲ್ಲಿ ಇದನ್ನು ದೇಶೀಯ ಮತ್ತು ರಫ್ತು ಮಾರುಕಟ್ಟೆಗಳಲ್ಲಿ ವ್ಯಾಪಕ ವಾಗಿ ಬಳಸಲಾಗುತ್ತಿದೆ. 20 ವರ್ಷಗಳ ನಿಷೇಧದ ನಂತರ ಭಾರತೀಯ ಮಾವಿನಹಣ್ಣುಗಳನ್ನು ಅಮೆರಿಕಕ್ಕೆ ರಫ್ತು ಮಾಡಲು ಅನುಮತಿಸಿದ 2012ರ ಒಪ್ಪಂದವು ಅದರ ಪರಿಣಾಮದ ಗಮನಾರ್ಹ ಉದಾಹರಣೆಯಾಗಿದೆ. ಕೀಟಗಳ ಬೆದರಿಕೆ ಯನ್ನು ತೊಡೆದುಹಾಕಲು ಅಥವಾ ಗಮನಾರ್ಹವಾಗಿ ಕಡಿಮೆಮಾಡಲು, ಆ ಮೂಲಕ ಅಮೆರಿಕದ ದೇಶೀಯ ಕೃಷಿಯನ್ನು ರಕ್ಷಿಸಲು ರಫ್ತು ಮಾಡುವ ಮೊದಲು ತನ್ನ ಮಾವಿನಹಣ್ಣುಗಳನ್ನು ವಿಕಿರಣಕ್ಕೆ ಒಳಪಡಿ ಸಲು ಭಾರತ ಒಪ್ಪಿಕೊಂಡಿದ್ದರಿಂದ ಈ ಪ್ರಗತಿಯನ್ನು ಸಾಧಿಸಲಾಯಿತು.

ದೇಶಾದ್ಯಂತ ೩೪ ವಿಕಿರಣ ಸಂಸ್ಕರಣಾ ಸೌಲಭ್ಯಗಳನ್ನು ಸ್ಥಾಪಿಸುವ ಮೂಲಕ ಭಾರತವು ಗಮನಾರ್ಹ ಪ್ರಗತಿ ಸಾಧಿಸಿದೆ. ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ (ಎಂಒಎಫ್ಟಿಐ) ಈ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. ಈ ಪೈಕಿ 16 ಸೌಲಭ್ಯ‌ಗಳು ಎಂಒಎಫ್‌ ಟಿಐ ಬೆಂಬಲವನ್ನು ಪಡೆಯುತ್ತಿವೆ*. ಈ ಪ್ರಗತಿ ಶ್ಲಾಘನೀಯವಾಗಿದ್ದರೂ, ಸೌಲಭ್ಯಗಳ ಸಂಖ್ಯೆ ಮತ್ತು ವಿತರಣೆಯನ್ನು ವಿಸ್ತರಿಸುವು ದರಿಂದ ನಮ್ಮ ಕೃಷಿ ಆಹಾರ ಮಾರುಕಟ್ಟೆಯ ಹೆಚ್ಚುತ್ತಿರುವ ಬೇಡಿಕೆಗಳನ್ನು ಪೂರೈಸುವ ನಮ್ಮ ಸಾಮರ್ಥ್ಯ ಮತ್ತಷ್ಟು ಹೆಚ್ಚಾಗುತ್ತದೆ.

ಆದಾಗ್ಯೂ, ಆಹಾರ ವಿಕಿರಣ ಸೌಲಭ್ಯಗಳ ವ್ಯಾಪಕ ಕಾರ್ಯಾರಂಭವು ಬೃಹತ್ ಬಂಡವಾಳ ವೆಚ್ಚಗಳಿಂದಾಗಿ
ನಿರ್ಬಂಧಿಸಲ್ಪಟ್ಟಿದೆ. ೧ ಎಂಸಿಐ ಕೋಬಾಲ್ಟ 60 ಮೂಲದೊಂದಿಗೆ ವಿಕಿರಣ ಸೌಲಭ್ಯವನ್ನು ಸ್ಥಾಪಿಸಲು ಭೂಮಿ ಮತ್ತು ಹೆಚ್ಚುವರಿ ಮೂಲಸೌಕರ್ಯ ವೆಚ್ಚಗಳನ್ನು ಹೊರತುಪಡಿಸಿ ಸುಮಾರು 25 ರಿಂದ 30 ಕೋಟಿ ರು.ಗಳ ಹೂಡಿಕೆಯ ಅಗತ್ಯವಿದೆ. ಇದರ ಕಾರ್ಯಾರಂಭ ಪ್ರಕ್ರಿಯೆಯು ಹಲವಾರು ನಿರ್ಣಾಯಕ ಹಂತಗಳನ್ನು ಒಳಗೊಂಡಿದೆ. ಇದರಲ್ಲಿ ಪ್ರಸ್ತಾವನೆ ಪರಿಶೀಲನೆ, ಅನುಮೋದನೆ, ಸೈಟ್ ಕ್ಲಿಯರೆ, ಸ್ಥಾವರ ನಿರ್ಮಾಣ, ಮೂಲ ಸ್ಥಾಪನೆ, ಸುರಕ್ಷತಾ ಮೌಲ್ಯಮಾಪನಗಳು ಮತ್ತು ಮಾರ್ಗದರ್ಶನ, ಮೇಲ್ವಿಚಾರಣೆ, ಕಾರ್ಯಾರಂಭ ಮತ್ತು ವಿಕಿರಣ ಮೂಲಗಳ ಸಾಂದರ್ಭಿಕ ಬದಲಾವಣೆ ಸೇರಿದಂತೆ ನಿರ್ವಹಣೆಯೂ ಒಳಗೊಂಡಿದೆ.

ಭಾಭಾ ಪರಮಾಣು ಸಂಶೋಧನಾ ಕೇಂದ್ರ ಮತ್ತು ಪರಮಾಣು ಶಕ್ತಿ ನಿಯಂತ್ರಣ ಮಂಡಳಿಯಂಥ ಪ್ರಮುಖ
ಸಂಸ್ಥೆಗಳು ಈ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡುತ್ತವೆ. ಈ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಇರುವ ಆರಂಭಿಕ ಹೆಚ್ಚಿನ ಬಂಡವಾಳ ವೆಚ್ಚಗಳ ಹೊರತಾಗಿಯೂ, ಹೂಡಿಕೆದಾರರಿಗೆ ಗಣನೀಯ ಅವಕಾಶಗಳಿವೆ. ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸುರಕ್ಷಿತ, ದೀರ್ಘಕಾಲ ಬಾಳುವ ಆಹಾರ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯು ಲಾಭದಾಯಕ ಹೂಡಿಕೆ ಅವಕಾಶವನ್ನು ಒದಗಿಸುತ್ತದೆ. ಆಹಾರ ವಿಕಿರಣ ಸೌಲಭ್ಯಗಳು ಒದಗಿಸುವ ಆಹಾರ ಸುರಕ್ಷತೆಯನ್ನು ಹೆಚ್ಚಿಸುವ ಅವಕಾಶ ಮತ್ತು ಶೆಲ್ಫ್ ಜೀವಿತಾವಧಿಯನ್ನು ವಿಸ್ತರಿಸುವ ಸಾಮರ್ಥ್ಯವು ಆಹಾರ ತ್ಯಾಜ್ಯವನ್ನು ಕಡಿಮೆ ಮಾಡುವಲ್ಲಿ ಮತ್ತು ಕಠಿಣ ರಫ್ತು ಮಾನದಂಡಗಳನ್ನು ಪೂರೈಸು ವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಭಾರತೀಯ ಆಹಾರ ಸಂಸ್ಕರಣಾ ವಲಯವು 2025-26ರ ವೇಳೆಗೆ 535 ಬಿಲಿಯನ್ ಡಾಲರ್ ಮಟ್ಟವನ್ನು ತಲುಪುವ ನಿರೀಕ್ಷೆಯಿದೆ ಮತ್ತು ಸಂಸ್ಕರಿಸಿದ ಆಹಾರ ರಫ್ತುಗಳಲ್ಲಿ ಅದರ ಪಾಲು ನಿರಂತರವಾಗಿ ಹೆಚ್ಚುತ್ತಿದೆ. ಇದರಿಂದಾಗಿ ವಿಕಿರಣ ಸೌಲಭ್ಯಗಳು ಭರವಸೆಯ ಹೂಡಿಕೆ ಅವಕಾಶವನ್ನು ಪ್ರತಿನಿಧಿಸುತ್ತವೆ.

ಆಹಾರ ವ್ಯರ್ಥವಾಗುವುದನ್ನು ಕಡಿಮೆ ಮಾಡುವ ಗುರಿ ಹೊಂದಿರುವ ಮೂಲಸೌಕರ್ಯ ಅಭಿವೃದ್ಧಿಗೆ ಬೆಂಬಲ
ನೀಡಲು, ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ (ಎಂಒಎಫ್‌ ಟಿಐ) ಆಹಾರ ವಿಕಿರಣ ಘಟಕಗಳನ್ನು ಸ್ಥಾಪಿಸಲು ಪ್ರತಿ ಯೋಜನೆಗೆ 10 ಕೋಟಿ ರು.ಗಳವರೆಗೆ ಆರ್ಥಿಕ ಸಹಾಯವನ್ನು ನೀಡುತ್ತದೆ. ಅನುದಾನಗಳು ಅಥವಾ ಸಬ್ಸಿಡಿಗಳ ರೂಪದಲ್ಲಿ ಒದಗಿಸಲಾಗುವ ಈ ಬೆಂಬಲವನ್ನು ಹಣ್ಣುಗಳು ಮತ್ತು ತರಕಾರಿಗಳು ಸೇರಿದಂತೆ ಬೇಗನೆ ಹಾಳಾಗುವ ಉತ್ಪನ್ನಗಳನ್ನು ವಿಕಿರಣಕ್ಕೆ ಒಳಪಡಿಸಲು, ಸಂಸ್ಕರಿಸಲು ಮತ್ತು ಅವುಗಳ ನೈರ್ಮಲ್ಯ ಹಾಗೂ ಶೆಲ ಅವಽಯನ್ನು ಹೆಚ್ಚಿಸಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ.

ಕೇಂದ್ರ ಬಜೆಟ್ 2024-25ರಲ್ಲಿ ಮಾಡಿದ ಘೋಷಣೆಯ ನಂತರ, ಸಮಗ್ರ ಶೀತಲ ಸರಪಳಿ ಮತ್ತು ಮೌಲ್ಯವರ್ಧನೆ ಮೂಲಸೌಕರ್ಯ (ಕೋಲ್ಡ್ ಚೈನ್ ಯೋಜನೆ) ಅಡಿಯಲ್ಲಿ ಬಹು ಉತ್ಪನ್ನ ಆಹಾರ ವಿಕಿರಣ ಘಟಕಗಳನ್ನು ಸ್ಥಾಪಿಸಲು ಎಂಒಎಫ್‌ ಟಿಐ ಉದ್ಯಮಿಗಳಿಂದ ಆಸಕ್ತಿಯ ಅಭಿವ್ಯಕ್ತಿಗಳನ್ನು ಆಹ್ವಾನಿಸಿದೆ. ಆಹಾರ ಸುರಕ್ಷತೆಯನ್ನು ಹೆಚ್ಚಿಸುವಲ್ಲಿ ಮತ್ತು ಹಾಳಾಗುವ ಉತ್ಪನ್ನಗಳ ಶೆಲ್ಫ್ ಲೈಫ್ ವಿಸ್ತರಿಸುವಲ್ಲಿ ವಿಕಿರಣ ಚಿಕಿತ್ಸೆ ನಿರ್ಣಾಯಕ ಪಾತ್ರ‌ ವನ್ನು ವಹಿಸುತ್ತದೆ. ಇದನ್ನು ಗಮನಿಸಿದರೆ, ಭಾರತೀಯ ಆಹಾರ ಪೂರೈಕೆ ಸರಪಳಿ ಮತ್ತು ಕೃಷಿ ಆಹಾರ ರಫ್ತು ವಲಯದ ಹೆಚ್ಚುತ್ತಿರುವ ಬೇಡಿಕೆಗಳನ್ನು ಪೂರೈಸಲು ನಮ್ಮ ಮೂಲಸೌಕರ್ಯವನ್ನು ವಿಸ್ತರಿಸುವ ಅವಶ್ಯಕತೆ ಯಿದೆ.

ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯವು ಒದಗಿಸುವ ಆರ್ಥಿಕ ಬೆಂಬಲವನ್ನು ಬಳಸಿಕೊಂಡು ಹೆಚ್ಚುವರಿ ವಿಕಿರಣ ಸೌಲಭ್ಯಗಳನ್ನು ಸ್ಥಾಪಿಸಲು ಈ ಅವಕಾಶವನ್ನು ಬಳಸಿಕೊಳ್ಳುವಂತೆ ನಾವು ಹೂಡಿಕೆದಾರರು ಮತ್ತು ಉದ್ಯಮಿಗಳನ್ನು ಒತ್ತಾಯಿಸುತ್ತೇವೆ. ವಿಕಿರಣ ಸೌಲಭ್ಯಗಳಲ್ಲಿ ಹೂಡಿಕೆ ಮಾಡುವುದರಿಂದ ಅದು ಆಹಾರ ರಕ್ಷತೆಯನ್ನು ಹೆಚ್ಚಿಸುತ್ತದೆ,

ತ್ಯಾಜ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಭಾರತದಾದ್ಯಂತ ಆಹಾರ ಭದ್ರತೆಯಲ್ಲಿ ಸುಧಾರಣೆಯನ್ನು ತರುತ್ತದೆ. ಜತೆಗೆ ನಮ್ಮ ರೈತರಿಗೆ ಉತ್ತಮ ಬೆಲೆಗಳನ್ನು ಖಚಿತಪಡಿಸುತ್ತದೆ. ಭಾರತದ ಆಹಾರ ಉದ್ಯಮವನ್ನು ಪರಿವರ್ತಿಸು ವಲ್ಲಿ ನಮ್ಮೊಂದಿಗೆ ಸೇರಿಕೊಳ್ಳಿ- ನಿಮ್ಮ ಹೂಡಿಕೆಯು ಸುಸ್ಥಿರ ಕೃಷಿಯ ಭವಿಷ್ಯವನ್ನು ಮುನ್ನಡೆಸುತ್ತದೆ ಮತ್ತು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗೆ ಕೊಡುಗೆ ನೀಡುತ್ತದೆ.

(ಲೇಖಕರು ಕೇಂದ್ರ ಸಚಿವರು, ಆಹಾರ ಸಂಸ್ಕರಣಾ
ಕೈಗಾರಿಕೆಗಳ ಸಚಿವಾಲಯ)