Wednesday, 11th December 2024

ಪರಿಪೂರ್ಣ ಮನುಷ್ಯನತ್ತ- ಜೀನ್ ಎಡಿಟಿಂಗ್

ವೈದ್ಯ ವೈವಿಧ್ಯ

drhsmohan@gmail.com

ವಿಜ್ಞಾನಿಗಳು ಈ ಜೀನ್ ಎಡಿಟಿಂಗ್ ತಂತ್ರಜ್ಞಾನವನ್ನು ಉಪಯೋಗಿಸಿ ಹೊಸ ರೀತಿಯ ವೈದ್ಯಕೀಯ ಚಿಕಿತ್ಸೆಗಳನ್ನು ಹುಟ್ಟು ಹಾಕಲು ಯತ್ನಿಸುತ್ತಿದ್ದಾರೆ. ಹಾಗೆಯೇ ಒಬ್ಬ ವ್ಯಕ್ತಿಯ ಆಕರ ಕೋಶಗಳನ್ನು ಹೊರ ತೆಗೆದು ಅದನ್ನು ಜೆನೆಟಿಕ್ ರೀತಿಯಲ್ಲಿ ಎಡಿಟ್ ಮಾಡಿ ಅವು ಫೀಟಲ್ ಹಿಮೋಗ್ಲೋಬಿನ್ ಉತ್ಪಾದಿಸುವಂತೆ ಮಾಡುತ್ತಿದ್ದಾರೆ.

ಕಳೆದ ನಾಲ್ಕಾರು ವರ್ಷಗಳಿಂದ ವೈದ್ಯಕೀಯ ವಿಜ್ಞಾನದಲ್ಲಿ ಹೆಚ್ಚು ಕೇಳಿ ಬರುತ್ತಿರುವ ಸಂಶೋಧನೆ ಜೀನ್ ಎಡಿಟಿಂಗ್. ಹಾಗಾದರೆ ಜೀನ್ ಎಡಿಟಿಂಗ್ ಎಂದರೇನು? ದೇಹದಲ್ಲಿರುವ ಜೀನ್‌ನಲ್ಲಿರುವ ಹಲವು ತೊಂದರೆಗಳನ್ನು ನಿವಾರಿಸಿ ಮನುಷ್ಯನ ಆರೋಗ್ಯ ಸುಧಾರಿಸಲು ಸಾಧ್ಯವೇ ಎಂದು ಜಗತ್ತಿ ನಾದ್ಯಂತ ಹಲವು ರೀತಿಯ ಪ್ರಯೋಗಗಳು, ಸಂಶೋಧನೆಗಳು ನಡೆಯು ತ್ತಿವೆ. ಈ ದಿಸೆಯಲ್ಲಿ ಕಳೆದ ಮೂರು ವರ್ಷಗಳ ಮೊದಲು ಹೊಸ ಪ್ರಯೋಗ ಮಾಡಿ ವಿವಾದಕ್ಕೆ ಸಿಲುಕಿದ ಚೀನಾದ ವಿಜ್ಞಾನಿ ಹೆಜಿ ಯಾಂಕುವೈ ಇವರ ಪ್ರಯೋಗ ಇಲ್ಲಿ ಉಲ್ಲೇಖನೀಯ.

ಚೀನಾದ ದಕ್ಷಿಣ ಭಾಗದ ಶೆನ್ ಜಿನ್‌ನ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದ ಈತ ಮೂರು ಚಿಕ್ಕ ವಯಸ್ಸಿನ ಬಾಲಕಿಯರ ಜೀನ್ ಗಳನ್ನು ಬದಲಿಸಿದ್ದ. ಭವಿಷ್ಯದಲ್ಲಿ ಏಡ್ಸ್ ಅಥವಾ ಹೆಚ್‌ಐವಿ ಕಾಯಿಲೆ ಬರದಿರಲಿ ಎಂದು ಅವರ ಭ್ರೂಣ ದಲ್ಲಿಯೇ ಜೆನೆಟಿಕ್ ಮಾರ್ಪಾಡು ಮಾಡಿದ್ದ. ಇದು ಜಗತ್ತಿನಾದ್ಯಂತ ಬಹಳ ದೊಡ್ಡ ವಿವಾದ ಉಂಟು ಮಾಡಿತ್ತು. ಈ ರೀತಿಯ ಜೀನ್ ಎಡಿಟಿಂಗ್ ತಂತ್ರಜ್ಞಾನವನ್ನು ನಾವು ಯಾವ ಹಂತದವರೆಗೆ ಉಪಯೋಗಿಸಬೇಕು, ಈ ಸಂಶೋಧನೆ ಆ ಎಲ್ಲೆಯನ್ನು ಮೀರಿಲ್ಲವೆ ಎಂಬ ಬಗ್ಗೆ ವಿಜ್ಞಾನಿಗಳಲ್ಲಿ ಬಹು ದೊಡ್ಡ ಚರ್ಚೆ ನಡೆಯಿತು.

ಚೀನಾದ ಅಧಿಕಾರಿಗಳು ಇದೊಂದು ಅನೈತಿಕ ಸಂಶೋಧನೆ ಎಂದು ಆತನಿಗೆ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ವಿಽಸಿದ್ದರು. ಹಾಗಾಗಿ ಈ ಜೀನ್ ಎಡಿಟಿಂಗ್ ತಂತ್ರಜ್ಞಾನವನ್ನು ಮಾನವನ ಒಳಿತಿಗೆ ಯಾವ ಹಂತದವರೆಗೆ ಉಪಯೋಗಿಸ ಬೇಕು ಎಂಬುದರ ಬಗ್ಗೆ ಇತ್ತೀಚಿಗೆ ಲಂಡನ್‌ನಲ್ಲಿ ಜರುಗಿದ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ವಿವಾರವಾಗಿ ಚರ್ಚಿಸ ಲಾಯಿತು. ಈ ಜೀನ್ ಎಡಿಟಿಂಗ್ ತಂತ್ರಜ್ಞಾನಕ್ಕೆ ಇತ್ತೀಚಿಗೆ ಹೊಸ ರೂಪ ಕೊಟ್ಟವರು ಅಮೆರಿಕಾದ ಕ್ಯಾಲಿಫೋರ್ನಿ ಯಾ ವಿಶ್ವವಿದ್ಯಾನಿಲಯದ ಜೆನ್ನಿಫರ್ ಡೌಡ್ನಾ ಹಾಗೂ ಬರ್ಲಿನ್‌ನ ಮ್ಯಾಕ್ಸ್ ಪ್ಲಾಂಕ್ ವಿಶ್ವವಿದ್ಯಾನಿಲಯದ ಎಮಾನುಯೆಲ್ ಚಾರ್ಪೆಂಟಿಯರ್ ಅವರು. ಅವರಿಗೆ ಮಾಲಿಕ್ಯುಲಾರ್ ಲೈಫ್ ಸೈನ್ಸ್ ಅನ್ನು ಕ್ರಾಂತಿಕಾರಕವಾಗಿಸಿದ್ದಕ್ಕೆ ೨೦೨೦ ರಲ್ಲಿ
ರಸಾಯನಶಾಸದ ನೊಬೆಲ್ ಪ್ರಶಸ್ತಿ ದೊರಕಿತು.

ಅವರು ಹುಟ್ಟು ಹಾಕಿದ ತಂತ್ರಜ್ಞಾನ ಕ್ರಿಸ್ಪ್ ಆರ್ -ಕ್ಯಾಸ್ ೯ ಎಂದು ಹೆಸರಾಗಿದೆ. ಇದರಲ್ಲಿ ಮಾಲಿಕ್ಯುಲಾರ್ ಕತ್ತರಿ ರೀತಿಯಲ್ಲಿ ವರ್ತಿಸಿ ನಿರ್ದಿಷ್ಟ ಸ್ಥಳದಲ್ಲಿ ಡಿಎನ್‌ಎ ಅನ್ನು ಇದು ಕತ್ತರಿಸಬಲ್ಲದು. ಈ ರೀತಿಯಲ್ಲಿ ವಿಜ್ಞಾನಿಗಳು ಸಸ್ಯ,
ಪ್ರಾಣಿ ಮತ್ತು ಮನುಷ್ಯರ ಜೀನ್‌ನಲ್ಲಿನ ಒಳಗಿನ ಗುಣಗಳನ್ನು ಬದಲಿಸಬಲ್ಲರು. ಮುಖ್ಯವಾಗಿ ಕಣ್ಣಿನ ಬಣ್ಣ, ಕಾಯಿಲೆ ಬರುವ ರಿಸ್ಕ್ ಇವುಗಳನ್ನು ಬದಲಿಸಬಲ್ಲರು. ಇದರಲ್ಲಿ ಹೊರಗಿನ ಬೇರೆ ಯಾವ ಪ್ರಾಣಿಗಳ ಜೀನ್‌ಗಳನ್ನೂ ಈ ಜೀವಿಗೆ ತುಂಬುವ ವಿದ್ಯಮಾನವಿಲ್ಲ.

ಹಾಗಾಗಿ ಚೀನಾದ ವಿಜ್ಞಾನಿ ಪ್ರಯತ್ನಿಸಿದ ಮೊದಲಿನ ಜೆನೆಟಿಕ್ ಮ್ಯಾನುಪುಲೇಶನ್‌ಗಿಂತ ಇದು ಭಿನ್ನ. ಕ್ರಿಸ್ಪ್ ಆರ್ ಕ್ಯಾಸ್ ೯ ಈ ತಂತ್ರಜ್ಞಾನದ ಬಗ್ಗೆ ಸ್ವಲ್ಪ ಗಮನಹರಿಸೋಣ. ಜೆನೆಟಿಕ್ ಎಡಿಟಿಂಗ್‌ನ ಹಲವು ಕ್ರಮಗಳಲ್ಲಿ ಇದು ಬಹಳ ಸುಲಭವಾದದ್ದು, ಬಹಳ ಕಡಿಮೆ ಖರ್ಚಿನದ್ದು ಹಾಗೂ ಹೆಚ್ಚು ನಿಖರವಾದದ್ದು. ಇದು ೧೯೯೦ ರ ದಶಕದಿಂದಲೇ ಬಳಕೆಗೆ ಬಂದಿದ್ದರೂ ಹೆಚ್ಚು ಜನಪ್ರಿಯವಾಗಿದ್ದು ಇತ್ತೀಚೆಗಷ್ಟೇ. ಇದು ಡಿಎನ್‌ಎಯ ಮ್ಯುಟೇಷನ್ ಅಳಿಸಲು ಅಥವಾ ಪುನಃ ಸರಿಯಾಗಿ ಬರೆಯಲು
ಅನುವು ಮಾಡಿಕೊಡುತ್ತದೆ. ಹಾಗಾಗಿ ಇದನ್ನು ಹಲವಾರು ಜೆನೆಟಿಕ್ ಮೂಲದಿಂದ ಬರುವ ಕಾಯಿಲೆಗಳಲ್ಲಿ ಚಿಕಿತ್ಸೆಯಾಗಿ ಬಳಸಬಹುದು ಅಥವಾ ಅಂತಹ ಕಾಯಿಲೆ ಬರದಿರುವಂತೆ ಮಾಡಬಹುದು ಎನ್ನಲಾಗಿದೆ.

ಅಂತಹ ಮುಖ್ಯ ಕಾಯಿಲೆಗಳೆಂದರೆ – ಸಿಸ್ಟಿಕ್ -ಬ್ರೋಸಿಸ್, ಡೌನ್ ಸಿಂಡ್ರೋಮ್, ಜೆನೆಟಿಕ್ ಮೂಲದ ಅಂಧತ್ವ
ಇತ್ಯಾದಿ. ಥಿಯರಿಟಿಕಲಿ ಈ ಕ್ರಿಸ್ಪ್ ಆರ್ ತಂತ್ರಜ್ಞಾನವನ್ನು ಭ್ರೂಣದ ಹಂತದಲ್ಲಿಯೇ ಉಪಯೋಗಿಸಬಹುದು. ಒಬ್ಬ ವ್ಯಕ್ತಿಯ ದೈಹಿಕ, ಮಾನಸಿಕ ಹಾಗೂ ಮಾಲಿಕ್ಯುಲಾರ್ ಟ್ರೇಟ್‌ಗಳನ್ನು ದೃಢೀಕರಿಸಲು ಆ ಹಂತದಲ್ಲಿ ಉಪಯೋಗಿಸಬಹುದು.
ಸಿಕಲ್ ಸೆಲ್ ಕಾಯಿಲೆಗೆ ಪದೇ ಪದೇ ಮೂಳೆಯ ಅಸ್ತಿಮಜ್ಜೆಯ ಕಸಿ ಚಿಕಿತ್ಸೆ ಮಾಡಬೇಕಾಗುತ್ತದೆ.

ಅಂತಹವರಿಗೆ ಈ ಚಿಕಿತ್ಸೆ ಮಾಡಿದಾಗ ಮೂಳೆ ಅಸ್ತಿಮಜ್ಜೆಯ ಕಸಿ ಅವಶ್ಯವಿರುವುದಿಲ್ಲ. ಕ್ರಿಸ್ಪ್ ಆರ್ ತಂತ್ರಜ್ಞಾನ ಹೇಗೆ ಕೆಲಸ
ಮಾಡುತ್ತದೆ?: ಒಂದು ದಶಕದ ಮೊದಲು ಜೆನ್ನಿಫರ್ ಡೌಡ್ನಾ ಅವರು ಪೆಟ್ರಿ ಡಿಷ್‌ನಲ್ಲಿನ ಬ್ಯಾಕ್ಟೀರಿಯಾಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದರು. ಜೀವ ರಸಾಯನ ಶಾಸeಯಾದ ಆಕೆ ಈ ಬ್ಯಾಕ್ಟೀರಿಯಾಗಳು ವೈರಸ್‌ಗಳ ಸೋಂಕನ್ನು ಹೇಗೆ
ಎದುರಿಸುತ್ತವೆ ಎಂಬುದನ್ನು ಕಂಡುಕೊಂಡರು.

ದೇಹವನ್ನು ಈಗಾಗಲೇ ಆಕ್ರಮಿಸಿದ್ದ ಸೂಕ್ಷ್ಮ ಜೀವಿಗಳ ಡಿಎನ್‌ಎ ಸೀಕ್ವೆನ್ಸ್ ಅನ್ನು ಆ ಬ್ಯಾಕ್ಟೀರಿಯಾಗಳು ಸರಿಯಾಗಿ ನೆನಪಿಟ್ಟುಕೊಂಡು ಭವಿಷ್ಯ ದಲ್ಲಿ ಅವು ದೇಹವನ್ನು ಆಕ್ರಮಿಸಿದರೆ ಅವುಗಳ ವಿರುದ್ಧ ಹೋರಾಡಲು ಸನ್ನದ್ಧವಾಗಿರುವಂತೆ
ದೇಹದ ಪ್ರತಿರೋಧ ವ್ಯವಸ್ಥೆಯನ್ನು ಅಣಿಗೊಳಿಸುತ್ತಿದ್ದವು. ಈ ಕ್ರಿಸ್ಪ್ ಆರ್ ಇದು ಬ್ಯಾಕ್ಟೀರಿಯಾ ಪ್ರತಿರೋಧ ವ್ಯವಸ್ಥೆಯ ಒಂದು ಭಾಗ. ಹೊರಗಿನಿಂದ ಆಕ್ರಮಿಸುವ ಸೂಕ್ಷ್ಮಜೀವಿಯ ಸ್ಪೇಸರ್ಸ್ ಎಂಬ ಜೆನೆಟಿಕ್ ಕೋಡ್‌ನ ತುಣುಕುಗಳನ್ನು ಈ ಬ್ಯಾಕ್ಟೀರಿಯಾಗಳು ಅಪಹರಿಸುತ್ತವೆ.

ನಂತರ ತಮ್ಮದೇ ಡಿಎನ್‌ಎಗೆ ಆ ತುಣುಕುಗಳನ್ನು ಸೇರಿಸಿ ಹೊಲಿದುಕೊಂಡು ಹೊಸ ಆರ್‌ಎನ್‌ಎ ಯನ್ನು ಹುಟ್ಟು
ಹಾಕುತ್ತವೆ. ಈ ಕ್ರಿಸ್ಪ್ ಆರ್ ವ್ಯವಸ್ಥೆಯಲ್ಲಿರುವ ಇನ್ನೊಂದು ಎಂಜೈಮ್ ಕ್ಯಾಸ್ ೯, ಇದು ವೈರಸ್ ಅನ್ನು ತುಂಡು ಮಾಡುತ್ತದೆ. ಪರಿಣಾಮ ಈ ವೈರಸ್‌ಗೆ ವೃದ್ಧಿಗೊಳ್ಳಲು ಸಾಧ್ಯವಾಗುವುದಿಲ್ಲ. ೨೦೧೨ ರಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಪ್ರೊಫೆಸರ್ ಆದ ಡಾ ಡೌಡ್ನಾ ಅವರು ಈ ತಂತ್ರಜ್ಞಾನದ ವಿವರಗಳನ್ನು ವಿವರಿಸುವ ಸಂಶೋಧನಾ ಪೇಪರ್ ಪ್ರಕಟಿಸಿದಾಗ ವೈದ್ಯಕೀಯ ಜಗತ್ತು ವಿಸ್ಮಯಗೊಂಡಿತು.

೧೯೮೭ ರಲ್ಲಿಯೇ ಜಪಾನಿನ ವಿಜ್ಞಾನಿಗಳು ಈ ಕೊಲೈ ಬ್ಯಾಕ್ಟೀರಿಯಾಗಳಲ್ಲಿರುವ ಡಿಎನ್‌ಎ ಸೀಕ್ವೆನ್ಸ್‌ನ ರಿಪಿಟಿಟಿವ್ ರೀತಿಯನ್ನು ಕಂಡುಹಿಡಿದಿದ್ದರು. ಆದರೆ ಅದನ್ನು ಹೇಗೆ ಸುಲಭವಾಗಿ ಮಾರ್ಪಾಡು ಮಾಡಿ ನಾವು ಈ ತರಹದ ಕಾಯಿಲೆಗಳಲ್ಲಿ ಉಪಯೋಗಿಸಬಹುದು ಎಂಬುದನ್ನು ಡೌಡ್ನಾ ಅವರು ಸ್ಪಷ್ಟಪಡಿಸಿದರು. ಎಲ್ಲರಿಗೆ ಗೊತ್ತಿರುವಂತೆ ೨೦೨೦ ರಲ್ಲಿ ಡೌಡ್ನಾ ಮತ್ತು ಎಮಾನುಲ್ಲಾ ಚಾರ್ಪೆಂಟಿಯರ್ ಇವರಿಗೆ ಜಂಟಿಯಾಗಿ ರಸಾಯನ ಶಾಸದ ಮೊಬೈಲ್ ಪ್ರಶಸ್ತಿಯನ್ನು ಜೀವನದ ಕೋಡ್ ಹೊಸದಾಗಿ ಬರೆಯುವ ಈ ಸಂಶೋಧನೆಗೆ ಕೊಡಲಾಯಿತು.

ಈ ಕ್ರಿಸ್ಪ್ ಆರ್ ತಂತ್ರಜ್ಞಾನವನ್ನು ಜೀವ ವಿಜ್ಞಾನಿಗಳು ಕುರಿಗಳಲ್ಲಿ ಉದ್ದ ಕೂದಲು, ಜಾಸ್ತಿ ಮಾಂಸ ಮತ್ತು ಉಣ್ಣೆ ಉತ್ಪಾದಿಸಲು ಚೀಸ್ ಮತ್ತು ಮೊಸರು ಮಾಡುವ ಬ್ಯಾಕ್ಟೀರಿಯಾಗಳನ್ನು ವೈರಸ್ ಸೋಂಕುಗಳಿಂದ ರಕ್ಷಿಸಲು, ಕಾಫಿ ಗಿಡಗಳಲ್ಲಿರುವ ಕೆಫೀನ್ ಜೀನ್ ಅನ್ನು ನಾಶ ಮಾಡಲು ಮತ್ತು ಇನ್ನು ಹಲವು ರಂಗಗಳಲ್ಲಿ ಉಪಯೋಗಿಸಿದ್ದಾರೆ. ಜೀನ್ ಎಡಿಟಿಂಗ್ ತರಹದ ಚಿಕಿತ್ಸೆಗಳಲ್ಲಿ ವೈಜ್ಞಾನಿಕ ವೃಂದಕ್ಕೆ ನೈತಿಕತೆಯ ಪ್ರಶ್ನೆ ಯಾವಾಗಲೂ ಎದುರಾಗುತ್ತದೆ. ಮಾನವ ಕಷ್ಟ ಅನುಭವಿಸುವುದನ್ನು ತಡೆಯುವುದು ಮತ್ತು ಜೀನ್‌ಗಳಲ್ಲಿ ಅನಗತ್ಯ ಹಸ್ತಕ್ಷೇಪ ಇವೆರಡರ ಮಧ್ಯೆ ಗೆರೆ ಎಳೆಯುವುದು ಹೇಗೆ ಎಂಬ ಸಂದಿಗ್ಧತೆ ವಿಜ್ಞಾನಿಗಳಿಗೆ ಯಾವಾಗಲೂ ಇದೆ.

ಈಗ ವಿಜ್ಞಾನಿಗಳು ಈ ಜೀನ್ ಎಡಿಟಿಂಗ್ ತಂತ್ರಜ್ಞಾನವನ್ನು ಉಪಯೋಗಿಸಿ ಹೊಸ ರೀತಿಯ ವೈದ್ಯಕೀಯ ಚಿಕಿತ್ಸೆಗಳನ್ನು ಹುಟ್ಟು ಹಾಕಲು ಯತ್ನಿಸುತ್ತಿದ್ದಾರೆ. ಉದಾ: ಗೆ ಸಿಕಲ್ ಸೆಲ್ ಅನಿಮಿಯಾ ಕಾಯಿಲೆಯಲ್ಲಿ ಒಂದು ಜೀನ್‌ನಲ್ಲಿ ಮಾತ್ರ ಡಿಫೆಕ್ಟ್ ಇರುವುದರಿಂದ ಹಿಮೋಗ್ಲೋಬಿನ್ ಉತ್ಪಾದನೆ ವ್ಯತ್ಯಯಗೊಂಡು ಅಂತಹ ವ್ಯಕ್ತಿಯಲ್ಲಿ ಆಮ್ಲಜನಕದ ತೀವ್ರ ರೀತಿಯ ಕೊರತೆ ಉಂಟಾಗಿ ತೀವ್ರ ರೀತಿಯ ಅನೀಮಿಯ – ಸಿಕಲ್ ಸೆಲ್ ಅನೀಮಿಯಾ ಕಾಯಿಲೆ ಬರುತ್ತದೆ. ಹಾಗೆಯೇ ಒಬ್ಬ ವ್ಯಕ್ತಿಯ ಆಕರ ಕೋಶಗಳನ್ನು ಹೊರ ತೆಗೆದು ಅದನ್ನು ಜೆನೆಟಿಕ್ ರೀತಿಯಲ್ಲಿ ಎಡಿಟ್ ಮಾಡಿ ಅವು ಫೀಟಲ್ ಹಿಮೋಗ್ಲೋಬಿನ್ ಉತ್ಪಾದಿಸು ವಂತೆ ಮಾಡಿ, ಕೆಂಪು ರಕ್ತ ಕಣಗಳು ದೇಹದಲ್ಲಿ ಉಂಟಾಗುವಂತೆ ಮಾಡುತ್ತಾರೆ.

ಸಾಮಾನ್ಯವಾಗಿ ಇಂತಹ ತೊಂದರೆ ಇರುವವರಲ್ಲಿ ಫೀಟಲ್ ಹಿಮೋಗ್ಲೋಬಿನ್ ಉತ್ಪಾದನೆಯ ಕ್ರಿಯೆ ಬಹಳ ಚಿಕ್ಕಂದಿ
ನಿಂದಲೇ ಇಲ್ಲವಾಗಿರುತ್ತದೆ. ಇದನ್ನು ಸಾಧ್ಯವಾಗಿಸಲು ಪ್ರಯೋಗಗಳು ಹಲವು ಕೇಂದ್ರಗಳಲ್ಲಿ ಜಗತ್ತಿನಾದ್ಯಂತ ನಡೆಯುತ್ತಿವೆ. ಹಾಗೆಯೇ ವೈದ್ಯರು, ಸಂಶೋಧಕರು ಈ ಜೀನೋಮ್ ಎಡಿಟಿಂಗ್ ತಂತ್ರಜ್ಞಾನವನ್ನು ಮಸ್ಕ್ಯುಲರ್ ಡಿಸ್ ಟ್ರೋಫಿ, ಕ್ಯಾನ್ಸರ್ ಡಯಾಬಿಟಿಸ್, ಹುಟ್ಟುವಾಗಲೇ ಇರುವ ಹಲವು ರೀತಿಯ ಅಂಧತ್ವ ಹಾಗೂ ಇನ್ನೂ ಹಲವು ಕಾಯಿಲೆ ಗಳಲ್ಲಿ ಉಪಯೋಗಿಸಲು ಪ್ರಯೋಗಗಳನ್ನು ಕೈಗೊಳ್ಳುತ್ತಿದ್ದಾರೆ. ಇನ್ನೂ ಮುಂದಿನ ಭವಿಷ್ಯದ ಹಲವು ಯೋಜನೆಗಳನ್ನು ವಿಜ್ಞಾನಿಗಳು ಈಗಾಗಲೇ ಯೋಚಿಸಿ ಅದನ್ನು ಕಾರ್ಯಗತ ಮಾಡಲು ಯತ್ನಿಸುತ್ತಿದ್ದಾರೆ.

ಗಗನಯಾತ್ರಿಗಳ ದೇಹದೊಳಗಿನ ವಾತಾವರಣವನ್ನು ಬದಲಿಸುವುದು ಒಂದು ವಿಚಾರ. ಮುಖ್ಯ ಉದ್ದೇಶ – ಅವರ ದೇಹವು ತೂಕ ರಹಿತವಾಗುವುದನ್ನು ತಪ್ಪಿಸುವುದು ಹಾಗೂ ಅವರ ದೇಹ ವಿಕಿರಣತೆಗೆ ಒಳಗಾಗುವುದನ್ನು ತಪ್ಪಿಸುವುದು. ಮಂಗಳ
ಅಥವಾ ಇತರ ಗ್ರಹಗಳೆಡೆಗೆ ಪ್ರಯಾಣಿಸುವ ಗಗನಯಾತ್ರಿಗಳಿಗೆ ಈ ತೂಕ ಕಡಿಮೆಯಾಗುವ ಅಂಶ ತುಂಬಾ ತೊಂದರೆ ಕೊಡುತ್ತದೆ.

ಪುರುಷ, ಮಹಿಳೆಯರ ಲಿವರ್ ಎಂಜೈಮ್‌ಗಳನ್ನು ರೂಪಾಂತರಿಸುವುದು. ರಾಸಾಯನಿಕ ಸಮರದಲ್ಲಿ ಉಪಯೋಗಿಸುವ ವಿಷಕಾರಕ ಅಂಶಗಳನ್ನು ದೇಹದಿಂದ ಹೊರಹಾಕಲು ಸನ್ನದ್ಧಗೊಳಿಸುವುದು. ಈ ರೀತಿಯಲ್ಲಿ ಮಿಲಿಟರಿಯಲ್ಲಿ ಉಪಯೋಗ
ವಾಗುವಂತೆ ಮಾನವ ದೇಹವನ್ನು ಉದ್ದೀಪನಗೊಳಿಸುವುದು ಈ ಪ್ರಯೋಗಗಳ ಮುಖ್ಯ ಉದ್ದೇಶ. ಬೇರೆ ಕೆಲವು ಪ್ರಾಣಿಗಳಿಗೆ ಸಾಧ್ಯವಿರುವಂತೆ ಮಾನವನಿಗೂ ಇನ್ -ರೆಡ್ ಮತ್ತು ಅಲ್ಟ್ರಾವಯಲೆಟ್ ಬೆಳಕುಗಳಲ್ಲೂ ನೋಡಲು ಸಾಧ್ಯವಾಗುವಂತೆ ಮಾನವನನ್ನು ಮಾರ್ಪಡಿಸುವುದು.

ಮೇಲೆ ತಿಳಿಸಿದ ಎಲ್ಲಾ ಬದಲಾವಣೆಗಳನ್ನು ಮಾನವನಲ್ಲಿ ಮಾಡಬೇಕೇ? ಯಾವುದನ್ನು ಮೊದಲು ಮಾಡಬೇಕು? ಯಾವುದೆಲ್ಲ ನೀತಿ ಶಾಸದ ವಿರುದ್ಧವಾಗಿವೆ? ಈ ಬಗೆಗೆ ಜಾಗತಿಕ ಮಟ್ಟದಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ.
ಮೊದಲು ತಿಳಿಸಿದ ಸಿಕಲ್ ಸೆಲ್ ಅನಿಮಿಯಾ ಕಾಯಿಲೆಗೆ ಜೀನ್ ಎಡಿಟಿಂಗ್ ತಾಂತ್ರಿಕತೆಯಿಂದ ತುಂಬಾ ಉಪಯೋಗವಿದೆ. ಆದರೆ ಅದು ತುಂಬಾ ದುಬಾರಿ. ಒಬ್ಬ ರೋಗಿಗೆ ಚಿಕಿತ್ಸೆ ಮಾಡಲು ಮಿಲಿಯನ್ ಡಾಲರ್ ಖರ್ಚಾಗಬಹುದು. ಈ ಕಾಯಿಲೆ ಆಫ್ರಿಕಾ ಖಂಡದ ದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಅಲ್ಲಿನ ಬಡ ಪ್ರಜೆಗಳಿಗೆ ಇಂತಹ ದುಬಾರಿ ವೆಚ್ಚ ತೆತ್ತು ಚಿಕಿತ್ಸೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಹಾಗಾದಾಗ ಅಭಿವೃದ್ಧಿ ಹೊಂದಿದ ಮತ್ತು ಹೊಂದದೆ ಇರುವ ದೇಶಗಳ ಆರೋಗ್ಯದ
ವಿಚಾರದಲ್ಲಿ ತೀವ್ರ ಅಸಮಾನತೆಯನ್ನು ಸೃಷ್ಟಿಸುತ್ತಿದೆಯೇ? ಎಂಬುದು ವಿಜ್ಞಾನಿ ರುತ್ ಗಾರ್ಡ್ ಅವರ ಅಭಿಮತ.