Sunday, 13th October 2024

ಕರೋನಾ ವೈರಸ್ ಮೇಡ್ ಇನ್ ಚೀನಾ !

ಡಾ.ಲಿ-ಮೆಂಗ್ ಯಾನ್
ಸಂದರ್ಶನ

ಕರೋನಾ ವೈರಸ್ ಹುಟ್ಟಿದ್ದು ಚೀನಾದ ಪ್ರಯೋಗಾಲಯದಲ್ಲಿ ಎಂದು ಹೇಳಿದ ಪ್ರಸಿದ್ಧ ವಿಜ್ಞಾನಿಗಳಲ್ಲಿ ಡಾ. ಲಿ-ಮೆಂಗ್ ಯಾನ್ ಮೊದಲಿಗರು. ಚೀನಾದ ಸ್ವಾಯತ್ತ ಪ್ರದೇಶವಾಗಿರುವ ಹಾಂಗ್‌ಕಾಂಗ್‌ನಲ್ಲಿರುವ ಪ್ರಸಿದ್ಧ ಪ್ರಯೋಗಾ ಲಯದಲ್ಲಿ ಈಕೆ 2012ರಿಂದ ವೈರಾಣು ಸಂಶೋಧಕಿಯಾಗಿದ್ದರು. ಆದರೆ, ಕರೋನಾ ವೈರಸ್ಸನ್ನು ಚೀನಾ ಬೇಕಂತಲೇ ಹುಟ್ಟುಹಾಕಿದೆ ಎಂದು ಈಕೆ ಸಾಕ್ಷಿಸಮೇತ ಹೇಳಿದ ಮೇಲೆ ಜೀವಭಯದಿಂದ ಹಾಂಗ್‌ಕಾಂಗ್ ತೊರೆದು ಅಮೆರಿಕಕ್ಕೆ ಓಡಿಹೋಗಿ ನೆಲೆಸಿದ್ದಾರೆ. ಚೀನಾ ಸರಕಾರವೀಗ ಈಕೆಯ ಕುಟುಂಬದವರ ಮೇಲೆ ಕಣ್ಣಿಟ್ಟಿದೆ. ಆದರೂ ಡಾ.ಯಾನ್ ತಮ್ಮ ಹೋರಾಟ ನಿಲ್ಲಿಸಿಲ್ಲ. ಕರೋನಾ ವೈರಸ್ ಹುಟ್ಟಿದ್ದು ಚೀನಾದಲ್ಲಲ್ಲ ಎಂದು ಸಾಬೀತುಪಡಿಸಿ ನೋಡೋಣ ಎಂದು ಚೀನಾಕ್ಕೇ ಸವಾಲು ಹಾಕುತ್ತಿದ್ದಾರೆ. ಈಕೆಯ ಪತಿ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾರೆ. ಆದರೆ, ಚೀನಾವನ್ನು ವಿಶ್ವ ಆರೋಗ್ಯ ಸಂಸ್ಥೆಯೇ ರಕ್ಷಿಸುತ್ತಿದೆ ಎಂದು ಈಕೆ ವಿಶ್ವ ಆರೋಗ್ಯ ಸಂಸ್ಥೆಯ ಮೇಲೂ ಆರೋಪ ಮಾಡುತ್ತಾರೆ. ಚೀನಾ ಸರಕಾರ ಯಾವಾಗ ಬೇಕಾದರೂ ನನ್ನನ್ನು ಕೊಲ್ಲಬ ಹುದು ಎನ್ನುವ ಡಾ.ಯಾನ್, ಸತ್ಯ ಮುಖ್ಯವೇ ಹೊರತು ನಾನಲ್ಲ ಎಂದೂ ಹೇಳುತ್ತಾರೆ. ದಿ ವೀಕ್ ನಿಯತಕಾಲಿಕಕ್ಕೆ ಡಾ.ಲಿ-ಮೆಂಗ್ ಯಾನ್ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

*ಸದ್ಯ ನಿಮ್ಮ ಮನಸ್ಸಿನಲ್ಲಿ ಏನು ನಡೆಯುತ್ತಿದೆ?
ಜನವರಿ ತಿಂಗಳಿನಿಂದಲೂ ನಾನು ಸುಳ್ಳುಗಳ ವಿರುದ್ಧ ಹೋರಾಡಿ ಸತ್ಯ ಹೊರತರಲು ಯತ್ನಿಸುತ್ತಿದ್ದೇನೆ. ಆದರೆ, ಚೀನಾ, ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಮಾಧ್ಯಮಗಳು ನನ್ನ ಬಾಯಿ ಮುಚ್ಚಿಸಲು ಯತ್ನಿಸುತ್ತಲೇ ಇವೆ. ಕೋವಿಡ್-19 ಚೀನಾದ ಪ್ರಯೋಗಾ ಲಯದಿಂದ ಬಂದಿರಬಹುದು ಎಂಬ ಸಾಧ್ಯತೆಯನ್ನು ಬಹಳ ಜನರು ಮೊದಲಿಗೆ ನಿರ್ಲಕ್ಷಿಸಿಬಿಟ್ಟಿದ್ದರು. ಇದು ನೈಸರ್ಗಿಕ ವಿಕೋಪ ಆಗಿರಲಿಕ್ಕಿಲ್ಲ ಎಂದು ಅವರು ಯೋಚಿಸಿಯೇ ಇರಲಿಲ್ಲ. ಆದರೆ ಅವರಿಗೆಲ್ಲ ಈಗ ಜ್ಞಾನೋದಯವಾಗುತ್ತಿದೆ. ಇದು ಚೀನಾದಲ್ಲೇ ಹುಟ್ಟಿದ ವೈರಸ್ ಎಂಬುದಕ್ಕೆ ಅವರಿಗೆ ಹೆಚ್ಚೆಚ್ಚು ಸಾಕ್ಷ್ಯಗಳು ಸಿಗುತ್ತಿವೆ. ಹೀಗಾಗಿ ಚೀನಾದ ವಾದ ತಲೆಕೆಳಗಾಗು ತ್ತಿದೆ. ನಾನೀಗ ಈ ವೈರಸ್ ಚೀನಾದಲ್ಲೇ ಹುಟ್ಟಿದ್ದು ಎಂಬುದನ್ನು ತೋರಿಸಲು ಎರಡನೇ ಸಂಶೋಧನಾ ಪ್ರಬಂಧ ಬರೆಯು ತ್ತಿದ್ದೇನೆ. ಆದರೆ, ನನ್ನೊಂದಿಗೆ ಈ ಹಿಂದೆ ಕೆಲಸ ಮಾಡಿದವರೂ ಸತ್ಯ ಮುಚ್ಚಿಟ್ಟು ಈ ವೈರಸ್ ಚೀನಾದಲ್ಲಿ ಹುಟ್ಟಿಲ್ಲ ಎಂದು ಹೇಳುತ್ತಿರುವುದನ್ನು ನೋಡಿ ನನಗೆ ಆಘಾತವಾಗುತ್ತಿದೆ. ಅವರಿಗೆ ಜಗತ್ತಿನ ಸುರಕ್ಷತೆ ಮುಖ್ಯವಲ್ಲವೇ? ನಾನು ನನ್ನ ಸಂಶೋಧನಾ ವರದಿ ಮಂಡಿಸಿದ ಮೇಲೂ ದೊಡ್ಡ ದೊಡ್ಡ ವೈರಾಣು ತಜ್ಞರು ಸುಳ್ಳು ಹೇಳುವುದನ್ನೇ ಮುಂದುವರೆಸಿದ್ದಾರೆ. ಅವರು ತಜ್ಞರು
ಎಂಬ ಕಾರಣಕ್ಕೆ ಜನರೂ ಅವರನ್ನು ನಂಬುತ್ತಿದ್ದಾರೆ.

ಜನವರಿ 19ರಿಂದ ಯೂಟ್ಯೂಬ್ ಚಾನಲ್ ಲೂಡ್ಸ್ ಬ್ರಾಡ್‌ಕಾಸ್ಟ್‌‌ನವರು ಕೋವಿಡ್-19 ವೈರಸ್ ಮಾನವನಿರ್ಮಿತ ಎಂಬುದನ್ನು ಜಗತ್ತಿಗೆ ತಿಳಿಸಲು ನನಗೆ ಸಹಾಯ ಮಾಡುತ್ತಿದ್ದಾರೆ (ಚೀನಾದ ವಿವಾದಾಸ್ಪದ ಉದ್ಯಮಿ ಗೌ ವೆಂಗ್‌ಯಿ ಎಂಬುವರಿಗೆ ಸ್ನೇಹಿತ ನಾದ ಲೂಡ್ ಎಂಬ ಸಾಮಾಜಿಕ ಹೋರಾಟಗಾರ ನಡೆಸುತ್ತಿರುವ ಚಾನಲ್ ಇದು). ಆ ವಿಡಿಯೋ ನೋಡಿದಾಕ್ಷಣ ಚೀನಾದ ಅಧಿಕಾರಿಗಳಿಗೆ ಯಾರೋ ಒಳಗಿನವರೇ ಸತ್ಯ ಹೊರಗೆಡವಿದ್ದಾರೆ ಎಂಬುದು ತಿಳಿಯಿತು. ಹೀಗಾಗಿ ಅವರು ಕರೋನಾ ವೈರಸ್ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತಿದೆ ಮತ್ತು ಚೀನಾದೆಲ್ಲೆಡೆ ಸೋಂಕಿನ ಪ್ರಮಾಣ ಮೂರು ಪಟ್ಟು ಹೆಚ್ಚಿದೆ ಎಂದು ಮೊದಲ ಬಾರಿ ಒಪ್ಪಿಕೊಂಡರು. ನನ್ನ ವಿಡಿಯೋ ಹೊರಬಿದ್ದ ಕೆಲವೇ ಗಂಟೆಳಲ್ಲಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕೋವಿಡ್-19 ವೈರಸ್ ಬಹಳ ಗಂಭೀರವಾದ ಸಾಂಕ್ರಾಮಿಕ ರೋಗವನ್ನು ಹುಟ್ಟುಹಾಕಿದೆ, ಇದು ಸಾರ್ಸ್-1ನಷ್ಟೇ ಅಪಾಯಕಾರಿ ಎಂದು ಘೋಷಿಸಿ ದರು. ಆದರೂ ಅವರ ಸರ್ಕಾರ ಚೀನಾದ ಜನರಿಗೆ ಜಗತ್ತಿನಾದ್ಯಂತ ಪ್ರಯಾಣಿಸಲು ಅನುಮತಿ ಕೊಟ್ಟಿತ್ತು. ವಿಶ್ವ ಆರೋಗ್ಯ ಸಂಸ್ಥೆ ಕೂಡ ಏನೂ ಆಗಿಲ್ಲ, ಇದೇನೂ ತುರ್ತು ಸ್ಥಿತಿಯಲ್ಲ ಹೆದರಬೇಡಿ ಎಂದು ಹೇಳಿತು. ಹೈಡ್ರೋಕ್ಸಿಕ್ಲೋರೋಕ್ವಿನ್ ಮಾತ್ರೆ ಸೇವಿಸುವುದಕ್ಕೂ ಅದು ಆಕ್ಷೇಪ ವ್ಯಕ್ತಪಡಿಸಿತು. ಅದೊಂದು ಬೇಜವಾಬ್ದಾರಿ ನಡೆ. ನನಗೀಗ ಅಮೆರಿಕದಲ್ಲಿ ಸಾಕಷ್ಟು ಬೆಂಬಲ ಸಿಗುತ್ತಿದೆ. ಚೀನಾವನ್ನು ವಿರೋಧಿಸುವವರು ಹಾಗೂ ಈ ವೈರಸ್ ಚೀನಾದಲ್ಲೇ ಹುಟ್ಟಿದೆ ಎಂದು ನಂಬುವ ದೊಡ್ಡ ದೊಡ್ಡ ವಿಜ್ಞಾನಿಗಳು ನನ್ನ ಬೆನ್ನಿಗೆ ನಿಂತಿದ್ದಾರೆ. ಆದರೂ ನಾನು ಚೀನಾ ಸರಕಾರದ ಹಾಗೂ ಅದರ ಬೆಂಬಲಿಗರ ದಾಳಿಯ ಸಂತ್ರಸ್ತೆಯೇ ಆಗಿದ್ದೇನೆ.

*ಕರೋನಾ ವೈರಸ್ ಚೀನಾದಲ್ಲಿ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತಿದೆ ಎಂಬುದು ನಿಮಗೆ ಡಿಸೆಂಬರ್ 31ಕ್ಕೇ ಗೊತ್ತಾಗಿತ್ತು ಎಂದು ಹೇಳಿದ್ದೀರಿ. ಆದರೆ, ಚೀನಾ ಸರ್ಕಾರ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಅದನ್ನು ಖಚಿತಪಡಿಸಿದ್ದು ಜನವರಿ 20ಕ್ಕೆ ಅಲ್ಲವೇ?
ಡಿಸೆಂಬರ್ 31ಕ್ಕೆ ನನ್ನನ್ನು ಹಾಂಗ್‌ಕಾಂಗ್ ವಿಶ್ವವಿದ್ಯಾಲಯದಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆಯ ನೋಂದಾಯಿತ ಪ್ರಯೋಗಾ ಲಯಕ್ಕೆ ಸಂಶೋಧನೆಗೆಂದು ಕಳುಹಿಸಲಾಗಿತ್ತು. ವುಹಾನ್‌ನಲ್ಲಿ ಒಂದು ಬಗೆಯ ವಿಚಿತ್ರ ನ್ಯುಮೋನಿಯಾ ಹರಡುತ್ತಿದೆಯೆಂದೂ, ಅದರ ಬಗ್ಗೆೆ ಹೆಚ್ಚಿನ ಮಾಹಿತಿ ಇಲ್ಲವೆಂದೂ, ನಾನು ಆ ಬಗ್ಗೆ ಸಂಶೋಧನೆ ನಡೆಸಬೇಕೆಂದೂ ನನ್ನ ಮೇಲಧಿಕಾರಿ ಲಿಯೋ ಪೂನ್ ನನ್ನನ್ನು ಅಲ್ಲಿಗೆ ಕಳಿಸಿದ್ದರು. ಅಲ್ಲಿಗೆ ಹೋದ ತಕ್ಷಣ ನನಗೆ ಈ ವೈರಸ್ ಕುರಿತ ಎಲ್ಲ ಮಾಹಿತಿ ವುಹಾನ್‌ನವರಿಗೆ ಮೊದಲೇ ಗೊತ್ತಿದೆ ಎಂಬುದು ತಿಳಿಯಿತು. ಅದಾಗಲೇ 40ಕ್ಕೂ ಹೆಚ್ಚು ಮಂದಿ ಅಲ್ಲಿ ಸೋಂಕಿತರಾಗಿದ್ದರು. ಆದರೂ ಅವರು ಕೇವಲ 27 ಜನರಷ್ಟೇ ಸೋಂಕಿತರಾಗಿದ್ದಾರೆಂದು ಪ್ರಕಟಿಸಿದ್ದರು. ಬ್ರಿಟನ್ನಿನ ದಿ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ಪತ್ರಿಕೆ ಕೂಡ ಡಿಸೆಂಬರ್‌ನಲ್ಲೇ ಈ ವೈರಸ್ ಇತ್ತೆಂದು ವರದಿ ಮಾಡಿದೆ.

ಆದರೆ, ಚೀನಾ ಸರ್ಕಾರ ಜನರ ಬಾಯಿ ಮುಚ್ಚಿಸಲು ತನಗೆ ಬೇಕಾದಂತೆ ವಾದ ಮಂಡಿಸತೊಡಗಿತು. ಚೀನಾದಲ್ಲಿರುವ ಸ್ಥಳೀಯ
ವೈದ್ಯರಿಂದ ಹಿಡಿದು ಚೈನೀಸ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್‌ನ ತಜ್ಞರವರೆಗೆ ಯಾರಿಗೂ ಚೀನಾ ಸರ್ಕಾರದ ಅನುಮತಿಯಿಲ್ಲದೆ ಒಂದೇ ಒಂದು ಮಾತೂ ಆಡದಂತೆ ಆದೇಶ ಬಂತು. ವಾಸ್ತವವಾಗಿ ಏನಾಗುತ್ತಿದೆ ಎಂಬುದೇ ಯಾರಿಗೂ ಗೊತ್ತಿರಲಿಲ್ಲ. ಸತ್ಯವನ್ನು ಮುಚ್ಚಿಡಲು ನಮ್ಮ ಸರಕಾರಕ್ಕೆ ಬೇಕಾದಷ್ಟು ದಾರಿ ಗೊತ್ತಿತ್ತು. ವುಹಾನ್‌ನಲ್ಲಿರುವ ಸಮುದ್ರ ಆಹಾರಗಳ ಮಾರುಕಟ್ಟೆಯೇ ದೊಡ್ಡ ಸಮಸ್ಯೆ, ಅಲ್ಲಿಂದಲೇ ವೈರಸ್ ಹರಡಿದೆ ಎಂಬುದನ್ನು ಎಲ್ಲರೂ ನಂಬುವಂತೆ ಚೀನಾ ಸರ್ಕಾರ ಮಾಡಿತು. ಅದೊಂದು ದೊಡ್ಡ ಸುಳ್ಳು.

*ಹಾಗಿದ್ದರೆ ಹಾಂಗ್‌ಕಾಂಗ್ ಪ್ರಯೋಗಾಲಯದಲ್ಲಿರುವ ಖ್ಯಾತ ವೈರಾಣು ತಜ್ಞ ಮಲಿಕ್ ಪೀರಿಸ್ ಯಾಕೆ ಸುಮ್ಮನಿದ್ದಾರೆ?
ನನಗೆ ಪ್ರೊ.ಪೀರಿಸ್ ಬಹಳ ಮುಂಚಿನಿಂದಲೂ ಪರಿಚಿತರು. ನಾನು 2012ರಲ್ಲಿ ಹಾಂಗ್‌ಕಾಂಗ್ ವಿಶ್ವವಿದ್ಯಾಲಯಕ್ಕೆ ಬಂದೆ. ಅಲ್ಲೇ ನನ್ನ ಪತಿಯ ಪರಿಚಯವಾಯಿತು. ಅವರು ವಿಶ್ವ ಆರೋಗ್ಯ ಸಂಸ್ಥೆಗಾಗಿ ಹೊಸ ರೋಗಗಳ ಬಗ್ಗೆ ಸಂಶೋಧನೆ ನಡೆಸುತ್ತಿದ್ದ ಪೀರಿಸ್ ಅವರ ತಂಡದ ಸದಸ್ಯರಾಗಿದ್ದರು. ಇಬ್ಬರೂ ಶ್ರೀಲಂಕಾದವರು. ನಮಗೆ 10 ವರ್ಷಕ್ಕಿಂತ ಹಿಂದಿ ನಿಂದಲೇ ಪೀರಿಸ್ ಪರಿಚಯವಿತ್ತು. ನನ್ನ ಪಿಎಚ್‌ಡಿ ಮಾರ್ಗದರ್ಶಕರು ಕೂಡ ಪೀರಿಸ್ ಜೊತೆ ಕೆಲಸ ಮಾಡಿದವರೇ. ಹೀಗಾಗಿ ನನ್ನ ಮಾರ್ಗದರ್ಶ ಕರು ಹಾಗೂ ಪತಿಯ ಜೊತೆ ನಾನು ಏನೇನು ಚರ್ಚಿಸಿದ್ದೇನೋ ಅದೆಲ್ಲವೂ ಪೀರಿಸ್‌ಗೆ ಗೊತ್ತಿತ್ತು. ಆದರೂ ಅವರು ಸುಮ್ಮನಿ ದ್ದರು. ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಡಾ.ಟೆಡ್ರೋಸ್ ಅಧನೋಮ್ ಹಾಗೂ ಸಂಸ್ಥೆಯ ಕೋವಿಡ್-19 ವಿಭಾಗದ
ಮುಖ್ಯಸ್ಥೆ ಮರಿಯಾ ವ್ಯಾನ್ ಕರ್ಕೋವ್‌ಗೂ ಪೀರಿಸ್ ಜೊತೆಗೆ ಹತ್ತಿರದ ಸಂಬಂಧವಿದೆ. ಆದರೆ, ಅವರೂ ಏನೂ ಮಾಡಲಿಲ್ಲ. ಅಂದಹಾಗೆ ಪೀರಿಸ್‌ಗೆ ಚೀನಾ ಸರ್ಕಾರದ ಜೊತೆಗೂ ಹತ್ತಿರದ ಸಂಬಂಧವಿದೆ. ಹೀಗಾಗಿ ಚೀನಾ ಸರ್ಕಾರ ಮತ್ತು ವಿಶ್ವ ಆರೋಗ್ಯ ಸಂಸ್ಥೆಗಳು ಎಲ್ಲವನ್ನೂ ಮುಚ್ಚಿಟ್ಟವು.

ನಿಮಗೆ ಅಪಾಯವಿದೆ ಎಂಬುದು ಗೊತ್ತಾಗಿದ್ದು ಯಾವಾಗ? 
ನಾನು ಕೋವಿಡ್-19ನ ರಹಸ್ಯ ಬಯಲಿಗೆಳೆಯಲು ನಿರ್ಧರಿಸಿದ ದಿನದಿಂದಲೇ ನನಗೆ ಅಪಾಯವಿದೆ ಎಂಬುದು ಗೊತ್ತಿತ್ತು.
ಎಲ್ಲವನ್ನೂ ರಹಸ್ಯವಾಗಿಟ್ಟು, ತಾನೇ ಸ್ವಯಂಪ್ರೇರಿತವಾಗಿ ಸಂದೇಶ ಬಿಡುಗಡೆ ಮಾಡುವ ಮೂಲಕ ಲೂಡ್ ನನಗೆ ದೊಡ್ಡ
ಉಪಕಾರ ಮಾಡಿದರು. ಚೀನಾ ಸರ್ಕಾರಕ್ಕೆ ತನ್ನ ಗುರಿಯ ಮೇಲೆ ದಾಳಿ ನಡೆಸಲು ಸಮಯ ಹಿಡಿಯುತ್ತದೆ. ನನ್ನ ಮೇಲೆ ಚೀನಾ
ಸರ್ಕಾರಕ್ಕೆ ಕಣ್ಣಿದೆ, ನನ್ನ ಜೀವ ಅಪಾಯದಲ್ಲಿದೆ ಮತ್ತು ನನ್ನನ್ನು ಅವರು ನಾಪತ್ತೆ ಮಾಡಲು ನಿರ್ಧರಿಸಿದ್ದಾರೆಂದು ಲೂಡ್
ಗೆ ಮಾಹಿತಿ ಬಂದಿತ್ತು. ನಂತರ ರೂಲ್ ಆಫ್ ಲಾ ಫೌಂಡೇಶನ್‌ನ ಅಧಿಕಾರಿಗಳು ಹಾಂಗ್ ಕಾಂಗ್‌ನಿಂದ ಅಮೆರಿಕಕ್ಕೆ ತಪ್ಪಿಸಿ ಕೊಂಡು ಹೋಗಲು ನನಗೆ ಸಹಾಯ ಮಾಡಿದರು.

ಆದರೆ,ಕೋವಿಡ್-19 ವೈರಸ್ ಮಾನವನ ಸೃಷ್ಟಿ ಎಂಬ ನಿಮ್ಮ ವಾದವನ್ನು ಬಹಳಷ್ಟು ಮಂದಿಖ್ಯಾತ ವಿಜ್ಞಾನಿಗಳೇ
ಅಲ್ಲಗಳೆಯುತ್ತಾರಲ್ಲ?
ಕೋವಿಡ್-19 ಪ್ರಯೋಗಾಲಯದಲ್ಲಿ ಹುಟ್ಟಿದ ವೈರಸ್ ಅಲ್ಲ ಎನ್ನುವ ವಿಜ್ಞಾನಿಗಳೆಲ್ಲ ಸುಳ್ಳು ಹೇಳುತ್ತಿದ್ದಾರೆ. ನನ್ನ ಹೇಳಿಕೆಗೆ ನಾನು ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ. ನಾನು ಹೇಳುತ್ತಿರುವುದು ಸುಳ್ಳು ಎನ್ನುವವರು ಬೇಕಾದರೆ ನನ್ನ ವಿರುದ್ಧ
ಕೇಸು ಹಾಕಬಹುದು. ನಾನು ನನ್ನ ಹೆಸರಿನಲ್ಲೇ ಈ ಬಗ್ಗೆ ಪ್ರಬಂಧ ಮಂಡಿಸಿದ್ದೇನೆ. ಆ ಪ್ರಬಂಧ ಪ್ರಕಟವಾಗುವುದಕ್ಕೂ ಮೊದಲೇ ಅಮೆರಿಕದ ಸರ್ಕಾರದಲ್ಲಿರುವ ಹಲವಾರು ದೊಡ್ಡ ದೊಡ್ಡ ವಿಜ್ಞಾನಿಗಳು ಅದನ್ನು ಓದಿದ್ದರು.

ಕೋವಿಡ್-19 ಬಗ್ಗೆ ಎರಡು ಥಿಯರಿಗಳಿವೆ: ನೈಸರ್ಗಿಕ ಸಿದ್ದಾಂತ ಮತ್ತು ಪ್ರಯೋಗಾಲಯ ಸಿದ್ದಾಂತ. ಈ ವೈರಸ್ ನೈಸರ್ಗಿಕ ವಾಗಿ ಹುಟ್ಟಿದೆ ಎಂದು ಹೇಳುವವರೆಲ್ಲ ಅದಕ್ಕೂ ಹಿಂದೆ ಬಾವಲಿಗಳಲ್ಲಿ ಪತ್ತೆಯಾಗಿದ್ದ ರಾಟಿಜಿ13 ಎಂಬ ಕೊರೋನಾ ವೈರಸ್ ಗೆ ಇದನ್ನು ಹೋಲಿಸುತ್ತಾರೆ. ಕೋವಿಡ್-19 ವೈರಸ್‌ನಲ್ಲಿರುವ ಗುಣಲಕ್ಷಣಗಳನ್ನೇ ಈ ವೈರಸ್ ಶೇ.96ರಷ್ಟು ಹೋಲುತ್ತದೆ. ಆದರೆ, ರಾಟಿಜಿ13 ವೈರಸ್ ನಿಸರ್ಗದಲ್ಲಿದೆ ಎಂಬ ವಾದವನ್ನೇ ನಾನು ಪ್ರಶ್ನಿಸುತ್ತೇನೆ.

ಅದಕ್ಕಿಂತ ಹೆಚ್ಚಾಗಿ, ನಾವು ವೈರಸ್‌ಗಳ ರಚನೆಯನ್ನು ಬೇಕಾದ ಹಾಗೆ ತಿದ್ದಬಹುದು ಮತ್ತು ಹೊಸ ಕೊರೋನಾ ವೈರಸ್‌ಗಳನ್ನು
ಸೃಷ್ಟಿಸಬಹುದು. ಕೋವಿಡ್-19 ವೈರಸ್ ಸೃಷ್ಟಿಸುವುದಕ್ಕೂ ಪ್ರಯೋಗಾಲಯಗಳಲ್ಲಿ ಸಾಕಷ್ಟು ದಾರಿಗಳಿವೆ. ಅದಕ್ಕೆ ಸಾಕ್ಷ್ಯ ಈ
ವೈರಸ್ಸಿನ ರಚನೆಯಲ್ಲೇ ಇದೆ. ಈ ವೈರಸ್ ಪ್ರಾಣಿಗಳ ಮೂಲಕ ಮನುಷ್ಯನಿಗೆ ಹರಡುವ ಸಾಧ್ಯತೆ ಇಲ್ಲವೇ ಇಲ್ಲ ಎಂದಲ್ಲ. ಆದರೆ,
ಅದಕ್ಕೆ ಬಹಳ ಬಹಳ ದೀರ್ಘವಾದ ಸಮಯ ಹಿಡಿಯುತ್ತದೆ ಮತ್ತು ಬಾವಲಿಯೊಂದು ಈ ವೈರಸ್ಸಿನ ಸಂಪರ್ಕಕ್ಕೆ ಬರುವ ಮತ್ತು
ಅದರಿಂದ ಸೋಂಕಿತವಾಗುವ ಅಪರೂಪದ ಕಾಕತಾಳೀಯ ವಿದ್ಯಮಾನವೂ ಘಟಿಸಬೇಕಾಗುತ್ತದೆ.

ನಿಸರ್ಗದಲ್ಲಿ ಹುಟ್ಟಿದಂತೆಯೇ ಕಾಣಿಸುವ ಯಾವುದೇ ಸೃಷ್ಟಿಯನ್ನು ಪ್ರಯೋಗಾಲಯದಲ್ಲೂ ಮಾಡಬಹುದು. ಕೋವಿಡ್-19 ವೈರಸ್ 2003ರಲ್ಲಿ ಚೀನಾದ ಮಿಲಿಟರಿ ಪ್ರಯೋಗಾಲಯದಲ್ಲಿ ಪತ್ತೆಯಾದ ಸಾರ್ಸ್ ಕೋವ್ ಬ್ಯಾಟ್ ಕೊರೋನಾ ವೈರಸ್ಸನ್ನು ಹೋಲುತ್ತದೆ. ಆದರೆ, ಮಿಲಿಟರಿ ಪ್ರಯೋಗಾಲಯದಲ್ಲಿ ಪತ್ತೆಯಾದ ಆ ವೈರಸ್ಸೇ ವಂಶವಾಹಿಗಳನ್ನು ಕೃತಕವಾಗಿ ತಿದ್ದಿದ ವೈರಸ್ ಎಂಬುದಕ್ಕೆ ಸಾಕಷ್ಟು ಸಾಕ್ಷ್ಯಗಳಿವೆ. ಅಲ್ಲದೆ, ನಿಸರ್ಗದಲ್ಲಿ ಕಂಡುಬರುವ ಕೊರೋನಾ ವೈರಸ್‌ಗಳಲ್ಲಿ ಇಲ್ಲದ ವಿಶಿಷ್ಟ ನಳ್ಳು ರಚನೆಯೊಂದು ಕೋವಿಡ್-19 ವೈರಸ್ ನಲ್ಲಿದೆ. ಇದನ್ನು ಕೃತಕವಾಗಿ ಸೇರಿಸಿರುವ ಸಾಧ್ಯತೆಗಳಿವೆ. ಅಂದರೆ, ಕೃತಕವಾಗಿ ಒಂದು ವೈರಸ್ಸನ್ನು ಸೃಷ್ಟಿಿಸಲು ಏನೆಲ್ಲ ಮಾಡಬೇಕೋ ಅದೆಲ್ಲವೂ ಕೋವಿಡ್-19 ವೈರಸ್‌ನಲ್ಲಿ ಕಾಣಿಸುತ್ತಿವೆ.

ಕೋವಿಡ್-19 ವೈರಸ್‌ನ ರಚನೆಗೆ ಬ್ಯಾಟ್ ಕೊರೋನಾವೈರಸ್ ಝಡ್‌ಸಿ45 ಹಾಗೂ ಝಡ್‌ಎಕ್ಸ್‌‌ಸಿ21 ಬಹಳ ಹತ್ತಿರದಲ್ಲಿವೆ.
ಇವೆರಡೂ ವೈರಸ್‌ಗಳು ಚೀನಾದ ವೈರಾಲಜಿಸ್ಟ್‌‌ಗಳ ಬಳಿ 2015ರಿಂದಲೇ ಇದ್ದವು. ಕೋವಿಡ್-19 ವೈರಸ್ಸನ್ನು ಝಡ್‌ಸಿ45
ಅಥವಾ ಝಡ್‌ಎಕ್ಸ್‌‌ಸಿ21 ವೈರಸ್ ಬಳಸಿಯೇ ತಯಾರಿಸಿದ್ದಾರಾದರೂ ವಂಶವಾಹಿ ಸಂಬಂಧ ಗೊತ್ತಾಗದಂತೆ ಮಾಡಲು ಅದರಲ್ಲೂ ಸಾಕಷ್ಟು ಬದಲಾವಣೆ ಮಾಡಿರಬಹುದು.

*ನೇಚರ್ ಮೆಡಿಸಿನ್ ಜರ್ನಲ್‌ನಲ್ಲಿ ಪ್ರಕಟವಾಗಿರುವ ‘ಸಾರ್ಸ್ ಕೋವ್2 ವೈರಸ್‌ನ ಉಗಮ’ ಎಂಬ ಲೇಖನದಲ್ಲಿ ಈ ವೈರಸ್ ನೈಸರ್ಗಿಕ ಎಂದೇ ಹೇಳಿದ್ದಾರೆ?

ನಾನೀಗ ಎರಡನೇ ಸಂಶೋಧನಾ ವರದಿ ಸಿದ್ಧಪಡಿಸುತ್ತಿದ್ದೇನೆ. ಆ ವರದಿಯಲ್ಲಿ ಈ ವಿಷಯದ ಬಗ್ಗೆೆ ಮಾಹಿತಿ ನೀಡುತ್ತಿದ್ದೇನೆ. ಚೀನಾ ಸರ್ಕಾರ ಕೇವಲ ಚೀನಾದ ವಿಜ್ಞಾನಿಗಳ ಮೇಲೆ ಮಾತ್ರ ಪ್ರಭಾವ ಬೀರಿಲ್ಲ, ಬದಲಿಗೆ ವಿದೇಶಿ ವಿಜ್ಞಾನಿಗಳನ್ನೂ ಬುಟ್ಟಿಗೆ ಹಾಕಿಕೊಂಡಿದೆ. ಡಾ.ಕೆ.ಜಿ.ಆಂಡರ್ಸನ್ (ನೇಚರ್ ಮೆಡಿಸಿನ್ ಜರ್ನಲ್‌ನ ಮುಖ್ಯಸ್ಥ) ನನ್ನ ಮೇಲೂ ನನ್ನ ವರದಿಯ ಮೇಲೂ ತೀಕ್ಷ್ಣ ವಾಗ್ದಾಳಿ ನಡೆಸಿದ್ದರು. ನನ್ನ ವರದಿಗೆ ತಲೆಬುಡವಿಲ್ಲ, ಕೋವಿಡ್-19 ವೈರಸ್ ಬಗ್ಗೆ ತಮ್ಮ ತಂಡ ನಡೆಸಿದ ವಿಶ್ಲೇಷಣೆಯಲ್ಲಿ ಈ ವೈರಸ್ ಪ್ರಯೋಗಾಲಯದಲ್ಲೂ ಹುಟ್ಟಿಲ್ಲ ಅಥವಾ ಉದ್ದೇಶಪೂರ್ವಕವಾಗಿ ಸೃಷ್ಟಿಯಾಗಿರುವಂಥದ್ದೂ ಅಲ್ಲ ಎಂಬುದು ಸಾಬೀತಾಗಿದೆ ಎಂದು ಹೇಳಿದ್ದರು. ಆದರೆ, ಅವರೆಲ್ಲರೂ ಜನರನ್ನು ದಾರಿತಪ್ಪಿಸಲು ಯತ್ನಿಸುತ್ತಿದ್ದಾರೆ. ಮನುಷ್ಯನ ಮೇಲೆ ದಾಳಿ ನಡೆಸುವ ರೀತಿಯ ಕೊರೋನಾ ವೈರಸ್ ಸೃಷ್ಟಿಸಲು ನಾವು ಬಾವಲಿಯಲ್ಲಿರುವ ಕೊರೋನಾ ವೈರಸ್ಸನ್ನು ಮಾದರಿಯಾಗಿ ಇಟ್ಟುಕೊಳ್ಳಬೇಕಾಗುತ್ತದೆ.

ಕಳೆದ ಎರಡು ದಶಕಗಳಿಂದ ಪ್ರಯೋಗಾಲಯಗಳು ಬಾವಲಿಗಳಿಂದ ಕೊರೋನಾ ವೈರಸ್‌ಗಳನ್ನು ಸಂಗ್ರಹಿಸುತ್ತಲೇ ಬಂದಿದ್ದವು.
ಕೋವಿಡ್-19 ವೈರಸ್‌ನ ಸೃಷ್ಟಿಗೆ ಬಳಕೆಯಾದ ಮಾದರಿ ಝಡ್‌ಸಿ45 ಅಥವಾ ಝಡ್‌ಎಕ್ಸ್‌‌ಸಿ21 ಅಥವಾ ಇದಕ್ಕೆ ಹತ್ತಿರದ
ಸಂಬಂಧಿಯಾಗಿರುವ ಇನ್ನಾವುದಾದರೂ ವೈರಸ್ ಆಗಿರುತ್ತದೆ. ಈ ಮಾದರಿಯ ವೈರಸ್ಸನ್ನು ಮನುಷ್ಯನ ಎಸಿಇ2 ರಿಸೆಪ್ಟರ್ ಜೊತೆಗೆ ಹೊಂದಿಕೊಳ್ಳುವ ಕೊರೋನಾ ವೈರಸ್ ಆಗಿ ಬದಲಾಯಿಸಲು ಮಾಲೆಕ್ಯುಲರ್ ಕ್ಲೋನಿಂಗ್ ಮತ್ತು ರಿವರ್ಸ್ ಜೆನೆಟಿಕ್ಸ್ ಪ್ರಕ್ರಿಯೆ ನಡೆಸಬೇಕಾಗುತ್ತದೆ. ಆಗ ಜೀವಂತವಾದ ಮತ್ತು ಒಬ್ಬರಿಂದ ಒಬ್ಬರಿಗೆ ಹರಡುವ ಕೃತಕ ಜೆನೋಮ್ ಸೃಷ್ಟಿಯಾಗುತ್ತದೆ. ಕೋವಿಡ್-19 ಜೆನೋಮ್ ಝಡ್‌ಸಿ45 ಅಥವಾ ಝಡ್‌ಎಕ್ಸ್‌‌ಸಿ21 ವೈರಸ್‌ನಿಂದಲೇ ಬಂದಿದೆ ಎಂಬುದಕ್ಕೆ ಸಾಕಷ್ಟು ಸಾಕ್ಷ್ಯಗಳಿವೆ. ಮೇಲಾಗಿ, ನೀವು ಹೇಳುತ್ತಿರುವ ಲೇಖನದಲ್ಲಿ ಸಾಕಷ್ಟು ಅನುಮಾನಗಳಿವೆ. ಮುಖ್ಯವಾಗಿ, ಆ ಲೇಖನದಲ್ಲಿ ಕೋವಿಡ್-19 ಜೆನೋಮ್‌ನಲ್ಲಿರುವ ಕೆಲ ವಿಕ್ಷಿಪ್ತ ಗುಣಗಳನ್ನು ಒಪ್ಪಿಕೊಂಡಿದ್ದರೂ ಆ ವೈರಸ್ ಮಾನವಸೃಷ್ಟಿ ಎಂಬ ಸಾಧ್ಯತೆಯನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗಿದೆ.

*ನಿಮ್ಮ ಸಂಶೋಧನೆಯ ಫಲಿತಾಂಶಗಳನ್ನು ಚೀನಾ ಹಾಗೂ ಹಾಂಗ್ ಕಾಂಗ್ ಸರ್ಕಾರಕ್ಕೆೆ ಸಲ್ಲಿಸುವ ಪ್ರಯತ್ನ ಮಾಡಿದ್ದಿರಾ?
ಈ ವೈರಸ್ ಮಾನವ ಸೃಷ್ಟಿ ಎಂಬ ವರದಿಯನ್ನು ನಾನು ಅವರಿಗೆ ಸಲ್ಲಿಸಲಿಲ್ಲ. ಏಕೆಂದರೆ ತಕ್ಷಣ ನನ್ನನ್ನು ಕೊಲ್ಲುತ್ತಾರೆಂಬುದು ನನಗೆ ಗೊತ್ತಿತ್ತು. ಹೀಗಾಗಿ ಈ ವೈರಸ್ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತಿರುವುದನ್ನು ಚೀನಾ ಮತ್ತು ವಿಶ್ವ ಆರೋಗ್ಯ ಸಂಸ್ಥೆ
ಮುಚ್ಚಿಡುತ್ತಿರುವುದನ್ನು ನಾನು ವರದಿ ಮಾಡಿದೆ. ವಾಸ್ತವ ಏನೆಂದರೆ ಡಿಸೆಂಬರ್‌ನಿಂದ ಜನವರಿ 17ರವರೆಗೆ ಈ ವೈರಸ್‌ಗೆ
ಸಂಪರ್ಕ ವೇದಿಕೆ ಎಂಬುದು ಇರಲಿಲ್ಲ. ನಾನದನ್ನು ಹೇಳುತ್ತಲೇ ಬಂದಿದ್ದೇನೆ. ಆದರೆ ಯಾರೂ ಪ್ರತಿಕ್ರಿಯಿಸಿಲ್ಲ. ನನ್ನ ತನಿಖೆ,
ನನಗಿರುವ ಮಾಹಿತಿ ಮೂಲಗಳು ಹಾಗೂ ನನ್ನ ಸಂಶೋಧನೆಗಳೆಲ್ಲ ಈ ವೈರಸ್ ಚೀನಾದ ಮಿಲಿಟರಿಯಿಂದಲೇ ಬಂದಿದೆ ಎಂಬುದನ್ನು ಸಾರಿ ಹೇಳುತ್ತಿವೆ. ಆದರೆ, ನಾನು ಚೀನಾ ಸರ್ಕಾರದ ಮೇಲೆ ವಿಶ್ವಾಸವಿಡಲು ಸಾಧ್ಯವೇ ಇರಲಿಲ್ಲ. ಏಕೆಂದರೆ ಹಾಂಗ್‌ಕಾಂಗ್ ಪ್ರತಿಭಟನೆಯ ವೇಳೆ ಚೀನಾ ಮಾಡಿದ್ದೇನು ಎಂಬುದನ್ನು ನಾನು ನೋಡಿದ್ದೆ. ಹಾಗಾಗಿ ನಾನಿದನ್ನು ನೇರವಾಗಿ ಜಗತ್ತಿಗೇ ಬಹಿರಂಗಪಡಿಸಬೇಕಾಯಿತು.

*ಕೋವಿಡ್-19 ವೈರಸ್ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತಿರುವುದು ಚೀನಾಕ್ಕೆ ಯಾವಾಗ ಗೊತ್ತಾಗಿತ್ತು?
ಮನುಷ್ಯನಿಂದ ಮನುಷ್ಯರಿಗೆ ಈ ವೈರಸ್ ಮೊದಲು ಹರಡಿದ್ದು ಡಿಸೆಂಬರ್‌ನಲ್ಲಿ. ಆಗಲೇ ವುಹಾನ್‌ನ ಪ್ರಯೋಗಾಲಯದಲ್ಲಿ ಈ
ವೈರಸ್ ಸೋಂಕಿತ ವ್ಯಕ್ತಿಯಿಂದ ಮಾದರಿಗಳನ್ನು ಸಂಗ್ರಹಿಸಿ ಕೋವಿಡ್-19 ವೈರಸ್‌ನ ರಚನೆಯನ್ನು ಪತ್ತೆ ಮಾಡಲಾಗಿತ್ತು.
ಆದರೆ, ಜನವರಿ ಮಧ್ಯದಲ್ಲಿ ಇದನ್ನೆಲ್ಲ ಮಾಡಿದ್ದೇವೆಂದು ಅವರು ಸುಳ್ಳು ಹೇಳುತ್ತಿದ್ದಾರೆ. ಡಿಸೆಂಬರ್ ಕೊನೆಯ ವೇಳೆಗೆ ಹೊಸ
ರೀತಿಯ ಅಪಾಯಕಾರಿ ಕೊರೋನಾ ವೈರಸ್ ಒಂದು ಮನುಷ್ಯರಿಂದ ಮನುಷ್ಯರಿಗೆ ಹರಡುತ್ತಿದೆ ಎಂದು ಮೊದಲ ಬಾರಿಗೆ ಹೇಳಿದ ಲಿ ವೆನ್‌ಲಿಯಾಂಗ್ ಸೇರಿದಂತೆ ವುಹಾನ್‌ನಲ್ಲಿರುವ ಎಲ್ಲ ವೈದ್ಯರಿಗೆ ಬಾಯಿಮುಚ್ಚಿಕೊಂಡು ಇರುವಂತೆ ಚೀನಾ
ಸರ್ಕಾರ ಸೂಚಿಸಿತ್ತು. ವೈದ್ಯರೂ ಸೇರಿದಂತೆ ಎಲ್ಲರೂ ಹೆದರಿಕೆಯಿಂದ ಸುಮ್ಮನಿದ್ದರು. ಯಾರಿಗೂ ಮಾತನಾಡಲು ಬಿಡುತ್ತಿರ ಲಿಲ್ಲ.

*ಕೋವಿಡ್-19 ವೈರಸ್ ಬಗ್ಗೆೆ ಜಗತ್ತಿನಾದ್ಯಂತ ನಡೆಯುತ್ತಿರುವ ಪ್ರಯೋಗಗಳ ಮೇಲೆಲ್ಲ ಚೀನಾ ಸರ್ಕಾರ ಪ್ರಭಾವ ಬೀರಲು ಯತ್ನಿಸುತ್ತಿದೆಯೇ?

ಖಂಡಿತ. ಅವರು ಕ್ಲಿನಿಕಲ್ ಸ್ಯಾಂಪಲ್‌‌ಗಳನ್ನೇ ನಿಯಂತ್ರಿಸುತ್ತಾರೆ. ಹಾಂಗ್‌ಕಾಂಗ್‌ನಲ್ಲೂ ಕೂಡ ನಮಗೆ ಸಂಶೋಧನೆ ನಡೆಸಲು
ಕ್ಲಿನಿಕಲ್ ಸ್ಯಾಂಪಲ್‌‌ಗಳೇ ಸಿಗುತ್ತಿರಲಿಲ್ಲ. ಉದಾಹರಣೆಗೆ ನಾನು ವುಹಾನ್‌ನ ಅಕ್ಕಪಕ್ಕದ ಪ್ರದೇಶದಲ್ಲಿ ಆ್ಯಂಟಿಬಾಡಿ ಪ್ರಯೋಗ
ನಡೆಸಬೇಕು ಅಂದರೆ ಅದಕ್ಕೆ ಸರ್ಕಾರ ಅನುಮತಿ ನೀಡುತ್ತಿರಲಿಲ್ಲ. ಚೀನಾದಲ್ಲಿ ನಾವು ಕೊರೋನಾಲಕ್ಷಣ ಇಲ್ಲದವರ ಬಗ್ಗೆ ಅಧ್ಯಯನ ನಡೆಸಲು ಮುಂದಾದಾಗ ಚೀನಾ ಸರ್ಕಾರದ ಗಾಂಗ್‌ಝೌ ಕಾರ್ಯದರ್ಶಿ ಹಾಗೂ ಗಾಂಗ್‌ಝೌ ಸಿ.ಡಿ.ಸಿ. ಮುಖ್ಯಸ್ಥರು ಸ್ಯಾಂಪಲ್‌‌ಗಳನ್ನೇ ಬೇರೆ ಕಡೆಗೆ ಸಾಗಿಸಿಬಿಟ್ಟರು. ವುಹಾನ್‌ನಲ್ಲಿ ಸರ್ಕಾರ 33 ಪಾರಿಸರಿಕ ಸ್ಯಾಂಪಲ್‌ಗಳನ್ನು ಸಂಗ್ರಹಿಸಿತ್ತು. ಆದರೆ, ಹೊರಗಿನ ಯಾವೊಬ್ಬ ತಜ್ಞರಿಗೂ ಅದನ್ನು ನೋಡಲು ಬಿಡಲಿಲ್ಲ.

*ನಿಮಗೆ ವಿವಾದಿತ ಉದ್ಯಮಿ ಗೌ ವೆಂಗ್‌ಯಿ ಜೊತೆ ಸಂಬಂಧವಿದೆ. ಅವರ ಮೂಲಕ ಶ್ವೇತಭವನದ ಮಾಜಿ ವ್ಯೂಹಾತ್ಮಕ ಅಧಿಕಾರಿ ಸ್ಟೀವ್ ಬ್ಯಾನನ್ ಜೊತೆಗೂ ಸಂಪರ್ಕವಿದೆ ಅಲ್ಲವೇ?

ಹಾಂಗ್‌ಕಾಂಗನ್ನು ತೊರೆಯಲು ನಿರ್ಧರಿಸಿದ ದಿನದಿಂದ ನಾನು ಕೇವಲ ಲೂಡ್ ಜೊತೆಗೆ ಮಾತ್ರ ಸಂಪರ್ಕದಲ್ಲಿದ್ದೆ. ಗೌ ವೆಂಗ್‌ ಯಿ ಸ್ಥಾಪಿಸಿದ ರೂಲ್ ಆಫ್ ಲಾ ಪ್ರತಿಷ್ಠಾನದ ಜೊತೆಗೆ ನನಗೆ ಸಂಪರ್ಕ ದೊರಕಿಸಿಕೊಟ್ಟಿದ್ದು ಕೂಡ ಲೂಡ್ ಅವರೇ. ಚೀನಾ ಸರ್ಕಾರ ಎಸಗುವ ತಪ್ಪುಗಳನ್ನು ರೂಲ್ ಆಫ್ ಲಾ ಸಂಸ್ಥೆ ಬಯಲಿಗೆಳೆಯುತ್ತದೆ. ನನಗೂ ಕೂಡ ಸತ್ಯ ಹೇಳಲು ಅವರೇ ನೆರವು ನೀಡಿದರು. ನನಗೆ ಅವರು ನೀಡಿದ ಬೆಂಬಲವನ್ನು ಯಾವತ್ತೂ ನಾನು ಅಲ್ಲಗಳೆಯುವುದಿಲ್ಲ.

*ನೀವೊಬ್ಬ ಪೋಸ್ಟ್‌‌ ಡಾಕ್ಟೋರಲ್ ಸಂಶೋಧಕಿ. ಆದರೆ, ನಿಮ್ಮ ವಿವಾದಾತ್ಮಕ ಪ್ರಬಂಧವನ್ನು ನಿಮ್ಮ ಸಮಕಾಲೀ ನರು ನೋಡಿ ಪ್ರಮಾಣೀಕರಿಸುವುದರೊಳಗೇ ಅದನ್ನು ಮುಕ್ತ ವೆಬ್ ಸೈಟ್‌ನಲ್ಲಿ ಪ್ರಕಟಿಸಿದಿರಿ ಏಕೆ?

ಸಮಕಾಲೀನ ಸಂಶೋಧಕರು ಪ್ರಬಂಧವನ್ನು ಓದಬೇಕು ಎಂಬುದರ ಅರ್ಥ ಅದರಲ್ಲೇನೋ ತಪ್ಪಿದೆ ಎಂದಲ್ಲ. ಅಥವಾ, ಹಾಗೆ ಓದಿದ್ದಾರೆ ಎಂದಾದರೆ ಮಾತ್ರ ಅದು ಉತ್ತಮ ಪ್ರಬಂಧ ಎಂದೂ ಅರ್ಥವಲ್ಲ. ನೇಚರ್ ಹಾಗೂ ದಿ ನ್ಯೂ ಇಂಗ್ಲೆೆಂಡ್ ಜರ್ನಲ್ ಆಫ್ ಮೆಡಿಸಿನ್ ಸೇರಿದಂತೆ ಸಾಕಷ್ಟು ಜರ್ನಲ್‌ಗಳಲ್ಲಿ ಪ್ರಕಟವಾದ ಸೋಕಾಲ್ಡ್ ಸಮಕಾಲೀನ ಸಂಶೋಧಕರಿಂದ ಪರಾಮರ್ಶೆ ಗೊಳಗಾದ ಅನೇಕ ಸಂಶೋಧನಾ ಪ್ರಬಂಧಗಳಲ್ಲಿ ಬೇಕಾದಷ್ಟು ನಕಲಿ ದತ್ತಾಂಶಗಳು ಅಥವಾ ತಪ್ಪು ಮಾಹಿತಿಗಳಿರುವುದು
ಪತ್ತೆಯಾದ ನಿದರ್ಶನಗಳಿವೆ. ಜೊತೆಗೆ, ಈ ಜರ್ನಲ್‌ಗಳಲ್ಲಿ ಸಮಕಾಲೀನ ವಿಮರ್ಶೆಗೆ ಬೇಕಾದ ತಜ್ಞರ ಸಣ್ಣ ತಂಡ ಮಾತ್ರ
ಇದೆ. ಆದರೆ, ನನ್ನ ಪ್ರಬಂಧ ತುರ್ತಾಗಿ ಪ್ರಕಟವಾಗಬೇಕಿತ್ತು. ಏಕೆಂದರೆ ಮಹಾಮಾರಿ ನಮ್ಮ ತಲೆಯ ಮೇಲೇ ಬಂದು ಕುಳಿತಿತ್ತು. ನಾವು ಬಹಳ ಬೇಗ ಅದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕಿತ್ತು. ಎಲ್ಲಕ್ಕಿಂತ ಹೆಚ್ಚಾಗಿ, ನನಗೆ ಜರ್ನಲ್ನ ವಿಶ್ವಾಸಾರ್ಹತೆ ಮುಖ್ಯವಾಗಿರಲಿಲ್ಲ. ಅದೇ ವೇಳೆ ಚೀನಾ ಸರ್ಕಾರ ನನ್ನ ಕತ್ತು ಹಿಸುಕಲು ಪ್ರಯತ್ನಿಸುತ್ತಲೇ ಇತ್ತು. ಹಾಗಾಗಿ ಸಮಕಾಲೀನ ವಿಮರ್ಶಕರಿರುವ ಯಾವುದೇ ಜರ್ನಲ್‌ಗಳ ಬಳಿಗೆ ಹೋಗದಿರಲು ನಾನು ನಿರ್ಧರಿಸಿದೆ.

*ನಿಮ್ಮ ಬಗ್ಗೆ ಟೀಕಿಸುತ್ತಿರುವ ಯಾವೊಬ್ಬ ಪ್ರಮುಖ ವೈರಾಲಜಿಸ್ಟ್ ಬಳಿಯೂ ಚರ್ಚೆಗೆ ನೀವೇಕೆ ಸಿದ್ಧರಿಲ್ಲ?
ಅವಕಾಶ ಸಿಕ್ಕಾಗಲೆಲ್ಲ ನಾನು ಅವರ ಜೊತೆಗೆ ಚರ್ಚೆ ನಡೆಸಿದ್ದೇನೆ. ಆದರೆ, ಬಹುತೇಕ ಮಾಧ್ಯಮಗಳಿಗೆ ನನ್ನ ಬಗ್ಗೆ ಒಳ್ಳೆಯ ಸುದ್ದಿ ಪ್ರಕಟಿಸುವುದು ಅಥವಾ ನನ್ನೊಂದಿಗೆ ವಸ್ತುನಿಷ್ಠವಾಗಿ ನಡೆದುಕೊಳ್ಳುವುದು ಬೇಕಿಲ್ಲ. ಜೊತೆಗೆ, ನಾನೀಗ ಮುಂದಿನ
ಸಂಶೋಧನಾ ಪ್ರಬಂಧದ ಮೇಲೆ ಕೆಲಸ ಮಾಡುವುದರಲ್ಲಿ ಬ್ಯುಸಿಯಾಗಿದ್ದೇನೆ. ಅದು ಹೊರಗೆ ಬಂದ ಮೇಲೆ ಪ್ರಸಿದ್ಧ
ಸಂಶೋಧಕರ ಸುಳ್ಳುಗಳೆಲ್ಲ ಬಯಲಾಗಲಿವೆ.

*ಗ್ಲಾಸ್ಗೋ ವಿಶ್ವವಿದ್ಯಾಲಯದ ವೈರಾಣು ತಜ್ಞ ಡೇವಿಡ್ ರಾಬರ್ಟ್ಸನ್ ಅವರುಕೋವಿಡ್-19 ವೈರಸ್ ಮತ್ತು ಅದರ ಸಮೀಪದ ಪೂರ್ವಜರಾದ ರಾಟಿಜಿ13 ವೈರಸ್ ದಶಕಗಳಿಂದ ಬಾವಲಿಗಳಲ್ಲಿ ಇದ್ದವು ಎಂದು ತೋರಿಸಿ ಕೊಟ್ಟಿದ್ದಾ ರಲ್ಲ?

ನನ್ನ ಎರಡನೇ ಸಂಶೋಧನಾ ಪ್ರಬಂಧದಲ್ಲಿ ರಾಟಿಜಿ13 ವೈರಸ್ಸೇ ತಿರುಚಿತ ವೈರಸ್ ಎಂಬುದನ್ನು ನಾನು ಸಾಬೀತುಪಡಿಸಿ
ತೋರಿಸಿದ್ದೇನೆ. ನನ್ನ ಪ್ರಕಾರ ಈ ವೈರಸ್ ಯಾವತ್ತೂ ಅಸ್ತಿತ್ವದಲ್ಲಿ ಇರಲೇ ಇಲ್ಲ. ಕೋವಿಡ್-19 ವೈರಸ್ ನಿಸರ್ಗಸಹಜವಾಗಿ
ಹುಟ್ಟಿದೆ ಎಂದು ಹೇಳುವವರೆಲ್ಲ ರಾಟಿಜಿ13 ವೈರಸ್ ಬಗ್ಗೆ ಹೇಳುತ್ತಾ ವೈಜ್ಞಾನಿಕ ಸಮುದಾಯ ಮತ್ತು ಜನಸಾಮಾನ್ಯರ
ಗಮನವನ್ನು ಝಡ್‌ಸಿ45 ಹಾಗೂ ಝಡ್‌ಎಕ್ಸ್‌‌ಸಿ21 ವೈರಸ್‌ನಿಂದ ಬೇರೆಡೆಗೆ ಸೆಳೆಯುತ್ತಿದ್ದಾರೆ.

*ನಿಮ್ಮ ಮುಂದಿನ ದಾರಿಯೇನು?
ನಾನೀಗ ಅಮೆರಿಕದಲ್ಲಿದ್ದೇನೆ. ನನ್ನ ಎರಡನೇ ಸಂಶೋಧನಾ ಪ್ರಬಂಧದ ಮೇಲೆ ಕೆಲಸ ಮಾಡುತ್ತಿದ್ದೇನೆ. ಕೋವಿಡ್-19 ವೈರಸ್
ನೈಸರ್ಗಿಕವಾಗಿ ಹುಟ್ಟಿದೆ ಎಂಬ ಸಿದ್ದಾಂತದ ಸುತ್ತ ಹರಡಿರುವ ಸುಳ್ಳುಗಳನ್ನು ಬೆಳಕಿಗೆ ತರುವುದು ನನ್ನ ಮೊದಲ ಆದ್ಯತೆ.

*ಡೊನಾಲ್ಡ್‌ ಟ್ರಂಪ್ ಸರ್ಕಾರ ವಿಶ್ವ ಆರೋಗ್ಯ ಸಂಸ್ಥೆಗೆ ನೀಡುತ್ತಿದ್ದ ಅನುದಾನವನ್ನೇ ನಿಲ್ಲಿಸಿದೆ?
ಅದು ಸರಿಯಾದ ನಿರ್ಧಾರ. ವಿಶ್ವ ಆರೋಗ್ಯ ಸಂಸ್ಥೆ ತಪ್ಪು ಮತ್ತು ಸುಳ್ಳು ಮಾಹಿತಿಗಳನ್ನು ಜಗತ್ತಿಗೆ ನೀಡಿದೆ. ಒಮ್ಮೆಯಂತೂ ಜನರು ಮಾಸ್ಕ್‌ ಕೂಡ ಧರಿಸಬೇಕಿಲ್ಲ ಎಂದು ಹೇಳಿತ್ತು. ಅದರ ಅಧಿಕಾರಿಗಳು ಚೀನಾಕ್ಕೆ ಹಲವು ಬಾರಿ ಹೋಗಿ ಬಂದಿದ್ದಾರೆ. ಆದರೆ ಅವರ್ಯಾರೂ ಸರಿಯಾದ ಆಸ್ಪತ್ರೆ ಹಾಗೂ ಕೇಂದ್ರಗಳಿಗೆ ತೆರಳಿ ಮಾಹಿತಿ ಸಂಗ್ರಹಿಸಿಲ್ಲ. ನಮಗೆ ಎಲ್ಲಿಯವರೆಗೆ ಸತ್ಯ
ಸಿಗುವುದಿಲ್ಲವೋ ಅಲ್ಲಿಯವರೆಗೆ ಪರಿಹಾರವೂ ಸಿಗುವುದಿಲ್ಲ.

*ನಿಮ್ಮ ಸಂಶೋಧನೆಯೇ ರಾಜಕೀಯ ಪ್ರೇರಿತವಾದದ್ದು ಎಂಬ ಆರೋಪವಿದೆಯಲ್ಲ?
ಇದಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ. ಇದು ಸತ್ಯಕ್ಕೆ ಸಂಬಂಧಿಸಿದ ಸಂಗತಿ. ನಾನೀಗ ಸತ್ಯ ಹೇಳದಿದ್ದರೆ ಯಾವತ್ತೂ ಇದನ್ನು ಹೇಳಲು ಆಗುವುದಿಲ್ಲ.

*ಚೀನಾ ಸರ್ಕಾರದ ಜೊತೆಗೆ ಹಿಂದೆ ಯಾವುದಾದರೂ ಘರ್ಷಣೆಯಲ್ಲಿ ಭಾಗಿಯಾಗಿದ್ದಿರಾ?
ಯಾವತ್ತೂ ಇಲ್ಲ. ನಾನೊಬ್ಬ ಗೌರವಾನ್ವಿತ ಹಾಗೂ ಪ್ರಶಸ್ತಿ ಪುರಸ್ಕೃತ ಸಂಶೋಧಕಿ. ಇದಕ್ಕೂ ಮುನ್ನ ನನ್ನ ಹಾಗೂ ಚೀನಾ ಸರ್ಕಾರದ ಸಂಬಂಧ ಚೆನ್ನಾಗಿಯೇ ಇತ್ತು. ನನ್ನ ಮೇಲಧಿಕಾರಿಗಳು ಹಾಗೂ ಸಮಕಾಲೀನರ ಜೊತೆಗೂ ಎಲ್ಲವೂ ಚೆನ್ನಾಗಿತ್ತು.
ಚೀನಾದಲ್ಲಿರುವುದು ಸರ್ವಾಧಿಕಾರಿ ಆಡಳಿತ. ಆದರೂ ನಾವದಕ್ಕೆ ಹೊಂದಿಕೊಂಡಿದ್ದೆವು. ನನಗೆ ನನ್ನ ಕೆಲಸದ ಬಗ್ಗೆ ಖುಷಿಯಿತ್ತು.

*ಜಗತ್ತಿನ ವೈಜ್ಞಾನಿಕ ಸಮುದಾಯ ನಿಮ್ಮ ವಿರುದ್ಧ ಕೆಲಸ ಮಾಡುತ್ತಿದೆ ಅನ್ನಿಸುತ್ತಿದೆಯಾ?
ಹೌದು, ಅವರು ನನ್ನನ್ನು ಗುರಿಯಾಗಿಸಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಸರ್ಕಾರವೇ ನನ್ನನ್ನು ಯಾವುದೇ ಕ್ಷಣದಲ್ಲಿ ಕೊಲ್ಲಬಹುದು. ಆದರೂ ನಾನು ಹೆಚ್ಚೆಚ್ಚು ಜನರು ಕೋವಿಡ್-19 ವೈರಸ್‌ನ ಉಗಮದ ಬಗ್ಗೆೆ ಮಾತನಾಡಬೇಕು, ಅದರ ಹಿಂದಿನ ಸತ್ಯ ಹೊರಬರಬೇಕು ಎಂದು ಬಯಸುತ್ತೇನೆ. ಇದರಲ್ಲಿ ನನ್ನ ಕುರಿತಾದದ್ದೇನೂ ಇಲ್ಲ. ಇದು ಸತ್ಯಕ್ಕೆ ಸಂಬಂಧಿಸಿದ್ದು.

ನೀವು ಕೋವಿಡ್-19 ಮನುಷ್ಯರಿಂದ ಮನುಷ್ಯರಿಗೆ ಹರಡುವ ಬಗ್ಗೆೆ ಸಂಶೋಧನೆಯನ್ನೇ ನಡೆಸಿಲ್ಲ ಎಂದು ಹಾಂಗ್‌ಕಾಂಗ್ ವಿಶ್ವವಿದ್ಯಾಲಯ ಹೇಳುತ್ತಿದೆಯಲ್ಲ?
ನಾನು ಚೀನಾದಲ್ಲಿ ಪಿಎಚ್‌ಡಿ ಮಾಡಿದ ಮೇಲೆ ಪೀರಿಸ್ ಅವರು ನನಗೆ ಹಾಂಗ್‌ಕಾಂಗ್ ವಿಶ್ವವಿದ್ಯಾಲಯದಲ್ಲಿರುವ ಪಬ್ಲಿಕ್ ಹೆಲ್ತ್‌ ಸ್ಕೂಲ್ಗೆ ಹೋಗಿ ಲಿಯೋ ಪೂನ್ ಜೊತೆ ಕೆಲಸ ಮಾಡಲು ಹೇಳಿದ್ದರು. ನಾನದನ್ನು ಸವಾಲಾಗಿ ಸ್ವೀಕರಿಸಿದೆ. ಏಕೆಂದರೆ ಅದು ಅತ್ಯುನ್ನತ ಮಟ್ಟದ ಕೊರೋನಾ ವೈರಸ್ ಪ್ರಯೋಗಾಲಯವಾಗಿತ್ತು. ಅಲ್ಲಿ ನಾನು ವೈರಾಲಜಿ, ಇಮ್ಯುನಾಲಜಿ ಹಾಗೂ ಲಸಿಕೆ ಅಭಿವೃದ್ಧಿ ವಿಭಾಗದಲ್ಲಿ ಕೆಲಸ ಮಾಡಿದೆ. ನಾನು ಕಂಡುಹಿಡಿದ ಇನ್‌ಫ್ಲುಯೆಂಜಾ ಲಸಿಕೆಗೆ ಪೇಟೆಂಟ್ ಲಭಿಸಿದೆ. ಪ್ರಸಿದ್ಧ ಜಾಗತಿಕ ಸಮಾವೇಶಗಳಲ್ಲಿ ನಾನು ಪ್ರಬಂಧಗಳನ್ನು ಮಂಡಿಸಿದ್ದೇನೆ. ಹಾಂಗ್‌ಕಾಂಗ್ ವಿಶ್ವವಿದ್ಯಾಲಯವನ್ನು ತೊರೆಯುವು ದಕ್ಕೂ ಮುನ್ನ ನಾನು ಕೋವಿಡ್-19 ವೈರಸ್ ಸೇರಿದಂತೆ ಹಲವು ಮುಖ್ಯ ಯೋಜನೆಗಳನ್ನು ಆರಂಭಿಸಿದ್ದೆ. ಕೋವಿಡ್-19 ಹ್ಯಾಮ್‌ಸ್ಟರ್‌ಗಳ ಬಗ್ಗೆೆ ನಾನು ನಡೆಸಿದ ಸಂಶೋಧನೆಯನ್ನು ಜಾಗತಿಕ ಮಟ್ಟದ ವಿಜ್ಞಾನಿಗಳು ಅದ್ಭುತವಾಗಿದೆ ಎಂದು ಹೊಗಳಿದ್ದಾರೆ. ದಿ ಲ್ಯಾನ್ಸೆಟ್ ಜರ್ನಲ್‌ನಲ್ಲಿ ಸಾಂಕ್ರಾಮಿಕ ರೋಗಗಳ ಬಗ್ಗೆ ನಾನು ಪ್ರಕಟಿಸಿದ ಸಂಶೋಧನಾ ಪ್ರಬಂಧವನ್ನು ಕೇವಲ ಒಂದು ತಿಂಗಳಲ್ಲೇ 300ಕ್ಕೂ ಹೆಚ್ಚು ಬಾರಿ ಬೇರೆ ಬೇರೆ ಕಡೆ ಉಲ್ಲೇಖಿಸಲಾಗಿದೆ. ಹಾಂಗ್ ಕಾಂಗ್ ವಿಶ್ವವಿದ್ಯಾಲಯದಿಂದ ನನ್ನ ವಿರುದ್ಧ ಹೇಳಿಕೆ ಪ್ರಕಟವಾಗಿದ್ದು ನಾನು ಜುಲೈನಲ್ಲಿ ಫಾಕ್ಸ್‌ ನ್ಯೂಸ್ ಸ್ಟುಡಿಯೋಗೆ ಕಾಲಿಟ್ಟ ನಂತರ. ಇಂದಿಗೂ ನನ್ನ ಹಾಗೂ ನನ್ನ ಕುಟುಂಬಕ್ಕೆ ಚೀನಾದ ಸರ್ಕಾರ ಬೆದರಿಕೆಯಿದೆ. ಅವರು ನನ್ನ ಮನೆಯನ್ನು ಧ್ವಂಸಗೊಳಿಸಲು ಯತ್ನಿಸಿದ್ದರು.
ಹಾಂಗ್‌ಕಾಂಗ್ ವಿಶ್ವವಿದ್ಯಾಲಯದ ಕುಲಪತಿಗಳು ನನ್ನ ಬಗ್ಗೆ ಮಾಹಿತಿ ಶೋಧಿಸುವುದಕ್ಕೆೆಂದೇ ಹಲವರನ್ನು ನೇಮಕ ಮಾಡಿಕೊಂಡಿದ್ದಾರೆ. ಅವರು ನನ್ನ ಸ್ನೇಹಿತರನ್ನೆಲ್ಲ ಸಂಪರ್ಕಿಸಿದ್ದಾರೆ. ನನ್ನ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸುವುದಕ್ಕೂ ಅವರು ಯತ್ನಿಸಿದ್ದರು. ಜುಲೈ ನಂತರ ನನ್ನ ಕುಟುಂಬ ಹಾಗೂ ಸ್ನೇಹಿತರ ಜೊತೆಗಿನ ಎಲ್ಲಾ ಸಂಪರ್ಕಗಳನ್ನೂ ಕಡಿತಗೊಳಿಸಿ ದ್ದೇನೆ. ಈಗ ನಾನೇನು ಮಾಡುತ್ತಿದ್ದೇನೆ ಎಂಬ ಬಗ್ಗೆ ಅವರಿಗೇನೂ ಗೊತ್ತಿಲ್ಲ. ನನ್ನ ಪರವಾಗಿ ಯಾರೂ ನಿಲ್ಲಲಿಲ್ಲ. ನಾನು ಹಾಂಗ್‌ಕಾಂಗ್‌ನಿಂದ ತಪ್ಪಿಸಿಕೊಂಡು ಓಡಿಬಂದ ತಕ್ಷಣ ಪೀರಿಸ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ವಿಶ್ವವಿದ್ಯಾಲಯ ತನ್ನ ವೆಬ್‌ಸೈಟ್‌ನಲ್ಲಿ ನನ್ನ ಬಗ್ಗೆ ಇದ್ದ ಮಾಹಿತಿಗಳನ್ನೆಲ್ಲ ಡಿಲೀಟ್ ಮಾಡಿತು. ನನ್ನ ಮಾತುಗಳಿಗೆ ವೈಜ್ಞಾನಿಕ ಆಧಾರಗಳಿಲ್ಲ ಎಂದು ಹೇಳಿಕೆಯನ್ನೂ ಬಿಡುಗಡೆ ಮಾಡಿತು. ಆದರೆ, ಲಿಯೋ ಪೂನ್ ನನ್ನ ವಿರುದ್ಧ ಸಾರ್ವಜನಿಕವಾಗಿ ಯಾವತ್ತೂ ಮಾತನಾಡಲಿಲ್ಲ. ಏಕೆಂದರೆ ನನ್ನ ಬಳಿ ಸಾಕ್ಷ್ಯಗಳಿರುವುದು ಅವರಿಗೆ ಗೊತ್ತಿದೆ.

ಈಗ ನೀವು ಭಯದಲ್ಲಿ ಬದುಕುತ್ತಿದ್ದೀರಾ?
ಇಲ್ಲ. ಚೀನಾದ ಕಮ್ಯುನಿಸ್ಟ್ ಪಾರ್ಟಿ ಮತ್ತು ಚೀನಾ ಸರ್ಕಾರ ನನ್ನ ಮೇಲೆ ಗುರಿಯಿಟ್ಟಿವೆ ಎಂಬುದು ನನಗೆ ಗೊತ್ತು. ನಾನು
ಹೋದಲ್ಲಿ ಬಂದಲ್ಲಿ ನನ್ನನ್ನು ಫಾಲೋವ್ ಮಾಡುತ್ತಿ೦ದ್ದಾರೆ. ನಾನು ಅಮೆರಿಕಕ್ಕೆ ಬಂದ ಹೊಸತರಲ್ಲಿ ನ್ಯೂಯಾರ್ಕ್‌ನಲ್ಲಿ
ವಾಸಿಸುತ್ತಿದ್ದ ಅಪಾರ್ಟ್‌ಮೆಂಟ್ ಕೂಡ ಅವರಿಗೆ ಗೊತ್ತಿತ್ತು. ಹೀಗಾಗಿ ತಕ್ಷಣ ಅಪಾರ್ಟ್‌ಮೆಂಟ್ ಬದಲಿಸಿದೆ. ಆದರೆ, ಇಲ್ಲಿಯವರೆ ಗಂತೂ ನನಗೆ ರಕ್ಷಣೆಯಿದೆ. ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾಕ್ಕೆ ನನ್ನ ವಿರುದ್ಧ ಗೆಲ್ಲಲು ಸಾಧ್ಯವೆಂದು ನನಗನ್ನಿಸುವುದಿಲ್ಲ.