Wednesday, 11th December 2024

ಒಂದು ಮರ ಉಳಿಸುವುದೂ ಮುಖ್ಯಮಂತ್ರಿ ಆದ್ಯತೆ ಆಗಬೇಕು !

ನೂರೆಂಟು ವಿಶ್ವ

vbhat@me.com

ಅಂದ ಹಾಗೆ ಮುಖ್ಯಮಂತ್ರಿಗಳು ಪ್ರತಿದಿನವೂ ಪಂಚತಾರಾ ಮದುವೆಗೆ ಹೋಗಲಿ, ಯಾರೂ ಬೇಡ ಅನ್ನುವುದಿಲ್ಲ. ಆದರೆ ಒಂದು ದಿನ ಸವುಡು ಮಾಡಿಕೊಂಡು ದೊಡ್ಡಾಲದ ಮರಕ್ಕೂ ಹೋಗಿಬರಬೇಕು. ಒಂದು ಮರವನ್ನು ಉಳಿಸುವುದು ಹೇಗೆ ಎಂಬುದೂ ಅವರ ಆದ್ಯತೆ ಆಗಬೇಕು.

ನಾನು ಕೆಲ ದಿನಗಳ ಹಿಂದೆ, ಬೆಂಗಳೂರಿನ ಹೊರವಲಯದಲ್ಲಿರುವ ದೊಡ್ಡಾಲದ ಮರಕ್ಕೆ ಹೋಗಿದ್ದೆ. ಇದನ್ನು ತೋಟಗಾರಿಕೆ ಇಲಾಖೆ ಯವರು ಕಷ್ಟಪಟ್ಟು, ಒಲ್ಲದ ಮನಸ್ಸಿನಿಂದ(?) ಸಂರಕ್ಷಿಸುತ್ತಿದ್ದಾರೆ. ನನಗೆ ಅನೇಕ ಸಲ ಅನಿಸಿದ್ದಿದೆ. ಈ ಮರ ಭಾರತದಲ್ಲಿ, ಅದೂ ಬೆಂಗಳೂರಿನಲ್ಲಿ ಹುಟ್ಟಿ ಅದ್ಯಾವ ಪಾಪ ಮಾಡಿತೋ? ಒಂದೇ ವೇಳೆ ಇದೇನಾದರೂ, ಅಮೆರಿಕದ, ಬ್ರಿಟನ್ನಿನ, ಪ್ಯಾರಿಸ್ಸಿನ ಹುಟ್ಟಿದ್ದಿದ್ದರೆ, ಅದು ಲೋಕವಿಖ್ಯಾತವಾಗುತ್ತಿತ್ತು. ಅದರ ಚಿತ್ರ ಲಕ್ಷಾಂತರ ಕ್ಯಾಪ್, ಕೀಚೈನ್, ಟೀ-ಶರ್ಟುಗಳ ಮೇಲೆ ರಾರಾಜಿಸುತ್ತಿತ್ತು.

‘ಐ ಲವ್ ದೊಡ್ಡಾಲದಮರ’ ಎಂದು ಅನೇಕರು ತಮ್ಮ ಕಾರಿನ ಹಿಂದೆ ಬರೆಯಿಸಿಕೊಳ್ಳುತ್ತಿದ್ದರು. ಅದರ ಹೆಸರಲ್ಲಿ ನೂರಾರು ಕ್ಲಬ್‌ಗಳು ಹುಟ್ಟಿಕೊಳ್ಳುತ್ತಿದ್ದವು. ಸಾವಿರಾರು ವೆಬ್ ಸೈಟ್‌ಗಳು ಹುಟ್ಟಿಕೊಂಡಿರು ತ್ತಿದ್ದವು. ದೊಡ್ಡಾಲದ ಮರದ ಹೆಸರಿನಲ್ಲಿ ಫೇಸ್ ಬುಕ್ ಪೇಜುಗಳು, ಟ್ವಿಟರ್ ಗ್ರುಪ್‌ಗಳು, ಇನ್‌ಸ್ಟಾ ಅಕೌಂಟುಗಳು ಚಾಲ್ತಿಗೆ ಬಂದಿರುತ್ತಿದ್ದವು. ಕೊನೆಗೆ ಅದೊಂದು ಅದ್ಭುತ ಪ್ರೇಕ್ಷಣೀಯ ತಾಣವಾಗುತ್ತಿತ್ತು. ಅದರ ಒಂದು ಎಲೆ ಉದುರಿದರೆ, ಅದನ್ನೂ ಲೆಕ್ಕವಿಡುತ್ತಿದ್ದರೇನೋ? ಆದರೆ, ಎಂದಿನಂತೆ, ನಮಗೆ ಅದರ ಮಹತ್ವ ಅರ್ಥವಾಗಿಲ್ಲ.

ಹೀಗಾಗಿ ಅದು ಇಂದು ದಯನೀಯ ಸ್ಥಿತಿಯಲ್ಲಿದೆ. ವರ್ಷದಿಂದ ವರ್ಷಕ್ಕೆ ಶಿಥಿಲವಾಗುತ್ತಿದೆ. ಅದಕ್ಕೆ ಸಾರ್ವಜನಿಕರೂ ತಮ್ಮ ಪಾಲಿನ ಕೊಡುಗೆಯನ್ನು ಕೊಡುತ್ತಿರುವುದು ಶೋಚನೀಯ. ಸುಮಾರು ಹನ್ನೆರಡು ವರ್ಷಗಳ ಹಿಂದೆ, ನಾನು ಒಂದು ಅಂಕಣ ದಲ್ಲಿ ಬರೆದಿದ್ದೆ. ದೊಡ್ಡಾಲದ ಮರದ ನೆರಳಲ್ಲಿ ಕರ್ನಾಟಕ ಸರಕಾರ ಸಚಿವ ಸಂಪುಟದ ಸಭೆಯನ್ನು ನಡೆಸಬೇಕೆಂದು. ಅರಣ್ಯ ವೃದ್ಧಿ, ಸಂರಕ್ಷಣೆ ಬೇರೆ ಮಾತಾಯಿತು. ಒಂದು ಮರದ ಸಂರಕ್ಷಣೆಯೂ ನಮಗೆ ಮುಖ್ಯವಾಗಬೇಕು ಎಂದು ಬರೆದಿದ್ದೆ.

ಆಗಾದರೂ ನಮ್ಮ ಸರಕಾರಕ್ಕೆ ಆ ವೃಕ್ಷದ ಮಹತ್ವ ಮನವರಿಕೆ ಆಗುತ್ತಿತ್ತು. ದೊಡ್ಡಾಲದ ಮರದಂಥ ಒಂದು ವೃಕ್ಷವನ್ನು ಉಳಿಸಿಕೊಳ್ಳುವುದು ನಮ್ಮ ಸರಕಾರದಲ್ಲಿರುವವರಿಗೆ ಮುಖ್ಯವೆಂದು ಅನಿಸಬೇಕು. ಅದಕ್ಕಾಗಿ ಎಷ್ಟು ಹಣವನ್ನಾದರೂ ವ್ಯಯಿಸಬೇಕು. ಅಷ್ಟಕ್ಕೂ ಮೂರ್ನಾಲ್ಕು ಕೋಟಿ ರುಪಾಯಿ ಖರ್ಚು ಮಾಡಿದರೆ ಸಾಕು. ಆದರೆ ಯಾರೇ ಮುಖ್ಯಮಂತ್ರಿ ಆದರೂ ಇಂಥ ಸೂಕ್ಷ್ಮ ವಿಷಯಗಳ ಬಗ್ಗೆ ಅವರ ಗಮನ ಹರಿಯುವುದಿಲ್ಲ ಎಂದು ವ್ಯಥೆಯಿಂದ ಬರೆದಿದ್ದೆ.

ಆ ಲೇಖನವನ್ನು ಓದಿದ ಮಾಜಿ ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ನನ್ನ ಅನಿಸಿಕೆಗೆ ಸಹಮತ ವ್ಯಕ್ತಪಡಿಸಿ ನನಗೊಂದು ಪತ್ರ ಬರೆದಿದ್ದರು. ಇಂಥ ವಿಷಯಗಳಲ್ಲಿ ಯಡಿಯೂರಪ್ಪನವರೇ ವಾಸಿ. ಒಮ್ಮೆ ನಾನು ಅವರನ್ನು ಭೇಟಿ ಮಾಡಿ, ಹಣ್ಣುಗಳಿರುವ
ಕಾಡುಗಳಲ್ಲಿ ಮಾತ್ರ ಹಾರ್ನಬಿಲ್ ಪಕ್ಷಿ ಜೀವಿಸುತ್ತದೆ. ದಾಂಡೇಲಿ ಸುತ್ತಮುತ್ತ ಸಾಕಷ್ಟು ಹಾರ್ನಬಿಲ್ ಇವೆ. ಆ ಪ್ರದೇಶದಲ್ಲಿ ಇನ್ನಷ್ಟು ಹಣ್ಣಿನ ಗಿಡಗಳಿರುವ ಕಾಡನ್ನು ಬೆಳೆಸಿದರೆ, ಹಾರ್ನಬಿಲ್ ಸಂತತಿಯನ್ನು ಬೆಳೆಸಬಹುದು ಎಂದು ಹೇಳಿ ಹಾರ್ನಬಿಲ್ ವೈಶಿಷ್ಟ್ಯಗಳ ಬಗ್ಗೆ ವಿವರಿಸಿದ್ದೆ.

ಆಗ ಯಡಿಯೂರಪ್ಪನವರು ಬಜೆಟ್ ಸಿದ್ಧತೆಯಲ್ಲಿ ಮಗ್ನರಾಗಿದ್ದರು. ಆ ಮನಸ್ಥಿತಿಯಲ್ಲೂ ಅವರು ನನ್ನ ಮಾತುಗಳನ್ನು ಗಮನವಿಟ್ಟು ಕೇಳಿಸಿಕೊಂಡರು. ನಾನು ಹಾರ್ನ್‌ಬಿಲ್ ಬಗ್ಗೆ ಬರೆದ ಲೇಖನವನ್ನು ಕೊಟ್ಟೆ. ಅದರ ಮೇಲೆ ಅವರು  ಕಣ್ಣಾಡಿಸಿ ದರು. ತಕ್ಷಣ ಅವರು ‘ಅದಕ್ಕೆ ಎಷ್ಟು ಖರ್ಚಾಗುತ್ತದೆ?’ ಎಂದು ಕೇಳಿದರು. ‘ನೀವು ನಿಮ್ಮ ಅರಣ್ಯ ಇಲಾಖೆ ಅಧಿಕಾರಿಗಳನ್ನು ಕೇಳಿ, ಈ ಬಗ್ಗೆ ತಿಳಿದುಕೊಂಡು ನಿರ್ಧಾರ ತೆಗೆದುಕೊಳ್ಳಿ. ಅಷ್ಟಕ್ಕೂ ಹೆಚ್ಚೆಂದರೆ ಮೂರ್ನಾಲ್ಕು ಕೋಟಿ ರುಪಾಯಿ ಸಾಕಾಗ ಬಹುದು’ ಎಂದು ಹೇಳಿದೆ.

ಆಗ ಯಡಿಯೂರಪ್ಪನವರು ತಮ್ಮ ಸಫಾರಿಯ ಜೇಬಿನಿಂದ ಒಂದು ಕಾಗದ ತೆಗೆದುಕೊಂಡು ಸ್ವತಃ ಟಿಪ್ಪಣಿ ಮಾಡಿಕೊಂಡರು. ‘ನೀವು ಹೇಳಿದ್ದು ಒಳ್ಳೆಯದಾಯಿತು. ಏನು ಮಾಡಬಹುದು ಎಂದು ನಾನು ಅಧಿಕಾರಿಗಳ ಜತೆ ಮಾತಾಡಿ, ಒಂದು ನಿರ್ಧಾರ ತೆಗೆದುಕೊಳ್ಳುತ್ತೇನೆ’ ಎಂದು ಹೇಳಿದರು. ನಾನು ಹೆಚ್ಚು ಮಾತಾಡಲಿಲ್ಲ. ನನ್ನ ಸಮಾಧಾನಕ್ಕೆ ಹಾಗೆ ಹೇಳಿರಬಹುದಾ, ರಾಜಕಾರಣಿಗಳ ಸಾಮಾನ್ಯ ಭರವಸೆ ಇದಾಗಿರಬಹುದಾ ಎಂಬ ಯೋಚನೆಯ ನಾನು ಅಲ್ಲಿಂದ ಎದ್ದು ಬಂದೆ.

ಅದಾಗಿ ಒಂದು ತಿಂಗಳ ನಂತರ, ಅವರು ಬಜೆಟ್ ಮಂಡಿಸಿದಾಗ ನನಗೆ ಆಶ್ಚರ್ಯ ಕಾದಿತ್ತು. ಯಡಿಯೂರಪ್ಪನವರು
ಆ ವರ್ಷದ ಬಜೆಟ್‌ನಲ್ಲಿ ದಾಂಡೇಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಣ್ಣಿನ ಗಿಡಗಳನ್ನು ನೆಡಲು ಮೂರು ಕೋಟಿ ರುಪಾಯಿ ಯನ್ನು ಮಂಜೂರು ಮಾಡುವುದಾಗಿ ಘೋಷಿಸಿದ್ದರು. ಹಾರ್ನ್‌ಬಿಲ್ ಪಕ್ಷಿಗಳ ಸಂತತಿ ಹೆಚ್ಚಿಸುವ ಉದ್ದೇಶಕ್ಕಾಗಿ ತಮ್ಮ ಸರಕಾರ ಈ ಕ್ರಮ ಕೈಗೊಳ್ಳುತ್ತಿದೆ ಎಂದು ಸ್ಪಷ್ಟವಾಗಿ ಬಜೆಟ್ ಕಾಪಿಯಲ್ಲಿ ಬರೆದಿತ್ತು. ಅದರ ಮುಂದಿನ ವರ್ಷ ಮಂಡಿಸಿದ ಬಜೆಟ್ ಲ್ಲಿ ಯಡಿಯೂರಪ್ಪನವರು ಮತ್ತೆ ಎರಡು ಕೋಟಿ ರುಪಾಯಿಗಳನ್ನು ಬಿಡುಗಡೆ ಮಾಡಿದಾಗ ನನಗೆ ಆಶ್ಚರ್ಯವಾಗಿತ್ತು. ಬಜೆಟ್ ಬಳಿಕ ಅವರನ್ನು ಅಭಿನಂದಿಸಲು ಅವರ ನಿವಾಸಕ್ಕೆ ಹೋದಾಗ, ‘ನೀವು ಮನುಷ್ಯರಿಗೆ ಹಣ ಕೊಡಿ ಎಂದು ಹೇಳಲಿಲ್ಲ. ಹಕ್ಕಿಗಳಿಗಾಗಿ, ವನ್ಯಜೀವಿಗಳಿಗಾಗಿ ಹಣ ಬಿಡುಗಡೆ ಮಾಡಿ ಎಂದು ಕೇಳಿಕೊಂಡಿದ್ದು ನನಗೆ ವಿಶೇಷವಾಗಿ ಕಂಡಿತು. ಹೀಗಾಗಿ ಹಣ ಬಿಡುಗಡೆ ಮಾಡಿದೆ’ ಎಂದು ಹೇಳಿದರು.

ಅಂದು ನನ್ನ ಕಣ್ಣಲ್ಲಿ ಸಂಪೂರ್ಣ ಬೇರೆ ಯಡಿಯೂರಪ್ಪನವರು ಕಂಡರು. ಹಕ್ಕಿಗಳ ಚಿಲಿಪಿಲಿ, ಕೂಗು, ಅವುಗಳ ಆರ್ತನಾದ ವಿಧಾನ ಸೌಧದಲ್ಲಿ ಕುಳಿತ ಮುಖ್ಯಮಂತ್ರಿಗೆ ಕೇಳಿಸಬೇಕು. ಅವರು ಅಷ್ಟು ಸೂಕ್ಷ್ಮ ಸಂವೇದನೆಯನ್ನಾದರೂ ಇಟ್ಟುಕೊಳ್ಳ ಬೇಕು. ಯಾವ ವನ್ಯಜೀವಿಗಳೂ ಅರ್ಜಿ ಹಿಡಿದುಕೊಂಡು ಮುಖ್ಯಮಂತ್ರಿಗಳ ಮನೆಯ ಮುಂದೆ ನಿಲ್ಲುವುದಿಲ್ಲ. ಜನತಾ
ದರ್ಶನಕ್ಕೆ ಬರುವುದಿಲ್ಲ. ತಮ್ಮ ಹಕ್ಕುಗಳಿಗಾಗಿ ಪ್ರತಿಭಟನೆ ಮಾಡುವುದಿಲ್ಲ. ಕನಿಷ್ಠ ಪತ್ರಿಕಾಗೋಷ್ಠಿ ಕರೆದು ಸರಕಾರವನ್ನು
ಒತ್ತಾಯಿಸುವುದಿಲ್ಲ. ಇವನ್ನು ಸ್ವತಃ ಮುಖ್ಯಮಂತ್ರಿಗಳೇ ತಿಳಿದುಕೊಂಡು ಮಾಡಬೇಕು.

ಇಂದಿರಾ ಗಾಂಧಿಯವರು ಹುಲಿಗಳ ಸಂರಕ್ಷಣೆಗಾಗಿ ನಿರಂತರ ಮೀಟಿಂಗುಗಳನ್ನು ನಡೆಸಿದ್ದನ್ನು ಸಂಸದ ಜೈರಾಮ್ ರಮೇಶ್ ತಮ್ಮ ಕೃತಿಯೊಂದರಲ್ಲಿ ಬರೆದಿದ್ದಾರೆ. ಚರ್ಚಿಲ್ ಬ್ರಿಟನ್ ಪ್ರಧಾನಿಯಾಗಿದ್ದಾಗ, ಹೈಡ್ ಪಾರ್ಕಿನ ಮರವೊಂದು ಬಿದ್ದಾಗ, ಅದರಲ್ಲಿ ಗೂಡು ಕಟ್ಟಿದ್ದ ಹಕ್ಕಿಗಳನ್ನು ನೆನೆದು ಸಂಸತ್ತಿನಲ್ಲಿ ಮಾತಾಡಿದ್ದರು. ಮುಖ್ಯಮಂತ್ರಿಗಳು, ಪ್ರಧಾನಿಗಳು ಇಂಥ ವಿಷಯಗಳ ಬಗ್ಗೆ ಮಾತಾಡುವುದು, ಯೋಚಿಸುವುದು ಸಮಾಜಕ್ಕೆ ಒಂದು ಸಕಾರಾತ್ಮಕ ಸಂದೇಶವನ್ನು ಕಲಿಸುತ್ತದೆ.

ದೊಡ್ಡಾಲದಮರವನ್ನು ಯಾಕೆ ಉಳಿಸಬೇಕು ಎಂಬುದನ್ನು ಮುಖ್ಯಮಂತ್ರಿಗಳಿಗೆ ಬೇರೆಯವರು ಹೇಳಬೇಕಾ? ಇವನ್ನೆಲ್ಲ ಸರಕಾರವೇ ತಿಳಿದುಕೊಂಡು ಮಾಡಬೇಕಾದ ಕೆಲಸ. ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ, ನಾವು
ದೊಡ್ಡಾಲದ ಮರ ಉಳಿಸುತ್ತೇವೆ, ಬಿದಿರನ್ನು ಬೆಳೆಸುತ್ತೇವೆ, ಹಾವುಗಳನ್ನು ಸಂರಕ್ಷಿಸುತ್ತೇವೆ, ಕಪ್ಪೆಗಳ ಅಭಿವೃದ್ಧಿಗೆ ಹಣ
ಬಿಡುಗಡೆ ಮಾಡುತ್ತೇವೆ, ಹಾರ್ನಬಿಲ್ ಸಂತತಿ ವೃದ್ಧಿ ನಮ್ಮ ಆದ್ಯತೆ ಎಂದು ಯಾಕೆ ಗಟ್ಟಿಯಾಗಿ ಹೇಳುವುದಿಲ್ಲ? ಮನುಷ್ಯ
ಸಮಾಧಾನದಿಂದ ಬದುಕಲು ವನ್ಯಜೀವಿಗಳು ಕ್ಷೇಮವಾಗಿರಬೇಕು, ಅರಣ್ಯಗಳು ದಟ್ಟವಾಗಿರಬೇಕು ಎಂದು ನಮಗೇಕೆ
ಇನ್ನೂ ಅನಿಸುತ್ತಿಲ್ಲ? ಸಮಾಜ, ಜನ ಸಮೂಹ ಎಂದು ಹೇಳುವಾಗ ನಮ್ಮ ಮುಂದೆ ವನ್ಯಜೀವಿಗಳು ಮತ್ತು ಕಾಡು,
ಜಲಪಾತ, ಸರೋವರ, ಕೆರೆ, ಝರಿ ನಮ್ಮ ಕಣ್ಣ ಮುಂದೆ ಬರುವುದಿಲ್ಲವೇಕೆ? ಕಾಡು ಅಂದರೆ ಮನುಷ್ಯರಿಗೆ ಸಂಬಂಧ
ಇಲ್ಲದ್ದು ಎಂದೇನಾದರೂ ಭಾವಿಸಿದ್ದೇವಾ? ನಮಗೆ ಒಂದು ವೃಕ್ಷ ಉಳಿಸಿಕೊಳ್ಳಲು ಆಗದಿದ್ದರೆ, ಕಾಡನ್ನು ಉಳಿಸಿಕೊಳ್ಳು ತ್ತೇವಾ? ಬೆಹರೈನ್‌ಗೆ ಹೋದಾಗ ನಾನು, ಅಲ್ಲಿನ The Tree of Life ಹೋಗಿದ್ದೆ.

ಹಾಗಂದ್ರೆ ಏನು ಎಂದು ಕೇಳಬಹುದು. ಅಲ್ಲಿನ ಬಿಸಿಬಿಸಿ ಮರುಭೂಮಿಯಲ್ಲಿ ಒಂದೇ ಒಂದು ಮರವಿದೆ. ಆ ಮರವಿರುವ ಸುತ್ತಮುತ್ತ ಹತ್ತಾರು ಕಿಮೀ ನೀರಿನ ಪಸೆಯೇ ಇಲ್ಲ. ಸುಮಾರು ನಾನೂರು ವರ್ಷಗಳಿಂದ ಆ ಒಂಟಿ ಮರ ಹೇಗೆ ಬದುಕಿರ ಬಹುದು ಎಂಬುದು ವಿಸ್ಮಯವೇ ಸರಿ. ಆ ಮರವನ್ನು ಒಂದು ಪ್ರೇಕ್ಷಣೀಯ ಸ್ಥಳವನ್ನಾಗಿ ಅಭಿವೃದ್ಧಿಪಡಿಸಿದ್ದಾರೆ.

ಬೆಹರೈನ್‌ಗೆ ಭೇಟಿ ನೀಡಿದವರೆಲ್ಲ ಮರುಭೂಮಿಯಲ್ಲಿ ನೂರಾರು ಕಿಮೀ ಪಯಣಿಸಿ ಆ ಒಂದು ಮರವನ್ನು ನೋಡಿ ಬರುತ್ತಾರೆ. ಒಮ್ಮೆ ನಾನು ಅಲ್ಲಿಗೆ ಹೋದಾಗ ನನ್ನ ಜತೆ ಕವಿ ನಿಸಾರ್ ಅಹಮದ್ ಇದ್ದರು. ಅವರು ಅದನ್ನು ನೋಡಿ, ಇದು ಮರವಲ್ಲ,
ಅಜರಾ‘ಮರ’ ಎಂದು ಉದ್ಗರಿಸಿದ್ದರು. ಆ ಒಂದು ಮರವನ್ನು ಕಂಡು ಅವರು ಸಣ್ಣ ಮಕ್ಕಳಂತೆ ಆನಂದತುಂದಿಲರಾಗಿದ್ದರು. ಒಂದು ಮರವನ್ನು ಹೇಗೆ ಶೋಕೇಸ್ ಮಾಡಬಹುದು ಎಂಬುದನ್ನು ಆ ‘ಟ್ರೀ ಆಫ್ ಲೈಫ್’ ನೋಡಿ ಅರಿಯಬೇಕು. ದೊಡ್ಡಾಲದ ಮರವೇನಾದರೂ ಆ ದೇಶದಲ್ಲಿದ್ದಿದ್ದರೆ, ಶ್ರೀಮಂತರ ಮನೆ ನಾಯಿಯಂತೆ, ಅದಕ್ಕೆ ಇನ್ನಿಲ್ಲದ ವಾಗಾತಿ ಮಾಡಿ, ಮೆರೆಯಿಸಿ ಬಿಡುತ್ತಿದ್ದರು.

ಜಗತ್ತಿನಲ್ಲಿ ಎಲ್ಲೂ ಇಲ್ಲದ ಒಂದು ವೃಕ್ಷ ಸಂಪತ್ತು ನಮ್ಮಲ್ಲಿದೆ ಎಂದು ಅವರು ಟಾಮ್ ಟಾಮ್ ಮಾಡುತ್ತಿದ್ದರೇನೋ. ಮೆಕ್ಸಿಕೋದ ಓಕ್ಸಕ್ ರಾಜ್ಯದ ಸಂತಾ ಮಾರಿಯಾ ಡೆಲ್ ಟುಲಿ ಎಂಬ ಊರಿನಲ್ಲಿ The Tree of Tule ಎಂಬ ಮರವಿದೆ. ಇದೊಂದು ಮರವನ್ನು ನೋಡಲು ವಿಶ್ವದೆಡೆಯಿಂದ ಪ್ರತಿ ವರ್ಷ ಲಕ್ಷಾಂತರ ಜನ ಆಗಮಿಸುತ್ತಾರೆ. ಈ ಮರವನ್ನು ಸುಮಾರು ಮೂವತ್ತು ಮಂದಿ ಕೈ-ಕೈ ಹಿಡಿದರೆ ಮಾತ್ರ ಅಪ್ಪಿಕೊಳ್ಳಬಹುದು. ಅದರ ಕಾಂಡ ಅಷ್ಟೊಂದು ದೊಡ್ಡದಿದೆ. ಇದು ಒಂದೇ ವೃಕ್ಷವಿರಲಿಕ್ಕಿಲ್ಲ, ಹತ್ತಾರು ಮರಗಳ ಕಾಂಡಗಳ ಸಮೂಹವಿದ್ದಿರಬಹುದು ಎಂದು ನಂಬಲಾಗಿತ್ತು.

ಆದರೆ ಡಿಎನ್‌ಎ ಪರೀಕ್ಷೆ ಮಾಡಿದಾಗ ಅದು ಒಂದೇ ವೃಕ್ಷ ಎಂಬುದು ಸಾಬೀತಾಯಿತು. ಈ ಬೃಹತ್ ವೃಕ್ಷದ ಪಕ್ಕದಲ್ಲಿ ಹೆzರಿಯಿದೆ. ವಾಹನಗಳ ಓಡಾಟದಿಂದ ಆ ಮರದ ಬೇರುಗಳಿಗೆ ಧಕ್ಕೆಯಾಗಿ ಮುಂದೆ ಆ ವೃಕ್ಷ ಶಿಥಿಲವಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟರು. ಇದರ ಗಂಭೀರ ಪರಿಣಾಮವನ್ನು ಅರಿತುಕೊಂಡ ಸ್ಥಳೀಯ ಆಡಳಿತ, ಸುಮಾರು ಎರಡರಿಂದ ಮೂರು ಸಾವಿರ ವರ್ಷಗಳ ಹಳೆಯದಾದ ಆ ಒಂದು ಮರವನ್ನು ಕಾಪಾಡಲು ಹೆದ್ದಾರಿಯನ್ನೇ ಬೇರೆಡೆ ತಿರುಗಿಸಲು ನಿರ್ಧರಿಸಿತು. ಆ ನಿರ್ಧಾರದಿಂದ ಆ ಅಪರೂಪದ ಆ ವೃಕ್ಷ ಬದುಕಿಕೊಂಡಿತು.

ಈ ಮರದ ಬಗ್ಗೆ ವಿಮೆ ಮಾಡಿಸಲು ಮುಂದಾದಾಗ ಅದರ ಅಭಿಮಾನಿಗಳು ನಿರ್ಧರಿಸಿದ್ದು ಸುದ್ದಿಯಾಗಿತ್ತು. ಜೀವವಿಮೆ ಯನ್ನು ಮನುಷ್ಯರಿಗೆ ಮಾತ್ರ ಸೀಮಿತವಾ? ಮರಗಳೇನು ಪಾಪ ಮಾಡಿವೆ? ಒಂದು ಮರದ ರಕ್ಷಣೆಗಾಗಿ, ಜಪಾನಿನಲ್ಲಿ ರೈಲು
ಮಾರ್ಗವನ್ನು ಒಂದೂವರೆ ಕಿಮೀ ಸುತ್ತು ಬಳಸಿ ನಿರ್ಮಿಸಿದ ಕತೆಯನ್ನು ಕೇಳಿರಬಹುದು. ಈ ಕ್ರಮದಿಂದ ಹತ್ತಾರು ಕೋಟಿ ರುಪಾಯಿ ಹೆಚ್ಚು ವ್ಯಯವಾಗುತ್ತದೆ ಎಂಬುದು ಗೊತ್ತಿತ್ತು. ಆದರೂ ಆ ಒಂದು ಮರವನ್ನು ಉಳಿಸಿಕೊಳ್ಳಲು ಸರಕಾರ ನಿರ್ಧರಿಸಿತು.

ಆ ಮೂಲಕ ಸಮಾಜಕ್ಕೆ ಒಂದು ಸಂದೇಶವನ್ನು ಕಳಿಸುವುದು ಉದ್ದೇಶವಾಗಿತ್ತು. ಜಪಾನಿನ ಅಭಿವೃದ್ಧಿಯ ಇತಿಹಾಸ ಬರೆಯುವವರು ಈ ಸಂಗತಿಯನ್ನು ದಾಖಲಿಸದೇ ಹೋಗುವುದಿಲ್ಲ. ಈ ಅಂಶ ಈಗಿನ ಜನರಿಗೆ, ಮಕ್ಕಳಿಗೆ ಮತ್ತು ಮುಂದಿನ ಪೀಳಿಗೆಗೆ ಒಂದು ಪಾಠವಾಗ ಬೇಕು ಎಂಬ ಕಾರಣದಿಂದ ಆ ಒಂದು ಮರವನ್ನು ಉಳಿಸಿಕೊಳ್ಳಲು ತೀರ್ಮಾನಿಸಲಾಯಿತು. ಈ ಮರವನ್ನು ಬೇರೆಡೆಗೆ ಸ್ಥಳಾಂತರಿಸಿಯೋ, ಅದರ ಬದಲು ಹತ್ತಾರು ಗಿಡಗಳನ್ನು ನೆಟ್ಟೋ ಪ್ರಾಯಃಶ್ಚಿತ ಮಾಡಿಕೊಳ್ಳಬಹುದಿತ್ತು.

ಆದರೆ ಅಭಿವೃದ್ಧಿಯ ಮುಂದೆ ಒಂದು ವೃಕ್ಷವೂ ಮುಖ್ಯ ಮತ್ತು ಅದನ್ನು ಕಾಪಾಡುವುದು ಆದ್ಯತೆಯಾಗಬೇಕು ಎಂಬ
ಮಹತ್ವ ವನ್ನು ಎತ್ತಿ ಹಿಡಿಯುವುದಕ್ಕಾಗಿ ರೈಲು ಮಾರ್ಗವನ್ನು ಬದಲಾಯಿಸಲಾಯಿತು. ನಮ್ಮ ಸರಕಾರಕ್ಕೆ ಇಷ್ಟಾದರೂ ಸಂವೇದನೆ ಇರಬೇಕು. ಅದರ ನೇತೃತ್ವ ವಹಿಸಿದವರು ಅಷ್ಟು ಸೂಕ್ಷ್ಮ ಭಾವ ಹೊಂದಿರಬೇಕು. ಅವರಿಗೆ ಒಂದು ಮರದ ರಕ್ಷಣೆಯೂ ಮುಖ್ಯವಾಗಬೇಕು. ಆದರೆ ಒಂದು ರಸ್ತೆ ನಿರ್ಮಾಣಕ್ಕಾಗಿ, ರಸ್ತೆ ಅಗಲೀಕರಣಕ್ಕಾಗಿ ನಾವು ಸಾವಿರಾರು ಮರಗಳನ್ನು ಕಡಿದು ಮಟ್ಟಸ ಮಾಡುತ್ತೇವೆ.

ಈಗಿನ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಅವರು, ರಸ್ತೆ ಅಗಲೀಕರಣ ಮಾಡುವಾಗ, ಸುಮಾರು 1600 ಮರಗಳನ್ನು ಕಡಿದು ನೆಲಕ್ಕೊರಗಲು ಬಿಡದೇ ಅವುಗಳನ್ನು ಯಥಾವತ್ತು ಬೇರೆಡೆಗೆ ವರ್ಗಾಯಿಸಿ ಬದುಕಿಸಿದರು. ಅಂದು ನನ್ನ ಕಣ್ಣಲ್ಲಿ ಪಾಟೀಲರು ದೊಡ್ಡವರಾಗಿ ಕಂಡರು. ಆ ಸುದ್ದಿಯನ್ನು ನಮ್ಮ ಪತ್ರಿಕೆಯಲ್ಲಿ ಮುಖಪುಟದಲ್ಲಿ ಪ್ರಕಟಿಸಿದ್ದೆವು.

ಸರಕಾರಿ ಶಾಲೆ, ಕಾಲೇಜು, ಅತಿಥಿಗೃಹ, ನ್ಯಾಯಾಲಯ ಮುಂತಾದ ಸರಕಾರಿ ಕಟ್ಟಡಗಳನ್ನು ನಿರ್ಮಿಸುವಾಗ, ಮರಗಳನ್ನು
ಬೆಳೆಸಲು ಅನುವಾಗುವಂತೆ ನೀಲನಕ್ಷೆ ಮತ್ತು ಯೋಜನೆ ರೂಪಿಸಬೇಕು ಎಂದು ಪಾಟೀಲರು ಅಧಿಸೂಚನೆ ಹೊರಡಿಸಿರು ವುದು ಒಂದು ಮಹತ್ವದ ಕಾರ್ಯವೇ. ಇವೆಲ್ಲ ನಮಗೆ ಮುಖ್ಯವಾಗಬೇಕು. ಜಪಾನಿನಲ್ಲಿ ಶಿಂರಿನ್ ಯೋಕು ಎಂಬ ಹೊಸ ಜೀವನ ಪದ್ಧತಿಯೇ ಆರಂಭವಾಗಿದೆ. ಅವರು ಅದನ್ನು Forest Bathing (ಹಸಿರು ಸ್ನಾನ, ವೃಕ್ಷಸ್ನಾನ) ಎಂದು ಕರೆಯುತ್ತಾರೆ.

ಮರ, ವನ್ಯಜೀವಿ, ನೀರು, ಹಸಿರು ನಿರಂತರವಾಗಿ ಲಭ್ಯವಾಗಿರುವೆಡೆ ನಮ್ಮ ಬದುಕನ್ನು ಕಟ್ಟಿಕೊಳ್ಳುವುದು. ನೀವು ನೂರಾ ಮೂರನೇ ಮಹಡಿಯಲ್ಲಿ ಕೆಲಸ ಮಾಡುತ್ತಿರಬಹುದು. ನಿಮ್ಮ ಸುತ್ತ ಮುತ್ತ ಮರ, ವನ್ಯಜೀವಿ, ನೀರು, ಹಸಿರು ವೃಕ್ಷ ಕಣ್ಣಿಗೆ ಕಾಣಬೇಕು. ಆ ರೀತಿಯಲ್ಲಿ ಕಟ್ಟಡಗಳನ್ನು ವಿನ್ಯಾಸಗೊಳಿಸಲಾಗುತ್ತಿದೆ. ಬಹುಮಹಡಿ ಕಟ್ಟಡದಲ್ಲಿ ಜೇನು ಸಾಕುತ್ತಿದ್ದಾರೆ. ಜೇನುಹುಳುಗಳಿಗೆ ಆಹಾರ ನೀಡಲು ಟೆರೇಸಿನ ಮೇಲೆ ಹೂದೋಟ, ನೂರಾರು ಮರಗಳನ್ನು ಬೆಳೆಸುತ್ತಿದ್ದಾರೆ.

ಶಿಂರಿನ್ ಯೋಕು ಅವರ ಜೀವನಧರ್ಮವಾಗುತ್ತಿದೆ. ಜಪಾನಿಯರ ಸುದೀರ್ಘ ಮತ್ತು ಸಂತಸದ ಜೀವನಕ್ಕೆ ಹೇಗೆ ಇಕಿಗೈ ಮೂಲವಾಗಿದೆಯೋ, ಅದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಸಾಽಸಲು ಶಿಂರಿನ್ ಯೋಕು ಪದ್ಧತಿ ಜನಪ್ರಿಯವಾಗುತ್ತಿದೆ.
ಅಂದ ಹಾಗೆ ಮುಖ್ಯಮಂತ್ರಿಗಳು ಪ್ರತಿದಿನವೂ ಪಂಚತಾರಾ ಮದುವೆಗೆ ಹೋಗಲಿ, ಯಾರೂ ಬೇಡ ಅನ್ನುವುದಿಲ್ಲ.
ಆದರೆ ಒಂದು ದಿನ ಸವುಡು ಮಾಡಿಕೊಂಡು ದೊಡ್ಡಾಲದ ಮರಕ್ಕೂ ಹೋಗಿಬರಬೇಕು. ಒಂದು ಮರವನ್ನು ಉಳಿಸುವುದು ಹೇಗೆ ಎಂಬುದೂ ಅವರ ಆದ್ಯತೆ ಆಗಬೇಕು.