Sunday, 13th October 2024

ಎಂಥ ನಾಯಕರನ್ನು ಆರಿಸಲು ಕಾಂಗ್ರೆಸ್ ಹೊರಟಿದೆ ?

ಅಶ್ವತ್ಥಕಟ್ಟೆ

ರಂಜಿತ್ ಎಚ್.ಅಶ್ವತ್ಥ

ರಾಜಕೀಯ ನಿಂತ ನೀರಲ್ಲ. ನಿತ್ಯ ಹರಿಯುವ ನದಿಯಿದ್ದಂತೆ. ಈ ಹರಿವಿನ ಜತೆಜತೆಯಲ್ಲಿ ಹೊಂದಾಣಿಕೆ ಮಾಡಿಕೊಂಡು, ಪಕ್ಷ ಸಂಘಟನೆಯನ್ನು ಮಾಡಿಕೊಂಡು ಹೋದಾಗ ಮಾತ್ರ ಆ ಪಕ್ಷಕ್ಕೆ ಅಸ್ವಿತ್ಥವಿರುತ್ತದೆ.

ಒಂದು ವೇಳೆ ಸಂಘಟನೆ ವಿಚಾರದಲ್ಲಿ ಅಪ್ಡೇಟ್ ಆಗದೇ ‘ಅಜ್ಜ ಹಾಕಿದ ಆಲದ ಮರಕ್ಕೆ’ ಜೋತುಬಿದ್ದರೆ, ಆ ಪಕ್ಷದ ಅಸ್ತಿತ್ವ ದಿನದಿಂದ ದಿನಕ್ಕೆ ಕ್ಷೀಣಿಸುತ್ತದೆ ಹೋಗುತ್ತದೆ. ರಾಷ್ಟ್ರದಲ್ಲೆಡೆ ಪಕ್ಷದ ಅಸ್ತಿತ್ವಕ್ಕಾಗಿ ಹೋರಾಡುತ್ತಿರುವ ಪ್ರಮುಖ ರಾಜಕೀಯ ಪಕ್ಷದ ಸಾಲಿನಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವುದು ಕಾಂಗ್ರೆಸ್. ಸ್ವಾತಂತ್ರ್ಯಪೂರ್ವದಲ್ಲಿ ಸ್ಥಾಪನೆ ಯಾದ ಕಾಂಗ್ರೆಸ್, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿ ಬಳಿಕ ದೇಶವನ್ನು ಸುಮಾರು ದಶಕಗಳ ಕಾಲ ಆಳಿತ್ತು.

ಆದರೀಗ ಕೇಂದ್ರ ಹಾಗೂ ರಾಜ್ಯ ರಾಜಕಾರಣದಲ್ಲಿ ತನ್ನ ಅಸ್ತಿತ್ವಕ್ಕಾಗಿ ಎಣಗಾಡುತ್ತಿದ್ದರೆ, ಕೆಲವು ರಾಜ್ಯಗಳಲ್ಲಿ ಅಧಿಕೃತ
ಪ್ರತಿಪಕ್ಷವಾಗುವುದಕ್ಕೂ ಬೇಕಿರುವ ಸ್ಥಾನಗಳನ್ನುಗಳಿಸಲು ಸಾಧ್ಯವಾಗದ ಸ್ಥಿತಿ ತಲುಪಿದೆ. ಗತವೈಭವದಿಂದ ಈ ರೀತಿ ಅವನತಿ ಯತ್ತ ಸಾಗುವುದಕ್ಕೆ ಕಾರಣಗಳು ಇಲ್ಲವೆಂದಲ್ಲ. ದೂರದೃಷ್ಟಿಯ ಕೊರತೆ, ಪಕ್ಷ ಸಂಘಟನೆಯಲ್ಲಿ ಅಸಡ್ಡೆ ಹಾಗೂ ಆಯಕಟ್ಟಿನ ಸ್ಥಳಗಳು ಕೆಲವರ ಸ್ವತ್ತು ಎನ್ನುವ ಮನಸ್ಥಿತಿ. ಈ ಎಲ್ಲವೂ ಇಂದಿನ ಪರಿಸ್ಥಿತಿಗೆ ಕಾರಣ.

ಸೋನಿಯಾ ಗಾಂಧಿ ಅವರ ಬಳಿಕ ಎಐಸಿಸಿ ಅಧ್ಯಕ್ಷರು ಯಾರು ಎನ್ನುವ ಪ್ರಶ್ನೆ ಏಳುವ ಮೊದಲೇ, ರಾಹುಲ್ ಗಾಂಽ ಅವರನ್ನು ಈ ಪಟ್ಟಕ್ಕೆ ಕಾಂಗ್ರೆಸ್ ಕೂರಿಸಿತ್ತು. ಇದಾದ ಬಳಿಕ ರಾಹುಲ್ ಗಾಂಧಿ ನಾಯಕತ್ವದಲ್ಲಿ ಕಾಂಗ್ರೆಸ್ ಸಾಲು ಸಾಲು ಸೋಲುಗಳನ್ನು
ಕಂಡ ಬಳಿಕ, ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದರು. ರಾಹುಲ್ ಗಾಂಧಿ ಬಳಿಕ ಈ ಸ್ಥಾನಕ್ಕೆ ಇನ್ಯಾರು ಎನ್ನುವ
ಪ್ರಶ್ನೆಗೆ ಪುನಃ ಉತ್ತರ ‘ಸೋನಿಯಾ ಗಾಂಧಿ’ಯಾಗಿತ್ತು.

ಇದೀಗ ಪುನಃ ರಾಹುಲ್ ಗಾಂಧಿಗೆ ಪಟ್ಟಕಟ್ಟಲು ತಯಾರಿ ನಡೆಸಿದ್ದಾರೆ. ಅನೇಕರು ನಾಯಕರು ಕಾಂಗ್ರೆಸ್‌ನ ಈ ವಂಶ
ರಾಜಕೀಯ ವನ್ನು ಬಹಿರಂಗವಾಗಿ ಟೀಕಿಸಿದರೂ, ಅದನ್ನು ಕೇಳುವ ಸ್ಥಿತಿಯಲ್ಲಿ ನಾಯಕರಿಲ್ಲ. ಹೋಗಲಿ, ರಾಹುಲ್ ಗಾಂಧಿ ಅವರು ಪುನಃ ಪಕ್ಷದ ರಾಷ್ಟ್ರಾಧ್ಯಕ್ಷರಾಗಿ ಪಕ್ಷದ ಸಂಘಟನೆಯನ್ನು ಸಮರ್ಥವಾಗಿ ನಿಭಾಯಿಸುತ್ತಾರೆ ಎನ್ನುವುದಿದ್ದರೆ ಒಪ್ಪಬಹುದು. ಆದರೆ ಅನೇಕ ಬಾರಿ ರಾಹುಲ್ ಗಾಂಧಿ ಅವರು ‘part time’  ರಾಜಕಾರಣಿ ಎನ್ನುವ ರೀತಿ ವರ್ತಿಸಿದ್ದಾರೆ.

ಆದ್ದರಿಂದ ಅವರಿಂದ ಹೆಚ್ಚೇನೂ ನಿರೀಕ್ಷೆ ಮಾಡುವಂತಿಲ್ಲ. ಕೇಂದ್ರ ಸರಕಾರದ ವಿರುದ್ಧ ಅಭಿಯಾನ ಆರಂಭಿಸುವುದಕ್ಕೆ ಹಲವು ಅವಕಾಶ ಸಿಕ್ಕಿದರೂ ಅವುಗಳನ್ನು ಸರಿಯಾದ ಮಾರ್ಗದಲ್ಲಿ ಬಳಸಿಕೊಳ್ಳದೇ, ಕೈಚೆಲ್ಲಿದರು. ಈಗಲೂ ದೆಹಲಿಯಲ್ಲಿ
ನಡೆಯುತ್ತಿರುವ ರೈತ ಪ್ರತಿಭಟನೆಗೆ ಸಂಬಂಧಿಸಿದಂತೆ ಟ್ವೀಟ್‌ಗೆ ಸೀಮಿತವಾಗಿದ್ದಾರೆಯೇ ಹೊರತು, ರೈತರ ಪರ ರಾಜಕೀಯವಾಗಿ ಧ್ವನಿ ಮೂಡಿಸುವ ಕೆಲಸವನ್ನು ಮಾಡುತ್ತಿಲ್ಲ.

ಎಐಸಿಸಿ ಪರಿಸ್ಥಿತಿ ಇದಾದರೆ, ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ ಶಿವಕುಮಾರ್ ಅವರು ರಾಹುಲ್ ಗಾಂಧಿ ಅವರಂತೆ ಪಾರ್ಟ್ ಟೈಮ್ ರಾಜಕಾರಣಿ ಏನಲ್ಲ. ಪಕ್ಷ ಸಂಘಟನೆಗೆ ಊರೂರು ಸುತ್ತುತ್ತಾರೆ. ವಿದ್ಯಾರ್ಥಿಯಾಗಿದ್ದಾಗಿನಿಂದಲೇ, ಜನಸಂಪರ್ಕ ಹೊಂದಿರುವು ದರಿಂದ ಜನರನ್ನು ಸೇರಿಸುವ ಹಾಗೂ ಪಕ್ಷಕ್ಕೆ ಅಗತ್ಯವಿರುವ ಎಲ್ಲ ‘ಬಲ’ವನ್ನು ನೀಡುವ ಶಕ್ತಿಯಿದೆ. ಇನ್ನು ಪಕ್ಷ ಸಮಸ್ಯೆಯಲ್ಲಿದೆ ಎನ್ನುವಾಗ ವೈಯಕ್ತಿಕಕ್ಕಿಂತ ಪಕ್ಷವೇ ಹೆಚ್ಚು ಎಂದು ಮೈಮೇಲೆ ಎಳೆದುಕೊಂಡಿರುವ ಉದಾಹರಣೆಗಳು ನಮ್ಮ ಮುಂದಿವೆ.

ಆ ಮಟ್ಟಿಗೆ ಡಿ.ಕೆ ಶಿವಕುಮಾರ್ ಅವರ ನಾಯಕತ್ವವನ್ನು ಬಹುತೇಕರು ಒಪ್ಪಿಕೊಳ್ಳುತ್ತಾರೆ. ಆದರೆ ಡಿಕೆಶಿ ಎಲ್ಲವನ್ನು ಮೈಮೇಲೆ ಎಳೆದುಕೊಂಡು ಪಕ್ಷದ ಕೆಲಸ ಮಾಡುವ ಜತೆಜತೆ ಅವರಲ್ಲಿರುವ ಹುಂಬತನ ಅನೇಕ ಬಾರಿ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುತ್ತದೆ. ರಾಜಕೀಯವನ್ನು ಪ್ರತಿಷ್ಠೆ ಹಾಗೂ ವೈಯಕ್ತಿಕವಾಗಿ ತಗೆದುಕೊಳ್ಳುವ ಡಿ.ಕೆ ಶಿವಕುಮಾರ್, ತಾನು ಹೇಳಿದ್ದೇ ಆಗಬೇಕು ಎನ್ನುವ ಹಠವೂ ಪಕ್ಷದಲ್ಲಿ ಅನೇಕ ಸಮಸ್ಯೆಯನ್ನು ಹುಟ್ಟುಹಾಕುತ್ತವೆ. ಈ ಎಲ್ಲದರೊಂದಿಗೆ ಅವರಿಗೆ ಇರುವ ಬಹುದೊಡ್ಡ ಹಿನ್ನಡೆ ಎಂದರೆ, ಅಕ್ರಮ ಆಸ್ತಿ ಪ್ರಕರಣ ದೊಂದಿಗೆ ಅವರ ಹೆಸರು ನಂಟಾಗಿರುವುದು ಹಾಗೂ ಇದೇ ಆರೋಪದಲ್ಲಿ ಜೈಲು ಪಾಲಾಗಿದ್ದು. ಸಿಬಿಐ, ಐಟಿ, ಇಡಿ ಸಂಸ್ಥೆಗಳಲ್ಲಿ ದೂರುಗಳು ದಾಖಲಾಗಿದ್ದು, ಯಾವಾಗಬೇಕಾದರೂ ನೋಟಿಸ್ ಬರಬಹುದು ಎನ್ನುವ ಆತಂಕದಲ್ಲಿಯೇ ಜೀವನ ಸಾಗಿಸುವಂತಾಗಿದೆ.

ಈ ಎಲ್ಲ ಪ್ರಕರಣಗಳು ರಾಜಕೀಯ ಪ್ರೇರಿತ, ಗುಜರಾತ್‌ನಿಂದ ರಾಜ್ಯಸಭೆಗೆ ಆಯ್ಕೆಯಾದ ಅಹ್ಮದ್ ಪಟೇಲ್ ಅವರನ್ನು ಗೆಲ್ಲಿಸಿ ಅಮಿತ್ ಶಾಗೆ ಮುಖಭಂಗವಾಗುವಂತೆ ಮಾಡಿದ್ದಕ್ಕೆ ಪ್ರತಿಯಾಗಿ ಈ ರೀತಿ ಕೇಸ್ ಹಾಕಲಾಗಿದೆ ಎಂದು ಡಿಕೆಶಿ ಹಾಗೂ ಕಾಂಗ್ರೆಸ್ ನಾಯಕರು ಸಮರ್ಥಿಸಿಕೊಂಡರೂ, ಸಾರ್ವಜನಿಕರಿಗೆ ಅದು ಪೂರ್ಣ ಪ್ರಮಾಣದಲ್ಲಿ ರೀಚ್ ಆಗುತ್ತಿಲ್ಲ ಎನ್ನುವುದನ್ನು
ಒಪ್ಪಬೇಕು.

ಈ ಎಲ್ಲ ಒಂದು ಮಾತಾದರೆ, ಇದೀಗ ಕರ್ನಾಟಕ ಯೂತ್ ಕಾಂಗ್ರೆಸ್‌ಗೆ ಕಾರ್ಯಾಧ್ಯಕ್ಷರನ್ನಾಗಿ ಕೂರಿಸಲು ನಡೆದಿರುವ ಸಿದ್ಧತೆ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಹೌದು, ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಚುನಾವಣೆಗಳು ಪಾರದರ್ಶಕವಾಗಿ ನಡೆಯಬೇಕು ಎನ್ನುವ ಉದ್ದೇಶದಿಂದ ಎಐಸಿಸಿ ಅಧ್ಯಕ್ಷರಾಗಿದ್ದ ವೇಳೆ ರಾಹುಲ್ ಗಾಂಧಿ ಅವರು ಯೂತ್ ಕಾಂಗ್ರೆಸ್‌ಗೆ ಚುನಾವಣೆ ಮೂಲಕವೇ ಅಧ್ಯಕ್ಷರ ಆಯ್ಕೆಯಾಗಬೇಕು ಎನ್ನುವ ಆದೇಶವನ್ನು ಹೊರಡಿಸಿದ್ದರು.

ಆದ್ದರಿಂದ ಕಳೆದ ತಿಂಗಳು ಯೂತ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು. ಯುವಕರನ್ನು ಸಂಘಟಿಸಲು ಅಗತ್ಯವಿರುವ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂದು ಚುನಾವಣೆ ನಡೆಸಿದರೆ, ಅದರಲ್ಲಿಯೇ ಕೋಟಿ ಕೋಟಿ ಖರ್ಚು ಮಾಡಿ ಗೆಲ್ಲುವ ಲೆಕ್ಕಾಚಾರದಲ್ಲಿದ್ದ ನಲಪಾಡ್ ಅವರನ್ನು ವರಿಷ್ಠರು ಚುನಾವಣೆಯಿಂದ ಅನರ್ಹಗೊಳಿಸಿದ್ದಾರೆ. ಆದ್ದರಿಂದ ರಕ್ಷ ರಾಮಯ್ಯ ಅವರು ಯೂತ್ ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗುವುದು ಅಧಿಕೃತವಾಗಿದೆ.

ಆದರೀಗ ಕಾಂಗ್ರೆಸ್‌ನಲ್ಲಿ ಆಗುತ್ತಿರುವ ಚರ್ಚೆ ಎಂದರೆ, ಅನರ್ಹಗೊಂಡಿರುವ ನಲಪಾಡ್ ಅವರನ್ನು ಪುನಃ ‘ಹಿಂಬಾಗಿಲ ಮೂಲಕ’ ಕಾರ್ಯಾಧ್ಯಕ್ಷರನ್ನಾಗಿ ಮಾಡಲು ಕೆಪಿಸಿಸಿ ನಾಯಕರು ಸಿದ್ಧತೆ ನಡೆಸಿಕೊಂಡಿದ್ದಾರೆ. ರಕ್ಷ ರಾಮಯ್ಯ ಸಿದ್ದರಾಮಯ್ಯ ಅವರ ಕಡೆಯ ಅಭ್ಯರ್ಥಿ ಎನ್ನುವ ಏಕೈಕ ಕಾರಣಕ್ಕೆ ನಲಪಾಡ್‌ರನ್ನು ಕಾರ್ಯಾಧ್ಯಕ್ಷರನ್ನಾಗಿ ಮಾಡಲು ಡಿ.ಕೆ ಶಿವಕುಮಾರ್ ಅವರು ಮುಂದಾಗಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ.

ಆದರೆ ನಾವಿಲ್ಲಿ ಗಮನಿಸಬೇಕಿರುವುದು, ಯೂತ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಕೂರಿಸಲು ಹೊರಟಿರುವ ವ್ಯಕ್ತಿಯ ಬಗ್ಗೆ. ಶಾಂತಿನಗರ ಶಾಸಕ ಎನ್.ಎ ಹ್ಯಾರಿಸ್ ಪುತ್ರ ನಲಪಾಡ್, ರಾಜಕೀಯಕ್ಕೆ ಅಧಿಕೃತವಾಗಿ ಬರುವ ಮೊದಲೇ, ದಾಂಧಲೆ ಪ್ರಕರಣಗಳು ದಾಖಲಾಗಿದ್ದವು. ಪಾರ್ಟಿ ವೇಳೆ ಹಲ್ಲೆ ಮಾಡುವುದು, ಕಾರು ಅಪಘಾತ, ಓವರ್‌ಟೇಕ್ ಮಾಡಿದರೆಂದು ಇನ್ನೊಬ್ಬರ ಮೇಲೆ ಹಲ್ಲೆ, ಹೀಗೆ ಸಾಲು ಸಾಲು ಆರೋಪಗಳನ್ನು ಹೊಂದಿರುವ ನಲಪಾಡ್‌ಗೆ ಕಾರ್ಯಾಧ್ಯಕ್ಷ ಸ್ಥಾನ ಕೊಟ್ಟು, ಅವರ
ಮಾತನ್ನು ಆಲಿಸಲು ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ಹೇಳಲು ವರಿಷ್ಠರು ಸಜ್ಜಾಗಿದ್ದಾರೆ.

ಯುಬಿ ಸಿಟಿಯ ಪಬ್ ಒಂದರಲ್ಲಿ ಪಾರ್ಟಿ ಮಾಡುವಾಗ ವಿದ್ವತ್ತ್ ಎನ್ನುವ ಯುವಕನೊಂದಿಗೆ ಕಿರಿಕ್ ಮಾಡಿಕೊಂಡು, ಜೈಲಿಗೆ ಹೋಗಿದ್ದ ನಲಪಾಡ್‌ಗೆ ಈ ಪ್ರಕರಣದಲ್ಲಿ ಈಗಲೂ ಕ್ಲೀನ್‌ಚಿಟ್ ಸಿಕ್ಕಿಲ್ಲ. ಆ ಪ್ರಕರಣ ಯಾವಾಗ ಬೇಕಾದರೂ, ನಲಪಾಡ್ ಕುತ್ತಿಗೆಗೆ ಉರುಳಾಗಬಹುದು. ಆದರೆ ಈ ರೀತಿ ಯೋಚಿಸದೇ, ತಮ್ಮ ಪ್ರತಿಷ್ಠೆಯುನ್ನು ಮುಖ್ಯವಾಗಿಟ್ಟುಕೊಂಡು ನಲಪಾಡ್‌ಗೆ ಈ ಆಯಕಟ್ಟಿನ ಸ್ಥಾನ ನೀಡಲು ಸಿದ್ಧತೆ ಆರಂಭವಾಗಿದೆ. ಅನೇಕರು ಯೂತ್ ಕಾಂಗ್ರೆಸ್ ಬಗ್ಗೆ ಗಂಭೀರವಾಗಿ ಚಿಂತಿಸಿಲ್ಲ. ಆದರೆ ಕಾಂಗ್ರೆಸ್‌ಗೆ ಬಹುದೊಡ್ಡ  ಶಕ್ತಿಯನ್ನು ನೀಡುವ ಹಾಗೂ ಇಂದಿನ ಪರಿಸ್ಥಿತಿಯಲ್ಲಿ ಯುವಕರನ್ನು ಪಕ್ಷದತ್ತ ವಾಲುವಂತೆ ಮಾಡುವ ಮಹತ್ವದ ಜವಾಬ್ದಾರಿ ಈ ವಿಭಾಗದ ಮೇಲಿದೆ.

ಡಿ.ಕೆ ಶಿವಕುಮಾರ್, ಕೃಷ್ಣಬೈರೇಗೌಡ, ಪ್ರಿಯಾಂಕ್ ಖರ್ಗೆ ಸೇರಿದಂತೆ ಅನೇಕ ನಾಯಕರು ಈ ಯೂತ್ ಕಾಂಗ್ರೆಸ್ ಮೂಲಕವೇ ಗುರುತಿಸಿಕೊಂಡು ಬಳಿಕ ಪಕ್ಷದ ಮುಖ್ಯ ವಿಭಾಗಕ್ಕೆ ಶಿಫ್ಟ್ ಆದರು. ಇನ್ನು ಗಂಭೀರ ಆರೋಪವನ್ನು ಹೊಂದಿರುವ ನಲಪಾಡ್
ಅವರಿಗೆ ಕಾರ್ಯಾಧ್ಯಕ್ಷ ಸ್ಥಾನ ಕೊಡುವ ಕಾಂಗ್ರೆಸ್ ನಿರ್ಧಾರ, ಯುವ ಸಮುದಾಯಕ್ಕೆ ಯಾವ ಸಂದೇಶವನ್ನು ರವಾನಿಸುತ್ತದೆ? ಏನೇ ತಪ್ಪು ಮಾಡಿದರೂ, ಹಣ ಹಾಗೂ ತೋಳ್ಬಲವೊಂದಿದ್ದರೆ ಯಾವ ಸ್ಥಾನವಾದರೂ ಸಿಗುತ್ತದೆ ಎನ್ನುವ ಕೆಟ್ಟ ಸಂದೇಶವನ್ನು ರವಾನಿಸುವ ಅಗತ್ಯವಿದೆಯೇ? ಕಾಂಗ್ರೆಸ್ ಈ ಕೆಟ್ಟ ತೀರ್ಮಾನದಿಂದ ಅನೇಕ ಯುವಕರು ಪಕ್ಷವನ್ನು ಬೆಂಬಲಿಸಬೇಕೇ? ಬೇಡವೇ ಎನ್ನುವ ಬಗ್ಗೆ ಪುನರಾಲೋಚನೆ ಮಾಡುವುದರಲ್ಲಿ ಅನುಮಾನವಿಲ್ಲ.

ಕಾಂಗ್ರೆಸ್ ಕಥೆ ಇದಾದರೆ, ಇನ್ನೊಂದೆಡೆ ದಿನದಿಂದ ದಿನಕ್ಕೆ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗಿರುವ ಬಿಜೆಪಿ
ತದ್ವಿರುದ್ಧ ಎನ್ನುವ ರೀತಿಯಲ್ಲಿ ಸಂಘಟನೆಯಲ್ಲಿ ತೊಡಗಿದೆ. ಅಧಿಕಾರ ಹಂಚಿಕೆ ವಿಷಯ, ಆಯಕಟ್ಟಿನಲ್ಲಿ ಜನರನ್ನು
ಕೂರಿಸುವ ವಿಷಯ ಬಂದಾಗ, ಇತ್ತೀಚಿಗೆ ಬಿಜೆಪಿ balanced ತೀರ್ಮಾನವನ್ನು ತಗೆದುಕೊಳ್ಳುತ್ತಿದೆ.

ಅಧಿಕಾರ ಅನುಭವಿಸಿದವರೇ ಅಽಕಾರದಲ್ಲಿ ಇರಬೇಕು ಎನ್ನುವುದನ್ನು ಬಿಟ್ಟು, ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಅವಕಾಶ ನೀಡಬೇಕು ಎನ್ನುವ ಅಂಶವನ್ನಿಟ್ಟುಕೊಂಡು ಆಯ್ಕೆಗಳನ್ನು ಮಾಡುತ್ತಿದ್ದಾರೆ. ಹಿರಿಯ-ಕಿರಿಯರ ಮಿಶ್ರಣದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡುವ ಮೂಲಕ, ಒಂದು ತಲೆಮಾರು ಕಳೆದರೂ, ಅದನ್ನು ನಿಭಾಯಿಸುವ ಎರಡನೇ ಹಂತದ ನಾಯಕರು ಸಿದ್ಧರಿರಬೇಕು ಎನ್ನುವುದು ಈ ತಂತ್ರದ ಉದ್ದೇಶ. ಪಕ್ಷ ಸಂಘಟನೆ ಮಾಡುವುದಕ್ಕೆ ನಾಯಕರು ಎಷ್ಟು ಮುಖ್ಯವೋ, ಅಷ್ಟೇ ಮುಖ್ಯ ಪಕ್ಷವನ್ನು ತಳಮಟ್ಟದಿಂದ ಗಟ್ಟಿಗೊಳಿಸುವ ಕಾರ್ಯಕರ್ತರು.

ಇದನ್ನು ಬಿಜೆಪಿ ಅರಿತು, ಹೊಸಬರಿಗೆ ಅವಕಾಶ, ಹಳಬರಿಗೆ ಹೆಚ್ಚುವರಿ ಜವಾಬ್ದಾರಿ ನೀಡುತ್ತಿದೆ. ನಮ್ಮ ರಾಜ್ಯದ ಉದಾಹರಣೆ ಯನ್ನೇ ತಗೆದುಕೊಂಡರೆ, ಕಳೆದ ವರ್ಷ ನಡೆದ ರಾಜ್ಯಸಭಾ ಚುನಾವಣೆಗೆ ಕರ್ನಾಟಕದಿಂದ, ಅಶೋಕ್ ಗಸ್ತಿ, ಈರಣ್ಣ ಕಡಾಡಿ ಯಂತ ಎಲೆಮರೆಕಾಯಿಗಳನ್ನು ನಿಲ್ಲಿಸಿತ್ತು. ಇನ್ನು ವಿಧಾನಪರಿಷತ್ ಚುನಾವಣೆಗೆ ಶಾಂತಾರಾಮ್ ಬುದ್ನಾ ಸಿದ್ದಿಯ ವರನ್ನು ಆರಿಸಿತ್ತು. ಆರಂಭದಲ್ಲಿ ಪಕ್ಷದ ನಾಯಕರಿಗೆ ಇದು ಇರಸುಮುರಸು ಎನಿಸಿದರೂ, ಪಕ್ಷದ ತಳಮಟ್ಟದಲ್ಲಿ ಕಾರ್ಯನಿರ್ವಹಿಸು ತ್ತಿರುವ ಕಾರ್ಯಕರ್ತನಿಗೆ, ‘ಇದೇ ರೀತಿ ಮುಂದೊಂದು ದಿನ ತಮಗೂ ಸ್ಥಾನಮಾನ ಸಿಗಬಹುದು’ ಎನ್ನುವ ನಿರೀಕ್ಷೆಯಲ್ಲಿ ಸಂಘಟನೆಯನ್ನು ಇನ್ನಷ್ಟು ಹೆಚ್ಚಿಸುವತ್ತ ಗಮನಹರಿಸುತ್ತಾನೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.

ಬಿಜೆಪಿ ಮೊದಲಿಂದಲೂ ಎರಡನೇ ಹಂತದ ನಾಯಕರನ್ನು ಬೆಳೆಸುವುದರಲ್ಲಿ ಹಿಂದೆ ಬಿದ್ದಿಲ್ಲ. ವಾಜಪೇಯಿ ಹಾಗೂ ಆಡ್ವಾಣಿ ಅವರು ಹಾಗೂ ಅವರ ಜತೆಯ ನಾಯಕರ ಅವಽ ಮುಗಿಯುತ್ತಾ ಬಂತು ಎನ್ನುವುದರಲ್ಲಿ ಮೋದಿ ಆಂಡ್ ಟೀಂ ಸಜ್ಜಾಗಿತ್ತು.
ಈ ತಂಡಕ್ಕೆ ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ಅನಂತಕುಮಾರ ಅವರು ಕೆಲ ದೂರ ಹೋಗಲು
ಸಹಕರಿಸಿತ್ತು. ಇದರ -ಲವಾಗಿಯೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ಎಲ್ಲ ಯೋಜನೆಗಳು
ಯಶಸ್ವಿಯಾಗಿತ್ತು. ಇದೀಗ ಮೋದಿ, ಶಾ ಅವರು ನಡ್ಡಾ ಅವರನ್ನು ರಾಷ್ಟ್ರೀಯ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿ, ಕರ್ನಾಟಕದ ಬಿ.ಎಲ್ ಸಂತೋಷ್‌ರಂಥವರನ್ನು ಮುನ್ನೆಲೆಗೆ ತರುತ್ತಿದ್ದಾರೆ.

ಇದಿಷ್ಟೇ ಅಲ್ಲದೇ, ಕರ್ನಾಟಕ ಸಿ.ಟಿ ರವಿ ಅಂತಹ ಎರಡನೇ ಹಂತ ನಾಯಕರಿಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನಕೊಟ್ಟಿದ್ದಾರೆ. ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ತೇಜಸ್ವಿ ಸೂರ್ಯ ಅವರನ್ನು ನೇಮಿಸಿದ್ದಾರೆ. ಆಯಕಟ್ಟಿನ ಸ್ಥಾನ ಕೊಟ್ಟು, ಈಗಿನಿಂದಲೇ ಅವರಿಗೆಲ್ಲ ’ಟ್ರೈನಿಂಗ್’ ಶುರು ಮಾಡಿದ್ದಾರೆ. ಇನ್ನೊಂದು ದಶಕದ ಹೊತ್ತಿಗೆ ಈ ತಂಡ ಪಕ್ಷವನ್ನು ಮುನ್ನಡೆಸುವುದಕ್ಕೆ ಬೇಕಿರುವ ಪಕ್ವವಾಗುತ್ತದೆ. ಸಂಘಟನೆ ಹಾಗೇ ಮುಂದುವರಿಯುತ್ತದೆ.

ಆದರೆ ಬಿಜೆಪಿಯ ಈ ತಂತ್ರಗಾರಿಕೆ ಶತಮಾನಗಳ ಇತಿಹಾಸ ಹೊಂದಿರುವ ಕಾಂಗ್ರೆಸ್‌ನಲ್ಲಿ ಕಾಣದಿರುವುದೇ ಆ ಪಕ್ಷದ
ಇಂದಿನ ಪರಿಸ್ಥಿತಿಗೆ ಕಾರಣ. ಅಂದ ಮಾತ್ರಕ್ಕೆ ಕಾಂಗ್ರೆಸ್ ನಾಯಕರಿಗೆ ಸಂಘಟನೆಯಲ್ಲಿ ಹಿನ್ನಡೆಯಾಗುತ್ತಿರುವುದಕ್ಕೆ ಕಾರಣ ತಿಳಿದಿಲ್ಲ ಎಂದಲ್ಲ. ಬೂತ್ ಮಟ್ಟದಿಂದ ಕೇಂದ್ರದ ಕಾರ್ಯಕಾರಣಿ ಸಭೆಯವರೆಗೆ, ನಾಯಕರು ಪಕ್ಷ ಸಂಘಟನೆಗೆ ಕಾರ್ಯ ಕರ್ತರು ಮುಖ್ಯ. ಈ ನಿಟ್ಟಿನಲ್ಲಿ ತಳಮಟ್ಟದಿಂದ ಪಕ್ಷವನ್ನು ಸಂಘಟಿಸಬೇಕು ಎಂದು ಹೇಳುವುದಷ್ಟೇ ಅಲ್ಲದೇ, ಆಫ್ ದಿ ರೆಕಾರ್ಡ್ ಹೇಳುವಾಗ, ಬಿಜೆಪಿಯಂತೆ ನಮ್ಮ ಪಕ್ಷವನ್ನು ಕೇಡರ್ ಬೇಸ್ ಪಕ್ಷವನ್ನಾಗಿ ರೂಪುಗೊಳಿಸುವ ಅಗತ್ಯವಿದೆ.

ಇಲ್ಲದಿದ್ದರೆ ಪಕ್ಷಕ್ಕಾಗಲಿ, ನಾಯಕರಿಗಾಗಲಿ ಭವಿಷ್ಯವಿಲ್ಲ ಎನ್ನುವುದನ್ನು ಒಪ್ಪಿಕೊಳ್ಳುತ್ತಾರೆ. ಕುಟುಂಬ ರಾಜಕಾರಣ, ಪ್ರಭಾವಿ ನಾಯಕರನ್ನು ಬಳಸಿಕೊಂಡು ಸಂಘಟನೆ ಮಾಡುವುದು ಅಸಾಧ್ಯ ಎನಿಸುವುದೆಲ್ಲ ಗೊತ್ತಿದ್ದರೂ, ಪಕ್ಷದ ಆಯಕಟ್ಟಿನ ಸ್ಥಳದಲ್ಲಿ
ಕೂರಿಸುವ ಸಮಯ ಬಂದಾಗ ಮಾತ್ರ, ಅದೇ ಹಳೇ ಚಾಳಿಗೆ ಬೀಳುವುದು ಕಾಂಗ್ರೆಸ್‌ನ ಬಹುದೊಡ್ಡ ಸಮಸ್ಯೆಯಾಗಿದೆ.

ಪಕ್ಷ ಎಲ್ಲಿ ಎಡವುತ್ತಿದೆ ಎಂದು ಗೊತ್ತಿಲ್ಲದಿದ್ದರೆ, ಅದನ್ನು ಗೊತ್ತು ಮಾಡಬಹುದು. ಆದರೆ ಎಲ್ಲವೂ ಗೊತ್ತಿದ್ದೂ, ಗೊತ್ತಿಲ್ಲದಂತೆ ನಟಿಸಿದರೆ ಅದನ್ನು ಸರಿಪಡಿಸುವುದು ಯಾರಿಂದಲೂ ಸಾಧ್ಯವಿಲ್ಲ. ಸಾಲು ಸಾಲು ಹೊಡೆತಗಳನ್ನು ತಿಂದ ಬಳಿಕವೂ ಇದನ್ನು ಸರಿಪಡಿಸಿಕೊಳ್ಳುವ ಪ್ರಯತ್ನವನ್ನು ಮಾಡದೇ, ತಾನು ಮಾಡಿದ್ದೇ ಸರಿ ಎನ್ನುವ ರೀತಿಯಲ್ಲಿ ಹೋದರೆ ಭವಿಷ್ಯದಲ್ಲಿ, ನಷ್ಟದ ಕಡೆ ಹೆಚ್ಚು ಭಾರ ಬೀಳುವುದರಲ್ಲಿ ಸಂಶಯವೇ ಇಲ್ಲ.

ಅಂದಮಾತ್ರಕ್ಕೆ ಕಾಂಗ್ರೆಸ್‌ನಲ್ಲಿರುವ ನಾಯಕರಿಗೆ ಈ ಎಲ್ಲದರ ಅರಿವು ಇಲ್ಲವೆಂದಲ್ಲ. ಎಲ್ಲ ಆಗುಹೋಗುಗಳ ಬಗ್ಗೆ ಗೊತ್ತಿದ್ದರೂ, ಗೊತ್ತಿಲ್ಲದವರಂತೆ ಮುಗ್ಗರಿಸುವ ಕೆಲಸ ಮಾಡುವುದು ಭವಿಷ್ಯದ ಕಾಂಗ್ರೆಸ್‌ಗೆ ಪೆಟ್ಟು ಬೀಳಲಿದೆ ಎನ್ನುವುದನ್ನು ಗಮನಿಸ
ಬೇಕು. ಇಲ್ಲದಿದ್ದರೆ, ಬಿಜೆಪಿಯ ಕೇಡರ್ ಬೇಸ್ ಹಾಗೂ ಕಾಂಗ್ರೆಸ್‌ನ ನಾಯಕತ್ವದ ಕೊರತೆಯಲ್ಲಿ ಯಾವುದಕ್ಕೆ ‘ಭವಿಷ್ಯ’ವಿದೆ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ.