ಪ್ರಸ್ತುತ
ಕೆ.ಎಂ.ಶಿವಪ್ರಸಾದ್
shivaprasad.km05@gmail.com
ಶಿಕ್ಷಣ ವ್ಯವಸ್ಥೆಯೇ ಹದಗೆಟ್ಟು ಹೋಗುತ್ತಿದೆ. ಆಡಳಿತ ನಡೆಸುವವರು, ಶಿಕ್ಷಕರು, ಹೆತ್ತವರು ಸೇರಿದಂತೆ ಸರ್ವರೂ ಸಮಾನ ಪಾತ್ರದಾರರಾಗುತ್ತಿದ್ದಾರೆ. ಆ ಕಾರಣಕ್ಕಾಗಿಯೇ ಹಳ್ಳಿ-ಹಳ್ಳಿಗಳಲ್ಲೂ ಖಾಸಗಿ ಶಾಲೆಗಳು ತಲೆಯೆತ್ತಿ ನಿಲ್ಲುತ್ತಿವೆ. ಸರಕಾರಿ ಶಾಲಾ ಶಿಕ್ಷಕರೇ ಖಾಸಗಿ ಮಕ್ಕಳಿಗೆ ಮನೆಪಾಠ ಮಾಡುತ್ತಾರೆ. ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸುತ್ತಾರೆ.
ಉಚಿತ ಸೈಕಲ್, ಉಚಿತ ಸಮವಸ್ತ್ರ, ಉಚಿತ ಶೂ, ಮಧ್ಯಾಹ್ನ ಬಿಸಿಯೂಟ, ಮೊಟ್ಟೆ- ಹಾಲು, ಉಚಿತ ಪಠ್ಯಪುಸ್ತಕ… ಎಲ್ಲವೂ ಉಚಿತ. ಆದರೂ ಸರಕಾರಿ ಶಾಲೆಗಳಿಗೆ ಮಕ್ಕಳು ಬರುತ್ತಿಲ್ಲ. ಕಳೆದ ವರ್ಷ ನೂರೋ-ಸಾವಿರೋವೋ? ಪ್ರಸಕ್ತ ವರ್ಷ ಮತ್ತೊಂದಿಷ್ಟು. ಒಟ್ಟಿನಲ್ಲಿ ಪ್ರತಿವರ್ಷ ಶಾಲೆಗಳ ವಿಲೀನ ಸಾಗುತ್ತಲೇ ಇದೆ. ‘ಸರ್ವರಿಗೂ ಶಿಕ್ಷಣ ನೀಡುತ್ತೇವೆ’ ಎನ್ನುವ ಸರಕಾರ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ವಿಫಲವಾಗುತ್ತಿದೆ.
ಈ ಕಾರಣಕ್ಕೆ ಸರಕಾರಿ ಶಾಲೆಗಳ ಶಿಕ್ಷಕರೇ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ದಾಖಲು ಮಾಡುತ್ತಿದ್ದಾರೆ. ಹಾಗಿದ್ದಾಗ ಸಾಮಾನ್ಯ ಜನರು ತಮ್ಮ ಮಕ್ಕಳನ್ನು ಅದ್ಯಾವ ಪುರುಷಾರ್ಥಕ್ಕೆ ಸರಕಾರಿ ಶಾಲೆಗೆ ಸೇರಿಸಿ ಯಾರು? ಪಾಠ ಮಾಡುವ ಶಿಕ್ಷಕರಿಗೇ ಸರಕಾರಿ ಶಾಲೆಯಲ್ಲಿ ತಮ್ಮ ಮಕ್ಕಳು ವಿದ್ಯಾಭ್ಯಾಸ ಮಾಡುವುದು ಇಷ್ಟವಿಲ್ಲವೆಂದ ಮೇಲೆ ಸರಕಾರಿ ಶಾಲೆಗಳ ಉಳಿವಾದರೂ ಯಾರಿಗಾಗಿ? ಏತಕ್ಕಾಗಿ? ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ಕಟ್ಟಡ ಕಟ್ಟುವುತ್ತಿರುವುದಾದರೂ, ಶಿಕ್ಷಕರಿಗೆ ಸಂಬಳ ಕೊಡುತ್ತಿರುವುದಾದರೂ ಏಕೆ? ಯಾರಿಗೂ ಬೇಡವಾದ ಸರಕಾರಿ ಶಾಲೆಗಳನ್ನು ಉಳಿಸಿಕೊಂಡು ಅದ್ಯಾವ ಇತಿಹಾಸ ಸೃಷ್ಟಿ ಮಾಡಬೇಕಾಗಿದೆ.
ನಗರ ಪ್ರದೇಶಗಳನ್ನು ಬಿಡಿ, ಗ್ರಾಮೀಣ ಪ್ರದೇಶಗಳಲ್ಲೂ ಪೋಷಕರಿಗೆ ಖಾಸಗಿ ಶಾಲೆಗಳ ಮೇಲಿನ ವ್ಯಾಮೋಹ ದುಪ್ಪಟ್ಟಾಗಿದೆ. ಪರಿಣಾಮ ಹಳ್ಳಿ- ಹಳ್ಳಿಗಳಲ್ಲೂ ಖಾಸಗಿ ಶಾಲೆಗಳು ನಾಯಿ ಕೊಡೆಗಳಂತೆ ತಲೆಯೆತ್ತಿ ನಿಲ್ಲುತ್ತಿವೆ. ಕೂಲಿ ಮಾಡುವವರಿಂದ ಹಿಡಿದು ಕೋಟ್ಯಧೀಶ್ವರರ ತನಕ ಎಲ್ಲರದ್ದು ಒಂದೇ ಧಾವಂತ- ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು. ಆ ಗುಣಮಟ್ಟದ ಶಿಕ್ಷಣ ಕೇವಲ ಖಾಸಗಿ ಶಾಲೆಯಲ್ಲಷ್ಟೇ ಸಾಧ್ಯವೇ ಹೊರತು ಸರಕಾರಿ ಶಾಲೆಗಳಿಂದ ಸಾಧ್ಯವಿಲ್ಲವೆಂಬ ಅಂತಿಮ ನಿರ್ಧಾರಕ್ಕೆ ಬಹುತೇಕರು ಬಂದಿದ್ದಾರೆ.
ಇದರಿಂದ ಪ್ರತಿವರ್ಷ ಸರಕಾರಿ ಶಾಲೆಗಳ ಮುಚ್ಚುವ ಪ್ರಕ್ರಿಯೆ ಬಲು ಜೋರಾಗಿಯೇ ನಡೆಯು ತ್ತಿದೆ. ಪರಿಸ್ಥಿತಿ ಒಂದು ಕಡೇ ಕೈಮೀರಿ ಹೋಗುತ್ತಿರುವಾಗ ಮತ್ತೊಂದು ಕಡೆ ಒಂದಷ್ಟು ಮಂದಿ ಕೈಯಲ್ಲಿ ಕುಡುಗೋಲು, ಪೊರಕೆ ಹಿಡಿದು ಅಡ್ಡಾಡುತ್ತಿದ್ದಾರೆ. ಮತ್ತೊಂದಷ್ಟು ಮಂದಿ ಸುಣ್ಣ-ಬಣ್ಣ, ಪೆನ್ನು-ಪುಸ್ತಕ- ಪೆನ್ಸಿಲು, ಬ್ಯಾಗ್, ಶೂ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಇಂಥವುಗಳಿಂದ ಶಾಲೆ ಉಳಿದೀತೆ? ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ‘ಸರಕಾರಿ ಶಾಲೆ ಉಳಿಸಿ’ ಅಭಿಯಾನ ಬಹುದೊಡ್ಡ ಮಟ್ಟದ ಸದ್ದು ಮಾಡುತ್ತಿದೆ.
ಇಂತಹ ಅಭಿಯಾನ ನಡೆಸುತ್ತಿರುವವರಿಗೆ ಅಷ್ಟೇ ದೊಡ್ಡಮಟ್ಟದಲ್ಲಿ ಬಿರುದುಗಳನ್ನು ನೀಡಿ ಸನ್ಮಾನಿಸುವ ಕೆಲಸವೂ ನಡೆಯುತ್ತಿದೆ. ಹೌದು, ಒಂದಷ್ಟು ಸಮಾನ ಮನಸ್ಕರು ಕೂಡಿ ಸಮಿತಿ ಗಳನ್ನು, ಸೇವಾ ಟ್ರಸ್ಟ್ಗಳನ್ನು ರಚಿಸಿಕೊಂಡು ಚಂದಾ ಎತ್ತಿ ಸರಕಾರಿ ಶಾಲೆಗಳಿಗೆ ನಾನಾ ರೀತಿಯ ಕೊಡುಗೆಗಳನ್ನು, ಮೂಲ ಸೌಲಭ್ಯಗಳನ್ನು, ಶೈಕ್ಷಣಿಕ ಪರಿಕರಗಳನ್ನು ಒದಗಿಸಿ ಕೊಡುತ್ತಿದ್ದಾರೆ. ಮತ್ತೊಂದೆಡೆ ಸ್ವಯಂ-ಘೋಷಿತ ಶಿಕ್ಷಣ ಪ್ರೇಮಿಗಳೆನಿಸಿಕೊಂಡವರು ಪ್ರಚಾರದ ಗೀಳಿನೊಂದಿಗೆ
ಶಾಲೆಗಳಿಗೆ ಒಂದಷ್ಟು ದಾನದ ರೂಪದ ವಸ್ತುಗಳನ್ನು ನೀಡಿ ತಾವೇ ಮಹಾನ್ ಸಮಾಜ ಸೇವಕರು ಎಂಬಂತೆ ದೊಂಬರಾಟ ಪ್ರದರ್ಶಿಸುತ್ತ, ತಂತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಲೂ ಇದ್ದಾರೆ.
ಇವೆಲ್ಲದರ ನಡುವೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ, ಎಲೆಮರೆ ಕಾಯಿಯಂತೆ ಹಿರಿಯ ವಿದ್ಯಾರ್ಥಿಗಳು, ನೈಜ ಹೋರಾಟಗಾರರು, ಶಿಕ್ಷಣ ಪ್ರೇಮಿಗಳು ಸರಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಟೊಂಕಕಟ್ಟಿ ದುಡಿಯುತ್ತಿದ್ದಾರೆ. ಆದರೆ ಸರಕಾರಿ ಶಾಲೆಗಳನ್ನು ಉಳಿಸಿ- ಬೆಳೆಸಲು ಸಾಮಾನ್ಯ ಜನರಿಗೆ ಹೊರೆಯಾಗದಂತೆ ಶಿಕ್ಷಣ ಒದಗಿಸಿಕೊಡಬೇಕಾದ ಸರಕಾರ ಹಾಗೂ ಆಡಳಿತಗಾರರು ಮಾತ್ರ ಇದ್ಯಾವುದು ತಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂಬುವಂತೆ ಮುಗುಮ್ಮಾಗಿ ಕುಳಿತು ಬಿಟ್ಟಿದ್ದಾರೆ.
ಶಿಕ್ಷಣ ವ್ಯವಸ್ಥೆಯೇ ಹದಗೆಟ್ಟು ಹೋಗುತ್ತಿದೆ. ಇಲ್ಲಿ ಯಾರೂ, ಯಾರನ್ನೂ ಪ್ರಶ್ನಿಸುವಷ್ಟು ಪ್ರಾಮಾಣಿಕತೆ ಉಳಿಸಿಕೊಂಡತ್ತಿಲ್ಲ. ಆಡಳಿತ ನಡೆಸುವವರು, ಶಿಕ್ಷಕರು, ಹೆತ್ತವರು ಸೇರಿದಂತೆ ಸರ್ವರೂ ಸಮಾನ ಪಾತ್ರದಾರರಾಗುತ್ತಿದ್ದಾರೆ. ಆ ಕಾರಣ ಕ್ಕಾಗಿಯೇ ಹಳ್ಳಿ-ಹಳ್ಳಿಗಳಲ್ಲೂ ಖಾಸಗಿ ಶಾಲೆಗಳು ತಲೆಯೆತ್ತಿ ನಿಲ್ಲುತ್ತಿವೆ. ಸರಕಾರಿ ಶಾಲಾ ಶಿಕ್ಷಕರೇ ಖಾಸಗಿ ಮಕ್ಕಳಿಗೆ ಮನೆಪಾಠ ಮಾಡುತ್ತಾರೆ. ಖಾಸಗಿ ಶಾಲೆಗಳ ಹಾವಳಿ ಎಷ್ಟರಮಟ್ಟಿಗೆ ಇದೆಯೆಂದರೆ ಗುಣಮಟ್ಟದ ಶಿಕ್ಷಣ, ಆಂಗ್ಲಭಾಷಾ ವ್ಯಾಮೋಹವನ್ನೇ ಬಂಡವಾಳ ಮಾಡಿಕೊಂಡು ಸರಕಾರಿ ಶಾಲೆಗಳ ಕತ್ತು ಹಿಚುಕಿ ಸ್ವಲ್ಪ ಸ್ವಲ್ಪವೇ ಉಸಿರುಗುಟ್ಟಿಸಿ ಅಂತ್ಯಕಾಲದತ್ತ ಕೊಂಡೊಯ್ಯುತ್ತಿವೆ.
ಹಾಗಾಗಿಯೇ ಖಾಸಗಿ ಶಾಲೆಯ ಬಸ್ಸುಗಳು ಮಹಾನಗರ, ನಗರಗಳಿಂದ ಹಿಡಿದು ಕುಗ್ರಾಮದವರೆಗೂ ಸಂಪರ್ಕ ಕಲ್ಪಿಸುತ್ತಿವೆ. ವಿಪರ್ಯಾಸವೆಂದರೆ ಸರಕಾರಿ ಶಾಲೆಯ ಶಿಕ್ಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಿ ತಾವು ಮಾತ್ರ ‘ಸರಕಾರಿ ಶಾಲೆಗೆ ಮಕ್ಕಳನ್ನು ಸೇರಿಸಿ, ಸರಕಾರಿ ಶಾಲೆ ಉಳಿಸಿ’ ಎಂದು ಮನೆ ಮನೆ ಅಭಿಯಾನ ನಡೆಸುತ್ತಿದ್ದಾರೆ.
ಇಷ್ಟೆಲ್ಲ ನಡೆಯುತ್ತಿರುವಾಗಲೂ ಆಳುವ ಸರಕಾರಗಳೇನು ಕತ್ತೆ ಕಾಯುತ್ತಿವೆಯೇ?! ಗುಣಮಟ್ಟದ ಶಿಕ್ಷಣ, ಆರೋಗ್ಯ ಎರಡು ಪ್ರಮುಖವಾಗಿ ಸರಕಾರಗಳಿಂದ ದೇಶದ ಪ್ರಜೆಗಳಿಗೆ ಸಿಗಬೇಕಾದ ಆದ್ಯತೆಗಳು. ಇವೆರಡರಲ್ಲೂ ಆದಷ್ಟು ದಕ್ಷತೆ, ಗುಣಮಟ್ಟ ಕಾಪಾಡಿಕೊಳ್ಳಬೇಕಾದದ್ದು ಸರಕಾರಗಳ ಕೆಲಸ. ಆದರೆ ಎರಡರಲ್ಲೂ ಇದುವರೆಗೂ ಗುಣಮಟ್ಟವನ್ನಾಗಲಿ, ಪರಿಪೂರ್ಣತೆಯ
ನ್ನಾಗಲಿ ಸಾಽಸಲು ಯಾವ ಆಳುವ ದೊಣ್ಣೆ ನಾಯಕ ನಿಂದಲೂ ಸಾಧ್ಯವಾಗಿಲ್ಲ ಎಂಬುದೇ ದುರಂತ.
ಕನಿಷ್ಠ ಶಾಲಾ-ಕಾಲೇಜುಗಳ ಕಟ್ಟಡ ನಿರ್ಮಾಣದಲ್ಲೂ ಗುಣಮಟ್ಟ ಕಾಪಾಡಿಕೊಳ್ಳಲಾಗಿಲ್ಲ. ಬದಲಾವಣೆಗೆ ಮುನ್ನುಡಿ ಬರೆಯಬೇಕೆಂದರೆ ತೆಗೆದುಕೊಳ್ಳುವ ನಿರ್ಧಾರಗಳು ಅಷ್ಟೇ ಗಟ್ಟಿಯಾಗಿರಬೇಕು. ದಿಟ್ಟ ನಿರ್ಧಾರವಿಲ್ಲದೇ, ಭವಿಷ್ಯದ ಬಗೆಗಿನ
ಕಾಳಜಿಯಲ್ಲಿ ಗಟ್ಟಿತನವಿಲ್ಲದಿದ್ದರೆ ಯಾವೊಂದು ಯೋಜನೆಗಳು, ಆಲೋಚನೆಗಳು ಕಾರ್ಯರೂಪಕ್ಕಿಳಿಯುವುದಿಲ್ಲ. ಹಾಗಾಗಿ ಸರಕಾರಿ ಶಾಲೆಗಳನ್ನು ಉಳಿಸುವ ಇಚ್ಛಾಶಕ್ತಿಯೇನಾದರೂ ಸರಕಾರಗಳಿಗಿದ್ದರೆ ಸರಕಾರದ ಡಿ ಗ್ರೂಪ್ ನೌಕರನಿಂದ ಎ ಗ್ರೂಪ್ ಅಧಿಕಾರಿಯವರೆಗೂ, ರಾಜಕಾರಣಿಗಳ ಮಕ್ಕಳು, ಮೊಮ್ಮಕ್ಕಳು ಸರ್ಕಾರಿ ಶಾಲೆ, ಕಾಲೇಜುಗಳ ಶಿಕ್ಷಣ ಪಡೆಯಲೇ ಬೇಕೆಂಬ ಕಾಯಿದೆ ಜಾರಿಗೆ ತರಲೇಬೇಕು. ಅದಿಲ್ಲದಿದ್ದರೆ ಸಂಪೂರ್ಣ ಶಿಕ್ಷಣ ಖಾಸಗೀಕರಣ ಮಾಡಿ ಕೈ ತೊಳೆದುಕೊಳ್ಳುವುದು ಒಳಿತು.
ಏಕೆಂದರೆ ಸಂಬಳ, ಕಟ್ಟಡ ನಿರ್ಮಾಣ, ಉಚಿತ ಭಾಗ್ಯಗಳಿಗೆ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡುತ್ತಿವೆ.ಆದರ ಬದಲಾಗಿ ಸರಕಾರಿ ಶಾಲಾ-ಕಾಲೇಜುಗಳನ್ನೇ ಮುಚ್ಚಿಬಿಟ್ಟರೆ ಸಾವಿರಾರು ಕೋಟಿ ಸಂಪತ್ತನ್ನು ಬೇರೆ ಅಭಿವೃದ್ಧಿ ಕೆಲಸಗಳಿಗೆ ವ್ಯಯಿಸಬಹುದಲ್ಲವೇ. ಇಲ್ಲ ತಮಗೆ ಸರಕಾರಿ ಶಾಲೆಗಳನ್ನು ಉಳಿಸಬೇಕೆಂಬ ಇಚ್ಛಾಶಕ್ತಿ ಇದೆ ಎನ್ನುವುದಾದರೆ ಜಾರಿಗೆ ತರಲು ಯಾವ ದೊಣ್ಣೆ ನಾಯಕನಿಗಾದರೂ ಸಾಧ್ಯವಿದೆಯೇ? ಇಂಥ ಕಾನೂನು ಇಲ್ಲವಾದಲ್ಲಿ ಎಲ್ಲಾ ದೂರದ ಎಸಿ ಕೊಠಡಿ ಯಲ್ಲಿ ಕುಳಿತು ಜಾರಿಗೆ ತರುವ ಯೋಜನೆಗಳು ಕಾರ್ಯರೂಪಕ್ಕೆ ಬಾರದೇ ಹಳ್ಳ ಹಿಡಿಯುತ್ತವೆ.
ಮೂಲಭೂತ ಅಗತ್ಯಗಳಲ್ಲಿ ಒಂದಾದ ಗುಣಮಟ್ಟದ ಶಿಕ್ಷಣ ಒದಗಿಸುವುದು, ಆಳುವ ಜನರ ಕರ್ತವ್ಯವೇ ಹೊರತು ಅದು ಅನುಕಂಪದ ಸರಕಲ್ಲ. ಇದು ಅರ್ಥವಾಗದ ಕಾರಣಕ್ಕೇ ಶಿಕ್ಷಕರಿಗೆ ಬೋಧನ ಕಾರ್ಯಕ್ಕಿಂತ ಬೇರೆಬೇರೆ ಕಾರ್ಯಗಳಿಗೇ ಹೆಚ್ಚು ನಿಯೋಜಿಸಿ, ತಮ್ಮ ಆಡಳಿತಾಂಗದ ಭಾರ ಇಳಿಸಿಕೊಳ್ಳುತ್ತಿದ್ದೆ ಅಧಿಕಾರ ವರ್ಗ. ಮೊಟ್ಟ ಮಲಿಗೆ ಶಿಕ್ಷಕರನ್ನು ಶೈಕ್ಷಣಿಕ ಕೆಲಸದ ಹೊರತು ಇತರ ಜವಬ್ದಾರಿಗಳಿಂದ ಮುಕ್ತರನ್ನಾಗಿಸಬೇಕಿದೆ.
ಬಹುತೇಕ ಖಾಸಗಿ ಶಾಲಾ-ಕಾಲೇಜುಗಳ ಹಾಗೂ ಆಸ್ಪತ್ರೆಗಳ (ಮತ್ತದೂ ವೈದ್ಯ ಶಿಕ್ಷಣವೇ) ಮಾಲೀಕತ್ವ ನಮ್ಮನ್ನಾಳುವ ಜನನಾಯಕರು, ಜನಪ್ರತಿನಿಧಿಗಳು, ಮಠಾಧೀಶರು, ದೊಡ್ಡ ದೊಡ್ಡ ಬಿಸಿನೆಸ್ ಮ್ಯಾನ್ಗಳ ಬಳಿಯಿದೆ. ಹೀಗಾಗಿ ಸರ್ಕಾರಿ ಶಾಲಾ-ಕಾಲೇಜುಗಳು ಉದ್ದಾರವಾಗುವುದು ಬೇಕಿಲ್ಲ. ಸಾಮಾನ್ಯ ಜನರ ನೋವು ಸಾಮಾನ್ಯರ ಶೋಷಣೆಗಳಿದಿವೆ.
ಚುನಾವಣೆಗಳಲ್ಲಿ ಜನರ ಮುಂದೆ ಮಂಡಿಯೂರಿ ಮತಭಿಕ್ಷೆ ಕೇಳುವ ರಾಜಕಾರಣಿಗಳು ಚುನಾವಣೆ ಬಳಿಕ, ಅದೇ ತಂತಮ್ಮ ಒಡೆತನದ ಶೈಕ್ಷಣಿಕ ಸಂಸ್ಥೆಗಳ ಮುಂದೇ ಅದೇ ಮತದಾರ ಮಂಡಿಯೂರುವಂತೆ ಮಾಡುತ್ತಿದ್ದಾರೆ. ಜನರ ಹಿತ ಮರೆತು ಸುಲಿಗೆಗೆ ಇಳಿದಿದ್ದಾರೆ. ಸಾಮಾನ್ಯರ ಬಹುತೇಕ ಸಂಪಾದನೆ ಮಕ್ಕಳ ಶಿಕ್ಷಣ, ಆರೋಗ್ಯದ ಭದ್ರತೆಗಾಗಿಯೇ ವೆಚ್ಚವಾಗುತ್ತಿದೆ. ದುರ್ದೈವವೆಂದರೆ ಪ್ರಜೆಗಳು ಕೂಡ ಇಂತಹವರನ್ನೇ ಬೆಂಬಲಿಸುತ್ತಿರುವ ಕಾರಣದಿಂದ ಬಹುತೇಕ ಸರಕಾರಿ ಯೋಜನೆಗಳು ಹಳ್ಳಹಿಡಿಯುತ್ತಿವೆ.
ಸರಕಾರದ ನೀತಿ ನಿರೂಪಣೆಗಳನ್ನೇ, ಕಾರ್ಯವೈಖರಿಗಳನ್ನೇ ಬದಲಾಯಿಸಬಲ್ಲ ತಾಕತ್ತಿರುವವರೆಲ್ಲ ಶಿಕ್ಷಣ ಸಂಸ್ಥೆ
ಗಳನ್ನು, ವೈದ್ಯಕೀಯ ಕಾಲೇಜುಗಳನ್ನು ನಡೆಸುತ್ತಿರುವಾಗ, ಅವರ ಶಿಕ್ಷಣ ಸಂಸ್ಥೆಗಳೇ ಹಣ ಮಾಡುವ ಕಾಯಕ ನಿಭಾಯಿಸು ತ್ತಿರುವಾಗ ಸರ್ಕಾರಿ ಶಾಲೆಗಳನ್ನು ಪೈಪೋಟಿ ಜಗತ್ತಿಗನುಗುಣವಾಗಿ ರೂಪಿಸುವ ಕೆಲಸ ನಡೆಯಲು ಸಾಧ್ಯವೇ?! ಜತೆಗೆ ಭಾವನಾತ್ಮಕ ಆಟ. ಏಕೆಂದರೆ ಮಠಾಧೀಶರು, ರಾಜಕಾರಣಿಗಳೆಲ್ಲ ಜಾತಿ-ಧರ್ಮದ ಸಂಕೋಲೆಗಳೊಳಗೆ ಪ್ರಜೆಗಳನ್ನು ಬಂಽಸಿಟ್ಟು ಭಾವನಾತ್ಮಕ ಆಟವಾಡುತ್ತಿದ್ದಾರೆ.
ಜನರು ಕೂಡ ಇಂಥವನ್ನು ಪ್ರಶ್ನಿಸುವ ಹಕ್ಕನ್ನೇ ಮರೆತು ಕುಳಿತಿದ್ದಾರೆ. ಎಲ್ಲಕ್ಕಿಂತ ನಾಡಿಗೆ ಉತ್ತಮ ಪ್ರಜೆಗಳನ್ನು ಕೊಡುಗೆ ಯಾಗಿ ಕೊಡಬೇಕಾದ ಶಿಕ್ಷಕರು ಕೂಡ ತಮ್ಮ ಜವಬ್ದಾರಿ ಮರೆತಂತಿರುವುದರಿಂದ ಭವಿಷ್ಯದಲ್ಲಿ ಸರಕಾರಿ ಶಾಲೆಗಳು ಇತಿಹಾಸದ ಪುಟ ಸೇರಿದರೇ ಅಚ್ಚರಿಯಂತೂ ಅಲ್ಲ.