Saturday, 14th December 2024

ಭ್ರಷ್ಟಾಚಾರ, ವ್ಯಕ್ತಿಪೂಜೆ ಪ್ರಜಾಪ್ರಭುತ್ವಕ್ಕೆ ಕ್ಯಾನ್ಸರ್‌

ಸ್ವಾಸ್ಥ್ಯ ಸಂಪದ

Yoganna55@gmail.com

ಕರ್ನಾಟಕ ವಿಧಾನಸಭೆಯ ಚುನಾವಣೆಗಳಿಗೆ ವಿವಿಧ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳ ಪಟ್ಟಿಗಳನ್ನು ಘೋಷಣೆ ಮಾಡುತ್ತಿದ್ದು, ಆಯಾಯ ಪಕ್ಷದ ನಾಯಕರುಗಳ ಕುಟುಂಬ ದವರಿಗೆ ಟಿಕೇಟುಗಳನ್ನು ನೀಡುತ್ತಿರುವುದು, ಕುಟುಂಬಗಳಲ್ಲಿಯೇ ಟಿಕೇಟಿಗಾಗಿ ಕಲಹಗಳು ನಡೆಯುತ್ತಿರುವುದು, ಕೋಟ್ಯಂತರ ರುಗಳನ್ನು ಚುನಾವಣೆಗೆ ಖರ್ಚು ಮಾಡುವ ಸಾಮರ್ಥ್ಯವಿರುವ ಅಭ್ಯರ್ಥಿಗಳಿಗೆ ಜಾತಿ ಮತ್ತು ಧರ್ಮಗಳ ಆಧಾರದ ಮೇಲೆ ಟಿಕೆಟ್ ನೀಡುತ್ತಿರುವುದು, ಪಕ್ಷ ನಿಷ್ಠೆ ಮತ್ತು ಮೌಲ್ಯಗಳನ್ನು ಮಾತನಾಡುತ್ತಿದ್ದವರು ಟಿಕೇಟ್ ಸಿಕ್ಕದ ಕಾರಣ ಅಧಿಕಾರ ದಾಹದಿಂದ ಬೇರೆ ಬೇರೆ ಪಕ್ಷಗಳಿಗೆ ಪಕ್ಷಾಂತರ ಮಾಡುತ್ತಿರುವುದು,
ಟಿಕೆಟ್ ಸಿಕ್ಕಲಿಲ್ಲವೆಂದು ಕಣ್ಣೀರು ಹಾಕುತ್ತಿರುವುದು, ಸವಾಲುಗಳನ್ನು ಹಾಕುತ್ತಿರುವುದು, ಆಯಾಯ ಪಕ್ಷದ ಮುಖಂಡರುಗಳಿಗೆ ಬೈಗುಳ ಮತ್ತು ಆರೋಪಗಳ ಸುರಿಮಳೆಯನ್ನೇ ಸುರಿಸುತ್ತಿರುವುದು, ಕಲುಷಿತ ಇಂದಿನ ರಾಜಕೀಯ ವ್ಯವಸ್ಥೆಯಿಂದ ಬೇಸತ್ತು, ಸೇವಾನಿಷ್ಠ ಮೌಲ್ಯಾಧಾರಿತ ರಾಜಕಾರಣಿಗಳು ರಾಜಕೀಯದಿಂದಲೇ ನಿವೃತ್ತಿ ಹೊಂದುತ್ತಿದ್ದರೂ, ಸಮಾಜ ಮೌನವಾಗುತ್ತಿರು ವುದು, ತಮ್ಮ ತಮ್ಮ ಹಿಂಬಾಲಕರುಗಳಿಗೆ ಆಯಾಯ ಪಕ್ಷದ ಮುಖಂಡರುಗಳು ಟಿಕೆಟ್‌ಗಳನ್ನು ನೀಡಿಸುತ್ತಿರುವುದು, ಚುನಾವಣೆ ಘೋಷಣೆಯಾದ ನಂತರ ಚುನಾವಣೆ ಉಪಯೋಗಕ್ಕಾಗಿ ಸಾಗಿಸಲಾಗುತ್ತಿದೆ ಎಂದು ಕೋಟ್ಯಂತರ ರುಗಳನ್ನು ವಶಪಡಿಸಿ ಕೊಳ್ಳುತ್ತಿರುವುದು ಇವೆಲ್ಲವುಗಳನ್ನು ಪ್ರಜ್ಞಾವಂತ ಮತದಾರ ಗಮನಿಸದಿರಲು ಸಾಧ್ಯವಿಲ್ಲ.

ದುರ್ದೈವವೆಂದರೆ ಪಕ್ಷಗಳಿಗಾಗಲಿ, ಅಭ್ಯರ್ಥಿಗಳಿಗಾಗಲಿ ಇವೆಲ್ಲಾ ಕ್ಯಾನ್ಸರ್‌ಕಾರಕ ಘಟನೆಗಳ ಬಗ್ಗೆ ಪಶ್ಚಾತ್ತಾಪವೇ ಇಲ್ಲ. ಇಂದು ಜರಗುತ್ತಿರುವ ಮೇಲ್ಕಂಡ ಎಲ್ಲ ಕ್ಯಾನ್ಸರ್‌ಕಾರಕ ಘಟನೆಗಳು ಪ್ರಜಾಪ್ರಭುತ್ವದ ವಿನಾಶದ ಕ್ಯಾನ್ಸರ್‌ಗಳಂತಿದ್ದು, ಇವೆಲ್ಲಕ್ಕೂ ಸ್ವಾರ್ಥ, ಸ್ವಜನ ಪಕ್ಷಪಾತ ಮತ್ತು ಅಧಿಕಾರ ದಾಹಗಳಲ್ಲದೆ ಬೇರೇನೂ ಕಾಣುತ್ತಿಲ್ಲ.

ತ್ಯಾಗ, ಬಲಿದಾನ ಮತ್ತು ವರ್ಷಾಂತರಗಳ ಚಳವಳಿಯಿಂದ ಸ್ವಾತಂತ್ರ್ಯ ಪಡೆದು ಸ್ಥಾಪಿಸಿದ ವಿಶ್ವದ ಅತಿದೊಡ್ಡ ಪ್ರಜಾ ಪ್ರಭುತ್ವ ಇಂದಿನ ದುಸ್ಥಿತಿಗೆ ತಲುಪಲು ಕಾರಣಗಳೇನು? ದೇಶದ ಜನರ ಬದುಕನ್ನು ಮತ್ತು ಸೃಷ್ಟಿಯನ್ನು ಸಕಾರಾತ್ಮಕವಾಗಿ ನಿರ್ವಹಿಸ ಬೇಕಾದ ಶಾಸಕಾಂಗವನ್ನು ರಚಿಸುವ ರಾಜಕೀಯ ಪಕ್ಷಗಳ ನಡವಳಿಕೆಗಳು ಈ ದುಸ್ಥಿತಿಗೆ ಬಂದಲ್ಲಿ ಅದೆಂತಹ ಸರ್ಕಾರ ರಚನೆ ಯಾಗಿ ಸಮಾಜ ಮತ್ತು ಸೃಷ್ಟಿಯನ್ನು ರಕ್ಷಿಸುತ್ತವೆ? ಇಂತಹ ಆತಂಕಕಾರಿ ಪರಿಸ್ಥಿತಿಯಲ್ಲಿ ಪ್ರಜ್ಞಾವಂತ ಮತದಾರರ ಕರ್ತವ್ಯ ಗಳೇನು? ಮೈ ಮರೆತರೆ ಮುಂದೇನಾಗಬಹುದು? ಎಂಬಿತ್ಯಾದಿ ಹಲವಾರು ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಅವಲೋಕಿಸಿ ರುವ ಲೇಖನವಿದು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲವೂ ಬಹುಮತದ ಆಧಾರದ ಮೇಲೆಯೇ ನಡೆಯಬೇಕು. ದುರ್ದೈವ ಚುನಾವಣೆ ಮೂಲಕ ಜನಪ್ರತಿನಿಧಿಗಳನ್ನು ಆರಿಸುವ ಪ್ರಕ್ರಿಯೆಯನ್ನು ಹೊರತುಪಡಿಸಿ ಆಯಾಯ ರಾಜಕೀಯ ಪಕ್ಷಗಳಲ್ಲಾಗಲಿ, ಸಂಸತ್ತು ಶಾಸನ ಸಭೆಗಳು ಇನ್ನಿತರ ಸಾಂವಿಧಾನಿಕ ಸಂಸ್ಥೆಗಳಲ್ಲಾಗಲಿ ನೈಜ ಪ್ರಜಾಪ್ರಭುತ್ವ ವ್ಯವಸ್ಥೆ ಕ್ಷೀಣಿಸುತ್ತಿರುವುದು ಆತಂಕಕಾರಿ ಬೆಳವಣಿಗೆ ಯಾಗಿದೆ.

ದೇಶದ ರಾಜಕೀಯ ಘಟನಾವಳಿಗಳನ್ನು ಮೆಲುಕು ಹಾಕಿದಾಗ ಪ್ರಾರಂಭದಿಂದಲೂ ಈ ಅವ್ಯವಸ್ಥೆಯನ್ನು ಗುರುತಿಸಬಹು ದಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷದಲ್ಲೂ ಬಹುಮತ ಪಡೆದವರನ್ನು ಕಡೆಗಣಿಸಿ ಸಂಧಾನದ ಮೂಲಕ ಮತ್ತೊಬ್ಬ ರನ್ನು ಆಯ್ಕೆ ಮಾಡುತ್ತಿದ್ದು ಮತ್ತು ಸ್ವಾತಂತ್ರ್ಯದ ಸಮಯದಲ್ಲಿ ಸರದಾರ್ ವಲ್ಲಭಬಾಯ್ ಪಟೇಲ್‌ರವರು ಮುಂದಿನ ಪ್ರಧಾನ ಮಂತ್ರಿ ಆಗಬೇಕೆಂಬ ಅಂದಿನ ಕಾಂಗ್ರೆಸ್ ಪಕ್ಷದ ಬಹುಪಾಲು ಜನರ ಆಶಯವಾಗಿದ್ದರೂ ಗಾಂಧೀಜಿಯವರು ಪಟೇಲರನ್ನು ಮನವೊಲಿಸಿ ನೆಹರೂರವರನ್ನು ಪ್ರಧಾನಮಂತ್ರಿಯಾಗಿಸಿದ್ದು ಇತ್ಯಾದಿ ಹಲವಾರು ಘಟನೆಗಳು ಪ್ರಾರಂಭದಲ್ಲಿಯೇ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆ ಬೆಳೆಯದಿರಲು ಮತ್ತು ಮುಂದಿನ ದಿನಗಳಲ್ಲಿ ವ್ಯಕ್ತಿಪೂಜೆ ಬೆಳವಣಿಗೆಗೆ ಪಕ್ಷಗಳಲ್ಲಿ ಬುನಾದಿ ಹಾಕಿದಂತಾಯಿತೇನೋ? ಗಾಂಧೀಜಿಯವರ ಮೇರು ವ್ಯಕ್ತಿತ್ವ, ನಿಸ್ವಾರ್ಥ ಮನೋಭಾವ, ಪ್ರಶ್ನಾತೀತ ದೇಶಪ್ರೇಮ, ಸ್ವಚ್ಛ ವೈಯಕ್ತಿಕ ಬದುಕು, ಮಾನವೀಯ ಅಂತಃಕರಣ, ತ್ಯಾಗ ಮನೋಭಾವ ಇತ್ಯಾದಿ ಅವರಲ್ಲಿದ್ದ ನಿರ್ವಿವಾದಿತ ಸದ್ಗುಣಗಳು ಅವರ ಅಭಿಪ್ರಾಯವನ್ನು ಎಲ್ಲರೂ ಒಪ್ಪುವಂತೆ ಪರಿಣಾಮ ಬೀರುತ್ತಿದ್ದವು.

ಬಹುಶಃ ಈ ಕಾರಣದಿಂದೇನೋ ಬಹುಮತದ ಅಭಿಪ್ರಾಯದ ಮೇಲೂ ಗಾಂಧೀಜಿಯವರ ಅಂತಿಮ ಅಭಿಪ್ರಾಯ ಸರ್ವವೇದ್ಯ ವಾಗುತ್ತಿತ್ತು. ನನಗರ್ಥವಾಗದ ಇನ್ನೊಂದು ಯಕ್ಷಪ್ರಶ್ನೆ ಗಾಂಧೀಜಿಯವರೇ ಏಕೆ ನಾನೇ ಪ್ರಧಾನಮಂತ್ರಿ ಆಗುತ್ತೇನೆ ಎನ್ನಲಿಲ್ಲ?
ಇನ್ನಿತರರು ಯಾರೂ ಈ ಸಲಹೆಯನ್ನು ಅವರ ಮುಂದೆ ಏಕೆ ಇಡಲಿಲ್ಲ? ಒಂದು ಪಕ್ಷ ಹಾಗಾಗಿದ್ದರೆ ಅವರು ಕೊಲೆಯಾಗುತ್ತಿರ ಲಿಲ್ಲವೇನೋ? ನೆಹರೂರವರು ಅಂದಿನ ಕಾಲಕ್ಕೆ ಅಂತಾರಾಷ್ಟ್ರೀಯ ವಿಚಾರಗಳನ್ನು ಬಲ್ಲವರಾಗಿದ್ದರು. ಅತಿ ಆಳವಾದ ಅಧ್ಯ
ಯನಶೀಲರಾಗಿದ್ದು, ಸ್ವತಃ ಬರಹಗಾರರಾಗಿದ್ದರು ಮತ್ತು ಅವರ ವಂಶ ಸ್ವಾತಂತ್ರ್ಯ ಚಳವಳಿಗಾಗಿ ಆಸ್ತಿಪಾಸ್ತಿಗಳನ್ನು ದಾನ ಮಾಡಿತ್ತು ಮತ್ತು ಆ ಕಾಲಕ್ಕಾಗಲೇ ಸರ್ದಾರ್ ವಲ್ಲಭಬಾಯ್ ಪಟೇಲರ ಆರೋಗ್ಯಸ್ಥಿತಿಯೂ ಕೂಡ ಚೆನ್ನಾಗಿರಲಿಲ್ಲ, ಹೃದ್ರೋಗ ದಿಂದ ಬಳಲುತ್ತಿದ್ದರು.

1950ರ ಡಿಸೆಂಬರ್‌ನಲ್ಲಿ ಪ್ರಥಮ ಲೋಕಸಭಾ ಚುನಾವಣೆಯ ಮುನ್ನವೇ ಪಟೇಲರು ಹೃದಯಾಘಾತದಿಂದ ಅಸು ನೀಗಿದರು. ಇವೆಲ್ಲವೂ ನೆಹರೂರವರನ್ನು ಗಾಂಧಿ ಆಯ್ಕೆ ಮಾಡಲು ಪ್ರಮುಖ ಕಾರಣಗಳಿರಬಹುದು. ಗಾಂಧೀಜಿಯವರ ಆಶಯದಂತೆ ಬ್ರಿಟೀಷರ ಅಧೀನದಲ್ಲಿ, ನೆಹರೂರವರ ನೇತೃತ್ವದಲ್ಲಿ ಆಯ್ದ ಡೊಮೈನ್ ಸ್ಟೇಟ್ ಕೇಂದ್ರ ಸರ್ಕಾರದ ಸಚಿವ ಸಂಪುಟ ರಚನೆ ಯಾಯಿತು. ಬಾಬಾ ಸಾಹೇಬ ಅಂಬೇಡ್ಕರ್‌ರವರು ಈ ಸಚಿವ ಸಂಪುಟದಲ್ಲಿ ಕಾನೂನು ಮಂತ್ರಿಗಳಾದರು. ಸರ್ದಾರ್ ವಲ್ಲಭ ಬಾಯ್ ಪಟೇಲ್‌ರವರು ಗೃಹಮಂತ್ರಿಗಳಾದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನ ರಚನಾ ಸಮಿತಿಯನ್ನು ರಚಿಸಲಾಗಿ 1950 ಜನವರಿ 26 ರಂದು ಸಂವಿಧಾನವನ್ನು ದೇಶಾದ್ಯಂತ ಜಾರಿಗೆ ತರಲಾಗಿ ಭಾರತ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ರೂಪುಗೊಂಡಿತು. ಮೇಲ್ಜಾತಿ ಯವರೇ ಅಂದಿನ ರಾಜಕಾರಣ ವ್ಯವಸ್ಥೆಯಲ್ಲಿ ಬಹುಸಂಖ್ಯಾತರಾಗಿದ್ದರೂ, ಆ ವೇಳೆಗಾಗಲೇ ದಲಿತಪರ ಚಳವಳಿಯಲ್ಲಿ ಮುಂಚೂಣಿ ಯಲ್ಲಿದ್ದ ಪ್ರತಿಭಾನ್ವಿತ ದಲಿತ ವರ್ಗದ ಅಂಬೇಡ್ಕರ್ ಅವರ ಪ್ರತಿಭೆಯನ್ನು ಗುರುತಿಸಿ ಪ್ರತಿಷ್ಠಿತ ಐತಿಹಾಸಿಕ ಸಂವಿಧಾನ ರಚಿಸುವ ಅವಕಾಶವನ್ನು ನೀಡಿದ್ದರ ಫಲವಾಗಿಯೇ ಇಂದಿಗೂ ಅವರು  ಜೀವಂತ ವಾಗಿದ್ದಾರೆ.

ಸಂವಿಧಾನ ಇರುವವರೆಗೂ ಜೀವಂತ ವಾಗಿರುತ್ತಾರೆ. ಇದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಅಂದಿಗಾಗಲೇ ಗಾಂಧೀಜಿ ಯವರು 1948ರಲ್ಲಿ ಗುಂಡಿಗೆ ಬಲಿಯಾಗಿದ್ದರು. 1951ರ ಲೋಕಸಭಾ ಚುನಾವಣೆ ವೇಳೆಗೆ ಎಲ್ಲರನ್ನೂ ಒಂದುಗೂಡಿಸಿ, ಒಟ್ಟಿಗೆ ಕರೆದೊಯ್ಯುತ್ತಿದ್ದ ಗಾಂಧಿಯಂತಹ ವ್ಯಕ್ತಿತ್ವ ಇಲ್ಲವಾಯಿತು. ನೆಹರೂರವರು ಎಲ್ಲರನ್ನೂ ಒಗ್ಗಟ್ಟಾಗಿ ಕರೆ ದೊಯ್ದು 1951ರ ಸಾರ್ವತ್ರಿಕ ಚುನಾವಣೆಯನ್ನು ಎದುರಿಸಲುವಲ್ಲಿ ವಿಫಲರಾದ ಪರಿಣಾಮವಾಗಿ ವ್ಯಕ್ತಿ ಪ್ರತಿಷ್ಠೆ ಮತ್ತು ಸೈದ್ಧಾಂತಿಕ ಭಿನ್ನಾಭಿ ಪ್ರಾಯಗಳಿಂದಾಗಿ ಹಲವಾರು ಪಕ್ಷಗಳು ಹುಟ್ಟಿಕೊಂಡು, ೫೩ ರಾಜಕೀಯ ಪಕ್ಷಗಳು ಮೊದಲನೇ ಲೋಕಸಭಾ ಚುನಾವಣೆ ಯಲ್ಲಿಯೇ ಸ್ಪರ್ಧಿಸಿದ್ದು ವಿಪರ್ಯಾಸ.

ಪ್ರಜಾಪ್ರಭುತ್ವದ ದುರ್ಬಲತೆ ಅಂದೇ ಆರಂಭವಾಯಿತು. ದುರ್ದೈವವೆಂದರೆ ದೇಶಕ್ಕೆ ಸಂವಿಧಾನವನ್ನು ನೀಡಿದ್ದ ಡಾ. ಅಂಬೇಡ್ಕರ್ ಅವರೇ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಎಂಬ ತಮ್ಮದೇ ಆದ ಪಕ್ಷವನ್ನು ಹುಟ್ಟುಹಾಕಿ, ಚುನಾವಣೆಯಲ್ಲಿ
ಸ್ಪರ್ಧಿಸಿ ಸೋಲನ್ನಪ್ಪಿದರು. ಅಂಬೇಡ್ಕರ್‌ರವರು ಕಾಂಗ್ರೆಸ್ಸಿನ ಭಾಗವಾಗಿಯೇ ಉಳಿದುಕೊಂಡಿದ್ದಲ್ಲಿ ದೇಶಕ್ಕೆ ಮತ್ತಷ್ಟು ಉಪಯೋಗವಾಗುತ್ತಿತ್ತು. ಅಂಬೇಡ್ಕರ್‌ರವರನ್ನು ಕಾಂಗ್ರೆಸ್ ಪಕ್ಷ ದಲ್ಲಿ ಉಳಿಸಿಕೊಳ್ಳುವಲ್ಲಿ ಅಂದಿನ ಕಾಂಗ್ರೆಸ್ ನಾಯಕತ್ವ ವಿಫಲ ವಾಯಿತೆಂದೇ ಹೇಳಬೇಕು.

ಅಂಬೇಡ್ಕರ್ ನೇತೃತ್ವದಲ್ಲಿ ರಚಿಸಿದ ಸಂವಿಧಾನವನ್ನೇ ಎಲ್ಲರೂ ಒಪ್ಪಿಕೊಂಡಿದ್ದಾಗ ಅಂಬೇಡ್ಕರ್ ಅವರು ಸಿದ್ಧಾಂತಗಳ
ಹಿನ್ನೆಲೆಯಲ್ಲಿ ದೂರ ಸರಿದರು ಎಂದು ಹೇಳಲಾಗುವುದಿಲ್ಲ. ವ್ಯಕ್ತಿ ವ್ಯಕ್ತಿಗಳ ನಡುವಿನ ಪ್ರತಿಷ್ಠೆಯೇ ಇದಕ್ಕೆ ಕಾರಣವಲ್ಲದೆ ಮತ್ತೇನಿರಲು ಸಾಧ? ತತ್ವ ಸಿದ್ಧಾಂತಗಳ ಮತ್ತು ಒಪ್ಪಿತ ಸಂವಿಧಾನದ ಆಶಯಗಳಡಿಯಲ್ಲಿ ಎಲ್ಲರೂ ಒಗ್ಗಟ್ಟಾಗಿರದೆ ವ್ಯಕ್ತಿ ಪ್ರತಿಷ್ಠೆ, ವ್ಯಕ್ತಿ ಪೂಜೆಗಳ ಕಾರಣದಿಂದಾಗಿ ಪ್ರಾರಂಭದಲ್ಲಿಯೇ ಹಲವಾರು ಪಕ್ಷಗಳು ರಾಷ್ಟ್ರದಲ್ಲಿ ಉಗಮಿಸಿದ್ದೂ ಸಹ ಇಂದಿನ ದುಸ್ಥಿತಿಗೆ ಪ್ರಮುಖ ಕಾರಣ.

ಮೊದಲ ಕೇಂದ್ರಸರ್ಕಾರದ ರಕ್ಷಣಾ ಮಂತ್ರಿಗಳಾದ ಕೃಷ್ಣ ಮೆನನ್ ಮೇಲೆ ಚೀನಾ ಯುದ್ಧದ ಸಮಯದಲ್ಲಿ ವಿಲ್ಲಿಸ್ ಜೀಪ್ ಹಗರಣದ ಆರೋಪ ಬಂದು ಅವರು ರಾಜೀನಾಮೆ ಕೊಡುವಂತಾಗಿದ್ದು, ಸ್ವಾತಂತ್ರ್ಯ ಭಾರತದಲ್ಲಿಯೇ ಕೇಳಿ ಬಂದ ಪ್ರಪ್ರಥಮ ಭ್ರಷ್ಟಾಚಾರ ಆರೋಪದ ಹಗರಣ. ಇದನ್ನು ಹೊರತುಪಡಿಸಿ ನೆಹರೂರವರ ಅವಧಿಯಲ್ಲಿ ಭ್ರಷ್ಟಾಚಾರದ ಹಗರಣಗಳಾಗಲಿ, ಸ್ವಜನ ಪಕ್ಷಪಾತದ ಆರೋಪಗಳಾಗಲಿ ಇರಲಿಲ್ಲ. ನೆಹರೂ ನಿಧನದ ನಂತರ ಅತ್ಯಂತ ದಕ್ಷ ಹಾಗೂ ಪ್ರಾಮಾಣಿಕರೆಂದೇ
ಹೆಸರಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಪ್ರಧಾನಿಯಾದರು. ಅವರ ಕ್ಯಾಬಿನೆಟ್‌ನಲ್ಲಿ ಇಂದಿರಾಗಾಂಧಿಯವರು ವಾರ್ತಾ ಮತ್ತು ಪ್ರಚಾರ ಇಲಾಖೆ ಸಚಿವರಾಗುವವರೆವಿಗೂ ಸರ್ಕಾರ ಮತ್ತು ಪಕ್ಷದಲ್ಲಿ ಅವರು ಸಕ್ರಿಯವಾಗಿರಲಿಲ್ಲ.

1966ರಲ್ಲಿ ದೆಹಲಿಯ ಕೈಗಾರಿಕಾ ಕೇಂದ್ರವೊಂದನ್ನು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಮಗನಿಗೆ ಅಂದಿನ ಕೈಗಾರಿಕಾ ಮಂತ್ರಿ ಗಳು ಏಕೈಕ ಅರ್ಜಿ ಇದ್ದ ಕಾರಣ ಮಂಜೂರು ಮಾಡಿ ಅನುಮೋದನೆಗಾಗಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೆ ಕಳುಹಿಸಿದಾಗ ಅವರು ಕಡತವನ್ನು ಅನುಮೋದನೆ ಮಾಡದೆ ವಾಪಸ್ ಕಳುಹಿಸಿದ್ದರು. ಇಂದಿನವರಾಗಿದ್ದರೆ ತಮ್ಮ ಮಕ್ಕಳ ಅರ್ಜಿ ಇಲ್ಲದಿದ್ದರೂ ಅವರ ಮಕ್ಕಳ ಹೆಸರನ್ನು ಸೇರಿಸುತ್ತಿದ್ದರೋ ಏನೋ? ನೆಹರೂ ಅವರ ಸಂಪುಟದಲ್ಲಿ ರೈಲ್ವೆ ಮಂತ್ರಿ ಗಳಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ರೈಲ್ವೆ ಅಪಘಾತಕ್ಕೆ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಇಂತಹ ರಾಜಕಾರಣಿ ಗಳನ್ನು ಇಂದು ನೋಡಲು ಸಾಧ್ಯವೇ?ಲಾಲ್ ಬಹದ್ದೂರ್ ಶಾಸ್ತ್ರಿಗಳ ನಿಧನದ ತರುವಾಯ ಮೊರಾರ್ಜಿ ದೇಸಾಯಿ ವಿರುದ್ಧ ಶ್ರೀಮತಿ ಇಂದಿರಾಗಾಂಧಿಯವರನ್ನು ಎಳೆದು ತಂದು ಪ್ರಧಾನಮಂತ್ರಿ ಮಾಡಿದವರೇ ಅಂದಿನ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಕರ್ನಾಟಕದ ನಿಜಲಿಂಗಪ್ಪ ಸೇರಿದಂತೆ ಅಂದಿನ ಹಿರಿಯ ಕಾಂಗ್ರೆಸ್ ಮುಖಂಡರುಗಳೇ.
ಅಂದಿನಿಂದ ರಾಷ್ಟ್ರೀಯ ಕಾಂಗ್ರೆಸ್ಸಿಗೆ ಕುಟುಂಬ ರಾಜಕಾರಣದ ಅಪಖ್ಯಾತಿ ಅಂಟಿಕೊಂಡಿತು.

ಅಂದಿನ ಅವಿಭಾಜ್ಯ ಕಾಂಗ್ರೆಸ್ ಪಕ್ಷದ ಅಧಿಕೃತ ರಾಷ್ಟ್ರಪತಿ ಅಭ್ಯರ್ಥಿ ನೀಲಂ ಸಂಜೀವ ರೆಡ್ಡಿ ಅವರ ವಿರುದ್ಧವಾಗಿ ಇಂದಿರಾಗಾಂಧಿಯವರು ಬಂಡಾಯ ಅಭ್ಯರ್ಥಿಯಾಗಿ ವಿ.ವಿ. ಗಿರಿಯವರನ್ನು ನಿಲ್ಲಿಸಿ ಗೆಲ್ಲಿಸಿದ ಪರಿಣಾಮವಾಗಿ ಕಾಂಗ್ರೆಸ್ ಇಬ್ಭಾಗವಾಗಿ ಇಂದಿರಾಗಾಂಧಿಯವರ ಕಾಂಗ್ರೆಸ್ಸಿನಲ್ಲಿ ವ್ಯಕ್ತಿ ಪೂಜೆ ಪ್ರಾರಂಭವಾಗಿ ಕುಟುಂಬ ರಾಜಕಾರಣಕ್ಕೆ ನಾಂದಿಯಾಗಿ ಮೊದಲು ಇಂದಿರಾಗಾಂಧಿ ಪುತ್ರ ಸಂಜಯ ಗಾಂಧಿ, ಅವನ ಮರಣದ ನಂತರ ರಾಜೀವ್ ಗಾಂಧಿ ಸಕ್ರಿಯ ರಾಜಕಾರಣಕ್ಕೆ ಕರೆತಂದು ಕಾಂಗ್ರೆಸ್‌ನಲ್ಲಿ ಕುಟುಂಬ ರಾಜಕಾರಣ ಮತ್ತಷ್ಟು ಬಿಗಿಯಾಯಿತು.

1971ರ ಲೋಕಸಭಾ ಚುನಾವಣೆಯಲ್ಲಿ ಅಖಂಡ ಬಹುಮತ ಗಳಿಸಿ ಪ್ರಧಾನಮಂತ್ರಿಯಾದ ಶ್ರೀಮತಿ ಇಂದಿರಾಗಾಂಧಿ
ಯವರನ್ನು 1975ರಲ್ಲಿ ಅಲಹಾಬಾದ್ ಹೈಕೋರ್ಟ್ ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿದ ಪರಿಣಾಮದಿಂದ ನ್ಯಾಯಾಲಯದ ತೀರ್ಪಿಗೆ ಬೆಲೆ ಕೊಡದೆ ತುರ್ತು ಪರಿಸ್ಥಿತಿಯನ್ನು ಹೇರಿ, ಎಲ್ಲ ವಿರೋಧ ಪಕ್ಷದವರನ್ನು ಜೈಲಿಗೆ ತಳ್ಳಿ, ಜನಸಾಮಾನ್ಯರ ಬದುಕನ್ನು ಹಸನುಗೊಳಿಸುವ ೨೦ ಅಂಶಗಳ ಕಾರ್ಯಕ್ರಮಗಳನ್ನು ಜಾರಿಗೆ ತಂದು, ಸಂವಿಧಾನಕ್ಕೆ
ತಿದ್ದುಪಡಿ ತಂದು 1977ರವರೆವಿಗೂ ಅಧಿಕಾರದಲ್ಲಿ ಮುಂದುವರಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷದ ನಾಯಕನೊಬ್ಬ ಅತಿಯಾದ ವ್ಯಕ್ತಿ. ಪೂಜೆಗೀಡಾದಲ್ಲಿ ಅವನಲ್ಲಿ ಸರ್ವಾಧಿಕಾರತ್ವದ ಮನೋವೃತ್ತಿ ಬೆಳೆದು ಸಂವಿಧಾನವನ್ನೇ ಹೇಗೆ ಬುಡಮೇಲು ಮಾಡಬಲ್ಲನು ಎಂಬುದಕ್ಕೆ ಇಂದಿರಾಗಾಂಧಿಯವರೇ ಜ್ವಲಂತ ಉದಾಹರಣೆ.

ತುರ್ತು ಪರಿಸ್ಥಿತಿ ಹಿಂತೆಗೆದ ನಂತರದ 1977ರ ಲೋಕಸಭಾ ಚುನಾವಣೆಯಲ್ಲಿ ಜಯಪ್ರಕಾಶ್ ನಾರಾಯಣ್ ಅವರ ನೇತೃತ್ವ ದಲ್ಲಿ ಅಂದಿನ ಜನಸಂಘ, ಕಾಂಗ್ರೆಸ್ ಓ, ಇತ್ಯಾದಿ ಹಲವಾರು ಪಕ್ಷಗಳ ಒಗ್ಗೂಡಿಕೆಯಿಂದ ಜನತಾಪಕ್ಷ ಉದಯವಾಗಿ ಅಂದಿನ ಚುನಾವಣೆಯಲ್ಲಿ ಇಂದಿರಾ ಕಾಂಗ್ರೆಸ್ ಅನ್ನು ಸೋಲಿಸಿ, ಮೊರಾರ್ಜಿ ದೇಸಾಯಿ ಅವರ ನೇತೃತ್ವದ ಪ್ರಪ್ರಥಮ ಕಾಂಗ್ರೆಸ್ಸೇತರ ಸರ್ಕಾರವಾದ ಜನತಾ ಪಕ್ಷದ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂತು. ವಿವಿಧ ಪಕ್ಷಗಳ ನಾಯಕರುಗಳಲ್ಲಿದ್ದ ವೈಯಕ್ತಿಕ ಪ್ರತಿಷ್ಠೆ, ವ್ಯಕ್ತಿ ಪೂಜೆ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಂದಾಗಿ ೧೯೭೯ ರಲ್ಲಿ ಕೇಂದ್ರ ಸರ್ಕಾರ ಪತನವಾಯಿತು.

ದುರ್ದೈವವೆಂದರೆ ಬಹುಪಾಲು ಎಲ್ಲ ಪ್ರಾದೇಶಿಕ ಪಕ್ಷಗಳು ಒಂದೊಂದು ಕುಟುಂಬದ, ಜಾತಿಯ ಹಿಡಿತದಲ್ಲಿದ್ದು, ಅವರ ಸ್ಥಿರೀಕರಣಕ್ಕಾಗಿ ಆರ್ಥಿಕ ಸಂಪನ್ಮೂಲ ಗಳಿಕೆಗಾಗಿ ರಾಜಕೀಯ ಭ್ರಷ್ಟಾಚಾರ ಬೆಳೆದು ಅದು ಹಂತ ಹಂತವಾಗಿ ಶಾಸಕಾಂಗ,
ಕಾರ್ಯಾಂಗಗಳಿಗೂ ಕ್ಯಾನ್ಸರ್‌ನಂತೆ ಹರಡಿ ಇಂದು ಮತದಾರರ ಕ್ಷೇತ್ರಕ್ಕೂ ವ್ಯಾಪಕವಾಗಿ ಹರಡಿರುವುದು ಪ್ರಜಾಪ್ರಭುತ್ವದ ಉಳಿವಿಗೆ ಆತಂಕಕಾರಿಯಾಗಿದೆ.