Saturday, 14th December 2024

ಕಾಂಗ್ರೆಸ್ ಪಕ್ಷವನ್ನು ದೇವರೇ ಕಾಪಾಡಬೇಕು

ಸಂಗತ

ವಿಜಯ್‌ ದರ್‌ಡ

ಪಾರ್ಟಿ ಬಹಳ ವೇಗದಲ್ಲಿ ಸಂಕುಚಿತಗೊಳ್ಳುತ್ತಿದೆ. ರಾಜ್ಯಸಭೆಯಲ್ಲಿ ಕೆಲವು ಸೀಟುಗಳಿರುವಾಗ ಆರು ವರ್ಷಗಳಿಗೇಕೆ ಅದನ್ನು ತೆಗೆದುಕೊಳ್ಳಬಾರದು ಎಂದು ಕೆಲವರು ಭಾವಿಸಿದ್ದರು. ಆಮೇಲೇನಾಗುತ್ತೋ ಏನೋ ಎಂಬ ಅನುಮಾನದ ಭಾವ ಅವರದ್ದು.

ರಾಜ್ಯಸಭಾ ಚುನಾವಣೆ ಮುಗಿದಿದೆ. ಬಹುತೇಕ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಾಲ್ಕು ರಾಜ್ಯಗಳಲ್ಲಿ ೧೬ ಸ್ಥಾನಗಳಿಗೆ ಈ ಚುನಾವಣೆ ನಡೆದಿತ್ತು. ಭಾರತೀಯ ರಾಜಕೀಯ ಕ್ಷಿತಿಜದಲ್ಲಿ ಕುಟಿಲತೆಗೆ ಕೊರತೆಯಿಲ್ಲ. ತಮ್ಮ ಪ್ರತಿಸ್ಪರ್ಧಿಯ ಕಾಲಡಿ ಇರುವ ಕಂಬಳಿ ಎಳೆದು ಆತ ಮುಗ್ಗರಿಸು ವಂತೆ ಮಾಡುವ ತಂತ್ರಗಾರಿಕೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಹೊಸ ಹೊಸ ತಂತ್ರ ಗಳನ್ನು ಆಗಿಂದಾಗ್ಯೆ ಹೂಡುತ್ತಲೇ ಇರುತ್ತವೆ. ಈ ಬಾರಿಯೂ ಅದೇ ಆಯಿತು. ಗೆದ್ದ ಎಲ್ಲರಿಗೂ ನನ್ನ ಹೃದಯಾಂತರಾಳದ ಅಭಿನಂದನೆಗಳು.

ಚುನಾಯಿತರಾದ ಎಲ್ಲರೂ ಮೇಲ್ಮನೆಯ ಘನತೆ ಗೌರವಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತೀರಿ ಎಂದು ನಂಬಿದ್ದೇನೆ. ನಾನು ಕೂಡ ಮೇಲ್ಮನೆ ಸದಸ್ಯನಾಗಿ 18 ವರ್ಷ ಕೆಲಸ ಮಾಡಿದ್ದೇನೆ. ರಾಜ್ಯಸಭೆ ಎಂದರೆ ಅದು ಬುದ್ಧಿಜೀವಿಗಳ ವೇದಿಕೆ ಎಂಬುದು ನನ್ನ ನಂಬಿಕೆ. ಸೋಲು ಮತ್ತು ಗೆಲುವಿಗೆ ರಾಜಕೀಯದಲ್ಲಿ ಅನೇಕ ಕಾರಣಗಳಿರುತ್ತವೆ. ನಾನು ಇಲ್ಲಿ ಚರ್ಚೆ ಮಾಡ ಬೇಕಾಗಿರುವ ವಿಷಯ ಅದಲ್ಲ. ಒಂದು ರಾಜ್ಯಕ್ಕೆ ಸೇರದ ಹೊರಗಿನ ರಾಜ್ಯ ವ್ಯಕ್ತಿಯನ್ನು ರಾಜ್ಯಸಭಾ ಸ್ಥಾನಕ್ಕೆ ನಾಮನಿರ್ದೇಶನ ಮಾಡುವ ಪರಿಪಾಠ ಯಾತಕ್ಕೆ ಶುರುವಾಯಿತು, ಇದು ಸರಿಯೇ? ಹೌದು, ರಾಜ್ಯಸಭಾ ಸೀಟುಗಳ ರಾಜ್ಯವಾರು ಹಂಚಿಕೆ ಮಾಡುವಾಗ ಆಯಾ ರಾಜ್ಯಗಳ ಅರ್ಹರಿಗೆ ಪ್ರಾತಿನಿಧ್ಯ ಸಿಗಬೇಕು ಎಂಬ ಆಶಯ ಅದರಲ್ಲಿ ಅಡಗಿರುವುದು ನಿಜ.

ನೇರವಾಗಿ ಜನರಿಂದ ಚುನಾಯಿತರಾಗಿ ಲೋಕಸಭೆಗೆ ಪ್ರವೇಶ ಪಡೆಯಲು ಸಾಧ್ಯವಾಗದ ಅರ್ಹರನ್ನು ರಾಜ್ಯಸಭೆಯ ಮೂಲಕ ರಾಜಕೀಯ ವರ್ತುಲಕ್ಕೆ ಸೇರಿಸಿಕೊಳ್ಳುವುದು ಒಂದು ಪರಿಪಾಠ. ಇದಲ್ಲದೇ ವಿವಿಧ ಕ್ಷೇತ್ರಗಳ 12 ಪರಿಣಿತ ವ್ಯಕ್ತಿಗಳನ್ನು ರಾಜ್ಯ ಸಭೆಗೆ ನಾಮನಿರ್ದೇಶನ ಮಾಡುವ ಅಧಿಕಾರವನ್ನು ಕೂಡ ರಾಷ್ಟ್ರಪತಿಗಳಿಗೆ ಕೊಡಲಾಗಿದೆ. ಆದರೆ ರಾಜಕೀಯ ಪಕ್ಷಗಳು ಈ ರಾಜ್ಯಸಭೆಯ ಪರಿಕಲ್ಪನೆಯ ಜತೆ ಆಟವಾಡುತ್ತಿzರೆಂದೆನಿಸುತ್ತದೆ. ಈ ಬಾರಿ ಕಾಂಗ್ರೆಸ್ ಇದನ್ನು ಖಂಡನೀಯವೆನ್ನಿಸುವ ರೀತಿ
ಯಲ್ಲಿ ಮಾಡಿತೋರಿದೆ.

ಹೌದು ಎಲ್ಲ ಪಕ್ಷಗಳಲ್ಲಿಯೂ ಕೇಂದ್ರ ಸರಕಾರದ ಮಟ್ಟದಲ್ಲಿ ಕೆಲಸ ಮಾಡಬೇಕಾದ ಅರ್ಹತೆ ಇರುವ ಮಂದಿ ಕೆಲವರಾದರೂ ಇದ್ದೇ ಇರುತ್ತಾರೆ, ಅವರನ್ನು ರಾಜ್ಯಸಭೆಯ ಮೂಲಕ ಮುನ್ನೆಲೆಗೆ ತರುವುದು ಸಮರ್ಥನೀಯವೂ ಹೌದು. ಉದಾಹರಣೆಗೆ ಕಾಂಗ್ರೆಸ್ ಪಕ್ಷ ಡಾ||ಮನಮೋಹನ್ ಸಿಂಗ್‌ರನ್ನು ಅಸ್ಸಾಮಿನಿಂದ ರಾಜ್ಯಸಭೆಗೆ ಆಯ್ಕೆ ಮಾಡಿಸಿ ಕಳಿಸಿತ್ತು. ಇಂತಹ ಅನೇಕ  ಉದಾಹರಣೆಗಳಿವೆ.

ಒಬ್ಬ ವ್ಯಕ್ತಿಯಲ್ಲಿ ಬೌದ್ಧಿಕ ಸಾಮರ್ಥ್ಯವಿzಗ ಯಾರೂ ಪ್ರಶ್ನಿಸುವುದಿಲ್ಲ. ಆದರೆ ಕೇಂದ್ರದಲ್ಲಿರುವ ನಾಯಕರುಗಳು ರಾಜ್ಯ ದಲ್ಲಿರುವ ಅರ್ಹವ್ಯಕ್ತಿಗಳನ್ನು ಮೂಲೆಗುಂಪು ಮಾಡಿ, ತಮಗೆ ಪರಾಕು ಹೇಳುವ ಹೊಗಳುಭಟರನ್ನು ಇಂತಹ ಆಯಕಟ್ಟಿನ ಜಾಗಕ್ಕೆ ಆಯ್ಕೆ ಮಾಡಲು ಹೊರಟರೆ ಏನೆನ್ನಬೇಕು? ಮಹಾರಾಷ್ಟ್ರದ ನಾಯಕ ಮುಕುಲ್ ವಾಸ್ನಿಕ್‌ಗೆ ಮಹಾರಾಷ್ಟ್ರದಿಂದಲ್ಲ ರಾಜಸ್ಥಾನದಿಂದ ಟಿಕೆಟ್ ಕೊಡಲಾಯ್ತು. ಅವರನ್ನು ಮಹಾರಾಷ್ಟದಿಂದಲೇ ಕಣಕ್ಕಿಳಿಸಲು ಯಾಕೆ ಸಾಧ್ಯವಾಗಲಿಲ್ಲ.

ರಾಜಸ್ಥಾನದಿಂದ ಇಮ್ರಾನ್ ಪ್ರತಾಪಗರಿ ಅವರನ್ನು ಕಣಕ್ಕಿಳಿಸುವ ಆಲೋಚನೆ ನಡೆದಿದ್ದಾಗ ಗೆಹ್ಲೋಟ್ ನಮಗೆ ಇಲ್ಲಿ ಮುಶಾ ಯಿರಾ ಮತ್ತು ಖವ್ವಾಲಿ ಹಾಡುವವರು ಬೇಕಿಲ್ಲ ಎಂದು ಬಹಳ ಸ್ಪಷ್ಟವಾಗಿ ಹೇಳಿದ್ದರು. ಹಾಗಾಗಿ ಹೈಕಮಾಂಡ್ ಪ್ರತಾಪಗರಿಗೆ ಮಹಾರಾಷ್ಟದಿಂದ ಟಿಕೆಟ್ ಕೊಟ್ಟಿತು. ನನಗೆ ಯಾರ ಬಗ್ಗೆಯೂ ಇಷ್ಟಾನಿಷ್ಟಗಳಿಲ್ಲ ಎಂಬುದನ್ನು ಮೊದಲು ಸ್ಪಷ್ಟಪಡಿಸು ತ್ತೇನೆ. ನಾನು ಅರ್ಹತೆಯ ಬಗ್ಗೆ ಮಾತ್ರ ಮಾತನಾಡಬಯಸುತ್ತೇನೆ. ಒಬ್ಬ ವ್ಯಕ್ತಿಗೆ ರಾಜ್ಯಸಭೆ ಟಿಕೆಟ್ ಕೊಡುವಾಗ, ಆತ ಹಿಂದಿನ ಬಾರಿ ಲೋಕಸಭೆಗೆ ಸ್ಪರ್ಧಿಸಿ ಠೇವಣಿ ಕಳೆದುಕೊಂಡ ವ್ಯಕ್ತಿ ಎಂಬುದನ್ನು ಏಕೆ ಹೈಕಮಾಂಡ್ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ.

ಪಕ್ಷದ ಹಿರಿಯ ನಾಯಕರ ಕೃಪಾಕಟಾಕ್ಷ ಹೊಂದುವುದು ವ್ಯಕ್ತಿಗೆ ಅರ್ಹತೆ ತಂದುಕೊಡುವ ಸಂಗತಿಯಲ್ಲ. ರಣದೀಪ ಸುರ್ಜೇ ವಾಲಾರನ್ನು ರಾಜ್ಯಸಭೆಗೆ ತರುವ ಅಗತ್ಯತೆಯನ್ನು ನಾನು ಅರ್ತಮಾಡಿಕೊಳ್ಳಬ, ಆದರೆ ಉತ್ತರ ಪ್ರದೇಶದಿಂದ ಪ್ರಮೋದ್ ತಿವಾರಿ ಯಾಕೆ? ಛತ್ತೀಸ್‌ಗಡದಿಂದ ರಾಜೀವ ಶುಕ್ಲಾ ಯಾತಕ್ಕೆ? ರಾಜೀವ ಶುಕ್ಲಾ ನನ್ನ ಸ್ನೇಹಿತರೇ ಆಗಿದ್ದಾರೆ. ಆದರೆ ನಾನು ಯಾವುದೇ ತಾರತಮ್ಯವಿಲ್ಲದೇ ವಿಚಾರಗಳ ವಿಶ್ಲೇಷಣೆ ಮಾಡಬಯಸುತ್ತೇನೆ.

ಛತ್ತೀಸ್ ಗಡದಲ್ಲಿ ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿದ ನಾಯಕರನ್ನು ಏಕೆ ಕಡೆಗಣಿಸಲಾಯಿತು ಎಂಬುದು ಇಲ್ಲಿ
ಏಳುವ ಪ್ರಶ್ನೆ. ಯಾರೂ ಆ ಬಗ್ಗೆ ಚಕಾರವೆತ್ತದೇ ಇದ್ದರೂ ಆ ರಾಜ್ಯದ ಕಾಂಗ್ರೆಸ್ ಶಾಸಕರಿಗೆ ಅಸಮಾಧಾನ ಇತ್ತು ಎಂಬುದು ಸುಸ್ಪಷ್ಟ. ಹಾಗಾಗಿಯೇ ಶಾಸಕರನ್ನು ಎಲ್ಲಾ ಬಚ್ಚಿಡುವ ಕೆಲಸವನ್ನು ಮಾಡಬೇಕಾಗಿ ಬಂತು.

ಪರಿಣಾಮವಾಗಿ ಕಾಂಗ್ರೆಸ್ ತನ್ನ ಹಿರಿಯ ನಾಯಕರಲ್ಲಿ ಒಬ್ಬರಾದ ಅಜಯ ಮಾಕನ್‌ರನ್ನು ತ್ಯಾಗ ಮಾಡಬೇಕಾಯಿತು. ಅವರು ಮಹಾರಾಷ್ಟ್ರದಿಂದ ಸ್ಪರ್ಧಿಸಲು ಅವಕಾಶ ಕೊಡಲಾಗಿತ್ತು, ಅವರ ಜಯ ಖಚಿತವಾಗಿರಬೇಕಿತ್ತು. ಆದರು ಇದಾಗಿರುವುದು ಮೊದಲೇನಲ್ಲ. ನಾನು ಸ್ವತಂತ್ರ ಅಭ್ಯರ್ಥಿಯಾಗಿ ರಾಜ್ಯಸಭೆಗೆ ಸ್ಪರ್ಧಿಸಿದ್ದೆ. ಆಗ ಕಾಂಗ್ರೆಸ್ ಹೈಕಮಾಂಡಿನ ನಿಷ್ಟ ಮತ್ತು ಮಾಜಿ ಗವರ್ನರ್ ಆರ್.ಡಿ.ಪ್ರಧಾನ್ ನನ್ನೆದುರು ಸೋತಿದ್ದರು.

ರಾಜ್ಯಸಭೆಯಲ್ಲಿ ಗಟ್ಟಿದನಿಯಲ್ಲಿ ಮಾತನಾಡುವ ಶಕ್ತಿ ಇರುವ ಗುಲಾಂ ನಬಿ ಆಜಾದ್ ಮತ್ತು ಆನಂದ್ ಶರ್ಮಾ ಅವರುಗಳಿಗೆ ಕಾಂಗ್ರೆಸ್ ಯಾಕೆ ಟಿಕೆಟ್ ನೀಡಿಲ್ಲ ಎಂಬುದು ನನಗಿನ್ನೂ ಅರ್ಥವಾಗುತ್ತಿಲ್ಲ. ಹಾಗಿದ್ದರೆ ಪಕ್ಷದೊಳಗೆ ಏರುದನಿಯಲ್ಲಿ ಮಾತ
ನಾಡಿ ಖಂಡತುಂಡ ವಿಶ್ಲೇಷಣೆಗಳನ್ನು ಮಾಡುವುದು ಅಪರಾಧವೇ? ಇಮ್ರಾನ್ ಪ್ರತಾಪಗರಿ ಎಂದಿಗೂ ಆಜಾದ್ ಸಾಹೇಬರ ಸ್ಥಾನವನ್ನು ತುಂಬಬಲ್ಲ ಸಮರ್ಥರಾಗಲಾರರು ಎಂಬುದನ್ನು ಕಾಂಗ್ರೆಸ್ ಮೊದಲಿಗೆ ಅರ್ಥ ಮಾಡಿಕೊಳ್ಳಬೇಕು.

ಇಂದು ಉಕ್ತಿ ನೆನಪಿಗೆ ಬರುತ್ತಿದೆ. ಹಡಗೊಂದು ಮುಳುಗಲು ಶುರುವಾದಾಗ ಅದರೊಳಗಿದ್ದ ಜನರು ಕೈಗೆ ಸಿಕ್ಕಿದ್ದನ್ನು ಎತ್ತಿ ಕೊಂಡು ಓಡಿಹೋಗತೊಡಗುತ್ತಾರೆ. ಕಾಂಗ್ರೆಸ್ಸಿನಲ್ಲಿ ಈಗ ಆಗುತ್ತಿರುವುದು ಅದೇ ಪ್ರಕ್ರಿಯೆ. ಪಾರ್ಟಿ ಬಹಳ ವೇಗದಲ್ಲಿ ಸಂಕುಚಿತ ಗೊಳ್ಳುತ್ತಿದೆ. ರಾಜ್ಯಸಭೆಯಲ್ಲಿ ಕೆಲವು ಸೀಟುಗಳಿರುವಾಗ ಆರು ವರ್ಷಗಳಿಗೇಕೆ ಅದನ್ನು ತೆಗೆದುಕೊಳ್ಳಬಾರದು ಎಂದು ಕೆಲವರು ಭಾವಿಸಿದ್ದರು.

ಆಮೇಲೇನಾಗುತ್ತೋ ಏನೋ ಎಂಬ ಅನುಮಾನದ ಭಾವ ಅವರದ್ದು. ನಾವು ಉಳಿಯುತ್ತೇವೋ ಇಲ್ಲವೋ ಎಂಬ ಆತಂಕವೂ ಒಂದು ಕಡೆ. ಇದು ಈ ಬಾರಿಯ ಉದಾಹರಣೆಯಲ್ಲ, ಕಳೆದ ಒಂದು ದಶಕದಿಂದಲೂ ಇಂತಹದೇ ಪ್ರಕ್ರಿಯೆ ನಡೆಯುತ್ತಿದೆ. ಕಾಂಗ್ರೆಸ್ಸಿನಲ್ಲಿ ಹೊಗಳುಭಟರದ್ದೇ ದರಬಾರು ನಡೆಯುತ್ತಿzಯೇನೋ ಎಂಬಂತಾಗಿದೆ ಪರಿಸ್ಥಿತಿ. ಇಲ್ಲಿ ವ್ಯತ್ಯಾಸವನ್ನು ವಿಶ್ಲೇಷಣೆ ಮಾಡಿ. ಬಿಜೆಪಿಯವರು ಟಿಕೆಟು ಹಂಚಿಕೆ ಮಾಡುವಾಗ ಎಷ್ಟೊಂದು ಗಮನ ಹರಿಸಿದರು ಎಂಬುದನ್ನೂ ಪರಾಮರ್ಶೆಗೆ
ಒಳಪಡಿಸಿ. ಇದನ್ನೆಲ್ಲ ಗಮನಿಸುವಾಗ ಅರ್ಥವಾಗುವ ಒಂದೇ ಸಂಗತಿಯೆಅದರೆ ಕಾಂಗ್ರೆಸ್ ಹೊಗಳುಭಟರ ಹಿಡಿತದಲ್ಲಿದೆ. ಆದರೆ ಬಿಜೆಪಿ ರಾಜಕೀಯ ಸಮಾನತೆಯತ್ತ ಹೆಚ್ಚು ಗಮನ ಹರಿಸುತ್ತಿದೆ.

ನಾನು ಅಖಿಲೇಶ ಯಾದವರ ಸಮಾಜವಾದಿ ಪಾರ್ಟಿಯ ಬಗ್ಗೆಯಾಗಲೀ, ಲಾಲೂ ಪ್ರಸಾದಯಾದವರ ರಾಷ್ಟ್ರೀಯ ಜನತಾದಳದ
ಬಗ್ಗೆಯಾಗಲೀ ಮಾತನಾಡುತ್ತಿಲ್ಲ. ಏಕೆಂದರೆ ಅವರು ಪಕ್ಷವನ್ನು ಪ್ರೈವೇಟ್ ಲಿಮಿಟೆಡ್ ಕಂಪನಿಯಂತೆ ನಡೆಸುತ್ತಿದ್ದಾರೆ. ಅವರಿಗೆ ಯಾವಾಗಲೂ ಒಬ್ಬ ವಕೀಲ ಜತೆಗಿರಬೇಕು. ಅವರು ಹಲವಾರು ಬಾರಿ ರಾಮ್ ಜೇಠ್ಮಲಾನಿಯವರನ್ನು ಇಟ್ಟುಕೊಂಡಿದ್ದರು ಮತ್ತು ಇನ್ನು ಕೆಲವು ಬಾರಿ ಬೇರೆ ಬೇರೆ ವಕೀಲರು ಅವರ ಹಿಂದಿರಬೇಕಿತ್ತು. ಅವರ ಮೇಲಿರುವ ಕೇಸುಗಳ ಹೋರಾಟ ಮಾಡ ಬೇಕಲ್ಲ.!

ಸ್ವಜನಪಕ್ಷಪಾತ ಇನ್ನು ನಡೆಯುವುದಿಲ್ಲ ಎಂಬುದನ್ನು ಈ ಪಕ್ಷಗಳು ಅರ್ಥಮಾಡಿಕೊಂಡಿರಬೇಕು. ಮೊದಲೆಲ್ಲ ಅವರ ಕುಟುಂಬದ ಪೈಕಿಯವರನ್ನೇ ಲೋಕಸಭೆಗೆ ಮತ್ತು ರಾಜ್ಯಸಭೆಗೆ ಕಳುಹಿಸುವ ಪರಿಪಾಠವಿತ್ತು. ಈಗ ಅವರೂ ಕೂಡ ಕುಟುಂಬ ತೊರೆದು ಹೊರಗಿನ ಅರ್ಹವ್ಯಕ್ತಿಗಳಿಗೆ ಟಿಕೆಟ್ ಕೊಡಲು ಶುರುಮಾಡಿದ್ದಾರೆ. ದುರದೃಷ್ಟವಶಾತ್ ಕಾಂಗ್ರೆಸ್ಸಿಗೆ ಇನ್ನೂ ಇದು ಅರ್ಥವಾಗಿಲ್ಲ.; ಪಕ್ಷಕ್ಕಾಗಿ ದುಡಿದ ನಾಯಕರುಗಳಿಗೆ ಅವಕಾಶ ಕೊಡುವುದರ ಬದಲು ಏನೂ ಮಾಡದೇ ತಮ್ಮ ಸುತ್ತ ಗಿರಕಿ
ಹೊಡೆಯುವ ಭಟ್ಟಂಗಿಗಳಿಗೆ ಟಿಕೆಟು ಕೊಡುತ್ತಿದೆ. ದೇವರೇ ಕಾಂಗ್ರೆಸ್ ಪಕ್ಷವನ್ನು ಕಾಪಾಡಬೇಕು. ಇನ್ನೇನೂ ಹೇಳಲಾಗದು.