ಏಳನೇ ವೇತನ ಆಯೋಗದ ಶಿಫಾರಸ್ಸು ಜಾರಿಗೆ ಆಗ್ರಹ ಪ್ರತಿದಿನ ಕೇಳಿಬರುತ್ತಿದೆ. ಇತ್ತ ಸರಕಾರವು ಪರಿಷ್ಕೃತ ವೇತನ ಜಾರಿಗೊಂಡರೆ ರಾಜ್ಯ ಬೊಕ್ಕಸಕ್ಕೆ ಸಾವಿರಾರು ಕೋಟಿ ಹೊರೆ ಬೀಳಲಿದ್ದು, ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಸಂಪನ್ಮೂಲದ ಮುಗ್ಗಟ್ಟು ಎದುರಾಗಲಿದೆ ಎನ್ನುತ್ತಿದೆ. ಇದಕ್ಕೆ ಸರಕಾರಿ ನೌಕರರು ಸಂಪನ್ಮೂಲ ಕ್ರೋಢೀಕರಣದಲ್ಲಿ ಸರಕಾರಿ ನೌಕರರ ಪಾಲೂ ಇದೆ ಎಂದು ಹೇಳಿದೆ.
ಆದರೆ ಇತ್ತ ಸರಕಾರಿ ಕಚೇರಿಗಳಲ್ಲಿ ಸುಮಾರು ಅರ್ಧದಷ್ಟು ಮಂದಿ ಹೊರಗುತ್ತಿಗೆ ಸಿಬ್ಬಂದಿಗಳು ಕಂಡುಬರುತ್ತಾರೆ. ಈ ಸಿಬ್ಬಂದಿಗಳು ಅತ್ಯಂತ ಕನಿಷ್ಠ ವೇತನದಲ್ಲಿ, ಯಾವುದೇ ಭತ್ಯೆ ಇನ್ನಿತರ ಸೌಲಭ್ಯಗಳಿಲ್ಲದೆಯೂ ವಿಶೇಷವಾಗಿ ಶ್ರಮಿಸುತ್ತಿರುವುದನ್ನು ಕಾಣಬಹುದು. ಆದರೆ ಅವರ ವೇತನ-ಸೌಲಭ್ಯಗಳ ಬಗ್ಗೆ ಯಾರೂ ಧ್ವನಿ ಎತ್ತುವವರಿಲ್ಲ. ಇವರಲ್ಲಿ ಬಹುತೇಕ ಮಂದಿ ಪದವೀಧರರು!
ಅವರಿಗೆ ಸಿಗುವ ವೇತನ ಎಷ್ಟು ಎಂದು ನೋಡಿದರೆ, ಡಿ-ದರ್ಜೆಯ ಕಾಯಂ ನೌಕರರ ವೇತನಕ್ಕಿಂತಲೂ ತುಂಬಾ ಕಡಿಮೆ. ಉದ್ಯೋಗದ ಭದ್ರತೆಯಂತೂ ಇಲ್ಲವೇ ಇಲ್ಲ. ಇವರಿಂದಾಗಿ ಕಾಯಂ ನೌಕರರ ಕೆಲಸದ ಹೊರೆ ಬಹಳಷ್ಟು ತಗ್ಗುತ್ತಿದೆ, ಸಾರ್ವಜನಿಕರಿಗೆ ಇವರ ಸೇವೆ ವಿಶೇಷವಾಗಿ ಸಲ್ಲುತ್ತಿದೆ. ಆದರೆ ಯಾವ ಕ್ಷಣದಲ್ಲಾದರೂ ಇವರು ತಮ್ಮ ಉದ್ಯೋಗ ಕಳೆದುಕೊಳ್ಳಲು ಸಿದ್ಧರಿರಬೇಕು! ಈ ಹೊರಗುತ್ತಿಗೆ ನೌಕರರ ಉದ್ಯೋಗ ಭದ್ರತೆಯ ಬಗ್ಗೆಯಾಗಲೀ, ಅವರ ವೇತನ-ಸೌಲಭ್ಯಗಳ ಹೆಚ್ಚಳದ ಬಗ್ಗೆಯಾಗಲೀ ಎಲ್ಲಿಯೂ ಧ್ವನಿ ಮೂಡದಿರುವುದು ವಿಷಾದಕರ. ಹೊರಗುತ್ತಿಗೆ ಸಿಬ್ಬಂದಿಗಳು ಗರಿಷ್ಠ ಸೇವೆ ಸಲ್ಲಿಸಿದರೂ ಈ ವೇತನ-ಸೌಲಭ್ಯಗಳ ಹೆಚ್ಚಳದ ವಿಚಾರ ಬಂದಾಗ ಅವರೆಲ್ಲ ಹೊರಗುಳಿಯಬೇಕೇ? ಕಾಯಂ ನೌಕರರ ಬೇಡಿಕೆ ಈಡೇರಿಕೆಯ ಬಗ್ಗೆ ಆಗ್ರಹ ವ್ಯಕ್ತವಾಗುವಾಗ ಹೊರಗುತ್ತಿಗೆ ನೌಕರರಿಗೂ ಸಂಸಾರವಿದೆ, ಕಷ್ಟವಿದೆ ಎಂಬ ಅರಿವು ಯಾರಿಗೂ ಮೂಡದಿರುವುದು ಖೇದಕರ.
ನೌಕರರ ಸಂಘದ ಅಧ್ಯಕ್ಷರೂ ಇದನ್ನು ಅರ್ಥಮಾಡಿಕೊಳ್ಳಬೇಕು. ಎಲ್ಲ ರೀತಿಯ ಸೌಲಭ್ಯಗಳ ಹೆಚ್ಚಳದ ಬಗ್ಗೆ ಆಗ್ರಹಿಸುವಾಗ ತಮ್ಮೊಂದಿಗೆ ಸೇವೆ ಸಲ್ಲಿಸುತ್ತಿರುವ ಹೊರಗುತ್ತಿಗೆ ನೌಕರರ ಹಂತ-ಹಂತವಾಗಿ ಕಾಯಂಗೊಳಿಸಲು ಮತ್ತು ಅವರಿಗೂ ವೇತನ-ಭತ್ಯೆ-ರಜಾ ಸೌಲಭ್ಯ ಇತ್ಯಾದಿಗಳ ಹೆಚ್ಚಳದ ಬಗ್ಗೆ ಆಗ್ರಹ ಮೂಡಿಬರಬೇಕಲ್ಲವೇ? ತಮ್ಮೊಂದಿಗೇ ದುಡಿಯುವ ಸಹೋದ್ಯೋಗಿಗಳ ಬಗ್ಗೆ ಯಾಕಿಷ್ಟು ತಾತ್ಸಾರ? ಸಾರ್ವಜನಿಕರೂ ಈ ಬಗ್ಗೆ ನವೀಯ ಅನುಕಂಪದ ನೆಲೆಯಲ್ಲಿ ಸರಕಾರದ ಗಮನ ಸೆಳೆಯುವುದು ಸೂಕ್ತವಲ್ಲವೇ? ತನ್ಮೂಲಕ ಅವರ ಬದಕೂ ಕೂಡ ಸ್ವಲ್ಪವಾದರೂ ಚೇತರಿಸಿಕೊಳ್ಳಲು ಅನುವು ಮಾಡಿಕೊಡುವ ಅವಶ್ಯವಿದೆ.