Friday, 13th December 2024

ಜನಸಾಮಾನ್ಯನ ಚಿತ್ತ ಕಾಸಿನತ್ತ, ಜನನಾಯಕರ ಚಿತ್ರ ಕುರ್ಚಿಯತ್ತ

ಅಭಿವ್ಯಕ್ತಿ

ಸೌಮ್ಯ ಗಾಯತ್ರಿ

somsintouch@gmail.com

ಕರ್ನಾಟಕದ ರಾಜಕಾರಣ ಗೊಂದಲಗಳ ಗೂಡಾಗಿದೆ ಎಂಬುದು ಬಹಳ ಜನಜನಿತವಾಗುತ್ತಿರುವುದರಲ್ಲಿ ಸಂದೇಹವೇ ಇಲ್ಲ. ರಾಜಕಾರಣ ಎಂದರೆ ಏನಾದರೂ ಸುದ್ದಿ ಸಮಾಚಾರಗಳು, ನಿರಂತರ ನಿಲ್ಲದ ಚಟುವಟಿಕೆಗಳು ಇರಲೇಬೇಕು.

ಇಲ್ಲದಿದ್ದರೆ ಅದರ ಮಜವೇ ಬೇರೆ ಎನ್ನುವುದು ಒಂದೆಡೆ ಖರೆ. ಆದರೆ ಸ್ವಾರ್ಥ ಕೃತ್ಯಗಳು, ಹೊಲಸು ಚಟುವಟಿಕೆಗಳು, ಜನಪರ – ಜನಸ್ನೇಹಿ ಅಲ್ಲದ ಕುಹಕಗಳು ಮತ್ತು ನಡತೆಗಳು, ಜನಪ್ರತಿನಿಧಿಗಳು ಎಂಬುದನ್ನೇ ಮರೆತು ತಮ್ಮ ಕುರ್ಚಿಗೆ ಜೋತು ಬಿದ್ದು ಸಾಧ್ಯವಾ ದಷ್ಟೂ, ಸಿಕ್ಕ ಅಲ್ಪಾವಕಾಶದಲ್ಲಿ ಲೂಟಿ ಮಾಡಿ ನಮ್ಮ ನಮ್ಮ ಪ್ರೀತಿಪಾತ್ರರ ಭವಿಷ್ಯ ಚೆನ್ನಾಗಿ ರೂಪಿಸಿಕೊಳ್ಳೋಣ ಎಂಬ ಮನೋಭಾವ ಕಿಂಚಿತ್ತೂ ಸಲ್ಲದು. ಅಲ್ಲವೇ? ನೀವೂ ಇದನ್ನು ಒಪ್ಪುತ್ತೀರೆಂದು ಭಾವಿಸುತ್ತೇನೆ. ಸಮಯ ಚಕ್ರದಲ್ಲಿ ಸ್ವಲ್ಪ ಹಿಂದೆ ಇಣುಕಿದಾಗ ಯಾರೂ ಕಂಡು ಕೇಳರಿಯದ ಕರೋನಾ ಎಂಬ ಸಾಂಕ್ರಾಮಿಕ ಇಡೀ ಜಗತ್ತನ್ನೇ ತನ್ನ ತಾಳಕ್ಕೆ ಕುಣಿಸ ತೊಡಗಿದ ಕರಾಳ ವರ್ಷ 2020 ಎಂದರೆ ತಪ್ಪಾಗಲಾರದು. ಈ ಶತಮಾನದ ಸಾಂಕ್ರಾಮಿಕವು ಒಂದೆಡೆ ಜನಸಾಮಾನ್ಯನ ಬದುಕನ್ನು ನರಕ ಸದೃಶ ಮಾಡಿದರೆ ಮತ್ತೊಂದೆಡೆ ಅವ್ಯವಹಾರಗಳ ಅನೇಕ ಘಟನೆಗಳು ಜನಜೀವನವನ್ನು ಮತ್ತಷ್ಟು ಅಸ್ತವ್ಯಸ್ತಗೊಳಿಸಿತು.

ಈ ಕರಾಳ ಸಮಯದ ದುರುಪಯೋಗದ ಫಲಾನುಭವಿಗಳಾಗಿ ಇನ್ನೂ ದುಸ್ತರಗೊಂಡ ಜೀವನ ಜೀವಿಸುತ್ತಿರುವವರ ಹೃದಯ ಕಲಕುವ ಘಟನೆಗಳನ್ನು ಕೇಳಿದರೆ ಹೃದಯ ಕಿತ್ತು ಬರುತ್ತದೆ. ಈ ಪಿಡುಗು ನಮ್ಮ ಅನೇಕರ ಜೀವನದಲ್ಲಿ ಮರೆಯಲಾಗದ ಪ್ರೀತಿ ಪಾತ್ರರ ಅಗಲಿಕೆಗಳು, ಕಹಿ ನೆನಪುಗಳು, ಪ್ರೀತಿಪಾತ್ರರನ್ನು ಉಳಿಸಿಕೊಳ್ಳಲು ಪಟ್ಟ ಹರ ಸಾಹಸಗಳು, ಛಿದ್ರಗೊಂಡ ಸಂಸಾರ, ಹಣದ ಅಭಾವ, ಹೊತ್ತು ಊಟಕ್ಕೂ ಪರದಾಟ, ಹೀಗೆ ಅನೇಕ ದುರ್ಘಟನೆಗಳ ಹೊರೆಯ ಕಂತೆ  ಕಂತೆಯನ್ನು ನಮ್ಮ ಮಡಿಲಿಗೆಸೆದಿದೆ.

ಈ ರೀತಿಯ ಊಹಿಸಲೂ ಅಸಾಧ್ಯವಾದ ಅವ್ಯವಸ್ಥಿತಗೊಂಡಿರುವ ಜನರ ಸ್ಥಿತಿಗಳನ್ನು ಕಂಡು ಕೇಳಿದ ಮೇಲೆ ಮಾನವೀಯತೆ ಎಂಬುದು ನಿಜವಾಗಿಯೂ ಜೀವಂತವಾಗಿದೆಯೇ ಎಂಬುದು ಮೂಲ ಪ್ರಶ್ನೆಯಾಗಿ ಉದ್ಭವಿಸುತ್ತದೆ. ನಮ್ಮ ಕೂಗಿಗೆ ಸ್ಪಂದಿಸುವ ಕಿವಿಗಳಿಲ್ಲವೇ? ನಮ್ಮ ಮತಗಳಿಗೆ ಬೆಲೆಯೇ ಇಲ್ಲವೇ? ನಾವು ಪಾವತಿಸುವ ತೆರಿಗೆಯ ಹಣಕ್ಕೆ ನಮಗೆ ದೊರೆತ, ದೊರೆಯುವ ಪ್ರತಿಫಲವಾದರೂ ಏನು? ಅಥವಾ ಈ ಮೂಲ ಹಕ್ಕುಗಳನ್ನು ಪ್ರಶ್ನಿಸುವ ಅಧಿಕಾರ ಕಳೆದುಕೊಂಡಿದ್ದೇವೆ ಯೇ? ಇವೆ ಹೃದಯಾಂತರಾಳದ ಕ್ಷೀಣ ಕೂಗು.

ಕರೋನಾ ಸಮಯದ ಕೆಲ ವಿಷಯಗಳನ್ನು ನೋಡಿದಲ್ಲಿ ಅದು ಸೃಷ್ಟಿಸಿದ ಅವಾಂತರ ಅಬ್ಬಬ್ಬಾ ಒಂದೇ ಎರಡೇ. ರಸ್ತೆ ಬದಿಯ ವ್ಯಾಪಾರಿ ಗಳು, ಸಣ್ಣ ಪುಟ್ಟ ಅಂಗಡಿಗಳನ್ನಿಟ್ಟವರು, ಚಿಕ್ಕ ಪುಟ್ಟ ದರ್ಶಿನಿಗಳು, ಹೂ ಹಣ್ಣು ಮಾರಾಟಗಾರರು, ಆಟೋ ಟ್ಯಾಕ್ಸಿ ಚಾಲಕರು, ದಿನ ಗೂಲಿಯ ಮೇಲೆ ಜೀವನ ನಿರ್ಭರವಾಗಿರು ವವರು ಹೀಗೆ ಬಡತನದಲ್ಲಿರುವವರ ದುರ್ಗತಿ ಕೇಳಲು ದುಃಖಕರ. ಈ ಕರೋನಾ ಇವರೆಲ್ಲರ ಜೀವನದಲ್ಲಿ ಹೀಗೆಲ್ಲ ಅವಾಂತರ ಮಾಡುತ್ತದೆಯೆಂದು ಯಾರಾದರೂ, ಎಂದಾದರೂ ಚಿಂತನೆ ಕೂಡ ಮಾಡಿರಲಿಕ್ಕಿಲ್ಲ.

ಆದರೆ ಪ್ರಶ್ನೆ ಇಲ್ಲಿ ಇಂಥ ದಿನೇ ದಿನೇ ಜರ್ಜರಿತವಾಗುತ್ತ, ದುಸ್ತರವಾಗುತ್ತ ಇದ್ದ ಸಾಮಾನ್ಯರ ಜನಜೀವನಕ್ಕೆ ಎಂಥ ಬೆಂಬಲ ದೊರೆಯಿತು ನಮ್ಮ ಜನನಾಯಕರುಗಳಿಂದ? ಅದಮ್ಯ ಚೇತನ ಅಥವಾ ಇನೋಸಿಸ್ ಫೌಂಡೇಶನ್ ನಂಥ ೩-೪ ಸರಕಾರೇತರ ಸಂಘ ಸಂಸ್ಥೆಗಳು ಸಾಮಾಜಿಕ ಕಾಳಜಿಯಿಂದ ತುಂಬಿದವರಾಗಿ ಉಚಿತ ರೇಷನ್, ತರಕಾರಿಗಳು, ದಿನನಿತ್ಯದ ಊಟದ ವ್ಯವಸ್ಥೆ ಮಾಡಿ, ನಿರಂತರವಾಗಿ ಯಾವ ಪ್ರಚಾರವಿಲ್ಲದೆ, ಪೋಸ್ಟರ್‌ಗಳು, ಬ್ಯಾನರ್‌ ಗಳಿಲ್ಲದೆ ಬಡ ಜನರ ಜೀವನಕ್ಕೆ ಸ್ವಲ್ಪ ತಂಪನ್ನೆರೆಯುವ ಕಾರ್ಯಗಳು ನಡೆಯುತ್ತಾ ಬಂದವೇ ಹೊರತು ಸಾಮಾಜಿಕ ಜಾಲತಾಣಗಳಲ್ಲಿ ತೋರ್ಪಡಿಕೆ
ಗಾಗಿ ಇಲ್ಲವೇ ಆಡಳಿತ – ವಿರೋಧ ಪಕ್ಷದವರ ಗುದ್ದಾಗುದ್ದಿ, ಆರೋಪ – ವಿರೋಪ, ವಾಕ್ಸಮರದ ನಡುವೆ ದೊಡ್ಡ ದೊಡ್ಡ ಬ್ಯಾನರ್‌ಗಳ ಅಡಿಯಲ್ಲಿ ಅಲ್ಲಿ ಇಲ್ಲಿ ಕೆಲವೊಂದೆಡೆಗಳಲ್ಲಿ ಆಹಾರದ ಕಿಟ್‌ಗಳು ವಿತರಿತವಾದದ್ದು ಎಲ್ಲರಿಗೂ ತಿಳಿದ ಹಾಸ್ಯಾಸ್ಪದ ವಿಷಯವೇ ಸರಿ.

ಒಬ್ಬ ಪ್ರಾಮಾಣಿಕ ತೆರಿಗೆ ಪಾವತಿ ಮಾಡುವ ಜವಾಬ್ದಾರಿಯುತ ಪ್ರಜೆಯಾಗಿ ನಮ್ಮ ತೆರಿಗೆಗೆ ಸೂಕ್ತ ಕಾರ್ಯಗಳ, ಪ್ರತಿಫಲಗಳ ರಸೀದಿ ಕೇಳಿದರೆ ಅದು ತಪ್ಪೇ? ಇಲ್ಲವೇ ಕೇಳುವ ಅಧಿಕಾರ ನಮಗಿಲ್ಲವೇ? ಸುಭದ್ರ, ಸುಂದರ, ಸುರಕ್ಷಾ ಸಮಾಜವನ್ನು ಸೃಷ್ಟಿಸಿ, ಪೋಷಿಸಿ ಬೆಳೆಸುವುದರಲ್ಲಿ ನಮ್ಮ ಹಣ ಯಾವ ರೀತಿ ಸದು ಪಯೋಗಗೊಳ್ಳುತ್ತಿದೆ ಎಂಬುದರ ವಿಷಯಗಳನ್ನು ತಿಳಿಯುವ ಮೂಲಭೂತ ಹಕ್ಕು ನಮಗಿದೆ. ಈ ಸಮಯದಲ್ಲಿ ನಮ್ಮ ಜನಪ್ರತಿನಿಧಿಗಳು ಕುರ್ಚಿಯ ಸುತ್ತ
ಮ್ಯೂಸಿಕಲ್ ಚೇರ್ ಆಟ ಆಡುತ್ತಿರುವುದು ವಿಪರ್ಯಾಸ.

ಕರ್ನಾಟಕದ ರಾಜಕಾರಣ ಮೊದಲಿನಿಂದಲೂ ಏನಾದರೊಂದು ಸುದ್ದಿಯಲ್ಲಿರುತ್ತದೆ. ರಾಜಕೀಯ ಇತಿಹಾಸದ ಮೊಟ್ಟಮೊದಲ ಬಾರಿಗೆ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರವೇ ಆಡಳಿತದ ಚುಕ್ಕಾಣಿ ಹಿಡಿದಿದ್ದರೂ ಆಂತರಿಕ ಕಲಹ, ಗುದ್ದಾಟ, ಅಧಿಕಾರದ ದಾಹ – ಮೋಹ ಭೂಮಿಯೊಳಗಿನ ಲಾವಾದಂತೆ ನಾಯಕರು ಗಳ ಮನದಲ್ಲಿ ಕುದಿಯುತ್ತಲೇ ಇದೆ, ಎಂದು ಈ ಲಾವಾ ಸ್ಫೋಟವೋ ಗೊತ್ತಿಲ್ಲ. 1979ರಿಂದ ಇಂದಿನವರೆಗೂ ರಾಜಕೀಯ ಅನಿಶ್ಚತತೆ ಕರ್ನಾಟಕದ ಒಂದು ಪಿಡುಗು. ದೇವರಾಜ ಅರಸ್ ಅವರನ್ನು ಹೊರತು ಪಡಿಸಿ ಬೇರೆ ಯಾರೂ ವರ್ಷಗಳ ತಮ್ಮ ಅವಧಿ ಮುಗಿಸಿ ಮತ್ತೆ ಮುಖ್ಯಮಂತ್ರಿಯಾಗಿ ಚುನಾಯಿತರಾಗಿಲ್ಲ.

1983ರಲ್ಲಿ ರಾಮಕೃಷ್ಣ ಹೆಗಡೆಯವರು ಅಽಕಾರಕ್ಕೆ ಬಂದಾಗಲೂ ಏನಾದರೊಂದು ಆರೋಪ ಮತ್ತು ರಾಜಕೀಯ ಕುತಂತ್ರಗಳಿಗೆ ಬಲಿಯಾಗಿ ರಾಜೀನಾಮೆ ನೀಡಿ ಮತ್ತೆ ಮುಖ್ಯಮಂತ್ರಿಯಾಗಿ ಮುಂದುವರಿದರು. 1988ರಲ್ಲಿ ಪ್ರಾರಂಭವಾದ ರೆಸಾರ್ಟ್ ರಾಜಕಾರಣ ಈಗಂತೂ ನಮ್ಮ ರಾಜಕಾರಣಿಗಳಿಗೆ ಪಿಕ್ನಿಕ್ ಹೋಗಿ ಬಂದಂತೆ ಆಗಿಬಿಟ್ಟಿದೆ. 1988ರಲ್ಲಿ ನೆರೆ ರಾಜ್ಯವಾದ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್.ಟಿ. ರಾಮರಾವ್ ಅವರ ಕೋರಿಕೆಯ ಮೇರೆಗೆ ಕರ್ನಾಟಕದ ಮುಖ್ಯಮಂತ್ರಿಯಾದ ಹೆಗಡೆರವರು ಟಿಡಿಪಿ ಶಾಸಕರುಗಳನ್ನು ಮೈಸೂರು ಮತ್ತು ಬೆಂಗಳೂರಿನ ಬೇರೆ ಬೇರೆ ರೆಸಾರ್ಟ್‌ಗಳಲ್ಲಿ ಅಡಕವಾಗಿಸಿ ಎನ್.ಟಿ. ರಾಮರಾವ್ ಅವರು ಸಂಸತ್ ಮನೆಯ ವಿಶ್ವಾಸ ಮತ ಗೆದ್ದ ನಂತರ ಅವರನ್ನು ಆಂಧ್ರಕ್ಕೆ ಕಳಿಸಲಾಯಿತು. ಹೀಗೆ ಪ್ರಾರಂಭವಾಯಿತು ರೆಸಾರ್ಟ್
ರಾಜಕಾರಣ ಎಂಬ ನಮ್ಮ ಶಾಸಕರುಗಳ ಮೋಜು ಮಸ್ತಿಯ ಪ್ರವಾಸ, ರೆಸಾರ್ಟ್ ಪರ್ಯಟನೆ ಅಭಿಯಾನ.

ವಿಧಾನ ಸೌಧದಲ್ಲಿ ದಾಂಧಲೆಗಳಾಗಿ ನಮ್ಮ ಜನನಾಯಕರು ಗೂಂಡಾಗಿರಿ ಮಾಡಿದ್ದಂತೂ ಎಲ್ಲೂ ಸದ್ದು ಮಾಡಿತ್ತು. ಹೆಗಡೆರವರ ಮೇಲೆ ಚಪ್ಪಲಿ ಪ್ರಹಾರ ಮಾಡಿದ್ದಂತೂ ಬಹಳ ನಾಚಿಕೆಗೇಡಿನ ವಿಷಯ. 2004ರ ಚುನಾವಣೆಯಲ್ಲಿ ಕಾಂಗ್ರೆಸ್ ಜನತಾ ದಳ ಒಟ್ಟಿಗೆ ಸೇರಿ ಸಮ್ಮಿಶ್ರ ಸರಕಾರ ರಚಿಸಿದವು. ಜನತಾ
ದಳದಲ್ಲಿ ಒಳಗೊಳಗೇ ಕುದಿಯುತ್ತಿದ್ದ ಅಽಕಾರ ದಾಹ 19 ತಿಂಗಳುಗಳ ಗೋವಾ ರೆಸಾರ್ಟ್ ರಾಜಕಾರಣಕ್ಕೆ ದಾರಿ ಮಾಡಿಕೊಟ್ಟಿತು. ಸರಕಾರ ಪತನವಾ ಯಿತು. ನಂತರ ಹೊಸ ತಿರುವು ಪಡೆದ ರಾಜಕಾರಣದಲ್ಲಿ ಬಿಜೆಪಿ – ದಳದ ನಡುವೆ ಅಧಿಕಾರ ಹಂಚಿಕೆಯ ಒಪ್ಪಂದ. 20:20 ಮ್ಯಾಚ್‌ನಂತೆ ಮುಖ್ಯಮಂತ್ರಿ ಸ್ಥಾನ ಹಂಚಿಕೆ ಈ ಒಪ್ಪಂದದ ಆಕರ್ಷಣೆ.

ಉಳಿದಿದ್ದ ಸುಮಾರು 40 ತಿಂಗಳುಗಳ ಅಧಿಕಾರವನ್ನು ಸಮನಾಗಿ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿರುವಂತೆ ತೀರ್ಮಾನಿಸ ಲಾಯಿತು. ಕುಮಾರ ಸ್ವಾಮಿಯವರು ಮೊದಲಿಗೆ ಪದವಿ ಅಲಂಕರಿಸಿದರು. ಆದರೆ ಅಧಿಕಾರ ಹಸ್ತಾಂತರದ ಸಮಯದಲ್ಲಿ ಫೆವಿಕಾಲ್‌ನ ಅಂಟು ಕುರ್ಚಿಯೊಂದಿಗೆ ಬಲವಾಗಿದ್ದದ್ದರಿಂದ ನಾ ಒ ಎಂದು ಬಿಟ್ಟರು. ಮತ್ತೆ ರಂಭ ರಾಜಕೀಯ ಅನಿಶ್ಚತತೆಯ ಇನ್ನೊಂದು ಅಧ್ಯಾಯ. ಹೀಗೆ ಮುಂದುವರಿದ ಈ ಮುಗಿಯದ ಘಟನಾ ವಳಿಗಳು ಮತ್ತೆ ಮುಂದೆ ನಡೆದ ಚುನಾವಣೆಗಳಲ್ಲೂ ಎಡಬಿಡಂಗಿ ಸ್ಥಿತಿಯತ್ತ ಬಂದು ನಿಂತವು. ಜನಾದೇಶ ಯಾರೆಡೆಗೂ ಬಹುಮತ ನೀಡಲಿಲ್ಲ. ಬಿಜೆಪಿ ಹೆಚ್ಚು ಸ್ಥಾನಗಳನ್ನು ಪಡೆದ ಪಕ್ಷವಾಗಿ ಹೊಮ್ಮಿದ್ದರಿಂದ ರಾಜ್ಯಪಾಲರು ಸರಕಾರ ರಚನೆಗೆಂದು ಯಡಿಯೂರಪ್ಪನವರಿಗೆ ಆಹ್ವಾನ ಕೊಟ್ಟದ್ದೇ ಬೇರೆ ಪಕ್ಷಗಳು ರಾತ್ರೋ ರಾತ್ರಿ ಯಡಿಯೂರಪ್ಪನವರ ಪದವಿ ಪ್ರಮಾಣ ವಚನದ ವಿರುದ್ಧ ತಡೆಯಾಜ್ಞೆ ತರಲು ಸರ್ವೋಚ್ಚ ನ್ಯಾಯಾಲಯದ ಮೊರೆ ಹೋದವು. ಮತ್ತೊಂದು ಐತಿಹಾಸಿಕ ಕ್ಷಣ 2018ರಲ್ಲಿ ತಡರಾತ್ರಿಯಲ್ಲಿ ಸರ್ವೋಚ್ಚ ನ್ಯಾಯಾಲಯ ತಡೆಯಾಜ್ಞೆ ಕೋರಿಕೆಗೆ ನಕಾರಿಸಿತು.

ಆದರೆ ಎರಡೇ ದಿನಗಳಲ್ಲಿ ವಿಧಾನಸಭೆ ವಿಶ್ವಾಸಮಂಡನೆ ಮಾಡಬೇಕೆಂದು ಆದೇಶಿಸಿತು. ಆದರೆ ಇದೆಲ್ಲ ವಿಚಿತ್ರ ತಿರುವು ಪಡೆದದ್ದು ಯಡಿಯೂರಪ್ಪನವರು ವಿಶ್ವಾಸ ಮಂಡನೆ ಮಾಡಲೊಪ್ಪದೆ ರಾಜೀನಾಮೆ ನೀಡಿದ್ದು. ನಂತರ ರಾಷ್ಟ್ರಪತಿ ಆಡಳಿತ, ನಾಯಕತ್ವ ಗೊಂದಲ, ಪಕ್ಷಗಳ ಮಿಲನ ಹೀಗೆ ಅನೇಕ ರೀತಿಯ ಅನೇಕ ನಾಟಕೀಯ ಬೆಳವಣಿಗೆಗಳು ನಡೆದವು. ಈಗಂತೂ ಯಡಿಯೂರಪ್ಪನವರನ್ನು ನಾಯಕತ್ವದಿಂದ ಇಳಿಸಬೇಕೆನ್ನುವ ಅನೇಕ ಶಕ್ತಿಗಳು ಒಂದೆಡೆ ಸಂಚು ರೂಪಿಸುತ್ತಿದೆ. ಮತ್ತೊಂದೆಡೆ ಹೈಕಮಾಂಡ್ ಸದ್ಯಕ್ಕೆ ಯಡಿಯೂರಪ್ಪನೇ ನಾಯಕ ಎಂಬ ಸಂದೇಶ ರವಾನಿಸಿದೆ.

ಒಂದೆಡೆ ಅಧಿಕಾರಾರೂಢ ಬಿಜೆಪಿಯ ಕಥೆಯಾದರೆ ಕಾಂಗ್ರೆಸ್‌ನದ್ದು ಮತ್ತೊಂದೆಡೆ. ಇನ್ನೂ ಚುನಾವಣೆಗೆ ವರ್ಷಗಳೇ ಇದೆಯಾದರೂ ಅವರ ಬನದಲ್ಲಿ ಮುಂದಿನ
ಮುಖ್ಯಮಂತ್ರಿ ನಾನು ನೀನು ಎನ್ನುವ ಪಿಸುಮಾತುಗಳು. ಸಿದ್ದರಾಮಯ್ಯ ಮತ್ತು ಡಿಕೆಶಿ ಬಳಗದಲ್ಲಿನ ಭಿನ್ನಾಭಿಪ್ರಾಯಗಳು, ಅಧಿಕಾರದ ಮೋಹದಿಂದ ಅನೇಕ ಹೆಸರುಗಳೇ ಕೇಳಿಲ್ಲದ ನಾಯಕರುಗಳು ನಾನೂ ಮುಖ್ಯಮಂತ್ರಿ ಪದವಿ ಆಕಾಂಕ್ಷಿ ಎಂದು ಹೇಳಿಕೆಗಳು ಹರಿಬಿಟ್ಟಿರುವುದು ನಿಜವಾಗಿಯೂ ಹಾಸ್ಯಾಸ್ಪದ.
ಅನೇಕ ಒಳ ಸಂಚುಗಳು ನಡೆಯುತ್ತಲೇ ಇವೆ. ಕರೋನಾ ಪಿಡುಗಿನ ಮೊದಲ ಅಲೆಯಲ್ಲಿ ಸುರಕ್ಷಿತವಾಗಿ ತೇಲಿ ಬಂದ ಮೇಲೆ ೨ನೆಯ ಅಲೆಯ ಮುನ್ಸೂಚನೆ ಇತ್ತಾದರೂ ಸರಕಾರ ಏನು ಪಾಠ ಕಲಿಯಿತು? ಎಂಥ ತಯಾರಿ ಮಾಡಿಕೊಂಡಿತು? ತಮ್ಮ ಹೊಣೆಯನ್ನು ಕಿಂಚಿತ್ತೂ ಸಮರ್ಪಕವಾಗಿ ನಿಭಾಯಿಸಲು
ಯಾವುದೇ ತಯಾರಿಕೆ ಮಾಡಿಕೊಳ್ಳಲೇ ಇಲ್ಲವಲ್ಲ ನಮ್ಮ ಜನನಾಯಕರು.

ಅವರಿಗೆ ಅವರ ಅಧಿಕಾರ, ಪದವಿ, ಚುನಾವಣೆ ಮೊದಲ ಆದ್ಯತೆಯಾಯಿತು. ಜನರಿಗೆ ಮಾದರಿಯಾಗಿ ನಮ್ಮನ್ನು ಉತ್ತಮ ಸಮಾಜ ನಿರ್ಮಾಣದೆಡೆಗೆ ಕರೆದೊಯ್ಯಬೇಕಾಗಿರುವ ನಾಯಕರುಗಳೇ ಗುಂಪು ಸೇರಿಸಿ ಚುನಾವಣಾ ರ‍್ಯಾಲಿಗಳನ್ನು ಕೈಗೊಂಡರೆ, ಬೇಲಿಯೇ ಎದ್ದು ಹೊಲ ಮೇಯ್ದ ಹಾಗಾಗಲಿಲ್ಲವೇ?
ನಿರುದ್ಯೋಗ ಸಮಸ್ಯೆಯಂತೂ ದಿನದಿಂದ ದಿನಕ್ಕೆ ಮುಗಿಲೆತ್ತರಕ್ಕೆ ಏರುತ್ತಿದೆ. ಇನ್ನು ಬಡವರಿಗೆ, ಕೂಲಿ ಕಾರ್ಮಿಕರಿಗೆ, ಈ ಕರೋನಾದಿಂದ ಜೀವನ ಅಸ್ತವ್ಯಸ್ತ ವಾಗಿರುವವರಿಗೆ ಪರಿಹಾರ ಘೋಷಣೆಯಂತೂ ಆಗಿದೆ. ಆದರೆ ಅದು ಎಷ್ಟರ ಮಟ್ಟಿಗೆ ಜನರ ಕೈ ಸೇರಿದೆ? ಆಸ್ಪತ್ರೆಯಲ್ಲಿ ಹಾಸಿಗೆ, ಸಮಯಕ್ಕೆ ಸರಿಯಾದ ಔಷಧ ದೊರೆಯದೆ ಅನೇಕರು ರಸ್ತೆಯಲ್ಲಿಯೇ ಪ್ರಾಣ ಕಳೆದುಕೊಂಡ ಅನೇಕ ಘಟನೆಗಳು ನಡೆದವು, ಅನೇಕರು ಈ ಸಮಯದ ದುರುಪಯೋಗ ಪಡಿಸಿಕೊಂಡು ಔಷಽಗಳ ಕೃತಕ ಬೇಡಿಕೆ ಸೃಷ್ಟಿಸಿ ೧:೧೦ ಅನುಪಾತದಲ್ಲಿ ಲಾಭ ಪಡೆದು ಮಾರಾಟ ಮಾಡಿದ್ದಕ್ಕೂ ನಿದರ್ಶನಗಳಿವೆ, ಅನೇಕರು ಹಣ ಪಾವತಿ ಮಾಡಿ ಔಷಧ
ಸಿಗದೇ ಮೋಸ ಹೋದದ್ದಕ್ಕೂ ನಿದರ್ಶನಗಳಿದ್ದಾವೆ.

ಲಸಿಕೆ ಅಭಿಯಾನ ವೇನೋ ಘೋಷಣೆಯಾಯಿತು. ಆದರೆ ಎಷ್ಟರ ಮಟ್ಟಿಗೆ ಸಫಲತೆ ಕಂಡಿತು? ಲಸಿಕೆಯ ಹೆಸರಿನಲ್ಲೂ 800, 1000, 1300 ಹೀಗೆ ಹಣ ಸುಲಿಗೆ. ಕನಿಷ್ಠ ನಮ್ಮ ಸರಕಾರ ತಮ್ಮ ಜನರಿಗೆ ಉಚಿತವಾಗಿ ಲಸಿಕೆಗಳನ್ನೂ ನೀಡಲಾಗದಷ್ಟು ಹಣದ ಅಭಾವವೇ? ಹಾಗಾದರೆ ತೆರಿಗೆಯ ಹಣವು ಹೇಗೆ ವ್ಯಯ ವಾಗುತ್ತಿದೆ? ತಮ್ಮ ರಾಜಕೀಯ ಲಾಭಕ್ಕಾಗಿ ರೆಸಾರ್ಟ್ ರಾಜಕಾರಣ, ಶಾಸಕರುಗಳ ಬೇಟೆ ಮತ್ತು ವ್ಯಾಪಾರಕ್ಕಾಗಿ ಹಣವೆಲ್ಲ ವ್ಯಯ ಮಾಡದೆ, ಕುರ್ಚಿಯ ಪಿತ್ತವನ್ನು ಸ್ವಲ್ಪ ಇಳಿಸಿಕೊಂಡು ಸಾಮಾಜಿಕ ಕಾಳಜಿಯಿಂದ ದುಃಖಿತರ ಅಹವಾಲುಗಳನ್ನು, ಆಕ್ರಂದನವನ್ನು ಕೇಳಿ ಅವರ ಕಣ್ಣೀರೊರೆಸಲು, ಒಂದು ಸುಂದರ, ಸುಭದ್ರ, ಆರೋಗ್ಯಕರ ಸಮಾಜದ ನಿರ್ಮಾಣ ಮಾಡುವುದರಲ್ಲಿ ನಮ್ಮ ಜನ ನಾಯಕರುಗಳು ಕೈ ಜೋಡಿಸಿದರೆ ಕೋಟ್ಯಾನು ಕೋಟಿ ಜನರ ಕನಸಿನ ಭವ್ಯ ಭಾರತದ ನಿರ್ಮಾಣವಾಗುವುದರಲ್ಲಿ ಸಂದೇಹವೇ ಇಲ್ಲ.