Wednesday, 11th December 2024

ಇದು ಬಡಾವಣೆ ನಿರ್ಮಿಸ ಹೊರಟವರು ಭವ್ಯ ನಗರ ಕಟ್ಟಿದ ಕತೆ !

ಇದೇ ಅಂತರಂಗ ಸುದ್ದಿ

vbhat@me.com

ಐದು ವರ್ಷಗಳ ಹಿಂದೆ ಕತಾರಿಗೆ ಹೋದಾಗ, ಅಲ್ಲಿ ಅಂಥ ಒಂದು ನಗರವೇ ಇರಲಿಲ್ಲ. ಅಲ್ಲಿ ಅಂಥದೊಂದು ನಗರ ತಲೆಯೆತ್ತ ಬಹುದು ಎಂದು ಯಾರೂ ನಿರೀಕ್ಷಿಸಿರಲಿಲ್ಲ. ದೋಹಾ ನಗರದಿಂದ ಸುಮಾರು ಇಪ್ಪತ್ತೈದು ಕಿಮಿ ದೂರದಲ್ಲಿ ಅದಕ್ಕೆ ಪರ್ಯಾಯವಾಗಿ ಮತ್ತೊಂದು ನಗರದ ಕನಸನ್ನು ಯಾರು ಕಂಡಿದ್ದರೋ ಗೊತ್ತಿಲ್ಲ.

ಆದರೆ ಮೊನ್ನೆ ಹೋದಾಗ ಲುಸೈಲ್ ಎಂಬ ಹೊಸ ನಗರಿಯೇ ಅಲ್ಲಿ ಎದ್ದು ನಿಂತಿತ್ತು. ರಾತ್ರಿ ಮಲಗುವಾಗ ಇರಲಿಲ್ಲ, ಬೆಳಗ್ಗೆ ಏಳುವಾಗ ಅಂಗಳದಲ್ಲಿ ಇಮಾರತು ಎದ್ದು ನಿಂತಂತಾಗಿತ್ತು. ದೋಹಾ ಬಿಟ್ಟರೆ ಲುಸೈಲ್ ಕತಾರಿನ ಎರಡನೇ ಅತಿ ದೊಡ ನಗರವಾಗಿ ರೂಪುಗೊಂಡಿದೆ. ಇದು ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಗಾಗಿ ರೂಪುಗೊಂಡ, ಫುಟ್ಬಾಲ್ ನೆಪದಲ್ಲಿ ಕತಾರ್ ಉಡುಗೊರೆಯಾಗಿ ನೀಡಿದ ನಗರ!

ಇದು ಅಂತಿಂಥ ನಗರವಲ್ಲ. ಅಲ್ಲಿ ಏನುಂಟು, ಏನಿಲ್ಲ? ಕೇವಲ ನಾಲ್ಕು ವರ್ಷಗಳ ಅವಧಿಯಲ್ಲಿ ಕತಾರ್, ಸುಮಾರು ೩೮ ಚದರ ಕಿಮೀ ವ್ಯಾಪ್ತಿ ಪ್ರದೇಶದಲ್ಲಿ, ನಾಲ್ಕು ಲಕ್ಷ ಐವತ್ತು ಸಾವಿರ ಮಂದಿಗೆ ವಾಸ್ತವ್ಯ ಒದಗಿಸುವ, ಆಧುನಿಕ ನಗರವೊಂದು ಹೊಂದಿರಬಹುದಾದ ಎಲ್ಲ ಸೌಲಭ್ಯಗಳನ್ನು ಒಳಗೊಂಡ ಹೊಸ ನಗರವನ್ನೇ ಸೃಷ್ಟಿಸಿ ಬಿಟ್ಟಿದೆ. ಚಿಕ್ಕಮಕ್ಕಳು ಆಟಿಕೆ ಸಾಮಾನುಗಳಲ್ಲಿ ಮನೆ ಕಟ್ಟುವ ರೀತಿಯಲ್ಲಿ, ಹೊಸ ನಗರವನ್ನು ಕಟ್ಟಿದ್ದಾರೆ ಅಂತ ಹೇಳಿದರೆ ಅತಿಶಯೋಕ್ತಿ ಎನಿಸಬಹುದು. ಆದರೆ ಖುದ್ದಾಗಿ ಲುಸೈಲ್ ನಗರದಲ್ಲಿ ನಡೆದಾಡಿದಾಗ, ಅದು ಅತಿರಂಜಿತ ಎಂದು ಅನಿಸುವುದಿಲ್ಲ.

ಕಾರಣ ಈ ಒಂದು ನಗರ, ಪಂಚತಾರಾ ಹೋಟೆಲುಗಳು, ಮರಿನಾಸ್, ಐಲ್ಯಾಂಡ್ ರೆಸಾರ್ಟ್ಸ್, ಕಮರ್ಷಿಯಲ್ ಡಿಸ್ಟ್ರಿಕ್ಟ್,
ಲಕ್ಸರಿ ಶಾಪಿಂಗ್ ಮಾಲ್, ಗಾಲ್ಫ್ ಕೋರ್ಸ್, ಮನರಂಜನಾ ತಾಣಗಳು, ವಾಟರ್ ಸ್ಪೋರ್ಟ್ಸ್, ಸ್ಟೇಡಿಯಂ, ವಾಟರ್ ಫ್ರಂಟ್
ರೆಸಿಡೆನ್ಷಿಯಲ್ ಡಿಸ್ಟ್ರಿಕ್ಟ್, ಮೆಡಿಕಲ್ ಮತ್ತು ಎಜುಕೇಶನ್ ಡಿಸ್ಟ್ರಿಕ್ಟ್, ಬುಲೆವಾರ್ಡ್ ಕಮರ್ಷಿಯಲ್, ಮರೀನಾ ಡಿಸ್ಟ್ರಿಕ್ಟ್,
ಕ್ವೆಟೈಫಾನ್ ಐಲ್ಯಾಂಡ್, ಬಹುರಾಷ್ಟ್ರೀಯ ಕಂಪನಿಗಳಿಗಾಗಿ (ಅಲ್ ಖರೇಯೇಜ) ನಾಲ್ಕು ಟಾವರುಗಳಲ್ಲಿ ಆಫೀಸು,
ಮಳಿಗೆಗಳು, ಫಾರ್ಮುಲಾ ಒನ್ ರೇಸ್ ಟ್ರ್ಯಾಕ್, ವಿಶಾಲ ರಸ್ತೆಗಳು, ಮೇಲುಸೇತುವೆಗಳು, ಭೂಮಿಯೊಳಗಿನ ರೈಲು
ಮಾರ್ಗ.. ಹೀಗೆ ಎಲ್ಲವನ್ನೂ ಒಳಗೊಂಡಿದೆ.

ಅಲ್ಲಲ್ಲಿ ಉದ್ಯಾನವನ, ಪಾಕೆಟ್ ಗಾರ್ಡನ್, ಕಾರಂಜಿ, ಸಣ್ಣ ತೊರೆ, ಗಿಡ-ಮರಗಳು. ಲುಸೈಲ್‌ನ್ನು ಭವಿಷತ್ತಿನ ನಗರವೆಂದು
ಬಣ್ಣಿಸಲಾಗಿದೆ. ಇದನ್ನು ಬೇರೆ ಯಾವ ಆಧುನಿಕ ನಗರದೊಂದಿಗೆ ಹೋಲಿಸಲಾಗದು. ಕಾರಣ ಇದಕ್ಕಿಂತ ಲೇಟೆ ಆದ ನಗರ ಇನ್ನೊಂದಿಲ್ಲ. ಇದಕ್ಕೆ ಹೋಲಿಸಿದರೆ ಉಳಿದವೆಲ್ಲವೂ ಹಳತು. ಇದು ಹೊಸ ಜಗತ್ತಿನ ಎಲ್ಲಾ ಮಜಾ, ಮಹಾ, ಮಜಕೂರುಗಳ ಗರ್ಭದಲ್ಲಿ ಅರಳಿದ ಸುಂದರ, ದಷ್ಟಪುಷ್ಟ ನವಜಾತ ಶಿಶು!

ಈಗ ಲುಸೈಲ್ ನಗರವನ್ನು ಎಲ್ಲಿ ಅಭಿವೃದ್ಧಿಪಡಿಸಲಾಗಿದೆಯೋ, ಆ ಪ್ರದೇಶದಲ್ಲಿ ‘ಅಲ್ ವಸೈಲ್’ ಎಂಬ ಹೆಸರಿನ
ಹೂವು ಗಳು ಬೆಳೆಯುತ್ತಿದ್ದವಂತೆ. ಆ ಹೆಸರನ್ನೇ ಮೂಲವಾಗಿಟ್ಟುಕೊಂಡು ‘ಲುಸೈಲ್’ ಎಂದು ನಾಮಕರಣ ಮಾಡಲಾಗಿದೆ.
ಸುಮಾರು 45 ಶತಕೋಟಿ ಡಾಲರ್ ಹಣದಲ್ಲಿ ನಿರ್ಮಿಸಿರುವ ಲುಸೈಲ್ ನಗರದಲ್ಲಿ 19 ಡಿಸ್ಟ್ರಿಕ್ಟ್ ಗಳನ್ನು ಒಳಗೊಂಡಿದೆ. ಅಲ್ಲಿ 22 ನೆರೆ ಬೇರೆ ಬ್ರಾಂಡ್‌ಗಳಿಗೆ ಸೇರಿದ ಪಂಚತಾರಾ, ಸಪ್ತತಾರಾ ಹೋಟೆಲುಗಳನ್ನು ನಿರ್ಮಿಸಲಾಗಿದೆ. ಎರಡು ಗಾಲ್ಫ್ ಕೋರ್ಸುಗಳಿವೆ. ಇದರ ಜತೆಗೆ ಥೀಮ್ ಪಾರ್ಕ್, ಲಗೂನ್, ಬೀಚ್ ಕ್ಲಬ್, ಟೂರಿ ಸೆಂಟರ್, ಮಾನವ ನಿರ್ಮಿತ ದ್ವೀಪ, ಎರಡು
ಮರಿನಾಗಳು.

ಪ್ಯಾರಿಸಿನಲ್ಲಿ ಹದಿನಾಲ್ಕನೇ ಲೂಯಿ ನಿರ್ಮಿಸಿದ ಭವ್ಯ ‘ಪ್ಲೇಸ್ ವೆಂಡೋಮ’ ಮಾದರಿಯಲ್ಲಿ ಕಟ್ಟಿದ ಶಾಪಿಂಗ್ ಕಾಂಪ್ಲೆಕ್ಸ್ ಮತ್ತು ರಫೆಲ್ಸ್ ಹೋಟೆಲ, ಲುಸೈಲ್ ನಗರದ ಪ್ರಮುಖ ಆಕರ್ಷಣೆಗಳಂದು. ಪ್ಲೇಸ್ ವೆಂಡೋಮ್ ಮಾದರಿಯಲ್ಲಿ ಕಟ್ಟಿದ ಶಾಪಿಂಗ್ ಕಾಂಪ್ಲೆಕ್ಸ್ ಗೆ ಅದೇ ಹೆಸರನ್ನು ಇಡಲಾಗಿದೆ. ಆ ಶಾಪಿಂಗ್ ಕಾಂಪ್ಲೆಕ್ಸ್ ನ ಕಾರಿಡಾರುಗಳು ಹೆದ್ದಾರಿಯಷ್ಟು ಅಗಲವಾಗಿವೆ. ಜಗತ್ತಿನ ಪ್ರಮುಖ ಮತ್ತು ಐಷಾರಾಮಿ ಬ್ರಾಂಡ್ ಶೋರೂಮುಗಳನ್ನು ಹೊಂದಿರುವ ಪ್ಲೇಸ್ ವೆಂಡೋಮ, ಯಾರಿಗಾದರೂ ಇಲ್ಲಿ ತನಕ ನೋಡಿರದ, ನೂತನ ಶಾಪಿಂಗ್ ಅನುಭವವನ್ನು ನೀಡಬಲ್ಲುದು.

‘ಲಕ್ಸುರಿ’ ಪದಕ್ಕೆ ಹೊಸ ಭಾಷ್ಯ ಬರೆಯುವ ತಾಣವಿದು. ಲುಸೈಲ್ ನಗರ ‘ಲುಸೈಲ್ ಐಕಾನ್’ ಎಂಬ ಸ್ಟೇಡಿಯಂನ್ನು
ಸಹ ಹೊಂದಿದೆ. ಈ ಸಲದ ಫಿಫಾ ವಿಶ್ವಕಪ್ ಫುಟ್ಬಾಲ್‌ನ ಪ್ರಮುಖ ಆಕರ್ಷಣೆ ಸಹ ಇದಾಗಿದೆ. ತೊಂಬತ್ತು ಸಾವಿರ
ಆಸನಗಳ ಸಾಮರ್ಥ್ಯ ಹೊಂದಿರುವ ಈ ಕ್ರೀಡಾಂಗಣ, ವಿಶ್ವದ ಅತ್ಯಾಧುನಿಕ ವ್ಯವಸ್ಥೆ, ಸೌಲಭ್ಯಗಳನ್ನು ಹೊಂದಿದೆ. ಕೇವಲ
ಹದಿನಾರು ನಿಮಿಷಗಳಲ್ಲಿ ಇಡೀ ಸ್ಟೇಡಿಯಂನ್ನು ಬಯಸಿದ ತಾಪಮಾನಕ್ಕೆ ನಿಯಂತ್ರಿಸಬಹುದಾದ ಸುವಿಧಾವನ್ನು
ಹೊಂದಿದೆ.

ಬಂಗಾರದ ಬೋಗುಣಿಯನ್ನು ಹೋಲುವ ಈ ಕ್ರೀಡಾಂಗಣ ಆಧುನಿಕ ವಿನ್ಯಾಸ ಮತ್ತು ನಿರ್ಮಿತಿಗೆ ಮಾದರಿಯಾಗಿದೆ.
ಲುಸೈಲ್ ನಗರದ ಬುಲೆವಾರ್ಡ್‌ನಲ್ಲಿ ನಡೆಯುವಾಗ ಎಂದರಲ್ಲಿ ಕಾರಂಜಿ, ನೃತ್ಯ ಕಾರಂಜಿಗಳನ್ನು ಅಳವಡಿಸಿರುವುದು ಪ್ರಮುಖ ಆಕರ್ಷಣೆ. ರಸ್ತೆಯಲ್ಲಿ ನಡೆದು ಹೋಗುತ್ತಿದ್ದರೆ ಹಿತವಾದ ತಂಪು ಗಾಳಿ ಕೆಳಗಿನಿಂದ ತೂರಿಬಂದ ಅನುಭವ.
ರಸ್ತೆಯೊಳಗಿನಿಂದಲೇ ತಂಪು ಗಾಳಿ (ಏಸಿ) ಹೊರಸೂಸುವ ವ್ಯವಸ್ಥೆ ಕಂಡು ಕೇಳರಿಯದ್ದು. ಸಾಮಾನ್ಯವಾಗಿ ರಸ್ತೆಯ ಇಕ್ಕೆಲಗಳಲ್ಲಿ ಕಲ್ಲು ಅಥವಾ ಮರದ ಬೆಂಚುಗಳನ್ನು ಹಾಕುವುದು ಸಾಮಾನ್ಯ. ಆದರೆ ಲುಸೈಲ್ ನಗರದಲ್ಲಿ ಎಡೆ ಮೆತ್ತನೆಯ
ಕುಶನ್ ಹಾಸು.

ಲುಸೈಲ್ ಕತೆ ಅಂದ್ರೆ, ಫಿಫಾ ಫುಟ್ಬಾಲ್‌ಗಾಗಿ ಬಡಾವಣೆ ನಿರ್ಮಿಸಲು ಹೊರಟವರು, ಒಂದು ಭವ್ಯ ನಗರವನ್ನೇ ಕಟ್ಟಿದ
ಕತೆಯಾದೀತು. ಮುಂಬರುವ ದಿನಗಳಲ್ಲಿ ಲುಸೈಲ್ ನಗರ ಜಗತ್ತಿನ ಪ್ರಮುಖ ಆಕರ್ಷಣೆಯಾಗುವುದರಲ್ಲಿ ಸಂದೇಹವಿಲ್ಲ.

ಫುಟ್ಬಾಲ್ ಮತ್ತು ಆತ್ಮಹತ್ಯೆ

ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ ನಡೆಯುವ ಸಂದರ್ಭದಲ್ಲಿ, ಜಗತ್ತಿನ ಎಲ್ಲಾ ಪತ್ರಿಕೆ ಮತ್ತು ಟಿವಿಗಳಲ್ಲಿ, ಪಂದ್ಯಕ್ಕೆ ಸಂಬಂಧಿಸಿದ ಸುದ್ದಿಯಷ್ಟೇ ಪ್ರಕಟವಾಗುತ್ತಿರುತ್ತದೆ.

ಅದರಲ್ಲೂ ಪಂದ್ಯಾವಳಿ ಅರ್ಧ ಹಂತ ತಲುಪಿದಾಗ, ವಿಶ್ವದೆಡೆ ತುರುಸು ಹೆಚ್ಚಾಗಿ, ರೋಚಕತೆ ಜಾಸ್ತಿಯಾಗುತ್ತಾ ಹೋಗುತ್ತದೆ. ಪಂದ್ಯದಿಂದ ಪಂದ್ಯಕ್ಕೆ, ಟೂರ್ನಿಯಿಂದ ಹೊರ ಬೀಳುವ ತಂಡಗಳ ಸಂಖ್ಯೆಯೂ ಜಾಸ್ತಿಯಾಗಿ ಮತ್ತಷ್ಟು ಕಾವು ಪಡೆಯುತ್ತದೆ. ಪ್ರತಿ ತಂಡದ ಮೇಲೆ ‘ಸ್ಟೇಕ್ಸ್’ ಕೂಡ ಹೆಚ್ಚಾಗುತ್ತಾ ಹೋಗುತ್ತದೆ. ಇಡೀ ಪಂದ್ಯಾವಳಿಯ ಸಂಪೂರ್ಣ ಗಮನ
ಕೆಲವು ತಂಡಗಳ ಮೇಲೆ ಕೇಂದ್ರೀಕೃತವಾಗುತ್ತಾ ಹೋಗುತ್ತದೆ.

ಆದರೆ ಯಾರೂ ಅಭಿಮಾನಿಗಳ ತುಮುಲ-ತಲ್ಲಣಗಳನ್ನು ಗಮನಿಸಲು ಹೋಗುವುದಿಲ್ಲ. ಅನೇಕರಿಗೆ ಗೊತ್ತಿರದ ಒಂದು ಸಂಗತಿಯೆಂದರೆ, ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ ನಡೆಯುವಾಗ ಆತ್ಮಹತ್ಯೆಗಳು ಜಾಸ್ತಿಯಾಗುವುದು. ಈ
ಫುಟ್ಬಾಲ್ ಅಭಿಮಾನಿಗಳದ್ದು ಅದೆಂಥ ಹುಚ್ಚು ಉನ್ಮಾದವೋ ಅರ್ಥವಾಗುವುದಿಲ್ಲ. ತಾವು ಬೆಂಬಲಿಸುವ ತಂಡ ಸೋತಾಗ
ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಮತ್ತು ಗೆದ್ದಾಗ ಸಂತಸದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.

ಬ್ರೆಜಿಲ್ ಫುಟ್ಬಾಲ್ ಸಂಸ್ಕೃತಿ ಮತ್ತು ವಿಕೃತಿ ಕುರಿತು ಕಣ್ಣು ತೆರೆಯಿಸುವ ‘ಸಾರ್ಕ್ ಮ್ಯಾಡ್ನೆಸ್’ ಎಂಬ ಕೃತಿಯಲ್ಲಿ ಜನೆಟ್
ಲೆವೆರ್ ಬಹಿರಂಗಪಡಿಸಿದ ಕೆಲವು ಅಂಶಗಳು ಕಳವಳಕರವಾಗಿದೆ. ‘ತಮ್ಮ ತಂಡಗಳಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುವವರು ಬ್ರೆಜಿಲಿಯನರಷ್ಟೇ ಅಲ್ಲ, ಬ್ರಿಟಿಷರು ಮತ್ತು ಜರ್ಮನರು ಸಹ ಪೈಶಾಚಿಕವಾಗಿ ವರ್ತಿಸುತ್ತಾರೆ. ಫೈನಲ್ ಪಂದ್ಯದಲ್ಲಿ ಟಿವಿ ಸೆಟ್ ಕೈಕೊಟ್ಟಾಗ ಜರ್ಮನ್ ಪ್ರೇಕ್ಷಕನೊಬ್ಬ ತನಗೇ ಗುಂಡು ಹಾರಿಸಿಕೊಂಡು ಸತ್ತ. ಅಮೆರಿಕ ತಂಡ ಸೋಲುವುದು ಖಚಿತವಾದಾಗ, ಆ ದೇಶದ ಅಭಿಮಾನಿಯೊಬ್ಬ ಇಬ್ಬರಿಗೆ ಗುಂಡು ಹೊಡೆದು ಸಾಯಿಸಿ, ನಂತರ ತಾನೂ ಸತ್ತ.

1969ರಲ್ಲಿ ಹೊಂಡುರಾಸ್ ಮತ್ತು ಎಲ್ ಸಾಲ್ವಡಾರ್ ನಡುವೆ ರೋಚಕ ಪಂದ್ಯ. ಕೊನೆ ಕ್ಷಣದಲ್ಲಿ ಹೊಂಡುರಾಸ್ ತಂಡ
ಗೆಲುವಿನ ಗೋಲ್ ಹೊಡೆದಾಗ, ಎಲ್ ಸಾಲ್ವಡಾರ್ ತಂಡದ ಅಭಿಮಾನಿಯೊಬ್ಬಳು ತನ್ನ ತಂದೆ ರಿವಾಲ್ವರ್ ತೆಗೆದುಕೊಂಡು
ಹಣೆಗೆ ಗುರಿಯಿಟ್ಟು ಗುಂಡು ಹಾರಿಸಿಕೊಂಡು ಸತ್ತಳು. ಆಕೆಯ ಅಂತಿಮ ಸಂಸ್ಕಾರ ಕಾರ್ಯಕ್ರಮದಲ್ಲಿ ಎಲ್ ಸಾಲ್ವಡಾರ್
ಅಧ್ಯಕ್ಷ, ಸಚಿವರು ಮತ್ತು ರಾಷ್ಟ್ರೀಯ ಫುಟ್ಬಾಲ್ ತಂಡದ ಆಟಗಾರರು ಭಾಗವಹಿಸಿದ್ದರು. ಆಕೆಯ ಶವಕ್ಕೆ ಆ ದೇಶದ
ರಾಷ್ಟ್ರೀಯ ಧ್ವಜವನ್ನು ಹೊದಿಸಲಾಗಿತ್ತು. ಅದಾಗಿ ಒಂದು ತಿಂಗಳ ನಂತರ, ಹೊಂಡುರಾಸ್ ಮತ್ತು ಎಲ್ ಸಾಲ್ವಡಾರ್
ನಡುವೆ ‘ಸಾರ್ಕ್ ಸಮರ’ವೇ ಆರಂಭವಾಗಿದ್ದು ಅನೇಕರಿಗೆ ಗೊತ್ತಿರಬಹುದು.

ಅಚ್ಚರಿಯೆನಿಸಬಹುದು, ಫುಟ್ಬಾಲ್ ಟೂರ್ನಿಯಲ್ಲಿ ಯಾವುದೋ ತಂಡ, ಇನ್ನಾವುದೋ ತಂಡದ ವಿರುದ್ಧ ಸೋತರೆ,
ಜಗತ್ತಿನ ಮತ್ತಾವುದೋ ದೇಶದ ಪ್ರಜೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇದು ಎಂಥ ಹುಚ್ಚುತನವೋ, ಕ್ರೀಡಾ ಆರಾಧನೆ ಯೋ ಗೊತ್ತಿಲ್ಲ. 1990 ರಲ್ಲಿ ನಡೆದ ವಿಶ್ವಕಪ್ ಫುಟ್ಬಾಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಕ್ಯಾಮರೂನ್ ಸೋತಾಗ, ಬಾಂಗ್ಲಾದೇಶದ ಮಹಿಳೆಯೊಬ್ಬಳು ನೇಣು ಹಾಕಿಕೊಂಡು ಸತ್ತಿದ್ದಳು.

‘ಕ್ಯಾಮರೂನ್ ತಂಡ ಸೋತು ಟೂರ್ನಿಯಿಂದ ನಿರ್ಗಮಿಸಿದ್ದನ್ನು ನೋಡಿ ನನಗೆ ಬದುಕುಳಿಯುವ ಯಾವ ಆಸೆಯೂ
ಇಲ್ಲ, ನಾನೂ ಈಗಲೇ ನಿರ್ಗಮಿಸುತ್ತೇನೆ’ ಎಂದು ಆಕೆ ಸಾಯುವ ಮುನ್ನ ಬರೆದಿಟ್ಟಿದ್ದಳು. ವಿಶ್ವಕಪ್ ಫುಟ್ಬಾಲ್ ನಡೆ
ಯುವಾಗ ಬಾಂಗ್ಲಾದೇಶದಲ್ಲಿ ಪ್ರತಿದಿನ ಕನಿಷ್ಠ ಮೂವರಾದರೂ ಆತ್ಮಹತ್ಯೆಗೆ ಶರಣಾಗುತ್ತಾರಂತೆ. ಆದರೆ ಈ ಸಂಗತಿ ಎಲ್ಲೂ
ವರದಿಯಾಗುವುದಿಲ್ಲ.

1994 ರಲ್ಲಿ ಎಫೆಡ್ರಿನ್ ಮಾದಕ ಪದಾರ್ಥ ಸೇವಿಸಿದ ಆರೋಪಕ್ಕೆ ಗುರಿಯಾದ ಫುಟ್ಬಾಲ್ ಆಟದ ದಂತಕತೆ ಡಿಯಾಗೋ ಮೆರಡೋನ ಅವರನ್ನು ವಿಶ್ವಕಪ್ ಪಂದ್ಯಾವಳಿಯಿಂದ ಹೊರಹಾಕಿದಾಗ, ಬಾಂಗ್ಲಾದೇಶದಲ್ಲಿ ಆ ನೋವು- ಹತಾಶೆಯನ್ನು ಸಹಿಸಲಾಗದ ನೂರಾರು ಅವನ ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ 2006 ರಲ್ಲಿ ‘ದಿ ಹಿಂದೂ’ ಪತ್ರಿಕೆ ಆಘಾತಕಾರಕ, ವಿಸ್ತೃತ ಲೇಖನವನ್ನು ಪ್ರಕಟಿಸಿತ್ತು. ಆ ಲೇಖನ ವಿಶ್ವದೆಡೆ ಸಂಚಲನವನ್ನು ಉಂಟು ಮಾಡಿತ್ತು. ಅದಾದ ಬಳಿಕ, ಫುಟ್ಬಾಲ್ ಆತ್ಮಹತ್ಯೆಯನ್ನು ಪ್ರಚೋದಿಸುತ್ತದೆ ಎಂಬ ಆರೋಪವೂ ಕೇಳಿಬಂತು.

ಫುಟ್ಬಾಲ್ ಪಂದ್ಯ ವೀಕ್ಷಿಸುವಾಗ ಹೃದಯಾಘಾತದಿಂದ ಸಾಯುವವರ ಸಂಖ್ಯೆ ಹೆಚ್ಚುತ್ತಿರುವುದು ಸಹ ಎಲ್ಲೂ ವರದಿ
ಯಾಗುತ್ತಿಲ್ಲ. ಮೈದಾನದಲ್ಲಿ ಗೋಲ್‌ಗಳಿಗಿಂತ ಹೃದಯಾಘಾತ ದಿಂದ ಸಾಯುವವರೇ ಹೆಚ್ಚು. ಹಂಟರ್ ಎಸ್.ಥಾಮ್ಸನ್ ಹೆಸರನ್ನು ಕೇಳಿರಬಹುದು. ಮೂಲತಃ ಆತ ಅಮೆರಿಕದ ಪತ್ರಕರ್ತ ಮತ್ತು ಗೋಂಝೋ ಪತ್ರಿಕೋದ್ಯಮದ (ವರದಿಗಾರನೇ ಸ್ಟೋರಿಯ ಭಾಗವಾಗಿ, ಪ್ರಥಮ ಪುರುಷದಲ್ಲಿ ಬರೆಯುವವ) ಪ್ರತಿಪಾದಕ.

ಫುಟ್ಬಾಲ್ ಪಂದ್ಯಾವಳಿ ಮುಗಿದ ಬಳಿಕ, ಬದುಕು ನೀರಸವೆನಿಸಿ, 2005 ರ ಫೆಬ್ರವರಿಯಲ್ಲಿ ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಂಡ. ಸಾಯುವ ನಾಲ್ಕು ದಿನಗಳ ಮೊದಲು ಆತ ಹೀಗೆ ಬರೆದಿಟ್ಟಿದ್ದ – No More Games. No More Bombs. No More Walking. No More Fun. No More Swimming. 67. That is 17 years past 50. 17 more than I needed or wanted. Boring…ಈ ಪುಟ್ಟ ಟಿಪ್ಪಣಿಗೆ ಆತ ಕೊಟ್ಟ ಶೀರ್ಷಿಕೆ – ‘Football season
is over’.’. ಥಾಮ್ಸನ್ ಅಮೆರಿಕದ ಫುಟ್ಬಾಲನ್ನು ಬಹಳ ಇಷ್ಟಪಡುತ್ತಿದ್ದ.

ಒಮ್ಮೆ ಆತ ಅಮೆರಿಕದ ಅಧ್ಯಕ್ಷ ಚುನಾವಣಾ ಅಭ್ಯರ್ಥಿ ರಿಚರ್ಡ್ ನಿಕ್ಸನ್ ಜತೆ ರಾತ್ರಿಯಿಡೀ ಕಾರಿನಲ್ಲಿ ಪ್ರಯಾಣ ಮಾಡುವಾಗ, ನಿರಂತರ ಫುಟ್ಬಾಲ್ ಬಗ್ಗೆಯೇ ಚರ್ಚೆ ಮಾಡಿದ್ದ. ಅವರಿಬ್ಬರ ಮಧ್ಯೆ ಫುಟ್ಬಾಲ್ ಹೊರತಾಗಿ ಬೇರೆ ವಿಷಯವೇ ಪ್ರಸ್ತಾಪ ವಾಗಿರಲಿಲ್ಲ. ಫುಟ್ಬಾಲ್ ಬಗ್ಗೆ ಆತನ ಹುಚ್ಚು ಪ್ರೇಮವನ್ನು ಕಂಡು ಸ್ವತಃ ನಿಕ್ಸನ್ ಬೆರಗಾಗಿದ್ದರು. 1991 ರ ವಿಶ್ವಕಪ್  ಫುಟ್ಬಾಲ್ ಫೈನಲ್ ಪಂದ್ಯದ ಬಳಿಕ, ಮೈಗೆ ಬೆಂಕಿ ಹಚ್ಚಿಕೊಂಡ (ಆತ್ಮಾಹುತಿ) ಹತ್ತಕ್ಕೂ ಹೆಚ್ಚು ಪ್ರಕರಣಗಳು ವರದಿ ಯಾಗಿದ್ದವು. ಬ್ರಿಟನ್ನಿನ ನಾಟಿಂಗ್‌ಹ್ಯಾಮ್ ಆಸ್ಪತ್ರೆಯಲ್ಲಿ ಅವರೆಲ್ಲರನ್ನೂ ಶುಶ್ರೂಷೆಗೆ ದಾಖಲು ಮಾಡಲಾಗಿತ್ತು. ಕಳೆದ ಬಾರಿ ರಷ್ಯಾದಲ್ಲಿ ನಡೆದ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಬಳಿಕ, ಖಿನ್ನತೆ, ಏಕಾಂಗಿತನದ ಪ್ರಕರಣಗಳು ಹಠಾತ್
ಹೆಚ್ಚಾದವು.

ಪಂದ್ಯ ಮುಗಿದ ಎರಡು ತಿಂಗಳ ಬಳಿಕ ವಿದೇಶಿ ಫುಟ್ಬಾಲ್ ಪ್ರೇಮಿಗಳು ರಷ್ಯಾದಿಂದ ತೊಲಗದೇ, ಹುಚ್ಚರಂತಾಗಿ
ಅಲ್ಲಿನ ಬೀದಿಗಳಲ್ಲಿ ಅಲೆದಾಡುತ್ತಿದ್ದುದು ಸಹ ಕಂಡು ಬಂದಿತು. ಇದು ಟಿಪಿಕಲ್ ಫುಟ್ಬಾಲ್ ಖಿನ್ನತೆಯ ಪ್ರತೀಕ ಎಂಬುದು
ಮನವರಿಕೆಯಾಯಿತು.

ನಾಪ್ಕಿನ್ ಪೇಪರ್ ಮಾರಾಟಕ್ಕಿದೆ!

ಲಿಯೋನೆಲ್ ಮೆಸ್ಸಿ ಫುಟ್ಬಾಲ್ ಜೀವಂತ ದಂತಕತೆ. ಕ್ರೀಡಾಂಗಣದಲ್ಲಿ ಮೆಸ್ಸಿ ಇದ್ದರೆ ಅದರ ಖದರೇ ಬೇರೆ. ಅದು ಲೀಗ್ ಮ್ಯಾಚ್ ಇರಬಹುದು, ಯುರೋ ಕಪ್ ಇರಬಹುದು ಅಥವಾ ವರ್ಲ್ಡ್ ಕಪ್ ಇರಬಹುದು, ಅರ್ಜೆಂಟಿನಾದ ಈ ಅದ್ಭುತ ಆಟಗಾರನಿದ್ದರೆ, ಆತನೇ ಅದರ ಕೇಂದ್ರಬಿಂದು. ಆರಂಭದ ದಿನಗಳು. ಮೆಸ್ಸಿ ಕಾಲ್ಚಳಕ ನೋಡಿ ‘ಎಫ್ಸಿ ಬಾರ್ಸಿಲೊನಾ’ ಮುಖ್ಯಸ್ಥ ದಂಗಾಗಿಬಿಟ್ಟ. ಮೆಸ್ಸಿ ಚುರುಕುತನ, ಮುನ್ನುಗ್ಗುವಿಕೆ, ವೇಗ, ಉತ್ಕರ್ಷ, ಹುರುಪು ಕಂಡು ಬೆರಗಾದ.

ತಕ್ಷಣ ಅವನನ್ನು ತನ್ನ ತಂಡಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಿದ. ಈ ವಿಷಯವನ್ನು ಮೆಸ್ಸಿಗೆ ಹೇಳಿದ. ಇಬ್ಬರೂ ಒಂದು ಒಪ್ಪಂದ ಮಾಡಿಕೊಳ್ಳಲು ನಿರ್ಧರಿಸಿದರು. ಈ ಅವಕಾಶವನ್ನು ತಪ್ಪಿಸಿಕೊಳ್ಳಬಾರದು ಎಂಬುದು ಎಫ್ಸಿ ಬಾರ್ಸಿಲೊನಾ ಮುಖ್ಯಸ್ಥನ ಲೆಕ್ಕಾಚಾರವಾಗಿತ್ತು.

ತಕ್ಷಣ ಇಬ್ಬರೂ ಒಂದು ಖಾಲಿ ಬಿಳಿ ಕಾಗದಕ್ಕಾಗಿ ಹುಡುಕಾಡಿದರು. ಎಷ್ಟೇ ಹುಡುಕಿದರೂ ಅದು ಎಲ್ಲೂ ಸಿಗಲಿಲ್ಲ. ಅವರು
ಕುಳಿತ -ಟ್ಬಾಲ್ ಮೈದಾನದಲ್ಲಿ ಒಂದು ಕಾಗದ ಸಿಗದಿದ್ದಾಗ, ಎಫ್ಸಿ ಬಾರ್ಸಿಲೊನಾ ಮುಖ್ಯಸ್ಥ ಸ್ವತಃ ಎದ್ದು ಟಾಯ್ಲೆಟ್‌ಗೆ
ಹೋಗಿ, ಕೈ ಒರೆಸುವ ಪೇಪರ್ ನ್ಯಾಪ್ಕಿನ್ ತೆಗೆದುಕೊಂಡು ಬಂದ. ಅದರ ಮೇಲೆಯೇ ಕರಾರು ಒಕ್ಕಣಿಕೆ ಬರೆಯಲಾಯಿತು.
ಇಬ್ಬರೂ ಸಹಿ ಮಾಡಿದರು. ಇಂದು -ಮ್ ಹಾಕಿದ ಆ ಕರಾರು ಪತ್ರ ಎರಡು ಸಾವಿರ ರುಪಾಯಿಗೆ, ಕತಾರ್ ವಿಮಾನ ನಿಲ್ದಾಣದಲ್ಲಿರುವ ಫಿಫಾ ಸ್ಟೋರ್ಸ್‌ನಲ್ಲಿ ಸ್ಮರಣಿಕೆಯಾಗಿ ಮಾರಾಟವಾಗುತ್ತಿದೆ!

‘ಲೇ ಝಟನ್’ ಬರ್ಗರ್

ಸಾಮಾನ್ಯವಾಗಿ ಯಾವುದಾದರೂ ಫ್ರೆಂಚ್ ಕೆಫೆಗೆ ಹೋದರೆ, ಮೆನು ಕಾರ್ಡಿನಲ್ಲಿ ನಿಮಗೆ ‘ಲೇ ಜ್ಲ್ಯಾಟನ್’ ಅಥವಾ ‘ಲೇ
ಝಟನ್’ ಎಂಬ ಹೆಸರಿನ ಬರ್ಗರ್ ಗಮನ ಸೆಳೆಯುತ್ತದೆ. ಅನೇಕರಿಗೆ ಈ ಬರ್ಗರ್ ಇಷ್ಟವಾದರೂ, ಆರ್ಡರ್ ಮಾಡುವು
ದಿಲ್ಲ. ಅದರಲ್ಲೂ ಒಬ್ಬರೇ ಕೆಫೆಗೆ ಹೋದಾಗಂತೂ ಆರ್ಡರ್ ಮಾಡುವುದಿಲ್ಲ. ಇಬ್ಬರು ಹೋದಾಗ ಇದನ್ನು ಹಂಚಿ (ಶೇರ್)
ಸೇವಿಸುವುದುಂಟು. ಕಾರಣ ಅದರ ಗಾತ್ರ.

ಈ ಬರ್ಗರ್‌ನ್ನು ಒಬ್ಬ ಫುಟ್ಬಾಲ್ ಆಟಗಾರನ ನೆನಪಿನಲ್ಲಿ ಮಾಡಲಾಗಿದೆ. ಆತನ ಹೆಸರು ಝಟನ್ ಇಬ್ರಾಹಿಮೊವಿಕ್.
ಆತ ಸೆರಿ ಎ ಕ್ಲಬ, ಏಸಿ ಮಿಲಾನ್ ಮತ್ತು ಸ್ವೀಡನ್ ರಾಷ್ಟ್ರೀಯ ತಂಡದ ಪ್ರಮುಖ (ಸ್ಟ್ರೈಕರ್) ಆಟಗಾರರಬ್ಬ. ಈತನಿಗೆ
ಗಾಳಿಯಲ್ಲಿ ಚೆಂಡನ್ನು ಒದೆಯುವ ಸ್ಟೈಲಿಶ್ ಆಟಗಾರ ಎಂಬ ಅಭಿದಾನ ಬೇರೆ. ನಿರಂತರವಾಗಿ ಇಪ್ಪತ್ತು ವರ್ಷಗಳ ಕಾಲ
ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸ್ವೀಡನ್‌ನ್ನು ಪ್ರತಿನಿಧಿಸಿದ ಈತ, ಪ್ರಥಮ ದರ್ಜೆ ಆಟದಲ್ಲಿ 570 ಗೋಲುಗಳನ್ನು ಹೊಡೆದ
ಕೀರ್ತಿಗೆ ಪಾತ್ರನಾಗಿದ್ದಾನೆ. ಈತನಿಗೆ – ಮತ್ತು ಜರ್ಮನಿಯಲ್ಲೂ ಅಪಾರ ಅಭಿಮಾನಿಗಳಿದ್ದಾರೆ.

ಫ್ರೆಂಚ್ ಕೆಫೆ ಆತನ ಹೆಸರಿನಲ್ಲಿ ಬರ್ಗರ್ ಸಿದ್ಧಪಡಿಸಿರುವುದೇ ಅದಕ್ಕೆ ನಿದರ್ಶನ. ಈ ಬರ್ಗರ್ ಅನ್ನು ಬಾಯಲ್ಲಿ ಇಟ್ಟುಕೊಳ್ಳಲು ಆಗದಷ್ಟು ದೊಡ್ಡದು. ಇದಕ್ಕಾಗಿ 600 ಗ್ರಾಂ ಬೀಫನ್ನು ಬಳಸಲಾಗುತ್ತದೆ. ಇದರ ಜತೆಗೆ ಬೇಕನ್, ಚೆಡ್ಡರ್ ಚೀಸ್, ಎಮೆಂಟಲ್ ಮತ್ತು ಈರುಳ್ಳಿ ಹೊಂದಿರುವ ಆ ಬರ್ಗರ್‌ಗೆ ವಿಶೇಷ ಬನ್ ಬೇಕು.

ಮೆನು ಕಾರ್ಡಿನಲ್ಲಿ ಈ ಬರ್ಗರ್ ಕೆಳಗೆ, Even Chuck Norris couldn’t fit it in his mouth ಎಂದು  ಬರೆಯ ಲಾಗಿದೆ. (ಚಕ್ ನೋರಿಸ್ ಅಂದ್ರೆ ರೋಬೊ ಸಿನಿಮಾದ ರಜನಿಕಾಂತ ಇದ್ದ ಹಾಗೆ)