Friday, 13th December 2024

ಅಂತೂ ಇಂತೂ ಲಸಿಕೆ ಬಂತು! ಲಸಿಕೆಯ ಸುತ್ತ – ಏನು ಎತ್ತ !

ಶಿಶಿರಕಾಲ

ಶಿಶಿರ್‌ ಹೆಗಡೆ, ನ್ಯೂಜೆರ್ಸಿ

ಅಂತೂ ಇಂತೂ ವರ್ಷ ಕಳೆಯುವುದರೊಳಗೆ ಲಸಿಕೆ ತಯಾರಾಗಿ ನಿಂತಿದೆ. ಲಸಿಕೆ ಔಷಧದಂತಲ್ಲ, ಇದರದು ರೋಗ – ವೈರಸ್ ಮೈಗೆ ಹತ್ತಿಕೊಳ್ಳದಿದ್ದಂತೆ ತಪ್ಪಿಸಲು, ರೋಗ ನಿರೋಧಕವನ್ನು ದೇಹದಲ್ಲಿ ನಿರ್ಮಿಸುವ ಕೆಲಸ.

ನಿಷ್ಕ್ರಿಯ ವೈರಸ್‌ನ ಧಾತುವನ್ನು ದೇಹಕ್ಕೆ ಬಿಟ್ಟು, ವೈರಸ್ ಅಟ್ಯಾಕ್ ಆದಂತಹ ಸ್ಥಿತಿಯನ್ನು ನಿರ್ಮಿಸಿ, ಕೃತಕವಾಗಿ ಆಂಟಿಬಾಡಿ ಸೃಷ್ಟಿಸುವುದು. ಈ ಮೂಲಕ ನಿಜವಾದ ವೈರಸ್ ಮುಂದೊಂದು ದಿನ ದೇಹ ಹೊಕ್ಕಲ್ಲಿ ಅದನ್ನು ತಕ್ಷಣ ಗುರುತಿಸಿ ಸಾಯಿಸುವ ಸ್ಥಿತಿಯನ್ನು ಕೃತಕವಾಗಿ ನಿರ್ಮಿಸುವ ಒಂದು ವೈದ್ಯಕೀಯ ರೀತಿ.

ಲಸಿಕೆ ಪಡೆಯದೇ ನಿಜವಾದ ವೈರಸ್ ದೇಹಕ್ಕೆ ಹತ್ತಿಕೊಂಡಾಗ ಕೂಡ ಇಂತಹುದೇ ಸ್ಥಿತಿ ನಿರ್ಮಾಣವಾಗಿ ನಮ್ಮ ದೇಹದಲ್ಲಿ
ರೋಗನಿರೋಧಕ ಹುಟ್ಟಿಕೊಳ್ಳುತ್ತದೆ. ಆದರೆ ಆಗ ಹೊಕ್ಕುವ ವೈರಸ್ ನಿಜ ವೈರಸ್ ಆಗಿರುವುದರಿಂದ ದೇಹಕ್ಕೆ ಹಾನಿ ಉಂಟು ಮಾಡಬಹುದು. ಹೀಗೆ, ಸಹಜವಾಗಿ ಹುಟ್ಟಿಕೊಂಡ ರೋಗ ನಿರೋಧಕಕ್ಕೆ ಒಂದಿಷ್ಟು ಆಯುಷ್ಯ ಇರುತ್ತದೆ.

ಅದಾದ ನಂತರ ಕ್ರಮೇಣ, ಸಮಯ ಕಳೆದಂತೆ ಆ ರೋಗ ನಿರೋಧಕ ಮಾಯವಾಗುತ್ತದೆ ಮತ್ತು ಪುನಃ ದೇಹ ವೈರಸ್ ಬಾಽಸ
ಬಹುದಾದ ಸ್ಥಿತಿ ಮುಟ್ಟುತ್ತದೆ. ಈ ರೀತಿ ವೈರಸ್ ಒಮ್ಮೆ ಬಂದು ಹೋದ ನಂತರ ಮತ್ತೆ ಮರು ದಾಳಿ ಎಷ್ಟು ಸಮಯದ ನಂತರ
ಸಾಧ್ಯವಾಗಬಹುದು, ಅಸಲಿಗೆ ದೇಹದಲ್ಲಿ ಹುಟ್ಟಿದ ಈ ರೋಗ ನಿರೋಧಕದ ಆಯಸ್ಸು ಎಷ್ಟು, ಹೀಗೆ ಒಮ್ಮೆ ಕರೋನಾ ಬಂದು
ಹೋದ ನಂತರ ಮತ್ತೆ ಬಂದರೆ ರೋಗಿಗೆ ಬಾಧಿಸದೇ ಇದ್ದರೂ ಆತ ವೈರಸ್ ಅನ್ನು ಮತ್ತೆ ಹರಡಬಹುದೇ ಎಂಬಿತ್ಯಾದಿ ಪ್ರಶ್ನೆ ಗಳಿಗೇ ಉತ್ತರ ಸರಿಯಾಗಿ ಸಿಕ್ಕಿಲ್ಲ.

ಲಸಿಕೆಯ ವಿಷಯದಲ್ಲೂ ಅಷ್ಟೇ. ಲಸಿಕೆ ಪಡೆದ ನಂತರ ಕೂಡ ವ್ಯಕ್ತಿ ವೈರಸ್ ಹರಡಬಹುದೇ ಎಂಬಿತ್ಯಾದಿ ವಿಚಾರದ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಆದರೂ ಇದೆಲ್ಲದರ ಮಧ್ಯೆ ಲಸಿಕೆ ಬಂದಿದೆ, ಅಮೆರಿಕನ್ ಸರಕಾರ ಅದನ್ನು ಒಪ್ಪಿಯೂ ಆಗಿದೆ. ಇದೆಲ್ಲ ಬೆಳವಣಿಗೆ ಒಂದಿಷ್ಟು ಆಶಾದಾಯಕ ಸ್ಥಿತಿಯನ್ನು ಹುಟ್ಟು ಹಾಕಿದೆ. ಫೈಜರ್ ಕರೋನಾ ಲಸಿಕೆಗೆ ಅಮೆರಿಕಾದ ಆರೋಗ್ಯ ಇಲಾಖೆ ಒಪ್ಪಿದ್ದು, ತುರ್ತು ಬಳಕೆಗೆ ಅನುಮತಿ ಸೂಚಿಸಿದ್ದು ಇವೆಲ್ಲ ಸುದ್ದಿ ನಿಮಗೆಲ್ಲ ಈಗಾಗಲೇ ತಲುಪಿರುತ್ತದೆ.

ಅಮೆರಿಕಾದ, ಅಷ್ಟೇ ಏಕೆ ಪ್ರಪಂಚದ ಬಹುತೇಕ ಅಂತಾರಾಷ್ಟ್ರೀಯ ಸುದ್ದಿ ವಾಹಿನಿಗಳಿಗೆ ಕೊನೆಗೂ ಟ್ರಂಪ್ ಮತ್ತು ಆತನ ನಾನ್ಸೆನ್ಸ್‌ಗಳನ್ನು ಬಿಟ್ಟು ಬೇರೊಂದು ಸುದ್ದಿಯನ್ನು ಮಾತನಾಡಲು ಅವಕಾಶ ಸಿಕ್ಕಿದೆ. ಈ ವಾಹಿನಿಗಳೆಲ್ಲ ಇಷ್ಟು ದಿನ ಮಗದೊಂದು ಸುದ್ದಿಯ ಅವಶ್ಯಕತೆಯನ್ನು ಡೆಸ್ಪರೇಷನ್‌ನಲ್ಲಿ ಒzಡುತ್ತಿದ್ದವೇನೋ ಎಂದು ಅನ್ನಿಸುವಷ್ಟು ಲಸಿಕೆ ಇಂದು ಸುದ್ದಿ ಮಾಡುತ್ತಿದೆ.

ಅಮೆರಿಕಾದಲ್ಲ ಎಲ್ಲಿಲ್ಲದ ಉತ್ಸಾಹ. ಲಸಿಕೆ ಅಲ್ಲಿಗೆ ಮುಟ್ಟಿತಂತೆ, ಇಲ್ಲಿ ಬಂತಂತೆ ಎಂಬಿತ್ಯಾದಿ ಸುದ್ದಿಗಳು. ಕಳೆದ ನಾಲ್ಕು ದಿನ ಎಲ್ಲ ಸುದ್ದಿ ವಾಹಿನಿಗಳ ಬಾಯಲ್ಲಿ ವಾಕ್ಯಕ್ಕೊಮ್ಮೆ ವ್ಯಾಕ್ಸಿನ್. ಮೊನ್ನೆ ಒಪ್ಪಿಗೆ ಸಿಕ್ಕ ಕೆಲವೇ ಘಂಟೆಗಳಲ್ಲಿ ಲಸಿಕೆ ಸರಬರಾಜು ಕೂಡ ಶುರುವಾಗಿದೆ. ಇಲ್ಲಿನ ವಾಹಿನಿಗಳು ಥೇಟ್ ನಮ್ಮ ವಾಹಿನಿಗಳಂತೆ ಮ್ಯಾಪ್‌ಗಳಲ್ಲಿ ಕೆಂಪು ಚುಕ್ಕಿ ಹಾಕಿ ಅದಕ್ಕೊಂದು ವೃತ್ತ ಹಾಕಿ ಈಗ ಇಲ್ಲಿಂದ ಹೊರಟಿತಂತೆ, ಈಗ ಅಲ್ಲಿಗೆ ತಲುಪಿತಂತೆ ಎಂದು ಲೈವ್ ಬಿತ್ತರಿಸಿದವು.

ಲಸಿಕೆ ಬರಮಾಡಿಕೊಳ್ಳಲು ಕೆಲವು ಕರೋನಾದಿಂದ ತತ್ತರಿಸುತ್ತಿರುವ ರಾಜ್ಯದ ಗವರ್ನರ್‌ಗಳು ಆಸ್ಪತ್ರೆಯ ಬಾಗಿಲಲ್ಲಿ ಜಮಾಯಿ ಸಿದ್ದರು. ಇದೆಲ್ಲ ಉಂಡುಹೋದ ಕೊಂಡುಹೋದ ಚಲನಚಿತ್ರ ದಲ್ಲಿ ಹಸು ಬರುವ ಸಮಯಕ್ಕೆ ಕಾದು ನಿಂತ ಕಮಂಗಿಪುರದ ಯುವಕರ ಉತ್ಕಟತೆಯನ್ನು ಮೀರಿಸುವಂತಿತ್ತು. ಫೈಜರ್ ಔಷಧ ಕಾರ್ಖಾನೆಯಿಂದ ವಿಮಾನ ನಿಲ್ದಾಣಕ್ಕೆ ಪೊಲೀಸ್ ಎಸ್ಕಾರ್ಟ್‌ ನಲ್ಲಿ ಔಷಧವನ್ನು ಸಾಗಿಸಲಾಯಿತು.

ದಾರಿಯುದ್ದಕ್ಕೂ ಈ ಔಷಧ ಹೊತ್ತ ಟ್ರಕ್‌ಗಳಿಗೆ ಜನರು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು. ಈ ಎಲ್ಲ ದೃಶ್ಯ ಇಲ್ಲಿನ ಸಾಮಾನ್ಯ ಜನರಲ್ಲಿ ಹುಟ್ಟಿದ್ದ ಹತಾಶೆ ಮತ್ತು ಈಗ ಹುಟ್ಟಿದ ಆಶಾಭಾವನೆಗೆ ಹಿಡಿದ ಕನ್ನಡಿಯಂತಿತ್ತು. ಫೈಜರ್ ಲಸಿಕೆಯನ್ನು -75’ ಸೆಲ್ಸಿಯಸ್‌ನಲ್ಲಿಟ್ಟು ಸಂರಕ್ಷಿಸಿಕೊಳ್ಳಬೇಕು. ಇದರಿಂದಾಗಿ ಸಾಗಾಣಿಕೆ ಒಂದು ಸವಾಲೇ ಸರಿ. ಔಷಧ ಕಾರ್ಖಾನೆಯಿಂದ ಹೊರಟು ತಲುಪಬೇಕಾದಲ್ಲಿ ಹೋಗಿ ಮುಟ್ಟುವವರೆಗೆ ಮತ್ತು ನಂತರದಲ್ಲಿ ಈ ತಾಪಮಾನವನ್ನು ಕಾಯ್ದುಕೊಳ್ಳಬೇಕು.

ಇಷ್ಟು ಕಡಿಮೆ ತಾಪಮಾನ ಸಾಮಾನ್ಯ ರೆಫ್ರಿಜಿರೇಟರ್‌ನಿಂದ ಸಾಧ್ಯವಾಗುವುದಿಲ್ಲ. ಆ ಕಾರಣಕ್ಕಾಗಿ ಡ್ರೈ ಐಸ್ ಅನ್ನು  ಬಳಸ ಲಾಗುತ್ತದೆ. ಡ್ರೈ ಐಸ್ ಎಂದರೆ ಘನೀಕೃತ ಇಂಗಾಲದ ಡೈ ಆಕ್ಸೆ ಡ್. ಇದರ ತಯಾರಿಕೆ ಅಷ್ಟು ಕಷ್ಟದ್ದೇನಲ್ಲ. ಆದರೆ ಇದು ವಾತಾವರಣಕ್ಕೆ ಸ್ವಲ್ಪವೇ ತೆರೆದುಕೊಂಡರೂ ಆವಿಯಾಗಿ ಶೀಘ್ರದಲ್ಲಿ ತಂಪು ಕಳೆದುಕೊಳ್ಳುತ್ತದೆ. ಆ ಕಾರಣಕ್ಕೆ ಈ ಲಸಿಕೆಯ ಸಾಗಾಣಿಕೆಗೆ ಗಾಳಿಯಾಡದ ಡಬ್ಬಿಯೇ ಆಗಬೇಕು. ಈ ಲಸಿಕೆ ಶೇಖರಿಸಿಟ್ಟ ಡಬ್ಬಿಯನ್ನು ಪದೇ ಪದೇ ತೆರೆಯುವಂತಿಲ್ಲ.

ದಿನಕ್ಕೆ ಎರಡು ಬಾರಿ – ಒಂದೊಂದು ನಿಮಿಷಕ್ಕಷ್ಟೇ ಇದನ್ನು ತೆರೆಯಬಹುದು. ಅದೆಂತಹ ಗಟ್ಟಿ ಡಬ್ಬಿಯಲ್ಲಿಟ್ಟರೂ ಡ್ರೈ ಐಸ್‌ನ ಆಯಸ್ಸು ಕೇವಲ ನಾಲ್ಕು ದಿನ. ಹಾಗಾಗಿ ಲಸಿಕೆಯನ್ನು ಐದು ದಿನಕ್ಕಿಂತ ಹೆಚ್ಚಿಗೆ ಇಡಬೇಕೆಂದರೆ ಆ ಡ್ರೈ ಐಸ್ ಅನ್ನು ಬದಲಿಸ ಬೇಕು. ಇದಕ್ಕೆ ಡ್ರೈ ಐಸ್ ಸರಬರಾಜಾಗಬೇಕು. ಈ ರೀತಿ ಡ್ರೈ ಐಸ್ ಅನ್ನು ಬದಲಿಸುತ್ತ ಲಸಿಕೆಯನ್ನು ಹೆಚ್ಚೆಂದರೆ ಮೂವತ್ತು ದಿನ
ಶೇಖರಿಸಬಹದು. ಒಮ್ಮೆ ಈ ಡ್ರೈ ಐಸ್‌ನಿಂದ ಹೊರ ತೆಗೆದು ಸಾಮಾನ್ಯ ಫ್ರಿಡ್ಜ್‌ನಲ್ಲಿಟ್ಟರೆ ಲಸಿಕೆಯನ್ನು ಐದು ದಿನದಲ್ಲಿ
ಬಳಸಬೇಕಾಗುತ್ತದೆ.

ಒಮ್ಮೆ ಫ್ರಿಡ್ಜ್‌ನಿಂದ ತೆಗೆದು ಸಾಮಾನ್ಯ ವಾತಾವರಣಕ್ಕೆ ತಂದರೆ ಲಸಿಕೆಯನ್ನು ಆರು ತಾಸಿನೊಳಗೆ ದೇಹಕ್ಕೆ ಚುಚ್ಚಬೇಕು. ಇದಿಷ್ಟರಲ್ಲಿ ಯಾವುದೇ ಹಂತದಲ್ಲಿ ಒಂದಿಷ್ಟು ವ್ಯತ್ಯಾಸವಾದರೂ ಲಸಿಕೆ ಕೆಲಸ ಮಾಡುವುದಿಲ್ಲ – ಅಡ್ಡ ಪರಿಣಾಮ ಬೀರ ಬಹುದು. ಆ ಕಾರಣಕ್ಕೆ ಈ ಲಸಿಕೆಗಳ ಜೊತೆ ಡಿಜಿಟಲ್ ಸಾಧನವೊಂದನ್ನು ಅಳವಡಿಸಲಾಗುತ್ತಿದೆ. ಈ ಸಾಧನ ದಾರಿಯುದ್ದಕ್ಕೂ ಉಷ್ಣಾಂಶ, ಬೆಳಕಿನ ಪ್ರಮಾಣ – ಇವೆಲ್ಲವನ್ನು ಅವಲೋಕಿಸುತ್ತಿರುತ್ತದೆ. ಎಲ್ಲಿಯೇ ಸ್ವಲ್ಪ ಹೆಚ್ಚುಕಡಿಮೆಯಾದರೂ ಆ ಸಾಧನದ ಇಂಡಿಕೇಟರ್ ಹಸಿರಿನಿಂದ ಕೆಂಪು ಬಣ್ಣಕ್ಕೆ ತಿರುಗುತ್ತದೆ.

ವೈದ್ಯರು ಈ ಇಂಡಿಕೇಟರ್ ಅನ್ನು ಮೊದಲು ನೋಡಿ ಆಮೇಲೆ ಲಸಿಕೆಯನ್ನು ಬಳಸಬೇಕು. ಅಲ್ಲದೆ ಈ ಲಸಿಕೆ ಅತ್ಯಮೂಲ್ಯ ಜೀವ ರಕ್ಷಕ. ಹಾಗಾಗಿ ಪ್ರತಿಯೊಂದು ಡಬ್ಬಿಯಲ್ಲಿ ಜಿಪಿಎಸ್ ಅಳವಡಿಸಲಾಗುತ್ತದೆ. ಈ ಜಿಪಿಎಸ್ ಮೂಲಕ ಲಸಿಕೆಯಿರುವ ಜಾಗವನ್ನು ಟ್ರ್ಯಾಕ್ ಮಾಡಲಾಗುತ್ತದೆ. ಲಕ್ಷಗಟ್ಟಲೆ ಲಸಿಕೆಯನ್ನು ಇದೆಲ್ಲ ಗಣನೆಯಲ್ಲಿಟ್ಟು ಸಾಗಿಸುವುದು ಎಷ್ಟು ಕಷ್ಟದ ಕೆಲಸ ಎಂದು ನೀವು ಅಂದಾಜಿಸಬಹುದು.

ಈ ಇಡೀ ಸರಬರಾಜು ವ್ಯವಸ್ಥೆಯನ್ನು ತೀರಾ ಜಾಗರೂಕತೆಯಿಂದ ಕಳೆದ ಕೆಲವು ತಿಂಗಳುಗಳಿಂದ ತಯಾರಿ ನಡೆಸಿ ಫೆಡೆಕ್ಸ್ ಮತ್ತು ಯುಪಿಎಸ್ (ಪಾರ್ಸೆಲ್ ಸರ್ವಿಸ್) ಕಂಪನಿಗಳು ಜಾರಿಗೆ ತಂದಿವೆ. ಇಲ್ಲಿನ ಸಾಮಾನ್ಯ ಪೋಸ್ಟ್ ಸರ್ವಿಸ್‌ಗೆ ಇದೆಲ್ಲವನ್ನು ನಿಭಾಯಿಸುವ ಶಕ್ತಿಯಿಲ್ಲ. ನೂರಾರು ಎಂಜಿನೀಯರುಗಳು, ತಂತ್ರಜ್ಞರು ಕಳೆದ ಕೆಲವು ತಿಂಗಳಿಂದ ಹಗಲಿರುಳು ಶ್ರಮಿಸಿ ಇಂತಹ ವ್ಯವಸ್ಥೆಯೊಂದನ್ನು ನಿರ್ಮಿಸಿದ್ದಾರೆ.

ಈ ಯೋಜನೆ ಸರಿಯಾಗಿ ಕೆಲಸ ಮಾಡಬೇಕೆಂದರೆ ವಿಮಾನಗಳು, ಪೈಲೆಟ್‌ಗಳು, ವಿಮಾನಯಾನ ವ್ಯವಸ್ಥೆ, ಟ್ರಕ್‌ಗಳು, ಡ್ರೈವರ್‌ ಗಳು, ಹೀಗೆ ಎಲ್ಲರೂ ಕರಾರುವಕ್ಕಾಗಿ ಕೆಲಸಮಾಡಬೇಕು – ಅದನ್ನೆಲ್ಲ ಕೇಂದ್ರಿತವಾಗಿ ನಿರ್ದೇಶಿಸುವ ವ್ಯವಸ್ಥೆಯಿರಬೇಕು. ಎಲ್ಲಿ ಲಸಿಕೆ ಮುಟ್ಟಿತು, ಅದರ ಸ್ಥಿತಿಗತಿಗಳು ಇವೆಲ್ಲವನ್ನು ಮಾನಿಟರ್ ಮಾಡಲು ನೂರಾರು ಜನರು ಬೇಕು. ಇನ್ನು ಈ ಡ್ರೈ ಐಸ್
ಇದೆಯಲ್ಲ, ಅದನ್ನು ಒಂದು ಪ್ರಮಾಣಕ್ಕಿಂತ ಜಾಸ್ತಿ ಒಂದೇ ಜಾಗದಲ್ಲಿ ಶೇಖರಿಸಿಡುವಂತಿಲ್ಲ ಮತ್ತು ವಿಮಾನದಲ್ಲಿ ಪ್ರಮಾಣ
ಮೀರಿ ಒಯ್ಯುವಂತಿಲ್ಲ.

ಒಂದೊಮ್ಮೆ ಸ್ವಲ್ಪ ಸೋರಿಕೆಯಾದರೂ ಇಂಗಾಲದ ಡೈ ಆಕ್ಸೆ ಡ್ ಆದ ಕಾರಣದಿಂದ ಜನರ, ಪೈಲೆಟ್ಗಳ ಪ್ರಾಣ ಹೋಗುವ ಸಾಧ್ಯತೆಯಿದೆ. ಈ ಎಲ್ಲ ಕಾನೂನು ನಿರ್ಬಂಧಗಳಿಗೆ ಸದ್ಯ ಮಾಫಿ ಸಿಕ್ಕಿದೆ. ಒಟ್ಟಾರೆ ಲಸಿಕೆ ತಯಾರಾದರೂ ಅದರ ಸಾಗಾಣಿಕೆಯೇ ಮನುಷ್ಯ ನಿರ್ಮಿತ ಸಾಗಾಣಿಕಾ ವ್ಯವಸ್ಥೆಯನ್ನು ಓರೆಗೆ ಹಚ್ಚುವಂತಾಗಿದೆ. ಸಾವಿನ ರೌದ್ರ ನರ್ತನವನ್ನು ಕಣ್ಣಾರೆ ಕಂಡ ಇಲ್ಲಿನ ವೈದ್ಯರು ಮತ್ತು ದಾದಿಯರಿಗೆ ಈ ಲಸಿಕೆಯ ಮಹತ್ವ ಗೊತ್ತು.

ಕೆಲವು ಕಡೆ ವೈದ್ಯರು ಲಸಿಕೆಯ ಡಬ್ಬಿಯನ್ನು ನೋಡಿಯೇ ಭಾವುಕರಾಗಿ ಅಳುತ್ತಿದ್ದಾರೆ. ಇದಕ್ಕೆಲ್ಲ ಅವರು ಕಳೆದ ಎಂಟು ಒಂಭತ್ತು ತಿಂಗಳು ಕಂಡ ನರಕಸದೃಶ ಸ್ಥಿತಿ ಕಾರಣ. ಮೊದಲು ಫ್ರಂಟ್‌ ಲೈನ್ ವರ್ಕರ್ಸ್ – ಯಾರು ನೇರವಾಗಿ ಕೋವಿಡ್ ರೋಗಿ
ಗಳನ್ನು ಶುಶ್ರೂಷೆ ನೀಡುತ್ತಿದ್ದಾರೋ ಅವರಿಗೆ ಈ ಲಸಿಕೆ ನೀಡಲಾಗುತ್ತದೆ.

ತದನಂತರ ಸಮಾಜದಲ್ಲಿ ಯಾರು ಹೆಚ್ಚಿಗೆ ಬಾಧಿತವರ್ಗದವರೋ ಅವರಿಗೆ. ನಂತರ ಇನ್ನಿತರರಿಗೆ. ಹಾಗಾಗಿ ಯಾರೂ ಕೂಡ ಲಸಿಕೆ ಬಂತು, ಎಲ್ಲ ಮುಗಿಯಿತು ಎಂದು ಈಗಲೇ ಅಂದುಕೊಳ್ಳಬಾರದು ಎಂದು ಟ್ರಂಪ್ ಒಬ್ಬನನ್ನು ಬಿಟ್ಟು ಇನ್ನೆಲ್ಲ ನಾಯಕರು, ಮೆಡಿಕಲ್ ಎಕ್ಸ್ಪಟ್ ಗಳು ಹೇಳುತ್ತಿದ್ದಾರೆ. ಅಧ್ಯಕ್ಷ ಟ್ರಂಪ್ ಮಾತ್ರ ಕೋವಿಡ್ ಕಾರಣದಿಂದಲೇ ತಾನು ಸೋತಿzನೋ ಎನ್ನುವ ರೀತಿಯಲ್ಲಿ ಇಂದಿಗೂ ವ್ಯವಹರಿಸುತ್ತಿದ್ದಾರೆ.

Politics. ಲಸಿಕೆಯನ್ನು ಇಲ್ಲಿಯವರೆಗೆ ಬೇರೆ ಬೇರೆ ರೀತಿಯಲ್ಲಿ ರಾಜಕೀಯಕ್ಕೆ ಬಳಸಿಕೊಳ್ಳಲಾಗಿದೆ. ವಿಶ್ವ ಅರೋಗ್ಯ ಸಂಸ್ಥೆ ಇದನ್ನು ಸಾಂಕ್ರಾಮಿಕ ಎಂದು ಕರೆಯಲು ಚೀನಾ ರಾಜಕೀಯ ಒತ್ತಡದ ಕಾರಣದಿಂದಾಗಿ ಮೂರು ತಿಂಗಳು ತೆಗೆದುಕೊಂಡಿತ್ತು. ಎಲ್ಲರಿಗಿಂತ ಮೊದಲು ಇದೊಂದು ಸಾಂಕ್ರಾಮಿಕ ಎಂದು ಗುರುತಿಸಬೇಕಾಗಿದ್ದ ವಿಶ್ವ ಅರೋಗ್ಯ ಸಂಸ್ಥೆ ರಾಜಕೀಯದ ಮುಂದೆ ಸೋತದ್ದು ನಾವು ಮರೆತುಹೋಗುವಷ್ಟು ಹಳೆಯ ವಿಚಾರದಂತನಿಸುತ್ತದೆ.

ಇನ್ನು ಲಸಿಕೆಯನ್ನು ಆಂತರಿಕ ರಾಜಕಾರಣಕ್ಕೆ ಬಳಸಿಕೊಳ್ಳುವುದು ಅಮೆರಿಕಾದ ರಾಜಕೀಯದ ಮಟ್ಟಿಗೆ ಇಂದು ನಿನ್ನೆಯ
ವಿಷಯವಲ್ಲ. ರಾಜಕೀಯ ಮತ್ತು ಧಾರ್ಮಿಕ ಹಿನ್ನೆಲೆಯಲ್ಲಿ ಲಸಿಕೆಯನ್ನು ಬಿಡಿ, ಸಾಂಕ್ರಾಮಿಕವನ್ನೇ ನಂಬದ ಒಂದು ದೊಡ್ಡ
ವರ್ಗ ಇಲ್ಲಿದೆ. ಲಸಿಕೆ ಸ್ಥಾಪಿಸುವ ಕೃತ್ರಿಮ ರೋಗನಿರೋಧಕವನ್ನು ಒಪ್ಪದವರು ಶೇ. ನಲವತ್ತಕ್ಕಿಂತ ಜಾಸ್ತಿ ಪ್ರಮಾಣದಲ್ಲಿದ್ದಾರೆ.

ಕರೋನಾ ಅಮೆರಿಕಾಕ್ಕೆ ಅಪ್ಪಳಿಸಿದ್ದು ಹೇಳಿ ಕೇಳಿ ಚುನಾವಣಾ ವರ್ಷದಲ್ಲಿ. ಅದರಲ್ಲಿಯೂ ಅಲ್ಲಿ ಎರಡನೆಯ ಬಾರಿಗೆ ಸ್ಪರ್ಧಿಸುತ್ತಿದ್ದುದು ಮಿಸ್ಟರ್ ಟ್ರಂಪ್. ರಾಜಕೀಯಕ್ಕೆ ಬಂದರೆ ಟ್ರಂಪ್‌ನದು ಯಾವ ಲೆಕ್ಕಾಚಾರಕ್ಕೂ ಸಿಗದ ರೀತಿ – ನೀತಿ. ಈ ಇಡೀ ಸಾಂಕ್ರಾಮಿಕವನ್ನು ಮೊದಲ ದಿನದಿಂದಲೇ ರಾಜಕೀಯಕ್ಕೆ ಬಳಸಿಕೊಳ್ಳಲು ಒದ್ದಾಡಿದ್ದು ಟ್ರಂಪ್. ಸ್ವತಃ ಆತನಿಗೇ ಈ ಸಾಂಕ್ರಾಮಿಕದ ರಾಜಕೀಯ ಚುನಾವಣೆಯಲ್ಲಿ ಹೇಗೆ ಕೆಲಸ ಮಾಡಬಹುದು ಎಂದು ಅಂದಾಜಿದ್ದಂತಿಲ್ಲ.

ಚೀನಾ ದೊಂದಿಗೆ ಅದಾಗಲೇ ಟ್ರೇಡ್ ವಾರ್ – ವ್ಯಾಪಾರ ಯುದ್ಧ ಆರಂಭಿಸಿ ಸ್ವಲ್ಪ ಟ್ರಾಕ್ಷನ್ ಪಡೆದುಕೊಂಡಿದ್ದ ಟ್ರಂಪ್‌ಗೆ ಚೀನಾಗೆ ಬಯ್ಯಲು ಸಿಕ್ಕಿದ ಇನ್ನೊಂದು ಅಸವೇ ಕರೋನಾ. ಯಾವುದೇ ನಾಗರೀಕನಿಗೆ ದೇಶ ಮೊದಲು, ಆಮೇಲೆ ಉಳಿದದ್ದು. ಈ ಒಂದು ನಯವಾದ ಎಳೆಯನ್ನೇ ಬಳಸಿಕೊಂಡ ಟ್ರಂಪ್ ಈ ಕರೋನಾ ಸುತ್ತ ಹತ್ತು ಹಲವು ರಾಜಕಾರಣಗಳನ್ನು ಹುಟ್ಟಿ ಹಾಕಿದ್ದ. ಕೆಲವೊಂದು ತೀರಾ ಸ್ಟುಪಿಡ್ ಎನ್ನುವ ಮಟ್ಟಿಗೆ.

ಸ್ವತಃ ಅಧ್ಯಕ್ಷ ಟ್ರಂಪ್ ಮಾಸ್ಕ್ ಧರಿಸಲು ವಿರೋಽಸುವವರ ಬೆನ್ನಿಗೆ ನಿಂತದ್ದು, ತಾನೂ ಧರಿಸದೇ ಕರೋನಾ ಹಿಡಿಸಿಕೊಂಡದ್ದು, ಮೊದಲ ಕೆಲವು ತಿಂಗಳುಗಳ ಕಾಲ ಕರೋನಾ ಸಾವಿನ ಸಂಖ್ಯೆ ಆ ರೀತಿಯಲ್ಲಿದ್ದರೂ ಇಡೀ ಘಟನೆಯನ್ನು ಸಾರ್ವಜನಿಕರಿಂದ
ತಿಳಿದೂ ಮುಚ್ಚಿಟ್ಟದ್ದು, ತನ್ನ ಚುನಾವಣಾ ಪ್ರಚಾರದಲ್ಲಿ ಜನರು ಕಿಕ್ಕಿರಿದು ಸೇರಲು ಅವಕಾಶ ಕೊಟ್ಟಿದ್ದು ಇವೆಲ್ಲ ಇಡೀ
ಅಮೆರಿಕಾದ ಸಮಾಜದಲ್ಲಿ ಒಂದಿಷ್ಟು ಗೊಂದಲಗಳನ್ನು ಸೃಷ್ಟಿಸಿದೆ.

ಹೀಗೆ ಹುಟ್ಟಿದ ಗೊಂದಲಗಳು ಇಂದಿಗೂ ಚುನಾವಣೆ ಮುಗಿದರೂ ಜೀವಂತವಿದೆ. ಇಷ್ಟೆ ಮಿತಿ ಮೀರಿದ ನಡೆಗಳ ಮಧ್ಯೆ ಲಸಿಕೆ ತಯಾರಾಗುವ ಮೊದಲೇ ಲಸಿಕೆ ರೆಡಿ ಇದೆ ಎಂದದ್ದು, ಹತ್ತು ಹದಿನೈದು ವರ್ಷ ಲಸಿಕೆಯೊಂದಕ್ಕೆ  ಬೇಕಾಗುವ ಸಮಯದಲ್ಲಿ ಕೆಲವೇ ತಿಂಗಳಲ್ಲಿ ಎಲ್ಲ ತಯಾರಿದೆ ಎಂದದ್ದು, ಲಸಿಕೆಯನ್ನು ಸರಕಾರಿ ವಿಜ್ಞಾನಿಗಳು ಒಪ್ಪುವ ಮೊದಲೇ ಮೈಕ್‌ನ ಮುಂದೆ ಬಂದು ಲಸಿಕೆ ನಾವು ಒಪ್ಪಿದ್ದೇವೆ – ಎಲ್ಲ ಸಿದ್ಧ ಎಂದದ್ದು.

ಹೀಗೆ ಹತ್ತು ಹಲವು ಸುಳ್ಳುಗಳ, ದಾರಿತಪ್ಪಿಸುವ ಮಾತುಗಳ ಮಧ್ಯೆ ಈಗ ಅತ್ಯಂತ ಅಲ್ಪಾವಧಿಯಲ್ಲಿ ಲಸಿಕೆ ತಯಾರಾಗಿರುವುದು ಸಹಜವಾಗಿ ಲಸಿಕೆಯನ್ನು ಒಪ್ಪಿಕೊಳ್ಳುವ ಶೇ.60ರಲ್ಲಿ ಅರ್ಧಕ್ಕರ್ಧದಷ್ಟು ಮಂದಿಯಲ್ಲಿ ಕೂಡ ಅನುಮಾನ ಮೂಡಿಸಿದೆ. ಒಟ್ಟಾರೆ ಅಮೆರಿಕಾದಲ್ಲಿ ಈ ಲಸಿಕೆಯನ್ನು ತೆಗೆದುಕೊಳ್ಳಲು ಶೇ.30 ಮಂದಿ ಮಾತ್ರ ತಯಾರಿzರೆ. ಅವರಲ್ಲಿ ಬಹುತೇಕರು
ಒಂದೋ ಕುಟುಂಬದಲ್ಲಿ ಸಾವು – ನೋವನ್ನು ಕಂಡವರು ಇಲ್ಲವೇ ಅಸ್ಪ್ರತ್ರೆಯಲ್ಲಿ ಕೆಲಸಮಾಡುವ ನೌಕರರು.

ಲಸಿಕೆಯೆಂದರೆ ಅಲ್ಲಿ ಜನರ ನಂಬಿಕೆ ತೀರಾ ಮುಖ್ಯವಾಗುತ್ತದೆ. ಇಷ್ಟು ಕಡಿಮೆ ಅವಧಿಯಲ್ಲಿ ಅತ್ಯಂತ ಕ್ಲಿಷ್ಟವಾದ ಕಠಿಣವಾದ ಎಲ್ಲ ಒಪ್ಪಿಗೆಗಳನ್ನೂ ಪಡೆದು, ಕೆಲವು ತೀರಾ ಮುಖ್ಯವಾದ ಕ್ಲಿನಿಕಲ್ ಟ್ರಯಲ್ ಹಂತಗಳನ್ನು ಮಾಡದೇ, ಟ್ರಂಪ್ ಮುತುವರ್ಜಿಯಲ್ಲಿ ಸಿದ್ಧವಾಗಿರುವ ಈ ಲಸಿಕೆಯನ್ನು ನಂಬದವರೇ ಜಾಸ್ತಿ. ಲಸಿಕೆಯನ್ನು ಯಾರಾದರೂ ನಿರಾಕರಿಸಿದರೆ ಅವರಿಗೆ ಒತ್ತಾಯದಲ್ಲಿ ಚುಚ್ಚಲು ಸಾಧ್ಯವಾಗುವುದಿಲ್ಲ.

ಲಸಿಕೆಯನ್ನು ಶೇ.30ರಷ್ಟು ಮಂದಿ ಸಮಾಜದಲ್ಲಿ ಪಡೆಯದಿದ್ದರೆ ಸ್ಥಿತಿ ಅಷ್ಟು ಸುಲಭದಲ್ಲಿ ಹದಕ್ಕೆ ಬರುವುದಿಲ್ಲ. ಹೀಗೆ ಒಂದಿಷ್ಟು ದೊಡ್ಡ ಮೊತ್ತದಲ್ಲಿ ಜನರು ಲಸಿಕೆ ಪಡೆಯದಿದ್ದರೆ ವೈರಸ್ ಇನ್ನಷ್ಟು ಮ್ಯುಟೇಷನ್ ಹೊಂದಿ ಲಸಿಕೆ ಪಡೆದವರನ್ನೂ ಬಾಧಿಸಬಹುದು. ಲಸಿಕೆಯೇ ನಿಷ್ಪ್ರಯೋಜನವಾಗಬಹುದು. ಹಿಂದೆ 1905ರಲ್ಲಿ ಸ್ಮಾಲ್ ಪೋಕ್ಸ್ ಬಂದಾಗ ಕೂಡ ಲಸಿಕೆ ಯನ್ನು ಕಡ್ಡಾಯ ಮಾಡುವ ವಿಚಾರವಾಗಿ ಜನರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಅಲ್ಲಿ ಕೂಡ ಯಾರಿಗೂ ಲಸಿಕೆಯನ್ನು ಒತ್ತಾಯಿಸುವಂತಿಲ್ಲ ಎನ್ನುವ ನಿರ್ಧಾರ ಹೊರಬಂದಿತ್ತು. ಹೀಗೆಲ್ಲ ಇರುವಾಗ ಲಸಿಕೆ ಯೊಂದಿಗೆ ಅದರ ಸುತ್ತ ನಂಬಿಕೆ ಹುಟ್ಟಿಸುವುದು ತೀರಾ ಅಗತ್ಯವಾಗುತ್ತದೆ. ಇದು ಬೈಡನ್‌ಗೂ ಸಾಧ್ಯವಾಗಲಿಕ್ಕಿಲ್ಲ. ಡೆಮೊಕ್ರಾಟ್ ಪಕ್ಷವನ್ನು ಒಪ್ಪುವ ಮಂದಿಗೆ ಟ್ರಂಪ್‌ನ ಮೇಲೆ ನಂಬಿಕೆಯಿಲ್ಲ. ಇನ್ನು ರಿಪಬ್ಲಿಕನ್ ಪಕ್ಷವನ್ನು ಒಪ್ಪುವ, ಟ್ರಂಪ್ ಅನ್ನು ಅನು ಮೋದಿಸುವ ಮಂದಿಯಲ್ಲಿ ಹಲವು ಪ್ರತಿಶತ ಮಂದಿಗೆ ಕರೋನಾ ಒಂದು ಸಾಂಕ್ರಾಮಿಕ ಎಂದೇ ಒಪ್ಪಿಕೊಳ್ಳುವ
ಮನಸ್ಥಿತಿ ಯಿಲ್ಲ. ಇದು ಟ್ರಂಪ್ ಬಿಟ್ಟು ಹೋಗುತ್ತಿರುವ ಲೆಗಸಿ.

ಇದೆಲ್ಲದರ ಜತೆ ಇಂದು ನಾವು, ಸುದ್ದಿ ಬಕಾಸುರರಿಗೂ ಅಜೀರ್ಣವಾಗುವಷ್ಟು ಮಾಹಿತಿಗಳ ಲಭ್ಯತೆಯ ಮಧ್ಯೆ ಬೇರೆ
ಬದುಕು ತ್ತಿದ್ದೇವೆ. ಶೀಘ್ರದಲ್ಲಿಯೇ ಲಸಿಕೆ ಪಡೆದದ್ದಕ್ಕೆ ಹೀಗಾಯಿತಂತೆ, ಹಾಗಾಯಿತಂತೆ ಎನ್ನುವ ಸುದ್ದಿ ಮೆಲ್ಲಗೆ ಹರಡಲು ಶುರುವಾಗುತ್ತದೆ. ಒಂದಿಷ್ಟು ಪಿತೂರಿ ವಾದಗಳು ಹುಟ್ಟಿಕೊಳ್ಳುತ್ತವೆ. ಜನರಿಗೆ ನೂರೆಂಟು ಅದಾಗಲೇ ಇರುವ ರೋಗ – ಸ್ಥಿತಿಗಳು ಉಲ್ಬಣಿಸಿದಾಗಲೆಲ್ಲ ಅದಕ್ಕೆ ಈ ಲಸಿಕೆಯೇ ಕಾರಣ ಎನ್ನುವ ಸಾಧ್ಯತೆಯಿದೆ.

ಹೀಗೆ ಅನುಮಾನಕ್ಕೆ ಹುಟ್ಟಿಕೊಳ್ಳುವ ತಪ್ಪು ಮಾಹಿತಿ, ಸುಳ್ಳು ಸುದ್ದಿಗಳು ಮೊದಲೇ ಲಸಿಕೆಯತ್ತ ಅನುಮಾನ ಹೊಂದಿರು ವವರಿಗೆ ಸಾಕ್ಷಿಯಂತೆ ಕಾಣಿಸಬಹುದು. ಇದರಿಂದ ಲಸಿಕೆ ಹಾಕುವ ಕಾರ್ಯ ಇನ್ನಷ್ಟು ಜಟಿಲವಾಗುತ್ತದೆ. ಅಲ್ಲದೇ ಈ ಲಸಿಕೆ ಮಕ್ಕಳಿಗೆ ಕೊಡುವ ಬಗ್ಗೆ ಸ್ಪಷ್ಟತೆ ಮತ್ತು ಒಪ್ಪಿಗೆ ಇನ್ನೂ ಸಿಕ್ಕಿಲ್ಲ. ಶಾಲೆಗೆ ಹೋಗುವ ಮಕ್ಕಳೇ ಹೆಚ್ಚಾಗಿ ಹರಡಬಹುದು ಎಂದು ಅಂದುಕೊಂಡಿರುವಾಗ ಈ ಅಸ್ಪಷ್ಟತೆ ಇನ್ನಷ್ಟು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ.

ಬಹುತೇಕರು, ಉಳಿದವರು ತೆಗೆದುಕೊಳ್ಳಲಿ – ಒಂದೈದಾರು ತಿಂಗಳು ಕಳೆಯಲಿ, ಅಡ್ಡಪರಿಣಾಮಗಳೇನು, ಇದು ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂಬಿತ್ಯಾದಿ ವಿಚಾರಗಳ ಮೇಲೆ ಸ್ಪಷ್ಟತೆ ಸಿಗಲಿ ಎಂದೇ ಅಂದುಕೊಳ್ಳುತ್ತಿzರೆ. ಅದಾಗಲೇ ಬಹು ದೊಡ್ಡ ವರ್ಗ ಈ ಸಾಂಕ್ರಾಮಿಕದ ಜತೆ ಬದುಕುವುದನ್ನು ಕಲಿತಾಗಿರುವುದರಿಂದ ಈ ಲಸಿಕೆ ಸರಕಾರ ಎಷ್ಟೇ ಪ್ರಯತ್ನ ಪಟ್ಟರೂ ಜನರು ಒಪ್ಪಿಕೊಳ್ಳಲು ಕಾಲವೇ ಬೇಕಾಗಿದೆ.

ಈಗ ಈ ಎಲ್ಲ ನಂಬಿಕೆಯನ್ನು ಆದಷ್ಟು ಬೇಗ ಸ್ಥಾಪಿಸುವ ಒಂದು ದೊಡ್ಡ ಸವಾಲು ಮುಂಬರುವ ಅಧ್ಯಕ್ಷರ, ಆಡಳಿತದ ಮತ್ತು ಸಮಸ್ತ ವೈದ್ಯವರ್ಗದ ಹೆಗಲ ಮೇಲಿದೆ. ಈ ಕೆಲಸ ಎಷ್ಟು ಸಮರ್ಥವಾಗಿ ಸಾಧ್ಯವಾಗುತ್ತದೆ ಎನ್ನುವುದರ ಮೇಲೆ ಲಸಿಕೆಯ ಪರಿಣಾಮ, ಸಮಾಜದ ಸಹಜಕ್ಕೆ ಮರಳುವ ಸಾಧ್ಯತೆ ಅವಲಂಬಿಸಿದೆ. ಒಂದೊಮ್ಮೆ ಈ ವರ್ಷ ಚುನಾವಣೆಯಿಲ್ಲದಿದ್ದರೆ
ಹೀಗೆಲ್ಲ ಸ್ಥಿತಿ ನಿರ್ಮಾಣವಾಗುತ್ತಿಲ್ಲವೇನೋ ಅನಿಸುತ್ತದೆ.

ಫೋರ್ಡ್, ಕಾರ್ಟರ್, ಹಿರಿಯ ಬುಷ್, ಕ್ಲಿಂಟನ್, ಕಿರಿಯ ಬುಷ್, ಒಬಾಮಾ ಹೀಗೆ ಕಳೆದ ಏಳೆಂಟು ದಶಕದಲ್ಲಿ ಅಧಿಕಾರಕ್ಕೆ
ಬಂದ ಎಲ್ಲ ಅಮೆರಿಕನ್ ಅಧ್ಯಕ್ಷರೂ ಒಂದಿಂದು ಕಡೆ, ನಮ್ಮಂತಹ ಜಗತ್ತನ್ನು ಮುನ್ನಡೆಸಲು ಸಾಧ್ಯವಿರುವ ರಾಷ್ಟ್ರ
ಸಾಂಕ್ರಾಮಿಕಕ್ಕೆ ಎಲ್ಲಿಲ್ಲದ ತಯಾರಿ ನಡೆಸಿಕೊಂಡಿರಬೇಕು ಮತ್ತು ಜಗತ್ತಿಗೆ ಅಂತಹ ಸ್ಥಿತಿ ನಿರ್ಮಾಣವಾದಲ್ಲಿ ಮಾರ್ಗ ದರ್ಶಕರಾಗಿ ಮುಂಚೂಣಿಯಲ್ಲಿರಬೇಕು’ ಎಂದು ಹೇಳಿದವರೇ. ಅವರಿಗೆಲ್ಲ ಇಂತಹ ಸ್ಥಿತಿ ಒಂದು ದಿನ ನಿರ್ಮಾಣವಾಗಬಹುದು ಎನ್ನುವ ಅಂದಾಜಿತ್ತು.

ಅದೆಷ್ಟೋ ದಶಕದಿಂದ ಸಾಂಕ್ರಾಮಿಕವೊಂದಕ್ಕೆ ಇವರೆಲ್ಲರ ಆಡಳಿತ ತಯಾರಿ ನಡೆಸಿಕೊಂಡೇ ಬಂದಿತ್ತು. ಸಾಂಕ್ರಾಮಿಕವನ್ನು
ನಿಭಾಯಿಸುವುದು ಹೇಗೆ, ಲಸಿಕೆಯನ್ನು ತಯಾರಿಗೊಳಿಸುವುದು ಮತ್ತು ಜನರಲ್ಲಿ ನಂಬಿಕೆ ಹುಟ್ಟಿಸಿ ಅದನ್ನು ಸ್ವೀಕರಿಸುವಂತೆ
ಮಾಡುವುದು ಹೇಗೆ ಈ ಎಲ್ಲದರ ಬಗ್ಗೆ ಒಂದು ಪಕ್ಕಾ ಯೋಜನೆ ತಯಾರಿಸಿಟ್ಟುಕೊಂಡಿದ್ದರು. ಒಬಾಮ ತನ್ನ ಇತ್ತೀಚಿನ ಕೃತಿ ‘”A
Promised Land’ನಲ್ಲಿ ಇದೆಲ್ಲವನ್ನು ವಿವರವಾಗಿ ಹೇಳುತ್ತ, ಇಷ್ಟೆ ತಯಾರಿ ನಡೆಸಿದ್ದನ್ನು ಅಧ್ಯಕ್ಷ ಟ್ರಂಪ್ ಕಡೆಗಣಿಸಿ, ಒಂದು ಚೂರೂ ಈ ಪ್ರಯತ್ನದ ಫಲವನ್ನು ಬಳಸಿಕೊಳ್ಳದೇ, ಈ ಪ್ರಮಾಣದ (ಈ ಲೇಖನ ಬರೆಯುತ್ತಿರುವಾಗ 17392618 
ದೃಢ ಪಟ್ಟವರು ಮತ್ತು 314577 ಕರೋನಾದಿಂದ ಮೃತರು) ಹರಡುವಿಕೆ ಮತ್ತು ಸಾವಿಗೆ ಕಾರಣವಾದದ್ದನ್ನು ಪ್ರಸ್ತಾಪಿಸಿ
ಬೇಸರವನ್ನು ಹೊರಹಾಕಿದ್ದಾರೆ.

ದೇಶವೊಂದು ಇಷ್ಟು ತಯಾರಿ ನಡೆಸಿದ್ದರೂ ರಾಜಕೀಯವೊಂದು, ವ್ಯಕ್ತಿಯೊಬ್ಬ ಜಗತ್ತಿನ ಬಲಿಷ್ಠ ರಾಷ್ಟ್ರವನ್ನು ಮಂಡಿ ಯೂರುವಂತೆ ಮಾಡಿದ್ದು – ಸಂಕಷ್ಟದಿಂದ ಸುಲಭದಲ್ಲಿ ಹೊರಬರದಂತೆ ಜಟಿಲತೆ ಸೃಷ್ಟಿಸಿ  ಬಿಟ್ಟು ಹೋಗುತ್ತಿರುವುದು ದುರಂತವಲ್ಲದೇ ಇನ್ನೇನು. ಒಂದೊಳ್ಳೆ ಮನೆತನದ ಎಲ್ಲ ಇತಿಹಾಸ, ಮಾನ, ಸಂಪಾದನೆಯನ್ನು ಒಬ್ಬ ವಂಶದ ಕುಡಿ ಮಣ್ಣುಮಾಡಿಬಿಡುತ್ತಾನಲ್ಲ ಹಾಗಿದೆ ಒಬಾಮಾರ ಟ್ರಂಪ್ ಬಗೆಗಿನ ವಿಶ್ಲೇಷಣೆ.

ಇದೆಲ್ಲದರ ಜತೆ ಜತೆ, ಒಬಾಮ ಇನ್ನೊಂದು ಟರ್ಮ್ ಅಧ್ಯಕ್ಷರಾಗಿರಬೇಕಿತ್ತು, ಹಾಗಾದಲ್ಲಿ ಇಂದಿನ ಸ್ಥಿತಿಯೇ ಬೇರೆಯದಾಗಿರು ತ್ತಿತ್ತು ಎಂದು ಹಲವು ಬಾರಿ ಅನಿಸುತ್ತದೆ. ಅಮೆರಿಕಾದಲ್ಲಿ ಎರಡು ದಿನ ಕಳೆಯುವುದರೊಳಗೆ ಒಬ್ಬರಿಗೆ ಮತ್ತು ಯುನೈಟೆಡ್ ಕಿಂಗ್ಡಮ್‌ನಲ್ಲಿ ಇಬ್ಬರಿಗೆ ಈಗಾಗಲೇ ಲಸಿಕೆ ಪಡೆದ ಕೆಲವೇ ಕ್ಷಣಗಳಲ್ಲಿ ಮೈ ಮೇಲೆ ಬೊಬ್ಬೆಗಳೆದ್ದು ಸ್ಥಿತಿ ಬಿಗಡಾಯಿಸಿದ್ದು ಸುದ್ದಿಯಾಗಿದೆ.

ಮುಂಬರುವ ದಿನದಲ್ಲಿ ಈ ಲಸಿಕೆಯ ಕ್ಷಮತೆ (ಅಡ್ಡ) ಪರಿಣಾಮಗಳು ಹೊರಬರಲಿಕ್ಕಿದೆ. ಈಗಾಗಲೇ ಫೈಜರ್ ಲಸಿಕೆಯ ಗುಣದಿಂದಾಗಿ ಅದನ್ನು ಸಾಗಿಸುವುದು ಕಠಿಣವಾಗಿರುವುದರಿಂದ ಅಮೆರಿಕಾದ ಹಳ್ಳಿಗಳಿಗೆ ಮತ್ತು ಜಗತ್ತಿನ ಇತರ ರಾಷ್ಟ್ರಗಳಲ್ಲಿ ಇದನ್ನು ಸಾಗಿಸಲು ಮೂಲಸೌಕರ್ಯಗಳಿಲ್ಲ. ಇನ್ನು ಮತ್ತೊಂದು ಲಸಿಕೆ ತಯಾರಾಗಿ ಒಪ್ಪಿಗೆಗೆ ಕಾದು ನಿಂತಿದೆ. ಮೋಡೆನಾರ್ ಕಂಪನಿಯ ಲಸಿಕೆಗೆ ಇಷ್ಟೆ ಕಡಿಮೆ ಉಷ್ಣತೆಯ ಅವಶ್ಯಕತೆ ಯಿಲ್ಲ.

ಇದರ ಜೊತೆ ಹತ್ತಾರು ಲಸಿಕೆಗಳು ಈಗಾಗಲೇ ಒಪ್ಪಿಗೆಗೆ ಸರತಿಯಲ್ಲಿ ನಿಂತಿವೆ. ಇದೆಲ್ಲದರ ಜೊತೆ ಅಪನಂಬಿಕೆಯೆನ್ನುವ ಪೆಡಂಭೂತವೊಂದು ಎಲ್ಲ ಸಾಧ್ಯತೆಗೆ ಅಡ್ಡಗಾಲು ಹಾಕಲು ತಯಾರಾಗುತ್ತಿರುವಂತೆ ಭಾಸವಾಗುತ್ತಿದೆ. ಇದೆಲ್ಲ ಅಷ್ಟು ಸುಲಭಕ್ಕೆ ಸುಖಾಂತ್ಯ ಕಾಣುವ ಲಕ್ಷಣಗಳಿಲ್ಲದಿದ್ದರೂ ಎಲ್ಲವೂ ಸುಸೂತ್ರವಾಗಬಹುದೇನೋ ಎನ್ನುವ ಆಸೆಯೊಂದು ಜಗತ್ತನ್ನು ತುದಿಗಾಲಲ್ಲಿ ನಿಲ್ಲಿಸಿದೆ.

Hope for the best.