ನಾಡಿಮಿಡಿತ
ವಸಂತ ನಾಡಿಗೇರ
ಬಡವ ನೀ ಮಡಗ್ದಂಗಿರು, ಬಡವನ ಕೋಪ ದವಡೆಗೆ ಮೂಲ – ಎಂಬಿತ್ಯಾದಿ ಮಾತುಗಳನ್ನು ನಾವು ಕೇಳಿದ್ದೇವೆ. ಕರೋನಾ
ವಿಚಾರದಲ್ಲಂತೂ ಈ ಮಾತು ನಿಜವಾಗಿದೆ. ಹಾಗೆ ನೋಡಿದರೆ ಈ ಮಹಾಮಾರಿ ಬಡವ ಬಲ್ಲಿದ, ಹಿರಿಕಿರಿಯರೆನ್ನದೆ ಎಲ್ಲರನ್ನೂ ಬಾಧಿಸಿದೆ. ಆದರೆ ಬಡವರು ಅದರ ಹೊಡೆತಕ್ಕೆ ತತ್ತರಿಸಿ ಹೋಗಿದ್ದಾರೆ.
ಹೆಚ್ಚು ಸಂತ್ರಸ್ತ ರಾಗಿದ್ದಾರೆ. ಕೆಲಸವಿಲ್ಲದೆ, ಕಾಸಿಲ್ಲದೆ ತುತ್ತು ಅನ್ನಕ್ಕೂ ಪರದಾಡಬೇಕಾಯಿತು. ಉಪಾಯಗಾಣದೆ ಊರಿಗೆ
ವಾಪಸ್ ಹೋಗೋಣವೆಂದರೆ ನೂರೆಂಟು ಅಡ್ಡಿ ಆತಂಕಗಳು. ವೈರಸ್ ಹರಡುವುದನ್ನು ನಿಯಂತ್ರಿಸಲು ಸರಕಾರವೇನೋ ಲಾಕ್‌ಡೌನ್ ಇತ್ಯಾದಿ ಕಠಿಣ ಕ್ರಮಗಳನ್ನು ಕೈಗೊಂಡಿತು. ಇದನ್ನು ಅನಿವಾರ್ಯ ವಾಗಿಯಾದರೂ ಎಲ್ಲರೂ ಒಪ್ಪಿಕೊಂಡರು. ಕೋವಿಡ್‌ಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲದ ಕಾರಣ ಸಾಮಾಜಿಕ ಅಂತರ, ವ್ಯಾಪಾರ ವಹಿವಾಟು ಬಂದ್ ಇತ್ಯಾದಿಗಳನ್ನು
ಕಟ್ಟುನಿಟ್ಟಾಗಿ ಜಾರಿಗೊಳಿಸಲಾಯಿತು.
ಇದರ ನೇರ ಪರಿಣಾಮ ಉಂಟಾಗಿದ್ದು ಮತ್ತದೇ ಬಡವರಿಗೆ. ಅವರಿಗೆ ಆ ಪ್ಯಾಕೇಜ್, ಈ ಪ್ಯಾಕೇಜ್ ಎಂದೆಲ್ಲಾ ಏನೇನೋ
ಘೋಷಣೆಗಳನ್ನು ಮಾಡಲಾಯಿತು. ಆದರೆ ಅದರಿಂದ ಯಾರಿಗೆ ಎಷ್ಟು ಲಾಭವಾಯಿತೋ ಗೊತ್ತಿಲ್ಲ. ಬದುಕು ಹಳಿತಪ್ಪಿದ್ದು, ಹದಗೆಟ್ಟಿದ್ದು ಮಾತ್ರ ಹೌದು. ಇದೆಲ್ಲದರ ನಡುವೆಯೇ ತುರ್ತಾಗಿ ಕರೋನಾ ಲಸಿಕೆ ಯನ್ನು ಅಭಿವೃದ್ಧಿಪಡಿಸುವ ಕಾರ್ಯ ಚುರುಕಿನಿಂದ ನಡೆಯಿತು. ಸದ್ಯಕ್ಕೆ ಎರಡು ಲಸಿಕೆಗಳೂ ಬಂದಿವೆ. ಆದರೆ ಅದನ್ನು ವಿತರಿಸುವುದೇ ಈಗ ಭಾರಿ ಸಮಸ್ಯೆ ಮತ್ತು
ದೊಡ್ಡ ತಲೆನೋವು ತಂದಿದೆ.
130 ಕೋಟಿ ಜನಸಂಖ್ಯೆಯುಳ್ಳ, ಭಾರತದಂಥ ದೊಡ್ಡ ದೇಶದಲ್ಲಿ ಇದು ಸವಾಲಿನ ಕೆಲಸವೇ. ಮೊದಲನೆಯದಾಗಿ ಲಸಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುವುದು. ಅನಂತರ ಅದರ ಸಾಗಣೆ ಮತ್ತು ಅದರ ಸಂರಕ್ಷಣೆ. ಮೂರನೆಯದು
ಅದನ್ನು ಜನರಿಗೆ ವಿತರಿಸುವುದು, ಅಂದರೆ ಲಸಿಕೆ ಹಾಕುವುದು. ಇದು ಭಗೀರಥ ಪ್ರಯತ್ನ ಎಂಬುದರ ಅರಿವಾಗುತ್ತಲೇ ಮೊದಲೇ ಹಲವು ನಿರ್ಬಂಧಗಳನ್ನು ವಿಧಿಸಲಾಯಿತು.
ಮೊದಲ ಹಂತದಲ್ಲಿ ವೈದ್ಯರು, ಆರೋಗ್ಯ ಸಿಬ್ಬಂದಿ, ಪೊಲೀಸರು ಮತ್ತಿತರ, ಕರೋನಾ ವಾರಿಯರ್‌ಗಳು ಎಂದು ಕರೆಯಲಾಗುವ ಮುಂಚೂಣಿ ಕಾರ್ಯಕರ್ತರಿಗೆ ಮಾತ್ರ ಲಸಿಕೆ ಕೊಡಲು ನಿರ್ಧರಿಸಲಾಯಿತು. ಸಂಕ್ರಾಂತಿಯಿಂದ ಈ ಅಭಿಯಾನವನ್ನು ಭಾರಿ ಪ್ರಚಾರ ದೊಂದಿಗೆ ಆರಂಭಿಸಲಾಯಿತು. ಆದರೆ ಇದರ ನಡುವೆಯೇ ಲಸಿಕೆಯ ಅಡ್ಡಪರಿಣಾಮ ಇತ್ಯಾದಿಗಳ ಬಗೆಗೆ ಅನುಮಾನ, ಅಪಸ್ವರ ಕೇಳಿಬಂದ ಹಿನ್ನೆಲೆಯಲ್ಲಿ, ಲಸಿಕೆ ಪಡೆಯಲು ಈ ವಾರಿಯರ್‌ಗಳೇ ಹಿಂಜರಿಯ ತೊಡಗಿದರು.
ಜನಸಾಮಾನ್ಯರಿಗೂ ಲಸಿಕೆ ನೀಡುವ ಕಾರ್ಯಕ್ರಮ ಇದೀಗ ಮಾರ್ಚ್‌ನಿಂದ ಶುರುವಾಗಿದೆ. ಪ್ರಧಾನಿಯವರೇ ಲಸಿಕೆ ಹಾಕಿಸಿ ಕೊಂಡು ಜನರಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸ ತುಂಬಿದ್ದಾರೆ. ಕೇಂದ್ರದ ಅನೇಕ ಸಚಿವರು, ಗಣ್ಯರೂ ಕೂಡ ಹಾಕಿಸಿಕೊಂಡಿ ದ್ದಾರೆ. ಇಷ್ಟೆಲ್ಲ ಆಗಿಯೂ ಈ ಕಾರ್ಯಕ್ರಮಕ್ಕೆ ಅದೇಕೋ ನೀರಸ ಪ್ರತಿಕ್ರಿಯೆ ಕಂಡುಬರುತ್ತಿದೆ. ಏಕೆ ಹೀಗೆ ಎಂದು ನೋಡಿದಾಗ ಈ ಕಾರ್ಯಕ್ರಮ ರೂಪಿಸುವಲ್ಲಿ ಕಂಡುಬಂದಿರುವ ಒಂದಷ್ಟು ಮುಂದಾಲೋಚನೆಯ ಕೊರತೆ ಇದಕ್ಕೆ ಕಾರಣ ಎನಿಸುತ್ತಿದೆ.
ಕೆಂದರೆ ಲಸಿಕೆ ಪಡೆಯುವುದು ಅಷ್ಟು ಸುಲಭವಲ್ಲ. ಸರಕಾರಿ ಆಸ್ಪತ್ರೆ ಗಳಲ್ಲಿ ಇದು ಉಚಿತ. ಖಾಸಗಿ ಆಸ್ಪತ್ರೆಗಳಲ್ಲಿ 250 ರು. ಶುಲ್ಕವಿದೆ. ಉತ್ಸಾಹಿಗಳು, ಹಣಕಾಸಿನ ಅನುಕೂಲ ಇರುವವವರು ಖಾಸಗಿ ಆಸ್ಪತ್ರೆ ಮತ್ತಿತರ ಕಡೆ ಹೋಗಿ ಹಣ ಕೊಟ್ಟು ಲಸಿಕೆ ಪಡೆಯುತ್ತಾರೆ. ಆದರೆ ಬಡವರು ಸರಕಾರಿ ಆಸ್ಪತ್ರೆಗಳಿಗೇ ಹೋಗಬೇಕಾಗುತ್ತದೆ. ಅಲ್ಲದೆ ಅದಕ್ಕೆ ಬಗೆಬಗೆಯ ಕ್ರಮಗಳನ್ನು ಅನುಸರಿಸ ಬೇಕಾಗುತ್ತದೆ. ಉದಾಹರಣೆಗೆ ಹೆಸರು ನೋಂದಾಯಿಸಬೇಕು. ಇದಕ್ಕಾಗಿ ನಿಮ್ಮ ಬಳಿ ಸ್ಮಾರ್ಟ್ ಫೋನ್ ಇರಬೇಕು; ಆಧಾರ್ ಕಾರ್ಡ್ ಹೊಂದಿರಬೇಕು ಇತ್ಯಾದಿ ಇತ್ಯಾದಿ.
ಜನರು ಹಿಂಜರಿಯಲು ಇದೂ ಒಂದು ಕಾರಣ. ಬಡವರು, ಅನಕ್ಷರಸ್ಥರಿಗೆ ಇವೆಲ್ಲವನ್ನೂ ಎಲ್ಲಿ ಮಾಡಲಾಗುತ್ತದೆ. ಎಷ್ಟು ಜನರ ಬಳಿ ಸ್ಮಾರ್ಟ್ ಫೋನ್‌ಗಳಿವೆ ಎಂಬುದು ಯಾರಿಗೆ ಗೊತ್ತು? ಆಧಾರ್ ಕಾರ್ಡ್ ಇಲ್ಲದವರು ಏನು ಮಾಡಬೇಕು? ಅಲ್ಲದೆ ಇವೆಲ್ಲವನ್ನು ಆನ್‌ಲೈನ್‌ನಲ್ಲಿ ಮಾಡಬೇಕಾಗುತ್ತದೆ. ಆ ಜ್ಞಾನ ಎಷ್ಟು ಮಂದಿಗೆ ಇರುತ್ತದೆ? ಇದಕ್ಕಾಗಿ ಅವರು ಇನ್ನೊಬ್ಬನ್ನು ಅವಲಂಬಿಸಬೇಕಾಗುತ್ತದೆ. ಇಲ್ಲವೆ ಸೈಬರ್ ಸೆಂಟರ್‌ಗಳ ಮೊರೆ ಹೋಗಬೇಕಾಗುತ್ತದೆ.
ಇದೆಲ್ಲ ಜಂಜಾಟವೇ ಬೇಡ ಎಂದು ಈ ಜನರು ಸುಮ್ಮನಾಗುವುದುಂಟು. ಈಗ ಆಗುತ್ತಿರುವುದೂ ಅದೇ. ಇದೇ ಕಾರಣಕ್ಕೆ ಲಸಿಕೆ
ನೀಡಿಕೆಯು ಒಂದು ರೀತಿ ವರ್ಗವಿಭಜನೆಗೆ ಕಾರಣವಾಗಿದೆ. ಅಂದರೆ ಉಳ್ಳವರು. ತಿಳಿವಳಿಕೆ ಇರುವರು ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪಡೆಯುತ್ತಿದ್ದಾರೆ. ಬಡವರು, ಅನಕ್ಷರಸ್ಥರು ಇದರಿಂದ ಹೊರಗುಳಿಯು ತ್ತಿದ್ದಾರೆ. ಲಸಿಕೆ ಪಡೆದ ಫೋಟೊ, ಸೆಲ್ಫಿಗಳನ್ನು ಈಗ ವಾಟ್ಸಾಪ್,ಪೋಸ್ ಬುಕ್‌ಗಳಲ್ಲಿ ನೋಡುತ್ತೇವೆ. ಅದರಲ್ಲಿ ಎಲ್ಲರೂ ಸುಶಿಕ್ಷಿತರು, ಸ್ಥಿತಿವಂತರೇ. ಬಡವರ ಒಂದು
ಫೋಟೊವನ್ನೂ ನೋಡಿದ ನೆನಪು ಇಲ್ಲ.
ಇವೆಲ್ಲದರ ನಡುವೆ ನಮ್ಮ ದೇಶದಲ್ಲಿ ಲಸಿಕೆ ನೀಡಿಕೆಯ ಪ್ರಗತಿ (ಅಥವಾ ವಿಗತಿ?) ಕುರಿತಂತೆ ಒಂದಷ್ಟು ಅಂಕಿ ಅಂಶಗಳನ್ನು ನೋಡೋಣ. ಸದ್ಯದ ಲೆಕ್ಕದ ಪ್ರಕಾರ, ಭಾರತದಲ್ಲಿ ಸುಮಾರು ಒಂದು ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಜನವರಿ 16ರಿಂದ ಅಭಿಯಾನ ಆರಂಭ ವಾಗಿರುವ ಲೆಕ್ಕ ತೆಗೆದುಕೊಂಡರೆ ತಿಂಗಳಿಗೆ ಸರಾಸರಿ 50 ಲಕ್ಷ ಆಯಿತು. ಈ ವೇಗದಲ್ಲಿ ಜುಲೈ ಹೊತ್ತಿಗೆ ಹೆಚ್ಚೆಂದರೆ 3 ಕೋಟಿ ಆಗಬಹುದು. ಆದರೆ ಗುರಿ ಇರುವುದು 25 ಕೋಟಿ. ಇತರ ದೇಶಗಳಿಗೆ ಹೋಲಿಕೆ ಮಾಡಿದರೂ ನಮ್ಮ
ರೆಕಾರ್ಡ್ ಚೆನ್ನಾಗಿಲ್ಲ.
ಉದಾಹರಣೆಗೆ ಅಮೆರಿಕದಲ್ಲಿ ಇದುವರೆಗೆ 5 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ನಮಗಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾ ದೇಶವು 4 ಕೋಟಿ ಯೊಂದಿಗೆ ಎರಡನೇ ಸ್ಥಾನದಲ್ಲಿದೆ. ಬ್ರಿಟನ್‌ನಲ್ಲಿ ಈ ಸಂಖ್ಯೆ 1.5 ಕೋಟಿ. ಪ್ರತಿ ನೂರು ಜನರಿಗೆ ಲಸಿಕೆ ಹಾಕಿದವರ ಪ್ರಮಾಣವನ್ನೂ ನೋಡೋಣ. ಇಸ್ರೇಲ್ 100!. ಪ್ರತಿ ನೂರು ಮಂದಿಯ ಪೈಕಿ 36 ಜನರಿಗೆ ಲಸಿಕೆ ನೀಡುವ ಮೂಲಕ ಬ್ರಿಟನ್ ನಾಲ್ಕನೇ ಸ್ಥಾನದಲ್ಲಿದೆ. ಅಮೆರಿಕ ಪ್ರತಿ ನೂರರಲ್ಲಿ 28 ನಾಗರಿಕರಿಗೆ ಲಸಿಕೆ ವಿತರಿಸಿದೆ. ಆದರೆ ಭಾರತದಲ್ಲಿ ಈ ಸಂಖ್ಯೆ 2ಕ್ಕಿಂತ ಕಡಿಮೆ. ನಿಖರವಾಗಿ ಹೇಳಬೇಕೆಂದರೆ 1.9 ಅಂದರೆ, ನಮ್ಮ ದೇಶದಲ್ಲಿ ಪ್ರತಿ ನೂರು ನಾಗರಿಕರ ಪೈಕಿ
ಈ ತನಕ ಕೇವಲ ಇಬ್ಬರಿಗೆ ಲಸಿಕೆ ನೀಡಲಾಗಿದೆ. ಅಥವಾ ಅವರು ತೆಗೆದುಕೊಂಡಿದ್ದಾರೆ.
ನೂರು ದೇಶಗಳ ಪಟ್ಟಿ ತೆಗೆದುಕೊಂಡರೆ ಭಾರತ 96ನೇ ಸ್ಥಾನದಲ್ಲಿರಬಹುದು. ಹಾಗೆಂದು ನಮ್ಮಲ್ಲಿ ಏನು ಕೊರತೆಯಾಗಿದೆ? ಅಂಕಿ ಅಂಶಗಳ ಪ್ರಕಾರ ಏನೂ ಇಲ್ಲ. ಏಕೆಂದರೆ ಸರಕಾರವು ಲಸಿಕೆಗಾಗಿ 35 ಸಾವಿರ ಕೋಟಿ ರು. ಗಳನ್ನು ತೆಗೆದಿರಿಸಿದೆ. ಎರಡು ಲಸಿಕೆಗಳ ಬಳಕೆಗೆ ಅನುಮತಿ ನೀಡಿದೆ. ಲಸಿಕೆ ಉತ್ಪಾದನೆ, ಖರೀದಿ, ವಿತರಣೆ, ಸಂಗ್ರಹ ಎಲ್ಲವನ್ನೂ ವ್ಯವಸ್ಥೆ ಬದ್ಧಗೊಳಿಸ ಲಾಗಿದೆ. ಹಾಗೆ ನೋಡಿದರೆ ಭಾರತವನ್ನು ‘ವಿಶ್ವದ ಔಷಧಾಲಯ’ ಎಂದು ಕರೆಯಲಾಗುತ್ತದೆ. ಅಂದರೆ ಔಷಧ ಉತ್ಪಾದನೆಯಲ್ಲಿ ಭಾರತವೇ ಅಗ್ರಗಣ್ಯ. ಈಗ ಕರೋನಾ ಲಸಿಕೆ ಉತ್ಪಾದನೆಯಲ್ಲೂ ಆ ಹೆಗ್ಗಳಿಕೆಯನ್ನು ಕಾಯ್ದುಕೊಂಡಿದೆ.
ನಿಜ ಹೇಳಬೇಕೆಂದರೆ ಭಾರತವು ಅನೇಕಾನೇಕ ದೇಶಗಳಿಗೆ ಲಸಿಕೆಯನ್ನು ಉಚಿತವಾಗಿ ನೀಡಿದೆ. ಅಥವಾ ಬೇಡಿಕೆಗೆ ಅನುಗುಣ ವಾಗಿ ಪೂರೈಕೆ ಮಾಡಿದೆ. ಇದಕ್ಕಾಗಿ ಅಪಾರ ಶ್ಲಾಘನೆಯೂ ವ್ಯಕ್ತವಾಗಿದೆ. ಬ್ರೆಜಿಲ್ ಅಧ್ಯಕ್ಷರು ಭಾರತದ ಕರೋನಾ ಲಸಿಕೆಯನ್ನು ‘ಹನುಮಂತ ಸಂಜೀವಿನಿ ತಂದಂತೆ’ ಎಂದು ಬಣ್ಣಿಸಿದ್ದಾರೆ. ಅಷ್ಟರ ಮಟ್ಟಿಗೆ ಜಾಗತಿಕ ಮಟ್ಟದಲ್ಲಿ ಭಾರತದ ಹೆಸರು ರಾರಾಜಿಸುತ್ತಿದೆ. ಇಡೀ ಜಗತ್ತಿಗೇ ಕರೋನಾ ಲಸಿಕೆ ಕೊಟ್ಟ ಭಾರತ ಎಂದು ನಾವು ಹೆಮ್ಮೆ ಪಡುತ್ತಿದ್ದೇವೆ. ತೊಂದರೆ
ಏನೂ ಇಲ್ಲ. ಅದೂ ಒಳ್ಳೆಯ ಕೆಲಸವೇ. ಆದರೆ ನಮ್ಮ ಹಿತವನ್ನೂ ನೋಡಿಕೊಳ್ಳಬೇಕಲ್ಲವೆ? ದೇಶದಲ್ಲಿ ಈ ಯಾವ ಲಕ್ಷಣಗಳೂ ಕಾಣುತ್ತಿಲ್ಲ.
ಲಸಿಕೆ ನೀಡಿಕೆಯಲ್ಲಿ ನಮ್ಮಲ್ಲಿ ಸಾಕಷ್ಟು ವಿಪರ್ಯಾಸಗಳು, ವೈರುಧ್ಯಗಳು ಕಂಡು ಬರುತ್ತಿವೆ. ವಿವಾದಗಳು, ವಿಷಾದಗಳೇ ಎದ್ದು
ತೋರುತ್ತಿವೆ. ನಮ್ಮಲ್ಲಿ ಎಲ್ಲವೂ ರಾಜಕೀಯ ಬಣ್ಣ ಪಡೆಯುವುದು ಬಹುದೊಡ್ಡ ಸಮಸ್ಯೆ. ಲಸಿಕೆ ವಿಚಾರ ಬಂದಾಗ ಮೊದಲು ಕರೋನಾ ವಾರಿಯರ್ಸ್‌ಗೆ ಎಂಬ ನಿರ್ಧಾರವನ್ನು ಸರಕಾರ ಕೈಗೊಂಡಾಗ ಪ್ರಧಾನಿ ಮೊದಲು ಏಕೆ ಪಡೆಯಲಿಲ್ಲ? ಎಂದು ಪ್ರತಿಪಕ್ಷಗಳು ಟೀಕಿಸಿದ್ದಾಯಿತು. ಈಗ ಲಸಿಕೆ ಕಾರ್ಯಕ್ರಮವನ್ನು ಸಾರ್ವಜನಿಕರಿಗೆ ವಿಸ್ತರಿಸುತ್ತಲೇ ಪ್ರಧಾನಿಯವರು ಲಸಿಕೆ
ಪಡೆದಿದ್ದಾರೆ. ಮೊದಲು ವಿರೋಧಿಸಿದವರು ಈಗ ಬೆನ್ನುತಟ್ಟಬಹುದಿತ್ತಲ್ಲವೆ? ಅಥವಾ ತಾವೂ ಲಸಿಕೆ ಪಡೆಯುವ ಮೂಲಕ ಮೇಲ್ಪಂಕ್ತಿ ಹಾಕಬಹುದಿತ್ತು.
ಆದರೆ ಅಗ್ರಪಂಕ್ತಿಯ ಎಷ್ಟು ವಿಪಕ್ಷ ನಾಯಕರು ಕೋವಿಡ್ ಲಸಿಕೆ ಪಡೆದಿದ್ದಾರೆ ಹೇಳಿ? ಅಂದರೆ ಆರೋಪಕ್ಕಾಗಿ, ಆರೋಪ; ಟೀಕೆಗಾಗಿ ಟೀಕೆ ಅಷ್ಟೆ. ಕೋವಿಡ್ ಲಸಿಕೆಗೆ ಭಾರಿ ಡಿಮಾಂಡ್ ಇರುತ್ತದೆ ಎಂದು ಸರಕಾರ ಮೊದಲು ಭಾವಿಸಿದ್ದೇ ತಪ್ಪಾಯಿ ತೇನೊ. ಹೀಗಾಗಿ ಮೊದಲು ವಾರಿಯರ್‌ಗಳಿಗೆ ಮೀಸಲು ಎಂದು ಪ್ರಕಟಿಸಿತು. ಈ ವಾರಿಯರ್‌ಗಳು ಬೇರೆ ಯಾರೂ ಅಲ್ಲದೆ ವೈದ್ಯರು ಹಾಗೂ ಇತರ ಆರೋಗ್ಯ ಸಿಬ್ಬಂದಿ. ಆದರೆ ಅವರಲ್ಲೇ ಲಸಿಕೆ ಪಡೆಯಲು ನಿರಾಸಕ್ತಿ, ಹಿಂಜರಿಕೆ ಕಂಡುಬಂದಿತು. ಆಗಲೇ ಸರಕಾರ ಮಧ್ಯಪ್ರವೇಶಿಸ ಬಹುದಿತ್ತು. ಲಸಿಕೆ ಪಡೆದರೆ ಅಡ್ಡಪರಿಣಾಮಗಳಾಗುತ್ತವೆ ಎಂಬ ಸುದ್ದಿ ಹರಡತೊಡಗಿದ್ದೂ ಮತ್ತೊಂದು ಸಮಸ್ಯೆ ಯಾಯಿತು.
ಆದರೆ ಇದನ್ನು ಅಲ್ಲಗಳೆಯಲು ಸರಕಾರ ಯಾವ ಸ್ಪಷ್ಟ ಕ್ರಮಗಳನ್ನೂ ಕೈಗೊಳ್ಳಲಿಲ್ಲ. ಅದೇ ರೀತಿ ಒಂದೊಮ್ಮೆ ಲಾಭ ಅಥವಾ ಇದು ದುರ್ಲಭ ಎಂದು ಗೊತ್ತಾದಾಗ ಗಣ್ಯರು, ಪ್ರಭಾವಿಗಳು ಅದನ್ನು ಪಡೆಯಲು ಮುಗಿಬೀಳುತ್ತಾರೆ. ಆದರೆ ಲಸಿಕೆ
ಪಡೆಯುವಲ್ಲಿ ಕಾಣಲೇ ಇಲ್ಲ ಧಾವಂತ. ಅವರೆಲ್ಲರೂ ಅನುಸರಿಸಿದ್ದು ಕಾದು ನೋಡುವ ತಂತ್ರ. ಯಾವುದೇ ವಿಷಯ ಬಂದಾಗ, ಭಾರತವು ಬೃಹತ್ ರಾಷ್ಟ್ರ. ನಿರ್ವಹಣೆ ಕಷ್ಟ ಎಂಬ ಮಾತು ಕೇಳಿಬರುತ್ತದೆ.
ಚೀನವು ನಮಗಿಂತ ಜನಸಂಖ್ಯೆಯಲ್ಲೂ, ಪ್ರದೇಶದಲ್ಲೂ ದೊಡ್ಡದಾಗಿದೆ. ಆದರೆ ಅದು ಲಸಿಕೆ ನೀಡಿಕೆಯಲ್ಲಿ ನಮಗಿಂತ ಸಾಕಷ್ಟು ಮುಂದಿಲ್ಲವೆ? ಅಮೆರಿಕ ಕೂಡ ಭೌಗೋಳಿಕವಾಗಿ ನಮಗಿಂತ ದೊಡ್ಡದು. ಜನಸಂಖ್ಯೆಯೂ ಸಾಕಷ್ಟಿದೆ. ಅಲ್ಲಿ ಲಸಿಕಾ ಕಾರ್ಯಕ್ರಮದಲ್ಲಿ ಪ್ರಗತಿಯಾಗಿದೆ. ಹೋಗಲಿ ಅತಿ ಪುಟ್ಟ ರಾಷ್ಟ್ರವಾದ ಇಸ್ರೇಲ್‌ನಲ್ಲಿ ಶೇ.100ರಷ್ಟು ಸಾಧನೆ ಆಗಿದೆಯಲ್ಲವೆ? ಹಾಗಾದರೆ ನಮ್ಮ ಸಮಸ್ಯೆಯೇನು? ಏನೆಂದರೆ ನಮ್ಮ ಮನೋಭಾವ.
ಚೀನದಲ್ಲಿ ಸರಕಾರ ಹೇಳಿದ್ದೇ ಮಾತು. ಯಾರೂ ಕಮಕ್ ಕಿಮಕ್ ಅನ್ನುವ ಹಾಗಿಲ್ಲ. ಅಮೆರಿಕ, ಬ್ರಿಟನ್‌ನಲ್ಲಿ ಸರಕಾರಿ ಯಂತ್ರ
ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತದೆ. ಅಲ್ಲಿನ ಜನರು ಸುಶಿಕ್ಷಿತರೂ, ನಿಯಮ ಪಾಲಕರೂ, ಸಂವೇದನಶೀಲರೂ ಆಗಿದ್ದಾರೆ. ಇಸ್ರೇಲ್‌ನಂಥ ದೇಶದ ಜನರಿಗೆ ಹೆಮ್ಮೆ, ಪ್ರಜ್ಞೆ, ಜಾಗೃತಿ. ಎಚ್ಚರ ಇರುತ್ತದೆ. ಆದರೆ ನಮ್ಮಲ್ಲಿ ಇದರಲ್ಲಿ ಯಾವುದಿದೆ ಎಂದು ಒಮ್ಮೆ ನಮ್ಮನ್ನೇ ನಾವು ಕೇಳಿಕೊಳ್ಳೋಣ. ಒಬ್ಬರು ಒಂದೊಳ್ಳೆ ಸಲಹೆ ನೀಡಿದರೆ, ಕೆಲಸ ಮಾಡಿದರೆ ಅದಕ್ಕೆ ಕೊಕ್ಕೆ ಹಾಕಲು ಹತ್ತು ಜನರಿರುತ್ತಾರೆ. ಲಸಿಕೆಯ ಅಡ್ಡಪರಿಣಾಮಗಳ ಕುರಿತು ಸಾಕಷ್ಟು ಗೊಂದಲ, ತಪ್ಪು ಕಲ್ಪನೆಗಳಿವೆ.
ಜನರು ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯು ತ್ತಿರುವುದಕ್ಕೆ ಇದೇ ಕಾರಣ. ಇದು ಸರಕಾರಕ್ಕೂ ಗೊತ್ತಿದೆ. ಆದರೆ ಈ ಅಂಕೆ ಶಂಕೆ, ಅಂತೆ ಕಂತೆಗಳ ಸಮಸ್ಯೆ ನಿವಾರಣೆಗೆ ಸ್ಪಷ್ಟವಾದ ಯಾವುದೇ ಕ್ರಮ ಕೈಗೊಂಡಿಲ್ಲ. ಯಾವ ಯಾವುದೋ ಪ್ರಾಡಕ್ಟ್‌ಗಳಿಗೆ
ಬ್ರ್ಯಾಂಡ್ ಅಂಬಾಸಿಡರ್ ಆಗುವ ಸೆಲೆಬ್ರಿಟಿಗಳನ್ನು ಕರೆದುಕೊಂಡು ಬಂದು ಲಸಿಕೆಯ ಬಗ್ಗೆ ಪ್ರಚಾರ ಮಾಡಲು ಏನು ಸಮಸ್ಯೆ?
ಅದೇ ರೀತಿ ಲಸಿಕೆ ಪಡೆಯುವಲ್ಲಿ ಇರುವ ತೊಡಕು ಗಳನ್ನು ಸರಳೀಕರಣಗೊಳಿಸಬೇಕು. ಈಗಾಗಲೇ ವಿವರಿಸಿರುವಂತೆ ಖಾಸಗಿ ಆಸ್ಪತ್ರೆಗೆ ಹೋಗಬೇಕೆಂದರೆ 250 ರುಪಾಯಿ ಕೊಡಬೇಕಾಗುತ್ತದೆ. ಇದೇನು ಮಹಾ ಎನ್ನಬಹದು.
ಆದರೆ ಬಡವರಿಗೆ, ಮನಸ್ಸಿಲ್ಲದವರಿಗೆ ಇದೇ ಒಂದು ಕಾರಣ, ನೆಪ ಆಗುತ್ತದೆ. ಆದ್ದರಿಂದ ಸರಕಾರ ಲಸಿಕಾ ಕಾರ್ಯಕ್ರಮವನ್ನು
ಸಂಪೂರ್ಣ ಉಚಿತ ಗೊಳಿಸಿದರೆ ತಪ್ಪಿಲ್ಲ. ಒಂದಷ್ಟು ಹೆಚ್ಚುವರಿ ಖರ್ಚಾಗುತ್ತದೆ ಅಷ್ಟೆ. ಆರೋಗ್ಯದ ದೃಷ್ಟಿಯಿಂದ ಇದು ಅಗತ್ಯ. ಹೀಗೆ ಮಾಡಿದರೆ ಜನರು ಹತ್ತಿರದ ಆಸ್ಪತ್ರೆಗಳಿಗೆ ಹೋಗಿ ಲಸಿಕೆ ಪಡೆಯಬಹುದು. ಅದೇ ರೀತಿ ಲಸಿಕೆ ಪಡೆಯುವ ಪ್ರಕ್ರಿಯೆ ಯನ್ನೂ ಸರಳಗೊಳಿಸಬೇಕು.
ಏಕೆಂದರೆ ತಿಳಿದವರಿಗೆ ಇಂಥ ಔಪಚಾರಿಕೆ ಪ್ರಕ್ರಿಯೆಗೆ ಒಳಪಡುವ ಮನಸ್ಸಿರುವುದಿಲ್ಲ. ತಿಳಿಯದವರಿಗೆ ಅನುಸರಿಸುವುದು ಕಷ್ಟ. ಮುಂದುವರಿದ ಭಾಗವಾಗಿ ಲಸಿಕೆ ಪಡೆಯುವುದನ್ನು ಕಡ್ಡಾಯ ಮಾಡುವ ಬಗೆಗೂ ಚಿಂತನೆ ನಡೆಸಬಹುದು. ಈ ಮಾತು ಏಕೆ ಮುಖ್ಯ ಎಂಬುದಕ್ಕೆ ಒಂದು ಕಾರಣವೂ ಇದೆ. ಮೊದಮೊದಲು ಕರೋನಾ ನಿಯಂತ್ರಣಕ್ಕೆ ಲಾಕ್‌ಡೌನ್ ಮೊದಲಾದ ಕಠಿಣ ಕ್ರಮ ಗಳನ್ನು ಕೈಗೊಳ್ಳ ಲಾಯಿತು. ಎಲ್ಲರೂ ಪಾಲಿಸುತ್ತಿದ್ದರು.
ಆದರೆ ತಿಂಗಳು ಕಳೆದಂತೆ ಜನರಿಗೂ ಬೇಸರವಾಯಿತು. ಒಂದು ರೀತಿಯ ನಿರ್ಲರ್ಕ್ಷ್ಯಭಾವ ಮೂಡಿತು. ಸರಕಾರ ಕೂಡ ಆರ್ಥಿಕ ದೃಷ್ಟಿಯಿಂದ ಎಲ್ಲ ನಿಯಮಗಳನ್ನು ಸಡಿಲಗೊಳಿಸಿತು. ಇದರ ಪರಿಣಾಮ ವನ್ನು ನಾವು ಈಗ ನೋಡುತ್ತಿದ್ದೇವೆ. ದೇಶದೆಲ್ಲೆಡೆ ಕರೋನಾ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿವೆ. ಮತ್ತೊಂದು ಸುತ್ತಿನ ನಿರ್ಬಂಧಕ್ಕೆ ಸರಕಾರಗಳು ಸಜ್ಜಾಗುತ್ತಿವೆ. ಆದರೆ ಜನರು ಮೊದಲಿನಂತೆ ಸಹಕರಿಸುವ ಮೂಡ್‌ನಲ್ಲಿ ಇರುವುದಿಲ್ಲ. ಈಗ ಕೋವಿಡ್‌ಗೆ ಲಸಿಕೆಯೂ ಬಂದಿದೆ. ಆದರೆ ಕೆಲವರು ಪಡೆಯು ವುದು, ಮಿಕ್ಕವರು ಪಡೆಯದೇ ಇರುವುದರಿಂದ ಈ ಸರಪಳಿ ಪೂರ್ಣಗೊಳ್ಳದೆ ಕರೋನಾ ಸೋಂಕಿನ ಅಪಾಯದ ತೂಗುಗತ್ತಿ ಸದಾ ಇದ್ದೇ ಇರುತ್ತದೆ.
ಲಸಿಕೆ ಪಡೆಯದೇ ಇರುವವರಿಗೆ ಸೋಂಕು ಉಂಟಾಗುವ ಹಾಗೂ ಅವರು ಇತರರಿಗೆ ಹರಡುವ ಸಾಧ್ಯತೆ ಇರುತ್ತದೆ. ಆಗ ಲಸಿಕೆ
ನೀಡಿಕೆಯ ಇಡೀ ಯೋಜನೆಯೇ ಹಳ್ಳ ಹಿಡಿದಂತಾಗುತ್ತದೆ. ನಿಷ್ಪ್ರಯೋಜಕ ಎನಿಸಿಬಿಡುತ್ತದೆ. ಹಾಗಾಗಲು ಅವಕಾಶ
ನೀಡಬಾರದು. ಬಡ ರಾಷ್ಟ್ರಗಳು, ಬಡವರು ಲಸಿಕೆ ಕಾರ್ಯಕ್ರಮದಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದು ವಿಶ್ವಸಂಸ್ಥೆ ಆರಂಭದಲ್ಲೇ ಎಚ್ಚರಿಸಿತ್ತು. ಈ ಎಚ್ಚರ ನಮ್ಮಲ್ಲಿ ಸದಾ ಇರಬೇಕು.
ನಾಡಿಶಾಸ್ತ್ರ
ಮನೆಗೆ ಮಾರಿ, ಊರಿಗೆ ಉಪಕಾರಿ
ಮನೋಭಾವ ನಮಗೆ ಅಪಾಯಕಾರಿ
ಮನೆಗೆದ್ದು ಮಾರು ಗೆಲ್ಲೋಣ
ಎಲ್ಲರಿಗೂ ಲಸಿಕೆ ಕೊಡೋಣ