Tuesday, 10th September 2024

ಶ್ರೀಸಾಮಾನ್ಯರ ಜೀವ ತೀರಾ ಅಗ್ಗವಾಗಿದೆ

ಕಳಕಳಿ

ಸಿಂಚನ ಎಂ.ಕೆ

ಬಹುತೇಕರಿಗೆ ತಿಳಿದಿರುವ ಮಹಾಭಾರತದ ಸ್ವಾರಸ್ಯಕರ ಪ್ರಸಂಗವಿದು. ‘ಈ ಪ್ರಪಂಚದ ಪರಮ ಅದ್ಭುತ ಯಾವುದು?’ ಎಂದು ಯಕ್ಷನು ಯುಧಿಷ್ಠಿರನನ್ನು ಪ್ರಶ್ನಿಸುತ್ತಾನೆ. ಅದಕ್ಕೆ ಯುಧಿಷ್ಠಿರ,
‘ಪ್ರತಿದಿನ ತಮ್ಮ ಕಣ್ಣ ಮುಂದೆಯೇ ಸಾವು-ನೋವುಗಳಾಗುವುದನ್ನು ಕಂಡರೂ, ಮನುಷ್ಯರು ತಮಗೆ ಮಾತ್ರ ಸಾವು ಬರುವುದೇ ಇಲ್ಲ ಎಂಬ ಭ್ರಮೆಯಲ್ಲಿ ಬದುಕುತ್ತಿರುವುದು’ ಎಂದು
ಉತ್ತರಿಸುತ್ತಾನೆ. ಹೌದಲ್ಲವೇ? ಜಗತ್ತಿನಾದ್ಯಂತ ಕಾಣಬರುತ್ತಿರುವ ಅಪಘಾತ, ಹತ್ಯೆ, ಆತ್ಮಹತ್ಯೆ, ಖಿನ್ನತೆ, ಪ್ರಾಕೃತಿಕ ವಿಕೋಪ ಮೊದಲಾದ ದುರಂತಕರ ಸಂಗತಿಗಳನ್ನು ಇಂದಿನ
ತಾಂತ್ರಿಕ ಯುಗದಲ್ಲಿ ಅಂಗೈಯಲ್ಲಿನ ಮೊಬೈಲ್‌ನಿಂದಲೇ ತಿಳಿದುಕೊಳ್ಳುತ್ತೇವೆ.

ಆದರೂ ಅದು ನಮ್ಮ ಅನುಭವಕ್ಕೆ ಬರುವವರೆಗೆ, ‘ಅವೆಲ್ಲಾ ಬೇರೆಯವರ ಜೀವನದಲ್ಲಿ ಮಾತ್ರ ಸಂಭವಿಸುವಂಥವು, ನಮ್ಮ ಜೀವನದಲ್ಲಿ ಅವೆಲ್ಲಾ ಘಟಿಸುವುದಿಲ್ಲ’ ಎಂಬ ಗ್ರಹಿಕೆಯಿಂದಾಗಿ ಜಾಗ್ರತೆಯಿಂದಿರದೆ, ಸಿದ್ಧತೆ ಮಾಡಿಕೊಳ್ಳದೆ ಬದುಕುತ್ತಿರುತ್ತೇವೆ. ಇದು ಸಾರ್ವಜನಿಕರ ರಕ್ಷಣೆಯ ಹೊಣೆ ಹೊತ್ತಿರುವ ಸರಕಾರಕ್ಕೂ ಅನ್ವಯಿಸುವ ಮಾತು. ಕಳೆದ ವಾರ ಇಡೀ ದೇಶವನ್ನೇ
ತಲ್ಲಣಗೊಳಿಸಿದ, ಕೇರಳದ ವಯನಾಡಿನ ಚೂರಮಾಲಾ ಮತ್ತು ಮುಂಡಕ್ಕೈ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದ ದುರಂತದ ವಿಷಯದಲ್ಲೂ ಇದು ಸಾಬೀತಾಗಿದೆ. ಈ ಭೂಕುಸಿತಕ್ಕೆ ಪ್ರಾಕೃತಿಕ ವಿಕೋಪ ಪ್ರಮುಖ ಕಾರಣ ಎಂಬುದು ಸರಿ. ಆದರೆ ಈ ವಿಕೋಪವು ದುಪ್ಪಟ್ಟು, ಹತ್ತು ಪಟ್ಟು ಹೆಚ್ಚಾಗಿ ‘ಪ್ರೋಮ್ಯಾಕ್ಸ್’ ಹಂತ ತಲುಪಲು ಮಾನವ ನಿರ್ಮಿತ ಕಾರಣಗಳೇ ದೊಡ್ಡ ಇನ್‌ಪುಟ್ ಆಗಿಬಿಟ್ಟಿವೆ.

ಎರಡು ದಿನಗಳ ಅಂತರದಲ್ಲಿ ಅತಿವೇಗವಾಗಿ ೫೭೨ ಮಿ.ಮೀ. ದಾಖಲೆಯ ಮಳೆಯಾಗಿ, ೪೦೦ಕ್ಕಿಂತ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿದೆ. ರಾಷ್ಟ್ರೀಯ ಸುದ್ದಿವಾಹಿನಿ ಮೂಲಗಳ
ಪ್ರಕಾರ, ೨೦೧೧ರಲ್ಲಿ ಮಾಧವ್ ಗಾಡ್ಗಿಲ್ ನೇತೃತ್ವದ ತಂಡವು ಪಶ್ಚಿಮ ಘಟ್ಟಗಳ ಸಂಪೂರ್ಣ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯವಾಗಿ ಘೋಷಿಸಬೇಕೆಂದು ವರದಿಮಾಡಿತ್ತು. ಆ
ಭೂಪ್ರದೇಶವನ್ನು ಕೃಷಿ, ಗಣಿಗಾರಿಕೆಗಳಿಗೆ ಬಳಸದಂತೆ ನಿರ್ಬಂಧ ಹೇರುವುದರ ಜತೆಗೆ, ಯಾವುದೇ ಹೊಸ ರಸ್ತೆ, ರೈಲುಮಾರ್ಗ, ಪ್ರವಾಸೋದ್ಯಮ, ಜಲವಿದ್ಯುತ್ ಯೋಜನೆಗಳ ವಿಸ್ತರಣೆ ಮಾಡದಂತೆ ಸೂಚನೆ ನೀಡಬೇಕೆಂದು ತಿಳಿಸಿತ್ತು. ನಮ್ಮ ಸರಕಾರವು ಈ ವರದಿಯನ್ನು ಭಾಗಶಃ ಪಾಲನೆ ಮಾಡುವುದಿರಲಿ, ಅದನ್ನು ಸಾರ್ವಜನಿಕವಾಗಿ ಬಿಡುಗಡೆಗೊಳಿಸಿ ಅರಿವು ಮೂಡಿಸುವ ಗೋಜಿಗೂ ಹೋಗದೆ ೮ ತಿಂಗಳ ಕಾಲ ಬೆಚ್ಚಗೆ ಇಟ್ಟುಕೊಂಡಿತ್ತು.

ನಂತರ ನ್ಯಾಯಾಲಯದ ನಿರ್ದೇಶನದಂತೆ ಈ ವರದಿ ಬಿಡುಗಡೆಯಾದ ಮೇಲೆ, ಸರಕಾರವು ಅದರಲ್ಲಿ ಸಾಕಷ್ಟು ಬದಲಾವಣೆ ಮಾಡಿ ಜಾರಿಗೊಳಿಸಿತು. ಆ ಸೂಕ್ಷ್ಮ ಪ್ರದೇಶಗಳ ಸ್ಥಳೀಯರ ಮೇಲೆಯೇ ಗೂಬೆ ಕೂರಿಸಿ, ಅವರ ಕಾರಣದಿಂದಲೇ ವರದಿಯನ್ನು ಬದಲಾಯಿಸಿರುವುದಾಗಿ ಹೇಳಿ, ಅವರು ಕಟ್ಟಿದ ತೆರಿಗೆ ಹಣದಿಂದಲೇ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾ, ಕಟ್ಟಡಗಳನ್ನು ಕಟ್ಟಿ ಲಾಭ ಗಳಿಸುತ್ತಾ, ಅವರ ಅಘೋಷಿತ ಹತ್ಯೆಗೆ ಅವರೇ ಪರೋಕ್ಷವಾಗಿ ಹಣ ನೀಡುವಂತೆ ಮಾಡಿ, ಅಂದೇ ಇಂದಿನ ಭೂಕುಸಿತದ ಮರಣಶಾಸನವನ್ನು ರಚಿಸಿತು. ಕಸ್ತೂರಿ
ರಂಗನ್ ಅವರ ಸುಧಾರಿತ ವರದಿಯ ಶಿಫಾರಸಿನಂತೆ ಪಶ್ಚಿಮ ಘಟ್ಟದ ಶೇ.೩೮ರಷ್ಟು ಭಾಗವನ್ನು ಮಾತ್ರ ಸೂಕ್ಷ್ಮ ವಲಯವಾಗಿ ಘೋಷಿಸುವ ಕಾರ್ಯವೂ ಆಗಲಿಲ್ಲ. ಅಧಿಕ ಪ್ರಮಾಣದಲ್ಲಿ ಅರಣ್ಯ ಪ್ರದೇಶಗಳನ್ನು ಕಡಿದು ವಾಣಿಜ್ಯ ಬೆಳೆಗಳನ್ನು ಬೆಳೆಯಲಾಯಿತು, ರೆಸಾರ್ಟು/ ಹೋಮ್ ಸ್ಟೇಗಳ ನಿರ್ಮಾಣವಾಯಿತು, ಗಣಿಗಾರಿಕೆಗೆ ಅವಕಾಶ ದೊರೆಯಿತು, ಪ್ರಕೃತಿಯ ಸಮತೋಲನ ತಪ್ಪಿಹೋಯಿತು.

ಒಬ್ಬ ಮನುಷ್ಯನ ಜೀವನದಲ್ಲಿ ಸಮತೋಲನ ತಪ್ಪಿದರೇನೇ ಅದರಿಂದ ಸುಧಾರಿಸಿಕೊಳ್ಳುವುದು ಎಷ್ಟು ಕಠಿಣ, ಹಾಗಿರುವಾಗ ಮನುಷ್ಯನಂಥ ಅಸಂಖ್ಯಾತ ಜೀವಿಗಳನ್ನು ಪೋಷಿಸುವ ಪ್ರಕೃತಿಯ ಸಮತೋಲನ ತಪ್ಪಿದರೆ ಸುಧಾರಣೆ ಮತ್ತೆಷ್ಟು ಕಠಿಣವಾಗಬಹುದು?! ಸಾರ್ವಜನಿಕ ರಕ್ಷಣೆಯ ಜವಾಬ್ದಾರಿಯನ್ನು ಅರೆಕ್ಷಣ ಮರೆತ ಸರಕಾರ, ಆರ್ಥಿಕ ದೃಷ್ಟಿಯಿಂದ ಇಂಥ ಪರಿಸರ ಸೂಕ್ಷ್ಮ ವಲಯಗಳಲ್ಲೂ ಅಭಿವೃದ್ಧಿ ಮಾಡಿ ಲಾಭಗಳಿಸುವ ಯತ್ನ ಮಾಡಿದರೂ, ಅದರಿಂದಾಗಿ ಪ್ರಕೃತಿಯ ಸಮತೋಲನ ತಪ್ಪಿ ಹೀಗೆ ದುರಂತ ಸಂಭವಿಸಿದ ಮೇಲೆ ಅದನ್ನು ಸರಿಪಡಿಸಲು, ಅಭಿವೃದ್ಧಿಗೆ ಮಾಡಿದ್ದಕ್ಕಿಂತ ಹೆಚ್ಚು ಹಣವನ್ನು ಖರ್ಚುಮಾಡಬೇಕಾಗುತ್ತದೆ.

‘ಚಿಕಿತ್ಸೆಗಿಂತ ಮುಂಜಾಗ್ರತೆ ಕ್ರಮ ಉತ್ತಮ’ ಎಂದು ಎಲ್ಲರೂ ಹೇಳುತ್ತಾರೆ; ಆದರೆ ಯಾರೂ ಅದರ ಕಡೆಗೆ ಹೆಚ್ಚು ಗಮನ ಹರಿಸುವುದಿಲ್ಲ. ಒಂದು ವೇಳೆ ಗುಡ್ಡಗಾಡು ಪ್ರದೇಶದಲ್ಲಿ ಅಭಿವೃದ್ಧಿ ಚಟುವಟಿಕೆಗಳು ಅವಶ್ಯಕವಾಗಿದ್ದರೂ, ಅದು ವೈಜ್ಞಾನಿಕ ನೆಲೆಗಟ್ಟಿನ/ಪಾರಿಸರಿಕ ಪ್ರಾಮುಖ್ಯದ ಕಾಮಗಾರಿಯಾದರೆ ಹಾನಿಯ ತೀವ್ರತೆಯಾದರೂ ಕಡಿಮೆಯಾಗುತ್ತದೆ. ಆದರೆ ಸರಕಾರವು ತನ್ನ ಯೋಜನೆಗಳಿಗೆ ಮುಡಿಪಾಗಿಟ್ಟ ಹಣದ ಸಿಂಹಪಾಲು ಯೋಜನೇತರವಾಗಿ ಕೆಲ ರಾಜಕಾರಣಿ ಗಳ/ಅಧಿಕಾರಿಗಳ ಸ್ವಾರ್ಥಸಾಧನೆಗೆ ಬಳಕೆಯಾಗುವುದರಿಂದ ಮತ್ತು ಕಾರ್ಯ ಪರಿಣತಿಗಿಂತ ಹೆಚ್ಚಾಗಿ ಸ್ನೇಹ ಆಣತಿಯ ನುಸಾರ ಪ್ರಾಜೆಕ್ಟ್‌ಗಳು ಲಭ್ಯವಾಗುವುದರಿಂದ, ಗುಣ ಮಟ್ಟದ ಕಾಮಗಾರಿಗಳು ನಡೆಯುತ್ತಿಲ್ಲ. ನಮ್ಮ ರಾಜ್ಯದ ಶಿರೂರು ಗುಡ್ಡ ಕುಸಿತವು ಇದಕ್ಕೊಂದು ಜ್ವಲಂತ ಉದಾಹರಣೆ.

ಗುಡ್ಡಗಾಡು ಪ್ರದೇಶಗಳಲ್ಲಿ ರಸ್ತೆ ನಿರ್ಮಿಸುವಾಗ ಅದಕ್ಕೆ ತಡೆಗೋಡೆಗಳನ್ನು ನಿರ್ಮಿಸಿ ಸಮತೋಲನವನ್ನು ಕಾಪಾಡಬೇಕಾಗುತ್ತದೆ. ಜತೆಗೆ ಗೋಡೆಯನ್ನು ಯಾವ ಕೋನದಲ್ಲಿ ನಿರ್ಮಿಸಬೇಕು ಹಾಗೂ ತೇವಾಂಶ ನಿರ್ವಹಣೆಗೆ ಎಲ್ಲೆಲ್ಲಿ ರಂಧ್ರಗಳನ್ನು ಕೊರೆಸಬೇಕು ಎಂಬ ವಿಷಯಗಳನ್ನೂ ಪರಿಗಣಿಸಬೇಕಾಗುತ್ತದೆ. ಆದರೆ ಅದು ಆಗುವುದೇ ಇಲ್ಲ! ಶ್ರೀಸಾಮಾನ್ಯರ ಜೀವ ತೀರಾ ಅಗ್ಗವಾಗಿದೆ ಎಂಬುದಕ್ಕೆ ಮತ್ತಷ್ಟು ಉದಾಹರಣೆಗಳಿವೆ. ಸಾಮಾನ್ಯರಾದರೂ ‘ಅಸಾಮಾನ್ಯ’ ಎನಿಸಿಕೊಳ್ಳುವ ಐಎಎಸ್ ಅಧಿಕಾರಿ ಆಗಬೇಕೆಂಬ ಕನಸು ಹೊತ್ತು ರಾಜಧಾನಿಗೆ ಬಂದ ಮೂವರು ವಿದ್ಯಾರ್ಥಿಗಳು, ವ್ಯವಸ್ಥೆಯ ಭ್ರಷ್ಟತೆಯಿಂದಾಗಿ ನೆಲಮಹಡಿಯ ಗ್ರಂಥಾಲಯಕ್ಕೆ ನುಗ್ಗಿದ ನೀರಿನಲ್ಲಿ ಮುಳುಗಿ ಪ್ರಾಣ ಬಿಡಬೇಕಾಯಿತು.

ಭಾರಿ ಮೊತ್ತದ ಬೋಧನಾ ಶುಲ್ಕವನ್ನು ಸಂಗ್ರಹಿಸುವ ತಥಾಕಥಿತ ಕೋಚಿಂಗ್ ಸೆಂಟರ್‌ಗಳು, ಅದರ ಅರ್ಧ ಮೊತ್ತಕ್ಕಾದರೂ ಸರಿಹೊಂದುವಂಥ ವ್ಯವಸ್ಥೆಯನ್ನು ಕಲ್ಪಿಸುವುದಿಲ್ಲ. ಪತ್ರಿಕಾ ವರದಿಯೊಂದರ ಪ್ರಕಾರ, ರಾಜ್ಯದ ಬೆಂಗಳೂರು, ಧಾರವಾಡ ಕೋಚಿಂಗ್ ಸೆಂಟರ್‌ಗಳಲ್ಲಿ ಕೂಡ ನೆಲಮಹಡಿಯಲ್ಲೇ ಗ್ರಂಥಾಲಯವಿರುವುದು ಕಂಡುಬಂದಿದೆ. ವಾಹನಗಳ ನಿಲುಗಡೆ ತಾಣದಲ್ಲೇ ಮಕ್ಕಳಿಗೆ ಓದುವ ವ್ಯವಸ್ಥೆ ಮಾಡಿರುವ ಭೂಪರೂ ಇದ್ದಾರೆ. ನೈತಿಕತೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರವಚನ ನೀಡುವ ಪ್ರತಿಷ್ಠಿತ ಕೋಚಿಂಗ್ ಸೆಂಟರ್‌ಗಳ ಪ್ರಾಧ್ಯಾಪಕರು  ಇಂಥ ಅವ್ಯವಸ್ಥೆಯ ಬಗ್ಗೆ ಏಕೆ ಮೌನ ವಹಿಸಿದ್ದಾರೆ? ಇದಕ್ಕೆ ಅವರ ಸಹಮತ ಕೂಡ ಇದೆಯೇ? ಅವರು ಈ ಅನಾಹುತವನ್ನು ಹೇಗೆ ಸಮರ್ಥಿಸಿಕೊಳ್ಳುವರು? ಆ ಮಕ್ಕಳ ಜೀವ ಏನಾದರೇನು, ಮತ್ತೊಬ್ಬರು ಅವರ ಸ್ಥಾನಕ್ಕೆ ಬರುತ್ತಾರೆ. ಇವರಿಗೆ ಸಿಗಬೇಕಾದ ಬೋಧನಾ ಶುಲ್ಕ ಹಾಗೂ ಉಸಿರುಗಟ್ಟಿಸುವ ಪುಟ್ಟ ಕೋಣೆಗಳ ಪಿಜಿ ಬಾಡಿಗೆಹಣ ಸಿಕ್ಕೇ ಸಿಗುತ್ತದೆ!
ದೆಹಲಿಯಲ್ಲಿ ನಡೆದ ಭಯಂಕರ ಅಗ್ನಿ ಅವಘಡದಲ್ಲಿ ಆಸ್ಪತ್ರೆಯಲ್ಲೇ ೭ ಹಸುಗೂಸುಗಳ ಸಜೀವದಹನವಾಗಿದೆ.

ಪ್ರಪಂಚದ ಪರಿಚಯವೇ ಇಲ್ಲದ ಕಂದಮ್ಮಗಳು ಅದರ ಕ್ರೂರದೃಷ್ಟಿಗೆ ಸಿಲುಕಿ ಬಲಿಯಾಗುವಂತಾಯಿತು. ಸಾಕಷ್ಟು ಆಪದ್ಬಾಂಧವರು ಅನೇಕ ಮಕ್ಕಳನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. ಅನಧಿಕೃತ ವೈದ್ಯರಿಂದ ಸ್ಥಾಪನೆಯಾದ ಅನಽಕೃತ ಆಸ್ಪತ್ರೆಯ ಅಪ್ರಾಮಾಣಿಕ ವ್ಯವಸ್ಥೆಯನ್ನು ಭೇದಿಸಲು, ಹಸುಗೂಸುಗಳು ತಮ್ಮ ಜೀವವನ್ನೇ ಬೆಲೆಯಾಗಿ ತೆರಬೇಕಾಯಿತಲ್ಲಾ! ಇಂಥ ಕೋಮಲ ದೇಹದ ಕಂದಮ್ಮಗಳ ಬಲಿ ಪಡೆಯುವುದಕ್ಕಿಂತ ದೊಡ್ಡ ಪಾಪವು ಮತ್ತಾವುದೂ ಇರಲು ಸಾಧ್ಯವಿಲ್ಲ ಎನಿಸುತ್ತದೆ!

ಕೇರಳದ ಭೂಕುಸಿತದಿಂದ ಕೆಲವು ಮಕ್ಕಳು ಪೋಷಕರನ್ನು ಕಳೆದುಕೊಂಡು ತಬ್ಬಲಿಗಳಾದರೆ, ಕೆಲವು ಪೋಷಕರು ಮಕ್ಕಳನ್ನು ಕಳೆದುಕೊಂಡಿದ್ದಾರೆ. ಈ ಭೀಕರತೆಗೆ ಸಾಕ್ಷಿಯಾಗಿ ಸತ್ತು
ಬದುಕಿದವರು ಮತ್ತೊಮ್ಮೆ ಬದುಕನ್ನು ಕಟ್ಟಿಕೊಳ್ಳಬೇಕಿದೆ. ಲಘುವಾಗಿ ಆಹಾರವನ್ನು ಸೇವಿಸುತ್ತಾ ಸುದೀರ್ಘ ಕಾರ್ಯಾಚರಣೆಯಲ್ಲಿ ತೊಡಗಿರುವ, ತಮ್ಮ ಪ್ರಾಣವನ್ನು ಒತ್ತೆಯಿಟ್ಟು
ನಮ್ಮ ಪ್ರಾಣವನ್ನು ಕಾಪಾಡುವ ಸೈನಿಕರ ಋಣವನ್ನು ಈ ಜನ್ಮದಲ್ಲಿ ತೀರಿಸಲಾಗುವುದಿಲ್ಲ. ನಾವು ಸ್ವಲ್ಪ ದಿನಗಳ ಮಟ್ಟಿಗೆ ನಮ್ಮ ಊರಿನಿಂದ ದೂರವಾದರೆ ಏನೋ ಕಳೆದುಕೊಂಡಂತೆ
ಭಾಸವಾಗುತ್ತದೆ. ಹೀಗಿರುವಾಗ, ಒಮ್ಮೆಲೇ ತಮ್ಮ ಊರಿನ ಸರ್ವನಾಶವನ್ನು ಕಂಡು ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡ ಜನರ ಸ್ಥಿತಿ ಹೇಗಾಗಿರಬೇಡ!

ದೂರದಲ್ಲಿದ್ದುಕೊಂಡು ಇವನ್ನೆಲ್ಲ ನೋಡುತ್ತಿರುವ ನಮಗೆ ಇದೊಂದು ಆಘಾತಕಾರಿ ಸಿನಿಮಾ ಕಥೆಯಂತೆ ತೋರಬಹುದು; ಆದರೆ ಅದನ್ನು ಅನುಭವಿಸಿದವರಿಗೆ ಮಾತ್ರ ಅದರ ನಿಜವಾದ ನೋವು ತಿಳಿದಿರುತ್ತದೆ. ಉತ್ತಮ ಕಾರ್ಯಗಳಿಗೆ ಶ್ರೇಯಸ್ಸನ್ನು ಪಡೆದುಕೊಳ್ಳುವ ಸರಕಾರವು ಕಳಪೆ ಕಾರ್ಯಗಳಿಗೆ ಹೊಣೆ ಹೊತ್ತು ನಿಂದನೆಯನ್ನೂ ಸ್ವೀಕರಿಸಬೇಕಾಗುತ್ತದೆ. ಒಬ್ಬ ಪ್ರಸಿದ್ಧ ವ್ಯಕ್ತಿಗೆ ಜೀವಬೆದರಿಕೆ ಬಂದರೆ ನಮ್ಮ ಸರಕಾರ ಎಷ್ಟೆಲ್ಲಾ ಭದ್ರತೆಯನ್ನು ಒದಗಿಸುತ್ತದೆ, ಆದರೆ ಸಾಮಾನ್ಯರ ಜೀವಕ್ಕೆ ಸಂಚಕಾರ ಒದಗಿದಾಗ ಏಕೆ ಭದ್ರತೆಯನ್ನು ಒದಗಿಸುವುದಿಲ್ಲ? ಪಶ್ಚಿಮಘಟ್ಟ ಪ್ರದೇಶದ ವಾಸಿಗಳಿಗೆ ದಶಕಗಳ ಹಿಂದೆಯೇ ಜೀವ ಬೆದರಿಕೆ ಒದಗಿದ್ದರೂ ಏಕೆ ಭದ್ರತೆಯನ್ನು ಒದಗಿಸಲಿಲ್ಲ? ರಾಜಕೀಯ ಸಿದ್ಧಾಂತಗಳ ಸಂಘರ್ಷದಲ್ಲಾಗಲಿ, ಸುದ್ದಿ
ಮಾಧ್ಯಮಗಳ ಚರ್ಚೆಯಲ್ಲಾಗಲಿ, ಸರಕಾರದ ಪ್ರಮುಖ ಕಾರ್ಯಕಲಾಪಗಳಲ್ಲಾಗಲಿ, ತಮಗೆ ಲಾಭದಾಯಕವಲ್ಲದಿದ್ದರೆ ಜನನಾಯಕರು ಸಾಮಾನ್ಯರ ಸಮಸ್ಯೆಗಳ ಬಗ್ಗೆ ಮಾತನಾಡುವುದೇ ಇಲ್ಲವೇಕೆ? ಹೇಳುವವರು-ಕೇಳುವವರು ಯಾರೂ ಇಲ್ಲ ಎಂದೇ? ಒಂದು ದೇಶದಲ್ಲಿ ಸರಕಾರದ ಅವಶ್ಯಕತೆ ಹೆಚ್ಚಾಗಿರುವುದು ಸಾಮಾನ್ಯ ವರ್ಗದವರಿಗೇ ಹೊರತು ಪ್ರಭಾವಿಗಳಿಗಲ್ಲ. ಆದ್ದರಿಂದ ಸರಕಾರವು ಸಾಮಾನ್ಯ ವರ್ಗದವರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ನಮ್ಮ ಸರಕಾರವು ಬಂಡವಾಳಶಾಹಿ ವ್ಯವಸ್ಥೆಯನ್ನು ಹೊಂದಿಲ್ಲ.

(ಲೇಖಕಿ ಹವ್ಯಾಸಿ ಬರಹಗಾರ್ತಿ)

Leave a Reply

Your email address will not be published. Required fields are marked *