Friday, 13th December 2024

ಬಟ್ಟೆ ಒಗೆಯುವುದರಲ್ಲೂ ಕಂಡಾಬಟ್ಟೆ ಸೊಬಗಿದೆ !

ತಿಳಿರು ತೋರಣ

ಶ್ರೀವತ್ಸ ಜೋಶಿ

ಅಗಸ. ಈತ ನಿಸ್ಸಂದೇಹವಾಗಿ ಒಬ್ಬ ಫಸ್ಟ್ ಕ್ಲಾಸ್ ಸಿಟಿಜನ್. ಪ್ರಥಮ ದರ್ಜೆಯ ಪ್ರಜೆ. ಯಾಕೆ ಹೇಳಿ? ಒಂದನೆಯ ತರಗತಿಯಲ್ಲಿ ಕನ್ನಡಭಾರತಿ ಪಠ್ಯಪುಸ್ತಕದಲ್ಲಿ ಮೊತ್ತಮೊದಲ ಪದವಾಗಿ, ಮೊದಲ ಪಾಠವಾಗಿ, ನಮಗೆ ಪರಿಚಯವಾದವನೇ ಅಗಸ! ಆಮೇಲೆ ನೀತಿಕಥೆಗಳಲ್ಲೂ, ಗಾದೆಮಾತುಗಳಲ್ಲೂ ಆಗಾಗ್ಗೆ
ಭೇಟಿಯಾಗುತ್ತಿದ್ದವನು.

ಸಮಾಜದ ಕೊಳೆ ತೊಳೆಯುವ ಅನುಭಾವಿ ಸಂತನಲ್ಲದಿದ್ದರೂ ಸಮಾಜದ ಜನರು ಉಡುವ ಬಟ್ಟೆಬರೆಗಳ ಕೊಳೆ ತೊಳೆದು ಒಳ್ಳೆಯ ಕೆಲಸ ಮಾಡಿದವನು,
ಮಾಡುತ್ತಿರುವವನು. ಪ್ರಾಚೀನ ಭಾರತದಲ್ಲಿ ಅಗಸನನ್ನು (ಹಾಗೆಯೇ ಬಡಗಿ, ನೇಕಾರ, ಕ್ಷೌರಿಕ, ಮತ್ತು ಚಮ್ಮಾರ- ಈ ನಾಲ್ಕು ಕಸಬುದಾರರನ್ನೂ) ಕೆಲಸಗಾರ ವರ್ಗದಲ್ಲೇ ಶ್ರೇಷ್ಠ ಮತ್ತು ಗೌರವಾನ್ವಿತ ಎಂದು ಪರಿಗಣಿಸಲಾಗುತ್ತಿತ್ತು. ಕುಟುಂಬದಲ್ಲಿ ಮದುವೆ-ಮುಂಜಿ ಮುಂತಾದ ಸಮಾರಂಭಗಳು ನಡೆದರೆ ಈ ಕಸಬುದಾರರನ್ನೂ ಕರೆದು ಅವರಿಗೆ ಸೂಕ್ತ ಉಡುಗೊರೆ ಇತ್ಯಾದಿ ಕೊಡುವ ಸಂಪ್ರದಾಯ ಇತ್ತು.

ಅದರಲ್ಲೂ, ಅಗಸ ಮಾಡುವ ಕೆಲಸ ಪವಿತ್ರವಾದುದು, ಪರಿಶುದ್ಧವಾದುದು ಎಂಬ ಸದ್ಭಾವನೆ ಸಮಾಜದ ಜನರಲ್ಲಿರುತ್ತಿತ್ತು. ಇದರ ಬಗ್ಗೆ ಮನುಸ್ಮೃತಿ, ಯಾಜ್ಞವಲ್ಕ್ಯಸ್ಮೃತಿ ಮುಂತಾದ ಗ್ರಂಥಗಳಲ್ಲೂ ಉಲ್ಲೇಖವಿದೆ ಯಂತೆ. ಆದ್ದರಿಂದಲೇ ಇರಬೇಕು, ಮರ್ಯಾದಾ ಪುರುಷೋತ್ತಮನಾದ ಶ್ರೀರಾಮಚಂದ್ರನೂ ಒಬ್ಬ ಸಾಮಾನ್ಯ ಪ್ರಜೆಯಾಗಿದ್ದ ಅಗಸನನ್ನು ಯಃಕಶ್ಚಿತ್ ಎಂದು ಅಲಕ್ಷಿಸದೆ ಅವನ ಮಾತಿಗೆ ಬೆಲೆ ಕೊಟ್ಟನು. ರಾಮಾಯಣವು ಉತ್ತರಕಾಂಡವಾಗಿ ಬೆಳೆಯುವುದಕ್ಕೆ ಆ ಅಗಸನೇ ಪರೋಕ್ಷ ಕಾರಣನಾದನು. ಹಾಗೆ ನೋಡಿದರೆ ಶರಪಂಜರ ಚಿತ್ರದ ‘ಹದಿನಾಲ್ಕು ವರ್ಷ ವನವಾಸದಿಂದ ಮರಳಿಬಂದಳು ಸೀತೆ…’ ಹಾಡಿನಲ್ಲಿ ‘ಅಲ್ಪಾಗಸನ ಕಲ್ಪನೆ ಮಾತಿಗೆ ಅಳುಕಿದ ಶ್ರೀರಾಮ… ಸೀತೆ ಕಲುಷಿತೆ ಸೀತೆ ದೂಷಿತೆ ಎಂದನು ರಾಜಾರಾಮ…’ ಎನ್ನುತ್ತ ಅಗಸನನ್ನು ‘ಅಲ್ಪ’ನೆಂದು ಬಣ್ಣಿಸಿದ್ದು ಖಂಡಿತ ಸರಿಯಲ್ಲ.

ಅಗಸನನ್ನು ಕುರಿತಾಗಿಯೇ ಈ ಹರಟೆಯನ್ನು ಮುಂದುವರಿಸುವುದಾಗಿದ್ದರೆ- ತಮಾಷೆಗೋಸ್ಕರ ಅಮೆರಿಕದ ಊರುಗಳ ಹೆಸರುಗಳನ್ನು ಕನ್ನಡೀಕರಿಸಿದಾಗ ಕನೆಕ್ಟಿಕಟ್ ಕನಕನಕಟ್ಟೆ ಆಗುತ್ತದೆಂದೂ, ನಮ್ಮ ‘ವಾಷಿಂಗ್’ ಟನ್ ಅಗಸನಕಟ್ಟೆ ಆಗುತ್ತದೆಂದೂ ಬರೆಯಬಹುದಿತ್ತು; ಅಗಸನ ಕಟ್ಟೆಯೋ ಅಗಸನ ಕತ್ತೆಯೋ ಎಂಬ ಜಿಜ್ಞಾಸೆ ಯಲ್ಲೇ ಅಗಸ ಮತ್ತು ಅವನ ಕತ್ತೆಯ ಕುರಿತ ಬಗೆಬಗೆಯ ಕಥೆಗಳನ್ನು ಇಲ್ಲಿ ಸೇರಿಸಬಹುದಿತ್ತು; ಕೃಷ್ಣ-ಬಲರಾಮರ ಕಥೆಯಲ್ಲಿ ಬರುವ, ಕೃಷ್ಣನಿಂದ ಕೊಲ್ಲಲ್ಪಡುವ ಅಗಸನನ್ನು ನೆನಪಿಸಿಕೊಳ್ಳ ಬಹುದಿತ್ತು. ಗಿರೀಶ್ ಕಾರ್ನಾಡರ ‘ತುಘಲಕ್’ ನಾಟಕದ ಅಗಸನ ಚಾಣಾಕ್ಷತನವನ್ನು ಕೊಂಡಾಡಬಹುದಿತ್ತು.

‘ಹೊಸದರಲ್ಲಿ ಅಗಸ ಗೋಣಿಯನ್ನೂ ಎತ್ತಿ ಎತ್ತಿ ಒಗೆಯುತ್ತಿದ್ದನು…’, ‘ಅಗಸನಲ್ಲಿ ಬೊಗಸೆ ನೀರು ಸಿಕ್ಕದೋ?’, ‘ಯಾರೂ ಇಲ್ಲದ ಊರಿಗೆ ಅಗಸರ ಮಾಳಿಯೇ ಮುತ್ತೈದೆ’, ‘ಆನೆ ಸಾಧುವಾದರೆ ಅಗಸ ಮೋಳಿಗೆ ಹೇರಿದ’ ಮುಂತಾದ ಗಾದೆಗಳನ್ನು ಸೋದಾಹರಣವಾಗಿ ವಿಶ್ಲೇಷಿಸಬಹುದಿತ್ತು; ‘ಊರ ಸೀರೆಗೆ ಅಗಸ
ತಡಬಡಗೊಂಬಂತೆ…’ ಎಂಬ ಅಕ್ಕಮಹಾದೇವಿಯ ವಚನದ ವ್ಯಾಖ್ಯಾನವನ್ನು ಮಾಡಬಹುದಿತ್ತು; ವೃತ್ತಿಯಿಂದ ಅಗಸನಾಗಿದ್ದ ಮಡಿವಾಳ ಮಾಚಿದೇವ ಎಂಬ ಇನ್ನೊಬ್ಬ ಶಿವಶರಣನ ವಿಚಾರ, ಜಂಗಮವೇಷದಲ್ಲಿ ಬಂದ ಶಿವನ ಬಟ್ಟೆಗಳನ್ನು ಆತನ ಷರತ್ತಿನ ಮೇರೆಗೆ ತನ್ನ ಹೆಂಡತಿ ಮಲ್ಲಿಗೆಮ್ಮಳ ಎದೆ ಬಗೆದ ರಕ್ತದಲ್ಲಿ ಒಗೆದು ಒಣಗಿಸಿಕೊಂಡು ಬಂದ ಸಂದರ್ಭದ ದಂತಕಥೆಯನ್ನು ವಿವರಿಸಬಹುದಿತ್ತು; ಮತ್ತೂ ಸ್ವಲ್ಪ ಅಧ್ಯಾತ್ಮದ ಟಚ್ ಬೇಕಿದ್ದರೆ ‘ಗುರ ಧೋಬೀ ಸಿಖ ಕಪ್ಡಾ ಸಾಬೂ ಸಿರಜನ ಹಾರ್/ ಸುರತಿ ಸಿಲಾ ಪರ್ ಧೋಇಯೇ ನಿಕಸೆ ಜ್ಯೋತಿ ಅಪಾರ್’ ಎಂದು ಕಬೀರನ ಒಂದು ದೋಹಾವನ್ನೂ ಉಲ್ಲೇಖಿಸಿ ‘ಗುರು ಎಂದರೆ ಒಬ್ಬ
ಅಗಸನಿದ್ದಂತೆ, ಶಿಷ್ಯ ಎಂದರೆ ಒಂದು ಬಟ್ಟೆ ಇದ್ದಂತೆ.

ದೈವಸ್ತುತಿಯೇ ಸಾಬೂನು. ಅಚಲವಾದ ಮನಸ್ಸೆಂಬ ಕಲ್ಲಿನ ಮೇಲೆ ಒಗೆದಾಗ ಅಂತರಂಗವೆಲ್ಲ ಶುದ್ಧಿಗೊಂಡು ಸತ್ಯಾರ್ಥ ಜ್ಯೋತಿಯಾಗಿ ಫಳಫಳನೆ
ಪ್ರಕಾಶಿಸುತ್ತದೆ’ ಎಂದು ತತ್ವಜ್ಞಾನ ಉಪದೇಶದ ಧಾಟಿಯಲ್ಲಿ ವಿವರಿಸಬಹುದಾಗಿತ್ತು; ಖ್ಯಾತ ಟೆನ್ನಿಸ್ ಆಟಗಾರ ಆಂಡ್ರೆ ಅಗಾಸಿ ಟೆನ್ನಿಸ್ ಆಡದಿರುವ ಸಮಯದಲ್ಲೆಲ್ಲ ಬಟ್ಟೆ ಒಗೆಯುತ್ತಿರುತ್ತಾನೆ ಏಕೆಂದರೆ ಆತನ ಹೆಸರೇ ‘ಅಗಾಸಿ’ ಎಂದಿದೆ ಅಂತೊಂದು ಹದಾ ಮಟ್ಟಿನ ಪದವಿನೋದವನ್ನು ಸಹ ಸೇರಿಸ ಬಹುದಿತ್ತು.

ಆಂಡ್ರೆ ಅಗಾಸಿ ಅಲ್ಲದಿದ್ದರೂ ಅಮೆರಿಕದ ಒಬ್ಬ ಪ್ರಖ್ಯಾತ ಅಗಸಿಯ ಬಗ್ಗೆ ಒಂದು ಪ್ಯಾರಗ್ರಾಫ್‌ನಷ್ಟಾದರೂ ಇಲ್ಲಿ ದಾಖಲಿಸಲೇಬೇಕು (ವೃತ್ತಿಸೂಚಕ ಶಬ್ದಕ್ಕೆ ಪುಲ್ಲಿಂಗ ಸ್ತ್ರೀಲಿಂಗ ಭೇದವಿಲ್ಲವಾದರೂ ಅಗಸ ಎಂಬ ಪದದ ಸ್ತ್ರೀಲಿಂಗ ‘ಅಗಸಿ’ ಎಂದು ನನ್ನದೇ ಕಲ್ಪನೆ). ಸಾಮಾನ್ಯ ಪ್ರಜೆಯಾಗಿದ್ದೂ ಮಾನವೀಯತೆ ಮೆರೆದು ಕೆಲ ವರ್ಷಗಳ ಹಿಂದೆ ಸುದ್ದಿಯಾಗಿದ್ದ ಆಕೆಯ ಹೆಸರು ಓಸಿಯೋಲಾ ಮೆಕ್‌ಕಾರ್ಟಿ. ಅಮೆರಿಕದಲ್ಲೇ ಕಡುಬಡತನದ ರಾಜ್ಯವಾದ ಮಿಸ್ಸಿಸ್ಸಿಪ್ಪಿಯ ಹಳ್ಳಿಯೊಂದರಲ್ಲಿ
ಹುಟ್ಟಿದವಳು, ಅದೂ ಹೇಗೆಂದರೆ ಒಬ್ಬಂಟಿ ತಾಯಿಯ ಮೇಲೆ ಯಾರೋ ಅತ್ಯಾಚಾರ ಮಾಡಿದ್ದರ ಫಲವಾಗಿ.

ಓಸಿಯೊಲಾಳನ್ನು ಪೋಷಿಸಿದವರು ಆಕೆಯ ಅಜ್ಜಿ ಮತ್ತೊಬ್ಬ ಚಿಕ್ಕಮ್ಮ. ಅವರಿಬ್ಬರೂ ಬೇರೆಯವರ ಮನೆಗಳಲ್ಲಿ ಕ್ಲೀನಿಂಗ್, ಅಡುಗೆ, ಮತ್ತು ಬಟ್ಟೆ ಒಗೆದು ಕೊಡುವ ಕೆಲಸಗಳಿಗೆ ಹೋಗುತ್ತಿದ್ದವರು. ಶಾಲೆಯಿಂದ ಬಂದಮೇಲೆ ಓಸಿಯೊಲಾ ಸಹ ಅವರಿಗೆ ನೆರವಾಗುತ್ತಿದ್ದಳು. ಗಳಿಸಿದ ಚಿಕ್ಕಪುಟ್ಟ ಕಾಸನ್ನು ಉಳಿತಾಯದ ಡಬ್ಬಿಯಲ್ಲಿ ಸಂಗ್ರಹಿಸಿಡುತ್ತಿದ್ದಳು. ಚಿಕ್ಕಮ್ಮ ಯಾವುದೋ ಕಾಯಿಲೆಯಿಂದ ಹಾಸಿಗೆ ಹಿಡಿದಾಗ ಓಸಿಯೊಲಾ ಶಾಲೆಗೆ ಹೋಗುವುದನ್ನು ನಿಲ್ಲಿಸಿ ಪೂರ್ಣ ಕಾಲಿಕ ಧೋಬಿ ಕೆಲಸಕ್ಕೆ ತೊಡಗಿದಳು. ದುಡಿಮೆಯೇ ದೇವರು ಎಂದುಕೊಂಡು ದುಡಿದಳು. ಆಕೆ ಬಟ್ಟೆಗಳನ್ನು ಒಗೆಯಲಿಕ್ಕೆ ಯಾವುದೇ ಮೆಷಿನ್ ಬಳಸುತ್ತಿರಲಿಲ್ಲ. ಕೈಗಳಿಂದ, ಕಲ್ಲಿನ ಮೇಲೆ ಉಜ್ಜಿ, ಸಾಬೂನು ಹಚ್ಚಿ ಒಗೆಯುತ್ತಿದ್ದಳು.

ಆದರೂ ಅವಳ ಕಾರ್ಯದಕ್ಷತೆ ಹೆಚ್ಚಿನದು. ಉತ್ಕೃಷ್ಟ ಮಟ್ಟದ ಸೇವೆ ಒದಗಿಸಿ ಗ್ರಾಹಕರ ಮನಗೆದ್ದಳು. ಬದುಕಿನುದ್ದಕ್ಕೂ ಬೇರೆಯವರ ಬಟ್ಟೆ ತೊಳೆದು ಇಸ್ತ್ರಿ ಹಾಕುವ ಕಾಯಕ ಮಾಡಿ ಸಂಪಾದನೆ ಮಾಡಿದಳು. ನಾಣ್ಯಗಳು ಮತ್ತು ಚಿಲ್ಲರೆ ನೋಟುಗಳನ್ನು ಕಾಲಕಾಲಕ್ಕೆ ಬ್ಯಾಂಕ್ ಖಾತೆಗೆ ತುಂಬಿದಳು. ೮೬ ವರ್ಷ ಗಳವರೆಗೆ ದುಡಿದು ನಿವೃತ್ತಳಾದಾಗ ಅವಳ ಖಾತೆಯಲ್ಲಿ ಹತ್ತಿರಹತ್ತಿರ ಮೂರು ಲಕ್ಷ ಡಾಲರ್ ಮೊತ್ತ ಇತ್ತು! ಶ್ರಮದ ದುಡಿಮೆಯಿಂದ ಗಳಿಸಿದ ಆ ದುಡ್ಡಿನ ಸ್ವಲ್ಪೇಸ್ವಲ್ಪ ಭಾಗವನ್ನು ತನ್ನ ಜೀವನಾಂಶಕ್ಕಾಗಿ ಉಳಿಸಿ ಮಿಕ್ಕಿದ್ದೆಲ್ಲವನ್ನೂ ಮಿಸ್ಸಿಸ್ಸಿಪ್ಪಿ ವಿಶ್ವವಿದ್ಯಾಲಯದ ಅರ್ಹ ಬಡ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್
ನಿಽಯಾಗಿ ದಾನ ಮಾಡಿದಳು. ಮರಣಪತ್ರವನ್ನೂ ಬರೆದುಕೊಟ್ಟಳು.

ಅಂಥದೊಂದು ಅನನ್ಯ ಔದಾರ್ಯಕ್ಕಾಗಿ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದದ್ದಷ್ಟೇ ಅಲ್ಲದೆ ವಿಶ್ವಸಂಸ್ಥೆಯಿಂದಲೂ ಸನ್ಮಾನ ಗೊಂಡಳು. ಇರಲಿ, ಓಸಿಯೊಲಾ ಮೆಕ್‌ಕಾರ್ಟಿ ಮತ್ತು ಅವಳಂಥ ಅಗಸಿ-ಅಗಸರಿಗೆಲ್ಲ ಮೆಚ್ಚುಗೆಯ ವಂದನೆ ಸಲ್ಲಿಸಿ ಈ ಹರಟೆಯನ್ನು ಮುಂದುವರಿಸೋಣ. ಹೇಗಿದ್ದರೂ ನಾನು ಬರೆಯಲಿಕ್ಕೆ ಹೊರಟದ್ದು ಅಗಸನ ಬಗೆಗಲ್ಲ. ಅಗಸನ ಕೆಲಸವಾದ ಬಟ್ಟೆ ಒಗೆಯುವುದರ ಬಗ್ಗೆ. ಅಗಸನಂತೆಯೇ ನಾವೂ ನೀವೂ
ಬಟ್ಟೆ ಒಗೆಯುತ್ತೇವಲ್ಲ, ಅದರ ಬಗ್ಗೆ. ನನಗೆ ಗೊತ್ತು, ಬಟ್ಟೆ ಒಗೆಯುವುದೆಂದರೇನೇ ಮಹಾ ಬೋರು; ಅಂಥಾದ್ರಲ್ಲಿ ಅದರ ಮೇಲೆ ಲೇಖನ ಬೇರೆ ಓದಬೇಕಾ ಎಂದುಕೊಳ್ಳುವವರೂ ಇರುತ್ತಾರೆ.

ಅಂಥವರಿಗೋಸ್ಕರ ಮೊದಲಿಗೆ ‘ಪುಷ್ಪಕ ವಿಮಾನ’ ಸಿನಿಮಾದಲ್ಲಿ ಕಮಲಹಾಸನ್ ತನ್ನ ಶರ್ಟ್ ಒಗೆದುಕೊಳ್ಳುತ್ತಿದ್ದ ಪರಿಯನ್ನು ನೆನಪಿಸಿ ಕೊಳ್ಳೋಣ. ಪುಷ್ಪಕ ವಿಮಾನ ಮೂಕಚಿತ್ರ ನನ್ನ ಅಚ್ಚುಮೆಚ್ಚಿನ ಚಿತ್ರಗಳಲ್ಲೊಂದು. ಐದಾರು ಸರ್ತಿಯಾದರೂ ನೋಡಿದ್ದೇನಿ ರಬಹುದು. ಆ ಕಾಲದಲ್ಲಿ ಕಮಲಹಾಸನ್ ನನ್ನ
ಅಚ್ಚುಮೆಚ್ಚಿನ ನಟನೂ ಹೌದು (ಈಗ ಆ ಎಲ್ಲ ಗೌರವಾಭಿಮಾನಗಳನ್ನು ಆತ ಕಳೆದುಕೊಂಡಿರುವುದೂ ಹೌದು). ಪುಷ್ಪಕ ವಿಮಾನ ಚಿತ್ರದ ಆ ದೃಶ್ಯ ನನಗಂತೂ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಹ್ಯಾಂಗರ್‌ಗೆ ನೇತಾಡಿಸಿಟ್ಟ ಶರ್ಟ್. ಅದು ನೀರು ಕಂಡು ಎಷ್ಟು ದಿನಗಳಾಗಿತ್ತೋ. ಕಮಲಹಾಸನ್‌ನ ಕೈಯಲ್ಲಿ ಒಂದು ಮಗ್. ಅದರಲ್ಲಿ ಸಾಬೂನಿನ ನೊರೆ ನೀರು. ಒಂದು ಹನಿಯೂ ವೇಸ್ಟ್ ಆಗದಂತೆ ಸ್ವಲ್ಪಸ್ವಲ್ಪವೇ ನೀರನ್ನು ತೆಗೆದುಕೊಂಡು ಶರ್ಟಿನ ಕಂಕುಳದ ಭಾಗಗಳಿಗಷ್ಟೇ ಲೇಪನ.
ಬೆವರಿನಿಂದಾದ ಕೊಳೆ ಹಂತಹಂತವಾಗಿ ಹೋಗತೊಡಗಿದಾಗ ಮುಖದಲ್ಲಿ ಸಂತೋಷ ಪ್ರಕಟ.

ವಾಹ್ ಕ್ಯಾ ಸೀನ್ ಹೈ! ಕಮಲಹಾಸನ್ ಬಿಟ್ಟರೆ ಬೇರಾರಿಗೂ ಅದನ್ನು ಅಷ್ಟು ನ್ಯಾಚುರಲ್ ಆಗಿ, ಪರಿಣಾಮಕಾರಿಯಾಗಿ ಅಭಿನಯಿಸಲಿಕ್ಕೆ ಸಾಧ್ಯವಿಲ್ಲವೇನೊ.
ಪುಷ್ಪಕ ವಿಮಾನದ ಕಮಲಹಾಸನ್ ಅಷ್ಟರ ಮಟ್ಟಿಗಾದರೂ ಶರ್ಟ್ ತೊಳೆದುಕೊಳ್ಳುತ್ತಿದ್ದರೆ ನಮ್ಮ ಎಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್‌ನಲ್ಲಿ ಅದಕ್ಕಿಂತಲೂ ಹೆಚ್ಚಿನ ಸೋಂಬೇರಿಗಳಿರುತ್ತಿದ್ದರು. ವಾರವಿಡೀ ಅದೇ ಪ್ಯಾಂಟ್ ಅದೇ ಶರ್ಟ್ ಧರಿಸಿ ಓಡಾಡುವವರು. ಯಾರಾದರೂ ಗಮನಿಸಿ ಕೇಳಿದರೆ, ‘ಹೌದು, ಸತತ ನಾಲ್ಕನೇ ದೇಖಾವೆ! ಆನ್ ಪಬ್ಲಿಕ್ ಡಿಮ್ಯಾಂಡ್!’ ಎಂದು ಸಮಜಾಯಿಶಿ ಕೊಡುತ್ತಿದ್ದ ಏಕವಸ್ತ್ರಭೂಪರು. ಹಾಕಿಕೊಳ್ಳಲಿಕ್ಕೆ ಬೇರೆ ಪ್ಯಾಂಟ್-ಶರ್ಟ್ ಇರುತ್ತಿರಲಿಲ್ಲ ವೆಂದಲ್ಲ, ಒಗೆದು ಸ್ವಚ್ಛಗೊಳಿಸಿದ್ದು ಇರುತ್ತಿರಲಿಲ್ಲ ಅಷ್ಟೇ. ಬಹುಶಃ ಅಂಥವರಿಗೆಂದೇ ಪುರಂದರ ದಾಸರು ಹೇಳಿದ್ದಿರಬೇಕು ‘ಲಂಗೋಟಿ ಬಲು ಒಳ್ಳೇದಣ್ಣಾ, ಒಬ್ರ ಹಂಗಿಲ್ಲದೇ ಮಡಿಗೆ ಒದಗುವುದಣ್ಣಾ…’ ಎಂದು. ಪುರಂದರ ದಾಸರ ಪ್ರಕಾರ ಲಂಗೋಟಿ ‘ಮಡಿವಾಳರಿಗೆ ಶತ್ರು, ಮಠದಯ್ಯಗಳ ಮಿತ್ರ’ ಅಂತೆ. ಅಷ್ಟೇ ಅಲ್ಲ ‘ಆಲಸಿಗರ ಮಿತ್ರ’ ಎಂದೂ ಹೇಳಬೇಕಿತ್ತು.

ಒಮ್ಮೆ ತಮಾಷೆಗಾಗಿ ಊಹಿಸಿಕೊಳ್ಳಿ: ಬಟ್ಟೆ ಒಗೆಯುವುದೆಂದರೆ ಬೋರ್ ಎನ್ನುವವರೆಲ್ಲ ಬೇರ್ ಮಿನಿಮಮ್ ಲಂಗೋಟಿಯನ್ನಷ್ಟೇ ಧರಿಸಿ ಎಂಜಿನಿಯರಿಂಗ್ ಕಾಲೇಜಿನ ಕಾರಿಡಾರುಗಳಲ್ಲಿ ಓಡಾಡಿದರೆ ಹೇಗಿರಬಹುದು!? ಆಗ ನಿಜವಾಗಿಯೂ ಅವರನ್ನು ಸರ್ವಜ್ಞರೆಂದೇ ಗುರುತಿಸಬೇಕಾಗುತ್ತದೆ… ವಾಹ್ ಕ್ಯಾ ಸೀನ್ ಹೈ! ಇಲ್ಲಿ ಅಮೆರಿಕದಲ್ಲೂ ಕಾಲೇಜು ಹುಡುಗರು ಡಾರ್ಮಿಟ್ರಿಗಳಲ್ಲೋ ಹಾಸ್ಟೆಲ್‌ಗಳಲ್ಲೋ ಇದ್ದಾಗ ಬಟ್ಟೆಗಳ ರಾಶಿ ಗುಡ್ಡದಷ್ಟಾದ ಮೇಲೆಯೇ ಲಾಂಡ್ರಿ ಮಾಡಿಕೊಳ್ಳುವುದು, ಅದೂ ಇಲ್ಲದಿದ್ದರೆ ತಿಂಗಳಿಗೊಮ್ಮೆಯೋ ಹೆತ್ತವರಿದ್ದಲ್ಲಿಗೆ ಬಂದಾಗ ಕಾರಲ್ಲಿ ಪೇರಿಸಿಕೊಂಡುಬಂದು ಬಟ್ಟೆ ಒಗೆದುಕೊಡುವ ಕೆಲಸವನ್ನೂ
ಹೆತ್ತವರಿಂದಲೇ ಮಾಡಿಸಿಕೊಳ್ಳುವುದೂ ಇದೆಯೆನ್ನಿ.

ಆಯ್ತು, ಈಗ ಮುಖ್ಯ ವಿಷಯಕ್ಕೆ ಬರೋಣ. ಬಟ್ಟೆ ತೊಳೆಯುವುದೆಂದರೆ ವಾಷಿಂಗ್‌ಮೆಷಿನ್‌ನಲ್ಲಿ ಬಟ್ಟೆಗಳ ರಾಶಿ ಯನ್ನೂ ಡಿಟರ್ಜೆಂಟ್ ಪೌಡರನ್ನೂ ಹಾಕಿ ಸ್ವಿಚ್ ಅದುಮಿದರೆ ಸಾಕು, ವಿಡಿಯೊಕಾನ್ ವಾಷಿಂಗ್‌ಮೆಷಿನ್‌ನ ಹಳೇ ಜಾಹಿರಾತಿನಂತೆ ಜಿಠಿ ಡಿZoeಛಿo… ಜಿಠಿ ಜ್ಞಿoಛಿo… ಜಿಠಿ ಛಿqಛ್ಞಿ bಜಿಛಿo ಠಿeಛಿ
ಟಠಿeಛಿo… qsಟ್ಠ Zಛಿ ಛಿZbqs ಟ್ಟ ಠಿeಛಿ oeಟಡಿ! ಎಂದಷ್ಟೇ ಗೊತ್ತಿರುವ ಒಂದು ತಲೆಮಾರು ಈಗ ನಗರಪ್ರದೇಶಗಳಲ್ಲಿ, ಮುಖ್ಯವಾಗಿ ಮೇಲ್ಮಧ್ಯಮ ವರ್ಗಗಳಲ್ಲಿ ಬೆಳೆಯುತ್ತಿದೆ. ಅಂಥವರು ಬಟ್ಟೆ ಒಗೆತದ ನೈಜ ಸೊಗಸಿನಿಂದ ವಂಚಿತರಾಗಿದ್ದಾರೆಂದೇ ಹೇಳಬೇಕು.

ಆಧುನಿಕ ತಂತ್ರಜ್ಞಾನವು ಬಟ್ಟೆ ಒಗೆಯುವ ಕೆಲಸವನ್ನು ಶ್ರಮರಹಿತವನ್ನಾಗಿ ಮಾಡಿದೆ ಯೇನೊ ನಿಜ; ಹೊಸಹೊಸ ಫ್ಯಾಷನ್ ನ ಬಟ್ಟೆಗಳನ್ನು ಡ್ರೈ-ಕ್ಲೀನಿಂಗ್
ಮಾತ್ರ ಮಾಡಬೇಕು, ನೀರಿನಲ್ಲಿ ಒಗೆಯ ಬಾರದೆಂಬ ಸೂಚನೆಗಳಿರುತ್ತವೆ ಎನ್ನುವುದೂ ನಿಜ. ಆದರೆ ಕಲ್ಲಿನ ಮೇಲೆ ಬಟ್ಟೆ ಒಗೆಯುವ, ಒಗೆದ ಮೇಲೆ ನೀರನ್ನೆಲ್ಲ ಹಿಂಡಿ ಬಟ್ಟೆಗಳನ್ನು ತಂತಿಯ ಮೇಲೆ ಹರವಿ ಒಣಗಿಸುವ, ಅಂಗಳದಲ್ಲಿ ಅಥವಾ ಟೆರೇಸ್ ಮೇಲೆ ಬಟ್ಟೆ ಒಣಗುತ್ತಿರುವಾಗಲೇ ಮಳೆ ಹನಿ ಬೀಳಲಾರಂಭಿಸಿದರೆ ಓಡಿಹೋಗಿ ಅವನ್ನೆಲ್ಲ ಒಳಗೆ ತರುವ, ಬಿಸಿಲಲ್ಲಿ ಒಣಗಿದ ಬಟ್ಟೆಯ ಆ ಗರಿಗರಿತನ ಮತ್ತು ವಿಶೇಷ ಪರಿಮಳವನ್ನು ಆಸ್ವಾದಿಸುವ ಚಟುವಟಿಕೆಯಿದೆಯಲ್ಲ
ಅದರಲ್ಲೊಂದು ವಿಶೇಷ ಸುಖವಿದೆ, ಸೊಗಸಿದೆ.

ಅದನ್ನು ಯಾವ ಆಟೊಮೆಟಿಕ್ ವಾಷಿಂಗ್‌ಮೆಶಿನ್ ಅಥವಾ ಡ್ರೈ-ಕ್ಲೀನಿಂಗ್ ಸಹ ಕೊಡಲಾರದು. ಅದರಲ್ಲೂ ಪಟ್ಟಣ ಪ್ರದೇಶಗಳಲ್ಲಿ ಗಡುಸಾದ ನಲ್ಲಿನೀರನ್ನು ಮಿತವಾಗಿ ಬಳಸಿ ಮಾಡಬೇಕಾದ ‘ಬಟ್ಟೆ ಒಗೆಯುವ ಶಾಸ್ತ್ರ’ಕ್ಕಿಂತ, ಗ್ರಾಮೀಣ ಪರಿಸರದಲ್ಲಿ ಯಥೇಚ್ಛ ಹರಿಯುವ ನೀರಿನಲ್ಲಿ ಬಟ್ಟೆ ಒಗೆದು ಅನುಭವಿಸಬೇಕು. ‘ಬಾತ್‌ರೂಮ್ ಸಿಂಗಿಂಗ್’ ಮಾದರಿಯಲ್ಲೇ ‘ಬಟ್ಟೆ ಒಗೆಯುತ್ತಿರುವಾಗಲೇ ಸಂಗೀತ ಕಛೇರಿ’ಯೂ ಇದ್ದರೆ ಮತ್ತೂ ಚೆನ್ನ. ಬಟ್ಟೆ ಒಗೆಯುವ ಶಿಲೆಗಳೂ ಸಂಗೀತವ ಹಾಡಿವೆ… ಆಗಬೇಕು. ಅದರ ಮಜಾನೇ ಬೇರೆ!

ಇನ್ನೊಂದೆಂದರೆ, ಹರಿಯುವ ನೀರಿನಲ್ಲಿ ಅಂದರೆ ಕಾಲುವೆ-ತೋಡು-ನದಿಗಳ ನೀರಿನಲ್ಲಿ ಗಡಸುತನ ಇಲ್ಲದಿರುವುದರಿಂದ ಸ್ವಲ್ಪೇಸ್ವಲ್ಪ ಸೋಪ್ ಅಥವಾ ಡಿಟರ್ಜೆಂಟ್ ಬಳಸಿದರೂ (ಹಳ್ಳಿಗಳಲ್ಲಿ ಸೀಗೆಪುಡಿ ಅಥವಾ ‘ಅಂಟುವಾಳ’ ಎಂಬ ಕಾಯಿಯ ಪುಡಿ ಬಳಸುವುದೂ ಇದೆ) ಧಾರಾಳ ನೊರೆ ಬರುತ್ತದೆ. ಬಟ್ಟೆಗಳೂ ಥಳಥಳ ಶುಭ್ರವಾಗುತ್ತವೆ. ಬಟ್ಟೆ ಒಗೆತ ಮನಸ್ಸಿಗೆ ಕೊಡುವ ಖುಶಿ ಹೆಚ್ಚುತ್ತದೆ. ನಾವು ಬಟ್ಟೆ ಒಗೆಯುವುದು ಅಥವಾ ಬಟ್ಟೆ ತೊಳೆಯುವುದು ಅಂತ ಸಾಮಾನ್ಯ ವಾಗಿ ಹೇಳುತ್ತೇವೆ, ಆದರೆ ಅದರೊಳಗೇ ಎಷ್ಟು ವೈವಿಧ್ಯಮಯ ರೀತಿಯಲ್ಲಿ ನಮ್ಮ ಕೈಕರಣ ನಡೆದಿರುತ್ತದೆ ಎಂಬ ಸೂಕ್ಷ್ಮವನ್ನು ಗಮನಿಸಿದರೆ ಅಚ್ಚರಿಯಾಗು ತ್ತದೆ!

ದೊಡ್ಡದೊಡ್ಡ ಬಟ್ಟೆಗಳನ್ನು ಅಥವಾ ಬೆಡ್‌ಶೀಟ್‌ಗಳನ್ನೆಲ್ಲ ಒಗೆಯುವಾಗ ಅವುಗಳನ್ನು ಜೋರಾಗಿಯೇ ಕಲ್ಲಿಗೆ ಬಡಿಯಬೇಕು. ಪುಟ್ಟ ಮಗುವಿನ ಅಂಗಿ, ಟೋಪಿ, ಕಾಲ್ಚೀಲ ಮುಂತಾದವನ್ನು ಹಾಗೆ ಒಗೆಯಲಾಗದು. ಅವುಗಳನ್ನು ನಿಧಾನವಾಗಿ ಕಲ್ಲಿನ ಮೇಲೆ ಕುಕ್ಕಬೇಕು. ತೆಳುವಾದ ಬಟ್ಟೆಗಳಿದ್ದರೆ ಎರಡೂ ಕೈಗಳಿಂದ ಉಜ್ಜಬೇಕು ಹಿಚುಕಬೇಕು, ಸುರುಳಿ ಸುತ್ತಿ ಲಟ್ಟಿಸಿದಂತೆ ಮಾಡಬೇಕು. ನೀರು ತುಂಬಿದ ಬಾಲ್ದಿಯಲ್ಲೇ ಬಟ್ಟೆಯನ್ನು ಆಚೀಚೆ ಜಾಲಾಡಿಸಬೇಕು. ಆಗಲೇ ಕೊಳೆ ಯೆಲ್ಲ ಹೋಗುವುದು.

ಸಕಲ‘ಕಲಾ’ವಲ್ಲಭ ಮಕ್ಕಳ ಬಟ್ಟೆಗಳಲ್ಲಿ ಕಲೆಗಳಿದ್ದದ್ದನ್ನು ತೆಗೆಯಲು ಒಗೆಯುವಾಗ ವಿಶೇಷ ಕ್ರಮ ಕೈಗೊಳ್ಳಬೇಕಾಗುತ್ತದೆ. ಬಟ್ಟೆ ಹತ್ತಿಯದೇ ಸಿಂಥೆಟಿಕ್
ವಸ್ತುವಿನದೇ ಎಂಬುದನ್ನವಲಂಬಿಸಿ ಅದಕ್ಕೆ ಅನುಗುಣವಾಗಿ ತೊಳೆಯಬೇಕಾಗುತ್ತದೆ. ಗೋಣಿಚೀಲ ಗುಡಾರಗಳನ್ನೆಲ್ಲ ಒಗೆಯುವುದಾದರೆ ಕೈಗಳ ಬಲ ಎಲ್ಲಿಗೂ ಸಾಲದು. ಭಕ್ತ ಕುಂಬಾರನು ‘ವಿಠಲಾ ಪಾಂಡುರಂಗ ವಿಠಲಾ’ ಎನ್ನುತ್ತ ಆವೆಮಣ್ಣನ್ನು ಹದಮಾಡಿದಂತೆ ಕಾಲುಗಳಿಂದಲೇ ಗೊಣಿಚೀಲ ಗುಡಾರಗಳನ್ನು ತುಳಿದು ತೊಳೆಯಬೇಕಾಗುತ್ತದೆ. ಅದಕ್ಕೇ ಹೇಳಿದ್ದು ಬಟ್ಟೆ ಒಗೆಯುವುದರಲ್ಲೂ ಕಂಡಾಬಟ್ಟೆ ಸೊಬಗಿದೆ, ಸೊಗಸಿದೆ.

ನಿಜಕ್ಕಾದರೆ ಯಾವ ಕೆಲಸವಾದರೂ ಹಾಗೆಯೇ ಅಲ್ಲವೇ? ಮನಸ್ಸಿಟ್ಟು ಮಾಡಿದರೆ ಶ್ರಮ ಗೊತ್ತಾಗುವುದಿಲ್ಲ, ಅಷ್ಟೇಅಲ್ಲ, ಸಂತೋಷ ಇಮ್ಮಡಿಯಾಗುತ್ತದೆ.
ಬಟ್ಟೆ ಒಗೆಯುವುದಕ್ಕೆ ಸಂಬಂಧಿಸಿದಂತೆ, ಮುಖ್ಯವಾಗಿ ಅಗಸ ಒದಗಿಸುವ ಸೇವೆಗೆ ಸಂಬಂಧಿಸಿದಂತೆ ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ನಿಯಮಗಳನ್ನು ಹೇಳ ಲಾಗಿದೆಯೆಂದರೆ ನಂಬುತ್ತೀರಾ? ಬಟ್ಟೆಗಳನ್ನು ಒಗೆಯುವಾಗ ಮರದ ದಿಮ್ಮಿ ಅಥವಾ ನುಣುಪಾದ ಕಲ್ಲಿಗಷ್ಟೇ ಬಡಿಯಬಹುದು. ಬಟ್ಟೆಗಳಿಗೆ ಹಾನಿಯಾಗುವಂತೆ ಒಗೆಯಬಾರದು. ಬೇರೆಬೇರೆ ಗಿರಾಕಿಗಳ ಬಟ್ಟೆಗಳನ್ನು ಮಿಕ್ ಅಪ್ ಮಾಡುವುದಾಗಲೀ, ಒಗೆಯಲಿಕ್ಕೆಂದು ಪಡೆದ ಬಟ್ಟೆಗಳನ್ನು ಉಪಯೋಗಿಸುವುದು, ಮಾರುವುದು ಇತ್ಯಾದಿ ಸಲ್ಲ.

ಅಂಥ ಮೋಸದ ಕೃತ್ಯಗಳನ್ನು ಮಾಡಿದ್ದೇ ಆದಲ್ಲಿ ಅದಕ್ಕೆ ನಿರ್ದಿಷ್ಟ ಪ್ರಮಾಣದ ಜುಲ್ಮಾನೆ, ಶಿಕ್ಷೆಗಳನ್ನು ಅನುಭವಿಸಬೇಕು. ಬಟ್ಟೆಗಳು ಯಾವ ಮಟ್ಟದಲ್ಲಿ ಶುಭ್ರವಾಗಬೇಕು ಎಂಬುದನ್ನವಲಂಬಿಸಿ ಎಷ್ಟು ದಿನಗಳೊಳಗೆ ಹಿಂದಿರುಗಿಸಬೇಕು ಎಂಬ ಪಟ್ಟಿಯೂ ಇದೆ. ಹೊಸ ಬಟ್ಟೆಯನ್ನು ಒಮ್ಮೆ ಒಗೆದರೆ ಅದರ ಬೆಲೆ ನಾಲ್ಕನೇ ಒಂದರಷ್ಟು, ಎರಡು ಸಲ ಒಗೆದರೆ ಐದನೇ ಒಂದರಷ್ಟು ಸವಕಳಿಯಾಗುತ್ತದೆ… ಹೀಗೆ ಸಾಗುತ್ತವೆ ಕೌಟಿಲ್ಯನ ನಿಯಮಗಳು. ನೋಡಿದಿರಾ! ಬಟ್ಟೆ ಒಗೆಯುವುದು ಎಂಬ ಸಿಲ್ಲಿ(ಎಂದುಕೊಳ್ಳಬಹುದಾದ) ವಿಷಯದ ಹಿಂದೆಯೂ ಎಷ್ಟು ಕೌತುಕಮಯ ಮತ್ತು ಸ್ವಾರಸ್ಯಕರ ವಿಚಾರಗಳಿರುತ್ತವೆ!

ಅಂದಹಾಗೆ ಕೌಟಿಲ್ಯ ಮಾಡಿಟ್ಟ ನಿಯಮಗಳನ್ನೆಲ್ಲ ಈಗ ಪಾಲಿಸಲಾಗುತ್ತದೆಯೋ ಗೊತ್ತಿಲ್ಲ, ಆದರೆ ಅಗಸ ವೃತ್ತಿಯವರು ಗಿರಾಕಿಗಳ ಬಟ್ಟೆಗಳನ್ನು ಕರಾರು ವಾಕ್ಕಾಗಿ ಗುರುತು ಮಾಡಿಟ್ಟುಕೊಳ್ಳುವ, ಎಷ್ಟೇ ರಾಶಿ ಬಟ್ಟೆಗಳಿದ್ದರೂ ಒಂದರೊಡನೊಂದು ಮಿಕ್ಸ್‌ಅಪ್ ಆಗದಂತೆ ಚಾಕಚಕ್ಯತೆ ವಹಿಸುವ ಸಂಗತಿಯಂತೂ ನಿಜಕ್ಕೂ ಅಚ್ಚರಿ ಹುಟ್ಟಿಸುವಂಥದು. ತಲೆತಲಾಂತರಗಳಿಂದ ಬಂದಿರುವ ಆ ಚಾಣಾಕ್ಷತೆಯ ದೃಷ್ಟಿಯಿಂದಲೂ ಅಗಸ ಫಸ್ಟ್ ಕ್ಲಾಸ್ ಸಿಟಿಜನ್ ಅಥವಾ ಪ್ರಥಮ ದರ್ಜೆಯ ಪ್ರಜೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಮತ್ತು, ಅದೇ ಲಾಜಿಕ್‌ನಲ್ಲಿಯೇ ನಾವೂ ನಮ್ಮ ನಮ್ಮ ಬಟ್ಟೆಗಳನ್ನು ಒಗೆದುಕೊಳ್ಳುವ ಅಗಸರಾಗ ಬೇಕಾದಾಗ ಆಲಸ್ಯ ತೊರೆದು ದಕ್ಷತೆಯನ್ನು ಕಾರ್ಯಕ್ಷಮತೆಯನ್ನು ಮೈಗೂಡಿಸಬೇಕೆಂಬುದರಲ್ಲೂ ಎರಡು ಮಾತಿಲ