Friday, 13th December 2024

ಕೋವಿಡ್‌ ವ್ಯಾಕ್ಸೀನ್‌ಗಳತ್ತ ಇತ್ತೀಚಿನ ನೋಟ

ವೈದ್ಯ ವೈವಿಧ್ಯ

ಡಾ.ಎಚ್‌.ಎಸ್‌.ಮೋಹನ್‌ 

ಈಗ ಎಲ್ಲಾ ಕಡೆಯೂ ವ್ಯಾಕ್ಸೀನ್‌ಗಳದ್ದೇ ಸುದ್ದಿ. ಹಲವು ಕೋವಿಡ್ ವ್ಯಾಕ್ಸೀನ್‌ಗಳು 3ನೆಯ ಹಂತದ ಟ್ರಯಲ್‌ನ ಅಂತಿಮ
ಘಟ್ಟದಲ್ಲಿವೆ. ಕೆಲವು ವ್ಯಾಕ್ಸೀನ್‌ಗಳು ಈಗಾಗಲೇ ಮನುಷ್ಯರ ಮೇಲೆ ಪ್ರಯೋಗಗೊಂಡೂ ಆಗಿವೆ. ಈ ಹಂತದಲ್ಲಿ ವ್ಯಾಕ್ಸೀನ್‌ಗಳ ಬಗ್ಗೆ ಒಂದು ನೋಟ ಹರಿಸೋಣ.

ಆಕ್ಸರ್ಡ್ ಮತ್ತು ಸ್ಪುಟ್ನಿಕ್ ಟ್ರಯಲ್: ಇಂಗ್ಲೆಂಡ್ ಮತ್ತು ರಷ್ಯಾದ ವಿಜ್ಞಾನಿಗಳು ಆಕ್ಸರ್ಡ್ನ ಆಸ್ಟ್ರಾಜೆನಿಕಾ ಮತ್ತು ರಷ್ಯಾದ ಸ್ಪುಟ್ನಿಕ್ ವಿ ವ್ಯಾಕ್ಸೀನ್ ಗಳನ್ನು ಸಮ್ಮಿಶ್ರಣಗೊಳಿಸಿದರೆ ಪರಿಣಾಮ ಅವುಗಳನ್ನು ಬೇರೆ ಬೇರೆಯಾಗಿ ಕೊಟ್ಟದ್ದಕ್ಕಿಂತ ಜಾಸ್ತಿ ಯಾಗುವುದಾ ಎಂಬ ಪ್ರಯೋಗ ದಲ್ಲಿ ತೊಡಗಿzರೆ. ಒಂದೇ ರೀತಿಯ ಎರಡು ವ್ಯಾಕ್ಸೀನ್‌ಗಳನ್ನು ಸಮ್ಮಿಶ್ರಣಗೊಳಿಸುವು ದರಿಂದ ಅವುಗಳ ಒಟ್ಟಾರೆ ಪರಿಣಾಮ ಜಾಸ್ತಿ ಇರಬಹುದು ಎಂಬ ಒಂದು ಊಹೆ.

ಈ ಬಗೆಗಿನ ಒಂದು ಟ್ರಯಲ್ ರಷ್ಯಾದಲ್ಲಿ 18 ವರ್ಷಕ್ಕಿಂತ ಹೆಚ್ಚಿನವರ ಮೇಲೆ ನಡೆಯುತ್ತಿದೆ ಎನ್ನಲಾಗಿದೆ. ಆಕ್ಸರ್ಡ್ ವ್ಯಾಕ್ಸೀನ್
ತೀರಾ ವಯಸ್ಸಾದವರ ಮೇಲೂ ಪರಿಣಾಮಕಾರಿಯಾದ ಪ್ರತಿರೋಧ ಶಕ್ತಿಯನ್ನು ಉಂಟು ಮಾಡುವುದೇ ಎಂಬ ಬಗ್ಗೆ ಇನ್ನೂ ಪರೀಕ್ಷೆಗಳು ನಡೆಯುತ್ತಿವೆ. ಎರಡು ವ್ಯಾಕ್ಸೀನ್‌ಗಳ ಮಿಶ್ರಣ ಪರಿಣಾಮಕಾರಿಯಾದ ಪ್ರತಿರೋಧ ಶಕ್ತಿ ಉಂಟು ಮಾಡಬಲ್ಲದೇ? ಸಾಮಾನ್ಯವಾಗಿ ಮಾಡಬಲ್ಲವು ಎಂಬುದು ಒಂದು ನಂಬಿಕೆ.

ಮೇಲಿನ ಎರಡೂ ವ್ಯಾಕ್ಸೀನ್‌ಗಳು ಅಪಾಯಕಾರಿ ಅಲ್ಲದ ವೈರಸನ್ನು ಉಪಯೋಗಿಸಿ ತಯಾರಿಸಲ್ಪಟ್ಟವು. ಈ ಅಪಾಯಕಾರಿ ಅಲ್ಲದ ವೈರಸ್‌ಗಳ ಜತೆ ಕರೋನಾ ವೈರಸ್‌ನ ಜೆನೆಟಿಕ್ ಕೋಡ್ ಅನ್ನೂ ಸೇರಿಸಿಕೊಳ್ಳಲಾಗಿದೆ. ಕೆಲವೊಮ್ಮೆ ವ್ಯಾಕ್ಸೀನ್‌ನ ಎರಡನೇ ಡೋಸ್ ಹೆಚ್ಚು ಪರಿಣಾಮಕಾರಿ ಆಗಿರುವುದಿಲ್ಲ. ಹಾಗಾಗಿ ಆಕ್ಸರ್ಡ್ ವ್ಯಾಕ್ಸೀನ್‌ನ ಮೊದಲ ಡೋಸನ್ನು ಅರ್ಧ ಡೋಸ್ ಕೊಟ್ಟು ಎರಡನೇ ಡೋಸನ್ನು ಫುಲ್ ಡೋಸ್ ಕೊಟ್ಟಾಗ ಇದು ಹೆಚ್ಚು ಪರಿಣಾಮಕಾರಿ ಎನ್ನಲಾಗಿದೆ.

ಸ್ಪುಟ್ನಿಕ್ ವಿ ವ್ಯಾಕ್ಸೀನ್ ರಷ್ಯಾದಲ್ಲಿ ಅಭಿವೃದ್ಧಿಯಾದದ್ದು. ಇದರ ಆರಂಭಿಕ ಪರಿಣಾಮಗಳು ಆಶಾಭಾವನೆ ಬೀರಿವೆ. ಅಲ್ಲಿ ಅದನ್ನು ಆಗಸ್ಟ್ ತಿಂಗಳಿನಿಂದಲೇ ಪ್ರಯೋಗಿಸಲಾಗುತ್ತಿದೆ. ಈಗ ಎಲ್ಲಾ ನಾಗರಿಕರಿಗೆ ಮಾಸ್ ವ್ಯಾಕ್ಸಿನೇಷನ್ ಕಾರ್ಯಕ್ರಮದಡಿ
ಕೊಡಲಾಗುತ್ತಿದೆ.

ಚೀನಾದ ವ್ಯಾಕ್ಸೀನ್‌ಗಳು: ಚೀನಾದ ವ್ಯಾಕ್ಸೀನ್‌ಗಳ ಬಗ್ಗೆ ಹೊರ ಜಗತ್ತಿಗೆ ಹೆಚ್ಚು ಮಾಹಿತಿ ಇಲ್ಲ. ಅಲ್ಲಿ ಅದು ಸೈನೋವಾಕ್ ಎಂಬ ವ್ಯಾಕ್ಸೀನ್ ಅಭಿವೃದ್ಧಿಪಡಿಸಿ ಅದರಲ್ಲಿ ಬಹಳ ಮುಂದುವರಿದಿದೆ. ಅಲ್ಲದೆ ಹಲವು ಹೊರ ದೇಶಗಳಿಗೂ ರಫ್ತಾಗುತ್ತಿದೆ. ಹತ್ತಿರದ ಇಂಡೋ ನೇಷ್ಯಾಕ್ಕೆ ಈಗಾಗಲೇ ಚೀನಾದಿಂದ ಹೊರಟ ವ್ಯಾಕ್ಸೀನ್‌ಗಳು ಸದ್ಯದ ಹಡಗಿನಲ್ಲಿ ತಲುಪಲಿವೆ. ಆದರೆ ಈ ವ್ಯಾಕ್ಸೀನ್‌ನ ಅಂತಿಮ ಹಂತದ ಟ್ರಯಲ್‌ನ ವಿವರಗಳು ಸ್ಪಷ್ಟವಾಗಿ ಇನ್ನೂ ಗೊತ್ತಿಲ್ಲ.

ಕರೋನಾ ವಾಕ್‌ನಲ್ಲಿ ಸತ್ತ ವೈರಸ್ ತುಣುಕಿನ ಅಂಶಗಳನ್ನು ಉಪಯೋಗಿಸಿ ದೇಹದಲ್ಲಿ ಪ್ರತಿರೋಧ ಶಕ್ತಿ ಉಂಟು ಮಾಡಲಾಗು ತ್ತದೆ. ಹಾಗೆಯೇ ಮಾಡೆರ್ನಾ ಮತ್ತು ಫೈಜರ್‌ನ ವ್ಯಾಕ್ಸೀನ್‌ಗಳು ಎಂಆರ್ ಎನ್‌ಎ ವ್ಯಾಕ್ಸೀನ್ ಗಳು. ಅಂದರೆ ಇವುಗಳಲ್ಲಿ ಕರೋನಾ ವೈರಸ್‌ನ ಜೆನೆಟಿಕ್ ಕೋಡ್‌ನ ಸ್ವಲ್ಪ ಭಾಗವನ್ನು ದೇಹಕ್ಕೆ ಚುಚ್ಚಿ ದೇಹದಲ್ಲಿ ಪ್ರತಿರೋಧ ಶಕ್ತಿಯನ್ನು ಉಂಟು
ಮಾಡಲಾಗುತ್ತದೆ. ಕರೋನಾ ವಾಕ್ ಹಳೆಯ ರೀತಿಯ ಸಂಪ್ರದಾಯಬದ್ಧ ವ್ಯಾಕ್ಸೀನ್.

ಈಗಾಗಲೇ ಉಪಯೋಗಿಸುತ್ತಿರುವ ರೇಬೀಸ್ ವ್ಯಾಕ್ಸೀನ್ ರೀತಿಯದ್ದು. ಸೈನೋವಾಕ್ ವ್ಯಾಕ್ಸೀನ್‌ನನ್ನು 2-8 ಡಿಗ್ರಿ ಸೆಂಟಿಗ್ರೇಡ್ ಅಂದರೆ ಸಾಮಾನ್ಯ ರೆಫ್ರಿಜಿರೇಟರ್ ನಲ್ಲಿ ಇಟ್ಟರೆ ಸಾಕು. ಇದೊಂದು ದೊಡ್ಡ ಧನಾತ್ಮಕ ಅಂಶ. ಮಾಡೆರ್ನಾ ವ್ಯಾಕ್ಸೀನ್‌ನನ್ನು — 20 ಡಿಗ್ರಿ ಸೆಂಟಿಗ್ರೇಡ್ ಹಾಗೂ ಫೈಜರ್ ವ್ಯಾಕ್ಸೀನ್ — 70 ಡಿಗ್ರಿ ಸೆಂಟಿಗ್ರೇಡ್ನಲ್ಲಿ ಇಡಬೇಕು.

ಹಾಗಾಗಿ ಸೈನೋವಾಕ್ ಮತ್ತು ಆಕ್ಸರ್ಡ್ ಆಸ್ಟ್ರಾ ಜೆನೆಕಾ ವ್ಯಾಕ್ಸೀನ್‌ಗಳು ಬೆಳವಣಿಗೆ ಹೊಂದುತ್ತಿರುವ ಮತ್ತು ಬಡ ದೇಶಗಳಲ್ಲಿ ಹೆಚ್ಚು ಸಹಕಾರಿ ಎನ್ನಲಾಗಿದೆ. ಈ ವ್ಯಾಕ್ಸೀನ್‌ಗಳು ಎಷ್ಟು ಪರಿಣಾಮಕಾರಿ? ಲ್ಯಾನ್ಸೆಟ್ ವೈಜ್ಞಾನಿಕ ಜರ್ನಲ್ ಪ್ರಕಾರ ಕರೋನಾ
ವಾಕ್‌ನ ಮೊದಲ ಮತ್ತು ಎರಡನೇ ಟ್ರಯಲ್‌ನ ವಿವರಗಳು ಮಾತ್ರ ಲಭ್ಯ ಇವೆ. ಅದರಲ್ಲಿ ಪ್ರಕಟವಾದ ಪ್ರಬಂಧದ ಲೇಖಕರ ಪ್ರಕಾರ 144 ಜನರಲ್ಲಿ ಮೊದಲ ಹಂತದ ಟ್ರಯಲ್ ಹಾಗೂ 600 ಜನರಲ್ಲಿ ಎರಡನೇ ಹಂತದ ಟ್ರಯಲ್ ಪ್ರಕಾರ ಈ ವ್ಯಾಕ್ಸೀನ್ ಎಮರ್ಜೆನ್ಸಿ ಉಪಯೋಗಕ್ಕೆ ಯೋಗ್ಯವಾಗಿದೆ.

ಸೆಪ್ಟೆಂಬರ್‌ನಲ್ಲಿ ೧೦೦೦ಕ್ಕೂ ಹೆಚ್ಚು ಜನ ಸ್ವಯಂ ಸೇವಕರಲ್ಲಿ ಪರೀಕ್ಷಿಸಲಾಗಿ ಸಣ್ಣ ರೀತಿಯ ಸುಸ್ತು, ಅಸಹಜ ರೀತಿಯ ಸಮಸ್ಯೆ ಕೆಲವರಲ್ಲಿ ಮಾತ್ರ ಕಂಡು ಬಂದಿದ್ದವು. ಅಕ್ಟೋಬರ್‌ನಲ್ಲಿ ನಂತರದ ಹಂತದ ಟ್ರಯಲ್‌ನಲ್ಲಿ ಒಬ್ಬ ವ್ಯಕ್ತಿ ಮರಣ
ಹೊಂದಿದ ಘಟನೆ ನಡೆಯಿತು. ಆದರೆ ಅದನ್ನು ವಿವರವಾಗಿ ಪರಿಶೀಲಿಸಲಾಗಿ ಆ ಮರಣ ವ್ಯಾಕ್ಸೀನ್‌ಗೆ ಸಂಬಂಧಿಸಿದ್ದಲ್ಲ ಎಂದು ಗೊತ್ತಾಗಿ ನವೆಂಬರ್‌ನಲ್ಲಿ ಟ್ರಯಲ್ ಮುಂದುವರಿಸಲಾಯಿತು. ಈ ಟ್ರಯಲ್‌ನ ವಿವರ ಗಳು ಡಿಸೆಂಬರ್ ಅಂತ್ಯ ಭಾಗದಲ್ಲಿ ಗೊತ್ತಾಗಲಿದೆ.

ಸೈನೋವಾಕ್ ವ್ಯಾಕ್ಸೀನ್‌ನನ್ನು ವರ್ಷದಲ್ಲಿ 300 ಮಿಲಿಯನ್ ಡೋಸ್ ತಯಾರಿಸುವ ಸಾಮರ್ಥ್ಯ ಅಲ್ಲಿನ ಉತ್ಪಾದಕಾ ಘಟಕ ಹೊಂದಿದೆ. ಅದರ 2 ಡೋಸ್‌ಗಳ ಅವಶ್ಯಕತೆ ಇದೆ. ಹಾಗಾಗಿ ಚೀನಾದ 150 ಮಿಲಿಯನ್ ಜನರಿಗೆ ಇದು ಸಾಕಾಗಬಹುದು ಎನ್ನಲಾಗಿದೆ. ಅಂದರೆ ಅಲ್ಲಿನ ಜನಸಂಖ್ಯೆಯ ಶೇ.10ರಷ್ಟು ಬೇಡಿಕೆ ಮಾತ್ರ ಪೂರೈಸಿದ ಹಾಗಾಯ್ತು. ಆದರೆ ಈ ವ್ಯಾಕ್ಸೀನ್‌ನ
ಹಲವಾರು ಡೋಸ್‌ಗಳು ಇಂಡೋನೇಷ್ಯಾಕ್ಕೆ ಕಳಿಸಲಾಗಿದೆ. ಅಲ್ಲದೆ ಬ್ರೆಜಿಲ, ಟರ್ಕಿ ಮತ್ತು ಚಿಲಿ ದೇಶಗಳಿಗೆ ಕಳುಹಿಸುವ ಒಪ್ಪಂದ ಮಾಡಿಕೊಳ್ಳಲಾಗಿದೆ.

ಚೀನಾದ ಈ ವ್ಯಾಕ್ಸೀನ್‌ನ ಬೆಲೆ ಎಷ್ಟು ಎಂಬುದರ ಬಗ್ಗೆ ನಿಖರತೆ ಇಲ್ಲ. ಒಂದು ಅಂದಾಜಿನ ಪ್ರಕಾರ 45 ರಿಂದ 60 ಡಾಲರ್
ಎನ್ನಲಾಗಿದೆ. ಇದು ಆಕ್ಸರ್ಡ್ ವ್ಯಾಕ್ಸೀನ್‌ನ 4 ಡಾಲರ್ ಗಿಂತ ಜಾಸ್ತಿಯಾಗಿದ್ದು ಮಾಡೆರ್ನಾಗಿಂತ ಸ್ವಲ್ಪ ಕಡಿಮೆ ಬೆಲೆ ಎನ್ನ ಲಾಗಿದೆ. ಚೀನಾದಲ್ಲಿ ಒಟ್ಟು 4 ಬೇರೆ ಬೇರೆ ವ್ಯಾಕ್ಸೀನ್‌ಗಳು ಕೊನೆಯ ಹಂತದಲ್ಲಿವೆ. ಸೈನೋ ಫಾರ್ಮಾ ಕಂಪನಿಯ ವ್ಯಾಕ್ಸೀನ್ ಈಗಾಗಲೇ 1 ಮಿಲಿಯನ್ ಚೀನೀ ನಾಗರಿಕರಿಗೆ ಕೊಡಲಾಗಿದೆ ಎನ್ನಲಾಗಿದೆ. ಸೈನೋ ಫಾರ್ಮಾದ ಈ ವ್ಯಾಕ್ಸೀನ್‌ನ ಮೂರನೇ ಹಂತದ ಟ್ರಯಲ್ ನ ವಿವರಗಳು ಇನ್ನೂ ಪ್ರಕಟವಾಗಬೇಕಷ್ಟೆ.

ಚೀನಾದಲ್ಲಿ ಕರೋನಾ ವೈರಸ್ ಹರಡುವಿಕೆ ಸುಮಾರು ಕಡಿಮೆಯಾಗಿದೆ ಮತ್ತು ಅಲ್ಲಿನ ಜನಜೀವನ ಬಹಳಷ್ಟು ಮೊದಲಿನಂತೆ ಸಹಜದತ್ತ ಮುಖ ಮಾಡಿದೆ ಎನ್ನಲಾಗಿದೆ. ಶ್ರೀಮಂತ ದೇಶಗಳು ವ್ಯಾಕ್ಸೀನ್ ಶೇಖರಿಸುತ್ತವೆಯೇ? ಈಗ ವ್ಯಾಕ್ಸೀನ್‌ಗಳ ಬಗ್ಗೆ ಕೇಳಿ ಬರುತ್ತಿರುವ ಇನ್ನೊಂದು ವಿಚಾರ ಎಂದರೆ ಕೆಲವು ಶ್ರೀಮಂತ ದೇಶಗಳು ವ್ಯಾಕ್ಸೀನ್‌ಗಳನ್ನು ದೊಡ್ಡ ಪ್ರಮಾಣದಲ್ಲಿ
ಶೇಖರಿಸಿಡುತ್ತಿವೆ ಎನ್ನಲಾಗುತ್ತಿದೆ. ಹಾಗಾಗಿ ಬಡ ದೇಶಗಳ ನಾಗರಿಕರಿಗೆ ಇವುಗಳು ಸರಿಯಾಗಿ ದೊರಕದಿರುವ ಸಾಧ್ಯತೆ ಇದೆ. ಪೀಪಲ್ಸ ವ್ಯಾಕ್ಸೀನ್ ಅಲೈಯನ್ಸ್ ಎಂಬ ಸಂಸ್ಥೆಯ ಪ್ರಕಾರ 70 ಬಡ ದೇಶಗಳ ನಾಗರಿಕರಲ್ಲಿ ಹತ್ತರಲ್ಲಿ ಒಬ್ಬರಿಗೆ ಮಾತ್ರ ಸದ್ಯ ಈ
ವ್ಯಾಕ್ಸೀನ್‌ಗಳು ಲಭ್ಯವಾಗುತ್ತವೆ. ಆಕ್ಸರ್ಡ್ ಆಸ್ಟ್ರಾ ಜೆನಿಕಾ ವ್ಯಾಕ್ಸೀನ್ ತಯಾರಕರು ತಮ್ಮ ವ್ಯಾಕ್ಸೀನ್‌ನ ಶೇ.64 ಭಾಗವನ್ನು ಬಡ ದೇಶಗಳಿಗೆ ಹಂಚುತ್ತೇವೆ ಎಂದು ವಾಗ್ದಾನ ಮಾಡಿzರೆ. ಆದರೂ ಮೇಲಿನ ಪರಿಸ್ಥಿತಿ ಉಂಟಾಗುತ್ತದೆ ಎನ್ನಲಾಗಿದೆ.

ಹಾಗಾಗಿ ಈ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ. ಒಂದು ಅಂದಾಜಿನ ಪ್ರಕಾರ ಕೋವಾಕ್ಸ್ ಎಂಬ ಒಪ್ಪಂದದ ಪ್ರಕಾರ 700 ಮಿಲಿಯನ್ ಡೋಸ್‌ಗಳನ್ನು 92 ಬಡ ದೇಶಗಳ ನಾಗರಿಕರಿಗೆ ದೊರಕಿಸಲು ಪ್ರಯತ್ನಿಸಲಾಗುತ್ತಿದೆ. ಈಗ ಕೊನೆಯ ಹಂತದಲ್ಲಿ ಇರುವ ಎಲ್ಲಾ ವ್ಯಾಕ್ಸೀನ್‌ಗಳ ಮೂರನೇ ಹಂತದ ಟ್ರಯಲ್‌ನಿಂದ ಸಫಲಗೊಂಡು ಹೊರ ಬಂದರೆ ಶ್ರೀಮಂತ ದೇಶಗಳು ತನ್ನ ನಾಗರಿಕರಿಗೆ ಅಗತ್ಯವಿರುವ 3ರಷ್ಟು ಡೋಸ್ ಕೊಂಡಿವೆ.

ಉದಾಹರಣೆಗೆ ಕೆನಡಾ ದೇಶವು ತನ್ನ ನಾಗರಿಕರಿಗೆ ಅಗತ್ಯವಿರುವ 5ರಷ್ಟು ಡೋಸ್ ವ್ಯಾಕ್ಸೀನ್‌ನನ್ನು ಮುಂಚಿತವಾಗಿ ಕಾದಿರಿಸಿ
ಕೊಂಡಿದೆ. ಶ್ರೀಮಂತ ದೇಶಗಳು ಜಗತ್ತಿನ ಜನಸಂಖ್ಯೆಯ ಶೇ.14ರಷ್ಟು ಜನಸಂಖ್ಯೆಯನ್ನು ಮಾತ್ರ ಹೊಂದಿದ್ದರೂ ಅವು ಶೇ.53 ರಷ್ಟು ವ್ಯಾಕ್ಸೀನ್ ಕೊಂಡು ಇಟ್ಟುಕೊಂಡಿವೆ ಎಂದು ಈಚೆಗಿನ ಸಮೀಕ್ಷೆ ತಿಳಿಸುತ್ತದೆ. ಹಾಗಾಗಿ ಈ ಪರಿಸ್ಥಿತಿಯನ್ನು ಬದಲು ಮಾಡಿದ ಹೊರತು ಜಗತ್ತಿನ ಬಡ ದೇಶಗಳ ಬಹುತೇಕ ನಾಗರಿಕರು ವ್ಯಾಕ್ಸೀನ್ ವಂಚಿತರಾಗುತ್ತಾರೆಯೇ ಎಂಬ ಸಂಶಯ ಪ್ರಬಲ ವಾಗುತ್ತಿದೆ.

ಹಾಗಾಗಿ ಮೇಲೆ ತಿಳಿಸಿದ ಪೀಪಲ್ಸ್ ವ್ಯಾಕ್ಸೀನ್ ಅಲೈಯನ್ಸ್ ಸಂಸ್ಥೆಯು ವ್ಯಾಕ್ಸೀನ್ ಉತ್ಪಾದಿಸಬಲ್ಲ ಎಲ್ಲಾ ಔಷಧ ಕಂಪನಿ ಗಳಿಗೆ ತಮ್ಮ ವ್ಯಾಕ್ಸೀನ್ ತಾಂತ್ರಿಕತೆಯನ್ನು ಎಲ್ಲರೊಡನೆ ಹಂಚಿಕೊಳ್ಳಲು ಮನವಿ ಮಾಡಿಕೊಂಡಿದೆ. ವಿಶ್ವ ಆರೋಗ್ಯ ಸಂಸ್ಥೆಯ ಕೋವಿಡ್ 19 ಟೆಕ್ನಾಲಜಿ ಆಕ್ಸೆಸ್ ಪೂಲ್ ವತಿಯಿಂದ ಇದನ್ನು ಮಾಡಬಹುದು ಎಂದು ಆ ಸಂಸ್ಥೆಯ ಅಭಿಮತ. ಈ  ಅಲೈಯನ್ಸ್ ಸಂಸ್ಥೆಯ ಪ್ರಕಾರ ಮಾಡೆರ್ನಾ ವ್ಯಾಕ್ಸೀನ್‌ನ ಎಲ್ಲಾ ಡೋಸ್‌ಗಳನ್ನು ಫೈಜರ್ನ ಶೇ.94ರಷ್ಟು ಡೋಸ್‌ಗಳನ್ನು ಶ್ರೀಮಂತ ದೇಶ ಗಳು ತಮ್ಮದಾಗಿರಿಸಿಕೊಂಡಿವೆ.

ಇಂಗ್ಲೆಂಡಿನ ಆಕ್ಸರ್ಡ್ ಕಂಪನಿಯು ಜಗತ್ತಿನ ಎಲ್ಲಾ ದೇಶಗಳ ನಾಗರಿಕರಿಗೆ ತನ್ನ ವ್ಯಾಕ್ಸೀನ್‌ಗಳನ್ನು ಲಾಭಾಂಶ ರಹಿತವಾಗಿ ದೊರಕಿಸಲು ಪ್ರಯತ್ನಿಸುತ್ತೇನೆ ಎನ್ನುತ್ತಿದೆ. ಇದು ಬೇರೆ ಎಲ್ಲಾ ವ್ಯಾಕ್ಸೀನ್‌ಗಳಿಗಿಂತ ಕಡಿಮೆ ಬೆಲೆ ಹೊಂದಿದ್ದು ಸಾಮಾನ್ಯ
ಫ್ರಿಡ್ಜ್‌ನ ತಾಪಮಾನದಲ್ಲಿಯೂ ಇರಿಸಬಹುದಾದ್ದರಿಂದ ಎಲ್ಲರಿಗೂ ಸುಲಭವಾಗಿ ಲಭ್ಯವಾಗುವ ವ್ಯಾಕ್ಸೀನ್ ಎನ್ನಲಾಗಿದೆ. ಆದರೂ ಮುಂದಿನ ವರ್ಷದ ಹೊತ್ತಿಗೆ ಇದು ಜಗತ್ತಿನ ಶೇ.೧೮ ಜನರಿಗೆ ಮಾತ್ರ ವ್ಯಾಕ್ಸೀನ್ ಪೂರೈಸಬಲ್ಲದು ಎಂದು ಹೇಳಲಾಗಿದೆ.

ಕೋವಿಡ್‌ನ ಇತ್ತೀಚಿನ ಬೆಳವಣಿಗೆಗಳು: ಕೋವಿಡ್ ಕಾಯಿಲೆ ಉಂಟುಮಾಡುವ ಕರೋನಾ ವೈರಸ್ ನಮಗೆ ಆಗಾಗ ಹೊಸ ಹೊಸ ರೂಪ ತಳೆದು ಹೊಸ ಹೊಸ ವಿಚಾರಗಳನ್ನು ತಿಳಿಸುತ್ತಿದೆ. ಈ ಕಾಯಿಲೆಯಲ್ಲಿ ಕೆಲವೊಂದು ವ್ಯಕ್ತಿಗಳಿಗೆ ಹೆಚ್ಚಿನ ಏನೂ ಲಕ್ಷಣ ಏಕೆ ಇರುವುದಿಲ್ಲ, ಕೆಲವರಲ್ಲಿ ಕಾಯಿಲೆ ತುಂಬಾ ತೀವ್ರತೆ ಪಡೆಯುತ್ತಿದೆ ಏಕೆ? – ಈ ವಿಚಾರ ವಿಜ್ಞಾನಿಗಳಿಗೆ ಬಹಳ
ಸಮಸ್ಯೆ ತಂದೊಡ್ಡಿದೆ. ಇಂಗ್ಲೆಂಡಿನಲ್ಲಿ ಈ ಬಗೆಗೆ ತೀವ್ರ ನಿಗಾ ಘಟಕದಲ್ಲಿರುವ (ICU) 2200 ರೋಗಿಗಳಲ್ಲಿ  ಅಧ್ಯಯನ ಕೈಗೊಳ್ಳ ಲಾಗಿದೆ.

ಅದರಲ್ಲಿ ವಿಜ್ಞಾನಿಗಳಿಗೆ ನಿರ್ದಿಷ್ಟ ಜೀನ್‌ಗಳ ವಿಚಾರ ಗೊತ್ತಾಗಿದೆ. ಇವುಗಳಲ್ಲಿನ ವ್ಯತ್ಯಾಸಗಳು ಈ ರೀತಿಯ ಬೇರೆ ಬೇರೆ ರೀತಿಯಲ್ಲಿ ಕಾಯಿಲೆಯಲ್ಲಿನ ವ್ಯತ್ಯಯಕ್ಕೆ ಕಾರಣ ಎನ್ನಲಾಗಿದೆ.  ವಿಜ್ಞಾನಿಗಳು ಇಂಗ್ಲೆಂಡಿನ 200ಕ್ಕೂ ಹೆಚ್ಚಿನ ತೀವ್ರ ನಿಗಾ
ಘಟಕ ಗಳಲ್ಲಿನ ರೋಗಿಗಳ ಡಿಎನ್‌ಎಯನ್ನು ಪರೀಕ್ಷೆಗೆ ಒಡ್ಡಿದರು. ಅದರಲ್ಲಿನ ಜೀನ್‌ಗಳನ್ನು ವಿವರವಾಗಿ ಸ್ಕ್ಯಾನ್ ಮಾಡಲಾ ಯಿತು.

ಆರೋಗ್ಯವಂತ ವ್ಯಕ್ತಿಗಳ ಜೀನ್‌ಗಳೊಂದಿಗೆ ಇವುಗಳನ್ನು ಹೋಲಿಸಲಾಯಿತು. ಕಾಯಿಲೆಯ ವ್ಯಕ್ತಿಗಳ ಜೀನ್‌ನಲ್ಲಿನ ಕೆಲವು ಪ್ರತಿರೋಧ ಜೀವಕೋಶಗಳು ಹೆಚ್ಚು ಸಿಟ್ಟಿಗೆ ಒಳಗಾಗಿ ಕಾಯಿಲೆ ತೀವ್ರಗೊಳ್ಳಲು ಕಾರಣ ಎನ್ನಲಾಗಿದೆ. ಈ ಹಂತದಲ್ಲಿ ಕೆಲವೊಂದು ಔಷಧಗಳು – ಆಂಟಿ ಇಫ್ಲಮೇಟರಿ ಔಷಧಗಳು ಉಪಯೋಗವಾಗುತ್ತವೆ ಎನ್ನಲಾಗಿದೆ. ಅವುಗಳಲ್ಲಿ ಅವರು ಪ್ರಯತ್ನಿಸಿದ ಇತ್ತೀಚಿನ ಔಷಧ ಎಂದರೆ ಬಾರಿಸಿಟಿನಿಬ್‌.

ಇದು ಇಂತಹ ರೋಗಿಗಳಲ್ಲಿ ಉಪಯೋಗವಾಗುತ್ತದೆ ಎನ್ನಲಾಗಿದೆ. ಆದರೆ ಇನ್ನೂ ದೊಡ್ಡ ಮಟ್ಟದ ಕ್ಲಿನಿಕಲ್ ಟ್ರಯಲ್ ಈ ದಿಸೆಯಲ್ಲಿ ಅಗತ್ಯ ಎನ್ನಲಾಗಿದೆ. ತೀವ್ರ ನಿಗಾ ಘಟಕದ ರೋಗಿಗಳ ಐಎಫ್‌ಎನ್‌ಎಆರ್ 2 ಜೀನ್ ನಲ್ಲಿ ಹಲವು ಬದಲಾವಣೆಗಳು ಕಂಡು ಬಂದವು. ವೈರಸ್ ವಿರುದ್ಧ ವಸ್ತುವಾದ ಇಂಟರ್ ಫೆರಾನ್ ಈ ಜೀನ್ ಜತೆಗೆ ಸಂಬಂಧ ಹೊಂದಿದೆ. ದೇಹದಲ್ಲಿ ಸೋಂಕು ಕಂಡ ಕೂಡಲೇ ಈ ಇಂಟರ್ ಫೆರಾನ್ ದೇಹದ ಪ್ರತಿರೋಧ ವ್ಯವಸ್ಥೆಯನ್ನು ಎಚ್ಚರಿಸಿ ಕ್ರಮ ಕೈಗೊಳ್ಳುವಂತೆ ಪ್ರೇರೇಪಿಸುತ್ತದೆ. ಬಹಳ ಕಡಿಮೆ ಪ್ರಮಾಣದ ಇಂಟರ್ ಫೆರಾನ್ ಜೀವಕೋಶದಲ್ಲಿ ಕಂಡು ಬಂದರೆ ಅದು ಕರೋನಾ ವೈರಸ್‌ಗೆ ಪೂರಕವಾದ ವಾತಾವರಣವಾಗಿ ಪರಿಣಮಿಸಿ ವೈರಸ್ ತನ್ನ ಸಂತತಿಯನ್ನು ಗಮನಾರ್ಹವಾಗಿ ವೃದ್ಧಿಸಲು ಆರಂಭಿಸುತ್ತದೆ.

ಪರಿಣಾಮ ಎಂದರೆ ಕಾಯಿಲೆ ತೀವ್ರ ಮಟ್ಟವನ್ನು ತಲುಪುತ್ತದೆ. ಇತ್ತೀಚಿನ ಸೈನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಎರಡು ಅಧ್ಯಯನ
ಗಳು ಸಹಿತ ಕೋವಿಡ್ ಕಾಯಿಲೆಯಲ್ಲಿ ಇಂಟರ್ ಫೆರಾನ್‌ನ ಮಹತ್ವವನ್ನು ಎತ್ತಿ ತೋರಿಸುತ್ತವೆ. ನ್ಯೂಯಾರ್ಕ್‌ನ ರಾಕ್ ಫೆಲರ್ ವಿಶ್ವ ವಿದ್ಯಾನಿಲಯದ ಪ್ರೊ.ಜೀನ್ ಲಾರೆಂಟ್ ಕ್ಯಾಸನೋವಾ ಹಲವು ಅಧ್ಯಯನ ಕೈಗೊಂಡ ನಂತರ ಈ ರೀತಿ ಅಭಿಪ್ರಾಯ
ಪಡುತ್ತಾರೆ – ಅತೀವ ಕೊನೆಯ ಹಂತದ ಕೋವಿಡ್ ರೋಗಿಗಳ ಈ ಹಂತಕ್ಕೆ ಇಂಟರ್ ಫೆರಾನ್ ಶೇ.15ರಷ್ಟು ರೋಗಿಗಳಲ್ಲಿ ಕಾರಣ ವಾಗುತ್ತದೆ ಎಂದು.

ಹಾಗಾಗಿ ಇಂಟೆರ್ ಫೆರಾನ್ ಈ ರೀತಿಯ ರೋಗಿಗಳಲ್ಲಿ ಚಿಕಿತ್ಸೆಗೆ ಸ್ಪಂದಿಸುತ್ತದೆಯೇ ಎಂಬುದನ್ನು ಪ್ರಯತ್ನಿಸಲಾಗಿದೆ. ಆದರೆ ತುಂಬಾ ತೀವ್ರತಮ ರೋಗಿಗಳಲ್ಲಿ ಇದು ಕಾಯಿಲೆ ಕಡಿಮೆ ಮಾಡಲು ಸಹಾಯ ಮಾಡಲಿಲ್ಲ ಎನ್ನಲಾಗಿದೆ. ಆದರೆ ಮೇಲಿನ ಪ್ರೊಫೆಸರ್ ಪ್ರಕಾರ ಇದನ್ನು ಯಾವಾಗ ಕೊಡಬೇಕು ಎಂಬುದು ಮುಖ್ಯ ಎನ್ನುತ್ತಾರೆ.

ಇದನ್ನು ಅವರ ಪ್ರಕಾರ ಸೋಂಕು ಉಂಟಾದ ಮೊದಲ 2,3,4 ದಿನಗಳಲ್ಲಿ ಕೊಟ್ಟರೆ ಪರಿಣಾಮ ಒಳ್ಳೆಯದು. ಲಂಡನ್‌ನ ಇಂಪೀರಿಯಲ್ ಕಾಲೇಜಿನ ಜೆನೆಟಿಕ್ ತಜ್ಞ ಡಾ.ವನೆಸ್ಸಾ ಶಾಂಕೋ ಶಿಮಿಜು ಅವರ ಜೆನೆಟಿಕ್ ಸಂಶೋಧನೆಯ ವಿವರಗಳು ಕರೋನಾ ಕಾಯಿಲೆಯ ಜೀವ ವಿಜ್ಞಾನದ ಬಗೆಗೆ ಅತೀ ಸೂಕ್ಷ್ಮ ವಿವರಗಳನ್ನು ಒದಗಿಸುತ್ತಿದೆ. ಕಾಯಿಲೆಯ ಯಾವ ಹಂತದಲ್ಲಿ ಎಲ್ಲಿ ನಮ್ಮ ದೇಹದ ರಕ್ಷಣೆ ತಪ್ಪುತ್ತದೆ ಎಂಬುದರ ಬಗೆಗೆ ವಿವರ ಒದಗಿಸುವ ಸ್ಪಷ್ಟತೆಯ ವಿಜ್ಞಾನ ಎನ್ನುತ್ತಾರೆ ಅವರು. ಈ ರೀತಿಯ ಸ್ಪಷ್ಟ ತಿಳಿವಳಿಕೆ ಕಾಯಿಲೆಯ ನಿಖರ ಮಾರ್ಗ ತೋರಿಸುವುದರಿಂದ ಅದಕ್ಕೆ ಅನುಗುಣವಾಗಿ ನಿರ್ದಿಷ್ಟ ಚಿಕಿತ್ಸೆ ರೂಪಿಸುವಲ್ಲಿ ಇದು ಮಹತ್ತರ ಪಾತ್ರ ವಹಿಸುತ್ತದೆ ಎಂದು ಅವರ ಅಭಿಮತ.