Tuesday, 10th September 2024

ತನ್ನ ಗುಂಡಿ ತಾನೇ ತೋಡಿಕೊಳ್ಳುತ್ತಿದೆ ಕಾಂಗ್ರೆಸ್

ವರ್ತಮಾನ

maapala@gmail.com

ಹಿಂದಿನ ಬಿಜೆಪಿ ಸರಕಾರದ ವಿರುದ್ಧ ಭ್ರಷ್ಟಾಚಾರ, ಅಕ್ರಮಗಳು, ೪೦ ಪರ್ಸೆಂಟ್ ಕಮಿಷನ್ ಆರೋಪಗಳ ಸುರಿಮಳೆಗೈದು ಭ್ರಷ್ಟಾಚಾರ ಮುಕ್ತ ಆಡಳಿತದ ಭರವಸೆಯೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಆದರೆ, ಭ್ರಷ್ಟಾಚಾರದ ವಿರುದ್ಧದ ಸಿಬಿಐ ತನಿಖೆಯನ್ನೇ ಹಿಂಪಡೆಯುವ ಸರಕಾರದ ನಡೆ ಎಲ್ಲೋ ಒಂದು ಕಡೆ ಜನರ ನಿರೀಕ್ಷೆಯನ್ನು ಹುಸಿಮಾಡಿದಂತಿದೆ.

ರಾಜ್ಯ ಕಾಂಗ್ರೆಸ್ ಸರಕಾರ ಪ್ರತಿಪಕ್ಷ ಗಳಿಗೆ ಮತ್ತೊಮ್ಮೆ ಆಹಾರವಾಗಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಬೇಕಿತ್ತೋ, ಇಲ್ಲವೋ, ೨೦೧೩ರಿಂದ
೨೦೧೮ರ ಅವಽಯಲ್ಲಿ ಅವರು ಸಚಿವರಾಗಿದ್ದ ಸಂದರ್ಭದಲ್ಲಿ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ್ದಾರೆ, ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂಬ ಕಾರಣಕ್ಕೆ ಅವರ ವಿರುದ್ಧ ಸಿಬಿಐ ತನಿಖೆಗೆ ಆದೇಶಿಸಿದ್ದ ಹಿಂದಿನ ಬಿಜೆಪಿ ಸರಕಾರದ ನಿರ್ಧಾರವನ್ನು ಈಗಿನ ಕಾಂಗ್ರೆಸ್ ಸರಕಾರ ಹಿಂಪಡೆದಿದೆ. ಆ ಮೂಲಕ ಸಿಬಿಐ ತನಿಖೆ ಎದುರಿಸುತ್ತಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸಮಾಧಾನ ನೀಡಿದೆ.

ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ಈ ನಿರ್ಧಾರಕ್ಕೆ ಸರಕಾರ ನೀಡಿರುವ ಕಾರಣ, ಡಿ.ಕೆ.ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ ಆರೋಪದ ತನಿಖೆಯನ್ನು ಬಿಜೆಪಿ ಸರಕಾರ ರಾಜಕೀಯ ಪ್ರೇರಿತವಾಗಿ ಸಿಬಿಐಗೆ ವಹಿಸಿತ್ತು. ಪ್ರಕರಣವನ್ನು ಸಿಬಿಐಗೆ ವಹಿಸುವಾಗ ಅಗತ್ಯ ಕಾನೂನು ಪ್ರಕ್ರಿಯೆ ನಡೆಸಿಲ್ಲ. ಆಗ ಅವರು ಶಾಸಕರಾಗಿದ್ದರೂ ನಿಯಮಾನುಸಾರ ವಿಧಾನಸಭಾಧ್ಯಕ್ಷರಿಂದ ಅನುಮತಿ ಪಡೆದಿರಲಿಲ್ಲ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಪರಿಣಾಮದ ಬಗ್ಗೆ ದಾಖಲೆ ನೀಡಿಲ್ಲ. ರಾಜ್ಯ ಪೊಲೀಸರಿಂದ ಪ್ರಕರಣ ನಡೆಸಲು ಇರುವ ಸಮಸ್ಯೆ ಬಗ್ಗೆ ಉಲ್ಲೇಖಿಸಿಲ್ಲ. ಆಗಿನ ಅಡ್ವೋಕೇಟ್ ಜನರಲ್ ಅವರು ಪ್ರಕರಣ ಸಿಬಿಐಗೆ ವಹಿಸುವ
ಅಗತ್ಯವಿಲ್ಲ ಎಂದು ಹೇಳಿದ್ದರೂ ಸರಕಾರ ಕಾನೂನು ಸಲಹೆ ಮೀರಿ ರಾಜಕೀಯ ಪ್ರೇರಿತ ತೀರ್ಮಾನ ಕೈಗೊಂಡಿದೆ.

ಹೀಗಾಗಿ ಹಾಲಿ ಅಡ್ವೋಕೇಟ್ ಜನರಲ್ ಅವರ ಅಭಿಪ್ರಾಯದ ಮೇಲೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬುದು. ಕಾನೂನಾತ್ಮಕವಾಗಿ ಸರಕಾರ ತೆಗೆದು ಕೊಂಡ ನಿರ್ಧಾರ ಸರಿಯೋ, ತಪ್ಪೋ ಎಂಬ ವಿಮರ್ಶೆ ಇನ್ನುಮುಂದೆ ನ್ಯಾಯಾಲಯಗಳಲ್ಲಿ ನಡೆಯುತ್ತದೆ. ಕಾನೂನು ತನ್ನ ಕ್ರಮವನ್ನು ತೆಗೆದು ಕೊಳ್ಳುತ್ತದೆ. ಆದರೆ, ನೈತಿಕವಾಗಿ ಸರಕಾರ ಡಿ.ಕೆ.ಶಿವಕುಮಾರ್ ಅವರನ್ನು ಕಾನೂನಿನ ಕೈಯಿಂದ ತಪ್ಪಿಸಲು ಈ ನಿರ್ಧಾರ ಕೈಗೊಂಡಿದೆ ಎಂಬುದು ಸ್ಪಷ್ಟ. ಏಕೆಂದರೆ, ತಮ್ಮ ವಿರುದ್ಧ ಸಿಬಿಐ ತನಿಖೆ ನಡೆಸಲು ಹಿಂದಿನ ಸರಕಾರ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡಿದ್ದ ನಿರ್ಧಾರವನ್ನು ಪ್ರಶ್ನಿಸಿ ಡಿ.ಕೆ.ಶಿವಕುಮಾರ್ ಈಗಾಗಲೇ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಆರಂಭದಲ್ಲಿ ಸರಕಾರದ ತೀರ್ಮಾನಕ್ಕೆ ತಡೆ ನೀಡಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಅಂತಿಮವಾಗಿ ಸಿಬಿಐ ತನಿ ಖೆಯ
ನಿರ್ಧಾರವನ್ನು ಎತ್ತಿಹಿಡಿದಿತ್ತು. ಇದರ ವಿರುದ್ಧ ಶಿವಕುಮಾರ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದು, ಸದ್ಯ ವಿಭಾಗೀಯ ಪೀಠವು ಏಕಸದಸ್ಯ ಪೀಠದ ತೀರ್ಪಿಗೆ ತಡೆಯಾಜ್ಞೆ ನೀಡಿದೆ.

ವಿಚಾರಣೆ ಮುಂದುವರಿದಿದೆ. ಈಗಾಗಲೇ ನ್ಯಾಯಾಲಯದಲ್ಲಿರುವ ಪ್ರಕರಣ ಇತ್ಯರ್ಥ ಗೊಳ್ಳುವ ಮುನ್ನವೇ ಸಚಿವ ಸಂಪುಟ ಸಭೆಯಲ್ಲಿ ಸಿಬಿಐ ತನಿಖೆ
ಹಿಂಪಡೆಯುವ ನಿರ್ಧಾರ ಕೈಗೊಂಡಿದೆ ಎಂದರೆ, ಇದು ತಪ್ಪು ಮುಚ್ಚಿಕೊಳ್ಳಲು ನಡೆಯುತ್ತಿರುವ ಪ್ರಯತ್ನ ಎಂಬ ಅನುಮಾನ ಬರುತ್ತದೆ. ಏಕೆಂದರೆ, ಹಿಂದಿನ ಸರಕಾರದ ತೀರ್ಮಾನ ಸಂಪೂರ್ಣ ಕಾನೂನು ಬಾಹಿರವಾಗಿತ್ತು ಎಂದಾದರೆ ಈಗಾಗಲೇ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಪ್ರಕ್ರಿಯೆ ಮುಗಿದು ತೀರ್ಪು ಬರುವವರೆಗೆ ಕಾಯಬೇಕಿತ್ತು. ಆದರೆ, ಒಂದು ನ್ಯಾಯಪೀಠದಲ್ಲಿ ಸರಕಾರದ ನಿರ್ಧಾರ ಸರಿ ಎಂದು ಸಾಬೀತಾಗಿ, ಆ ನ್ಯಾಯ ಪೀಠದ ಆದೇಶ ತಪ್ಪು ಎಂಬುದು ನಿರ್ಧಾರವಾಗುವ ಮೊದಲೇ ಸರಕಾರ ಪ್ರಕರಣ ಹಿಂಪಡೆಯುತ್ತದೆ ಎಂದಾದರೆ ಅದರ ಹಿಂದೆ ಬೇರೆ ಕಾರಣಗಳಿವೆ ಎಂಬುದು ಖಚಿತವಾಗುತ್ತದೆ.

ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ (೨೦೦೮-೨೦೧೦) ಅವರ ವಿರುದ್ಧ ಅಕ್ರಮ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲು ಸಚಿವ ಸಂಪುಟ ನಿರಾಕರಿಸಿದ್ದರೂ ರಾಜ್ಯಪಾಲರು ಪ್ರಾಸಿ ಕ್ಯೂಷನ್‌ಗೆ ಅನುಮತಿ ನೀಡಿದ್ದರು. ಇದರ ಪರಿಣಾಮ ಅವರು ಜೈಲಿಗೆ ಹೋಗುವಂತಾಗಿತ್ತು. ಬಳಿಕ ರಾಜ್ಯಪಾಲರು ಬದಲಾದರೂ ಪ್ರಾಸಿಕ್ಯೂಷನ್‌ಗೆ ನೀಡಿದ್ದ ಅನುಮತಿ ಹಿಂಪಡೆದಿರಲಿಲ್ಲ. ಅಂತಿಮವಾಗಿ ನ್ಯಾಯಾಲಯದಲ್ಲಿ ವಾದ-ಪ್ರತಿ ವಾದ ನಡೆದು ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದನ್ನು ರದ್ದುಗೊಳಿಸಲಾಗಿತ್ತು.

ಅಂದರೆ ಪ್ರಕರಣ ಒಮ್ಮೆ ನ್ಯಾಯಾಲಯದ ಮೆಟ್ಟಿಲೇರಿದರೆ ಅದು ಅಲ್ಲಿಯೇ ಇತ್ಯರ್ಥಗೊಳ್ಳಬೇಕು ಎಂಬ ಕಾರಣಕ್ಕಾಗಿ ರಾಜ್ಯಪಾಲರಾಗಲೀ, ಸರಕಾರ
ವಾಗಲೀ ಮಧ್ಯೆ ಪ್ರವೇಶಿಸಿರಲಿಲ್ಲ. ಅಂತಿಮವಾಗಿ ನ್ಯಾಯಾಲಯದಲ್ಲೇ ಪ್ರಕರಣ ಬಗೆಹರಿದಿತ್ತು. ಅದೇ ರೀತಿ ಡಿ.ಕೆ.ಶಿವಕುಮಾರ್ ವಿರುದ್ಧದ ಪ್ರಕರಣದಲ್ಲೂ ನ್ಯಾಯಾಲಯದಲ್ಲೇ ಪ್ರಕರಣ ಇತ್ಯರ್ಥ ವಾಗುವವರೆಗೆ ಸರಕಾರ ಕಾಯಬಹುದಿತ್ತು. ಏಕೆಂದರೆ, ಸಿಬಿಐ ತನಿಖೆಗೆ ಸಚಿವ ಸಂಪುಟ ಕೈಗೊಂಡಿದ್ದ ನಿರ್ಧಾರವನ್ನು ಎತ್ತಿಹಿಡಿದ ಏಕಸದಸ್ಯ ಪೀಠದ ತೀರ್ಪು ಪ್ರಶ್ನಿಸಿ ವಿಭಾಗೀಯ ಪೀಠದಲ್ಲಿ ಡಿ.ಕೆ.ಶಿವಕುಮಾರ್ ಸಲ್ಲಿಸಿದ್ದ ಮೇಲ್ಮನವಿಯನ್ನು ತ್ವರಿತವಾಗಿ ಇತ್ಯರ್ಥಗೊಳಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಅದರಂತೆ ಕೆಲವೇ ದಿನಗಳಲ್ಲಿ ತೀರ್ಪು ಹೊರಬರುವ ಸಾಧ್ಯತೆ ಇತ್ತು.

ಪ್ರಕರಣದಲ್ಲಿ ಸಿಬಿಐ ಏನೇ ವಾದ ಮಂಡಿಸಿದರೂ ಸರಕಾರದ ಪರವಾಗಿ ಈಗಿನ ಸರಕಾರ ನೇಮಿಸಿದ ವಕೀಲರೇ ವಾದ ಮಂಡಿಸುತ್ತಿದ್ದಾರೆ. ಅವರ ಮೂಲಕ ಹಿಂದಿನ ಸರಕಾರ ರಾಜಕೀಯ ಪ್ರೇರಿತವಾಗಿ, ನಿಯಮಾವಳಿ ಗಳನ್ನು ಪಾಲಿಸದೆ ತೀರ್ಮಾನ ಕೈಗೊಂಡಿದೆ ಎಂಬುದನ್ನು ನ್ಯಾಯಾಲಯದಲ್ಲೇ ಸಾಬೀತುಪಡಿಸಿ
ಡಿ.ಕೆ.ಶಿವಕುಮಾರ್ ಅವರನ್ನು ಪಾರುಮಾಡಲು ಅವಕಾಶವಿತ್ತು. ಮೇಲಾಗಿ ನ್ಯಾಯಾಲಯದಲ್ಲಿ ಪ್ರಕರಣ ಕಾನೂನಾತ್ಮಕವಾಗಿ ಇತ್ಯರ್ಥಗೊಳ್ಳುವುದರಿಂದ ಅದರ ವಿರುದ್ಧ ಮೇಲ್ಮನವಿ ಸಲ್ಲಿಸಬಹುದೇ ಹೊರತು ಅಕ್ರಮ ಸಂಪತ್ತು ಗಳಿಸಿದ್ದರೂ ಅವರನ್ನು ಪಾರುಮಾಡಲು ರಾಜಕೀಯ ಪ್ರೇರಿತವಾಗಿ ಅವರನ್ನು ಸಿಬಿಐ ತನಿಖೆಯಿಂದ ಮುಕ್ತಗೊಳಿಸಲಾಗಿದೆ ಎಂಬ ಆರೋಪ ಬರುತ್ತಿರಲಿಲ್ಲ.

ಆದರೆ, ಈ ವಿಚಾರದಲ್ಲಿ ಸರಕಾರ ಎಡವಿದೆ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ತನಗೆ ಅಧಿಕಾರವಿದೆ ಎಂಬ ಕಾರಣಕ್ಕೆ ಈ ತೀರ್ಮಾನ ಕೈಗೊಂಡಿದೆ ಎಂಬ
ಆರೋಪಕ್ಕೆ ಕಾಂಗ್ರೆಸ್ ಈಗ ಪ್ರತಿಪಕ್ಷಗಳಿಗೆ ಆಹಾರವಾಗುತ್ತಿದೆ. ಖಂಡಿತವಾಗಿಯೂ ಈ ವಿಚಾರವನ್ನು ಪ್ರತಿಪಕ್ಷ ಗಳು ಸುಲಭವಾಗಿ ಬಿಟ್ಟುಕೊಡಲು ಸಾಧ್ಯವೇ ಇಲ್ಲ. ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್‌ನ ಭ್ರಷ್ಟಾಚಾರದ ಆರೋಪದಿಂದಲೇ ಅಧಿಕಾರ ಕಳೆದುಕೊಂಡ ಬಿಜೆಪಿ ಈ ವಿಚಾರವನ್ನು ಜನರ ಮುಂದೆ ತೆಗೆದು
ಕೊಂಡು ಹೋಗುವುದು ಖಚಿತ. ಜತೆಗೆ ವಿಧಾನ ಮಂಡಲದ ಒಳಗೆ ಮತ್ತು ಹೊರಗೆ ಹೋರಾಟ ಮಾಡುವುದೂ ಸ್ಪಷ್ಟ. ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ವಿರುದ್ಧ ಈಗಾಗಲೇ ಮುಗಿ ಬಿದ್ದಿರುವ ಜೆಡಿಎಸ್ ಇದೀಗ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವುದರಿಂದ ಎರಡೂ ಪಕ್ಷಗಳು ಸೇರಿ ಮುಂದಿನ ದಿನಗಳಲ್ಲಿ ಸರಕಾರ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಮುಜುಗರ ಉಂಟು ಮಾಡಲಿವೆ.

ಜನ ನೀಡಿದ ಅಧಿಕಾರ ಇದೆ. ಹೀಗಾಗಿ ನಮಗೆ ಬೇಕಾದಂತೆ ತೀರ್ಮಾನ ಕೈಗೊಂಡಿದ್ದೇವೆ ಎಂಬ ಸರಕಾರದ ಕ್ರಮ ಪ್ರತಿಪಕ್ಷಗಳಿಗಂತೂ ಬ್ರಹ್ಮಾಸ್ತ್ರವನ್ನೇ ಒದಗಿಸಿದೆ. ಸದ್ಯದಲ್ಲೇ ಲೋಕಸಭೆ ಚುನಾವಣೆ ಬರಲಿರುವುದರಿಂದ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿಗೆ ಇದು ಅತ್ಯುತ್ತಮ ಅಸ್ತ್ರವಾಗಲಿದೆ. ಇದರಿಂದ ಸರಕಾರಕ್ಕೆ ಯಾವುದೇ ಅಪಾಯ ಆಗದೇ ಇದ್ದರೂ ಕಾಂಗ್ರೆಸ್ ಮುಜುಗರ ಕ್ಕೊಳಗಾಗುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಅಷ್ಟಕ್ಕೂ ಈ ವಿಷಯ ಸರಕಾರಕ್ಕೆ ಪ್ರತಿಕೂಲ ವಾಗಲು ಅದರ ನಿಲುವುಗಳೇ ಕಾರಣ. ಅಧಿಕಾರಕ್ಕೆ ಬರುತ್ತಿದ್ದಂತೆ ಚುನಾವಣಾ-ಪೂರ್ವ ನೀಡಿದ್ದ ಐದು ಗ್ಯಾರಂಟಿಗಳನ್ನು ಘೋಷಿಸಿ, ಆ ಪೈಕಿ ನಾಲ್ಕು
ಗ್ಯಾರಂಟಿಗಳನ್ನು ಜಾರಿಗೊಳಿಸುವ ಮೂಲಕ ಕಾಂಗ್ರೆಸ್ ಭೇಷ್ ಎನಿಸಿಕೊಂಡಿತ್ತು.

ಗ್ಯಾರಂಟಿ ಯೋಜನೆಗಳ ಜಾರಿಯಲ್ಲಿ ಹಲವು ಸಮಸ್ಯೆ ಗಳಿದ್ದರೂ ಆರಂಭದಲ್ಲಿ ಇವೆಲ್ಲಾ ಸಾಮಾನ್ಯ ಎಂದು ಭಾವಿಸಿ ಪ್ರತಿಪಕ್ಷಗಳು ಏನೇ ಆರೋಪ ಮಾಡಿದರೂ
ಜನ ಸರಕಾರದ ಜತೆಗೆ ನಿಂತರು. ಇದರ ಬೆನ್ನಲ್ಲೇ ಬಿಜೆಪಿ ಅಧಿಕಾರದಲ್ಲಿದ್ದಾಗ ನಡೆದಿದೆ ಎನ್ನಲಾದ ಅಕ್ರಮಗಳನ್ನು ಒಂದೊಂದಾಗಿ ತನಿಖೆಗೆ ವಹಿಸುವ
ಮೂಲಕ ಭ್ರಷ್ಟಾಚಾರದ ವಿರುದ್ಧದ ಹೋರಾಟ ಅಧಿಕಾರಕ್ಕೆ ಬರಲು ಮಾತ್ರವಲ್ಲ, ಅಧಿಕಾರಕ್ಕೆ ಬಂದ ಮೇಲೂ ಇರುತ್ತದೆ ಎಂಬುದನ್ನು ತೋರಿಸಿತು. ಆದರೆ, ಅವೆಲ್ಲವೂ ಆರಂಭಶೂರತ್ವ ಎನ್ನುವಂತೆ ಕೆಲವೇ ದಿನಗಳಲ್ಲಿ ಸರಕಾರದ ವಿರುದ್ಧ ಭ್ರಷ್ಟಾಚಾರ, ಅಕ್ರಮಗಳ ಆರೋಪಗಳು ಒಂದೊಂದಾಗಿ ಕೇಳಿ ಬಂದವು.

ಅಧಿಕಾರಿಗಳ ವರ್ಗಾವಣೆ ವಿಚಾರ ದಲ್ಲಂತೂ ಸರಕಾರ ಸಾಕಷ್ಟು ಟೀಕೆಗೆ ಒಳಗಾಯಿತು. ಅದೇ ರೀತಿ ಗುತ್ತಿಗೆದಾರರ ಬಿಲ್ ಬಾಕಿ ಪಾವತಿ ವಿಚಾರವೂ ವಿವಾದಕ್ಕೆ ಕಾರಣವಾಯಿತು. ಪ್ರತಿಪಕ್ಷ ಗಳೇನಾದರೂ ಈ ವಿಚಾರಗಳನ್ನು ಗಂಭೀರವಾಗಿ ತೆಗೆದುಕೊಂಡು ಹೋರಾಟಕ್ಕಿಳಿದಿದ್ದರೆ ಇಷ್ಟರಲ್ಲಾ ಗಲೇ ಸರಕಾರ ತಲೆ ಎತ್ತಲು ಕಷ್ಟಪಡಬೇಕಾಗುತ್ತಿತ್ತು. ಆದರೆ, ಅವರಲ್ಲಿನ ಗೊಂದಲದಿಂದ ಸರಕಾರ ಪಾರಾಯಿತು. ಇದೀಗ ಗೊಂದಲ ಬಗೆಹರಿದು ಎರಡೂ ಪ್ರತಿಪಕ್ಷ
ಗಳು ಒಗ್ಗಟ್ಟಾಗಿ ಹೋರಾಟಕ್ಕೆ ಮುಂದಾಗಿರುವ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ವಿರುದ್ಧದ ಅಕ್ರಮ ಪ್ರಕರಣ ತನಿಖೆಯನ್ನು ಸಿಬಿಐನಿಂದ ವಾಪಸ್ ಪಡೆಯುವ ಸರಕಾರದ ತೀರ್ಮಾನ ಸರಕಾರಕ್ಕಿಂತಲೂ ಕಾಂಗ್ರೆಸ್‌ಗೆ ಬಹುದೊಡ್ಡ ಪೆಟ್ಟು ನೀಡುವ ಸಾಧ್ಯತೆ ನಿಚ್ಚಳವಾಗಿದೆ. ರಾಮನಗರ ಜಿಲ್ಲೆ, ಬಿಡದಿಯನ್ನು ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ತರುವುದು. ಆರೋಗ್ಯ ವಿವಿ ವೈದ್ಯಕೀಯ ಕಾಲೇಜನ್ನು ಕನಕಪುರಕ್ಕೆ ಸ್ಥಳಾಂತರಿಸುವ ವಿಚಾರದಲ್ಲಿ ಈಗಾಗಲೇ ಡಿ.ಕೆ.ಶಿವಕುಮಾರ್ ವಿರುದ್ಧ ಮುಗಿಬಿದ್ದಿರುವ ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್ .ಡಿ.ಕುಮಾರಸ್ವಾಮಿ ಅವರು ಈ ವಿಚಾರವನ್ನು
ಗಟ್ಟಿಯಾಗಿ ಹಿಡಿದು ಸರಕಾರಕ್ಕೆ ಬಿಸಿ ಮುಟ್ಟಿಸುವುದು ಖಂಡಿತ.

ರಾಜ್ಯಾಧ್ಯಕ್ಷ, ಪ್ರತಿಪಕ್ಷ ನಾಯಕನಿಲ್ಲದೆ ಮುಜುಗರ ಎದುರಿಸುತ್ತಿದ್ದ ಬಿಜೆಪಿ ಕೂಡ ಈಗ ಎಲ್ಲವನ್ನೂ ಸರಿಪಡಿಸಿಕೊಂಡು ಸಮರ್ಥ ಪ್ರತಿಪಕ್ಷವಾಗಿ ಹೊರ ಹೊಮ್ಮಲು ಪ್ರಯತ್ನಿಸುತ್ತಿದೆ. ಲೋಕ ಸಭೆ ಚುನಾವಣೆ ಸಮೀಪದಲ್ಲೇ ಇರುವ ಇಂಥ ಸಂದರ್ಭದಲ್ಲಿ ಸಿಕ್ಕಿರುವ ಅಸವನ್ನು ಸುಮ್ಮನೆ ಬಿಡುವ ಪರಿಸ್ಥಿತಿಯಲ್ಲಿ ಎರಡೂ ಪಕ್ಷಗಳು ಇಲ್ಲ. ಹೀಗಾಗಿ ಕಾಂಗ್ರೆಸ್ ಸರಕಾರ ಇನ್ನು ಸಾಕಷ್ಟು ಸಮಸ್ಯೆ ಎದುರಿಸಬೇಕಾಗಬಹುದು. ಇನ್ನು ೧೦ ದಿನದಲ್ಲಿ ಬೆಳಗಾವಿ ಸುವರ್ಣ ಸೌಧ
ದಲ್ಲಿ ಚಳಿಗಾಲದ ಅಽವೇಶನ ಆರಂಭವಾಗಲಿದೆ. ಬರಗಾಲ, ವರ್ಗಾವಣೆ ದಂಧೆ, ಆದಾಯ ತೆರಿಗೆ ದಾಳಿ, ಗುತ್ತಿಗೆದಾರರ ಬಾಕಿ ಪಾವತಿಯಂಥ ವಿಚಾರ
ಗಳನ್ನು ಪ್ರಸ್ತಾಪಿಸಿ ಸರಕಾರವನ್ನು ಪ್ರತಿಪಕ್ಷಗಳು ತರಾಟೆಗೆ ತೆಗೆದುಕೊಳ್ಳಬಹುದಾದರೂ ಬರಗಾಲ ವಿಷಯದಲ್ಲಿ ಕೇಂದ್ರ ಸರಕಾರವನ್ನು ದೂರಿ, ವರ್ಗಾವಣೆ ದಂಧೆ ಸೇರಿದಂತೆ ಇತರೆ ವಿಚಾರಗಳಿಗೆ ಸಾಕ್ಷ್ಯಗಳನ್ನು ಕೇಳಿ ಪಾರಾಗಬಹುದು. ಆದರೆ, ಡಿ.ಕೆ.ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆ ಹಿಂಪಡೆದ ವಿಚಾರವನ್ನು ಸರಿಯಾಗಿ ಸಮರ್ಥಿಸಿಕೊಳ್ಳಲು ಕಾಂಗ್ರೆಸ್ ಪರದಾಡಲೇಬೇಕಾಗುತ್ತದೆ. ಈ ವೇಳೆ ಗದ್ದಲವುಂಟಾಗಿ ಕಲಾಪ ಹಾಳಾದರೆ ಆಗ ಜನ ಆಡಳಿತ ಪಕ್ಷವನ್ನು ದೂರುತ್ತಾರೆಯೇ ಹೊರತು ಪ್ರತಿಪಕ್ಷಗಳನ್ನಲ್ಲ.

ಏಕೆಂದರೆ, ಅಂಥ ಮಹತ್ವದ ವಿಷಯವನ್ನು ಸರಕಾರವೇ ಖುದ್ದಾಗಿ ಪ್ರತಿಪಕ್ಷಗಳಿಗೆ ನೀಡಿದೆ. ಇದನ್ನು ಪ್ರತಿಪಕ್ಷಗಳು ಯಾವ ರೀತಿ ಬಳಸಿಕೊಳ್ಳುತ್ತವೆ ಎಂಬುದರ ಮೇಲೆ ಬೆಳಗಾವಿ ಅಧಿವೇಶನ ನಿಂತಿದೆ.

ಲಾಸ್ಟ್ ಸಿಪ್: ಆನೆ ನಡೆದದ್ದೇ ದಾರಿ ಹೌದಾದರೂ ಆನೆ ಅಡಿತಪ್ಪಿದರೆ ನಡೆಯುತ್ತಿರುವ ದಾರಿಯಲ್ಲೇ ಬೀಳುವುದು ಖಂಡಿತ.

Leave a Reply

Your email address will not be published. Required fields are marked *