Friday, 13th December 2024

ಮಹಾ ಸಾಧಕ- ಶೋಧಕ-ಯೋಧ ಕರ್ನಲ್ ಶಂಕರ್‌

ವ್ಯಕ್ತಿ-ಚಿತ್ರ

ಜಯಪ್ರಕಾಶ್ ಪುತ್ತೂರು

ಕರ್ನಾಟಕದ ಸುಪುತ್ರ ನಿವೃತ್ತ ಕರ್ನಲ್ ಎಚ್.ಎಸ್. ಶಂಕರ್ ಓರ್ವ ದೊಡ್ಡ ಸಾಧಕರು. ತಮ್ಮ ಜೀವನದ ೩ ಘಟ್ಟಗಳಲ್ಲಿ ಸೇವೆ ಸಲ್ಲಿಸುವ ಸಂದರ್ಭ ಗಳಲ್ಲಿ ಅಸಾಮಾನ್ಯ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಓರ್ವ ಸೈನ್ಯಾಧಿಕಾರಿಯಾಗಿ ೨೨ ವರ್ಷ ಸುದೀರ್ಘ ಸೇವೆ ಸಲ್ಲಿಸುವ ವೇಳೆ ಅತಿ ದುರ್ಗಮ ಪ್ರದೇಶಗಳಾದ ಕಾಶ್ಮೀರ, ಸಿಕ್ಕಿಂ ಹಾಗೂ ಪಂಜಾಬ್ ಗಡಿ ಪ್ರದೇಶಗಳಲ್ಲಿ ಕೂಡಾ ಕಾರ್ಯನಿರ್ವಹಿಸಿ ೧೯೬೫ ಹಾಗೂ ೧೯೭೧ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಯುದ್ಧಗಳಲ್ಲಿ ಶೌರ್ಯ ಪ್ರದರ್ಶಿಸಿ ವಿಶಿಷ್ಟ ಸೇವಾ ಮೆಡಲ್ (ವಿಎಸ್‌ಎಂ) ಪ್ರಶಸ್ತಿ ಗಳಿಸಿದ್ದಾರೆ.

ಆ ಬಳಿಕ ಪ್ರತಿಷ್ಠಿತ ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್‌ನಲ್ಲಿ ಆಯ್ಕೆ ಆಗಿ ಉಪ ಮಹಾಪ್ರಬಂಧಕರಾಗಿ ಸೇರ್ಪಡೆಗೊಂಡು (೧೯೮೬) ತಮ್ಮ ಸೇವಾ
ತತ್ಪರತೆಯಿಂದ ನಿರ್ದೇಶಕರಾಗಿ ೨೦೦೩ ರವರೆಗೆ ಸೇವೆ ಸಲ್ಲಿಸಿದ್ದರು. ಭಾರತದ ಚುನಾವಣೆಗಳಲ್ಲಿ ಫಲಪ್ರದವಾಗಿ ಬಳಸುತ್ತಿರುವ ಇಲೆಕ್ಟ್ರಾನಿಕ್ ವೋಟಿಂಗ್ ಮಷಿನ್ (ಇವಿಎಂ) ಇದರ ರಚನೆ ಹಾಗೂ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದರೊಂದಿಗೆ ಭಾರತೀಯ ಸೇನಾ ಪಡೆಗೆ ತೀರಾ
ಅಗತ್ಯವಿರುವ ವಿವಿಧ ಸಲಕರಣೆಗಳನ್ನು ಆವಿಷ್ಕಾರ ನಡೆಸಿದ ಸಾಧನೆಗಾಗಿ ಇವರಿಗೆ ರಕ್ಷಣಾ ಸಚಿವರ ಸಂಶೋಧನೆಗೆ ಹಾಗೂ ಆವಿಷ್ಕಾರದ ಅಪ್ರತಿಮ ಸಾಧಕ ಪ್ರಶಸ್ತಿ ಲಭಿಸಿತ್ತು (೨೦೦೧). ಆ ಬಳಿಕ ನಿವೃತ್ತಿ ಹೊಂದಿದರೂ ಈ ಅಪ್ಪಟ ದೇಶ ಪ್ರೇಮಿ ಖಾಸಗಿ ಕ್ಷೇತ್ರದಲ್ಲಿ ಆಲಾ ಡಿಸೈನ್ ಟೆಕ್ನಾಲೋಜಿಸ್
ಪ್ರಾರಂಭಿಸಿ (೨೦೦೩) ಇದೀಗ ರಕ್ಷಣಾ ಸಲಕರಣ ಉತ್ಪಾದನೆಗೆ ದೇಶ ಪ್ರಥಮ ಸ್ಥಾನ ಪಡೆದಿದೆ.

ಕರ್ನಲ್ ಎಚ್.ಎಸ್. ಶಂಕರ್ ಇವರು ಪ್ರಖ್ಯಾತ ಮೈಸೂರು ತಾತಯ್ಯನವರ ಪ್ರೀತಿಯ ಶಿಷ್ಯ. ಪತ್ರಿಕೋದ್ಯಮಿ ಎಚ್.ಶ್ರೀಕಂಠಯ್ಯ ಅವರ ಸುಪುತ್ರ. ಶಂಕರ್ ಅವರು ಮೂಲತಃ ಹೊಳೆನರಸೀಪುರದವರು. ಆದರೆ ಇವರಿಗೆ ಮೈಸೂರಿನ ನಂಟು ಬಹಳ. ಕರ್ನಲ್ ಶಂಕರ್ ಅವರು ಓರ್ವ ರ‍್ಯಾಂಕ್ ವಿಜೇತರು. ೧೯೬೪ರಲ್ಲಿ ಬಿ.ಇ. ಮಾಡಿದರು. ಅನಂತರ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಿಂದ ಎಂ.ಇ. ಶಿಕ್ಷಣ ಪಡೆದರು. ಬಳಿಕ ಭಾರತೀಯ ಸೈನ್ಯಕ್ಕೆ ಪಾದಾರ್ಪಣೆ ಮಾಡು ವಂತಹ ಅಪೂರ್ವವಾದ ಅವಕಾಶ ಒದಗಿ ಬರುತ್ತದೆ. ಅಲ್ಲಿ ಇ.ಎಂ.ಇ. ವಿಭಾಗದಲ್ಲಿ ೨೨ ವರ್ಷಗಳ ಕಾಲ ಸ್ತುತ್ಯಾರ್ಹ ಸೇವೆಯಲ್ಲಿ ಪಂಜಾಬ್, ಕಾಶ್ಮೀರ ಹಾಗೂ ಸಿಕ್ಕಿಂಗಳ ಗಡಿಪ್ರದೇಶಗಳಲ್ಲಿ ವಾಸ್ತವ್ಯ ಹೂಡಿದವರು.

ಜೀವನದ ಮಹತ್ತರ ಘಟ್ಟದಲ್ಲಿ ೧೯೬೫ ಹಾಗೂ ೧೯೭೧ರ ಯುದ್ಧಗಳಲ್ಲಿ ಬಂದೂಕು ಹಿಡಿದು ಭಾಗವಹಿಸುವಂತಹ ಮೈ ರೋಮಾಂಚನಗೊಳಿಸುವ ಸನ್ನಿವೇಶ ಎದುರಾಗಿತ್ತು. ಆಗಲೇ ಕರ್ನಲ್ ಸಾಹೇಬ್ ಕಾರ್ಯವೈಖರಿಗೆ ಅವರ ಕೊರಳಿಗೆ ವಿಶಿಷ್ಟ ಸೇವಾ ಮೆಡಲ್‌ನ ಅಲಂಕಾರ! ಕರ್ನಲ್ ಸಾಹೇಬ್
ಅವರು ೨೦೦೩ರಲ್ಲಿ ಈ ಸೇವೆಯಿಂದ ನಿವೃತ್ತಿ ಹೊಂದುತ್ತಾರೆ. ಆದರೆ ಜೀವನದ ಒಂದೇ ಒಂದು ನಿಮಿಷವನ್ನೂ ವೃಥಾ ಪೋಲು ಮಾಡಿದವರಲ್ಲ. ಹಾಗಾಗಿ ನಿವೃತ್ತಿಯ ನಂತರವೂ ಈ ಸಾಹಸಿ ಯೋಧ ಶಂಕರ್, ಒಂದಲ್ಲ ಒಂದು ಕಾರ್ಯ- ಚಟುವಟಿಕೆಗಳಲ್ಲಿ ತಮ್ಮನ್ನು ತಾನು ತೊಡಗಿಸಿಕೊಂಡು ಸದಾ ಪ್ರವೃತ್ತರಾಗುತ್ತಿದ್ದರು.

ಇನ್ನೊಂದು ವಿಧದಲ್ಲಿ ನಾಗರಿಕನಾಗಿ ತನ್ನ ದೇಶಕ್ಕೆ ಅಪರಿಮಿತ ಸೇವೆ ಸಲ್ಲಿಸುವ ಇರಾದೆ. ೧೯೯೬ರಲ್ಲಿ ಬಿ.ಇ.ಎಲ್. ಸಂಸ್ಥೆಗೆ ಸೇರ್ಪಡೆಯಾಗುತ್ತಾರೆ. ಅಲ್ಲಿ ಕೂಡ ಗಮನಾರ್ಹವಾದಂತಹ ಶ್ಲಾಘನೀಯ ಸೇವೆ ಸಲ್ಲಿಸಿ ‘ಸೈ’ ಅನ್ನಿಸಿಕೊಳ್ಳುತ್ತಾರೆ. ಅನಂತರ ಅಲ್ಲಿ ನಿರ್ದೇಶಕರಾಗಿ (ಆರ್. ಅಂಡ್ ಡಿ.) ನಿವೃತ್ತ
ರಾಗುತ್ತಾರೆ. ವಾಸ್ತವ ವೆಂದರೆ, ಸುಗಮವಾಗಿ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಸಿದ ಖ್ಯಾತಿಯ ಇ.ವಿ.ಎಂ. ತಯಾರಿಕೆಯಲ್ಲಿ ಯಾರೂ ಊಹಿಸ ಲಾಗದಂತಹ ಜಾದೂ ಮಾಡಿದವರು ಈ ಶಂಕರ್. ಇಲ್ಲಿ ಕೂಡಾ ತನ್ನ ಪಾರದರ್ಶಕ ಸೇವೆಯಲ್ಲಿ ನಿವೃತ್ತರಾದ ಬಳಿಕ ಖಾಸಗಿ ಕ್ಷೇತ್ರದಲ್ಲಿ ಗುರುತಿಸಿ ಕೊಳ್ಳುತ್ತಾ ಅದ್ವಿತೀಯ ಸಾಧನೆ ಮಾಡಿ ಎಲ್ಲರ ಗಮನ ಸೆಳೆಯುತ್ತಾರೆ.

ಕರ್ನಲ್ ಶಂಕರ್ ಓರ್ವ ಸಾಹಸಿ ಯೋಧ. ಅವರ ಅದ್ಭುತ ಕಾರ್ಯಸಾಧನೆಯ ಹಿಂದೆ ಕಠಿಣ ಪರಿಶ್ರಮವಿದೆ. ಈ ಶಂಕರ್ ಎಂಬ ಯೋಧನಿಗೆ ಸ್ವತಃ ಸೈನ್ಯಕ್ಕೆ ಬಳಕೆಯಾಗುವ ಶಸಾಸಗಳ ಬಗ್ಗೆ ಇರುವ ಅಗಾಧ ಜ್ಞಾನ ವರ್ಣಿಸಲಸಾಧ್ಯ. ಅವರ ಇಂಥ ಜ್ಞಾನದ ಹಿನ್ನೆಲೆ ಹಾಗೂ ಸಾರ್ವಜನಿಕ ಕ್ಷೇತ್ರದ
ಹಿರಿಯ ಉದ್ದಿಮೆಗಳಾದ ‘ಭಾರತ್ ಇಲೆಕ್ಟ್ರಾನಿಕ್ಸ್’ ಮತ್ತು ಇನ್ನಿತರ ಸಂಸ್ಥೆಗಳಲ್ಲಿ ತೊಡಗಿಸಿಕೊಂಡ ಇಂತಹ ಪ್ರತಿಭಾವಂತರಿಗೆ ‘ನಿವೃತ್ತಿ’ ಎಂಬ ಮಾತೇ ಹತ್ತಿರ ಸುಳಿಯುವುದಿಲ್ಲ. ‘ಮೇಕ್ ಇನ್ ಇಂಡಿಯಾ’ ಆಂದೋಲನದಲ್ಲಿ ಖಚಿತವಾದ ಕೊಡುಗೆ ನೀಡುವಲ್ಲಿ ಕರ್ನಲ್ ಶಂಕರ್ ಅವರ ಪಾತ್ರ ಮಹತ್ತರ ವಾದುದು. ಅದರಲ್ಲಿಯೂ ವೈಮಾನಾಂತರಿಕ್ಷ ವಿದ್ಯುನ್ಮಾನ ಕ್ಷೇತ್ರದ ವಿವಿಧ ಬೃಹತ್ ಯೋಜನೆಗಳಿಗೆ ಉತ್ಪಾದನೆ ಪ್ರಯುಕ್ತ ಅದಕ್ಕೆ ಮೂಲ ವಾದಂತಹ ಕಾರ್ಯ  ನಡೆಸಿ ದೇಶಕ್ಕೆ ಹಲವಾರು ಕೋಟಿ ವಿದೇಶಿ ಮೌಲ್ಯವನ್ನು ಯಥೇಚ್ಛವಾಗಿ ಉಳಿಸಿಕೊಟ್ಟಂತಹ ಸಾಧಕರು ಎಂಬುದು
ಉಲ್ಲೇ ಖಾರ್ಹ.

ಕರ್ನಲ್ ಶಂಕರ್ ಅವರ ಅಚ್ಚರಿಯ ಪ್ರತಿಭೆ ಹಾಗೂ ಅಪರೂಪದ ಜ್ಞಾನ ಸಂಪತ್ತು ಮೌಲ್ಯಯುತವಾದುದು. ಆದ್ದರಿಂದಲೇ ಓರ್ವ ಪ್ರಗತಿದಾಯಕ, ಅಪ್ಪಟ ದೇಶಪ್ರೇಮಿಯ ಈ ಸಾಹಸಮಯ ಕಾರ್ಯಸಾಧನೆಯಿಂದ ಸಾವಿರಾರು ಜನರಿಗೆ ಜೀವನಾಧಾರಕ್ಕೆ ಉದ್ಯೋಗ ಲಭಿಸಿದೆ. ಇನ್ನು ಶಂಕರ್ ಅವರ ತಂಡದಲ್ಲಿ ಹೆಚ್ಚಿನವರು ಯುವ ಇಂಜಿನಿಯರ್‌ಗಳು ಆಗಿದ್ದಾರೆ ಎಂಬುದು ವಿಶೇಷ ವಿಷಯವಾಗಿದೆ. ಅವರ ಕಾರ್ಯಕ್ಷಮತೆ ಹಾಗೂ ಸಮಯ
ಪರಿಪಾಲನೆ ಮತ್ತು ಕರ್ತವ್ಯ ಪ್ರeಗಳಿಂದಾಗಿ ೪೫೦ ಕೋಟಿ ರುಪಾಯಿಗಳಿಗಿಂತಲೂ ಅಧಿಕ ಮೊತ್ತದಲ್ಲಿ ವಾರ್ಷಿಕ ಆರ್ಥಿಕ ವ್ಯವಹಾರವಲ್ಲದೆ ೩೫೦೦ ಕೋಟಿ ರು.ಗಳಷ್ಟು ಉತ್ಪಾದನಾ ಕರಾರು ಲಭ್ಯವಾಗಿರುವುದು ನಿಜಕ್ಕೂ ಪ್ರಶಂಸನೀಯ.

ದೇಶದ ಪ್ರಗತಿಗೆ ಸಂಪನ್ಮೂಲ ಕ್ರೋಢೀಕರಣವೇ ನಿಜ ವಾದ ಯಶಸ್ಸು. ಹಾಗಾದಾಗ ಅಭಿವೃದ್ದಿ ಹಾಗೂ ಇನ್ನಿತರ ಕಾರ್ಯಗಳಿಗೆ ಧುಮುಕುವ ಶಕ್ತಿ
ಯಾಂತ್ರಿಕವಾಗಿ ಉಂಟಾಗುತ್ತದೆ. ಈ ಎಲ್ಲಾ ಯೋಜನಾಬದ್ಧವಾದ ಶಿಸ್ತಿನ ಆರ್ಥಿಕ ವ್ಯವಹಾರದ ಯೋಧನ ದಿಟ್ಟ ಹೆಜ್ಜೆಗಳನ್ನು ಗಮನಿಸಿ, ನಾಡಿನ ಪ್ರತಿಷ್ಠಿತ ಸಂಸ್ಥೆಗಳಿಗೆ ಅನೇಕ ಪುರಸ್ಕಾರಗಳು, ಸನ್ಮಾನಗಳು, ಪ್ರಶಸ್ತಿ ಗಳನ್ನು ಕೊಡಮಾಡಿ ಗುರುತಿಸಿದ್ದಾರೆ. ಮುಖ್ಯವಾಗಿ ದೇಶದ ಪ್ರಧಾನ ಸಂಶೋಧನಾ
ಬಾಹ್ಯಾಕಾಶ ಯೋಜನಾ ಸಂಸ್ಥೆ (ಇಸ್ರೋ) ಮುಖ್ಯಸ್ಥರ ಕೈಗಳಿಂದ ವಿಶೇಷವಾಗಿ ಕೊಡಮಾಡಿದ ‘ಜೀವಮಾನ ಶ್ರೇಷ್ಠ ಸಾಧಕ ಪ್ರಶಸ್ತಿ’ ಹಾಗೂ ‘ಇಲೆಕ್ಟ್ರಾನಿಕ್ ಮ್ಯಾನ್ ಆಫ್ ಇಂಡಿಯಾ’ ಪುರಸ್ಕಾರಗಳು ಪ್ರಮುಖವಾಗಿವೆ.

ಡಿ.ಆರ್.ಡಿ.ಓ. ತಮ್ಮ ಸಂಶೋಧನೆಗಳನ್ವಯವಾಗಿ ಶ್ರೇಷ್ಠ ಉತ್ಪಾದನೆಯನ್ನು ಪೂರೈಸಿದ ಸಾಧನೆಗಾಗಿ ೨೦೦೧ರಲ್ಲಿ ರಕ್ಷಣಾ ಸಚಿವರ ಹಸ್ತದಿಂದ ಶಂಕರ್ ಅವರನ್ನು ಪುರಸ್ಕರಿಸಿದೆ. ತಮ್ಮ ಕಾರ್ಯವ್ಯಾಪ್ತಿಯ ನಿಮಿತ್ತ ಜಗದ ಉದ್ದಗಲಕ್ಕೂ ಸಂಚರಿಸಿ ಶಂಕರ್ ೧೨೨ಕ್ಕಿಂತಲೂ ಹೆಚ್ಚು ತಾಂತ್ರಿಕ ಪ್ರಬಂಧ
ಗಳನ್ನು ವಿವಿಧ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಮಂಡಿಸಿದ್ದಾರೆ. ಪ್ರಥಮವಾಗಿ ತಮ್ಮ ದೇಶದ ಅಗತ್ಯಗಳನ್ನು ಪ್ರಾಶಸ್ತ್ಯ ಪೂರ್ವಕವಾಗಿ ಪೂರೈಸುತ್ತಾ ಇದೀಗ ದೇಶ-ವಿದೇಶಗಳ ವ್ಯಾಪ್ತಿಗೂ ವ್ಯವಹಾರವನ್ನು ವಿಸ್ತರಿಸಿದ್ದಾರೆ. ಹೀಗೆ ಕರ್ನಲ್ ಶಂಕರ್ ಅವರ ಅಗಾಧವಾದ
ದೇಶಪ್ರೇಮ ಹಾಗೂ ದೇಶಕ್ಕಾಗಿ ಸೇವೆ ಸಲ್ಲಿಸುವಂತಹ ಮನೋಭಾವದಿಂದ, ಅವರು ಓರ್ವ ಮಹಾ ಸಾಧಕ ಯೋಧನಾಗಿ ನಮ್ಮ ಕಣ್ಣ ಮುಂದೆ ನಿಲ್ಲುತ್ತಾರೆ.