ವಿದ್ಯಮಾನ
ವಿನಾಯಕ ವೆಂ. ಭಟ್ಟ, ಅಂಬ್ಲಿಹೊಂಡಾ
ಯಾವುದೇ ವರ್ತಮಾನ ಪತ್ರಿಕೆಯ ತಲೆಬರಹ ಆಗದಿದ್ದರೂ ಅಥವಾ ಯಾವ ಪಕ್ಷದ ಪ್ರಣಾಳಿಕೆಯಲ್ಲೂ ಸ್ಥಾನ ಗಿಟ್ಟಿಸದಿದ್ದರೂ, ಹಾಗೂ ಟಿವಿ ವಾಹಿನಿ ಗಳಲ್ಲಿ ದಿನನಿತ್ಯದ ಚರ್ಚಾವಿಷಯಗಳಾಗದಿದ್ದರೂ, ಹವಾಮಾನ ಬದಲಾವಣೆ, ಅರಣ್ಯನಾಶ ಮತ್ತು ಎಲ್ಲ ರೀತಿಯ ಮಾಲಿನ್ಯ ಇವುಗಳೇ ಭಾರತವಿಂದು ಎದುರಿಸುತ್ತಿರುವ ಪ್ರಮುಖ ಸಮ ಸ್ಯೆಗಳಾಗಿವೆ ಎಂದು ನಿರ್ವಿವಾದವಾಗಿ ಹೇಳಬಹುದಾಗಿದೆ.
ನಿರುದ್ಯೋಗ, ಬಡತನ, ಆಹಾರ ಭದ್ರತೆ ಇವುಗಳಿಗೆ ನಂತರದ ಸ್ಥಾನ ಕೊಡಬಹುದಷ್ಟೇ. ಹಾಗಂತ ಇದು ಕೇವಲ ಭಾರತ ದಂಥ ಅಭಿವೃದ್ಧಿಶೀಲ ರಾಷ್ಟ್ರ ಗಳ ಸಮಸ್ಯೆಯಾಗಿ ಉಳಿದಿಲ್ಲ. ಬ್ರಹ್ಮಾಂಡ ಗೋಲಕದಲ್ಲಿರುವ ಪ್ರತಿಯೊಂದು ದೇಶವೂ ಈ ಪರಿಸರ ವೈಪರೀತ್ಯದ ಪರಿಣಾಮವನ್ನು ಒಂದಲ್ಲಾ ಒಂದು ರೀತಿಯಲ್ಲಿ ದಿನನಿತ್ಯ ಅನುಭವಿಸುತ್ತಿದೆ. ಹಾಗಾಗಿ, ಈ ಕುರಿತು ಒಂದು ದೇಶವಷ್ಟೇ ಕೆಲಸ ಮಾಡಿದರೆ ಸಾಲದು, ಅಂತಾರಾಷ್ಟ್ರೀಯ ಸಹಯೋಗ ಮತ್ತು ಬೆಂಬಲವನ್ನೂ ಅಗತ್ಯವಾಗಿ ಒಗ್ಗೂಡಿಸುವುದು ಅನಿವಾರ್ಯವಾಗುತ್ತದೆ.
ಪರಿಸರದ ಅವನತಿಯನ್ನು ತಡೆಯುವಲ್ಲಿನ ಗುರಿಗಳು ಮತ್ತು ಕೈಗಾರಿಕೀಕರಣ, ಉದ್ಯೋಗ ಸೃಷ್ಟಿ ಅಥವಾ ಒಟ್ಟಾರೆ ಯಾಗಿ ನಮ್ಮ ಆರ್ಥಿಕ ಅಭಿವೃದ್ಧಿ ಇವುಗಳ ನಡುವೆ ಸಮತೋಲನವನ್ನು ಸಾಧಿಸುವುದು ಭಾರತದಲ್ಲಿ ಯಾವುದೇ ಸರಕಾರಕ್ಕೆ ಅತ್ಯಂತ ಸಂಕೀರ್ಣವಾದ ಸವಾಲಾಗಿದೆ ಎನ್ನುವುದನ್ನು
ಒಪ್ಪಲೇಬೇಕು. ಬೆಳೆಯುತ್ತಿರುವ ಅನೇಕ ಆರ್ಥಿಕತೆಗಳಂತೆ ಭಾರತವು, ನಿರಂತರ ಬೆಳವಣಿಗೆಯನ್ನು ಕಾಣುತ್ತಿರುವ ಜನಸಂಖ್ಯೆ ಮತ್ತು ಆ ಜನಸಂಖ್ಯೆಯ ಬೇಡಿಕೆಗಳನ್ನು ಪೂರೈಸುವ ಭರದಲ್ಲಿ ಪರಿಸರವನ್ನು ಒಳಗೊಂಡ ಸುಸ್ಥಿರ ಅಭಿವೃದ್ಧಿಯನ್ನು ಲಘುವಾಗಿ ಪರಿಗಣಿಸುತ್ತಿದೆ ಎನಿಸುತ್ತಿದೆ.
ಯುರೋಪ್ ಮತ್ತು ಅಮೆರಿಕದಂಥ ಉಪಖಂಡಗಳಿಂದ ಜವಳಿ, ಚರ್ಮ, ಪ್ಲಾಸ್ಟಿಕ್ ಮತ್ತು ರಾಸಾಯನಿಕಗಳಂಥ ಹೆಚ್ಚು ಮತ್ತು ಶಾಶ್ವತವಾಗಿ ಮಾಲಿನ್ಯ ವನ್ನು ಉಂಟುಮಾಡುವ ಉದ್ದಿಮೆಗಳನ್ನು ಅಲ್ಲಿನ ಆಡಳಿತ ತಮ್ಮ ತಮ್ಮ ದೇಶಗಳಿಂದ ಹೊರನೂಕಿ ಬಹಳ ಕಾಲವಾಯಿತು. ಆದರೆ, ತಮ್ಮ ಅಗತ್ಯ ಮತ್ತು ಅನಿವಾರ್ಯತೆಗಳ ಕಾರಣದಿಂದಾಗಿ ಏಷ್ಯಾ ಖಂಡದ ಚೀನಾ, ಭಾರತ ಮತ್ತು ಬಾಂಗ್ಲಾ ಮುಂತಾದ ದೇಶಗಳು ಮಾತ್ರ ಮೇಲೆ ತಿಳಿಸಿರುವ ಉದ್ದಿಮೆಗಳನ್ನು ತೆರೆದ ಬಾಹುಗಳಿಂದ ಸ್ವಾಗತಿಸುತ್ತಿವೆ ಮತ್ತು ‘ಉದ್ದಿಮೆಗಳು ನಮ್ಮ ದೇಶಕ್ಕೆ ಬಂತು’ ಎಂದು ಸಂಭ್ರಮಿಸುತ್ತಿವೆ.
ತಮ್ಮ ನೆಲ-ಜಲಗಳನ್ನು ಕೊಳಕು ಮಾಡಿಕೊಂಡು ಉತ್ಪಾದನಾ ಚಟುವಟಿಕೆಯಲ್ಲಿ ತೊಡಗಿಕೊಂಡು, ಅಮೆರಿಕ ಮುಂತಾದ ದೇಶಗಳ ಬ್ರ್ಯಾಂಡ್
ನ ಅಡಿಯಲ್ಲಿ ಜಗತ್ತಿಗೆ ಸಾಮಗ್ರಿಗಳನ್ನು ಪೂರೈಸುತ್ತಿವೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಕಸ-ಮಸಿ ಮಾಡಿಕೊಂಡಾದರೂ ಅಡುಗೆ ಕೆಲಸ ಮಾತ್ರ ನಮ್ಮ ಈ ಭೂಪ್ರದೇಶದಲ್ಲಿ ಆಗಬೇಕು; ಆದರೆ ಊಟ ಮಾತ್ರ ಬೇರೆ ಕಡೆ ಬಡಿಸಬೇಕು ಅಥವಾ ಉಳಿದ ದೇಶಗಳ ಹಾಲಿನ ಅಗತ್ಯವನ್ನು ಪೂರೈಸಲು ಏಷ್ಯಾ ಖಂಡದ ದೇಶಗಳು ದನದ ಕೊಟ್ಟಿಗೆಯಾಗಿ ಮಾರ್ಪಟ್ಟು ಕಾರ್ಯನಿರ್ವಹಿಸಬೇಕು.
ಉತ್ಪಾದನಾ ವಲಯದ ಉದ್ದಿಮೆಗಳು ಈ ಭಾಗದಲ್ಲಿ ಕೇಂದ್ರೀಕೃತವಾಗಿ ನೆಲ-ಜಲವನ್ನು ಕಲುಷಿತಗೊಳಿಸುವುದರಿಂದ, ಮುಂದೊಮ್ಮೆ ಭೂಗೋಳದ ಇತರ ಪ್ರದೇಶಗಳು ಚೊಕ್ಕಟವಾಗಿರುತ್ತವೆ, ಆದರೆ ಏಷ್ಯಾದ ಭಾಗ ಮಾತ್ರ ಕೊಳಕಾಗಿರುತ್ತದೆ ಎನ್ನುವುದನ್ನು ಸಾರಾಂಶವಾಗಿ ಹೇಳಬಹುದು. ‘ವರ್ಲ್ಡ್ ಹೆಲ್ತ್ ಆರ್ಗನೈಸೇಷನ್’ (Uಏu)ನ ‘ಗ್ಲೋಬಲ್ ಆಂಬಿಯೆಂಟ್ ಏರ್ ಕ್ವಾಲಿಟಿ ಡೇಟಾಬೇಸ್’ (ಎಅಅಕಿಈ)ನ ಪ್ರಕಾರ, ವಾಯುಮಾಲಿನ್ಯದಲ್ಲಿ ಮೊದಲ ಸ್ಥಾನ ಪಡೆದಿರುವ ನಗರ ನಮ್ಮ ರಾಜಧಾನಿ ದೆಹಲಿಯಾಗಿದೆ. ಭಾರತದಲ್ಲಿ ೧೯೫೧ರಿಂದ ಈಚೆಗೆ ಸುಮಾರು ೧೧ ಮಿಲಿಯನ್ ಹೆಕ್ಟೇರ್ ನಷ್ಟು ಅರಣ್ಯ ನಾಶವಾಗಿದೆ. ವಾಯುಮಾಲಿನ್ಯದ ಜತೆಗೆ ಜಲಮಾಲಿನ್ಯವೂ ಭಾರತದಲ್ಲಿ ಪ್ರಮುಖ ಮಾಲಿನ್ಯಮೂಲವಾಗಿದೆ. ಸಂಸ್ಕರಿಸದ ಗಣನೀಯ ಪ್ರಮಾಣದ ಕೊಳಚೆ ನೀರನ್ನು ಪ್ರತಿದಿನವೂ ನದಿಗಳು ಮತ್ತು ಇತರ ಜಲಮೂಲಗಳಿಗೆ ಬಿಡಲಾಗುತ್ತಿದೆ.
ಹೀಗಾಗಿ ನೀರು ಮಾನವ ಬಳಕೆಗೆ ಅಥವಾ ನೀರಾವರಿಗೆ ಅಯೋಗ್ಯವಾಗುತ್ತಿದೆ. ಭಾರತೀಯರು ಪವಿತ್ರವೆಂದು ಪರಿಗಣಿಸುವ ಗಂಗಾನದಿಯು, ಪ್ರತಿದಿನ
ಸುಮಾರು ೪೦೦ ಮಿಲಿಯನ್ ಲೀಟರ್‌ನಷ್ಟು ಸಂಸ್ಕರಿಸದ ತ್ಯಾಜ್ಯನೀರನ್ನು ಪಡೆಯುತ್ತಿರುವುದರಿಂದ ಪ್ರಪಂಚದ ಅತ್ಯಂತ ಕಲುಷಿತ ನದಿಗಳಲ್ಲಿ ಒಂದಾಗಿದೆ. ದೆಹಲಿಯನ್ನು ಹಾದುಹೋಗುವ ಇನ್ನೊಂದು ಪುಣ್ಯನದಿ ಯಮುನೆಯು ಕೂಡ ಗಂಗಾನದಿಗಿಂತಲೂ ಹೆಚ್ಚು ಕಲುಷಿತಗೊಂಡಿದೆ ಮತ್ತು
ಪ್ರತಿದಿನ ಸುಮಾರು ೬೨೦ ಮಿಲಿಯನ್ ಲೀಟರ್ ಕೊಳಚೆಯನ್ನು ತನ್ನಲ್ಲಿ ಸೇರಿಸಿಕೊಳ್ಳುತ್ತಿದೆ.
ದಕ್ಷಿಣ ಭಾರತದ ನದಿಗಳ ಕಥೆ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಕಸ ವಿಂಗಡಣೆ ಮತ್ತು ವಿಲೇವಾರಿಯಂತೂ ಸಣ್ಣ ಸಣ್ಣ ನಗರಗಳನ್ನೂ ಕಾಡುತ್ತಿರುವ ನಿತ್ಯದ ಸಮಸ್ಯೆ. ಜಗತ್ತಿನ ೩೦ ಪ್ರತಿಶತ ಭೂಭಾಗವನ್ನು ಹೊಂದಿರುವ ಏಷ್ಯಾ ಖಂಡ, ಜಗತ್ತಿನ ೬೦ ಪ್ರತಿಶತ ಜನಸಂಖ್ಯೆಯನ್ನು ಹೊಂದಿರುವುದರಿಂದ ಈಗಾಗಲೇ ಜನಸಂಖ್ಯೆಯ ಭಾರದಿಂದ ತಲ್ಲಣಿಸುತ್ತಿದೆ ಮತ್ತು ಪ್ರಕೃತಿಯ ಜತೆಗೆ ಸಮಬಾಳ್ವೆ ಮಾಡಲು ಹೆಣಗಾಡುತ್ತಿದೆ. ಸರಕಾರಗಳು ಕೇವಲ ಇಂದಿನ ಅಗತ್ಯಗಳನ್ನು ಗಮನದಲ್ಲಿರಿಸುವುದನ್ನು ಕೈಬಿಟ್ಟು, ಭವಿಷ್ಯದ ಕುರಿತ ಚಿಂತನೆಯೊಂದಿಗೆ ಪ್ರಾಕೃತಿಕ ಪುನರುಜ್ಜೀವನಕ್ಕೆ ಸತತ ಕಾರ್ಯಕ್ರಮಗಳನ್ನು ರೂಪಿಸುವುದಕ್ಕೆ ತುರ್ತಾಗಿ ಮುಂದಾಗದಿದ್ದರೆ, ಮುಂದೊಂದು ದಿನ ಕೇವಲ ಮತ್ತು ಕೇವಲ ಮಾಲಿನ್ಯಗಳಿಂದಾಗಿ ಈ ಭಾಗದ ಭೂಪ್ರದೇಶವು ಜನವಸತಿಗೆ ಯೋಗ್ಯವಲ್ಲದ ಪ್ರದೇಶವಾಗಿ ಪರಿವರ್ತಿತವಾದರೆ ಏನೂ ಆಶ್ಚರ್ಯಪಡಬೇಕಾಗಿಲ್ಲ.
ಸುಸ್ಥಿರತೆಯ ಗುರಿಗಳನ್ನು ಸಾಧಿಸಲು ಗಣನೀಯ ಆರ್ಥಿಕ ಮತ್ತು ತಾಂತ್ರಿಕ ಸಂಪನ್ಮೂಲಗಳ ಅಗತ್ಯ ಇರುವುದರಿಂದ, ಜಗತ್ತಿನಾದ್ಯಂತ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಅಂತಾರಾಷ್ಟ್ರೀಯ ಒಪ್ಪಂದಗಳ ಅನುಷ್ಠಾನ ಎನ್ನುವುದು ಬಾಯೊಳಗಿನ ಬಿಸಿತುಪ್ಪದಂತಿರುತ್ತದೆ; ಉಗುಳಿದರೆ ವ್ಯರ್ಥವಾಗುತ್ತದೆ,
ಹಾಗಂತ ನುಂಗುವ ಪ್ರಯತ್ನ ಮಾಡಿದರೆ ಗಂಟಲು ಸುಡುತ್ತದೆ. ‘ನಾವು ಭಾರತೀಯರು ಪ್ರಕೃತಿಯೊಂದಿಗೆ ಬದುಕಲು ತಿಳಿದಿರುವ ಜನರು. ಪ್ರಕೃತಿಯನ್ನು ಹೇಗೆ ಪ್ರೀತಿಸಬೇಕು ಎಂಬುದು ನಮಗೆ ತಿಳಿದಿದೆ, ನಮಗೆ ಆ ಪರಂಪರೆ ಇದೆ ಮತ್ತು ಜಾಗತಿಕ ತಾಪಮಾನದ ಸಮಸ್ಯೆಗಳಿಗೆ ನಮ್ಮಲ್ಲಿ ಪರಿಹಾರವಿದೆ. ನಮ್ಮ ಪೂರ್ವಜರು ನಮಗೆ ಪರಿಸರಸ್ನೇಹಿ ಜೀವನಶೈಲಿಯನ್ನೇ ಕಲಿಸಿದ್ದಾರೆ’ ಎಂದು ೭೬ನೇ ಸ್ವಾತಂತ್ರ್ಯ ದಿನದಂದು ಪ್ರಧಾನಿ ಮೋದಿಯವರು ಮಾರ್ಮಿಕ ವಾಗಿ ಹೇಳಿದ್ದರು.
ಹಿಂದೆಂದಿಗಿಂತಲೂ ಕಳೆದ ೧೦ ವರ್ಷಗಳಲ್ಲಿ ಅನೇಕ ಎಡರು ತೊಡರುಗಳ ನಡುವೆಯೂ ಅಂತಾರಾಷ್ಟ್ರೀಯ ಪರಿಸರ ಸಂಬಂಧಿ ಒಪ್ಪಂದಗಳ ಅನುಷ್ಠಾನದಲ್ಲಿ ಭಾರತವು ಶ್ಲಾಘನೀಯವಾದ ಬದ್ಧತೆಯನ್ನು ಪ್ರದರ್ಶಿಸಿರುವುದು ನಿಜವೇ. ಅರಣ್ಯ ಮತ್ತು ಮರಗಳ ಹೊದಿಕೆಯನ್ನು ಹೆಚ್ಚಿಸುವ ಉದ್ದೇಶದ ಅರಣ್ಯ ಸಂರಕ್ಷಣೆ ಹಾಗೂ ಬೃಹತ್ ಮರು ಅರಣ್ಯೀಕರಣ ಯೋಜನೆಗಳು, ಸೌರಕ್ರಾಂತಿ ಮುಂತಾದ ಯೋಜನೆಗಳು, ‘ಹಸಿರು ಭಾರತ ಮಿಷನ್’
ಹವಾಮಾನ ಬದಲಾವಣೆಯ ರಾಷ್ಟ್ರೀಯ ಕ್ರಿಯಾಯೋಜನೆಯ ಭಾಗವಾಗಿ ಕಣ್ಣಿಗೆ ಕಾಣುವಷ್ಟು ಪ್ರಗತಿಯನ್ನು ಕಂಡಿವೆ.
ವಾಹನ ವಲಯದಲ್ಲಿ, ಭಾರತವು ವಾಯುಮಾಲಿನ್ಯವನ್ನು ಕಡಿಮೆ ಮಾಡಲು ಮತ್ತು ಸಾಂಪ್ರದಾಯಿಕ ಇಂಧನಗಳ ಮೇಲಿನ ಅವಲಂಬನೆಯನ್ನು ತಗ್ಗಿಸಲು ಇಲೆಕ್ಟ್ರಿಕ್ ವಾಹನಗಳ (ಇವಿ) ಅಳವಡಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಿದೆ. ತನ್ಮೂಲಕ ಸ್ವಚ್ಛ ಸಾರಿಗೆಯ ಗುರಿಯ ಕಡೆಗಿನ ಪಯಣದಲ್ಲಿ ಅತ್ಯಂತ ವೇಗವಾಗಿ ಸಾಗಿ, ಪ್ರಪಂಚವೇ ಅಚ್ಚರಿಪಡುವ ಮಟ್ಟಿಗೆ ತನ್ನ ಬದ್ಧತೆಯನ್ನು ತೋರ್ಪಡಿಸಿದೆ. ದೇಶದ ಸಾರಿಗೆ ವ್ಯವಸ್ಥೆಯನ್ನು ಪೆಟ್ರೋಲಿಯಂ ಉತ್ಪನ್ನರಹಿತ ಗುರಿಯೆಡೆಗೆ ಒಯ್ಯುವ ನಿಟ್ಟಿನಲ್ಲಿ ಸಚಿವ ನಿತಿನ್ ಗಡ್ಕರಿ ಮತ್ತವರ ತಂಡವು ಅತ್ಯಂತ ಮುತುವರ್ಜಿಯಿಂದ ಕೆಲಸ ಮಾಡುತ್ತಿರುವುದು
ಅತ್ಯಂತ ಆಶಾದಾಯಕ ಸಂಗತಿ ಹೌದು.
ಭಾರತದಲ್ಲಿ ಪರಿಸರ ಸಂರಕ್ಷಣೆ ಸಂಬಂಧಿತ ವ್ಯವಸ್ಥಿತ ಕಾರ್ಯಕ್ರಮಗಳ ಅಲಭ್ಯತೆಯು, ಮುಂದಿನ ಜನಾಂಗಕ್ಕೆ ಭವಿಷ್ಯವೇ ಇಲ್ಲದಂತೆ ಮಾಡಿಬಿಡುವು ದೇನೋ ಎನ್ನುವ ಭಯ ಎಲ್ಲರಿಗೂ ಇರಬೇಕಾಗಿದೆ. ಯಾವುದೇ ರಾಜಕೀಯ ಪಕ್ಷ ಅಥವಾ ಸರಕಾರಗಳು ಸಹ ಈ ವಿಷಯಗಳನ್ನು ಐತಿಹಾಸಿಕವಾಗಿ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಅವುಗಳು ಹೊಸ ಹೊಸ ವಿದೇಶಿ ಹೂಡಿಕೆಯ ಒಪ್ಪಂದಗಳಿಗೆ ಸಹಿಮಾಡುವಲ್ಲಿ ತಲ್ಲೀನವಾಗಿವೆ. ಕಾರಣ, ಈ ಎಲ್ಲ ಕಾರ್ಯಕ್ರಮಗಳು ಮತವನ್ನು ಗಳಿಸುವಲ್ಲಿ ಅವುಗಳಿಗೆ ಸಹಾಯಕವಾಗುವುದಿಲ್ಲವಲ್ಲಾ. ಇನ್ನು ಚುನಾವಣೆಯ ಸಮಯದಲ್ಲಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಮಾಡುತ್ತೇನೆ ಎನ್ನುವ ನಮ್ಮ ಜನಪ್ರತಿನಿಧಿಗಳಿಗೆ, ನಾವು ಚರ್ಚಿಸಿದ ಪರಿಸರ ಸಂಬಂಧಿ ಯಾವ ವಿಷಯಗಳ ಕುರಿತು ಕಾಳಜಿ ಬಿಡಿ ತಿಳಿವಳಿಕೆಯೂ ಇದ್ದಂತೆ ಕಾಣುವುದಿಲ್ಲ.
ಹಾಗಂತ ದೇಶದಲ್ಲಿ ಈ ಕುರಿತು ಏನೂ ಸಾಧನೆ ಆಗಲಿಲ್ಲವೆಂತಲ್ಲ; ವೇಗ ಮತ್ತು ಪರಿಮಾಣ ಸಾಲದು ಎನ್ನುವುದಷ್ಟೇ ನಮ್ಮ ಕಾಳಜಿ. ದೇಶವಾಸಿಗಳ ಸುರಕ್ಷಿತ ಮತ್ತು ಸುಸ್ಥಿರ ಭವಿಷ್ಯವನ್ನು ಖಚಿತಪಡಿಸಿಕೊಳ್ಳಲು ಈ ಸಮಸ್ಯೆಗಳ ಮೇಲೆ ತಮ್ಮ ಸರಕಾರಗಳ ಕಾರ್ಯಸೂಚಿಗಳಲ್ಲಿ ಆದ್ಯತೆ ನೀಡಿ ಮತ್ತು ಈ ಕಾರ್ಯಕ್ಕೆ ಅಗತ್ಯ ಸಂಪನ್ಮೂಲಗಳನ್ನು ಒದಗಿಸುವ ಮೂಲಕ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕಾದ ಸಮಯ ಇದಾಗಿದೆ. ಮೋದಿ ಯವರು ತಮ್ಮ ಮುಂದಿನ ಅಽಕಾರಾವಽಯ (ಮೋದಿ ೩.೦) ಮೊದಲ ೧೦೦ ದಿನದ ಕಾರ್ಯಸೂಚಿಯಲ್ಲಿ, ಈ ಎಲ್ಲಾ ಜನಪ್ರಿಯವಲ್ಲದ, ಮತಗಳನ್ನು ತಾರದ, ಆದರೆ ದೇಶದ ಭವಿಷ್ಯವನ್ನು ನಿರ್ಧಾರ ಮಾಡುವ ಮತ್ತು ಜನಜೀವನದ ವಿನಾಶವನ್ನು ಮುಂದೂಡಬಹುದಾದ, ತುರ್ತಾಗಿ ಪ್ರಾರಂಭಿಸ ಬೇಕಾದ ಪ್ರಕೃತಿ ಸಂರಕ್ಷಣೆಯ ಕಾರ್ಯಕ್ರಮಗಳಿಗೆ ಜಾಗ ಸಿಗುವಂತಾಗಲಿ ಎನ್ನುವುದು ದೇಶದ ಆಶಯ.
(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)