Wednesday, 11th December 2024

ಕರೋನಾ ತಂದ ತಲ್ಲಣಗಳು ಮತ್ತು ಕಲಿಸಿದ ಪಾಠಗಳು…

ಪ್ರಚಲಿತ

ಡಾ.ಕರವೀರಪ್ರಭು ಕ್ಯಾಲಕೊಂಡ

ಟ್ವೆಂಟಿ- 20 ಮರೆಯಬೇಕಾದ, ಬರೆಯಲಾಗದ ವರ್ಷ. ವಿಶ್ವವನ್ನು ದುರಂತ ಸ್ವಪ್ನದಂತೆ ಕಾಡಿದ ವರ್ಷ. ನಮ್ಮ ಕೈಗಳನ್ನು ನಾವೇ ನಂಬದಂತೆ ಮಾಡಿದ, ನಮ್ಮ ಮುಖವನ್ನು ನಾವೇ ಮರೆಸಿಕೊಳ್ಳುವಂತೆ ಮಾಡಿದ ವರ್ಷ.

ಕೋವಿಡ್-19 ಹೊರತು ಪಡಿಸಿ ಉಳಿದುದೆ ಹಿನ್ನೆಲೆಗೆ ಸರಿದ ವರ್ಷ. ಬಹಳಷ್ಟು ಜನರು ತಮ್ಮ ಜೀವಿತಕಾಲದಿಂದ ಅಳಿಸಲು
ಬಯಸುವ 2020, ನಾವು ಮರೆಯಬಾರದ, ಮನನ ಮಾಡಿಕೊಳ್ಳಲೇಬೇಕಾದ ಪಾಠಗಳನ್ನೂ ಎದುರಿಗಿಟ್ಟಿದೆ. ಚೀನಾ ಸದ್ದಿಲ್ಲದೇ ಮೂರನೇ ಮಹಾಯುದ್ಧ ಮಾಡಿತು. ಮದ್ದು ಗುಂಡು ಹಾರಿಸಲಿಲ್ಲ. ರಾಕೆಟ್ಟುಗಳು ರೊಯ್ಯಂದು ಹಾರಾಡಲಿಲ್ಲ. ಕಡಲಲ್ಲಿ ಹಡಗುಗಳು ಓಡಾಡಲಿಲ್ಲ. ಕಣ್ಣಿಗೆ ಕಾಣದ ವೈರಸ್ ಇಡೀ ಜಗತ್ತನ್ನೇ ನಡುಗಿಸಿತು.

ವಕ್ತ್ ನೇ ಕಿಯಾ, ಕ್ಯಾ ಹಸೀನ್ ಸಿತಮ, ತುಮ್ ರಹೇ ನ ತುಮ, ಹಮ್ ರಹೇ ನ ಹಮ್ -1959ರಲ್ಲಿ, ಕೈಫಿ ಅಜ್ಮಿಯವರು ’ಕಾಗಜ್ ಕೆ ಫುಲ್  ’ಚಿತ್ರಕ್ಕಾಗಿ ಬರೆದ ಈ ಹಾಡು, ಕರೋನಾ ವೈರಸ್ ದಾಳಿ ಕಲ್ಪಿಸಿಕೊಂಡೇ ಸೃಷ್ಟಿಸಿರಬಹುದು ಎನಿಸುತ್ತದೆ. ಸಮಯದ ದೆಸೆಯಿಂದ ನೀನು ನೀನಾಗಿಲ್ಲ, ನಾನು ನಾನಾಗಿಲ್ಲ ’ಎಂಬ ಇದರ ಅರ್ಥ ಈಗಿನ ಸ್ಥಿತಿಗೆ ಸರಿಹೊಂದುವಂತಿದೆ. ಕರೋನಾ ಸೋಂಕಿನಿಂದ ವಿಶ್ವ ಅನುಭವಿಸುತ್ತಿರುವ ನೋವು, ನಷ್ಟಗಳನ್ನು ಏಳು ವರ್ಷಗಳ ಹಿಂದೆಯೇ ಮೈಕ್ರೊಸಾಫ್ಟ್ ಕಂಪನಿ ಸಂಸ್ಥಾಪಕ ಬಿಲ್ ಗೇಟ್ಸ್ ಟೆಡ್‌ಟಾಕ್‌ನಲ್ಲಿ ಚರ್ವಿತ ಚರ್ವಿತ ಚರ್ಚಿಸಿದ್ದಾರೆ.

ವಿಶ್ವವನ್ನು ನಡುಗಿಸುವುದು ಅಣ್ವಸವಲ್ಲ, ಬದಲಾಗಿ ಕಣ್ಣಿಗೆ ಕಾಣದ ಒಂದು ಸೂಕ್ಷ್ಮಾಣು ಜೀವಿ ಎಂಬ ಎಚ್ಚರಿಕೆ ನೀಡಿದ್ದರು.
ಕರೋನಾ ಮಹಾಮಾರಿ ಇಡೀ ಜಗತ್ತು ಬಹಳ ತೊಂದರೆಗೊಳಗಾಯಿತು. ಹಿಂದೆಂದೂ ಕಂಡರಿಯದ ಸಾವು ನೋವು ಹಾಗೂ ಆರ್ಥಿಕ ಸಂಕಷ್ಟ ಎಲ್ಲಾ ದೇಶಗಳನ್ನು ಬಾಧಿಸಿದವು. ಕೇಂದ್ರ ಸರಕಾರ 2020ರ ಮಾರ್ಚ್ 24ರಿಂದ 21ದಿನಗಳ ವರೆಗೆ ಲಾಕ್ ಡೌನ್ ಘೋಷಿಸಿತು.

ಅಂಗಡಿ ಮುಗ್ಗಟ್ಟು, ವ್ಯಾಪಾರ ವಹಿವಾಟು, ವಿಮಾನ, ರೈಲು, ಬಸ್‌ಸೇವೆಗಳು, ಶಾಲೆ ಕಾಲೇಜು, ಆಫೀಸು, ಮಂದಿರ ಮಸೀದೆ ಚರ್ಚ.ಹೀಗೆ ಎಲ್ಲವನ್ನೂ ಮುಚ್ಚಲಾಯಿತು. ಮನೆಯೇ ಮಂತ್ರಾಲಯವಾಯಿತು. ಕರೋನಾ ಹರಡುವುದನ್ನು ಗಮನಿಸಿದ
ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಲಾಕ್ ಡೌನ್ ಮುಂದುವರಿಸಿದವು. ಇದರ ಪರಿಣಾಮ ಉದ್ಯಮಗಳು ನೆಲಕಚ್ಚಿದವು. ಕೈಗಾರಿಕೆಗಳು ನಿಂತು ಹೋದವು. ಕೋಟ್ಯಾಂತರ ಜನರು ಉದ್ಯೋಗಗಳನ್ನು ಕಳೆದುಕೊಂಡರು.

ಮನೆಯೇ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರು ಎಂಬ ನಾಣ್ಣುಡಿ ಎಲ್ಲರಿಗೂ ಗೊತ್ತಿರುವಂಥದ್ದೇ. ಆದರೆ, ಕರೋನಾ ಕಾಲದಲ್ಲಿ ಮಕ್ಕಳು ಮನೆ ಯಲ್ಲಿಯೇ ಇರಬೇಕಾದ ಸಂದರ್ಭವನ್ನು ಅರಗಿಸಿಕೊಳ್ಳುವುದೇ ಅನೇಕ ಪೋಷಕರಿಗೆ ಕಷ್ಟವಾಗಿತ್ತು. ದಿನದ ಇಪ್ಪತ್ನಾಲ್ಕು ತಾಸೂ ಮನೆಯಲ್ಲಿಯೇ ಇರಬೇಕಾದ ಮಕ್ಕಳನ್ನು ಸಂಭಾಳಿಸುವುದು ದೊಡ್ಡ ಸಮಸ್ಯೆ ಯಾಗಿತ್ತು. ಕರೋನಾ ಕಾರಣದಿಂದ ವಿಶ್ವದ 186 ದೇಶಗಳಲ್ಲಿನ ಶಾಲಾ ಕಾಲೇಜುಗಳು ಮುಚ್ಚಿದ್ದು, 130 ಕೋಟಿಗೂ ಅಧಿಕ ವಿದ್ಯಾರ್ಥಿಗಳು (ಜಗತ್ತಿನ ಶೇ.72ರಷ್ಟು) ಶಾಲಾ ಶಿಕ್ಷಕರಿಂದ ವಂಚಿತರಾಗಿರುವುದು ಮಾಧ್ಯಮ ವರದಿಗಳಿಂದ ತಿಳಿಯುತ್ತದೆ.

ಕರೋನಾ ಕಾರಣದಿಂದ ಜಾಗತಿಕ ಆರ್ಥಿಕತೆ ಕುಸಿಯಿತು. ಆಯಾತ ನಿರ್ಯಾತಗಳೂ ಕುಸಿದವು. ಭಾರತದಲ್ಲಿ ಲಾಕ್‌ಡೌನ್ ಘೋಷಣೆ ಮಾಡಿದುದಂತೂ ಗಾಯದ ಮೇಲೆ ಬರೆ ಎಳೆದಂತೆ ಆಯಿತು. ದೇಶದ ಆರ್ಥಿಕತೆ, ಜಿಡಿಪಿ, ಜನರ ಆದಾಯ  ಕುಸಿದವು. ಲಾಕ್ ಡೌನ್ ಮಾಡುವಾಗ ಇದು ನಿರೀಕ್ಷಿತವೇ ಆಗಿತ್ತು. ದೇಶದ ಆರ್ಥಿಕತೆಗಿಂತ ಜನರ ಪ್ರಾಣರಕ್ಷಣೆಗೇ ಸರಕಾರ ಹೆಚ್ಚು ಮಹತ್ವ ವನ್ನು ಕೊಟ್ಟು ಲಾಕ್ ಡೌನ್ ಜಾರಿಗೊಳಿಸಿತ್ತು.

ಸೆನ್ಸೆಕ್ಸ್, ಜಿಡಿಪಿ ಎಲ್ಲವೂ ಪಾತಾಳಕ್ಕೆ ಇಳಿದವು. ಹೊಸದಾಗಿ ಬಡತನದ ಯಾದಿಗೆ ಸೇರುವವರ ಬಳಿ ಬಡತನ ಎದುರಿಸುವ ಕೌಶಲ ಇರುವುದಿಲ್ಲ. ಅದನ್ನು ಕಲಿಯಲು ಅವರಿಗೆ ಆಗುವುದೂ ಇಲ್ಲ. ಬಡತನ ಒಂದು ಮಾನಸಿಕ ಸ್ಥಿತಿಯಾಗಿರಬಹುದು. ಆದರೆ, ನೀಗಿಸಬೇಕಾದದ್ದು ಒಂದು ದೈಹಿಕ ಅವಶ್ಯಕತೆ. ತೀರಾ ಇತ್ತೀಚಿನವರೆಗೆ, ಹೆಚ್ಚುತ್ತಿದ್ದ ನವ ಶ್ರೀಮಂತರ ಸಂಖ್ಯೆ ಬಗ್ಗೆ
ಅಭಿಮಾನ ಪಡುತ್ತಿದ್ದ ದೇಶಗಳು ಈಗ ಇದ್ದಕ್ಕಿದ್ದಂತೆಯೇ ನವ ಬಡತನದೊಂದಿಗೆ ಸೆಣೆಸುವ ಮಾರ್ಗಗಳನ್ನು ಆವಿಷ್ಕರಿಸಲು ಹೆಣಗಾಡುತ್ತಿವೆ. ಹಾಗೆಂದು ಹೊಸ ಬಡತನ ಪ್ರಪಂಚಕ್ಕೇನೂ ಹೊಸದಲ್ಲ.

ಅದು ಭಾರೀ ಪ್ರಮಾಣದಲ್ಲಿ ಸೃಷ್ಟಿಯಾದ ಸನ್ನಿವೇಶಗಳನ್ನು ಚರಿತ್ರೆಯಲ್ಲಿ ಕಾಣುತ್ತೇವೆ. ದೊಡ್ಡ ದೊಡ್ಡ ಯುದ್ಧಗಳಾದಾಗ,
ಆರ್ಥಿಕ ಹಿಂಜರಿತ ತೀವ್ರವಾದಾಗ, ಆವರೆಗೆ ಇದ್ದ ನೆಮ್ಮದಿ ಬದುಕು ಇದ್ದಕ್ಕಿದ್ದಂತೆಯೇ ದುರ್ಭರವಾಗಿದ್ದಿದೆ. ಶಿವರಾಮ ಕಾರಂತರ ’ಮುಗಿದ ಯುದ್ಧ ’,ಅನುಪಮಾ ನಿರಂಜನರ ’ನೂಲು ನೇಯ್ದ ಚಿತ್ರ ’…..ಇತ್ಯಾದಿ ಕೃತಿಗಳೆ ಇಂತಹ ವಸ್ತುಗಳ ಸುತ್ತವೇ ಹುಟ್ಟಿಕೊಂಡಿರುವುದು.

ಬೆಳಗಾದರೆ ಕೆಲಸಕ್ಕೆ ಹೋಗುವ ತರಾತುರಿಯಲ್ಲಿ ಮನೆಗಳು ಕಾರ್ಖಾನೆಗಳ ರೂಪ ತಾಳುವ ಚಿತ್ರಗಳು ಲಾಕ್ ಡೌನ್ ಸಂದರ್ಭದಲ್ಲಿ ತೆರೆಮರೆಗೆ ಸರಿದವು. ಸಾಫ್ಟ್ವೇರ್ ಉದ್ಯೋಗಿಗಳಿಗೆ ಪರಿಚಿತವಾಗಿದ್ದ ‘ವರ್ಕ್ ಫ್ರಂ ಹೋಮ್ ’ವಿವಿಧ ಕ್ಷೇತ್ರಗಳ ಉದ್ಯೋಗಿಗಳಿಗೂ ದೊರೆಯಿತು. ಇದರಿಂದಾಗಿ ಮನೆಗಳು ಕಚೇರಿಗಳ ರೂಪ ತಾಳಿದವು. ವಿಚಿತ್ರ ಮೌನ ಮನೆಗಳನ್ನು ಆವರಿಸಿ ಕೊಂಡಿತು. ವರ್ಕ ಫ್ರಂ ಹೋಮ್ ಕೆಲವು ಉದ್ಯೋಗಿಗಳಿಗೆ ವಿಶೇಷವಾಗಿ ಮಹಿಳಾ ಉದ್ಯೋಗಿಗಳಿಗೆ ಅನುಕೂಲವನ್ನೂ ಒದಗಿಸಿತು. ಮಹಾನಗರ ಪ್ರದೇಶಗಳಲ್ಲಿ ಕಚೇರಿಗೆ ಹೋಗಿ ಬರುವ ಪ್ರಯಾಣದ ಸಮಯ ಉಳಿದದ್ದು ಅನೇಕರಿಗೆ ಬೋನಸ್ ದೊರೆತಂತಾಯಿತು.

ಆದರೆ, ಇನ್ನೂ ಕೆಲವರಿಗೆ ಮನೆಯಿಂದ ಕೆಲಸ ಮಾಡುವುದು ಒತ್ತಡವಾಗಿ ಪರಿಣಮಿಸಿದ್ದೂ ಇದೆ. ಅಂತ್ಯಸಂಸ್ಕಾರದ ವೇಳೆ ನಡೆದ ಘಟನೆಗಳು ಭವಿಷ್ಯದಲ್ಲಿ ಜನರಲ್ಲಿ ಇನ್ನಷ್ಟು ಭೀತಿ ಹುಟ್ಟಿಸಬಹುದು. ಭಾರತದಲ್ಲಿ ಈಗ ಕರೋನಾ ವೈರಸ್ಸಿಗಿಂತಲೂ ಮಾನಸಿಕ ವೈರಸ್ಸು ವೇಗವಾಗಿ ಹರಡುತ್ತಿದೆ. ಹರಡಿದೆ. ಹೀಗಾಗಿ ನಾರಣಪ್ಪನ ಪಾರ್ಥಿವ ಶರೀರ ಅಂತ್ಯಸಂಸ್ಕಾರ ಕಾಣದೆ
ಮನಸ್ಸುಗಳ ಕೊಳೆಯುತ್ತಿದೆ. ಸಾವಿಗೂ ಒಂದು ಘನತೆ ಇದೆ. ಅದನ್ನು ಗೌರವಿಸೋಣ.

ಏಕೆಂದರೆ ’ಇಲ್ಲಿ ಬಂದಿದ್ದು ಸುಮ್ಮನೆ, ಅಲ್ಲಿರುವುದು ನಮ್ಮನೆ’ಎಂಬ ದಾಸರ ನುಡಿ ಇನ್ನಷ್ಟು ಸ್ಪಷ್ಟವಾಗುವಂತೆ, ವಾಸ್ತವವನ್ನು
ಕೊರೊನಾ ನಮ್ಮ ಮುಂದೆ ತೆರೆದಿಡುತ್ತಿದೆ .ಪಾರ್ಥಿವ ಶರೀರವನ್ನು ಘನತೆ ಮತ್ತು ಗೌರವದಿಂದ ಸಂಸ್ಕಾರ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಈ ಹೊಣೆಯರಿತು ನಡೆಯದೆ ನಿರ್ಲಕ್ಷ್ಯದಿಂದ ವರ್ತಿಸುವುದು ಸಂಸ್ಕಾರಹೀನ ಸಡವಳಿಕೆ ಮಾತ್ರವಲ್ಲ.
ಅಕ್ಷಮ್ಯ ಸಹ. ಕೊರೊನಾ ಕಾಲದಲ್ಲಿ ಸ್ಯಾನಿಟೈರ್ಜ, ಮಾಸ್ಕ ಮುಂತಾದ ವಸ್ತುಗಳ ಮಾರಾಟ ಏರಿಕೆಯಾಗಿದ್ದು ತಿಳಿದಿದೆ.

ಆದರೆ, ದೇಶದಲ್ಲಿ ಲೈಂಗಿಕ ಆಟಿಗೆಗಳು ಮಾರಾಟವೂ ಶೇ.65ರಷ್ಟು ಹೆಚ್ಚಾಗಿದೆ ಎಂಬ ವಿಚಾರ ಬಹಳಷ್ಟು ಜನರಿಗೆ ತಿಳಿದಿರ ಲಾರದು. 2018 ರಲ್ಲಿ ಹಿಂದಿಯಲ್ಲಿ ’ಲಸ್ಟ ಸ್ಟೋರೀಸ್ ’ಎಂಬ ಸಿನಿಮಾ ತೆರೆ ಕಂಡಿತ್ತು. ಮಹಿಳೆಯೊಬ್ಬರು ಲೈಂಗಿಕ ಕಾಮನೆ ಈಡೇರಿಸಿಕೊಳ್ಳಲು ’ರಿಮೋಟ್ ಕಂಟ್ರೋಲ್ ವೈಬ್ರೇಟರ್’ ಅನ್ನು ಬಳಸುತ್ತಿರುವುದನ್ನು ಅದರಲ್ಲಿ ತೋರಿಸಲಾಗಿತ್ತು. ಇದಾದ ನಂತರ ಮಹಿಳೆಯರಿಗಾಗಿ ಇರುವ ಲೈಂಗಿಕ ಆಟಿಗೆಗಳಿಗಾಗಿ ಇಂಟರ್ ನೆಟ್‌ನಲ್ಲಿ ಶೋಧ ನಡೆಸುವವರ ಸಂಖ್ಯೆ ಒಮ್ಮೆಲೇ ಏರಿಕೆ ಕಂಡಿತ್ತು.

ಲಾಕ್‌ಡೌನ್ ಸಂದರ್ಭದಲ್ಲಿ ಇಂಥ ಆಟಿಗೆಗಳ ಖರೀದಿ ಪ್ರಮಾಣವು ಶೇ. 65ರಷ್ಟು ಏರಿಕೆಯಾಗಿದೆ ಎಂದು ’ದಾಟ್ಸ ಪರ್ಸನಲ್ ಡಾಟ್ ಕಾಂ ’ಸಂಸ್ಥೆಯ ವರದಿ ಹೇಳಿದೆ. ಕರೋನಾ ಕಾಲದಲ್ಲಿ ವೈದ್ಯ ಮತ್ತು ರೋಗಿಯ ನಡುವೆ ಅಪನಂಬಿಕೆಯ ಕಂದಕವೇ ಸೃಷ್ಟಿಯಾಯಿತು. ಖಾಸಗಿ ಆಸ್ಪತ್ರೆಗಳು ಜನರ ಸುಲಿಗೆ ಮಾಡುತ್ತವೆ ಎನ್ನುವ ಭಾವನೆ ಕರೋನಾ ಪೂರ್ವದಲ್ಲೂ ಜನರ
ಮನಸ್ಸಿನಲ್ಲಿತ್ತು. ಈ ಭಾವನೆ ಲಾಕ್‌ಡೌನ್ ಸಮಯದಲ್ಲಿ ಆತಂಕವಾಗಿ ಬದಲಾಯಿತು. ಕರೋನಾ ಕಾರಣದಿಂದ ಖಾಸಗಿ ಆಸ್ಪತ್ರೆಗೆ ದಾಖಲಾದ ಕೆಲವರು, ಕಾಯಿಲೆಗಿಂತ ಹೆಚ್ಚಾಗಿ ಲಕ್ಷಾಂತರ ರೂಪಾಯಿ ಮೊತ್ತದ ಬಿಲ್ ನೋಡಿಯೇ ಹೈರಾಣಾದ ಪ್ರಸಂಗ ಎಡೆ ವರದಿಯಾದವು.

ಸರಕಾರ ಮಧ್ಯಪ್ರವೇಶಿಸಿ, ಬೆಲೆ ನಿಗದಿಪಡಿಸಿದರೂ ಪರಿಸ್ಥಿತಿ ಬದಲಾಗಲಿಲ್ಲ. ಸಾಯುವುದಾದರೆ ಮನೆಯ ಸಾಯೋಣ ಎಂದು ಆರೋಗ್ಯ ಸಮಸ್ಯೆ ತಲೆ ದೋರಿದರೂ ನಿರ್ಲಕ್ಷಿಸುವವರ ಸಂಖ್ಯೆ ಹೆಚ್ಚಾಯಿತು. ನಕಲಿ ವೈದ್ಯರೂ ಹೆಚ್ಚಾದರು. ಈ ಸಮಸ್ಯೆಯ
ಇನ್ನೊಂದು ತುದಿಯಲ್ಲಿ, ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ’ಕರೋನಾ ವಾರಿಯರ್ಸ್’ಆಗಿ ಕೆಲಸ ಮಾಡಿ ಸಾಕಷ್ಟು ಸಂಕಷ್ಟ ಎದುರಿಸಬೇಕಾಯಿತು.

ಸೋಂಕಿನ ಆತಂಕದ ನಡುವೆ ಬಿಡುವಿಲ್ಲದ ದುಡಿಮೆ ಅವರ ಮೈಮನಗಳನ್ನು ಗಾಸಿಗೊಳಿಸಿತು. ಕೆಲಸ- ಕ್ವಾರಂಟೈನ್ ನಡುವೆ ಖಾಸಗಿ ಬದುಕೇ ಇಲ್ಲವಾಯಿತು. ಜಾಗತಿಕ ಆರೋಗ್ಯ ಸಂಸ್ಥೆಯ ಎಲ್ಲ ಸುರಕ್ಷಾ ಮಾರ್ಗಸೂಚಿ ಪಾಲಿಸಿದರೂ, ಕೆಲವು ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಸೋಂಕಿಗೊಳಗಾಗಿ ಹುತಾತ್ಮರಾದರು.

ಲಾಕ್ ಡೌನ್ ಸಮಯದಲ್ಲಿ ಕೌಟುಂಬಿಕ ಹಿಂಸೆಯ ಘಟನೆಗಳು ಹೆಚ್ಚಾಗಿ, ದೌರ್ಜನ್ಯಕ್ಕೊಳಗಾದ ದೂರುಗಳು ಸಾಮಾನ್ಯ ಸಂದರ್ಭಗಳಿಗಿಂತಲೂ ದುಪ್ಪಟ್ಟು ಪ್ರಮಾಣದಲ್ಲಿ ವರದಿಯಾಗುತ್ತಿವೆ. ಸಾಂಕ್ರಾಮಿಕವು ಎಲ್ಲಾ ವರ್ಗದ ವ್ಯಕ್ತಿಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಜಾಗತಿಕ ಪಟ್ಟಕ್ಕಾಗಿ ಪೈಪೋಟಿ ಮಾಡುತ್ತಿದ್ದ ರಾಷ್ಟ್ರಗಳು ತಣ್ಣಗೆ ಕೂತಿವೆ. ವಿಶ್ವದಾದ್ಯಂತ ಬಹುತೇಕ
ಎಲ್ಲಾ ಭಾಗಗಳಿಗೆ ಈ ರೋಗವು ವೇಗವಾಗಿ ಹರಡಿರುವುದರಿಂದ ಇಡೀ ಮಾನವ ಕುಲಕ್ಕೆ ಅಗಾಧ ಆರೋಗ್ಯ, ಆರ್ಥಿಕ, ಪರಿಸರ ಮತ್ತು ಸಾಮಾಜಿಕ ಸವಾಲುಗಳು ಎದುರಾಗಿದ್ದು, ಜನರು ತಮ್ಮ ಮನಸ್ಥಿತಿ ಬದಲಾಯಿಸಿಕೊಳ್ಳುವ ಸನ್ನಿವೇಶ ಸೃಷ್ಟಿಯಾಗಿದೆ.

ಕರೋನಾ ಸಮಸ್ಯೆ ಉದ್ಭವಿಸಿದ ಬಳಿಕ ಜನರ ಜೀವನ ಕ್ರಮದಲ್ಲಿ ಸಕಾರಾತ್ಮಕ ಮತ್ತು ನಕಾರಾತ್ಮಕ ಬದಲಾವಣೆ
ಗಮನಿಸುತ್ತಿದ್ದೇವೆ. ದಿನನಿತ್ಯವೂ ಗಿಜಗುಡುಗುತ್ತಿದ್ದ ಧಾರ್ಮಿಕ ಸ್ಥಳಗಳು ಈಗ ಭಕ್ತರ ಭೇಟಿಯಿಲ್ಲದೇ ಭಣಗುಡುತ್ತಿವೆ. ಹಬ್ಬ
ಹರಿದಿನಗಳು ಮನೆಗಷ್ಟೇ ಸೀಮಿತವಾಗಿದ್ದು, ಮುಂಬರುವ ಹಬ್ಬಗಳು ಕಳೆಗುಂದಲಿವೆ. ಈ ಮಧ್ಯೆ ಆನ್‌ಲೈನ್ ಪೂಜಾ ಪರಿಕಲ್ಪನೆ ಚಾಲ್ತಿಗೆ ಬಂದಿದೆ. ಶಿಕ್ಷಣ ವ್ಯವಸ್ಥೆಗೆ ಆಧುನಿಕ ಸ್ಪರ್ಶ ದೊರೆತಿದ್ದು, ಆನ್‌ಲೈನ್ ಕಲಿಕೆ ಮಹತ್ವ ಪಡೆದುಕೊಂಡಿದೆ.

ಶಿಕ್ಷಣದ ಹೆಸರಿನಲ್ಲಿ ಸುಲಿಗೆ ಮಾಡುತ್ತಿದ್ದ ಶಿಕ್ಷಣ ಸಂಸ್ಥೆಗಳು ಈಗ ಆದಾಯವಿಲ್ಲದೆ ಸೊರಗಿ ಹೋಗಿವೆ. ಬಡವ ಮತ್ತು ಶ್ರೀಮಂತ ರೆಂಬ ಸಾಮಾಜಿಕ ಅಂತರ ಕಡಿಮೆಯಾಗಿ ಸಮಾನ ಜೀವನ ಮಾಡುತ್ತಿದ್ದಾರೆ. ಮನರಂಜನೆಗಾಗಿ ಹೊರಗಡೆ ಹೋಗುವ ಪರಿಪಾಠಕ್ಕೆ ಬ್ರೇಕ್ ಬಿದ್ದಿದೆ. ಸಣ್ಣ ಪುಟ್ಟ ಆರೋಗ್ಯದ ಸಮಸ್ಯೆಗೂ ವೈದ್ಯರ ಭೇಟಿ ಮಾಡುತ್ತಿದ್ದ ಸಾರ್ವಜನಿಕರು ಈಗ ವೈದ್ಯರಿಂದ ಅಂತರ ಕಾಯ್ದುಕೊಂಡಿದ್ದಾರೆ.

ದುರಂತದ ಸಂಗತಿಯೆಂದರೆ ಕರೋನಾ ರಾಜಕಾರಣಿಗಳನ್ನು, ಅಧಿಕಾರಿಗಳನ್ನು ಜನರ ಜೀವ ಉಳಿಸುವ ನೆಪದಲ್ಲಿ ಕೋಟ್ಯಾಧಿ ಪತಿಗಳನ್ನಾಗಿಸಿತು. ಮಾ, ಸ್ಯಾನಿಟೈಸರ್, ಪಿಪಿಇ ಕಿಟ್ ಹೆಸರಿನಲ್ಲಿ ಭ್ರಷ್ಟರಿಗೆ ಹೊಸ ಹುಲ್ಲುಗಾವಲು ಸೃಷ್ಟಿಯಾದವು.
ಸೋಂಕಿತರ ಮನೆಗಳು, ಬೀದಿಗಳನ್ನು ’ಸೀಲ್ ಡೌನ್’ ಮಾಡುವ ಹೊಸ ದಂಧೆಗಳು ಸೃಷ್ಟಿಯಾದವು.

ರೋಗಭೀತಿ ಸಂದರ್ಭ ಮಾನವೀಯತೆ ಅನಾವರಣಕ್ಕೂ ವೇದಿಕೆಯಾಯಿತು. ಸೋಂಕು ನಮ್ಮ ನಂಬಿಕೆಗಳ ನೆಲೆಗಟ್ಟನ್ನು ಶಿಥಿಲಗೊಳಿಸಿದೆ. ಭರವಸೆ ಬೇರುಗಳನ್ನು ಅಲುಗಾಡಿಸಿದೆ. ಬುಡಮೇಲು ಮಾಡಿದೆ. ’ಶತಮಾನದ ಪಾಠ’ಅಂತ ಯಾವುದಾದರೂ ಇದ್ದರೆ, ಅದು ಕಲಿಯುವಂತೆ ಮಾಡಿದ್ದು ಕರೋನಾ. ಲಾಕ್‌ಡೌನ್‌ನಿಂದ ನಿಂತುಹೋದ ಜೀವನ ಅನೇಕ ಪಾಠಗಳನ್ನು ಕಲಿಸಿದೆ. ಹೊಸ ದಾರಿಯಲ್ಲಿ ನಡೆಯುವ ಕಲೆಯನ್ನು ಕಲಿಸಿದೆ. ಅನಗತ್ಯ ಖರ್ಚುಗಳನ್ನು ಮಿತಗೊಳಿಸಿದೆ. ಆದರೆ ಅದರೊಡನೆ ಅನೇಕ ಹೊಸ ಸಮಸ್ಯೆಗಳನ್ನು ಹುಟ್ಟು ಹಾಕಿದೆ. ತಲ್ಲಣ ಸೃಷ್ಟಿಸಿದೆ.

ಈಗ ಅವುಗಳಿಗೆಲ್ಲ ಪರಿಹಾರ ಕಂಡುಕೊಳ್ಳಬೇಕಿದೆ. ಕರೋನೋತ್ತರ ಸಹಜ ಸ್ಥಿತಿ ಹೊಸ ರೂಪಕ್ಕೆ ನಾವೂ ರೂಪಾಂತರಗೊಳ್ಳ ಬೇಕಾಗಿದೆ. ಅದಕ್ಕೆ ದೃಢ ಸಂಕಲ್ಪ ಬೇಕು. ಅಂತಹ ಸಂಕಲ್ಪಕ್ಕೆ ಬೇಕಾದ ಇಚ್ಛಾಶಕ್ತಿ ಬೇಕು. ಇದು ಇಂದಿನ ಅವಶ್ಯಕತೆ. ’ಮನ್ವಂತರ ’ಧಾರಾವಾಹಿ ಶೀರ್ಷಿಕೆ ಗೀತೆ ಈ ಸಂದರ್ಭಕ್ಕೆ ಹೇಳಿ ಮಾಡಿಸಿದಂತಿದೆ.