Tuesday, 10th September 2024

ಗ್ರಾಹಕರನ್ನು ನಿಭಾಯಿಸಲು ಬೇಕು ಸಂವಹನಾ ಕೌಶಲ

ಅನುಭವಾಮೃತ

ಜಯಪ್ರಕಾಶ ಪುತ್ತೂರು

ರಾಷ್ಟ್ರೀಕೃತ ಬ್ಯಾಂಕುಗಳು ಶಾಖಾ ವಿಸ್ತರಣೆ ಮತ್ತು ತಮ್ಮ ವ್ಯವಹಾರದಲ್ಲಿ ಸಾಮಾಜಿಕ- ಆರ್ಥಿಕ ನೆಲೆಗಟ್ಟಿನ ರಾಷ್ಟ್ರೀಯ ಯೋಜನೆಗಳ ಅನುಷ್ಠಾನ ದಲ್ಲಿ ತೊಡಗಿದ್ದ ಕಾಲವಾಗಿತ್ತು ೭೦-೮೦ರ ದಶಕ. ಅಲ್ಲದೆ, ನಾಡಿನ ನಿರುದ್ಯೋಗಿ ಯುವಪೀಳಿಗೆಗೆ ಬ್ಯಾಂಕ್ ನೌಕರಿಯು ವರದಾನವಾಗಿ ಒದಗಿದ್ದ ಕಾಲಘಟ್ಟವದು.

ಇಂಥ ವೇಳೆ, ‘ನೌಕರಿ ಕೊಟ್ಟರೆ ನಿಮ್ಮ ಜಿಲ್ಲೆಯನ್ನು ಬಿಟ್ಟುಹೋಗಲು ಸಿದ್ಧರಿದ್ದೀರಾ?’ ಎಂಬ ಪ್ರಶ್ನೆಯು ಸಂದರ್ಶನದಲ್ಲಿ ಮಾಮೂಲಾಗಿರುತ್ತಿತ್ತು. ಆಗ ನಮ್ಮಂಥವರು ನಿರ್ವಾಹವಿಲ್ಲದೆ ‘ಹೌದು, ತಯಾರಾಗಿದ್ದೇವೆ’ ಎಂದು ಒಪ್ಪಿಕೊಂಡು, ಬ್ಯಾಂಕಿನವರು ದೂರದ ಯಾವ ಶಾಖೆಗೆ ನಿಯೋಜಿಸುತ್ತಾರೋ ಅಲ್ಲಿಗೆ ಹೋಗುತ್ತಿದ್ದೆವು. ಅಂಥ ವೇಳೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು ೫ ಬ್ಯಾಂಕುಗಳು ಹುಟ್ಟಿಕೊಂಡು, ಬಳಿಕ ಹೆಚ್ಚಿನವು ರಾಷ್ಟ್ರೀಕರಣವಾಗಿ ದೇಶದ ಮೂಲೆಮೂಲೆಗಳಲ್ಲಿ ತಮ್ಮ ಶಾಖೆಗಳನ್ನು ತೆರೆಯುತ್ತಿದ್ದವು.

ಹೀಗೆ ನನಗೆ ಲಭಿಸಿದ ಪೋಸ್ಟಿಂಗ್ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕು ಆಗಿತ್ತು. ಆದರೆ ಜಿಲ್ಲೆಯ ಬೈಲಹೊಂಗಲ ಮತ್ತು ಪಕ್ಕದ ತಾಲೂಕಿನಲ್ಲಿ ಆ ಕಾಲದಲ್ಲಿ ಅತಿಹೆಚ್ಚು ಕೊಲೆಗಳು ನಡೆಯುತ್ತಿದ್ದವು. ಈ ಭಯ ಒಂದು ಕಡೆಯಾದರೆ, ಹುಟ್ಟಿದೂರು ಮತ್ತು ಕುಟುಂಬವನ್ನು ಮೊದಲ ಬಾರಿಗೆ ಬಿಟ್ಟು ಗೊತ್ತಿಲ್ಲದ ಜಾಗಕ್ಕೆ ತೆರಳಬೇಕಲ್ಲಪ್ಪಾ ಎಂಬ ದುಗುಡ, ಬಾಧೆ ಎಲ್ಲವೂ ಅಪ್ಪಳಿಸಿದ್ದವು. ಇಂಥ ಹೊಸ ಪ್ರದೇಶದಲ್ಲಿ ಜನರೊಂದಿಗೆ ಬೆರೆತು ನೌಕರಿ  ಮಾಡುವುದು ಹೇಗೆ? ಎಂಬ ಸಣ್ಣಮಟ್ಟದ ಅಳುಕು-ಅಸ್ಥಿರತೆಗಳೂ ಜತೆಗೇ ಕಾಡಿದ್ದುಂಟು.

ಬ್ಯಾಂಕುಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಸಾರ್ವಜನಿಕ ಸಂಪರ್ಕದ ಜಾಣ್ಮೆಯು ಒಂದು ತೂಕ ಹೆಚ್ಚೇ ಇರಬೇಕಾಗುತ್ತದೆ. ಏಕೆಂದರೆ, ಕೌಂಟರ್‌ಗಳ ಮುಂದೆ ಬಂದು ನಿಲ್ಲುವ ವಿವಿಧ ವಯೋಮಾನ ಮತ್ತು ಚಿತ್ತಸ್ಥಿತಿಯ ಗ್ರಾಹಕರೊಂದಿಗೆ ವ್ಯವಹಾರ ನಡೆಸುವಾಗ ಸಂವಹನಾ ಕೌಶಲವು ಮಹತ್ವದ ಪಾತ್ರವನ್ನು ವಹಿಸುತ್ತದೆ. ಇದನ್ನು ಮೈಗೂಡಿಸಿಕೊಳ್ಳದ ಸಿಬ್ಬಂದಿಯು ಗ್ರಾಹಕರೊಂದಿಗೆ ಜಗಳವಾಡುವುದು ಮತ್ತು ಶಾಖೆಯ ಸೌಹಾರ್ದಮಯ
ವಾತಾವರಣವನ್ನು ಹಾಳುಮಾಡುವುದು ಕಟ್ಟಿಟ್ಟಬುತ್ತಿ. ಈಗ ಬಿಡಿ, ಕಂಪ್ಯೂಟರ್ ಆಧರಿತ ಸೇವೆಗಳು ಮುಂಚೂಣಿಗೆ ಬಂದಿವೆ; ಆದರೆ ಹಿಂದೆಲ್ಲಾ ಬ್ಯಾಂಕಿನಲ್ಲಿ ತಮ್ಮೆಡೆಗೆ ದೊರೆಯುತ್ತಿದ್ದ ವೈಯಕ್ತಿಕ ಗಮನ ಮತ್ತು ಸ್ನೇಹಮಯ ಸೇವೆಯನ್ನು ಹಳೆಯ ಗ್ರಾಹಕರು ಈಗಲೂ ನೆನಪಿಸಿಕೊಳ್ಳುತ್ತಾರೆ.

ಆದರೇನು ಮಾಡುವುದು? ಈ ಪ್ರವೃತ್ತಿ ಈಗ ಬಹಳ ಕಡಿಮೆಯಾಗಿದೆ ಎಂಬುದು ಸರ್ವವಿದಿತ. ಅದಿರಲಿ, ಬ್ಯಾಂಕ್‌ನ ಕೌಂಟರ್‌ನಲ್ಲಿ ಕುಳಿತವರು ಗ್ರಾಹಕರೊಬ್ಬರನ್ನು ನೋಡಿ ಪ್ರಥಮ ಗಮನ ನೀಡುವ ಕ್ಷಣದಿಂದಲೇ ಈ ‘ಸಾರ್ವಜನಿಕ ಸಂಪರ್ಕದ ಅಭಿಯಾನ’ ಶುರುವಾಗುತ್ತದೆ ಎನ್ನಬಹುದು. ಅಲ್ಲಿ
ಅಗತ್ಯವಾಗಿ ಬೇಕಾದುದು ಮಂದಹಾಸ, ಸಕಾರಾತ್ಮಕ ನಿಲುವು ಮತ್ತು ಪರಸ್ಪರ ನೆರವಾಗುವ ಮನೋಭಾವ. ಸಿಂಡಿಕೇಟ್ ಬ್ಯಾಂಕ್‌ನಂಥ ದಕ್ಷಿಣ ಭಾರತದಿಂದ ಆರಂಭಗೊಂಡ ಸಂಸ್ಥೆಗಳ ಗ್ರಾಹಕರ ಸೇವೆಯಲ್ಲಿ ಈ ತತ್ತ್ವಗಳೇ ಬಹುಮುಖ್ಯವಾಗಿದ್ದುದು, ಪ್ರಚಾರ ಸಾಮಗ್ರಿಗಳಲ್ಲಿ ಅವು ಮುಖ್ಯಾಂಶಗಳಾಗಿ ಬಿಂಬಿತವಾದದ್ದು ಈಗ ಇತಿಹಾಸ.

ಅಂದು ಎಲ್ಲೆಲ್ಲೂ ಗ್ರಾಹಕರಿಗೇ ಆದ್ಯತೆ; ಅಂದರೆ ಕೌಂಟರ್‌ನಲ್ಲಿ ಗ್ರಾಹಕರನ್ನು ಎದುರುಗೊಳ್ಳುವಾತ ಓರ್ವ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಸಂಸ್ಥೆಯನ್ನು ಪ್ರತಿನಿಧಿಸುತ್ತಿದ್ದ. ಆತನಿಗೆ ‘ಪಿಆರ್‌ಒ’ ಎಂಬ ಹಣೆಪಟ್ಟಿಯಿಲ್ಲದಿದ್ದರೂ ಆ ಕರ್ತವ್ಯವನ್ನು ಆತ ನಿಭಾಯಿಸುತ್ತಿದ್ದ. ಅನುಗಾಲವೂ ಹೀಗೆ ಸ್ನೇಹಭಾವದಲ್ಲಿ ವ್ಯವಹಾರ ನಡೆಸುವವರಿಗೆ ತಮ್ಮ ಸೇವಾವಽಯಲ್ಲಿ ಅಭಿಮಾನಿಗಳ/ ಸ್ನೇಹಿತರ ದೊಡ್ಡ ವಲಯವೇ ದಕ್ಕುತ್ತದೆ. ಇಂಥ ಬ್ಯಾಂಕ್
ಸಿಬ್ಬಂದಿ ಬೇರೆಡೆಗೆ ವರ್ಗವಾಗಿ ಹೋದರೂ ‘ಇಂಥ ಸಿಬ್ಬಂದಿ/ಅಧಿಕಾರಿ, ಮ್ಯಾನೇಜರ್ ಇಲ್ಲಿದ್ದರು’ ಎಂಬುದಾಗಿ ಬ್ಯಾಂಕಿನ ಗ್ರಾಹಕರು ಹೊಸ ನೌಕರರ
ಸಮ್ಮುಖದಲ್ಲಿ ಹೇಳುವುದು ವಾಡಿಕೆಯಾಗಿತ್ತು. ನೌಕರರಿಗೆ ಸೇವೆಯ ಬೆಲೆ ಮತ್ತು ಅದರ ಒಳ್ಳೆಯ ಪರಿಣಾಮಗಳ ಅರಿವು ಮಾಡಿಸುವಲ್ಲಿ ಇಂಥ ನಿದರ್ಶನಗಳು ಸಹಕಾರಿ.

೧೯೭೪-೭೮ರ ನನ್ನ ಬ್ಯಾಂಕಿಂಗ್ ಸೇವಾಘಟ್ಟದಲ್ಲಿ ದಕ್ಕಿದ ಹಲವು ಗ್ರಾಹಕ-ಮಿತ್ರರ ಪೈಕಿ ಈಗಲೂ ಸಾಕಷ್ಟು ಮಂದಿ ನನ್ನ ಸಂಪರ್ಕದಲ್ಲಿದ್ದಾರೆ. ನನ್ನ ಸೇವಾವಧಿಯಲ್ಲಿ ಕೆಲವೊಮ್ಮೆ ಸವದತ್ತಿಗೆ ಹೋದಾಗ ಬ್ಯಾಂಕ್‌ನಲ್ಲಿದ್ದ ಸಿಬ್ಬಂದಿ ಗುರುತಿಸದಿದ್ದರೂ, ಊರಿನ ಗ್ರಾಹಕ-ಮಿತ್ರರು ಆದರಿಸಿದ, ವಾಸ್ತವ್ಯ-ಯೋಗಕ್ಷೇಮಗಳನ್ನು ನೋಡಿಕೊಂಡ ನಿದರ್ಶನಗಳಿವೆ. ಹೆಚ್ಚಿನ ವೇಳೆ ನಾನು ಗ್ರಾಹಕ-ಮಿತ್ರರ ಮನೆಯಲ್ಲೇ ಉಳಿದು ಅವರು ನೀಡಿದ ಆದರಾತಿಥ್ಯಕ್ಕೆ
ಮರುಳಾಗಿದ್ದೇನೆ. ನೆನಪಿಡಿ, ಗ್ರಾಹಕರು ನೆನಪಿಸಿಕೊಳ್ಳುವುದು ಬ್ಯಾಂಕ್‌ನ ಸೌಲಭ್ಯಗಳನ್ನಲ್ಲ, ವ್ಯವಹಾರದ ವೇಳೆ ಸಿಬ್ಬಂದಿ ತಮಗೆ ನೀಡಿದ ಸಹಕಾರ ಮತ್ತು ಸೇವೆಯ ಕ್ಷಣಗಳನ್ನು ಮಾತ್ರ. ಕಾಲ ಕಳೆದಂತೆ, ಸೇವೆ ನೀಡುವ ವ್ಯಕ್ತಿಗಳು ಪಕ್ಕಾ ‘ಯಂತ್ರಮಾನವ’ರಾಗಿ ಪರಿವರ್ತನೆಯಾಗಿದ್ದಾರೆ, ಮೊದಲಿದ್ದ ನಗುವಿನ ಸ್ವಾಗತ, ಉಭಯ-ಕುಶಲೋಪರಿ ವಿಚಾರಣೆ, ಸ್ನೇಹಶೀಲತೆ, ಸಹಾಯ ಮಾಡುವ ಮನೋಭಾವ ಇವೆಲ್ಲಾ ಕಳೆದುಹೋಗಿವೆ ಎಂದು ಈಗಿನ ಗ್ರಾಹಕರು ಹೇಳುವುದುಂಟು.

ಸಾರ್ವಜನಿಕ ಸಂಪರ್ಕ ಕಲೆ ಎಂಬುದು ಬಹುಮುಖ್ಯವಾದ ಸ್ನೇಹಸೇತುವೆ, ಅಲ್ಲವೇ? ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಗ್ರಾಹಕರು ಮುಗ್ಧರೇ. ಅವರಿಗೆ ಬ್ಯಾಂಕಿನ ಮೇಲೆ ಬಹುದೊಡ್ಡ ವಿಶ್ವಾಸ ಮತ್ತು ನಂಬಿಕೆಯಿರುತ್ತದೆ, ನಮ್ಮ ಬ್ಯಾಂಕ್ ಎಂಬ ಹೆಮ್ಮೆಯಿರುತ್ತದೆ. ಇಲ್ಲಿ ನನ್ನದೊಂದು ಖಾತೆಯಿದೆ ಎಂಬ
ಪ್ರತಿಷ್ಠೆ ಇರುತ್ತದೆ. ಆದರೆ ಗಮನಿಸಿ, ಅವರಲ್ಲಿ ಹೆಚ್ಚಿನವರಿಗೆ ಬ್ಯಾಂಕಿಂಗ್ ವ್ಯವಹಾರಗಳ ಸಾಮಾನ್ಯ ಪರಿಜ್ಞಾನವೂ ಇರುವುದಿಲ್ಲ. ಸವದತ್ತಿಯಲ್ಲೂ ಇಂಥದೇ ಪರಿಸ್ಥಿತಿಯನ್ನು ನಾನು ಕಂಡಿದ್ದೆ. ಹೇಳಿಕೇಳಿ ರೈತಾಪಿಗಳಾಗಿದ್ದ ಇಲ್ಲಿನ ಜನರ ಮೂಗಿನ ತುದಿಯಲ್ಲೇ ಸಿಟ್ಟು ಇರುತ್ತಿತ್ತು; ಆದರೆ ಅವರು
ನಿಜಕ್ಕೂ ಹೃದಯವಂತರಾಗಿದ್ದು ಸ್ನೇಹಕ್ಕಾಗಿ ಜೀವವನ್ನೇ ಕೊಡುವವರಾಗಿದ್ದರು.

ಆ ಊರಿನಲ್ಲಿ ಸ್ವಾತಂತ್ರ್ಯಯೋಧರು ಮತ್ತು ಪಿಂಚಣಿ ಪಡೆಯುವ ಖಾತೆದಾರರು ವಿಪರೀತ ಸಂಖ್ಯೆಯಲ್ಲಿದ್ದರು. ಇವರಲ್ಲಿ ಕೆಲವರು ಎಳೆಯ ಪ್ರಾಯ ದವರಾಗಿದ್ದು, ಸ್ವಾತಂತ್ರ್ಯ ಹೋರಾಟದಲ್ಲಿ ಇವರು ಯಾವಾಗ ಪಾಲ್ಗೊಂಡಿದ್ದರು ಎಂಬ ಪ್ರಶ್ನೆ ನನ್ನಲ್ಲಿ ಏಳುತ್ತಿತ್ತು! ಈ ಖಾತೆದಾರರಲ್ಲಿ ಹೆಚ್ಚಿನವರು ಹೆಬ್ಬೆಟ್ಟಿನವರು! ಇಂಥವರಿಗೆ ಅವರ ಹೆಬ್ಬೆಟ್ಟಿಗೆ ಗುರುತುಹಾಕಲು ಪ್ರತಿಬಾರಿಯೂ ಓರ್ವ ಸಹಿಮಾಡುವ ಖಾತೆದಾರರು ಬೇಕಲ್ಲವೇ? ನಮ್ಮ ಶಾಖೆಯಲ್ಲಿ ಹೀಗೆ ‘ಹೆಬ್ಬೆಟ್ಟು ವ್ಯವಹಾರ’ ನಡೆಸುತ್ತಿದ್ದ ಪ್ರಶಾಂತ, ಮುಗ್ಧ ಹಾಗೂ ಹಾಸ್ಯಪ್ರವೃತ್ತಿಯ ವರವಣ್ಣನವರನ್ನು ಮರೆಯಲಾಗದು. ಈತ ಪ್ರತಿಬಾರಿ ಬ್ಯಾಂಕಿಗೆ ಬಂದಾಗಲೂ ಕೌಂಟರ್‌ನೊಳಗೆ ಇಣುಕುತ್ತಾ ಒಳಗಿನ ವ್ಯವಹಾರಗಳನ್ನು ಬಹಳ ಹೊತ್ತು ವಿಸ್ಮಯದಿಂದ ವೀಕ್ಷಿಸುತ್ತಾ ದಪ್ಪಮೀಸೆಯ ಮುಖದಲ್ಲಿ ಕುತೂಹಲ ಹೊಮ್ಮಿಸುತ್ತಿದ್ದ ದೃಶ್ಯ ನಿಜಕ್ಕೂ ರೋಚಕವಾಗಿರುತ್ತಿತ್ತು.

ಅದೆಷ್ಟೋ ಬಾರಿ, ಇನ್ನೊಬ್ಬ ಹೆಬ್ಬೆಟ್ಟುದಾರನು ಗುರುತಿಗಾಗಿ ಸಹಿ ಬಲ್ಲವನನ್ನು ಹುಡುಕಾಡತೊಡಗಿದಾಗ, ಈ ವರವಣ್ಣನವರು ಮುಂದೆ ಬಂದು ‘ಹೆಬ್ಬೆಟ್ಟಿಗೆ ಇನ್ನೊಂದು ಹೆಬ್ಬೆಟ್ಟು’ ಎಂದು ಎದೆಯುಬ್ಬಿಸಿ ಹೇಳುತ್ತಿದ್ದರು. ಆಗ ನಮ್ಮ ಬ್ಯಾಂಕ್ ಶಾಖೆಯ ತುಂಬೆಲ್ಲ ನಗುವೇ ನಗು! ಮತ್ತೊಬ್ಬ ಗ್ರಾಹಕ ಸಾಬಣ್ಣನವರ್ ಅವರ ಕಥೆಯೇ ಬೇರೆ. ‘ಸಂಶಯಗ್ರಸ್ತ’ರ ಗುಂಪಿಗೆ ಸೇರಿದ್ದ ಅವರ ನಿಶ್ಚಿತ ಠೇವಣಿ ನಮ್ಮ ಬ್ಯಾಂಕ್‌ನಲ್ಲಿತ್ತು. ೭೦ರ ದಶಕದ ಆದಿಯಲ್ಲಿ
‘ಸ್ಕೈ ಲ್ಯಾಬ್’ ಎಂಬ ಬಾಹ್ಯಾಕಾಶ ವಸ್ತುವು ಭೂಮಿಗೆ ಅಪ್ಪಳಿಸುವ ಭೀತಿ ಎಲ್ಲೆಡೆ ವ್ಯಾಪಿಸಿತ್ತು. ಹೀಗೇ ಒಂದು ದಿನ ಬೆಳ್ಳಂಬೆಳಗ್ಗೆ ಎಂದಿನಂತೆಯೇ ನಾವು ಬ್ಯಾಂಕಿನ ಗೇಟಿನ ಬೀಗ ತೆರೆಯಲು ಹೋದಾಗ ಅದಾಗಲೇ ಈ ಸಾಬಣ್ಣನವರ್ ಪ್ರತ್ಯಕ್ಷರಾಗಿಬಿಟ್ಟರು!

ಅವರು ರಾತ್ರಿ ಅಲ್ಲಿಯೇ ಝಾಂಡಾ ಹೂಡಿದ ಲಕ್ಷಣ ಕಂಡುಬಂದಿದ್ದರಿಂದ, ‘ಏನು ಸಾಬಣ್ಣನವರೇ, ಏನಿಲ್ಲಿ ಕ್ಯಾಂಪ್?’ ಎಂದು ಪ್ರಶ್ನಿಸಿದೆವು. ಅದಕ್ಕೆ ಅವರು, ‘ಯಾಕ್ರೀ ಸಾಹೇಬರ, ನಿಮಗೆ ತಿಳೀವಲ್ಲದಾ? ಅದೇನೋ ಆಕಾಶದಿಂದ ಭೂಮಿಗೆ ಬೀಳುತ್ತಂತೇ? ಅದು ಈ ಬ್ಯಾಂಕಿಗೂ ಬಿದ್ದುಬಿಟ್ರೆ ನನ್ನ ರೊಕ್ಕ ಎಲ್ಲಾ ಹೋಯ್ತದೋ ಶಿವಾ..!’ ಎನ್ನಬೇಕೇ? ನಮಗೋ ನಗು ತಡೆಯಲಾಗದೆ, ಅವರಿಗೆ ಬ್ಯಾಂಕಿಂಗ್ ವ್ಯವಹಾರಗಳ ರೀತಿಯನ್ನು ಸರಳವಾಗಿ ಹೇಳಬೇಕಾ
ಯಿತು. ಅದು ಮನವರಿಕೆಯಾದ ನಂತರವೇ ಆ ಮಹಾಶಯ ಜಾಗ ಖಾಲಿಮಾಡಿದ್ದು! ಹೇಳುತ್ತ ಹೋದರೆ ಇಂಥ ಪಡಿಪಾಟಲಿನ ಪ್ರಸಂಗಗಳು ಸಾಕಷ್ಟು ಸಿಗುತ್ತವೆ.

ಆದರೆ ಇಂಥ ಸಂದರ್ಭಗಳಲ್ಲೂ ಸಾರ್ವಜನಿಕ ಸಂಪರ್ಕದ ತತ್ತ್ವ ಖಂಡಿತವಾಗಿಯೂ ನಮಗೆ ನೆರವಾಗಿದ್ದುಂಟು. ಅದನ್ನು ಬಳಸಿಕೊಂಡು ಇಂಥ ಗ್ರಾಹಕರನ್ನು ಸಂಬಂಧಿತ ಸಿಬ್ಬಂದಿ ಸಮಾಧಾನಿಸದೆ ಹೋಗಿದ್ದರೆ, ಊರ ತುಂಬೆಲ್ಲಾ ಬ್ಯಾಂಕ್‌ನ ಬಗ್ಗೆ ಅಪಪ್ರಚಾರವಾಗಿ ನಮ್ಮ ಪ್ರತಿಷ್ಠೆ ಹಾಳಾಗುವ ಸಾಧ್ಯತೆಗಳಿದ್ದವು. ಹೀಗೆ ಸಂಸ್ಥೆಯ ಬಗೆಗಿನ ಯಾವ ಬಗೆಯ ಅಪಪ್ರಚಾರಕ್ಕೂ ಅನುವು ಮಾಡಿಕೊಡದ ಹೊಣೆಗಾರಿಕೆ ಸಾರ್ವಜನಿಕ ಸಂಪರ್ಕ ವಲಯದ
ಸಿಬ್ಬಂದಿಯ ಮೇಲಿರುತ್ತದೆ ಎಂದು ಹೇಳಲಿಕ್ಕೆ ಈ ಪ್ರಸಂಗವನ್ನು ವಿವರಿಸಬೇಕಾಯಿತು.

ಇನ್ನೊಂದು ಲಘುಪ್ರಸಂಗವನ್ನು ಹೇಳಿ ಈ ಬರಹಕ್ಕೆ ಇತಿಶ್ರೀ ಹಾಡುತ್ತೇನೆ. ಒಂದು ಮುಂಜಾನೆ, ತನ್ನ ಬಟ್ಟೆಯ ತುಂಬಾ ಕನ್ನಡಿಗಳನ್ನು ಅಂಟಿಸಿ ಕೊಂಡು ಖಾಲಿಬೆನ್ನು ತೋರಿಸುತ್ತಾ ಬಳುಕುತ್ತಾ ಬ್ಯಾಂಕಿಗೆ ಆಗಮಿಸಿದ ಲಂಬಾಣಿ ಮಹಿಳೆಯೊಬ್ಬಳು, ನೋಡನೋಡುತ್ತಿದ್ದಂತೆಯೇ ನಮ್ಮ ಮ್ಯಾನೇ ಜರ್‌ರ ಕ್ಯಾಬಿನ್‌ಗೆ ನುಗ್ಗಿ, ‘ಏನೋ ಸಾಹೇಬಾ, ನನಗೆ ಪತ್ರ ಬರೆಯೋದನ್ನೇ ಬಿಟ್ಟುಬಿಟ್ಟೆಯಲ್ಲೋ… ಯಾಕೋ ಹೀಂಗೆ ನನ್ನ ಮೇಲೆ ಸಿಟ್ಟು?’ ಎಂದಾಗ ‘ಜೆ.ಪಿ…. ಜೆ.ಪಿ…’ ಎನ್ನುತ್ತಾ ಏದುಸಿರು ಬಿಟ್ಟುಕೊಂಡು ಮ್ಯಾನೇಜರ್ ನನ್ನೆಡೆಗೆ ದೌಡಾಯಿಸಿಕೊಂಡು ಬಂದರು.

ನಡೆದ ವಿಷಯವನ್ನು ಮನವರಿಕೆ ಮಾಡಿಕೊಟ್ಟು ಇಬ್ಬರನ್ನೂ ಸಮಾಧಾನಿಸುವಷ್ಟರಲ್ಲಿ ಸಾಕುಸಾಕಾಗಿ ಹೋಗಿತ್ತು. ಆಗಿದ್ದಿಷ್ಟು: ಆಕೆ ಹೇಳಿದ ಪತ್ರ ಮತ್ತಾವುದೂ ಅಲ್ಲ, ಸಾಲದ ಕಂತು ಕಟ್ಟಲು ನೆನಪಿಸುವ ಬ್ಯಾಂಕ್ ನೋಟಿಸ್. ಅಂಚೆ ಇಲಾಖೆಯ ಅವಾಂತರದಲ್ಲಿ ಅದು ಆಕೆಗೆ ಸಿಕ್ಕಿರಲಿಲ್ಲ, ಅಷ್ಟೇ! ಹೀಗೆ ಬ್ಯಾಂಕಿನ ಗ್ರಾಹಕರಲ್ಲಿ ಮುಗ್ಧರೂ ಅಮಾಯಕರೂ ಸಾಕಷ್ಟು ಮಂದಿ ಇರುತ್ತಾರೆ. ಹಾಗಂತ ಅವರನ್ನು ನಿರ್ಲಕ್ಷಿಸದೆ ನಾವು ಶಾಂತಚಿತ್ತದಿಂದ
ಸಂಭಾಳಿಸಿಕೊಂಡು ಹೋಗಬೇಕಾಗುತ್ತದೆ. ಅದರಲ್ಲೂ ನಿರ್ದಿಷ್ಟವಾಗಿ ಗ್ರಾಮೀಣ ವಲಯದ ಶಾಖೆಗಳಲ್ಲಿ ಇಂಥ ಹತ್ತು ಹಲವು ಆಯಾಮಗಳನ್ನು ಪರಿಗಣನೆಗೆ ತೆಗೆದುಕೊಂಡು, ಒಂದು ರೀತಿಯಲ್ಲಿ ಗ್ರಾಹಕರಿಗೆ ಶಿಕ್ಷಣವನ್ನೂ ನೀಡುತ್ತಾ ಸೇವೆ ಸಲ್ಲಿಸುವ ಕಾರ್ಯವನ್ನು ಬ್ಯಾಂಕ್ ಸಿಬ್ಬಂದಿ ಜತನದಿಂದ ನಿರ್ವಹಿಸಬೇಕಿದೆ. ಆಗ ಮಾತ್ರವೇ ಸೇವೆಯಲ್ಲಿ ತೃಪ್ತಿ ಮತ್ತು ಧನ್ಯತಾಭಾವ ಖಂಡಿತಾ ಲಭಿಸುತ್ತದೆ ಎನ್ನಲಡ್ಡಿಯಿಲ್ಲ.

(ಲೇಖಕರು ಮಾಜಿ ಮುಖ್ಯ ಸಾರ್ವಜನಿಕ
ಸಂಪರ್ಕಾಧಿಕಾರಿ, ಡಿಆರ್‌ಡಿಒ)

Leave a Reply

Your email address will not be published. Required fields are marked *