ಅಭಿವ್ಯಕ್ತಿ
ಪ್ರಿಯದರ್ಶಿನಿ ಹಲಸಿನಹಳ್ಳಿ
priyahalasi@gmail.com
ಈ ಲಾಕ್ಡೌನ್ ಆದಾಗಿನಿಂದ ಬೆಳಗಿನ ತಿಂಡಿ ಮುಗಿಸಿ ಸ್ವಲ್ಪ ಹೊತ್ತು ಕೊಟ್ಟಿಗೆಯಲ್ಲಿ ದನಕರುಗಳೊಂದಿಗೆ ಆಟ ಆಡುವದು ನನ್ನ ಪುಟ್ಟಮಗಳಿಗೆ ಅಭ್ಯಾಸವಾಗಿದೆ.
ಎಂದಿನಂತೆ ಅಂದು ಬೆಳಗ್ಗೆ ಕೊಟ್ಟಿಗೆಗೆ ಹೋದ ಮಗಳು ಗಾಬರಿಯಿಂದ ಕೂಗಿದಳು. ಅಮ್ಮಾ, ಅಜ್ಜಿ ಇಲ್ಲಿ ಬನ್ರೇ. ಹತ್ತಿರವಿದ್ದ ನಾನು ಹೋದರೆ, ಆಕಳನ್ನು ತೋರಿಸುತ್ತ, ನೋಡು ಅಮ್ಮಾ, ಗೌರಿಗೆ ಏನೋ ಅಬ್ಬು ಆಗಿದೆ. ತ್ರಾಸು ಪಡ್ತಿದೆ ಎಂದಳು. ಪುಟ್ಟಿ, ಗೌರಿಗೊಂದು ಪುಟಾಣಿ ಕರು ಹುಟ್ತಾ ಇದೆ, ಹಾಗಾಗಿ ಅದಕ್ಕೆ ನಿನ್ನೆ ರಾತ್ರಿಯಿಂದ ನೋವಾಗ್ತಾ ಇದೆ ಎಂದೆ.
ಪಾಪು ಹುಟ್ಟುವಾಗ ತುಂಬಾ ನೋವಾಗುತ್ತಾ ಅಮ್ಮ? ಎಂಬ ಪ್ರಶ್ನೆಗೆ ಹುಂ, ತುಂಬಾ., ನೀನು ಹುಟ್ಟುವಾಗಲೂ ನನಗೆ ಹಾಗೇ ಆಗಿತ್ತು, ಎಲ್ಲ ಅಮ್ಮಂಗೂ ನೋವಾಗುತ್ತೆ ಎಂದುತ್ತರಿಸಿದೆ. ಮಗಳು ಗೌರಿಯ ತಲೆ ನೇವರಿಸುತ್ತ ಡೋಂಟ್ ವರಿ ಗೌರಿ, ನಿಂಗೆ
ಪಾಪು ಹುಟ್ಟತ್ತೆ, ಬೇಗ ನೋವು ಕಮ್ಮಿ ಆಗ್ಲಿ ಅಂತಾ ದೇವರಲ್ಲಿ ಕೇಳ್ತೇನೆ. ಮತ್ತೆ ಈ ಥರದ ನೋವು ಕೊಡಬೇಡಾ ಅಂತಾನೂ ದೇವ್ರ ಹತ್ರ ಕೇಳ್ತೇನೆ ಎನ್ನುತ್ತ ಕಣ್ಮುಚ್ಚಿಕೊಂಡು ಕೈಮುಗಿದಳು.
ಮಗಳ ಪ್ರಾರ್ಥನೆ ಕೇಳಿ ಖುಷಿಗಿಂತ ಜಾಸ್ತಿ ಸಂಕಟವಾಯ್ತು. ಆಕಳ ನೋವಿಗೆ ಸ್ಪಂದಿಸುವ ಪುಟ್ಟಮಗಳಿಗೆ ಹೇಗೆ ಹೇಳಲಿ ನಾನು,
ಆಕಳಿಗೆ ಆ ನೋವನ್ನು ನಾವು ಕೇವಲ ನಮ್ಮ ಸ್ವಾರ್ಥಕಾಗಿ ಪ್ರತೀ ಎರಡು ವರ್ಷದೊಳಗೆಯೇ ತರಿಸುತ್ತೇವೆಂದು? ಅದೂ ಕೂಡ ಯಾವ ಸುಖದ ಕ್ರಿಯೆಯಿರದ ನೋವೆಂದು? ಹುಟ್ಟುವ ಕರು ಗಂಡಾದರೆ ತಾಯಿಯ ಜೊತೆಗೆ ಬದುಕಲು ಬಿಡದ ಕಟುಕರು ನಾವೆಂದು? ನಿಜ, ನಾವಿಂದು ಬಹುತೇಕ ಸಾಕು ಪ್ರಾಣಿಗಳಿಗೆ ಕೃತಕ ಗರ್ಭಧಾರಣೆಯನ್ನು ಮಾಡಿಸುವದು ಸಾಮಾನ್ಯವಾಗಿದೆ.
ಅದಕ್ಕೆ ತಳಿ ಸಂರಕ್ಷಣೆ, ಆರೋಗ್ಯವಂತ ಸಂತತಿ ಜನನ, ರೋಗನಿರೋಧಕ ಶಕ್ತಿ ಹೆಚ್ಚಳ, ಹಾಲು – ಹೈನನ್ನು ಹೆಚ್ಚಿಸುವದು ಮುಂತಾದ ಅದೆಷ್ಟೋ ಕಾರಣಗಳನ್ನು ನೀಡುತ್ತೇವೆ. ಆ ಮೂಲಕ ನಮ್ಮ ಅನುಕೂಲಕ್ಕಾಗಿಯೇ ಅವುಗಳಿಗೆ ಸ್ವಾಭಾವಿಕವಾಗಿ
ಸಿಗಬೇಕಿದ್ದ ಸುಖವನ್ನು ನಿರಾಕರಿಸಿ ನೋವನ್ನು ಮಾತ್ರ ಅನುಭವಿಸುವಂತೆ ಮಾಡುತ್ತೇವೆ. ಅದೇ ನಮಗಾದರೆ ಭವಿಷ್ಯದಲ್ಲಿ ನೋವು ಹಾಗೂ ಜವಾಬ್ದಾರಿಗಳನ್ನು ನಿವಾರಿಸುವ, ಸುಖವರ್ಧಿಸುವ ನೂರಾರು ವಿಧದ ಗರ್ಭನಿರೋಧಕಗಳನ್ನು ಸೃಷ್ಟಿಸಿ ಕೊಂಡಿದ್ದೇವೆ. ಅದಕ್ಕೆ ಜನಸಂಖ್ಯಾಸ್ಫೋಟದ ನಿಯಂತ್ರಣವೆಂಬ ಸಬೂಬನ್ನೂ ಕೊಡುತ್ತೇವೆ.
ಭೂತಾಯಿಯ ಮಡಿಲಲ್ಲೇ ಇರುವ ಪ್ರತೀ ಜೀವಿಗೂ ಸಹ ನಮ್ಮಷ್ಟೇ ಸಹಜವಾಗಿ ಬದುಕುವ ಹಕ್ಕಿದೆ ಎಂಬುದನ್ನು ಮರೆತಿದ್ದೇವೆ. ಆಹಾರ, ನಿದ್ರೆ, ಮೈಥುನಗಳಂಥ ಪ್ರಕೃತಿ ಸಹಜ ಕ್ರಿಯೆಗಳನ್ನೂ ನಾವು ನಿಯಂತ್ರಿಸುವ ಮಟ್ಟಕ್ಕಿಳಿದಿದ್ದೇವೆ. ಇದು ಕೇವಲ ಪ್ರಾಣಿ
– ಪಕ್ಷಿಗಳಿಗೆ ಮಾತ್ರವಲ್ಲ, ಮರಗಳನ್ನೂ ಕೂಡ ನಮ್ಮ ಇಷ್ಟ – ಅನುಕೂಲದಂತೆ ಬೆಳೆಸಲು ಹೊರಟಿದ್ದೇವೆ.
ಮನುಷ್ಯನಿಂದು ಸ್ವಾರ್ಥದ ಪರಮಾವಧಿಯನ್ನು ತಲುಪಿದ್ದಾನೆ. ಅದೆಷ್ಟೆಂದರೆ ಭೂಮಿಯ ಮೇಲಿನ ಜೀವಿಗಳೆಲ್ಲವೂ ತನ್ನ ಅನುಕೂಲಕ್ಕಾಗಿಯೇ ಇರಬೇಕೆನ್ನುವಷ್ಟು. ಆದರೆ ಇಂಥ ಕ್ರೌರ್ಯವನ್ನು ಸೇವೆಯ ಹೆಸರಲ್ಲಿ ಮಾಡುವದು ಮಾತ್ರ ಅಕ್ಷಮ್ಯ ವಲ್ಲವೇ? ಹೌದು, ಮನುಷ್ಯನ ಅಂಥದ್ದೊಂದು ಕ್ರೌರ್ಯವೇ ಗೋಸೇವೆ. ನಾವೆಲ್ಲ ಚಿಕ್ಕವರಿರುವಾಗ ಕೊಟ್ಟಿಗೆಯ ತುಂಬ ಆಕಳು
ಕರುಗಳು ತುಂಬಿರುತ್ತಿದ್ದವು. ದಿನ ಮುಂಜಾನೆ ದೊಡ್ಡವರು ಚೊಂಬಿನಲ್ಲಿ ನಾಲ್ಕೆ ದು ಹಸುಗಳ ಹಾಲು ಕರೆದು, ಆನಂತರ ಹಿಂಡಿ – ಹುಲ್ಲು – ಅಕ್ಕಚ್ಚು ಕೊಟ್ಟು ಮೈತೊಳೆಸಿ ಹೊರಗೆ ಕಳುಹಿಸಿದರೆ ಅವು ಹಾಯಾಗಿ ಸುತ್ತಾಡಿಕೊಂಡು ಸಂಜೆಯೊಳಗೆ ಮನೆ ಸೇರುತ್ತಿದ್ದವು.
ಅಷ್ಟರಲ್ಲಿ ಸಗಣಿ ತೆಗೆದು ಚೊಕ್ಕ ಮಾಡಿ ಮಣ್ಣ ನೆಲಕ್ಕೆ ಹೊಸ ಸೊಪ್ಪು ಹೊದೆಸಿರುತ್ತಿದ್ದರು. ಮತ್ತೆ ಅವುಗಳಿಗೆ ಹೊಟ್ಟೆಗೆ ನೀಡಿ ಹಾಲು ಕರೆಯುವಂಥವುಗಳಿಂದ ಕರೆದು, ರಾತ್ರಿಯೂ ಹುಲ್ಲು ನೀರುಗಳನ್ನು ನೀಡಿದರೆ ದಿನದ ಕೆಲಸ ಮುಗಿಯುತ್ತಿತ್ತು. ಹಸುಗಳ ಕೆಚ್ಚಲಿನ ಅಮೃತದ ಹೆಚ್ಚಿನ ಪಾಲು ಕರುವಿಗಿರುತ್ತಿತ್ತು. ಹಾಲು ಕೊಡದ ಮುದಿಯಾಕಳುಗಳೂ ಅಲ್ಲಿರುತ್ತಿದ್ದವು. ಆ ಹಸು ಈ
ಕರುವಿನ ಅಜ್ಜಿ ಎಂದೆಲ್ಲ ಹಿರಿಯರು ಹೇಳುತ್ತಿದ್ದರು.
ಪ್ರಾಯಕ್ಕೆ ಬಂದ ದನಗಳನ್ನು ಹತ್ತಿರದ ಹೋರಿಗಳಿರುವವರ ಮನೆಗಳಿಗೆ ಬಿಟ್ಟು ಬರುತ್ತಿದ್ದರು. ದೀಪಾವಳಿ ಹಬ್ಬ ಬಂದರಂತೂ ದನ ಕರುಗಳಿಗೆ ಶೃಂಗಾರವೇನು, ಕಡುಬು ಕಜ್ಜಾಯಗಳೇನು, ಆ ಸಂಭ್ರಮ ಹೇಳತೀರದಂತಿತ್ತು. ಒಟ್ಟಿನಲ್ಲಿ ಕೊಟ್ಟಿಗೆ ಸೊಂಪಿದ್ದರೆ ಮನೆ ತಂಪಿರುತ್ತದೆ ಎಂಬ ಗಾದೆ ಮಾತಿಗೆ ಅನ್ವರ್ಥಕದಂತಿದ್ದವು ಆಗಿನ ಕಾಲದ ಬಹುತೇಕ ಕೊಟ್ಟಿಗೆಗಳು.
ಅದೇ ಈಗ ಅರ್ಧಕ್ಕರ್ಧ ಹಳ್ಳಿಮನೆಗಳಲ್ಲಿ ಕೊಟ್ಟಿಗೆಗಳೇ ಇಲ್ಲ, ಇದ್ದರೂ ಒಂದೋ ಎರಡೋ ದನಗಳಷ್ಟೇ. ಅವುಗಳಿಂದಲೇ ಬಕೇಟ್ಗಟ್ಟಲೇ ಹಾಲು ಹಿಂಡಿಕೊಂಡು, ಅಲ್ಲಿಯೇ ಕಟ್ಟಿಹಾಕಿ, ಗಂಜಲು – ಸಗಣಿ ಬಾಚಿ ದಿನಕ್ಕೆರಡು ಮೂರುಸಲ ಹೊಟ್ಟೆಗೆ
ಹಾಕಿದರೆ ಮುಗಿದುಹೋಯಿತು ಕೆಲಸ. ಸಿಮೆಂಟ್ ನೆಲವಾದರೂ ಅದೆಷ್ಟೋ ಮನೆಗಳಲ್ಲಿ ದಿನವೂ ನೆಲವನ್ನು ತೊಳೆಯುವ ದಿಲ್ಲ, ಇನ್ನು ದನಗಳ ಮೈ ತೊಳೆಸುವದು ದೂರದ ಮಾತು.
ಹೊರಗೆ ಬಿಡಲು ಸರಕಾರಿ ಗೋಮಾಳಗಳುಳಿದಿಲ್ಲ, ಬೇರೆ ಜಾಗವೂ ಇಲ್ಲ. ಜೊತೆಗೆ ಉತ್ತಮ ತಳಿಗಳೆಂಬ ಕಾರಣಕ್ಕೆ ಹುಟ್ಟಿಸಿ ಕೊಂಡ ಇವುಗಳು ಮೊದಲಿನ ದನಗಳಂತೆ ಗುಡ್ಡ – ಬೆಟ್ಟ ಅಲೆಯಲಾರವು, ಹೊರಗೆ ಬಿಟ್ಟರೂ ಬಿದ್ದು ಗಾಯಮಾಡಿಕೊಳ್ಳುವದು
ಹೆಚ್ಚು. ಹಾಗಾಗಿ ಇಂದು ದನಗಳದು ಅಕ್ಷರಶಃ ಜೈಲಿನಲ್ಲಿಟ್ಟ ಕೈದಿಗಳ ಪರಿಸ್ಥಿತಿ. ಇನ್ನು, ಹೀಟಿಗೆ ಬಂದವೆಂದರೆ ಪಶುವೈದ್ಯರನ್ನು ಕರೆಸಿ ಬೇಕಾದ ತಳಿಯ ಇಂಜೆಕ್ಷನ್ ತೂರಿಸಿದರಾಯ್ತು. ಪ್ರಕೃತಿದತ್ತವಾದ ಯಾವ ಆನಂದವೂ ಇಲ್ಲದೆಯೇ ಹೊಟ್ಟೆಹೊತ್ತು, ನೋವು ತಿಂದು ಹೆರಬೇಕಾದ ಸ್ಥಿತಿ.
ಹುಟ್ಟಿದ್ದು ಹೆಣ್ಣಾದರೆ ಓಕೆ, ಸಾಕುವ ಆಲೋಚನೆ ಮಾಡಬಹುದು. ಗಂಡಾದರೆ ಆದಷ್ಟು ಬೇಗ ಸಾಗಹಾಕಬೇಕಾದ ಅನಿವಾ ರ್ಯತೆ. ಇಲ್ಲದಿದ್ದರೆ ಅನಾವಶ್ಯಕವಾಗಿ ಹೊಟ್ಟೆ ಹೊರಿಯಬೇಕಲ್ಲ?! ಮನೆಯಲ್ಲಿ ಗಂಡು, ಕೊಟ್ಟಿಗೆಯಲ್ಲಿ ಹೆಣ್ಣು ಹುಟ್ಟಬೇಕು ಎನ್ನುವದು ನಮ್ಮ ಮನಸ್ಥಿತಿ. ಆಕಳಿಗೆ ವಯಸ್ಸಾದರೂ ಅದೇ ಕಥೆ. ಮನೆಯ ಹಿರಿಯರನ್ನೇ ವೃದ್ಧಾಶ್ರಮಕ್ಕಟ್ಟುವ ಈ ಕಾಲದಲ್ಲಿ ಮುದಿ ಆಕಳನ್ನು ಸಾಕಲಾದೀತೆ? ಇನ್ನು, ಪೇಟೆ – ಪಟ್ಟಣಗಳ ದನಗಳ ಸ್ಥಿತಿಯಂತೂ ಹೇಳುವದೇ ಬೇಡ. ಹಾಲು ಕರೆಯುವಾಗ ಮಾತ್ರ ಅವುಗಳಿಗೊಂದು ಸೂರು.
ಉಳಿದಂತೆ ಮಳೆಯಿರಲಿ, ಬಿಸಿಲಿರಲಿ ರಸ್ತೆಬದಿಗಳಲ್ಲಿಯೇ ಅವುಗಳು ನೆಲೆ ಕಂಡುಕೊಳ್ಳಬೇಕು. ವಾಹನಗಳಿಂದ ಹೊಡೆಸಿ ಕೊಂಡೋ, ಕಟುಕರಿಗೆ ಸಿಕ್ಕೋ ಅಸುನೀಗಿದ, ಮೈ- ಕಾಲುಗಳಿಗೆ ಗಾಯವಾಗಿ ಔಷಧೋಪಚಾರಗಳಿಲ್ಲದೆಯೇ ನರಳಾಡಿದ ಹಸುಗಳ ಲೆಕ್ಕವಿಟ್ಟವರಾರು? ಇದು ನಮ್ಮ ಇಂದಿನ ಗೋಸೇವೆಯ ಪರಿ. ತಮ್ಮ ಮನೆಗಳಲ್ಲಿ ಇದನ್ನೇ ಮಾಡಿದವರು ವೇದಿಕೆಯ ಮೇಲೆ, ಸಭೆ – ಸಮಾರಂಭಗಳಲ್ಲಿ ತಾವು ಗೋಸೇವಕರೆಂದು ಹೊಗಳಿಕೊಳ್ಳುವರು ಹಾಗೂ ಸನ್ಮಾನಿತರಾಗುವರು.
ಪರಿಚಯದ ಪಶುವೈದ್ಯರೊಬ್ಬರು ತುಂಬ ಖೇದದಿಂದ ವಿವರಿಸುತ್ತಿದ್ದರು – ನಾವು ಹುಲಿ – ಸಿಂಹಗಳನ್ನು ಕ್ರೂರ ಪ್ರಾಣಿಗಳೆಂದು ಹೇಳ್ತೇವೆ, ಮನುಷ್ಯನಷ್ಟು ಕ್ರೂರ ಜೀವಿ ಯಾವುದೂ ಇಲ್ಲ. ದನಗಳಿಗೆ ಆರು ಏಳು ವರ್ಷಗಳಾಗುವದರೊಳಗೇ ಸ್ಟೆ ರಾಯಿಡ್ ಇಂಜೆಕ್ಷನ್ ಕೊಡಿಸಿ, ತೂಕ ಹೆಚ್ಚಿಸಿ, ಹದಿನೈದು ವರ್ಷಗಳಾದವೆಂದು ಡಾಕ್ಟರರಿಂದ ಬರೆಸಿ ಕಸಾಯಿ ಖಾನೆಗೆ ಕಳಿಸುತ್ತಾರೆ. ಅಲ್ಲಿ
ಅವು ತಮ್ಮ ಸರದಿ ಬರುವ ತನಕ ನೀರೂ ಕೂಡ ಇಲ್ಲದೆಯೇ ಒಣ ಬಯಲಿನಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಕಾಯಬೇಕಿರುತ್ತದೆ. ಅದೆಷ್ಟೋ ಮನೆ ಗಳಲ್ಲಿ ದುಡ್ಡುಳಿಸುವ ಸಲುವಾಗಿ ಇಕ್ಕಿದ್ದು ಮಿಕ್ಕಿದ್ದೆಲ್ಲ ಹಸುವಿಗೆ ತಿನ್ನಿಸುತ್ತಾರೆ.
ಅದರಲ್ಲಿ ಕೊಳೆತದ್ದೊ ಇರುತ್ತದೆ. ಪಾಪ, ಮಾತು ಬಾರದ ಮೂಕಪ್ರಾಣಿ ನಾವು ಹಾಕಿದ್ದನ್ನು ತಿಂದು ಹಾಲು ನೀಡುತ್ತದೆ. ಆ ಹಾಲು ಹಾಳಾಯಿತೆಂದು ಆಕಳನ್ನೇ ದೂಷಿಸಿದರೆ ಏನು ಪ್ರಯೋಜನ? ಇತ್ತೀಚೆಗೆ ಸಾಕಷ್ಟು ಸ್ಥಿತಿವಂತರೊಬ್ಬರಿಂದ ಸಂಜೆ ಐದು ಘಂಟೆಗೆ ಹಸುವಿಗೆ ಆರ್ಟಿಫೀಶಿಯಲ್ ಇನ್ಸಮಿನೇಶನ್ ಮಾಡಿಕೊಡಲು ಕರೆಬಂತು. ಅಲ್ಲಿಗೆ ಹೋಗಿ ಬೈಕ್ ಇಳಿಯುವ ಮುನ್ನವೇ ಅದು ಕೂಗುವ ಸದ್ದು ಕೇಳಿ ಇದು ಯಾವುದೋ ತೊಂದರೆಯಾದ ಸದ್ದೆಂದು ಗ್ರಹಿಸಿದೆ.
ಹೋಗಿ ನೋಡಿದರೆ ನನ್ನ ಗ್ರಹಿಕೆ ನಿಜವಾಗಿತ್ತು. ಆ ದನಕ್ಕೆ ನೀರು ಕುಡಿಯಲು ಕೊಟ್ಟೆ. ಒಂದೇ ಸಲ ೪ ಕೊಡಗಳಷ್ಟು ನೀರು ಕುಡಿದಿತ್ತು. ಸಾಕಿದವರಿಗೆ ಅದಕ್ಕೆ ನೀರು ಕೊಡಬೇಕೆಂಬುದೂ ತಿಳಿಯಲಿಲ್ಲವೇ? ವಿಚಾರಿಸಿದಾಗ ತಿಳಿದದ್ದು, ಬೆಳಗಿನ ಹತ್ತು ಗಂಟೆಯಿಂದಲೂ ಅದು ಕೂಗುತ್ತಿದ್ದರೂ ಇವರಿಗೆ ಅರ್ಥವೇ ಆಗಲಿಲ್ಲವೆಂದು. ನೀವು ದನ ಸಾಕುವದಕ್ಕಿಂತ ಅದನ್ನು ಬಿಟ್ಟು ಬಿಟ್ಟರೇ ನಿಮಗೆ ಪುಣ್ಯ ಬರುತ್ತದೆ ಎಂದು ಹೇಳಿ ಬಂದುಬಿಟ್ಟೆ.
ನನ್ನ ಬದುಕಲ್ಲದು ಮರೆಯಲಾಗದ ನೋವಿನ ಘಟನೆಗಳಲ್ಲೊಂದು. ಜನ್ಮತಳೆದ ಪ್ರತೀಜೀವಿಯೂ ನಿಸರ್ಗಕ್ಕೆ ಭಾರವಲ್ಲ, ಮನುಷ್ಯ ಅವುಗಳಿಗೆ ಬದುಕುವುದನ್ನು ಕಲಿಸಬೇಕಿಲ್ಲ ಅಥವಾ ಮನುಷ್ಯನಿಂದಲೇ ಅವುಗಳ ಸಂರಕ್ಷಣೆಯಾಗುತ್ತದೆಯೆಂಬು ದೆಲ್ಲ ಸುಳ್ಳು. ಬದುಕುವ ಕಲೆ ಪ್ರತೀ ಜೀವಿಗೂ ನಿಸರ್ಗವಿತ್ತ ಕೊಡುಗೆ ಹಾಗೂ ಪ್ರತೀ ಜೀವಿಯೂ ಸ್ವತಂತ್ರವಾಗಿ ಬದುಕಲು ಶಕ್ತವಾಗಿದೆ.
ಹಾಗೆಂದ ಮಾತ್ರಕ್ಕೆ ದನ ಸಾಕುವ ಪ್ರತಿಯೊಬ್ಬರೂ ಇದೇ ರೀತಿಯಾಗಿರುತ್ತಾರೆಂದಲ್ಲ. ಅಲ್ಲಿ ಇಲ್ಲಿ ಅಪರೂಪಕ್ಕೊಬ್ಬರಂತೆ ದನಗಳನ್ನು ತಮ್ಮ ಮನೆಯ ಜನರೋ ಎಂಬಷ್ಟು ಪ್ರೀತಿಯಿಂದ ಸಾಕುವವರಿದ್ದಾರೆ. ಬೀಡಾಡಿ ದನಗಳ, ಪೆಟ್ಟಾದ ದನಗಳ ಸೇವೆ
ಮಾಡುವವರಿದ್ದಾರೆ. ಅವರೆಲ್ಲ ನಿಜಾರ್ಥದಲ್ಲಿ ಗೋಸೇವಕರು. ಉಳಿದವರೆಲ್ಲ ಸೇವೆಯೆಂದರೆ ಪ್ರತಿಫಲಾಪೇಕ್ಷೆಯಿಲ್ಲದೆಯೇ ಮಾಡುವ ಕೆಲಸವೆಂಬ ಅರ್ಥವನ್ನೂ ಅರಿಯದ ಸ್ವಾರ್ಥಿಗಳು. ಹೌದು, ವಾಣಿಜ್ಯೀಕರಣ ಹೊಂದಿರುವ ಈ ಕಾಲದಲ್ಲಿ ಎಲ್ಲವೂ
ಹಳೆಯ ಕಾಲದಂತೆ ಉದಾತ್ತವಾಗಿರಬೇಕೆಂದು ಅಪೇಕ್ಷಿಸುವದು ತಪ್ಪೇನೋ? ಆದರೆ ಗೋಮಾತೆಯೆಂದು ಪೂಜಿಸುವ, ಮೂವತ್ಮೂರು ಕೋಟಿ ದೇವತೆಗಳ ಆವಾಸಸ್ಥಾನವಾಗಿರುವ, ಕರೆಯುವ ಹಾಲಷ್ಟೇ ಅಲ್ಲ ಹಾಕುವ ಸಗಣಿಯಿಂದಲೂ
ಉಪಯುಕ್ತವಾಗಿರುವ ಆಕಳನ್ನು ಮನುಷ್ಯನಂತೆ ಬಿಡಿ, ಕನಿಷ್ಠ ಒಂದು ಜೀವಿಯಂತಾದರೂ ನೋಡಬೇಕಲ್ವೇ? ದೇವರ ಸ್ಥಾನ ಕೊಟ್ಟು ನಾವು ಹೇಗೆ ನಡೆಸಿಕೊಳ್ಳುತ್ತಿದ್ದೇವೆ ಈ ಸಾಧು ಪ್ರಾಣಿಯನ್ನು ಎಂದು ಪ್ರಶ್ನಿಸಿಕೊಳ್ಳಬೇಕಲ್ವೇ? ಸಾಕಿದ ಮೇಲೆ ಹೊತ್ತು – ಹೊತ್ತಿಗೆ ಕೂಳು ನೀರಿಟ್ಟು, ದಿನಕ್ಕೊಮ್ಮೆ ಮೈತೊಳೆಸಿ ಕೊಟ್ಟಿಗೆಯನ್ನು ಶುಚಿಗೊಳಿಸುವುದು ಕರ್ತವ್ಯವಾಗಬೇಕು.
ದಿನವಿಡೀ ಹೊರಗಡೆ ಸುತ್ತಿಸಲು ಜಾಗವಿಲ್ಲದಿದ್ದರೆ ಮನೆಯ ತೋಟ ಗದ್ದೆಯೊಳಗೆ ಎರಡ್ಮೂರು ಗಂಟೆಗಳಷ್ಟಾದರೂ
ಕಾಲಾಡಿಸುವುದನ್ನು ಸಾಧ್ಯವಾಗಿಸಬೇಕು. ಹೇಗೆ ನಾವು ಕುಳಿತಲ್ಲೇ ಕುಳಿತರೆ ಗೆದ್ದಲು ಹಿಡಿಯುತ್ತೇವೆಯೋ ಅದೇರೀತಿ ದನಕರು ಗಳೂ ಅಲ್ಲವೇ? ಒಂದೇ ಜಾಗದಲ್ಲಿರುವ ಬದಲು ಸ್ವಲ್ಪ ಹೊತ್ತು ಹೊರಗೆ ತಿರುಗಾಡಿದರೆ ರೋಗನಿರೋಧಕ ಶಕ್ತಿಯೂ
ಬೆಳೆಯುವುದಲ್ಲವೇ? ಆರ್ಥಿಕವಾಗಿ ಸಶಕ್ತ ಆಗಿರುವವರಾದರೂ ತಮ್ಮ ಮನೆಯಲ್ಲಿ ಹುಟ್ಟುವ ಗಂಡುಕರುಗಳನ್ನು ಸಾಕುವ ಮನಸ್ಸು ಮಾಡಬೇಕು.
ಹಾಲಿಲ್ಲದಿದ್ದರೂ ಸಗಣಿಯಂತೂ ಸಿಗುವದಲ್ಲ. ಹೇಗಿದ್ದರೂ ಅವು ಉತ್ತಮ ತಳಿಗಳೇ ಆಗಿರುವದರಿಂದ ಹತ್ತಿರದಲ್ಲಿಯೇ ಆಕಳುಗಳಿರುವವರು ತಮ್ಮ ಆಕಳನ್ನು ತಂದುಬಿಡುವದಕ್ಕೆ ಇಂತಿಷ್ಟು ಹಣವೆಂದು ಧಾರಣೆ ನಿಗದಿಪಡಿಸಬಹುದು. ಆ ಮೂಲಕ ದನಗಳಿಗೆ ಬದುಕಿನ ಸಹಜಾನಂದಗಳು ಲಭ್ಯವಾಗುವಂತೆ ನೋಡಿಕೊಳ್ಳಬಹುದು. ಕೃತಕ ಗರ್ಭಧಾರಣೆಯನ್ನೇ ಸಂಶೋಧಿಸಿ ದವರಿಗೆ ಇಲ್ಲಿ ಉಂಟಾಗಬಹುದಾದ ರೋಗಗಳು, ತೊಡಕುಗಳನ್ನು ನಿವಾರಿಸುವದೇನೂ ಕಷ್ಟವಲ್ಲ.
ಸ್ಟೀರಾಯ್ಡ್ನಂಥ ಅಪಾಯಕಾರಿ ಅನಗತ್ಯ ಔಷಧಗಳ ಬಳಕೆ ಸಂಪೂರ್ಣ ನಿಲ್ಲಬೇಕು. ತನ್ಮೂಲಕ ಪ್ರಾಯದ ದನಗಳು ಕಟುಕರಿಗೆ ಬಲಿಯಾಗುವದನ್ನು ತಪ್ಪಿಸಬೇಕು. ಅಷ್ಟು ದಿನ ಹಾಲು – ಹೈನು ನೀಡಿ ತಾಯಿಯಂತೆ ಮನೆಯನ್ನು ಸಮೃದ್ಧವಾಗಿಟ್ಟ ಮುದಿ ಯಾದ ಆಕಳುಗಳನ್ನು ಕಡೆಗಾಲದಲ್ಲಿ ದುಡ್ಡಿನಾಸೆಗಾಗಿ ಮಾರುವ ಬದಲು ಮನೆಯಲ್ಲಿಟ್ಟುಕೊಳ್ಳುವ ಸೌಜನ್ಯ ಮೆರೆಯಬೇಕು. ಪೇಟೆಗಳಲ್ಲಿಯೂ ಸರಿಯಾಗಿ ಸಾಕುವವರಿಗೆ ಮಾತ್ರ ಅವಕಾಶ ಕೊಡಬೇಕು.
ಇದಕ್ಕಾಗಿ ಒಬ್ಬ ಮೇಲ್ವಿಚಾರಕರನ್ನು ನೇಮಿಸಿದರೆ ಉದ್ಯೋಗ ಸೃಷ್ಟಿಯೂ ಆಯಿತು, ದನಗಳ ಯೋಗಕ್ಷೇಮವೂ ಆಯಿತು. ಇವೆಲ್ಲ ನಡೆಸಿದಂಥವರನ್ನು ಗೋಪಾಲಕರೆನ್ನ ಬಹುದೇ ಹೊರತು ಗೋಸೇವಕರಲ್ಲ. ಇನ್ನು, ಮನೆಯಲ್ಲಿ ಒಂದೂ ಹಸುವನ್ನು ಸಾಕದೆಯೇ ಗೋವಿನ ಮೂರ್ತಿಯ ಹೆಸರಿಗೆ ಲಕ್ಷಗಟ್ಟಲೆ ದಾನಮಾಡಿ ಶಾಲು ಹೊದಿಸಿಕೊಳ್ಳುವವರು ರಸ್ತೆಯಲ್ಲಿ ಅಲೆಯುವ
ಹಸುಗಳಿಗೆ ಆಹಾರ ನೀಡುವ ಮೂಲಕ ಅದಕ್ಕಿಂತಲೂ ಹೆಚ್ಚು ಪುಣ್ಯ ಸಂಪಾದಿಸಬಹುದು.
ತನ್ನಷ್ಟೇ ಸರಿಸಮಳಾದ ಹೆಣ್ಣನ್ನು ದೇವತೆಯ ಸ್ಥಾನಕ್ಕೇರಿಸಿ ಅವಳನ್ನೇ ಸಾಧ್ಯವಾದಷ್ಟು ಶೋಷಣೆಗೊಳಪಡಿಸುವ ಮನುಷ್ಯ ನಿಂದ ಪ್ರಾಣಿಯೊಂದನ್ನು ಮನುಷ್ಯತ್ವದಿಂದ ಕಾಣಲಿ ಎಂದು ಆಶಿಸುವುದು ಮೂರ್ಖತನವಾಗುವದಿಲ್ಲವಷ್ಟೆ. ಇನ್ನಾದರೂ ನಾವೆಲ್ಲ ಗೋಸೇವೆ ಮಾಡುತ್ತೇವೆನ್ನುವ ಮೊದಲು ಒಮ್ಮೆ ಆತ್ಮವಿಮರ್ಶಿಸಿಕೊಳ್ಳಬೇಕಿದೆ.