Saturday, 14th December 2024

ಪ್ರಕೃತಿ ಮತ್ತೆ ತನ್ನನ್ನು ತಾನೇ ಸಮತೋಲನಕ್ಕೆ ತರಲು ಕರೋನಾ ಒಂದು ಹೇತುವಾಯಿತೇ ?

ಅಭಿವ್ಯಕ್ತಿ

ಚಂದ್ರಶೇಖರ ಸ್ವಾಮೀಜಿ, ವಾಸ್ತುತಜ್ಞರು ಹಾಗೂ ಜ್ಯೋತಿಷಿಗಳು

‘ಪರಿಸರ ವ್ಯವಸ್ಥೆಯ ಪುನಃಸ್ಥಾಪನೆ’ ಇದು ಈ ವರ್ಷದ ವಿಶ್ವ ಪರಿಸರ ದಿನಾಚರಣೆಯ ಘೋಷ ವಾಕ್ಯ. ಹೌದು ಕಳೆದ ಎರಡು
ವರ್ಷದಿಂದ ಮತ್ತೆ ಪರಿಸರ ಮೈಕೊಡವಿಕೊಂಡು ತನ್ನನ್ನು ತಾನೇ ಸರಿಪಡಿಸಿಕೊಳ್ಳಲು ಯತ್ನಿಸುತ್ತಿದೆ. ಪರಿಸರ ತನ್ನನ್ನು
ತಾನೇ ಸರಿಪಡಿಸಿಕೊಳ್ಳುತ್ತಿದೆ. ಮತ್ತೆ ಮನೆಯಂಗಳಕ್ಕೆ ಗುಬ್ಬಚ್ಚಿ ಬಂದಿವೆ.

ಗೂಡುಕಟ್ಟಲು ಅಂಚುಗಳನ್ನು ಹುಡುಕುತ್ತಿದೆ. ಚಿಲಿಪಿಲಿ ಮಾಡುತ್ತಿವೆ. ನಾವು ಪರಿಸರದ ಮೇಲೆ ಮಾಡಿರುವ ದೌರ್ಜನ್ಯದಿಂದ
ಅತ್ಯಂತ ಸೂಕ್ಷ್ಮ ಹಕ್ಕಿ ಎಂದೆನಿಸಿಕೊಂಡ ಗುಬ್ಬಚ್ಚಿ ನಮ್ಮನ್ನು ಬಿಟ್ಟೇ ಹೋಗಿತ್ತು. ಅವುಗಳ ಸಂತತಿಯೇ ಕಡಿಮೆಯಾಗಿತ್ತು.
ಎಲ್ಲೋ ಮರೆಯಾಗಿದ್ದ ಅತ್ಯಂತ ಸೂಕ್ಷ್ಮ ಹಕ್ಕಿಗಳಲ್ಲಿ ಒಂದಾಗಿರುವ ಗುಬ್ಬಚ್ಚಿಗಳು ಮತ್ತೆ ನಮ್ಮ ಮನೆಯಂಗಳಕ್ಕೆ ಎಲ್ಲಿಂದ ಬಂತು? ಇಷ್ಟು ದಿನ ಎಲ್ಲಿಗೆ ಹೋಗಿದ್ದವು. ಇದು ಯಾವುದರ ಸೂಚಕ ಎಂಬುದನ್ನು ಸುದೀರ್ಘವಾಗಿ ವಿವರಿಸುವ ಅವಶ್ಯಕತೆ ಯಿಲ್ಲ.

ನಾವು ಮಾಡಿದ ತಪ್ಪಿಗೆ  ನಮ್ಮನ್ನೇ ಬಿಟ್ಟು ಹೋಗಿದ್ದ ಗುಬ್ಬಚ್ಚಿಗಳು ಇಂದು ಮತ್ತೆ ಮನೆ ಮುಂದೆ ಬಂದು ನಿಂತಿವೆ. ಅಂದರೆ ಇಪ್ಪತ್ತೈದು ವರ್ಷದ ಹಿಂದಿನ ಪ್ರಕೃತಿಯನ್ನು ನಾವು ಕಾಣುತ್ತಿದ್ದೇವೆ. ಅಸಮತೋಲನದಲ್ಲಿದ್ದ ಪ್ರಕೃತಿ ಮತ್ತೆ ತನ್ನನ್ನು ತಾನೇ
ಸಮತೋಲನಕ್ಕೆ ತರಲು ಕರೋನಾ ಒಂದು ಹೇತುವಾಯಿತೇ? ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಹೊರಟಾಗ ಸಿಗುವ ಉತ್ತರ ಹೌದು’.

ಕರೋನಾ ವೈರಸ್ ಮನು ಕುಲವನ್ನು ಬೆಚ್ಚಿ ಬೀಳಿಸಿದೆ. ಎರಡನೇ ಅಲೆಯ ಕಬಂಧಬಾಹು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವೈರಸ್ ಹಲವು ರೂಪಾಂತರವನ್ನು  ಪಡೆದುಕೊಂಡಿದೆ. ಲಸಿಕೆಗಳು ಬಂದಿವೆ. ಇನ್ನೊಂದೆಡೆ ಯಿಂದ ಪ್ರಕರಣ ಸಂಖ್ಯೆ ಮತ್ತು ಸಾವಿನ ಸಂಖ್ಯೆ ಪೂರ್ತಿಯಾಗಿ ನಿಯಂತ್ರಣಕ್ಕೆ ಬರಲಿಲ್ಲ. ವೈರಸ್‌ನ ನಾನಾ ಮಗ್ಗುಲುಗಳ ಕುರಿತು ವಿಜ್ಞಾನಿಗಳು ಹಗಲು ಇರುಳು
ಎನ್ನದೆ ಸಂಶೋಧನೆ ನಡೆಸುತ್ತಿದ್ದರೆ, ಕರೋನಾ ನಿಯಂತ್ರಣಕ್ಕೆ ಸರಕಾರದೊಂದಿಗೆ ಅಧಿಕಾರಿಗಳ ವರ್ಗ ದಿನದ 24 ಗಂಟೆ ಕೆಲಸ ಮಾಡುತ್ತಿದೆ. ಕರೋನಾ ಬಾಧಿತರ ಚಿಕಿತ್ಸೆ, ಫಂಗಸ್ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದೆ.

ಒಂದರ್ಥದಲ್ಲಿ ಮಹಾಯುದ್ಧವನ್ನು ವಿಶ್ವ ಮಾಡುತ್ತಿದೆ. ಅಂದು ಎರಡೂ ಮಹಾಯುದ್ಧಗಳು ಎರಡು ರಾಷ್ಟ್ರಗಳ ನಡುವೆ ನಡೆದರೆ, ಇಂದು ವಿಶ್ವವು ಕರೋನಾ ವೈರಸ್ ವಿರುದ್ಧ ಯುದ್ಧ ಮಾಡುತ್ತಿದೆ. ಅಂದು ಜನರಲ್ಲಿದ್ದ ಆತಂಕ ಇಂದೂ ಇದೆ. ಅದೂ ನಾಶದ ಆತಂಕ. ಪರಿಸರ ಶುದ್ಧವಾಗುತ್ತಿದೆ. ಎಲ್ಲೆಲ್ಲೂ ಕಲುಷಿತ ರಹಿತ ವಾತಾವರಣ. ಶುಭ್ರ ಗಾಳಿ ಮತ್ತೆ ಬಂದಿದೆ. ಮನೆಗೆ ಮತ್ತೆ
ಗುಬ್ಬಿ ಬಂದಿದೆ. ಅಂದರೆ ಪರಿಸರ ಶುದ್ಧವಾಗುತ್ತಿದೆ.

ಪ್ರಕೃತಿಯ ಮೇಲೆ ನಾವು ಮಾಡಿದ ಸವಾರಿಯ ಹಾನಿ ಅಲ್ಪ ಮಟ್ಟಿಗೆ ಕಡಿಮೆಯಾಗುತ್ತಿದೆ. ಅತಿಯಾದ ಬಳಕೆಯಾದ ವಾಹನ ವನ್ನು ವರ್ಷಕ್ಮೊಮ್ಮೆ ರಿಬೋರ್ ಮಾಡಿಸಿದಂತೆ ಇಲ್ಲಿ ಪ್ರಕೃತಿಯೇ ಆಕೆಯ ಆಸಮತೋಲವನ್ನು ಸರಿಪಡಿಸಿಕೊಳ್ಳು
ತ್ತಿದ್ದಾಳೆ. ಗಂಗೆ, ಯಮುನೆ, ಗೋದಾವರಿ, ಸರಸ್ವತಿ, ನರ್ಮದೆ, ಸಿಂದು, ಕಾವೇರಿ ಹೀಗೆ ನದಿಗಳೆಲ್ಲವೂ ಮತ್ತೆ  ಪರಿಶುದ್ಧವಾಗುತ್ತವೆ. ವಾಯು ಮಾಲಿನ್ಯ ಕಡಿಮೆಯಾಗಿದೆ.

ಗಿಡ ಮರಗಳ ಆರೋಗ್ಯ ಸುಧಾರಿಸಿವೆ . ಹವಾಮಾನದಲ್ಲಿ ಆಮ್ಲಜನಕ ಸಮತೋಲನಕ್ಕೆ ಬಂದಿದೆ. ಸಾಗರಗಳ ಕಿನಾರೆಗಳು ಸುಧಾರಿಸಿವೆ. ಪ್ರಕೃತಿಯಲ್ಲಿ ಪ್ಲಾಸ್ಟಿಕ್‌ನ ಹಾನಿ ಕಡಿಮೆಯಾಗಿವೆ. ಕಾಡು ಪ್ರಾಣಿಗಳು ವಾಹನ ಮತ್ತು ಮನುಷ್ಯರ ಕಾಟವಿಲ್ಲದೆ ನಿಶ್ಚಿಂತೆಯಿಂದ ಓಡಾಡುತ್ತಿವೆ. ಮನುಷ್ಯ ಎಲ್ಲೆಂದರಲ್ಲಿ ಉಗಿದಿದ್ದ ಪಾನ್ ಬೀಡಾ ಗುಟ್ಕಾದ ಕಲೆಗಳು ಅಳಿಸಿ ಹೋಗಿ ಭೂಮಿ ತಾಯಿಯ ಮುಖ ಹೊಳೆಯುತ್ತಿರುತ್ತದೆ.

ಗುಬ್ಬಚ್ಚಿ ಮನೆಗೆ ಬಂದ ವಿಚಾರ ಮಾತ್ರವಲ್ಲ, ಭೂಮಿಯ ಒಳಗೆ ಮಾಯವಾಗಿದ್ದ ಎರೆಹುಳುಗಳಂಥಾ ನಿಸ್ವಾರ್ಥ ಜೀವಿಗಳು ಈಗ ಮತ್ತೊಮ್ಮೆ ಮರುಹುಟ್ಟು ಪಡೆದು ಕರ್ತವ್ಯವನ್ನಾರಂಭಿಸುತ್ತವೆ. ಪರಿಸರ ಸ್ನೇಹಿ ಸೂಕ್ಷ್ಮ ಜೀವಿಗಳು ಮರುಹುಟ್ಟು ಪಡೆದು ಭೂಮಿಯ ಆರೋಗ್ಯ ಸುಧಾರಿಸುತ್ತದೆ. ಪ್ರಕೃತಿಯಲ್ಲಾದ ಬದಲಾವಣೆಯನ್ನು ಮನುಷ್ಯ ಗಮನಿಸಿ ಗುರುತಿಸುವಷ್ಟು ಸೂಕ್ಷ್ಮನಾಗ ಬೇಕು. ತನ್ನ ಮಿತಿಮೀರಿದ ಶೋಷಣೆಯಿಂದ ಭೂಮಿಯ ಇತರ ಜೀವರಾಶಿಗಳಿಗೆ ಸ್ವಲ್ಪ ದಿನಗಳ ಕಾಲ ಮುಕ್ತಿಯನ್ನು ಈ ಕರೋನಾ ನೀಡಿದೆ ಎಂದರೂ ತಪ್ಪಲ್ಲ.

ಪರಿಸರ ಸೃಷ್ಟಿಯ ಆಗರ. ಪ್ರಕೃತಿಗೂ, ಮಾನವನಿಗೂ ಅವಿನಾಭಾವ ಸಂಬಂಧ. ಮನುಷ್ಯ ಪ್ರಕೃತಿಯಲ್ಲೇ ಹುಟ್ಟಿ, ಪ್ರಕೃತಿ ಯಲ್ಲೇ ಬದುಕಿ ಬಾಳುತ್ತಾನೆ. ತನಗೆ ಬೇಕಾದ ಎಲ್ಲವನ್ನೂ ಪ್ರಕೃತಿಯಿಂದಲೇ ಪಡೆಯುತ್ತಾನೆ. ಪರಿಸರವನ್ನು ನಾವು ಪುನಃ ಸ್ಥಾಪನೆ
ಮಾಡಬೇಕಾದ ಕಾಲ ಘಟ್ಟದಲ್ಲಿ  ವಿದ್ದೇವೆ. ಎಚ್ಚೆತ್ತುಕೊಳ್ಳದಿದ್ದರೆ ಪ್ರಕೃತಿ ವಿಕೋಪದ ಜತೆಗೆ ಮತ್ತಷ್ಟು ಘೋರ ವಿಕೋಪಗಳನ್ನು ಎದುರಿಸಬೇಕಾಗುತ್ತದೆ.

ಪರಿಸರವನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕೇ ಹೊರತು ನಾಶ ಮಾಡುವುದಲ್ಲ. ಆಧುನಿಕತೆಯ ಫಲವಾಗಿ ಬಂದ ಅನೇಕ ಆವಿಷ್ಕಾರಗಳು ಮನುಕುಲಕ್ಕೆ ಒಂದೆಡೆ ಒಳಿತಾಗಿ ಪರಿಣಮಿಸಿದರೆ, ಮತ್ತೊಂದೆಡೆ ಮಾರಕವಾಗುತ್ತಿದೆ. ಇದ್ಯಾವುದರ ಗೋಜಿಗೇ
ಹೋಗದ ಮಾನವ ತನ್ನ ಸುಖವನ್ನೇ ಪ್ರಧಾನವಾಗಿಸಿಕೊಂಡು ಪ್ರಕೃತಿಯನ್ನು ನಾಶ ಮಾಡುತ್ತಿರುವುದು ದುರ್ದೈವ. ಇನ್ನಾದರೂ ಎಚ್ಚೆತ್ತುಕೊಂಡು ಹೊಸ ಬದುಕು ಕಟ್ಟಿಕೊಳ್ಳದಿದ್ದಲ್ಲಿ ಭವಿಷ್ಯದಲ್ಲಿ ಉಳಿಗಾಲವಿಲ್ಲ.

ಜಗತ್ತಿನ 750 ಕೋಟಿ ಜನರು ವಾಸಿಸಲು ಇರುವುದೊಂದೇ ಭೂಮಿ ಎಂಬುದನ್ನು ಮರೆಯಬಾರದು. ಈ ನಿಟ್ಟಿನಲ್ಲಿ ತಮ್ಮ ಸುತ್ತಮುತ್ತಲಿನ ಪರಿಸರ ಮತ್ತು ವಾತಾವರಣವನ್ನು ಕಾಪಾಡಿಕೊಳ್ಳುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ. ಹಿರಿಯರು ಅಂದು ಪ್ರಕೃತಿಯನ್ನು ದೇವರೆಂದು ಭಾವಿಸಿದರು.

ಪ್ರಕೃತಿಯಲ್ಲಿರುವ ಮಾನವ ಸಮುದಾಯವನ್ನು ಬಿಟ್ಟು ಗಿಡ, ಮರ, ಬಳ್ಳಿ, ಪ್ರಾಣಿ, ಪಕ್ಷಿ ಹೀಗೆ ಪ್ರಕೃತಿಯ ಎಲ್ಲ ಅಂಶದಲ್ಲೂ ದೇವರನ್ನು ಕಂಡು ಪೂಜಿಸಿದರು. ಬೆಳೆಸಿದರು. ಆದರೆ ಅದ್ಯಾರೋ ಸಂಸ್ಕಾರವನ್ನೇ ಟೀಕಿಸಿದರು ಎಂದು ಎಲ್ಲವನ್ನೂ ಬಿಟ್ಟು ಕ್ರಾಂತಿಕಾರಿಗಳಾದೆವು. ನಮ್ಮ ಹಿರಿಯರು ವಿನಾಃ ಕಾರಣ ಪೂಜಿಸಲಿಲ್ಲ. ಅಲ್ಲೊಂದು ಆದರ್ಶ ಇತ್ತು. ಕೃತಜ್ಞತೆ ಇತ್ತು. ಪ್ರೀತಿ ಇತ್ತು. ಬದುಕು ನೀಡಿದಕ್ಕೆ ಋಣ ಸಂದಾಯದ ಪರಿಕಲ್ಪನೆ ಇತ್ತು. ಅಂದು ಪೂಜಿಸಿ ಉಳಿಸಿದ ಕಾರಣ ಇಂದು ನಾವು
ಉಸಿರಾಡುತ್ತಿದ್ದೇವೆ.

ಆದರೆ ನಾವು ಮುಂದಿನ ಪೀಳಿಗೆಗೆ ಇದೇ ಪರಿಸರವನ್ನು ಉಳಿಸುತ್ತಿದ್ದೇವೆಯೇ ಎಂಬುದರ ಬಗ್ಗೆ ಆಲೋಚಿಸುವ ಕಾರ್ಯ ಆಗಬೇಕಿದೆ. ಯುವಜನತೆಯೂ ಅಷ್ಟೆ. ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ಗಂಭೀರವಾಗಿ ಪರಿಗಣಿಸಬೇಕು. ಇಂದಿನ ಮಕ್ಕಳು ಪರಿಸರದಿಂದ ವಿಮುಖರಾಗುತ್ತಿದ್ದಾರೆ. ಅದಾಗಬಾರದು. ಅವರೂ ಸುಂದರ ಪರಿಸರಕ್ಕೆ ತೆರೆದುಕೊಳ್ಳುವಂತೆ
ಪ್ರೇರೇಪಿಸಬೇಕಿದೆ.

ಭರವಸೆ, ಕನಸು ಇಲ್ಲದಿದ್ದರೆ, ನಾಳೆ ಇಲ್ಲ. ಮಾನವನು ಕಲ್ಪಿಸಲೂ ಅಸಾಧ್ಯವೆನಿಸಿದ ಅನೇಕ ಸಂಗತಿಗಳನ್ನು ಈಗಾಗಲೇ ಸಾಧಿಸಿ ತೋರಿಸಿದ್ದಾನೆ. ಇಂಥದ್ದರಲ್ಲಿ ನಾವೇ ಹುಟ್ಟುಹಾಕಿದ ಸಮಸ್ಯೆಗಳನ್ನೂ ಮೀರಿ ನಮ್ಮ ಭವಿಷ್ಯವನ್ನು ಸುಭದ್ರಗೊಳಿಸಲು ಸಾಧ್ಯವಿಲ್ಲವೇ? ಖಂಡಿತಾ ಸಾಧ್ಯವಿದೆ ಎಂಬ ನಿಲುವಿನೊಂದಿಗೆ ಮುಂದಿನ ಹೆಜ್ಜೆ ಇಡಬೇಕಿದೆ.

ತಾಯಿ ಜತೆ ಇರುವಾಗ ಯಾರಿಗೂ ತಾಯಿಯ ಮಹತ್ವ, ಅಗತ್ಯ ಅರ್ಥ ಆಗೋದೇ ಇಲ್ಲ… ತಾಯಿಯನ್ನು ಕಳೆದುಕೊಂಡ ಮೇಲೇನೇ ತಾಯಿಯ ಮಹತ್ವ ಗೊತ್ತಾಗೋದು… ಇಂದು ನಾವು ಪ್ರಕೃತಿ ಮಾತೆಯ ಮಡಿಲು ಬಿಟ್ಟು ಎಲ್ಲೋ ದೂರ ಆಗುತ್ತಿದ್ದೇವೆ. ಭವಿಷ್ಯದಲ್ಲಿ ಆಗಲಿರುವ ಒಂದು ಬೃಹತ್ ಪ್ರಾಕೃತಿಕ ದುರಂತಕ್ಕೆ ನಾವೇ ಆಹ್ವಾನ ನೀಡಿ ಆಮಂತ್ರಿಸುತ್ತಿದ್ದೇವೆ. ನಾಳೆಯ ಕರಾಳ ದಿನಕ್ಕೆ ಇಂದೇ ಜಾಗೃತರಾಗಿ ಎಚ್ಚರವಾಗಿ ಇರೋಣ.

ಮನೆಯಂಗಳಕ್ಕೆ ಬಂದ ಗುಬ್ಬಚ್ಚಿ ಮತ್ತೆ ಕಾಣೆಯಾಗದಂತೆ
ರಕ್ಷಿಸೋಣ.