Wednesday, 11th December 2024

ಕರೋನಾ ವೈರಸ್‌ ರಾಜಕೀಯ

ಅವಲೋಕನ

ಪ್ರಕಾಶ್ ಶೇಷರಾಘವಾಚಾರ್‌

svgstat61@gmail.com

ದೇಶ ಕೋವಿಡ್ ಸಂಕಷ್ಟ ಎದುರಿಸುತ್ತಿದ್ದಂತೆಯೇ ಇಲ್ಲ ಮತ್ತೊಂದು ಚುನಾವಣೆಯ ಪ್ರಚಾರ ನಡೆಯುತ್ತಿರುವುದಾ? ಸೋಂಕಿನ ವಿರುದ್ಧದ ಹೋರಾಟದ ಈ ವಿಷಮ ಪರಿಸ್ಥಿತಿಯಲ್ಲಿ ಮೋದಿ ವಿರೋಧಿಗಳು ಮತ್ತು ಕಾಂಗ್ರೆಸ್ ನಾಯಕರುಗಳು ಪ್ರತಿಯೊಂದು ವಿಚಾರ ದಲ್ಲಿಯೂ ಅಡ್ಡಗಾಲು ಹಾಕುವ ಮನಸ್ಥಿತಿ ಈ ಪ್ರಶ್ನೆಯನ್ನು ಕೇಳುವಂತಾಗಿದೆ.

ಕೇಂದ್ರ ಸರಕಾರ ಸೋಂಕು ನಿಯಂತ್ರಿಸಿಲು ಕೈಗೊಳ್ಳುತ್ತಿರುವ ಪ್ರತಿಯೊಂದು ನಿರ್ಧಾರಗಳನ್ನು ತಮ್ಮ ಮೂಗಿನ ನೇರಕ್ಕೆ ವಾಖ್ಯಾನ ಮಾಡಿ ರಾಜಕೀಯಕರಣಗೊಳಿಸುವುದೇ ಮುಖ್ಯವಾಗಿದೆ. ಮೋದಿಯವರನ್ನು ಸದಾ ಹಳಿಯುವ ತಂಡಕ್ಕೆ ಕೋವಿಡ್ ಸಂಕಷ್ಟವಾಗಲೀ ಜನರ ಆರೋಗ್ಯ ಮತ್ತು ಪ್ರಾಣ ರಕ್ಷಣೆಯ ಬಗ್ಗೆ ಕನಿಷ್ಠ ಕಾಳಜಿಯಾಗಲೀ ಇದ್ದಂತೆ ಕಾಣುತ್ತಿಲ್ಲ. ವಿಶ್ವದೆಲ್ಲೆಡೆ ಕರೋನಾ ಸೊಂಕಿನಿಂದ ನಾಗರಿಕರು ತತ್ತರಿಸಿದ್ದಾರೆ.

ಈಗಾಗಲೇ 18.8 ಲಕ್ಷ ಜನ ಮರಣವನ್ನಪ್ಪಿದ್ದಾರೆ. 8 ಕೋಟಿಗೂ ಹೆಚ್ಚು ಜನ ಕರೋನಾ ಸೋಂಕಿನಿಂದ ಬಳಲಿದ್ದಾರೆ. ಭಾರತದಲ್ಲಿ ಸೋಂಕಿತರ ಸಂಖ್ಯೆ ಒಂದು ಕೋಟಿ ದಾಟಿದೆ ಮತ್ತು 1.5 ಲಕ್ಷ ಜನ ಮೃತಪಟ್ಟಿದ್ದಾರೆ. ಅಂಕಿ ಅಂಶಗಳು ಪರಿಸ್ಥಿತಿಯ ಭೀಕರತೆಗೆ ಕನ್ನಡಿ ಹಿಡಿಯುತ್ತದೆ. ವಿರೋಧ ಪಕ್ಷಗಳು ರಾಜಕೀಯ ಮರೆತು ಸವಾಲಿನ ಈ ಸಂಕಷ್ಟದ ಸಮಯದಲ್ಲಿ ಪರ ವಿರೋಧ ಎಂಬ ಮಾನಸಿಕತೆಯನ್ನು ಬದಿಗಿಟ್ಟು ಸೋಂಕಿನ ವಿರುದ್ಧದ ಸಮರದಲ್ಲಿ ರಚನಾತ್ಮಕ ಸಲಹೆ ನೀಡಿ ಜನರ ಜತೆ ನಾವು ಇದ್ದೇವೆ ಎಂಬ ಸಂದೇಶ ಕಳುಹಿಸಬೇಕಿತ್ತು.

ಆದರೆ ಹೆಜ್ಚೆ ಹೆಜ್ಚೆಗೂ ತಪ್ಪು ಹುಡುಕಿ ಸರಕಾರದ ಕ್ರಮಗಳನ್ನು ವಿಫಲಗೊಳಿಸುವ ಪ್ರಯತ್ನದಲ್ಲೇ ಧನ್ಯತೆಯನ್ನು  ಕಾಣು ತ್ತಿದ್ದಾರೆ. ತಮ್ಮ ಪ್ರಾಣವನ್ನು ಪಣವಾಗಿಟ್ಟು ಕರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಕರೋನಾ ಯೋಧರಿಗೆ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿ ಎಂದರೆ ಲೇವಡಿ ಮಾಡಿದರು. ದೀಪ ಬೆಳಗಿ ಕರೋನಾ ವಾರಿಯರ್ಸ್‌ಗೆ ಗೌರವ ಸಲ್ಲಿಸಿ ಎಂದರೆ ಅದರಿಂದ ಕರೋನಾ ಸುಟ್ಟು ಹೋಗುವುದಾ ಎಂದು ವ್ಯಂಗ್ಯ ಮಾಡಿದರು.

ಆರೋಗ್ಯ ಸೇತು ಆಪ್ ಬಳಸಿ ಎಂದರೆ ಡೇಟಾ ಸೋರಿಕೆಗೆ ದಾರಿಯಾಗಿದೆ ಎಂದು ಆಧಾರರಹಿತ ಆರೋಪ ಮಾಡಿದರು. ಆದರೆ ಇಲ್ಲಿಯ ತನಕ 14 ಕೋಟಿ ಜನ ಇದನ್ನು ಡೌನ್‌ಲೋಡ್ ಮಾಡಿಕೊಂಡು ವಿಶ್ವದಲ್ಲೇ ಅತಿ ಹೆಚ್ಚು ಬಳಕೆಯಾಗಿ ದಾಖಲೆ
ಸೃಷ್ಟಿಸಿದೆ. ಕೋವಿಡ್ – 19 ವಿರುದ್ಧ ಹೋರಾಡಲು ಉದಾರವಾಗಿ ಪಿಎಂ ಕೇರ್ ನಿಧಿಗೆ ಉದಾರವಾಗಿ ದಾನ ಮಾಡಿ ಎಂದು ಪ್ರಧಾನಿ ಯವರು ವಿನಂತಿಸಿದರೆ ಸೋನಿಯಾ ಗಾಂಧಿಯವರು ಇದೊಂದು ವಂಚನೆಯ ನಿಧಿ ಮೂಲ ಉದ್ದೇಶಕ್ಕೆ ಬಳಕೆ ಯಾಗುವುದಿಲ್ಲ ಎಂದು ಸುಖಾಸುಮ್ಮನೆ ಆರೋಪ ಮಾಡುತ್ತಾರೆ.

ತಾವು ಸದಸ್ಯರಿರುವ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಬದಲಾಗಿ ಪರ್ಯಾಯ ನಿಧಿಯನ್ನು ಸ್ಥಾಪಿಸಿ ತಮ್ಮನ್ನು ದೂರಟ್ಟ ಕೋಪ ಸೋನಿಯಾರವರಿಗೆ ತೀವ್ರವಾಗಿ ಕಾಡಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ದೇಶದಲ್ಲಿ ಸೋಂಕು ತೀವ್ರಗತಿಯಲ್ಲಿ ಹರಡದಂತೆ ಮಾಡಲು ಕಠಿಣವಾದ ಲಾಕ್‌ಡೌನ್ ವಿಧಿಸಿದರೆ ಪೂರ್ವ ಯೋಜನೆಯಿಲ್ಲದೆ ಲಾಕ್ ಡೌನ್ ಘೋಷಿಸಿದರೂ ಮುಂಚಿತವಾಗಿ ಜನರಿಗೆ ತಿಳಿಸಬೇಕಿತ್ತು ಎಂದು ತರ್ಕವಿಲ್ಲದ ಟೀಕೆ ಮಾಡುತ್ತಾರೆ. ಸಮಯ ನೀಡಿ ಲಾಕ್‌ಡೌನ್ ಘೋಷಣೆ ಮಾಡಿದ್ದರೆ ಲಕ್ಷಾಂತರ ವಲಸೆ ಕಾರ್ಮಿಕರು ಮತ್ತು ಪರಸ್ಥಳಗಳಲ್ಲಿ ಕೆಲಸಮಾಡುತ್ತಿದ್ದವರು ಊರು ಸೇರಲು ಒಮ್ಮೆಗೆ ಬೀದಿಗೆ ಬರುತ್ತಿದ್ದರು. ಕಾಲ್ತುಳಿತ ದೊಂಬಿ ಮುಂತಾದ ಗಂಭೀರ ಅನಾಹುತ ನಿಶ್ಚಿತವಾಗಿ ಸಂಭವಿಸುತ್ತಿತ್ತು.

ಇತ್ತೀಚೆಗೆ ಫ್ರಾನ್ಸ್ ದೇಶವು ಲಾಕ್‌ಡೌನ್ ಮಾಡಿದಾಗ ಮನೆ ಸೇರಲು 700 ಕಿ.ಮೀ ಕಾರುಗಳ ಸಾಲು ನಿಂತಿತ್ತು. 6 ಕೋಟಿ 70ಲಕ್ಷ
ಜನಸಂಖ್ಯೆಯ ದೇಶದಲ್ಲಿ ಈ ಸ್ಥಿತಿಯಾದರೆ 130 ಕೋಟಿ ಜನಸಂಖ್ಯೆಯ ನಮ್ಮ ದೇಶದ ಪರಿಸ್ಥಿತಿಯು ಏನಾಗುತ್ತಿತ್ತು
ಎಂಬುದನ್ನು ಊಹಿಸಲೂ ಕಷ್ಟಸಾಧ್ಯ. ಲಾಕ್‌ಡೌನ್ ಅವಧಿಯಲ್ಲಿ ವಲಸೆ ಕಾರ್ಮಿಕರು ಮನೆ ಸೇರಲು ಮುಂದಾದಾಗ ಅವರ ಕಷ್ಟಕ್ಕೆ ವಿರೋಧ ಪಕ್ಷಗಳು ಸ್ಪಂದಿಸದೆ ಅವರನ್ನು ಮೋದಿಯವರ ವಿರುದ್ಧ ಬಳಕೆ ಮಾಡುವ ರಾಜಕೀಯ ಅಸ್ತ್ರವನ್ನಾಗಿ ಕಂಡರು. ಆದರೆ ಬಿಹಾರ ಮತ್ತು ಹಲವು ಉತ್ತರ ರಾಜ್ಯಗಳ ಉಪ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಮಟ್ಟದ ಗೆಲವು
ಸಾಧಿಸಿ ವಿರೋಧ ಪಕ್ಷಗಳು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕುತಂತ್ರಕ್ಕೆ ತಕ್ಕ ಉತ್ತರ ಜನರಿಂದಲೇ ಕೊಡುವಂತೆ ಮಾಡಿತು.

ಕೋವಿಡ್‌ಗೆ ಮುನ್ನ ಭಾರತ ಶೇಕಡಾ 75ರಷ್ಟು ವೆಂಟಿಲೇಟರ್ ಗಳನ್ನು ಹೊರ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿತ್ತು. ಈ ಬಾರಿ ದೇಶೀಯ ನಿರ್ಮಿತ ವೆಂಟಿಲೇಟರ್‌ಗಳನ್ನು ಪಿಎಂ ಕೇರ್ ನಿಧಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಖರೀದಿಸಲಾಯಿತು. ಯಥಾ ಪ್ರಕಾರ ರಾಹುಲ್ ಗಾಂಧಿಯವರು ವೆಂಟಿಲೇಟರ್ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ, ಖರೀದಿಸಿರುವ ಉಪಕರಣ ಕಳಪೆ
ಗುಣಮಟ್ಟದ್ದು ಎಂದು ಆರೋಪಿಸಿದಾಗ ವೆಂಟಿಲೇಟರ್ ಸರಬರಾಜು ಮಾಡಿದ ಸಂಸ್ಥೆಯವರು ದಾಖಲೆ ಸಮೇತ ನೀಡಿದ
ಸ್ಪಷ್ಟನೆಗೆ ಮರುಉತ್ತರ ನೀಡದೆ ತೆಪ್ಪಾಗಾಗುತ್ತಾರೆ.

ಆರ್ಥಿಕ ಸಂಕಷ್ಟದ ಸಮಯದಲ್ಲಿಯೂ ಬಡ ಕುಟುಂಬಗಳಿಗೆ 3 ಬಾರಿ 500ರು. ಅವರ ಖಾತೆಗಳಿಗೆ ವರ್ಗಾವಣೆ ಮತ್ತು 6 ತಿಂಗಳು ಉಚಿತ ರೇಷನ್ ನೀಡುತ್ತಾರೆ. ಸರಕಾರವನ್ನು ಇಕ್ಕಟ್ಟಿಗೆ ದೂಡುವ ದುರುದ್ದೇಶದಿಂದ ಕಾಂಗ್ರೆಸ್ ಮತ್ತು ಕೆಲವು ಎಡ ಚಿಂತಕರು ಆರ್ಥಿಕ ಪುನಃಶ್ಚೇತನಕ್ಕಾಗಿ ನಾಗರಿಕರ ಖಾತೆಗೆ 6000 ರು. ಅಥವಾ 10000ರು. ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸು ತ್ತಾರೆ.

ಖ್ಯಾತ ಅಂಕಣಕಾರ ಹಾಗೂ ಆರ್ಥಿಕ ತಜ್ಞ ಸ್ವಾಮಿನಾಥನ್ ಬರೆದಿರುವ ಲೇಖನದಲ್ಲಿ ನೇರ ಹಣ ವರ್ಗಾವಣೆಯ ಮೂಲಕ
ಮಾತ್ರವೇ ಆರ್ಥಿಕ ಪುನಃಶ್ಚೇತನ ಸಾಧ್ಯ ಎಂದು ತಪ್ಪಾಗಿ ನಂಬಿದ್ದೇವು ಎಂದು ಒಪ್ಪಿಕೊಂಡಿದ್ದಾರೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲಾಕ್ ಡೌನ್ ತರುವಾಯ ಆರ್ಥಿಕತೆಯನ್ನು ಹಳಿಗೆ ತರಲು ಘೋಷಿಸಿದ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ವಿರುದ್ಧ ಕಟುವಾದ ಟೀಕೆಗಳು ಕೇಳಿ ಬರುತ್ತವೆ. ಇದೊಂದು ಸಾಲಮೇಳ. ಆರ್ಥಿಕ ಬೆಳವಣಿಗೆಗೆ ಪೂರಕ ವಾಗಿಲ್ಲ ಮತ್ತು ನಿರುದ್ಯೋಗ ಹೆಚ್ಚಾಗುತ್ತದೆ ಎಂಬಿತ್ಯಾದಿ ನೊಬಲ್ ಪ್ರಶಸ್ತಿ ಪಡೆದ ಮಹನೀಯರಿಂದಲೂ ಕೇಳಿ ಬರುವುದು.

ಆರ್ಥಿಕ ಪ್ಯಾಕೇಜ್ ಯಶಸ್ವಿಯಾಗಿ ಕೈಗಾರಿಕಾ ಚಟುವಟಿಕೆಗಳು ಗರಿಗೆದರಿದೆ ಎಲ್ಲಾ ಕ್ಷೇತ್ರಗಳಲ್ಲಿಯೂ ಸಕಾರಾತ್ಮಕ ಬೆಳವಣಿಗೆ ಕಂಡು ಬರುತ್ತಿದೆ. ತತ್ಪರಿಣಾಮವಾಗಿ ಡಿಸೆಂಬರ್ ತಿಂಗಳಿನಲ್ಲಿ ದಾಖಲೆಯ 1.15 ಲಕ್ಷಕೋಟಿ ಜಿಎಸ್‌ಟಿ ಸಂಗ್ರಹವೇ ಸಾಕ್ಷಿ. ಕಳೆದ 9 ತಿಂಗಳಿನಲ್ಲಿ 46 ಬಿಲಿಯನ್ ಡಾಲರ್ ವಿದೇಶಿ ನೇರ ಬಂಡವಾಳ ಹರಿದು ದಾಖಲೆ ನಿರ್ಮಿಸಿದೆ. ವಿದೇಶಿ ವಿನಿಮಯವು 580 ಬಿಲಿಯನ್ ಡಾಲರ್‌ಗಳಿಗೆ ಹೆಚ್ಚಳವಾಗಿದೆ.

ರಫ್ತು ಅಲ್ಪ ಪ್ರಮಾಣದಲ್ಲಿ ಕುಸಿದು ಆಮದು ಹೆಚ್ಚಳವಾಗಿದೆ. ಕೋವಿಡ್ ಪೂರ್ವ ಸ್ಥಿತಿಗೆ ದೇಶದ ಆರ್ಥಿಕ ಪರಿಸ್ಥಿತಿಯು ಮರಳುತ್ತಿರುವ ಸ್ಪಷ್ಟ ಸಂಕೇತ ನಿಚ್ಚಳವಾಗಿ ಕಾಣಬಹುದಾಗಿದೆ. ಕರೋನಾ ಸಂಕಟದಿಂದ ದೇಶದ ಆರ್ಥಿಕ ಪರಿಸ್ಥಿತಿಯು
ಚಿಂತಾಜನಕ ಸ್ಥಿತಿಯು ತಲುಪುವ ನಿರೀಕ್ಷೆಯಲ್ಲಿದ್ದ ಮೋದಿ ವಿರೋಧಿಗಳಿಗೆ ಬಹು ದೊಡ್ಡ ನಿರಾಸೆಯಾಗಿರುವುದರಲ್ಲಿ
ಸಂದೇಹ ವಿಲ್ಲ. ಕರೋನಾ ವೈರಸ್ ಸಂಪೂರ್ಣವಾಗಿ ಮಣಿಸಲು ಭಾರತ ಈ ಸೋಂಕಿಗೆ ಲಸಿಕೆಯನ್ನು ಅಭಿವೃದ್ಧಿ ಪಡಿಸಲು ಭಾರತ್ ಬಯೋಟೆಕ್ ಮತ್ತು ಜ಼ೈಡಸ್ ಕ್ಯಾಡಿಲಾ ಫಾರ್ಮ ಸಂಸ್ಥೆಗಳಿಗೆ ಪಿಎಂ ಕೇರ್ ನಿಧಿಯಿಂದ 100 ಕೋಟಿ ರು. ಅನುದಾನ ವನ್ನು ನೀಡಿದ ಫಲವಾಗಿ ಇಂದು ಸ್ವದೇಶಿ ನಿರ್ಮಿತ ಕೋವ್ಯಾಕ್ಸೀನ್ ಲಸಿಕೆ ಸಿದ್ಧವಾಗಿದೆ.

ಹಲವಾರು ತೊಡಕುಗಳನ್ನು ಉಂಟು ಮಾಡಿ ಕರೋನಾ ವೈರಸ್ ಹೋರಾಟದಲ್ಲಿ ಮೋದಿ ಸೋಲುವಂತೆ ಮಾಡಲು ನಡೆಸಿದ
ಷಡ್ಯಂತರ ಸಂಪೂರ್ಣವಾಗಿ ವಿಫಲವಾಯಿತು. ಈಗ ಲಸಿಕೆ ಬಂದ ತರುವಾಯ ಮೋದಿಯವರ ಮೆರುಗು ಮತ್ತಷ್ಟು ಹೆಚ್ಚುವ
ಆತಂಕದಿಂದ ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸಕ್ಕೆ ಮುಂದಾಗಿದ್ದಾರೆ. ಡಿಸಿಜಿಎ ಕೊವ್ಯಾಕ್ಸೀನ್‌ಗೆ ತುರ್ತು ಬಳಕೆಗೆ
ಅನುಮತಿ ನೀಡಿದ ಕೆಲವೇ ಕ್ಷಣಗಳಲ್ಲಿ ಕಾಂಗ್ರೆಸ್ ಮುಖಂಡರಾದ ಶಶಿತರೂರ್, ಆನಂದ ಶರ್ಮಾ ಮತ್ತು ಜೈರಾಮ್ ರಮೇಶ್‌ ರವರು ಟ್ಟೀಟ್ ಮೂಲಕ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಕೋವ್ಯಾಕ್ಸಿನ್ ವಿರುದ್ಧ ವಾಕ್ಸಮರವನ್ನೇ ಆರಂಭಿಸುತ್ತಾರೆ.

ಇವರ ಹಿಂದೆಯೇ ಮೋದಿ ವಿರೋಧಿಗಳು ಲಸಿಕೆಯ ಸುರಕ್ಷತೆ ಮತ್ತು ಕ್ಷಮತೆಯ ಬಗ್ಗೆ ಅನುಮಾನ ಹುಟ್ಟು ಹಾಕುವುದಕ್ಕೆ
ರಣೋತ್ಸಾಹದಲ್ಲಿ ತೊಡಗುತ್ತಾರೆ. ಅಮೆರಿಕ, ಇಂಗ್ಲೆಡ್, ಚೀನಾ ಮತ್ತು ರಷ್ಯಾ ನಂತರ ಭಾರತ ಮಾತ್ರ ಈ ಸೋಂಕಿಗೆ ಲಸಿಕೆಯನ್ನು ಕಂಡು ಹಿಡಿದಿರುವುದು. ಈ ಸಾಧನೆಗೆ ವಿಜ್ಞಾನಿಗಳನ್ನು ಸಂಶೋಧಕರನ್ನು ಪ್ರಶಂಸಿಸುವ ಬದಲು ರಾಜಕೀಯ ಕಾರಣಕ್ಕಾಗಿ ಅವರ ಶ್ರಮವನ್ನು ಅನುಮಾನದಿಂದ ನೋಡಿ ಅಪಮಾನವೆಸಗಿದ್ದಾರೆ.

ಮಾಜಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ನಾನು ಈ ಲಸಿಕೆಯನ್ನು ಪಡೆಯುವುದಿಲ್ಲ ಇದು ಬಿಜೆಪಿ ಲಸಿಕೆ ಎಂದು ಹೀಯಾಳಿಸಿ ತಮ್ಮ ಅಸಹನೆ ವ್ಯಕ್ತಪಡಿಸುತ್ತಾರೆ. ಆಶ್ಚರ್ಯವೆಂದರೆ ಕೆಲವು ವೈರಲ್ ತಜ್ಞರು ಎಂದು ಹೇಳಿಕೊಳ್ಳು
ವವರೂ ಭಾರತ್ ಬಯೋಟೆಕ್ ಕೋವ್ಯಾಕ್ಸೀನ್ ವಿರುದ್ಧ ಅಪಸ್ವರ ವನ್ನು ತೆಗೆದು ತಮ್ಮದೇ ಕ್ಷೇತ್ರದ ಇತರ ವಿಜ್ಞಾನಿಗಳಿಗೆ ಮಸಿ
ಬಳೆಯುವ ಕೆಲಸದಲ್ಲಿ ತೊಡಗಿರುವುದು ವೃತ್ತಿ ಮತ್ಸರವೆನ್ನದೆ ವಿಧಿಯಿಲ್ಲ. ಈ ವಿಘ್ನ ಸಂತೋಷಿಗಳ ಕೆಂಗಣ್ಣಿಗೆ ಆಕ್ಸ್ ಫರ್ಡ್ ಜೆನಿಕಾ ಲಸಿಕೆಯೂ ಒಳಗಾಗಿದೆ. ಆದರೆ ಇವರ ಪ್ರಮುಖ ಗುರಿಯು ಮಾತ್ರ ಕೋವಾಕ್ಸೀನ್ ಎಂಬುದು ಸ್ಪಷ್ಟ.

ಎರಡು ಹಂತದ ಪ್ರಯೋಗದಲ್ಲಿ ಬಂದಿರುವ ಫಲಿತಾಂಶ ಮತ್ತು ಸಂಗ್ರಹವಾಗಿರುವ ವೈಜ್ಞಾನಿಕ ಮಾಹಿತಿಯ ಆಧಾರದ ಮೇಲೆ
ಕೇಂದ್ರ ಸರಕಾರದ ಮತ್ತು ಖಾಸಗಿ ತಜ್ಞರ ಸದಸ್ಯ ಸಮಿತಿಯು ಕೇವಲ ತುರ್ತು ಉಪಯೋಗಕ್ಕೆ ಮಾತ್ರ ಕೋವ್ಯಾಕ್ಸೀನ್ ಲಸಿಕೆ
ಬಳಸಲು ಅನುಮತಿ ನೀಡಿದೆ. ಭಾರತ್ ಬಯೋಟೆಕ್ ಸಂಸ್ಥೆಯು ಇಲ್ಲಿಯ ತನಕ 16 ಲಸಿಕೆಗಳನ್ನು ಅಭಿವೃದ್ಧಿ ಪಡಿಸಿದೆ ಮತ್ತು
ಕರೋನಾ ಲಸಿಕೆಯನ್ನು ಬ್ರಿಟನ್ ಸೇರಿ 14 ದೇಶಗಳಲ್ಲಿ ಅದರ  ಪ್ರಯೋಗವನ್ನು ಕೈಗೊಂಡಿದೆ.

ಮುಂದಿನ ಹಂತದ ಪ್ರಯೋಗವು ಎಲ್ಲೆಡೆ ಮುಂದುವರಿದಿರುವುದು ಹಾಗೂ ಲಸಿಕೆಗೆ ಸಂಬಂಧಪಟ್ಟ ಸಂಪೂರ್ಣ ವಿವರಗಳನ್ನು ಮಾರ್ಚ್ ತಿಂಗಳಲ್ಲಿ ನೀಡುವ ಭರವಸೆಯನ್ನು ಸಂಸ್ಥೆಯು ನೀಡಿದೆ. ಭಾರತದ ಲಸಿಕೆಯ ಕುರಿತು ಅನುಮಾನ ವ್ಯಕ್ತಪಡಿಸು ತ್ತಿರುವ ತಜ್ಞರಾಗಲೀ ಅಥವಾ ರಾಜಕೀಯ ನಾಯಕರಾಗಲೀ ಭಾರತ್ ಬಯೋಟೆಕ್ ಲಸಿಕೆಗೆ ಅನುಮತಿ ಪಡೆಯಲು ನೀಡಿರುವ
ದಾಖಲೆಯಾಗಲೀ ಅಥವಾ ವೈಜ್ಞಾನಿಕ ಅಂಶಗಳನ್ನಾಗಲೀ ಅಧ್ಯಯನಮಾಡದೆ ಕೇವಲ ಉಹಾಪೋಹಗಳ ಮೇಲೆ ಅನುಮಾನ
ಹುಟ್ಟುಹಾಕುವ ತಂತ್ರಗಾರಿಕೆ ಮಾಡುತ್ತಿದ್ದಾರೆ.

ಕರೋನಾ ಅಟ್ಟಹಾಸದಿಂದ ಅಮೆರಿಕಾ ಇಂಗ್ಲೆಂಡ್, ಯೂರೋಪಿನ ರಾಷ್ಟ್ರಗಳು ನಲುಗಿ ಹೋಗಿವೆ. ಹಲವು ಬಾರಿ ಲಾಕ್ ಡೌನ್ ಘೋಷಿಸಿದ್ದರು. ಪರಿಣಾಮ ಶೂನ್ಯವಾಗಿದೆ. ಜಪಾನ್ ಮತ್ತೊಮ್ಮೆ ದೇಶದಲ್ಲಿ ತುರ್ತುಪರಿಸ್ಥಿತಿ ಯನ್ನು ಘೋಷಿಸಿದೆ. ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳು ಕರೋನಾ ಮುಂದೆ ಮಂಡಿಯೂರಿ ಕುಳಿತಿರುವಾಗ ಭಾರತದಲ್ಲಿ ಸೋಂಕಿನ ತೀವ್ರತೆಯು ಕುಸಿದು ಶೇಕಡಾ 96.4ರಷ್ಟು ಸೋಂಕಿತರು ಗುಣಮುಖರಾಗಿದ್ದಾರೆ ಮತ್ತು ಶೇಕಡಾ 2.2 ರಷ್ಟು ಸಕ್ರಿಯ ಪ್ರಕರಣಗಳು ಮಾತ್ರ ಇರುವುದು ಸ್ವದೇಶದ ಲಸಿಕೆಯನ್ನು ನಮ್ಮ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿರುವುದಕ್ಕೆ ಹೆಮ್ಮೆ ಪಡಬೇಕಾದ ವೇಳೆಯಲ್ಲಿ ಲಸಿಕೆಯ ಕುರಿತು ಅಪಪ್ರಚಾರದಲ್ಲಿ ತೊಡಗಿರುವವರು ಮೋದಿಯವರನ್ನು ಮಣಿಸಲು ಹೊಸ ಆಟವನ್ನು ಆಡಲು ಆರಂಭಿಸಿದ್ದಾರೆ.

ಇದರ ಫಲಶ್ರುತಿಯೇ ವೈರಸ್ ರಾಜಕೀಯ. ಹಲವಾರು ಅಡ್ಡಿ ಆತಂಕಗಳನ್ನು ಯಶಸ್ವಿಯಾಗಿ ಎದುರಿಸಿರುವ ಮೋದಿಯವರು ಈ ವೈರಸ್ ವಿರುದ್ಧದ ಹೋರಾಟದಲ್ಲಿಯೂ ಗೆಲುವಿನ ನಗೆಯನ್ನು ಮತ್ತೇ ಬೀರುತ್ತಾರೆ ಅವರ ವಿರೋಧಿಗಳು ಮತ್ತೇ ಸೋಲು ನೋಡುವಂತೆ ಮಾಡುವುದು ನಿಶ್ವಿತ.