Wednesday, 18th September 2024

ಇವರು ಸಮಾನ ಸಂಹಿತೆ ಒಪ್ಪುತ್ತಾರೆ..?

ಯಕ್ಷ ಪ್ರಶ್ನೆ

ಡಾ.ದಯಾನಂದ ಲಿಂಗೇಗೌಡ

ವೈದ್ಯಕೀಯ ಉಪಕರಣಗಳನ್ನು ಅಥವಾ ರಕ್ತ ಸಂಗ್ರಹಣೆಗೆ ಉಪಯೋಗಿಸುವ ಚೀಲ ಗಳನ್ನು ತಯಾರಿಸುವ ಕಾರ್ಖಾನೆಗೆ ಎಂದಾದರೂ ಹೋಗಿದ್ದೀರಾ? ಅಲ್ಲಿ ಒಳಪ್ರವೇಶಿಸ ಬೇಕೆಂದರೆ ಪೂರ್ವಾನುಮತಿ ಪಡೆದಿರಬೇಕು ಮತ್ತು ಅಲ್ಲಿನ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. ಹೊರಗಿನ ಉಡುಪುಗಳನ್ನು ಬದಲಿಸಿ ಅಲ್ಲೇ ಕೊಡುವ ಉಡುಪು ಮತ್ತು ಚಪ್ಪಲಿ ಧರಿಸಿ (ಇಲ್ಲಿನ ಚಪ್ಪಲಿಗೂ ಹೊರಗವುಸು ಇರುತ್ತದೆ) ಕಾರ್ಖಾನೆ ಯೊಳಗೆ ಪ್ರವೇಶಿಸಬೇಕಾಗುತ್ತದೆ. ಕೆಲ ಕಾರ್ಖಾನೆಗಳಲ್ಲಂತೂ ಮೈಮೇಲಿನ ಧೂಳನ್ನು ತೆಗೆಯುವಂಥ ಸಣ್ಣ ಸಣ್ಣ ಕೋಣೆಗಳಿರುತ್ತವೆ.

ಅದರೊಳಗೆ ಕೆಲವು ನಿಮಿಷ ನಿಂತರೆ, ಜೋರಾಗಿ ಬೀಸುವ ಗಾಳಿಯು ಮೈಮೇಲಿನ ಧೂಳಿನ ಕಣಗಳನ್ನು ತೊಡೆದುಹಾಕುತ್ತದೆ. ಇಷ್ಟೆಲ್ಲ ಮಾಡಿದ ನಂತರವೂ ಕೆಲವೊಂದು ಕೋಣೆಗಳಿಗೆ ಪ್ರವೇಶ ನಿಷಿದ್ಧ. ಅಲ್ಲಿ ತಯಾರಿಸುವ ಸಾಧನಗಳನ್ನು ಸಂಪೂರ್ಣ ಸೂಕ್ಷ್ಮಾಣು ಮುಕ್ತಗೊಳಿಸಲಾಗುತ್ತದೆ. ತರುವಾಯ ಕೂಡ ಅವು ಸೂಕ್ಷ್ಮಾಣು ಮುಕ್ತ ವಾಗಿವೆ ಎಂಬುದನ್ನು ೩-೪ ದಿವಸಗಳವರೆಗೆ ಪರೀಕ್ಷಿಸಿ ನಂತರ ಹೊರಗಿನ ಗಾಳಿ ಒಳಸುಳಿಯದ ಪ್ಯಾಕ್‌ನಲ್ಲಿ ಅವನ್ನು ಆಸ್ಪತ್ರೆಗಳಿಗೆ ಕಳಿಸಲಾಗುತ್ತದೆ.

ಇಂಥ ಕಾರ್ಖಾನೆಗಳಲ್ಲಿನ ಎ.ಸಿ.ಗಳೂ ಸೂಕ್ಷ್ಮಾಣು ಗಳನ್ನು ಪ್ರತ್ಯೇಕಿಸುವ ವಿಶೇಷ ‘ಫಿಲ್ಟರ್’ ತಂತ್ರಜ್ಞಾನವನ್ನು ಹೊಂದಿರುತ್ತವೆ. ಯಾವುದೇ ಸೂಕ್ಷ್ಮಾಣು ಜೀವಿಗಳು ವೈದ್ಯಕೀಯ ಸಲಕರಣೆಗಳ ಮೂಲಕ ರೋಗಿಯನ್ನು ಅಮರಿಕೊಳ್ಳದಿರಲಿ ಎಂಬ ಆಶಯವೇ ಇಷ್ಟೆಲ್ಲ ಕಸರತ್ತುಗಳಿಗೆ ಕಾರಣ. ಹೀಗಾಗಿ ಇಂಥ ಚಟುವಟಿಕೆಗಳಿಗೆ ಖರ್ಚಾಗುವ ಹಣವೂ ಹೇರಳವಾಗಿರುತ್ತದೆ.

ಶಸ್ತ್ರಚಿಕಿತ್ಸೆ ಮಾಡುವ ಕೊಠಡಿಗಳನ್ನು ಪ್ರವೇಶಿಸುವಾಗಲೂ ಕಠಿಣ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಹೊರಗಿನ
ಬಟ್ಟೆಗಳನ್ನು ಕಳಚಿಟ್ಟು ಅಲ್ಲೇ ಸಿಗುವ ಬಟ್ಟೆಗಳನ್ನು ಧರಿಸಬೇಕು. ಸಾಮಾನ್ಯವಾಗಿ ಇವು ಅರ್ಧತೋಳಿನ ಉಡುಪು ಗಳಾಗಿರುತ್ತವೆ. ತುಂಬು ತೋಳಿನ ಉಡುಪು ಸೋಂಕು ನಿಯಂತ್ರಣಕ್ಕೆ ಪೂರಕವಾಗಿಲ್ಲವಾದ್ದರಿಂದ ಅದು ನಿಷಿದ್ಧ. ಇವೆಲ್ಲವು ಹೊರಗಿನ ಕೋಣೆಯದಾಯ್ತು. ಮುಖ್ಯ ಶಸ್ತ್ರಚಿಕಿತ್ಸಾ ಕೋಣೆಯನ್ನು ಪ್ರವೇಶಿಸಿದ ನಂತರ, ಸಂಪೂರ್ಣವಾಗಿ ಸೂಕ್ಷ್ಮಾಣು ಮುಕ್ತ ಬಟ್ಟೆಗಳನ್ನು ಪೂರ್ತಿ ಮೈಮುಚ್ಚುವಂತೆ ಧರಿಸಬೇಕು. ಈ ಬಟ್ಟೆಗಳನ್ನು ಮತ್ತು ಕೈಗವುಸುಗಳನ್ನು ಧರಿಸುವಾಗ ಹೊರಮೇಲ್ಮೈ ಮುಟ್ಟದೆ ಧರಿಸಬೇಕು.

ಒಂದು ಬಾರಿ ಹೀಗೆ ಸಜ್ಜಾದ ನಂತರ ಬಾಗಿಲು, ಗೋಡೆ ಸೇರಿದಂತೆ ಯಾವುದೇ ಉಪಕರಣವನ್ನು ಮುಟ್ಟುವಂತಿರುವುದಿಲ್ಲ,  ಕುಳಿತುಕೊಳ್ಳುವ ಹಾಗಿಲ್ಲ. ಮಧ್ಯೆ ಮೂತ್ರ ವಿಸರ್ಜಿಸ ಬೇಕೆಂದರೆ, ಮತ್ತೆ ಮೊದಲಿನಂತೆ ಎಲ್ಲಾ ಕ್ರಮಗಳನ್ನೂ ಕೈಗೊಂಡು, ಪುನಃ ಹೊಸಗೌನುಗಳನ್ನು ಧರಿಸಿ ಬರಬೇಕಾಗುತ್ತದೆ. ಈ ಪ್ರಕ್ರಿಯೆ ಪ್ರತಿರೋಗಿಗೂ ಪುನರಾವರ್ತನೆಯಾಗುತ್ತದೆ.

ಇಷ್ಟೆಲ್ಲ ಮಾಡುವುದು ಸೋಂಕಿನ ನಿಯಂತ್ರಣಕ್ಕಾಗಿ. ಅಂದರೆ ಶಸ್ತ್ರಕ್ರಿಯೆಯ ಸಂದರ್ಭದಲ್ಲಿ ರೋಗಿಯ ದೇಹದೊಳಗೆ ಯಾವುದೇ ಸೂಕ್ಷ್ಮಾಣುಗಳು ಪ್ರವೇಶಿಸಿದಂತಿರಲು ಆದಷ್ಟೂ ಇಂಥ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಇಷ್ಟೆಲ್ಲ ಕಠಿಣ ನಿಯಮ ಗಳನ್ನು ಪಾಲಿಸಿದ ಹೊರತಾಗಿಯೂ ರೋಗಿಗಳಿಗೆ ಕೆಲವೊಮ್ಮೆ ಸೋಂಕು ತಗಲುವುದುಂಟು. ಹೀಗಾದಾಗ ಲಕ್ಷಾಂತರ ರುಪಾಯಿ ಹೆಚ್ಚುವರಿ ಖರ್ಚು ರೋಗಿಯ ಹೆಗಲೇರುತ್ತದೆ.

ರೋಗಿಯ ಮೇಲೆ ಸೋಂಕಿನ ದಾಳಿಯಾಗುವುದನ್ನು ತಗ್ಗಿಸಲು ಅನೇಕ ವೈದ್ಯರು ಹಲವು ಅಧ್ಯಯನಗಳನ್ನು ಕೈಗೊಂಡಿದ್ದಾರೆ. ಒಳ ಉಡುಪುಗಳನ್ನು ಧರಿಸದೆಯೇ, ಆಸ್ಪತ್ರೆಯ ಸೂಕ್ಷ್ಮಾಣುಮುಕ್ತ ಗೌನುಗಳನ್ನಷ್ಟೇ ಧರಿಸಿ ಶಸ್ತ್ರಕ್ರಿಯೆ ಕೈಗೊಂಡರೆ ಸೋಂಕು ತಗ್ಗುತ್ತದೆಯೇ ಎಂಬುದನ್ನು ಅಧ್ಯಯನ ಮಾಡಿದವರೂ ಇದ್ದಾರೆ. ವೈದ್ಯರು ಹೊರಗಡೆ ಧರಿಸುವ ತುಂಬು ತೋಳಿನ ಬಿಳಿ ನಿಲುವಂಗಿಯನ್ನೂ ಸೋಂಕು ನಿಯಂತ್ರಣಕ್ಕೋಸ್ಕರ ಕೆಲವೊಂದು ಆಸ್ಪತ್ರೆಗಳಲ್ಲಿ ನಿಷೇಧಿಸಲಾಗಿದೆ.

ಏಕೆಂದರೆ ಇಂಥ ಉಡುಪುಗಳು ಸೋಂಕಿನ ಹರಡಿಕೆಗೆ ಪೂರಕ. ಈ ನಿಯಮಗಳೆಲ್ಲ ಸುಖಾಸುಮ್ಮನೆ ಬಂದಿದ್ದಲ್ಲ, ಸಾವಿರಾರು ಅಧ್ಯಯನದ ನಂತರವೇ ಅಳವಡಿಸಿ ಕೊಂಡಿರುವಂಥವು.ಇಷ್ಟೆಲ್ಲಾ ದೊಡ್ಡ ಪೀಠಿಕೆಗೆ ಕಾರಣವಾಗಿದ್ದು, ಕೇರಳದ ತಿರುವನಂತ ಪುರಂ ಮೆಡಿಕಲ್ ಕಾಲೇಜಿನಲ್ಲಿ ಇತ್ತೀಚೆಗೆ ಏಳು ಮುಸ್ಲಿಂ ವಿದ್ಯಾರ್ಥಿನಿಯರು ಇಟ್ಟ ಬೇಡಿಕೆ. ಶಸ್ತ್ರಚಿಕಿತ್ಸಾ ಕೊಠಡಿಯೊಳಗೆ ಧಾರ್ಮಿಕ ವಸ ಧರಿಸಿ ಹೋಗಲು ತಮಗೆ ಅವಕಾಶ ಕೊಡಬೇಕೆಂದು ಅವರು ಪ್ರಾಂಶುಪಾಲರನ್ನು ಕೇಳಿಕೊಂಡಿದ್ದಾರಂತೆ.

ಶಸ್ತ್ರಚಿಕಿತ್ಸೆಯ ಕೊಠಡಿಯಲ್ಲಿ ನೀಡುವ ವಸ್ತ್ರ ಅವರಿಗಿಷ್ಟವಿಲ್ಲವಂತೆ. ಪ್ರಾಂಶುಪಾಲರಿಗೆ ಇದೊಂದು ಶುದ್ಧ ಕಿಡಿಗೇಡಿತನ ಎನಿಸಿದರೂ, ‘ಸೂಕ್ಷ್ಮವಿಷಯ’ ಎಂದು ಸೋಂಕು ನಿಯಂತ್ರಣ ವಿಭಾಗಕ್ಕೆ ಪರಿಶೀಲನೆಗೆಂದು ಕಳುಹಿಸಿ ಕೊಟ್ಟಿದ್ದಾರೆ. ಇಂಥ ಬೇಡಿಕೆಗಳಿಗೆ ಅಲ್ಲೇ ಧೈರ್ಯದಿಂದ ಉಗಿದು ಉಪ್ಪಿನಕಾಯಿ ಹಾಕುವಷ್ಟು ಭದ್ರತೆಯನ್ನೂ ಸಮಾಜ ನೀಡುತ್ತಿಲ್ಲ ಎಂಬುದು ಇದರಿಂದ ತಿಳಿದುಬರುತ್ತದೆ. ಇದರ ಬಗ್ಗೆ ಚರ್ಚೆ ನಡೆಯದಿದ್ದುದೇಕೆ? ಮಾಧ್ಯಮಗಳೂ ಇದನ್ನು ನಿರ್ಲಕ್ಷಿಸಿದ್ದೇಕೆ? ಎಂಬುದೇ ಅರ್ಥವಾಗುತ್ತಿಲ್ಲ.

ಇಂಥ ಬೇಡಿಕೆಯನ್ನು ನೋಡಿದಾಗ, ಈ ವಿದ್ಯಾರ್ಥಿಗಳು ನಿಜಕ್ಕೂ ಮೈಕ್ರೋಬಯಾಲಜಿ, ಫಾರ್ಮಕೋಲಜಿ ಎಂಬ ವಿಷಯ ಗಳನ್ನು ಓದಿ ತೇರ್ಗಡೆಯಾಗಿದ್ದಾರಾ? ತೇರ್ಗಡೆ ಯಾಗಿದ್ದರೂ ಸೋಂಕು ನಿಯಂತ್ರಣ ಎಷ್ಟು ಕಷ್ಟ ಎಂಬುದು ಮನದಟ್ಟಾ ಗಿಲ್ಲವೇ? ಇವರೆಲ್ಲ ಕೇವಲ ವಾರ್ಷಿಕ ಪರೀಕ್ಷೆಗಷ್ಟೇ ಪುಸ್ತಕ ಓದಿದ್ದಾ? ಧಾರ್ಮಿಕ ಗ್ರಂಥವನ್ನು ಹೇಗೆ ಕಾರ್ಯಗತ ಮಾಡುವುದು ಎಂಬುದು ಗೊತ್ತಿದ್ದವರಿಗೆ, ವೃತ್ತಿಪರವಾಗಿ ತಾವು ಓದಿದ ವೈದ್ಯಕೀಯ ಪುಸ್ತಕದ ಹುರುಳುಗಳನ್ನು ಕಾರ್ಯಗತ ಮಾಡಬೇಕು ಎನಿಸಲಿಲ್ಲವೇ? ಎಂಬೆಲ್ಲಾ ಪ್ರಶ್ನೆ ಗಳು ಮೂಡುತ್ತವೆ.

‘ಧರ್ಮದ ಉಪದೇಶ’ ಮತ್ತು ‘ವಿಜ್ಞಾನ‘ ಎಂಬ ಪರಿಕಲ್ಪನೆಗಳು ವಿರುದ್ಧ ದಿಕ್ಕಿನಲ್ಲಿ ಇರುವ ಸಂದರ್ಭದಲ್ಲಿ. ಇವರೆಲ್ಲಾ ‘ಧರ್ಮವೇ ಮೇಲು’ ಎಂಬ ನಿರ್ಧಾರಕ್ಕೆ ಬರಲು ಕಾರಣವಾದರೂ ಏನು ಎಂಬ ಜಿಜ್ಞಾಸೆ ಇಲ್ಲಿ ಮೂಡುತ್ತದೆ. ‘ರೋಗಿಯ ಜೀವಕ್ಕಿಂತ ಧರ್ಮವೇ ಮೇಲು’ ಎಂದು ನಿರ್ಧರಿಸಿದವರ ಮೇಲೆ, ಧರ್ಮದ ಉಪದೇಶದ ಗಾಢಪ್ರಭಾವ ಮೂಡಿರುವುದು ಸ್ಪಷ್ಟ. ಕಣ್ಣಮುಂದಿರುವ ವಿಜ್ಞಾನದ ಸಾಕ್ಷ್ಯಗಳನ್ನು ಧಿಕ್ಕರಿಸುವಂತೆ ಇವರಿಗೆಲ್ಲ ಹೇಗೆ ಪ್ರಬಲವಾಗಿ ಉಪದೇಶಿಸಲಾಗುತ್ತದೆ, ತಲೆಗೆ ತುಂಬಲಾಗುತ್ತದೆ ಎಂಬುದು ಸಂಶೋಧನೆಗೆ ಅರ್ಹವಾದ ವಿಷಯವೇ ಸರಿ!

ಇವರು ಬೋಧಿಸುವ ಕ್ರಮದ ಸೂತ್ರ ಕಂಡುಕೊಂಡರೆ, ಉತ್ತಮ ನಾಗರಿಕರನ್ನು ತಯಾರಿಸಲು ಅದನ್ನೇ ಉಪಯೋಗಿಸಬಹುದು.
ಇಲ್ಲಿ ವೈದ್ಯರಾಗಲು ಬಂದ ಮೇಲೆ ಆ ವಿದ್ಯಾರ್ಥಿನಿಯರು ಆಧುನಿಕ ವೈದ್ಯಕೀಯದ ರೀತಿ-ರಿವಾಜುಗಳನ್ನು ಸಂಪೂರ್ಣ
ಒಪ್ಪಿಕೊಳ್ಳಲೇಬೇಕು. ‘ಅನುಕೂಲವಾದಾಗ ಒಪ್ಪಿಕೊಳ್ಳುತ್ತೇನೆ, ಇಲ್ಲವಾದಾಗ ಇಲ್ಲ’ ಎಂಬ ಧೋರಣೆ ಸರಿಯಲ್ಲ. ಸಂಗೀತವೇ
ನಿಷಿದ್ಧವಾಗಿರುವ ಧರ್ಮಕ್ಕೆ ಸೇರಿದವರಾಗಿದ್ದು ಸಂಗೀತ ನಿರ್ದೇಶಕರಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರು ವವರು ಇದ್ದಾರೆ. ಹಾಡು-ಕುಣಿತ ನಿಷಿದ್ಧ ಎಂದು ತಿಳಿದುಕೊಂಡ ಮೇಲೂ ಅವರದೇ ಧರ್ಮದವರು ಸ್ಟಾರ್ ನಟರಾಗಿ ಚಿತ್ರರಂಗವನ್ನು ಆಳುತ್ತಿದ್ದಾರೆ.

ಮದ್ಯಪಾನ ನಿಷಿದ್ಧ ಎಂದ ಮೇಲೂ ಮದ್ಯಸಾಮ್ರಾಜ್ಯ ನಡೆಸುತ್ತಿದ್ದರೆ, ಬಡ್ಡಿ ವ್ಯವಹಾರ ಸಲ್ಲ ಎಂದಿದ್ದರೂ ಬಡ್ಡಿ-ಚಕ್ರಬಡ್ಡಿಗಳ ವ್ಯವಹಾರದಲ್ಲಿ ವ್ಯಸ್ತರಾಗಿದ್ದಾರೆ. ಇಂಥ ಉದಾಹರಣೆಗಳು ಕಣ್ಣ ಮುಂದಿರುವಾಗ, ‘ಇದು ಧರ್ಮಕ್ಕೆ ವಿರುದ್ಧ, ಇದನ್ನು ಮಾಡುವುದಿಲ್ಲ’ ಎನ್ನುವುದು ಶುದ್ಧ ಬೂಟಾಟಿಕೆ, ಅಷ್ಟೇ. ವೈದ್ಯಕೀಯದ ನೀತಿ-ನಿಯಮಗಳನ್ನು ಒಪ್ಪಿಕೊಳ್ಳಲು ಈ
ವಿದ್ಯಾರ್ಥಿನಿಯರಿಗೆ ಸಾಧ್ಯವಿಲ್ಲವಾದರೆ, ವೈದ್ಯಕೀಯ ವ್ಯಾಸಂಗ ಬಿಟ್ಟು ತಮಗೊಪ್ಪುವ ವೃತ್ತಿಯನ್ನು ಇವರು ಮಾಡಿದರೆ ಒಳಿತು. ಅದನ್ನು ಬಿಟ್ಟು, ವೈದ್ಯಕೀಯದ ನೀತಿ- ನಿಯಮಗಳನ್ನೇ ಬದಲಿಸಿ ಎನ್ನುವುದು ದುಷ್ಟತನ.

ಧರ್ಮವನ್ನು ತೋರ್ಪಡಿಸುವ ವೇಷಭೂಷಣಗಳನ್ನು ವೈದ್ಯರು ಧರಿಸಬಾರದು, ಅದು ರೋಗಿಯ ಚಿಕಿತ್ಸೆಯ ಮೇಲೆ ಪರಿಣಾಮ ಬೀರಬಹುದು ಎಂಬ ಉದ್ದೇಶದಿಂದಲೇ ಈ ನಿಯಮವನ್ನು ಮಾಡಲಾಗಿದೆ. ವೈದ್ಯರು ಖಾಸಗಿಯಾಗಿ ವೃತ್ತಿ ಮಾಡುತ್ತಿದ್ದರೆ, ರೋಗಿಗಳಿಗೆ ಇವರ ಬಳಿ ಬಾರದಿರುವ ಆಯ್ಕೆಗಳಿರುತ್ತವೆ; ಆದರೆ ಇಂಥ ವೇಷಭೂಷಣ ಧರಿಸುವ ವೈದ್ಯರು ಸರಕಾರಿ ಕೆಲಸ ದಲ್ಲಿದ್ದರೆ, ಆಯ್ಕೆಗಳಿಲ್ಲದ ರೋಗಿ ಗಳು ಏನು ಮಾಡಬೇಕು? ಇಂಥ ವಿಚಾರಗಳಿಗೆ ಸುಧಾರಿತ ಮುಸ್ಲಿಂ ವೈದ್ಯರ ಕಡೆಯಿಂದ ಕಠೋರ ವಿರೋಧ ಬಾರದಿರುವುದು ದುಃಖದ ಸಂಗತಿ.

ಏಕೆಂದರೆ, ಇಂಥ ವಿಚಾರಗಳಿಗೆ ಬಾಹ್ಯ ಪ್ರತಿರೋಧದಿಂದ ಬದಲಾವಣೆಯಾಗುವುದಕ್ಕೆ ಬದಲು, ಅವರದೇ ಧರ್ಮದ ಪ್ರಗತಿಶೀಲ ವೈದ್ಯರಿಂದ ಆಂತರಿಕ ವಿಚಾರ ಮಂಥನವಾಗಿ ಬದಲಾವಣೆ ಮೂಡಿಬಂದರೆ ಒಳ್ಳೆಯದು. ಇಲ್ಲವಾದರೆ, ಇಂಥ ಕೆಲವೇ ಕ್ಷುಲ್ಲಕ ಜನರ ಅಭಿಪ್ರಾಯವೇ ಸಂಪೂರ್ಣ ಧರ್ಮದ ಅಭಿಪ್ರಾಯ ಎಂಬ ಸಾರ್ವತ್ರಿಕ ಗ್ರಹಿಕೆ ಮೂಡುವ ಅಪಾಯವಿದೆ. ಪ್ರಸಿದ್ಧ ಚಿತ್ರಸಾಹಿತಿ ಜಾವೇದ್ ಅಖ್ತರ್ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ, ‘ಸಮಾನ ನಾಗರಿಕ ಸಂಹಿತೆಯನ್ನು  ಡಪಂಥೀಯರು
ಮಾತ್ರವೇ ರಾಜಕೀಯ ಕಾರಣಗಳಿಗೆ ವಿರೋಧಿಸುತ್ತಿದ್ದಾರೆ; ಬಹುತೇಕ ಮುಸ್ಲಿಮರು ಈ ಸಂಹಿತೆಯ ಪರವಾಗಿದ್ದಾರೆ’ ಎಂದು ಹೇಳಿಕೆ ನೀಡಿದ್ದಾರೆ. ಅಂದರೆ, ಮುಸ್ಲಿಮರ ನಿಜದನಿ ಯಾವುದು ಎಂಬುದು ಗೊಂದಲವಾಗಿದೆ.

ಇದಕ್ಕೆ ಕಾರಣ, ಪ್ರಗತಿಪರ ಮುಸ್ಲಿಮರು ಮೌನವಾಗಿರುವುದು. ‘ಅಜ್ಞಾನಿಗಳ ಆಟವು ಜಗತ್ತಿನಲ್ಲಿ ಎಷ್ಟು ಕೆಟ್ಟದು ಮಾಡಲಿಕ್ಕೆ ಶಕ್ತವಾದುದೋ, ಜ್ಞಾನಿಗಳ ಮೌನವು ಕೂಡ ಅಷ್ಟೇ ಹಾನಿಮಾಡಬಲ್ಲದು’ ಎಂಬ ಮಾತು ಇಲ್ಲಿ ಪ್ರಸ್ತುತವಾಗಿ ಕಾಣುತ್ತದೆ.

ಕೊನೇಮಾತು: ಮೊಟ್ಟೆ ಹೊರಗಿನಿಂದ ಒಡೆದರೆ ಜೀವನಾಶ, ಅದೇ ಮೊಟ್ಟೆ ಒಳಗಿನಿಂದ ಒಡೆದರೆ ಜೀವಸೃಷ್ಟಿ.

Leave a Reply

Your email address will not be published. Required fields are marked *