Saturday, 14th December 2024

ನಿರ್ಧಾರ ತರ್ಕಬದ್ಧವಾಗಿರಲಿ

ಪ್ರತಿಸ್ಪಂದನ

ಪ್ರಕಾಶ ಹೆಗಡೆ

‘ನೂರೆಂಟು ವಿಶ್ವ’ ಅಂಕಣವು (ವಿಶ್ವವಾಣಿ ಏ.೪), ಮರ್ಜಿಗೆ ಬೀಳದ ನಾಯಕರ ದಿಟ್ಟ ನಿರ್ಧಾರಗಳು ಹೇಗೆ ಸಕಾರಾತ್ಮಕ ಪರಿಣಾಮಗಳನ್ನು ಹುಟ್ಟುಹಾಕುತ್ತವೆ ಎಂಬುದನ್ನು ಉದಾಹರಣೆಯ ಸಮೇತ ಬಿಡಿಸಿಟ್ಟಿದೆ.

ನಿಜ, ಇಂದಿರಾ ಗಾಂಧಿಯವರು ಕೆಲವು ದಿಟ್ಟ, ವಿವಾದಾತ್ಮಕ ನಿರ್ಧಾರಗಳನ್ನು ತೆಗೆದುಕೊಂಡರು. ಆದರೆ ಅವೆಲ್ಲವೂ ಹೊಮ್ಮಿದ್ದು ಅವರು ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗ ಮತ್ತು ಸಂಸತ್ತಿನಲ್ಲಿ ಭಾರಿ ಬಹುಮತವಿದ್ದಾಗ. ಹೀಗೆ ಅವರು
ಕೈಗೊಂಡ ನಿರ್ಧಾರಗಳು ‘ಜನಪ್ರಿಯ’ ವರಸೆಯೆಡೆಗೆ ವಾಲುವಂತಿದ್ದವು. ಇದಕ್ಕೆ ಹೋಲಿಸಿದರೆ, ಕಾಲಾನಂತರದಲ್ಲಿ ಬಂದ ಪ್ರಧಾನಿ ನರಸಿಂಹರಾಯರು ಯಾವುದೇ ಸಾಮೂಹಿಕ ಬಲದ ನೆಲಗಟ್ಟು ಅಥವಾ ಜನಪ್ರಿಯತೆಯನ್ನು ಹೊಂದಿರಲಿಲ್ಲ.

ಮೇಲಾಗಿ ಕೇಂದ್ರದಲ್ಲಿ ಅಲ್ಪಮತದ ಸರಕಾರವನ್ನು ಮುನ್ನಡೆಸುತ್ತಿದ್ದಾಗ ಅವರು, ಜನಪ್ರಿಯವಲ್ಲದ ಮತ್ತು ಸಹಜ ಪ್ರವೃತ್ತಿಗೆ ವಿರುದ್ಧವಾದ, ಭಾರತೀಯ ಆರ್ಥಿಕತೆಯನ್ನು ಮುಕ್ತಗೊಳಿಸುವ, ಖಾಸಗೀಕರಣ-ಉದಾರೀಕರಣ-ಜಾಗತೀಕರಣ ನೀತಿಯನ್ನು ಪರಿಚಯಿಸುವ ದೃಢನಿರ್ಧಾರವನ್ನು ಕೈಗೊಂಡರು. ಆರ್ಥಿಕತೆಯ ಬೆಳವಣಿಗೆಗೆ ಇಂಥ ನಿರ್ಧಾರವನ್ನು ಸ್ವತಂತ್ರ ಭಾರತದಲ್ಲಿ ಅದುವರೆಗೆ ಯಾವ ಮುಖಂಡರೂ ತೆಗೆದುಕೊಂಡಿರಲಿಲ್ಲ.

ಇದು ದೇಶದ ಇತಿಹಾಸದಲ್ಲಿ ದೊಡ್ಡ ತಿರುವು ಎಂದು ಸಾಬೀತಾಯಿತು ಮತ್ತು ಇಡೀ ಪೀಳಿಗೆಯ ಜೀವನವನ್ನು ಪರಿವರ್ತಿಸಿತು.
ನಿರ್ಧಾರಗಳನ್ನು ಕೈಗೊಳ್ಳುವ ಬಗೆಗಿನ ಈ ಚರ್ಚೆಗೆ ಪೂರಕವೆಂಬಂತೆ, ಡೇನಿಯಲ್ ಕಾನ್ನೆಮನ್ ಅವರ ‘ಪ್ರಾಸ್ಪೆಕ್ಟ್ ಥಿಯರಿ’ಯ ಉಲ್ಲೇಖ ಇಲ್ಲಿ ಸೂಕ್ತವೆನಿಸುತ್ತದೆ. ನೊಬೆಲ್ ಪ್ರಶಸ್ತಿ ವಿಜೇತ ಕಾನ್ನೆಮನ್ ಅವರು ಮೊನ್ನೆ ಮಾರ್ಚ್ ೨೭ರಂದು ನಿಧನರಾದರು. ‘ಥಿಂಕಿಂಗ್, ಫಾಸ್ಟ್ ಆಂಡ್ ಸ್ಲೋ’ ಎಂಬ ಅವರ ಕೃತಿಯನ್ನು, ಅವರು ಇದುವರೆಗೆ ಬರೆದ ಪುಸ್ತಕಗಳ ಪೈಕಿ ಅತ್ಯುತ್ತಮವಾದುದು ಎಂದು ಜನರು ಸಾಮಾಜಿಕ ಮಾಧ್ಯಮಗಳಲ್ಲಿ ನೆನಪಿಸಿಕೊಂಡಿದ್ದಾರೆ.

ಅರ್ಥಶಾಸದ ತರಗತಿಯಲ್ಲಿ ನಾವು ಕಲಿತ ಹೆಚ್ಚಿನ ಶ್ರೇಷ್ಠ ಸಿದ್ಧಾಂತಗಳು ಅಥವಾ ಮಾದರಿಗಳಲ್ಲಿ ಹುದುಗಿರುವ ಮೊದಲ
ಎಣಿಕೆ ಎಂದರೆ, ‘ಮಾನವರು ತರ್ಕಬದ್ಧವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ’ ಎಂಬುದು. ನಾವು ನಮ್ಮದೇ ಆದ
ವಿವೇಕಯುತ ಆಯ್ಕೆಗಳನ್ನು ಮಾಡುತ್ತೇವೆ ಎಂದು ಈ ಎಣಿಕೆ ಹೇಳುತ್ತದೆ. ಇದಕ್ಕೆ ತದ್ವಿರುದ್ಧವಾಗಿ ಕಾನ್ನೆಮನ್ ಸಿದ್ಧಾಂತವು, ‘ಮಾನವರು ಬಹುಶಃ ಎರಡು ವ್ಯವಸ್ಥೆಗಳನ್ನು ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ’ ಎಂಬ ಹೊಸ ನೀತಿಯನ್ನು
ಸ್ಥಾಪಿಸಿತು. ಅವುಗಳ ಪೈಕಿ ಒಂದು ಅಂತಃಪ್ರಜ್ಞೆಯ ಆಧಾರದ ಮೇಲೆ, ಮತ್ತೊಂದು ತಾರ್ಕಿಕ ಸಂಯಮದಿಂದ ಹೊಮ್ಮುತ್ತದೆ.

ತರ್ಕಬದ್ಧ ನಿರ್ಧಾರದಿಂದ ಸಂಭವಿಸುವ ಲಾಭವು, ಸಂಭವನೀಯ ಅನಿಶ್ಚಿತತೆಯ ಕನಿಷ್ಠ ಎರಡು ಪಟ್ಟು ಇಲ್ಲದಿದ್ದರೆ, ಜನರು ಅಂಥ ನಿರ್ಧಾರವನ್ನು ತಿರಸ್ಕರಿಸುತ್ತಾರೆ. ಜನನಾಯಕರು ತರ್ಕಬದ್ಧವಾಗಿ ಆಲೋಚಿಸಿ ನಿರ್ಧಾರಗಳನ್ನು ತೆಗೆದುಕೊಂಡರೆ, ಜನರಿಗೆ ಮುಂದಿನ ದಿನಗಳಲ್ಲಿ ಎರಡು ಪಟ್ಟು ಹೆಚ್ಚು ಉಪಯುಕ್ತವಾಗುವ ಲಾಭ ತಲುಪಬಹುದೆಂಬ ನಿರೀಕ್ಷೆಗಳು ದೃಢ ವಾಗಿರುತ್ತದೆ. ಉತ್ತಮ ಜನನಾಯಕರು ಎಂದೂ ಅಂತಃಪ್ರಜ್ಞೆಯ ಆಧಾರದ ಮೇಲೆ ನಿರ್ಧಾರವನ್ನು ಮಾಡುವುದಿಲ್ಲ; ತರ್ಕಬದ್ಧ ನಿರ್ಧಾರಗಳೇ ಜನನಾಯಕರನ್ನು ‘ಜನರ ಒಳಿತಿಗಾಗಿ ದುಡಿದವರು’ ಎಂಬುದಾಗಿ ಇತಿಹಾಸದ ಪುಟಗಳಲ್ಲಿ ಗುರುತಿಸುವಂತೆ
ಮಾಡುತ್ತವೆ.

(ಲೇಖಕರು ಹವ್ಯಾಸಿ ಬರಹಗಾರರು)