Wednesday, 11th December 2024

ಒಂದು ಅಂಕಣ ಪಿಎಚ್.ಡಿ ಆಯಿತು, ಇನ್ನೊಂದು ಸಿನೆಮಾ ಆಯಿತು !

ನೂರೆಂಟು ವಿಶ್ವ

vbhat@me.com

ಕೆಲವು ಸಂತೋಷಗಳನ್ನು ಮನಸ್ಸಿನಲ್ಲಿಯೇ ಇಟ್ಟುಕೊಳ್ಳಬೇಕು. ಇನ್ನು ಕೆಲವನ್ನು ಬೇರೆಯವರಿಗೆ ಹೇಳಬೇಕು. ಹಾಗೆ ಹೇಳಿದರೇ ಹೆಚ್ಚು ಸಂತೋಷ. ಅದಕ್ಕಿಂತ ಹೆಚ್ಚಾಗಿ ಕೆಲವು ಸಂತೋಷಗಳನ್ನು ನಮ್ಮಲ್ಲಿ ಇಟ್ಟುಕೊಳ್ಳಲು ಸಹ ಆಗುವುದಿಲ್ಲ. ಅಂಥ ಒಂದೆರಡು ಸಂತಸಗಳನ್ನು ಹೇಳಿಕೊಳ್ಳಬೇಕು. ಅಂಥವುಗಳ ಪೈಕಿ ಒಂದನ್ನು, ಕಳೆದ ಎರಡು ವಾರಗಳ ಹಿಂದೆ ಬರೆದಿದ್ದೆ. ಮೈಸೂರು ವಿಶ್ವವಿದ್ಯಾಲ ಯದ ಸುಶ್ಮಿತಾ ಎಂಬ ವಿದ್ಯಾರ್ಥಿನಿ ‘ಕಳೆದ ಹದಿನೇಳು ವರ್ಷಗಳ ನನ್ನ ಅಂಕಣ ಬರಹಗಳ ಬಗ್ಗೆ ಸಂಶೋಧನೆ ಮಾಡಿ, ಪಿಎಚ್.ಡಿ. ಡಿಗ್ರಿ ಸಂಪಾದಿಸಿದಾಗ ನನಗಾದ ಆನಂದ ಅಷ್ಟಿಷ್ಟಲ್ಲ. ನಾನೇ ಪಿಎಚ್.ಡಿ. ಮಾಡಿ ಆ ಡಿಗ್ರಿ ಸಂಪಾದಿಸಿದ್ದರೂ, ಅಷ್ಟು ಸಂತಸ ನನಗಾಗುತ್ತಿರಲಿಲ್ಲವೇನೋ? ನಾವು ನಮಗೆ ಇಷ್ಟವಾದ ಬೇರೊಂದು ವಿಷಯದ ಬಗ್ಗೆ ಸಂಶೋಧನೆ ಮಾಡುವುದು ಇದ್ದೇ ಇದೆ.

ಪಿಎಚ್.ಡಿ. ಮಾಡುವ ಎಲ್ಲರೂ ಮಾಡುವುದು ಅದನ್ನೇ. ಅದರಲ್ಲಿ ಹೇಳಿಕೊಳ್ಳುವಂಥದ್ದೇನೂ ಇಲ್ಲ. ಆದರೆ ಬೇರೆಯವರು ನಮ್ಮ ಕೃತಿಗಳ ಬಗ್ಗೆ ಸಂಶೋಧನೆ ಮಾಡುವುದು ಯಾರಿಗಾದರೂ ಆತ್ಮತೃಪ್ತಿ ಕೊಡುವಂಥದ್ದು. ಇದು ಕೆಲವರಿಗೆ ಮಾತ್ರ ಸಿಗುವಂಥದ್ದು. ಜಗತ್ತಿನಲ್ಲಿ ಎಷ್ಟೋ ಸಾಹಿತಿಗಳು, ಲೇಖಕರು, ಪತ್ರಕರ್ತರು ಸಾಕಷ್ಟು ಬರೆದಿದ್ದಾರೆ. ಆದರೆ ಅವರ ಕೃತಿಗಳ ಬಗ್ಗೆ ಸಂಶೋಧನೆ ಮಾಡಿದವರು ವಿರಳ.

ಇನ್ನು ಕೆಲವು ಸಾಹಿತಿಗಳು ಎಸ್ಸೆಸ್ಸೆಲ್ಸಿಯನ್ನೂ ಮುಗಿಸಿದವರಲ್ಲ. ಅಂಥವರ ಕೃತಿಗಳು ಪಿಎಚ್.ಡಿ.ಗೆ ವಸ್ತುವಾಗಿವೆ. ನಿಮಗೆ ಗೊತ್ತಿರಬಹುದು, ಡಿವಿಜಿ ಎಂದೇ ಖ್ಯಾತರಾದ ಡಿ.ವಿ.ಗುಂಡಪ್ಪನವರು ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ (೧೦ ನೇ ತರಗತಿ) ಉತ್ತೀರ್ಣರಾಗಲಿಲ್ಲ. ಆದರೆ ಅವರು ವೇದ, ವೇದಾಂತ, ಬ್ರಹ್ಮಸೂತ್ರ, ಧರ್ಮಸೂತ್ರ, ಸಂಸ್ಕೃತ, ಕನ್ನಡ ಮತ್ತು ಇತರ ಭಾರತೀಯ ಭಾಷೆಗಳು, ಕರ್ನಾಟಕದ ರಾಜಕೀಯ ಪರಿಸ್ಥಿತಿ, ರಾಮಾಯಣ ಮತ್ತು ಮಹಾಭಾರತ, ಎಂಜಿನಿಯ ರಿಂಗ, ಸ್ವಾತಂತ್ರ್ಯ ಹೋರಾಟಗಾರರು, ಪತ್ರಿಕೋದ್ಯಮ, ಪಾಶ್ಚಾತ್ಯ ಸಾಹಿತ್ಯ, ಇಸ್ಲಾಮಿಕ್ ಸಾಹಿತ್ಯಗಳ ಬಗ್ಗೆ ಬರೆದ ಪ್ರಬಂಧಗಳು ಪದವಿ ಪಠ್ಯಪುಸ್ತಕಗಳಾದವು.

ನೂರಾರು ವಿದ್ಯಾರ್ಥಿಗಳು ಡಿವಿಜಿ ಅವರ ಕೃತಿಗಳನ್ನು ಕುರಿತು ಸಂಶೋಧನಾ ಮಹಾಪ್ರಬಂಧಗಳನು ಸಲ್ಲಿಸಿ ಪಿಎಚ್ .ಡಿ. ಡಿಗ್ರಿ ಪಡೆದರು.
ಡಿವಿಜಿ ಅವರು ’ಮಂಕುತಿಮ್ಮನ ಕಗ್ಗ’ವನ್ನು ಇಂಗ್ಲೀಷಿನಲ್ಲಿ ಬರೆದಿದ್ದರೆ, ನೊಬೆಲ್ ಪ್ರಶಸ್ತಿ ಬರುತ್ತಿತ್ತು ಎಂದು ಕನ್ನಡದ ಪ್ರಸಿದ್ಧ ವಿಮರ್ಶಕ ಕೀರ್ತಿನಾಥ ಕುರ್ತಕೋಟಿಯವರು ಒಮ್ಮೆ ಹೇಳಿದ್ದರು. ಡಿವಿಜಿಯವರು ನಿಧನರಾಗಿ ನಲವತ್ತೆಂಟು ವರ್ಷಗಳಾದವು. ಇಂದಿಗೂ ಅವರ ಕೃತಿಗಳ ಬೇರೆ ಬೇರೆ
ಆಯಾಮಗಳ ಬಗ್ಗೆ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ನಡೆಯುತ್ತಿದೆ. ಒಂದು ವೇಳೆ ಅವರು ಬದುಕಿದ್ದಿದ್ದರೆ ಅವರು ಅವೆಷ್ಟು ಖುಷಿ ಪಡುತ್ತಿದ್ದರೋ ಏನೋ? ತನ್ನ ಕೃತಿ ವಿದ್ಯಾರ್ಥಿಗಳ ಕಲಿಕೆಗೆ ಸಹಾಯಕವಾಗುತ್ತಿದೆಯಲ್ಲ ಎಂದು ಧನ್ಯತೆಯಿಂದ ಸಂತಸಪಡುತ್ತಿದ್ದರು.

ಇದಕ್ಕಿಂತ ದೊಡ್ಡ ಸಾರ್ಥಕತೆ ಮತ್ತೇನೂ ಇಲ್ಲ. ಸುಶ್ಮಿತಾ ನನ್ನ ಕೈಗೆ ಪಿಎಚ್.ಡಿ ಮಹಾಪ್ರಬಂಧವನ್ನು ನನ್ನ ಕೈಗಿಟ್ಟಾಗಲೂ ನನ್ನೊಳಗೆ ಆವರಿಸಿದ್ದು ಇದೇ ಭಾವ. ಕಳೆದ ೨೩ ವರ್ಷಗಳಿಂದ ನಾನು ವಿವಿಧ ಪತ್ರಿಕೆಗಳಿಗೆ ಮತ್ತು ಈಗ ನನ್ನದೇ ‘ವಿಶ್ವವಾಣಿ’ಗೆ, ವಾರಕ್ಕೆ ಮೂರು-ನಾಲ್ಕು ಅಂಕಣಗಳಂತೆ ನಿರಂತರವಾಗಿ ಬರೆಯುತ್ತಲೇ ಬಂದಿದ್ದೇನೆ. ಒಂದು ವಾರವೂ ಯಾವ ನೆಪ ಹೇಳದೇ, ಏಳಲಾಗದೇ ಕಾಯಿಲೆ ಬಿದ್ದು ಹಾಸಿಗೆ ಹಿಡಿದರೂ, ಎರಡು ಗಂಟೆ ಹೇಗೋ ಕಷ್ಟಪಟ್ಟು ಎದ್ದು ಬರೆದು ಅಂಕಣ ಬರೆದಿದ್ದೇನೆ. ಜಗತ್ತಿನ ಯಾವ ಮೂಲೆಯಲ್ಲಿದ್ದರೂ, ಸಮಯದ ಅಂತರಗಳಿದ್ದರೂ, ಹೇಗೋ ಹೊಂದಿಸಿಕೊಂಡು ರಾತ್ರಿ ಡೆಡ್ ಲೈನ್ ಒಳಗೆ ನನ್ನ ಅಂಕಣ ಸುದ್ದಿಮನೆ ತಲುಪುವಂತೆ ನೋಡಿಕೊಂಡಿದ್ದೇನೆ.

ಕೆಲವೊಮ್ಮೆ ವಿಮಾನದಲ್ಲಿದ್ದಾಗ, ಅಲ್ಲಿಯೇ ಬರೆದು, ಇಳಿಯುತ್ತಿದ್ದಂತೆ ಕಳಿಸಿಕೊಟ್ಟಿದ್ದುಂಟು. ರವಾಂಡದ ಕಾಡುಗಳಿಂದ ಅಂಕಣವನ್ನು ಡಿಕ್ಟೇಟ್
ಮಾಡಿದ್ದೇನೆ. ಕೀನ್ಯಾದ ಮಸೈ ಮರಾದಿಂದ ಅಂಕಣ ಬರೆದು, ಸುಮಾರು ನೂರು ಕಿಮೀ ಪ್ರಯಾಣ ಮಾಡಿ, ಅಲ್ಲಿನ ಇಂಟರ್ನೆಟ್ ಸೆಂಟರ್‌ಗೆ ಬಂದು ಅಲ್ಲಿಂದ ಕಳಿಸಿಕೊಟ್ಟಿದ್ದೇನೆ. ಅಂಕಣ ಬರೆದಿಟ್ಟರೂ ಕಳಿಸಲು ಆಗದೇ ಒದ್ದಾಡಿ, ನಂತರ ಉಗಾಂಡದ ಮಿಲಿಟರಿ ಕ್ಯಾಂಪ್ ಗೆ ಬಂದು ಸೈನಿಕನ ಮುಂದೆ ಅಂಗಲಾಚಿ, ಅಲ್ಲಿಂದ ಫ್ಯಾಕ್ಸ್ ಮಾಡಿದ್ದೇನೆ. ಇಡೀ ಐದಾರು ಪುಟಗಳು ಕನ್ನಡದಲ್ಲಿದ್ದುದರಿಂದ, ಅಕ್ಷರ, ಭಾಷೆ ಗೊತ್ತಿಲ್ಲದ ಆ ಮಿಲಿಟರಿ ಅಧಿಕಾರಿ ಅವನ್ನು ಬೇರೆ ದೇಶಕ್ಕೆ ಕಳಿಸಲು ಗೌಪ್ಯತೆ ಕಾರಣದಿಂದ ಒಪ್ಪಲಿಲ್ಲ. ನನ್ನ ಅಸಲೀತನ ಸ್ಥಾಪಿಸಿ, ಆತನಲ್ಲಿ ನಂಬಿಕೆ ಮೂಡಿಸುವ ಹೊತ್ತಿಗೆ ಸಾಕೋ ಸಾಕಾಗಿತ್ತು.

ದಕ್ಷಿಣ ಆಫ್ರಿಕಾದ ಝುಲು ಲ್ಯಾಂಡಿನ ಕ್ವಾಜುಲು ನಟಾಲ್ ಪ್ರದೇಶದ ಗುಡ್ಡಗಾಡು ಪ್ರದೇಶದಲ್ಲಿ ಸಂಚರಿಸುವಾಗ, ನೆಟ್ ವರ್ಕ್ ಸಿಗದೇ ಪರಿತಪಿಸಿ, ಬರೆದಿದ್ದನ್ನು ಕಳಿಸಲು ಆಗುತ್ತಿಲ್ಲವಲ್ಲ ಎಂದು ಸಂಕಟಪಡುತ್ತಿದ್ದಾಗ, ವಿದೇಶಿ ಯವನೊಬ್ಬ ತನ್ನ ಡಾಂಗಲ್ ಮೂಲಕ ಕಳಿಸಲು ನೆರವಾಗಿದ್ದನ್ನು ಮರೆಯುವಂತೆಯೇ ಇಲ್ಲ. ಇವೆ ನನ್ನ ಓದುಗರಿಗೆ ಗೊತ್ತಿದ್ದಿದ್ದೇ. ವಿದೇಶ ಪ್ರಯಾಣದಲ್ಲಿದ್ದಾಗ ಬರೆಯುವುದು ಮತ್ತು ಬರೆದಿದ್ದನು ಕಳಿಸುವುದು, ಈಗ
ಐದಾರು ವರ್ಷಗಳ ಹಿಂದಿನವರೆಗೂ ಸವಾಲಾಗಿತ್ತು. ಈಗ ಕಳಿಸುವ ಸಮಸ್ಯೆಯಿಲ್ಲ. ಆದರೆ ಬರೆಯುವುದಂತೂ ಯಾವತ್ತೂ ಸವಾಲೇ. ಅಲ್ಲಿದ್ದಾಗ ಬರೆಯಲು ಕುಳಿತರೆ, ಅಷ್ಟರಮಟ್ಟಿಗೆ ಅಲ್ಲಿ ಸಂಚಾರ ಅಥವಾ ನೋಟ ಸ್ಥಗಿತ.

ಹಾಗೆಂದು ಬರೆಯದೇ ಇರುವಂತಿಲ್ಲ. ಅಷ್ಟಕ್ಕೂ ಅಲ್ಲಿಗೆ ಹೋಗಿರುವುದೇ ನೋಡಿದ್ದನ್ನು, ಅನುಭವಿಸಿದ್ದನ್ನು ಬರೆಯಲು. ಅದನ್ನೂ ನಮ್ಮ ಓದುಗರಿಗೆ ಹೇಳದಿದ್ದರೆ ಹೇಗೆ? ಇವನ್ನೆಲ್ಲ ಗಮನಿಸಿದ ಸುಶ್ಮಿತಾ ತನ್ನ ಪಿಎಚ್.ಡಿ ಸಂಶೋಧನೆಗೆ ನನ್ನ ಅಂಕಣ ಬರಹಗಳನ್ನು ಆರಿಸಿಕೊಳ್ಳಬಹುದು ಎಂಬ ಸಣ್ಣ ಸುಳಿವೂ ನನಗಿರಲಿಲ್ಲ. ಒಂದು ವಿಷಯವನ್ನು ಐದು ವರ್ಷಗಳ ಕಾಲ ಅಧ್ಯಯನ ಮಾಡಿ, ಹೊಸ ಹೊಳಹುಗಳನ್ನು ಕಂಡುಹಿಡಿಯುವುದು ಸಹ ಒಂದು ದೊಡ್ಡ excercise!!

ಹೀಗಾಗಿ ನಾನು ಬರೆದಿದ್ದು, ಇನ್ಯಾರದೋ ವಿದ್ಯಾರ್ಜನೆಯ ವಸ್ತುವಾಗಿ, ಬದುಕಿನ ಒಂದು ಮಹತ್ವದ ಮಜಲನ್ನೇರಲು ಸಹಾಯಕವಾದರೆ ಅದು ನಿಜಕ್ಕೂ ಸಾರ್ಥಕ. ನನ್ನ ಪಾಡಿಗೆ ನಾನು ಆಸ್ಥೆಯಿಂದ ಬರೆಯುತ್ತಿದ್ದ ಬರಹಗಳು, ಇನ್ನೊಬ್ಬರ ಜೀವನದಲ್ಲಿ ಸ್ಥಾಪನೆಯಾಗಿ, ಅದು ಒಂದು ಶ್ರೇಷ್ಠತೆಯ ಹಂತ ತಲುಪಲು ನೆರವಾಗುವುದಾದರೆ ಆ ಸಂತಸವನ್ನು ಅಳೆಯುವುದಾದರೂ ಹೇಗೆ? ಸುಶ್ಮಿತಾಳ ಪಿಎಚ್.ಡಿ.ನನ್ನೊಳಗೆ ಚೆಲ್ಲಿದ ಸಂತಸ ಅಂಥದು. ನನ್ನ ಬರಹ ನನ್ನಲ್ಲಿ ಇಂಥದೇ ಸಂತಸ ಮೂಡಿಸಿದ ಇನ್ನೊಂದು ಪ್ರಸಂಗದ ಬಗ್ಗೆ ಹೇಳಬೇಕು. ತನುಜಾ ಎಂಬ ಶಿಕಾರಿಪುರದ ಹುಡುಗಿಗೆ ನೀಟ್ ಪರೀಕ್ಷೆ ಬರೆಯಲು ನೆರವಾದ ಪ್ರಹಸನವನ್ನು ಇಟ್ಟುಕೊಂಡು ‘ಕೊನೆಗೂ ತನುಜಾ ಪರೀಕ್ಷೆ ಬರೆದಳು, ನಾನು ಧನ್ಯನಾದೆ!’ ಎಂಬ ಶೀರ್ಷಿಕೆಯಲ್ಲಿ ಒಂದು ಅಂಕಣ ಬರೆದಿದ್ದೆ.

ಅದನ್ನು ಓದಿದ ರಾಜ್ಯಪ್ರಶಸ್ತಿ ಪುರಸ್ಕೃತ ಸಿನಿಮಾ ನಿರ್ದೇಶಕ ಹರೀಶ ಎಂ.ಡಿ.ಹಳ್ಳಿ ಎಂಬುವವರು ಈ ಅಂಕಣವನ್ನು ಆಧರಿಸಿ ಒಂದು ಸಿನಿಮಾ ಮಾಡುತ್ತೇನೆ ಎಂದು ಮುಂದೆ ಬಂದರು. ನಾನು ಅವರನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಒಂದು ಅಂಕಣ ಹೇಗೆ ಸಿನಿಮಾ ಆಗಬಹುದು, ಅಂಥ ದುಸ್ಸಾಹಸಕ್ಕೆ ಹೋಗಬೇಡಿ ಎಂದು ಅವರ ಉತ್ಸಾಹಕ್ಕೆ ತಣ್ಣೀರು ಎರಚಿದೆ. ಆದರೆ ಹರೀಶ್ ಕೇಳಲಿಲ್ಲ. ಐದಾರು ಸಲ ನಮ್ಮ ಮನೆಗೆ ಬಂದರೂ, ಅವರಿಗೆ ಏನೋ ಹೇಳಿ ಸಾಗ ಹಾಕಲು ಪ್ರಯತ್ನಿಸಿ ದೆ. ಆದರೆ ಹರೀಶ್ ಜಗ್ಗಲಿಲ್ಲ. ನನ್ನ ಮನವೊಲಿಸಲು ಯಶಸ್ವಿಯಾದರು. ಒಂದು ಅಂಕಣ ಸಿನಿಮಾ ಆಗಲು ಸಾಧ್ಯ ಎಂಬ ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ.

ಅದಾಗಿ ಒಂದು ತಿಂಗಳ ಬಳಿಕ ಹರೀಶ್, ನನ್ನ ಮುಂದೆ ಚಿತ್ರಕಥೆಯನ್ನು ಹೇಳಿದರು. ತಮ್ಮ ಮಾತಿನಲ್ಲಿ ಸಿನಿಮಾವನ್ನು ನನ್ನ ಮುಂದೆ ತೋರಿಸಿ ದರು. ಆಗಲೂ ನನಗೆ ನೂರಕ್ಕೆ ನೂರರಷ್ಟು ಭರವಸೆ ಮೂಡಲಿಲ್ಲ. ನಂತರ ಹರೀಶ್ ಬಹಳ ಪ್ರಯಾಸಪಟ್ಟು ಹಣ ಹೂಡುವ ನಿರ್ಮಾಪಕರನ್ನು ಹಿಡಿದರು. ಆಗಲೂ ನನ್ನ ಮನಸ್ಸಿನಲ್ಲಿ ನೂರೆಂಟು ಪ್ರಶ್ನೆಗಳು. ನಾನು ಅವರ ಪ್ರಯತ್ನವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಒಂದು ದಿನ ಹರೀಶ್, ‘ಈ ಸಿನಿಮಾದಲ್ಲಿ ನಿಮ್ಮದೊಂದು ಕ್ಯಾರೆಕ್ಟರ್ ಇದೆ. ನೀವು ವಿಶ್ವೇಶ್ವರ ಭಟ್ ಆಗಿ ನಟಿಸಬೇಕು’ ಎಂದರು.

ಅದಕ್ಕೆ ನಾನು ‘ಸಾಧ್ಯಾನೇ ಇಲ್ಲ. ನನಗೆ ಸಿನಿಮಾದಲ್ಲಿ ನಟಿಸುವ ಕ್ರೇಜ್ ಸಹ ಇಲ್ಲ. ಇಪ್ಪತ್ತು ವರ್ಷಗಳ ಹಿಂದೆ ಅಂಥ ಆಫರ್ ಬಂದಾಗಲೂ ನಾನು ಪುಳಕಿತನಾದವನಲ್ಲ. ಡಾ. ಎಸ್.ಎಲ.ಎನ್.ಸ್ವಾಮಿ ನಿರ್ದೇಶನದ ‘ನಿರಂತರ’ ಮತ್ತು ಅಭಿರಾಮ್ ನಿರ್ದೇಶನದ ‘ಸಂಯುಕ್ತ- ೨’ ಸಿನಿಮಾದಲ್ಲಿ
ನಟಿಸಿದ್ದೆ. ಆದರೂ ನನಗೆ ಬಣ್ಣದ ಲೋಕ ಆಕರ್ಷಿಸಲಿಲ್ಲ.’ ನನಗೆ ನಟನೆ ಗೊತ್ತಿಲ್ಲ. ಅದು ಈ ಜನ್ಮದಲ್ಲಿ ಕೈಹಿಡಿ ಯುವುದೂ ಇಲ್ಲ. ನಾನು ವಿಶ್ವೇಶ್ವರ ಭಟ್ ಆಗಿ ಇರುತ್ತೇನೆ. ಆದರೆ ಅವರಂತೆ ನಟಿಸುವುದು ಅಸಾಧ್ಯ.

ಚಾರ್ಲಿ ಚಾಪ್ಲಿನ್ ಸಿನಿಮಾ ಪರದೆ ಮೇಲೆ ಅದ್ಭುತ ನಟ. ಎಂಥಾ ಪಾತ್ರಕ್ಕೂ ಸೈ. ಆದರೆ ಚಾಪ್ಲಿನ್ ಥರ ನಟಿಸಿ ಅಂದ್ರೆ ಅದು ಅವನಿಗೂ
ಸಾಧ್ಯವಾಗದ ಮಾತು. ನಾನು ನಾನಾಗಿರುತ್ತೇನೆ, ಆದರೆ ನಟಿಸುವುದಿಲ್ಲ. ಆಗಬಹುದೇ?’ ಎಂದೆ. ಅದಕ್ಕೆ ಹರೀಶ್ ಒಪ್ಪಿದರು. ನಾನು ಹೇಗಿದ್ದೇನೋ ಹಾಗೆ ಆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದೇನೆ. ಕಾದಂಬರಿ ಆಧರಿಸಿ ಸಿನಿಮಾ ಮಾಡುವುದು ಗೊತ್ತು. ಅದು ಚಾಲ್ತಿಯಲ್ಲಿರುವ ಸಂಪ್ರದಾಯ. ಆದರೆ ೮೦೦-೯೦೦ ಪದಗಳುಳ್ಳ ಪತ್ರಿಕಾಅಂಕಣ ಸಿನಿಮಾ ಆಗಲು ಹೇಗೆ ಸಾಧ್ಯ? ಹರೀಶ್ ನನ್ನ ಒಂದು ಅಂಕಣವನ್ನೇ ಒಂದು ಸಿನಿಮಾ ಮಾಡಿ
ನನಗೆ ತೋರಿಸಿದಾಗ ಆಶ್ಚರ್ಯವಾಯಿತು. ನನ್ನನ್ನು ದೊಡ್ಡ ಪರದೆ ಮೇಲೆ ನೋಡಿ ನನಗೇ ಸಣ್ಣ ದಿಗಿಲು, ಸಣ್ಣ ಪುಳಕ!

ತೀರಾ ಕೆಟ್ಟದಾಗಿ ನಟಿಸಿಲ್ಲ ಅನಿಸಿತು. (ಅಷ್ಟಕ್ಕೂ ನಾನು ನಟಿಸಿಯೇ ಇಲ್ಲವಲ್ಲ?) ಹರೀಶ್‌ಗೆ ಇನ್ನಷ್ಟು ಸಹಕರಿಸಬೇಕಿತ್ತು ಎನಿಸಿತು. ಒಂದು ನೈಜ, ಪುಟ್ಟ ಘಟನೆಯನ್ನು ಇಟ್ಟುಕೊಂಡು ಹರೀಶ್ ಚೆಂದವಾದ, ಶುದ್ಧವಾದ, ಸದಭಿರುಚಿಯ ಸಿನಿಮಾ ತೆಗೆದಿದ್ದಾರೆ. ಹಾಡು, ಡ್ಯಾ, ಡಬಲ್ ಮೀನಿಂಗ್
ಡೈಲಾಗ್, ಮರ ಸುತ್ತಾಟ, ಬೆಡ್ ರೂಮ್ ಸೀನ್, ಫಾರಿನ್ ಲೊಕೇಶನ್ .. ಯಾವವೂ ಇಲ್ಲ. ಇವೆಲ್ಲವುಗಳನ್ನು ಪಕ್ಕಕ್ಕಿಟ್ಟು ಒಂದು ಉತ್ತಮ ಸಿನಿಮಾ ಮಾಡಬಹುದು ಎಂಬುದನ್ನು ಹರೀಶ್ ಸಾಬೀತುಪಡಿಸಿದ್ದಾರೆ.

ಮನರಂಜನೆಯೊಂದೇ ಸಿನಿಮಾ ಅಲ್ಲ. ಅದನ್ನು ಮೀರಿದ ಜೀವನಪ್ರೀತಿ, ಜೀವನ ಸಂದೇಶ ಈ ಚಿತ್ರದಲ್ಲಿದೆ. ಬದುಕಿಗೆ ಬೇಕಾದ ಸ್ಫೂರ್ತಿ, ಪ್ರೇರಣೆ ಇದೆ. ನಾಳೆ ‘ತನುಜಾ’ ಚಿತ್ರ ತೆರೆ ಕಾಣಲಿದೆ. ಸಾಧ್ಯವಾದರೆ ನೋಡಿ. ಹರೀಶ್ ಮತ್ತು ಅವರ ತಂಡವನ್ನು ಪ್ರೋತ್ಸಾಹಿಸಿದಂತೆ. ಆ ಹುಡುಗರು ಮತ್ತೊಂದು ಸಾಹಸಕ್ಕೆ ಕೈ ಹಾಕಬಹುದು