Friday, 13th December 2024

ಮನೆ ಮನೆಗೂ ’ಸಂವಿಧಾನವಿರಲಿ’ !

ಅಭಿಮತ

ಕೆ.ಪಿ.ಪುತ್ತೂರಾಯ

ಸಂವಿಧಾನವೆಂದರೆ, ಎಲ್ಲರ ಹಿತದೃಷ್ಟಿಯನ್ನಿಟ್ಟುಕೊಂಡು, ತಜ್ಞರಿಂದ ರಚಿತವಾದ ಮರುಪ್ರಶ್ನೆ ಇಲ್ಲದೆ, ಪ್ರಜೆಗಳೆಲ್ಲರೂ ಪರಿಪಾಲಿಸಬೇಕಾದ ಕ್ರಮ ನಿಯಮಗಳ, ಕರ್ತವ್ಯ. ಜವಾಬ್ದಾರಿಗಳ ಹಾಗೂ ಹಕ್ಕು ಬಾಧ್ಯತೆಗಳ ಶಾಸನಬದ್ಧವಾದ ಒಂದು ಪ್ರಣಾಳಿಕೆ ಎನ್ನಬಹುದು.

ದೇಶಕ್ಕೇ ಅನ್ವಯವಾಗುವ ಸಂವಿಧಾನವಿದ್ದಂತೆ, ಮನೆಮನೆಗೂ ಒಂದು ಸಂವಿ ಧಾನವಿದ್ದಲ್ಲಿ ಅನೇಕ ಅಶಿಸ್ತುಗಳಿಂದ, ಅಚಾ ತುರ್ಯ, ಅಹಿತಕರ ಘಟನೆಗಳಿಂದ, ಬಿರುಕು ಬಿಕ್ಕಟ್ಟುಗಳಿಂದ, ಕಲಹ ಕ್ಲೇಷಗಳಿಂದ ಕುಟುಂಬಗಳನ್ನು ರಕ್ಷಿಸಬಹುದು.
ಸಂವಿಧಾನದಿಂದ ಕೊರತೆಯಿಂದಲೇ, ಅನೇಕ ಅವಿಭಕ್ತ, ಪ್ರತಿಷ್ಠಿತ ಕುಟುಂಬಗಳು ಒಡೆದು ಹೋಗುತ್ತಿರೋದನ್ನು ನಾವು ಕಾಣುತ್ತಿದ್ದೇವೆ.

ಹಿರಿಯರು ಶ್ರಮ ಪಟ್ಟು ಗಳಿಸಿದ ಸಂಪತ್ತನ್ನು ಉಳಿಸಿಕೊಳ್ಳಲಾಗದೆ ಶ್ರೀಮಂತರ ಮಕ್ಕಳು ಹಾಳಾಗಿ ಹೋಗಿದ್ದನ್ನ ಕಂಡಿದ್ದೇವೆ. ಇಷ್ಟಕ್ಕೂ ಕುಟುಂಬವೆಂದರೆ ಭಿನ್ನ ಭಿನ್ನ ವಯಸ್ಸು, ಆಸಕ್ತಿ, ಅಭಿರುಚಿ, ಯೋಚನೆ- ಯೋಜನೆಗಳುಳ್ಳ ಒಂದೇ ಮನೆ ಯಲ್ಲಿ ವಾಸಿಸುವ ಜನರು ಒಂದು ಪುಟ್ಟ ಗುಂಪಲ್ಲವೇ! ಇದರಲ್ಲಿ ಆತ್ಮೀಯತೆ ಅನ್ಯೋನ್ಯತೆ, ಬದ್ಧತೆ, ಹೊಣೆಗಾರಿಕೆಗಳನ್ನು ತುಂಬಿ, ಕುಟುಂಬದ ಜವಾಬ್ದಾರಿಯುತ ಸದಸ್ಯರನ್ನಾಗಿ ಮಾಡಲು, ನಿಯಮಾವಳಿಗಳು ಅವಶ್ಯ.

ಏನೇನೋ ಕನಸುಗಳೊಂದಿಗೆ ಜನರು ಮದುವೆಯಾಗುತ್ತಾರೆ. ನಾವು ಆದರ್ಶ ದಂಪತಿಗಳಾಗಬೇಕು; ನಮ್ಮದು ಒಂದು ಆದರ್ಶ ಕುಟುಂಬವಾಗಬೇಕು ಹಾಗೂ ಹಲವಾರು ತಲೆಮಾರಿನ ವರೆಗೆ ವಿಸ್ತರಿಸಿ, ಸುಖ – ಸಂತೃಪ್ತಿ, ಸಂತೋಷದಿಂದ ಬಾಳುವಂತಾಗಬೇಕು ಇತ್ಯಾದಿ. ಆದರೆ ಎಷ್ಟೋ ಸಲ ಬಯಸುವುದು ಒಂದು ಆಗುವುದು ಇನ್ನೊಂದೇ, ಇಷ್ಟಕ್ಕೂ ಕಾರಣ ಎಷ್ಟೋ ಮನೆಗಳಲ್ಲಿ ಶಿಸ್ತಿನ
ಪರಿಪಾಲನೆ ಇಲ್ಲ; ಅನುಸರಿಸಲೇಬೇಕಾದ ನೀತಿ ನಿಯಮಗಳಿಲ್ಲ; ನಾಯಕತ್ವವಿಲ್ಲ; ಸದಸ್ಯರೊಳಗೇ ಸಹಮತವಿಲ್ಲ; ಸಹಬಾಳ್ವೆ ಯಿಲ್ಲ; ಸೂಕ್ತ ಮಾರ್ಗದರ್ಶನ ವಿಲ್ಲ; ಎಲ್ಲರೂ ಅವರವರ ಸ್ವೇಚ್ಛೆಯಿಂದ ವರ್ತಿಸುತ್ತಾರೆ.

ಪರಿಣಾಮವಾಗಿ ಕುಟುಂಬಗಳು ಒಡೆದು ಹೋಗುತ್ತವೆ. ಹೀಗಾಗದಂತೆ ತಡೆಯುವ ಏಕೈಕ ವಿಧಾನವೆಂದರೆ, ಹಿರಿಯರಿಂದ ರೂಪು ಗೊಂಡು ಮತ್ತೆ ಸದಸ್ಯರೆಲ್ಲರೂ ಅನುಸರಿಸಲೇ ಬೇಕಾದ ಒಂದು ಸಂವಿಧಾನ. ಕುಟುಂಬದ ಸಂವಿಧಾನವೆಂದರೆ, ಕೆಲವು ನಿಬಂಧನೆಗಳ, ಹೊಣೆಗಾರಿಕೆಗಳ ಮೂಲಕ ಎಲ್ಲರೂ ಪಾಲಿಸಬೇಕಾದ ಒಂದು ವ್ಯವಸ್ಥೆ ಅಷ್ಟೆ. ಇವೆಲ್ಲವೂ ಅಲಿಖಿತ. ತಮ್ಮ ಅನುಭವಗಳಿಂದ ಹಿರಿಯರು ರೂಪಿಸಿದ್ದು ಇಲ್ಲವೇ ಸಾಯುವ ಕಾಲದಲ್ಲಿ ಹೇಳಿದ ಕಿವಿ ಮಾತುಗಳು.

ಇವೆಲ್ಲ ಯಾವ ಪಠ್ಯ ಪುಸ್ತಕಗಳಲ್ಲೂ ಲಭ್ಯವಿಲ್ಲ; ಇವನ್ನು ಹೇಳಿಕೊಡುವ ಗುರುಗಳೂ ಇಲ್ಲ; ಚರ್ಚಿಸುವ ತಜ್ಞರ ಸಮಿತಿಯೂ
ಸೇರಿಲ್ಲ. ಇವೆಲ್ಲ ಕುಟುಂಬದಲ್ಲಿ ಎಲ್ಲರ ಒಳಿತಿಗೆ, ಹಿರಿಯರು ಕಂಡುಕೊಂಡ ತತ್ವ ಸಿದ್ಧಾಂತಗಳು. ಸದ್ಗುಣ, ಸತ್ ಸಂಪ್ರದಾಯ, ಸನ್ನಡತೆ, ಮೌಲ್ಯ, ಸಂಸ್ಕಾರಗಳಿಗೆ ಸಂಬಂಧಿಸಿದ ಈ ಸಂವಿಧಾನಗಳು ಮೌಖಿಕವಾಗಿ ಹಾಗೂ ಕೃತಿ ರೂಪದಲ್ಲಿ ತಂದೆಯಿಂದ ಮಕ್ಕಳಿಗೆ ಮಕ್ಕಳಿಂದ ಅವರ ಮಕ್ಕಳಿಗೆ ಹರಿದು ಬಂದ ಅನುಭವಾಮೃತಗಳು. ಕಾಲಕಾಲಕ್ಕೆ ಇವುಗಳಿಗೆ ತಿದ್ದುಪಡಿಯನ್ನು ತರಬಹುದಾದರೂ ಹೆಚ್ಚಿ ನವು ಸರ್ವಕಾಲಿಕ ಸರ್ವಮಾನ್ನಿಕ.

ಇದನ್ನು ಕುಟುಂಬದ ಎಲ್ಲಾ ಸದಸ್ಯರು ಕಟ್ಟುನಿಟ್ಟಾಗಿ ಪಾಲಿಸಿದರೆ, ಸಂಸಾರ ಸುಭದ್ರ-ಸುಖಮಯವಾಗೋದರಲ್ಲಿ ಸಂಶಯ ವಿಲ್ಲ. ‘ಭಾರತದ ಪ್ರಜೆಗಳಾದ ನಾವು ಎನ್ನುವಂತೆ ಆರಂಭವಾಗುವ ಭಾರತದ ಸಂವಿಧಾನದಂತೆ “ಕುಟುಂಬದ ಸದಸ್ಯರಾದ ನಾವು ಎಂಬ ಬದ್ಧತೆ ಭಾವನೆಯಿಂದ, ಮನೆಯ ಸಂವಿಧಾನದ ಆಚರಣೆಗಳು ಆರಂಭವಾಗಬೇಕು. ದೋಣಿಯಲ್ಲಿದ್ದವರೆಲ್ಲಾ ಹರಿಗೋಲನ್ನು ಹಾಕುತ್ತಿದ್ದರೆ, ದೋಣಿ ಮುಂದೆ ಸಾಗದು. ಬೇಕಾದರೆ, ಎಲ್ಲರೂ ಒಟ್ಟಿಗೆ ಸೇರಿ, ದೋಣಿ ಯಾವಕಡೆ ಹೋಗ ಬೇಕೆಂಬುದನ್ನು ನಿರ್ಧರಿಸಲಿ.

ಆದರೆ ಒಮ್ಮೆ ನಿರ್ಧರಿಸಿದ ಮೇಲೆ, ಅದನ್ನು ಜಾರಿಗೆ ತರುವ ಕೆಲಸ ಒಬ್ಬನಿಂದಲೇ ಆಗಬೇಕು. ಅವನೇ ಕ್ಯಾಪ್ಟನ್, ಕುಟುಂಬದ ಯಜಮಾನ. ನಂಬಿಕೆ, ವಿಶ್ವಾಸ, ಗೌರವಗಳಿಂದ ಸದಸ್ಯರೆಲ್ಲರೂ ಇವನನ್ನೇ ಅನುಸರಿಸಬೇಕು. ಚರ್ಚೆಗಳಿಗೆ, ಸಲಹೆ-ಸೂಚನೆ ಗಳಿಗೆ, ವಿಚಾರ ವಿನಿಮಯಗಳಿಗೆ ಎಲ್ಲರಿಗೂ ಅವಕಾಶವಿದೆಯಾದರೂ, ಅಂತಿಮ ನಿರ್ಧಾರ ಒಬ್ಬರದೇ ಆಗಿರಲಿ. ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ, ತಮ್ಮ ಮನೆತನ ಮತ್ತು ಕುಟುಂಬದವರ ಬಗ್ಗೆ ತುಂಬು ಅಭಿಮಾನವಿರಬೇಕು. ಮನೆತನದ ಮರ್ಯಾದೆಯನ್ನು ಮಣ್ಣುಪಾಲು ಮಾಡಲು ಯಾರೂ ಕಾರಣ ಕರ್ತರಾಗಬಾರದು.

ಸಾಧ್ಯವಾದಷ್ಟು ಮಟ್ಟಿಗೆ ಕುಟುಂಬದ ಗೌರವವನ್ನು ಹೆಚ್ಚಿಸುವ ಕೆಲಸಗಳನ್ನು ಮಾಡುತ್ತಿರಬೇಕು.ಕುಟುಂಬದಲ್ಲಿ ‘ನಾನೇ ಎಲ್ಲ; ನನ್ನಿಂದಲೇ ಎಲ್ಲ ಎಂಬ ಮೇಲರಿಮೆ, ಇಲ್ಲವೇ ‘ನಾನು ಏನೂ ಅಲ್ಲ ಎಂಬ ಕೀಳರಿಮೆ ಎರಡೂ ಸಲ್ಲ. ನನ್ನ ಹಿಂದೆ ಕುಟುಂಬ ದವರೆಲ್ಲರೂ ಇದ್ದಾರೆ, ಅಂತೆಯೇ ಎಲ್ಲರ ಹಿಂದೆ ನಾನೂ ಇದ್ದೇನೆ ಎಂಬ ಬದ್ಧತೆ – ಭಾವನೆ ಬೆಳೆದಿರಬೇಕು. ಕಷ್ಟ ನಷ್ಟಗಳು ಕುಟುಂಬದವರನ್ನು ಇನ್ನಷ್ಟು ಹತ್ತಿರ ತರಬೇಕು. ಸುಖ ಸಂತೋಷಗಳು ಹಂಚಿಕೊಂಡಷ್ಟು ಇಮ್ಮಡಿಯಾಗಬೇಕು.

‘ನಾನು’ ಎಂಬ ಜಾಗದಲ್ಲಿ ‘ನಾವು’ ಎಂಬ ಪದದ ಬಳಕೆಯಾಗುತ್ತಿರಬೇಕು. ಒಮ್ಮತವಿರುವ ವಿಷಯಗಳನ್ನಲ್ಲ; ಒಮ್ಮತವಿಲ್ಲದ
ವಿಷಯಗಳನ್ನೂ ನಿಭಾಯಿಸಲು ಸಂವಿಧಾನ ನೆರವಾಗಬೇಕು. ಒಂದೇ ಮನೆಯಲ್ಲಿದ್ದುಕೊಂಡು ಅತೃಪ್ತಿ-ಅಸಮಾಧಾನದಿಂದ ಹಿಂಸೆ ಪಟ್ಟುಕೊಂಡು ಬಾಳುವ ಪರಿ ಯಾರಿಗೂ ನೆಮ್ಮದಿ ನೀಡದು.ಈ ಸಂವಿಧಾನಗಳು, ನಿತ್ಯ ನಡೆಯುವ ದಿನಚರಿಯಿಂದ
ಹಿಡಿದು ಸತ್ ಸಂಪ್ರದಾಯಗಳ, ಮನನೋಯಿಸದ ಆತ್ಮೀಯ ಮಾತುಗಳವರೆಗೆ ವಿಸ್ತರಿಸಬೇಕು. ಉದಾಹರಣೆಗೆ ಕುಟುಂಬದ ಸದಸ್ಯರೆಲ್ಲರೂ ಒಟ್ಟಿಗೆ ಊಟ ಮಾಡುವ, ಪ್ರವಾಸ ಗೈಯುವ, ಹಬ್ಬ ಹರಿದಿನಗಳನ್ನು ಆಚರಿಸುವ ಅತಿಥಿ ಸತ್ಕಾರದಲ್ಲಿ ಪಾಲ್ಗೊಳ್ಳುವ ಕ್ರಮ ಕಡ್ಡಾಯವಾಗಬೇಕು.

ಅಂತೆಯೇ ಕಿರಿಯರು ಹಿರಿಯರಿಗೆ ಕೊಡಬೇಕಾದ ಗೌರವ, ವೃದ್ಧಾಪ್ಯದಲ್ಲಿ ಹೆತ್ತವರಿಗೆ ಮಕ್ಕಳು ಮಾಡಬೇಕಾದ ಸೇವೆ, ದುಶ್ಚಟ-
ದುರಭ್ಯಾಸಗಳಿಂದ ದೂರವಿರುವ, ಮಹಿಳೆಯರನ್ನು ಶೋಷಿಸದ ಜೀವನ ಕ್ರಮ ಇತ್ಯಾದಿಗಳು ಸಂವಿಧಾನದ ವ್ಯಾಪ್ತಿಯಲ್ಲಿ ಬರಬೇಕು. ಆರ್ಥಿಕ ವಿಚಾರದಲ್ಲಂತೂ ಸಂವಿಧಾನ ಕಟ್ಟುನಿಟ್ಟಾಗಿರಲಿ. ‘ದುಡಿದು ತಿನ್ನಬೇಕಾದ ದಿನಗಳಲ್ಲಿ ಕುಳಿತು ತಿಂದರೆ, ಕುಳಿತು ತಿನ್ನಬೇಕಾದ ದಿನಗಳಲ್ಲಿ ಬೇಡಿ ತಿನ್ನ ಬೇಕಾಗಬಹುದು’ ಹಾಗೂ ‘ಹಾಸಿಗೆ ಇದ್ದಷ್ಟೆ ಕಾಲು ಚಾಚಬೇಕು ಇಲ್ಲವಾದರೆ, ಎಲ್ಲರ ಎದುರು ಕೈ ಚಾಚಬೇಕಾಗುತ್ತದೆ’ ಎಂಬ ಕಿವಿಮಾತು ಎಲ್ಲರಿಗೂ ತಿಳಿದಿರಲಿ.

ಸಂಸಾರದಲ್ಲಿ ಸಂಬಂಧಗಳಿಗಿಂತಲೂ ಅನುಬಂಧ ಮುಖ್ಯ. ಇದನ್ನು ಗಾಜಿನ ಗೊಂಬೆಯಂತೆ, ಎಚ್ಚರದಿಂದ ಕಾಪಾಡಬೇಕು. ಒಡೆದು ಹೋದ ಮನಸ್ಸು ಒಡೆದು ಹೋದ ಕನ್ನಡಿಯಂತೆ ಮತ್ತೆ ಸರಿಹೋಗದು. ಆದುದರಿಂದ ನಮ್ಮ ನಡೆ ನುಡಿ ಯಾರಿಗೂ ನೋವಾಗದಂತಿರಲಿ. ಸಂಸಾರದಲ್ಲಿ ತ್ಯಾಗ-ತಾಳ್ಮೆ, ಸಹನೆ, ಹೊಂದಾಣಿಕೆ, ಕಾಳಜಿ, ಬದ್ಧತೆಗಳೇ ಮೊದಲಾದ ನೈತಿಕ ಮೌಲ್ಯಗಳೇ
ಸಂವಿಧಾನವು ತಿಳಿ ಹೇಳುವ ಸೂತ್ರಗಳಾಗಬೇಕು. ಸಂವಿಧಾನಗಳು, ಪ್ರಮಾದಗಳಾಗದಂತೆ ನೋಡಿಕೊಳ್ಳುವುದರ ಜೊತೆ, ಜೀವನದಲ್ಲಿ ನಿರೀಕ್ಷಿತವಾದುದನ್ನಲ್ಲ; ಅನಿರೀಕ್ಷಿತವಾದುದನ್ನು ಎದುರಿಸಲೂ ನೆರವಾಗುತ್ತವೆ. ಆದುದರಿಂದ ಮನೆಗೊಂದು ಸಂವಿಧಾನವಿರಲಿ!